ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಕರ ಬದುಕು ಬದಲಿಸಿದ ಶೈಲಜಾ

ಪುರುಷ ಸಮಾಜದ ಸವಾಲುಗಳನ್ನು ದಾಟಿ, ಉದ್ಯಮ ಕಟ್ಟಿ ಗೆದ್ದ ಗಟ್ಟಿ ಮಹಿಳೆ
Last Updated 8 ಮಾರ್ಚ್ 2016, 6:25 IST
ಅಕ್ಷರ ಗಾತ್ರ

ಮೈಸೂರು ನಗರದಲ್ಲಿ ಓದಿ, ಬೆಳೆದರು. ಪತಿ ವಿಜಯ್‌ ವಿಠ್ಠಲ್‌ ಮೆಕ್ಯಾನಿಕಲ್‌  ಎಂಜಿನಿಯರಿಂಗ್‌ ಪ್ರಾಧ್ಯಾಪಕ. ಕೃಷಿಯ ಸಂಪರ್ಕವೇ ಇಲ್ಲದ ಶೈಲಜಾ ಅವರು ಕೃಷಿಕರ ಬದುಕು ಬದಲಿಸಿದ ಯಶೋಗಾಥೆಯ ಹಿಂದೆ ಅಸಾಮಾನ್ಯ ಶ್ರಮವಿದೆ.

ಒಂದಲ್ಲ, ಎರಡಲ್ಲ 35 ಕೃಷಿ ಯಂತ್ರಗಳು ಶೈಲಜಾ ಅವರ ಸಾಧನೆಯ ಕಥೆ ಹೇಳುತ್ತಿವೆ. ಪತಿ ಊರಿನಲ್ಲಿ ಅಡಿಕೆ ಸುಲಿಯಲು ಖರೀದಿಸಿದ ಯಂತ್ರದ ಸಮಸ್ಯೆಯೇ ಅವರನ್ನು ಹೊಸ ಆವಿಷ್ಕಾರದ ಚಿಲುಮೆಯಾಗಿ ರೂಪಿಸಿತು.

ಅಡಿಕೆ ಸಿಪ್ಪೆ ಸುಲಿಯುವ ಒಂದು ಸಣ್ಣ ಯಂತ್ರದೊಂದಿಗೆ ಆರಂಭವಾದ ಶೈಲಜಾ ಅವರ ಉದ್ಯಮದ ಹೆಜ್ಜೆ ಈಗ ದೊಡ್ಡದಾಗಿ ಬೆಳೆದುನಿಂತಿದೆ.
ಆವಿಷ್ಕಾರ: ಅಡುಗೆಮನೆ ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ವರಾಹ ಘಟಕ, ವಾದಿರಾಜ ಒಲೆ, ಸೈಕಲ್‌ ವೀಡಲ್‌, ಈರುಳ್ಳಿ ಬಿತ್ತನೆ ಯಂತ್ರ, ರಾಗಿ ಹಾಗೂ ಭತ್ತ ಬಿತ್ತನೆ ಯಂತ್ರ, ದಾಳಿಂಬೆ ಕಾಳು ಬಿಡಿಸುವ ಯಂತ್ರ, ಗೊರಬಲು ಪಾಲಿಶರ್‌ ಹೀಗೆ ಅವಿಷ್ಕಾರದ ಪಟ್ಟಿ ಬೆಳೆಯುತ್ತಾ ಸಾಗಿದೆ.

ಲೇಡೀಸ್‌ ಕ್ಲಬ್: ಮದುವೆಯಾದ ಹೊಸದರಲ್ಲಿ, 24 ವರ್ಷದ ಹಿಂದೆ ಪತಿಯೊಂದಿಗೆ ಅರುಣಾಚಲಪ್ರದೇಶದಲ್ಲಿದ್ದ ಅವರು ಅಲ್ಲಿಯೂ ಸಾಧನೆ ಮೆರೆದಿದ್ದಾರೆ. ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದುಕೊಂಡೇ ಲೇಡೀಸ್‌ ಕ್ಲಬ್‌ ಆರಂಭಿಸಿದ್ದರು.

ಕ್ಲಬ್‌ ಮೂಲಕ ಯುವತಿಯರಿಗೆ ಅಕ್ಕಿ ಹಿಟ್ಟಿನಿಂದ ಖಾದ್ಯ ತಯಾರಿಸುವ ತರಬೇತಿ ನೀಡಿ, ನೂರಾರು ಮಹಿಳೆಯರು ಸ್ವ ಉದ್ಯೋಗ ಕೈಗೊಳ್ಳಲು ನೆರವಾಗಿದ್ದರು. ಕ್ಲಬ್‌ ಈಗಲೂ ಅಲ್ಲಿ ಮಹಿಳೆಯರಿಗೆ ಕೌಶಲ ತರಬೇತಿ ನೀಡುವ ಕೆಲಸ ಮುಂದುವರೆಸಿದೆ.

ಹೊಸ ಆಲೋಚನೆ: ತುಮಕೂರಿನಲ್ಲಿ ಉದ್ಯಮ ಸ್ಥಾಪಿಸುವ ಮುನ್ನ ಗುವಾಹತಿಯಲ್ಲಿ ವಿರಾಸ್‌ (ವಿವೇಕಾನಂದ ರಾಮಕೃಷ್ಣ ಶಾರದಾ) ಮಾರ್ಕೆಟಿಂಗ್‌ ಕನ್ಸಲ್ಟಿಂಗ್‌ ಸಂಸ್ಥೆ ಸ್ಥಾಪಿಸಿದರು. ಬಿದಿರು ಕಡ್ಡಿಗಳನ್ನು ವೃತ್ತಾಕಾರದಲ್ಲಿ ಕತ್ತರಿಸಿ, ಊದುಬತ್ತಿ ತಯಾರಿಸಿ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದರು.
ಊದುಬತ್ತಿ ಕಡ್ಡಿ ತಯಾರಾದ ನಂತರ ವ್ಯರ್ಥವಾಗುತ್ತಿದ್ದ ಬಿದಿರಿನ ಭಾಗ ಬಳಸಿ ಕ್ಯಾಂಡಲ್‌ (ಮೇಣದ) ಸ್ಟ್ಯಾಂಡ್‌ ತಯಾರಿಸಿದರು. ಅದಕ್ಕೂ ಬೇಡಿಕೆ ಕುದುರಿತ್ತು.

ಕೃಷಿ ಉದ್ಯಮ ಆರಂಭ:  2003ರಲ್ಲಿ ಉದ್ಧವ್‌ ಬರಾಲಿ ಅವರಿಗೆ ಹಣದ ಮುಗ್ಗಟ್ಟು ಇದ್ದು, ಅದಕ್ಕಾಗಿ ತಮ್ಮಲ್ಲಿ ಇರುವ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ ಖರೀದಿಸುವಂತೆ ಕೇಳಿಕೊಂಡರು. ಅದೇ ರೀತಿ ಶೈಲಜಾ ಅವರು ಯಂತ್ರವನ್ನು ಖರೀದಿಸಿದರು. ಆದರೆ ಯಂತ್ರ ಕೈಕೊಟ್ಟಿತು. ನಂತರ ಮತ್ತೊಂದು ಯಂತ್ರ ಖರೀದಿಸಿದರು. ಅದು ಹಾಗೇ ಆಯಿತು. ಹಣ ಹಾಕಿ ಕೈ ಸುಟ್ಟುಕೊಳ್ಳುವಂತಾಯಿತು. ಅಲ್ಲಿಗೇ ಖರೀದಿ ಬಿಟ್ಟು, ತಾವೇ ಇಂತಹದೊಂದು ಯಂತ್ರವನ್ನು ಆವಿಷ್ಕಾರ ಮಾಡಿ ತಯಾರಿಸಬೇಕು ಎಂದು ಛಲ ತೊಟ್ಟರು. ಯಂತ್ರ ತಯಾರಿಸುವ ಮುನ್ನ ಸಾಕಷ್ಟು ಅಡೆ–ತಡೆಗಳು ಉಂಟಾದವು. ಆದರೆ ಅವ್ಯಾವೂ ಲೆಕ್ಕಿಸದೆ ಹಿಡಿದ ಕೆಲಸದಲ್ಲಿ ಗೆಲುವು ಸಾಧಿಸಿದರು.

‘ನನ್ನದಲ್ಲದ ಕ್ಷೇತ್ರದಲ್ಲಿ ಕಾಲಿರಿಸುವುದು ಸುಲಭವಲ್ಲ. ಹೊಸ ಐಡಿಯಾಗಳನ್ನು ಹುಟ್ಟು ಹಾಕುವುದು, ಯಂತ್ರಗಳನ್ನು ಆವಿಷ್ಕಾರ ಮಾಡುವುದು, ಮಾರ್ಕೆಟ್‌ ಮಾಡುವುದು ಬಲು ಕಷ್ಟ. ಎಲ್ಲವನ್ನೂ ಎದುರಿಸಿ 2005ರಲ್ಲಿ ಧರ್ಮ ಟೆಕ್ನಾಲಜಿ ಆರಂಭಿಸಿದೆ’ ಎಂದಾಗ ಅವರ ಮೊಗದಲ್ಲಿ ಗೆಲುವು ಸಾಧಿಸಿದ ನಗು ಕಾಣಿಸಿತು.

ಒಂದೇ ಯಂತ್ರದ ಸಹಾಯದಿಂದ ಹಸಿ, ಕೆಂಪು ಹಾಗೂ ಒಣ ಅಡಿಕೆ ಸಿಪ್ಪೆ ಬಿಡಿಸುವುದು ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದೆ. 10 ವರ್ಷದಲ್ಲಿ 35 ಯಂತ್ರಗಳನ್ನು ತಯಾರಿಸಿ, ಬೇರೆ ರಾಜ್ಯಗಳಿಗೆ ಮಾತ್ರವಲ್ಲ, ಹೊರ ದೇಶಗಳಿಗೂ ಮಾರಾಟ ಮಾಡಿದ ಹೆಮ್ಮೆ ಅವರಿಗಿದೆ.

ಶೈಲಜಾ ಅವರು ರೂಪಿಸಿದ ಹುಣಸೆ ಸಿಪ್ಪೆ ತೆಗೆಯುವ ಯಂತ್ರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರು ಕೇಳಿ ಬಂದಿತ್ತು. ನಂತರದ ದಿನಗಳಲ್ಲಿ ಅವರು ಬೆಳ್ಳುಳ್ಳಿ ಸಿಪ್ಪೆ ತೆಗೆಯುವ ಯಂತ್ರವನ್ನು ಸ್ವಲ್ಪ ಸುಧಾರಿಸಿ, ಹೊಸ ಯಂತ್ರ ಕಂಡು ಹಿಡಿದರು. ಈಗ ಇದು ಹುಣಸೆ ಬೆಳೆಗಾರರ ಕಷ್ಟವನ್ನೂ ತಪ್ಪಿಸಿದೆ.

ಅಡುಗೆ ಮನೆ ತ್ಯಾಜ್ಯ ಸಂಸ್ಕರಿಸಲು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ರೂಪಿಸಿದ ವರಾಹ ‘ಕಿಚನ್‌ ವೇಸ್ಟ್‌ ಇನ್‌ ಮೆನ್ಯೂರ್‌’ ಯಂತ್ರಕ್ಕೆ ಹಲವು ಪ್ರಶಸ್ತಿಗಳು ಸಿಕ್ಕಿವೆ.

ವಾದಿರಾಜ ಒಲೆ: ವಾದಿರಾಜ ಒಲೆಯಿಂದಲೇ ಶೈಲಜಾ ಹೆಚ್ಚು ಪರಿಚಿತರು. ಸಾಂಪ್ರದಾಯಿಕ ಒಲೆಗಳಿಂದ ಹೊರಹೊಮ್ಮುವ ಹೊಗೆ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುವುದನ್ನು ಅರಿತ ಅವರು ಕಡಿಮೆ ಸೌದೆ ಬಳಸುವ, ಹೆಚ್ಚು ಹೊಗೆ ಉಗುಳದ ವಾದಿರಾಜ ಒಲೆ ರೂಪಿಸಿದರು.
ಕಾಗದ, ತೆಂಗಿನ ಚಿಪ್ಪು, ಕಡ್ಡಿಗಳ ಮೂಲಕ ಈ ಒಲೆಯಲ್ಲಿ ಸುಲಭವಾಗಿ ಅಡುಗೆ ಮಾಡಬಹುದು.

ಸಮಗ್ರ ಯಂತ್ರ: ಶೈಲಜಾ ರೂಪಿಸಿದ ‘ವೆಟ್‌ ಪ್ಯಾಡಿ ಸೀಡ್‌ ಡ್ರಿಲ್‌’ ಯಂತ್ರವು ಭತ್ತದ ಕೃಷಿಕರ ಪಾಲಿಗೆ ಸಂಜೀವಿನಿಯಾಗಿದೆ. ಭತ್ತದ ಮಡಿ ಮಾಡುವುದರಿಂದ ಹಿಡಿದು, ನಾಟಿ ಮಾಡುವವರೆಗೂ ಈ ಯಂತ್ರ ಬಳಸಬಹುದು. 10–12 ಮಂದಿ ಮಾಡುವ ಕೆಲಸವನ್ನು ಈ ಯಂತ್ರ ಬಳಸಿ ಒಬ್ಬರೇ ಮಾಡಬಹುದಾಗಿದೆ.

ರೈತರಿಗಾಗಿ ಇಷ್ಟೆಲ್ಲ ಸಂಶೋಧನೆ ಮಾಡಿದರೂ ಯಾಂತ್ರೀಕರಣಕ್ಕೆ ರೈತರನ್ನು ಮನವೊಲಿಸುವುದು ಇಂದಿಗೂ ಸವಾಲಾಗಿದೆ ಎನ್ನುತ್ತಾರೆ ಶೈಲಜಾ.
ವೈಯಕ್ತಿಕ ಬದುಕು: ಶೈಲಜಾ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಡಿಪ್ಲೊಮಾ ಪದವೀಧರೆ. ಮೈಸೂರಿನ ಕಂಪ್ಯೂಟರ್ ಅಕಾಡೆಮಿಯಲ್ಲಿ ಕೆಲ ಸಮಯ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದರು. ಅವರ ಪತಿ ಗೂಳೂರಿನ ವಿಜಯ ವಿಠ್ಠಲ ಅವರು ಎಚ್‌ಎಂಎಸ್ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT