ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಾಗ್ರತೆಗೆ ಬೇಕು ಜಾಣತನ

Last Updated 7 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ವಿದ್ಯಾರ್ಥಿಮಿತ್ರರೇ, ನಿಮ್ಮಲ್ಲಿ ಸಾಕಷ್ಟು ಮಂದಿಯನ್ನು ಕಾಡುತ್ತಿರುವ ಒಂದು ಪ್ರಮುಖ ಸಮಸ್ಯೆ ಎಂದರೆ ಏಕಾಗ್ರತೆಯ ಕೊರತೆ ಅಲ್ಲವೇ? ಓದಲು ಕುಳಿತಾಗ ಏಕಾಗ್ರತೆ ಇಲ್ಲದೆ ಹೋದಲ್ಲಿ, ಓದಿದ್ದು ಅರ್ಥವಾಗುವುದಿಲ್ಲ, ಅರ್ಥವಾಗಿದ್ದು ನೆನಪಿನಲ್ಲಿ ಉಳಿಯುವುದಿಲ್ಲ. ಹಾಗಿದ್ದಲ್ಲಿ, ಏಕಾಗ್ರತೆಯನ್ನು ನಾವು ಗಳಿಸಿಕೊಳ್ಳಬಹುದೇ? ನಮ್ಮಲ್ಲಿರುವ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬಹುದೇ? ಹೌದಾದಲ್ಲಿ ಅದು ಹೇಗೆ? ಇಂಥ ಹಲವು ಪ್ರಶ್ನೆಗಳು ನಿಮ್ಮಲ್ಲಿ ಮೂಡಿರಬಹುದು. ನೀವು ತರಗತಿಯಲ್ಲಿರುವ ಅವಧಿಯಲ್ಲೂ ಮನೆಯಲ್ಲಿ ಅಧ್ಯಯನ ಮಾಡುತ್ತಿರುವಾಗಲೂ ಏಕಾಗ್ರತೆ ಅತ್ಯವಶ್ಯ. ಈ ಹಿಂದಿನ ಒಂದು ಲೇಖನದಲ್ಲಿ ತರಗತಿಯ ಒಳಗೆ ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ನೀವು ಪಾಲಿಸಬಹುದಾದ ಕೆಲವು ಸೂತ್ರಗಳನ್ನು ಚರ್ಚಿಸಲಾಗಿತ್ತು. ಅದಕ್ಕೆ ಪೂರಕವಾಗಿ ಈ ಲೇಖನದಲ್ಲಿ ನಿಮ್ಮ ಒಟ್ಟಾರೆ ಅಧ್ಯಯನ ಸಮಯದಲ್ಲಿ ಏಕಾಗ್ರತೆ ಹೆಚ್ಚಿಸಿಕೊಂಡು ವ್ಯವಸ್ಥಿತವಾಗಿ ಓದುವ ಮೂಲಕ, ನಿಮ್ಮಲ್ಲಿರುವ ಆತ್ಮವಿಶ್ವಾಸವನ್ನು ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ನೀವು ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಕೆಲವು ಸೂತ್ರಗಳನ್ನು ಇಲ್ಲಿ ನೋಡೋಣ.

ಸೂಕ್ತ ವಾತಾವರಣ ನಿರ್ಮಿಸಿಕೊಳ್ಳಿ
ನಿಮಗೆ ಓದಿನಲ್ಲಿ ಏಕಾಗ್ರತೆ ಬರಬೇಕಾದಲ್ಲಿ ನೀವು ಗಮನಕೊಡಲೇಬೇಕಾದ ಒಂದು ಪ್ರಮುಖ ಅಂಶವೆಂದರೆ, ಅಧ್ಯಯನಕ್ಕೆ ಒಂದು ಸೂಕ್ತವಾದ ವಾತಾವರಣವನ್ನು ನಿರ್ಮಿಸಿಕೊಳ್ಳುವುದು. ಓದುವುದಕ್ಕೆ ನೀವು ಸರಿಯಾದ ಜಾಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಸಾಧ್ಯವಾದಷ್ಟೂ ಅಲ್ಲಿ ಗಾಳಿ–ಬೆಳಕಿನ ವ್ಯವಸ್ಥೆ ಚೆನ್ನಾಗಿರಬೇಕು. ಓದಲು ನೀವು ಕುಳಿತುಕೊಳ್ಳುವ ಜಾಗದಲ್ಲಿ ನಿಮ್ಮ ಹಿಂಭಾಗದಿಂದ ಬೆಳಕು ಬೀಳುವಂತಿದ್ದರೆ ಒಳ್ಳೆಯದು. ಟಿ.ವಿ.–ರೇಡಿಯೊ ನಿಮ್ಮ ಸುತ್ತಮುತ್ತ ಇಲ್ಲದಿರುವಂತೆ ನೋಡಿಕೊಳ್ಳಿ. ಓದಬೇಕಾದ ವಿಷಯಗಳಿಗೆ ಸಂಬಂಧಿಸಿದ ಪಠ್ಯಪುಸ್ತಕ, ನೋಟ್ಸ್ ಮತ್ತಿತರ ಅವಶ್ಯಕ ಅಧ್ಯಯನ ಸಾಮಗ್ರಿಗಳನ್ನು ಸೂಕ್ತವಾಗಿ, ಸುಲಭವಾಗಿ ಸಿಗುವಂತೆ ಜೋಡಿಸಿ ಇಟ್ಟುಕೊಳ್ಳಬೇಕು.

ವೇಳಾಪಟ್ಟಿಯನ್ನು ಹಾಕಿಕೊಳ್ಳಿ
ನಿಮ್ಮ ಓದು ವ್ಯವಸ್ಥಿತವಾಗಿರಬೇಕಾದರೆ, ಅದಕ್ಕೊಂದು ವೇಳಾಪಟ್ಟಿ ಹಾಕಿಕೊಳ್ಳುವುದು ಬಹಳ ಮುಖ್ಯ. ವೇಳಾಪಟ್ಟಿಯನ್ನು ಹಾಕಿಕೊಳ್ಳಲು ಮನೆಯಲ್ಲಿರುವ ಹಿರಿಯರ ಅಥವಾ ನಿಮ್ಮ ಶಿಕ್ಷಕರ ಸಹಾಯವನ್ನು ಪಡೆದುಕೊಳ್ಳಿ. ನಿಮ್ಮ ತರಗತಿಗೆ ಅನುಗುಣವಾಗಿ ನೀವು ಓದಬೇಕಾಗಿರುವ ವಿಷಯಗಳನ್ನು ಭಾನುವಾರ ಬಿಟ್ಟು ಉಳಿದ ಆರು ದಿನಗಳಿಗೆ ಹಂಚಿ. ದಿನಕ್ಕೆ ಒಂದು ವಿಷಯದ ಅಧ್ಯಯನಕ್ಕೆ ಕನಿಷ್ಠ ಮೂರು ಗಂಟೆಗಳ ಸಮಯವನ್ನಾದರೂ ಮೀಸಲಿಡಿ. ನಿಮ್ಮ ಶಾಲಾ ವೇಳಾಪಟ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಅಧ್ಯಯನವನ್ನು ಬೆಳಿಗ್ಗೆ ಸ್ವಲ್ಪ ಹೊತ್ತು, ಸಂಜೆ ಉಳಿದ ಅವಧಿಯಂತೆ ಯೋಜಿಸಿ. ಬೆಳಿಗ್ಗೆಯ ಹೊತ್ತು ಕನಿಷ್ಠ ಒಂದು ಗಂಟೆಯಷ್ಟಾದರೂ ಓದಿಗೆ ಮೀಸಲಿಡುವುದು ಒಳ್ಳೆಯದು. ಬೆಳಗಿನ ಅವಧಿಯಲ್ಲಿ ಮೆದುಳಿನ ಗ್ರಹಣಶಕ್ತಿ ಹೆಚ್ಚಿರುತ್ತದೆ. ಹಾಗಾಗಿ, ಪೂರ್ತಿ ಏಕಾಗ್ರತೆಯಿಂದ ಓದುವುದು ಸಾಧ್ಯವಾಗುತ್ತದೆ. ಶಾಲೆಯಲ್ಲಿ ಹೋಮ್ ವರ್ಕ್ ಮಾಡಲು ಕೊಟ್ಟಿದ್ದರೆ, ಅದನ್ನು ಮುಗಿಸಿದ ನಂತರವೇ ಸಂಜೆಯ ಹೊತ್ತು ಅಧ್ಯಯನಕ್ಕೆ ಕುಳಿತುಕೊಳ್ಳಿ. ಭಾನುವಾರ ಹಾಗೂ ರಜಾದಿನಗಳಂದು ಸಿಗುವ ಹೆಚ್ಚಿನ ಅಧ್ಯಯನದ ಅವಧಿಯನ್ನು ಸದುಪಯೋಗಪಡಿಸಿಕೊಳ್ಳಿ.

ಗುರಿಯನ್ನು ನಿರ್ಧರಿಸಿಕೊಳ್ಳಿ
ನಿಮ್ಮ ವಿದ್ಯಾರ್ಥಿಜೀವನದ ಗುರಿ ಏನು ಎಂಬುದನ್ನು ನಿರ್ಧರಿಸಿಕೊಳ್ಳಿ. ತರಗತಿಯಲ್ಲಿ ಅತ್ಯಧಿಕ ಅಂಕ ಗಳಿಸುವುದು ಇಲ್ಲವೇ ಡಿಸ್ಟಿಂಕ್ಷನ್ ಪಡೆದುಕೊಳ್ಳುವುದು ಇಲ್ಲವೇ ಕಳೆದ ಪರೀಕ್ಷೆಯಲ್ಲಿ ಪಡೆದ ಅಂಕಗಳಿಗಿಂತ ಹೆಚ್ಚಿನ ಅಂಕಗಳನ್ನು ಪಡೆಯುವುದು – ಹೀಗೆ ನಿಮ್ಮ ಗುರಿ ಸ್ಪಷ್ಟವಾಗಿರಲಿ. ಸಾಧಿಸಲಾಗದಂಥ ಗುರಿಗಳನ್ನು ಹಾಕಿಕೊಳ್ಳುವುದು ಬೇಡ. ಗುರಿಗಳು ನಿಮ್ಮ ಇತಿಮಿತಿಗೆ ಅನುಗುಣವಾಗಿರಲಿ. ಗುರಿಯನ್ನು ಸಾಧಿಸಲು ಬೇಕಾದ ಮನೋಭಾವ ಹಾಗೂ ಛಲವನ್ನು ಬೆಳೆಸಿಕೊಳ್ಳಿ.

ಸವಾಲುಗಳನ್ನು ಅರ್ಥಮಾಡಿಕೊಳ್ಳಿ
ಓದಲು ಕುಳಿತಾಗ ನೀವು ಹಲವಾರು ಸವಾಲುಗಳನ್ನು ಎದುರಿಸಬೇಕಾಗಿಬರಬಹುದು. ಅದು ವಿಷಯದ ಕ್ಲಿಷ್ಟತೆ ಇರಬಹುದು, ಇಲ್ಲವೆ ನಿಮ್ಮ ಮನಸ್ಸಿನ ಮೇಲಿರುವ ಒತ್ತಡ ಇರಬಹುದು. ನಿಮಗಿರುವ ಸವಾಲು ಯಾವುದು, ಯಾವ ರೀತಿಯದು ಎಂಬುದನ್ನು ಸರಿಯಾಗಿ ಗುರುತಿಸಿಕೊಳ್ಳಿ. ಅದನ್ನು ಸರಿಪಡಿಸಿಕೊಳ್ಳಲು ನೀವೇನು ಮಾಡಬೇಕೆಂಬುದನ್ನು ಯೋಚಿಸಿ. ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಿ. ಮನಸ್ಸಿನ ಮೇಲೆ ಯಾವುದೇ ರೀತಿಯ ಒತ್ತಡ ಇದ್ದಾಗ ಏಕಾಗ್ರತೆಗೆ ಭಂಗ ಉಂಟಾಗುತ್ತದೆ. ಹಾಗಾಗಿ, ಒತ್ತಡ, ಉದ್ವೇಗಗಳಿಗೆ ಎಡೆ ಮಾಡಿಕೊಡದೆ, ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳಿ. ನಿರ್ಮಲವಾದ ಮನಸ್ಸೇ ಏಕಾಗ್ರತೆಯ ಮೂಲಮಂತ್ರ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ಪರಿಣಾಮಕಾರಿ ಅಧ್ಯಯನ ವಿಧಾನ
ಅಧ್ಯಯನ ಮಾಡುವ ಹಲವು ವಿಧಾನಗಳಿವೆ. ಕೆಲವರು ಹೊರಗಡೆ ಕೇಳಿಸದಂತೆ ಮನಸ್ಸಿನಲ್ಲಿಯೇ ಓದಿಕೊಳ್ಳುತ್ತಾರೆ. ಕೆಲವರು ಗಟ್ಟಿಯಾಗಿ, ಏರುದನಿಯಲ್ಲಿ ಓದಿಕೊಳ್ಳುತ್ತಾರೆ. ನಿಮಗೆ ಸೂಕ್ತವೆನಿಸಿದ ವಿಧಾನವನ್ನು ಆಯ್ಕೆ ಮಾಡಿಕೊಳ್ಳಿ. ಗಟ್ಟಿಯಾಗಿ ಓದಿಕೊಂಡಾಗ ಶಬ್ದಗಳು ನಿಮಗೇ ಕೇಳಿಸುವುದರಿಂದ ಕಣ್ಣಿನ ಜೊತೆಗೆ ಕಿವಿಯೂ ಓದುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತದೆ. ಇದರಿಂದ ವಿಷಯವನ್ನು ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತದೆ. ಯಾವುದೇ ವಿಷಯದ ಯಾವುದೇ ಪಾಠವನ್ನು ಓದಿದ ನಂತರ ಅದನ್ನು ನೆನಪಿಸಿಕೊಳ್ಳುತ್ತಾ, ಅದರ ಸಾರಾಂಶವನ್ನು ಸಂಕ್ಷಿಪ್ತವಾಗಿ ಕೆಲವೇ ಪದಗಳಲ್ಲಿ ಬರೆದಿಟ್ಟುಕೊಳ್ಳಿ. ಮುಂದೆ ಅದೇ ಪಾಠವನ್ನು ಪುನರ್ಮನನ ಮಾಡಿಕೊಳ್ಳುವ ಮುನ್ನ ಈ ಸಾರಾಂಶವನ್ನು ಓದಿಕೊಳ್ಳಿ. ಇದರಿಂದ ಪಾಠದ ಯಾವ ಭಾಗ ಅರ್ಥವಾಗಿದೆ, ಯಾವ ಭಾಗ ಅರ್ಥವಾಗಿಲ್ಲ ಎಂಬುದು ನಿಮಗೆ ತಿಳಿಯುತ್ತದೆ. ಈ ಸಾರಾಂಶದ ಹಾಳೆಗಳು ಅಂತಿಮ ಪರೀಕ್ಷೆಯ ಸಮಯದಲ್ಲಿ, ಸಮಯದ ಅಭಾವ ಇರುವಾಗ ಪಾಠಗಳ ಪುನರ್ಮನನಕ್ಕೆ ಅತ್ಯಂತ ಉಪಯುಕ್ತವಾಗುತ್ತವೆ.

ಆಗಾಗ ಕೊಂಚ ವಿರಾಮ
ನಿರಂತರವಾಗಿ, ವಿರಾಮವನ್ನು ಕೊಡದೆ ಓದುವುದರಿಂದ ಏಕಾಗ್ರತೆಯನ್ನು ಸಾಧಿಸಲು ಸಾಧ್ಯವಿಲ್ಲ. ಪ್ರತಿ ಒಂದು ಗಂಟೆಯ ಓದಿನ ನಂತರ ಕನಿಷ್ಠ ಐದು ನಿಮಿಷಗಳ ವಿರಾಮವಿರಲಿ. ಈ ವಿರಾಮದ ಅವಧಿಯಲ್ಲಿ ಎದ್ದು ಕೊಂಚ ಹೊತ್ತು ಓಡಾಡಿ. ಇದರಿಂದ ನಿಮ್ಮ ಏಕತಾನತೆ ದೂರವಾಗುತ್ತದೆ. ಮನಸ್ಸು ಹಗುರವಾಗುತ್ತದೆ. ದೇಹಕ್ಕೂ ಕೊಂಚ ವ್ಯಾಯಾಮವಾಗುತ್ತದೆ. ಮುಂದಿನ ಅವಧಿಯ ಓದಿಗೆ ಏಕಾಗ್ರತೆ ಹೆಚ್ಚಿಸಿಕೊಳ್ಳಲು ಇದರಿಂದ ನೆರವಾಗುತ್ತದೆ.

ಎಲೆಕ್ಟ್ರಾನಿಕ್ ಉಪಕರಣಗಳಿಂದ ದೂರವಿರಿ
ಟಿ.ವಿ. ಲ್ಯಾಪ್‌ಟಾಪ್‌, ಮೊಬೈಲ್ – ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಮ್ಮ ಅಧ್ಯಯನದ ಅವಧಿಯಲ್ಲಿ ದೂರವಿಡಿ. ಸ್ವಿಚ್ ಆಫ್ ಮಾಡಿ ಇಡುವುದು ಇನ್ನೂ ಉತ್ತಮ. ಇಂಥ ಉಪಕರಣಗಳು ನಿಮ್ಮ ಮನಸ್ಸನ್ನು ಓದಿನಿಂದ ದೂರ ಮಾಡುವುದರ ಜೊತೆಗೆ, ನಿಮ್ಮ ಅಮೂಲ್ಯ ಸಮಯವನ್ನೂ ಹಾಳು ಮಾಡುತ್ತವೆ. ನೀವು ಓದುವುದಕ್ಕೆ ಕುಳಿತುಕೊಳ್ಳುವುದಕ್ಕೆ ಮುಂಚೆ ಕೊಂಚ ಹೊತ್ತು ಅವುಗಳನ್ನು ಬೇಕಾದರೆ ಬಳಸಿ. ಅಧ್ಯಯನಕ್ಕೆ ಕುಳಿತ ನಂತರ ಅವುಗಳ ಬಳಕೆ ಬೇಡವೇ ಬೇಡ.

ಋಣಾತ್ಮಕ ಯೋಚನೆಗಳು ಬೇಡ
ಯಾವುದೇ ಕಾರಣಕ್ಕೂ ಋಣಾತ್ಮಕ ಯೋಚನೆಗಳು ನಿಮ್ಮ ಮನಸ್ಸಿಗೆ ಬಾರದಂತೆ ನೋಡಿಕೊಳ್ಳಿ. ಅಂಥ ಯೋಚನೆಗಳು ಏಕಾಗ್ರತೆಯನ್ನು ಕೆಡಿಸುತ್ತವೆ. ನಿಮ್ಮ ಗುರಿ ಸಾಧನೆಯ ಛಲವನ್ನು ದುರ್ಬಲಗೊಳಿಸುತ್ತವೆ. ನಿಮ್ಮಲ್ಲಿ ಋಣಾತ್ಮಕ ಯೋಚನೆಗಳು ಉಂಟಾಗಲು ನಿಮ್ಮ ಸುತ್ತಮುತ್ತ ಇರುವ ಹಲವು ವ್ಯಕ್ತಿಗಳು ಅಥವಾ ಸಂಗತಿಗಳು ಕಾರಣವಾಗಬಹುದು. ಹಾಗಾಗಿ, ಅಂಥ ಯಾವುದೇ ವ್ಯಕ್ತಿ ಅಥವಾ ವಿಷಯವನ್ನು ದೂರ ಇಡುವುದು ನಿಮ್ಮ ಗುರಿಸಾಧನೆಗೆ ಅತ್ಯವಶ್ಯ.

ಸ್ನೇಹಿತರೊಡನೆ ಶಿಕ್ಷಕರೊಡನೆ ಚರ್ಚಿಸಿ
ನಿಮ್ಮ ಅಧ್ಯಯನದ ಅವಧಿಯಲ್ಲಿ ನಿಮಗೆ ಕೆಲವು ಸಂದೇಹಗಳು ಉಂಟಾಗಬಹುದು. ಅಂಥ ವಿಷಯವನ್ನು ಪಟ್ಟಿ ಮಾಡಿ ಇಟ್ಟುಕೊಳ್ಳಿ. ನಿಮ್ಮ ಹಾಗೇ ಓದಿನಲ್ಲಿ ಆಸಕ್ತಿ ಇರುವ ಸಹಪಾಠಿಗಳ ಸಣ್ಣ ತಂಡವೊಂದನ್ನು ರಚಿಸಿಕೊಳ್ಳಿ. ಪ್ರತಿ ದಿನ ಅಥವಾ ಎರಡು ದಿನಗಳಿಗೆ ಒಮ್ಮೆ ನಿಮ್ಮ ಸಹಪಾಠಿಗಳ ಜೊತೆಗೆ ಚರ್ಚಿಸಿ. ಪರಸ್ಪರ ನಿಮ್ಮ ಸಂದೇಹಗಳನ್ನು ಬಗೆ ಹರಿಸಿಕೊಳ್ಳಿ. ಮನೆಯಲ್ಲಿರುವ ಹಿರಿಯರಿಂದಲೂ ಕೆಲವೊಮ್ಮೆ ನಿಮ್ಮ ಸಂದೇಹಕ್ಕೆ ಪರಿಹಾರ ದೊರಕಬಹುದು. ಕೇಳುವುದಕ್ಕೆ ಯಾವ ಹಿಂಜರಿಕೆಯೂ ಬೇಡ. ಅವಶ್ಯಕತೆ ಬಿದ್ದಲ್ಲಿ ಶಾಲೆಯ ನಿಮ್ಮ ಶಿಕ್ಷಕರನ್ನು ಭೇಟಿ ಮಾಡಿ ನಿಮ್ಮ ಸಂದೇಹಗಳನ್ನು ಬಗೆಹರಿಸಿಕೊಳ್ಳಿ.

ಇಲ್ಲಿ ಹೇಳಲಾಗಿರುವ ಅಂಶಗಳ ಕಡೆ ಗಮನ ಹರಿಸಿ, ಅಳವಡಿಸಿಕೊಂಡಲ್ಲಿ ನೀವು ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಖಂಡಿತ ಯಶಸ್ಸನ್ನು ಗಳಿಸುತ್ತೀರಿ. ಏಕಾಗ್ರತೆಯನ್ನು ವೃದ್ಧಿಸಿಕೊಳ್ಳುತ್ತಿದ್ದಂತೆ ನಿಮ್ಮ ಆತ್ಮವಿಶ್ವಾಸವು ಕೂಡ ಹೆಚ್ಚುತ್ತಾ ಹೋಗುತ್ತದೆ. ನೀವು ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾ ಹೋಗುತ್ತೀರಿ.

ಆರೋಗ್ಯದ ಕಡೆ ಗಮನಕೊಡಿ
ಓದಿನಲ್ಲಿ ಏಕಾಗ್ರತೆ ಸಾಧಿಸಲು ಮಾನಸಿಕ ಹಾಗೂ ದೈಹಿಕ ಆರೋಗ್ಯ ಬಹಳ ಮುಖ್ಯ. ಯೋಗ, ಧ್ಯಾನ ಮುಂತಾದ ಚಟುವಟಿಕೆಗಳ ಸಹಾಯದಿಂದ ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳುವುದರ ಜೊತೆಗೆ, ನಿಮ್ಮ ದೈಹಿಕ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದೂ ಅತ್ಯವಶ್ಯ. ಸಮಯಕ್ಕೆ ಸರಿಯಾಗಿ ಆಹಾರ ತೆಗೆದುಕೊಳ್ಳಿ. ಪೌಷ್ಟಿಕವಾದ ಆಹಾರವನ್ನು ಸೇವಿಸಿ. ಸಾಕಷ್ಟು ಸಮಯ ನಿದ್ರೆಯನ್ನೂ ಮಾಡಿ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT