ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆಯ ಮೇಲೇಕೆ ನಿರಾಸಕ್ತಿ?

Last Updated 16 ಜನವರಿ 2019, 5:56 IST
ಅಕ್ಷರ ಗಾತ್ರ

ಭಾಷೆ ಸಂವಹನ ಮಾಧ್ಯಮ, ಅಭಿವ್ಯಕ್ತಿಯ ಮೂಲಸ್ತ್ರೋತ್ರ. ಸಾಮಾಜಿಕ ಮತ್ತು ವೈಚಾರಿಕ ಚಿಂತನೆಗಳಿಗೆ ಪೂರಕ. ಉನ್ನತ ಶಿಕ್ಷಣದ ಭಾಗವಾದ ಪ್ರಬಂಧ ಮಂಡನೆ, ಪ್ರಬಂಧದ ಸಾರಾಂಶವನ್ನು ಪ್ರಭಾವಶಾಲಿಯಾಗಿ ವಿಷಯದ ಚೌಕಟ್ಟಿನಲ್ಲಿ ಹುದುಗಿಸುವುದು, ವೇದಿಕೆಯ ಮೇಲೆ ವಿಷಯ ಮಂಡನೆ, ಮಾರ್ಗದರ್ಶಕ ಶಿಕ್ಷಕರನ್ನು ಒಪ್ಪಿಸಲು, ಸಹಪಾಠಿಗಳ/ವಿಚಾರ ಸಂಕಿರಣದಲ್ಲಿ ಭಾಗಿಯಾದವರ ಕುತೂಹಲಗಳನ್ನು ತಣಿಸಲು ಭಾಷೆಯ ಮೇಲಿನ ಹಿಡಿತ ಅತ್ಯಗತ್ಯ.

ವಿಜ್ಞಾನ, ಗಣಿತ ವಿಷಯಗಳಲ್ಲಿ ಅನಿವಾರ್ಯವಾದ ಡೆಫಿನಿಶನ್, ಡಿರೈವೇಶನ್‌ಗಳ ನಿರಂತರ ಅಭ್ಯಾಸ, ಪರೀಕ್ಷೆಯಲ್ಲಿ ಇಳಿಸಿ ಅಂಕ ಗಳಿಸುವುದು ಅಷ್ಟೇ ಅಲ್ಲದೆ ವೈಜ್ಞಾನಿಕ ವಿಚಾರಗಳನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಲು ಭಾಷೆಯ ಕಲಿಕೆ, ಬಳಕೆ ನಿರಂತರವಾಗಿರಬೇಕಲ್ಲವೆ !

ವಿಜ್ಞಾನವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಪಿಯುಸಿ ಹಂತದಿಂದಲೇ ಭಾಷೆಯನ್ನು/ ಭಾಷಾ ತರಗತಿಗಳನ್ನು ನಿರ್ಲಕ್ಷಿಸುತ್ತಿರುವುದು ಕಂಡು ಬರುತ್ತಿದೆ. ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರದ ತರಗತಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯ ದೃಷ್ಟಿಯಿಂದ ಹೆಚ್ಚಿನ ಮಹತ್ವವನ್ನು ಕೊಡುತ್ತಿದ್ದಾರೆ. ಅವಶ್ಯಕವಾದ ವಿಶೇಷ ತರಬೇತಿಗಳನ್ನು ಪಡೆಯುತ್ತಿದ್ದಾರೆ. ಅಭ್ಯಾಸಕ್ಕೆ ಹೆಚ್ಚಿನ ಸಮಯ ಮೀಸಲಿಟ್ಟು, ಶಿಕ್ಷಕರೊಂದಿಗೆ ಚರ್ಚಿಸುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಬಹುದಾದ-ಯಾವತ್ತೂ ಪುನರಾವರ್ತನೆಯಾಗದ ಪ್ರಶ್ನೆಗಳ ವಿಶ್ಲೇಷಣೆ, ಪರೀಕ್ಷಾ ಅವಧಿಯಲ್ಲಿ ಸಮಯ ಪರಿಪಾಲನೆಯ ಕುರಿತು ತಯಾರಿಯನ್ನು ಮನಸ್ಸಿಟ್ಟು ಮಾಡುತ್ತಾರೆ.

ಕಾಲೇಜುಗಳಲ್ಲಿ ವಿಜ್ಞಾನದ ಬೋಧನೆಗಾಗಿ ಭಾಷೆಯ ತರಗತಿಗಳನ್ನು ಬಿಟ್ಟುಕೊಡುವ/ ಕಡಿತಗೊಳಿಸುವ ರೂಢಿಯನ್ನೂ ಕಾಣಬಹುದು. ಹಾಜರಾತಿಯ ನಿರ್ಬಂಧದಿಂದಾಗಿ ಭಾಷಾ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಭಾಷಾ ಶಿಕ್ಷಕರಿಗೂ ಅಗತ್ಯ ಗೌರವವನ್ನು ಕೊಡಲಾರದಂತಾಗಿದ್ದಾರೆ. ವಿಜ್ಞಾನ ಮತ್ತು ಗಣಿತದ ವಿಷಯಗಳಲ್ಲಿ ನೂರಕ್ಕೆ ನೂರು ಪಡೆಯುವ ವಿದ್ಯಾರ್ಥಿಗಳಿಗೆ ಭಾಷೆಯ ಪತ್ರಿಕೆಯಲ್ಲಿ ಉತ್ತೀರ್ಣರಾದರೆ ಸಾಕು ಎನ್ನುವ ಧೋರಣೆಯಿದೆ. ಅಂತಿಮ ಪರೀಕ್ಷೆಯ ಕೆಲವೇ ದಿನಗಳಿಗೆ ಮುಂಚೆ ಗೈಡ್ ಸಹಾಯ ಪಡೆದು ಸಿದ್ಧರಾಗುವವರಿದ್ದಾರೆ.

ಪೋಷಕರ ಅಭಿಪ್ರಾಯವೂ ಇದಕ್ಕಿಂತ ಹೆಚ್ಚು ಭಿನ್ನವಾಗಿಲ್ಲ. ದುಬಾರಿ ಶುಲ್ಕ ಪಾವತಿಸಿ, ತರಬೇತಿ ಕೇಂದ್ರಗಳಿಗೆ ಪ್ರವೇಶ ಕಲ್ಪಿಸಿ, ತಮ್ಮ ಮಕ್ಕಳಿಗೆ ತಾಂತ್ರಿಕ ವಿಷಯ ಮತ್ತು ವೃತ್ತಿಪರ ಶಿಕ್ಷಣ ದೊರಕಿಸುವ ಕನಸು ಹೊತ್ತ ಪೋಷಕರು ಭಾಷೆಯ ಕಲಿಕೆಗಾಗಿ ಸಮಯ ಮೀಸಲಿಡುವುದು ಅನಗತ್ಯ ಎನ್ನುವ ಅಭಿಪ್ರಾಯ ಹೊಂದಿದ್ದಾರೆ.

ಭಾಷಾ ಕಲಿಕೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ವೃತ್ತಿಪರ ಶಿಕ್ಷಣದ(ಪದವಿ) ಅಂತಿಮ ಹಂತದಲ್ಲಿ ಗುಂಪು ಚರ್ಚೆ, ಇಂಟರ್ನ್‌ಶಿಪ್, ಪ್ರಾಜೆಕ್ಟ್‌ಗಳ ದಿನದಿನದ ಪ್ರಕ್ರಿಯೆಗಳನ್ನು ಟೆಕ್ನಿಕಲ್ ರೌಂಡ್ ಅಥವಾ ಎಚ್ ಆರ್ ರೌಂಡ್ ನಲ್ಲಿ ವಿವರಿಸುವಾಗ ಶಬ್ದಭಂಡಾರದ ಕೊರತೆ, ನಿರರ್ಗಳವಾಗಿ ವಿಷಯದ ನಿರೂಪಣೆಯ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಜಾಳುತನವನ್ನು ಅನುಭವಿಸಬೇಕಾದೀತು.

ಸಮಾಜಶಾಸ್ತ್ರ, ಮನೋವಿಜ್ಞಾನ, ಇತಿಹಾಸ ಮೊದಲಾದ ಮಾನವಶಾಸ್ತ್ರ ವಿಷಯಗಳನ್ನು ಪದವಿ/ಸ್ನಾತಕೋತ್ತರ ಹಂತದಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ಹೆಚ್ಚು ಪ್ರಭಾವಶಾಲಿಯಾಗಿ ಭಾಷಾಪ್ರಯೋಗದಲ್ಲಿ ನಿರತರಾಗಿರುವುದು ಗಮನೀಯ. ಇವರಿಗೆ ಪರೀಕ್ಷೆಯಲ್ಲೂ ವಿವರಣಾತ್ಮಕವಾದ, ವಿವಿಧ ದೃಷ್ಟಿಕೋನಗಳನ್ನು ಪ್ರಯೋಗಾತ್ಮಕವಾಗಿ ಮಂಡಿಸಬಹುದಾದ ಅವಕಾಶ ಮತ್ತು ಸಾಧ್ಯತೆಗಳು ಹೇರಳವಾಗಿರುವುದು ಕಂಡುಬರುತ್ತದೆ.

ನಿರ್ಲಕ್ಷ್ಯ ದುಬಾರಿಯಾದೀತು..

l ಭಾಷಾ ಕಲಿಕೆಯು ಪರೀಕ್ಷೆ, ನೌಕರಿ ಇಷ್ಟಕ್ಕೇ ಸೀಮಿತವಾಗದೆ ಸ್ನೇಹಿತರು, ಪೋಷಕರು, ಬಂಧುಬಳಗದೊಂದಿಗೂ ಬಾಂಧವ್ಯ ಬೆಳೆಸುವುದಕ್ಕೆ ಸಹಕಾರಿ. ಮನೆಗೆ ಅತಿಥಿಗಳು ಬಂದಾಗ ಮಾತನಾಡಿಸಿ ಆದರಿಸಬೇಕಾದಾಗ ಸಂದರ್ಭದಲ್ಲಿ ಗೊಂದಲಕ್ಕೊಳಗಾಗಿ ಕೊಠಡಿ ಸೇರಿಕೊಳ್ಳುವ ಯುವಜನತೆಯನ್ನು ಎಲ್ಲೆಲ್ಲೂ ಗುರುತಿಸಬಹುದಾಗಿದೆ!

l ಮೊಬೈಲ್ ಬಳಕೆ, ಸಂದೇಶಗಳನ್ನು ಅತಿ ಕಡಿಮೆ ಪದಗಳನ್ನು ಬಳಸಿ, ಇಮೋಜಿಗಳನ್ನು ಬಳಸಿ ರವಾನಿಸುವುದೂ ಭಾಷೆಯ ಬಳಕೆಯನ್ನು ಗಣನೀಯವಾಗಿ ಕಡಿತಗೊಳಿಸಿದೆ.

l ವ್ಯಾಕರಣಬದ್ಧ ವಾಕ್ಯಗಳು, ಪದಸಂಪತ್ತು, ಪ್ರಾದೇಶಿಕ ಗಾದೆ-ನಾಣ್ಣುಡಿಗಳ ಸೂಕ್ತ ಪ್ರಯೋಗ ಭಾಷೆಯ ಮೇಲಿನ ಹಿಡಿತ ಮತ್ತು ಪ್ರೌಢಿಮೆಯನ್ನು ತೋರಿಸುತ್ತದೆ.

ವಿಜ್ಞಾನ, ಮಾನವಶಾಸ್ತ್ರ ಇವುಗಳಿಂದ ಹೊರತಾಗಿ ಮನುಷ್ಯ ಭಾವಜೀವಿ. ತನ್ನ ಭಾವನೆಗಳನ್ನು ಆತ್ಮೀಯರೊಂದಿಗೆ ಆಪ್ತವಾಗಿ ಹಂಚಿಕೊಳ್ಳಲು ಇರುವ ಮಾಧ್ಯಮಗಳಲ್ಲಿ ಭಾಷೆ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಮಾನಸಿಕ ಉದ್ವೇಗಗಳ ತೀವ್ರತೆಯನ್ನು ಹದಗೊಳಿಸಿ, ಶಾಂತವಾಗಿ ವ್ಯವಹರಿಸಲು ಭಾಷೆ ಸಹಕಾರಿಯಾಗಿದೆ. ಬದುಕಿನ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುವ ಮೌಲ್ಯಗಳು, ಸಂಸ್ಕಾರಗಳು, ಆಚರಣೆಗಳ ಅರಿವಿಗೆ ಭಾಷೆ ಮೂಲಾಧಾರ. ಇಂದಿನ ಯುವಜನತೆ ಭಾಷೆಯ ಆಪ್ತ ಸ್ಪರ್ಶದಿಂದ ದೂರಾಗುತ್ತಿರುವುದು ಶೋಚನೀಯ.

ಭಾಷಾ ಕಲಿಕೆಯ ಹೊರೆ ಇರುವುದಿಲ್ಲವೆಂದು 10ನೇ ತರಗತಿಯ ನಂತರ ಪಿಯುಸಿ ಹಂತದಲ್ಲಿ ಸಿಬಿಎಸ್‌ಇ, ಐಸಿಎಸ್‌ಇ. ವಾಹಿನಿಯಲ್ಲೇ ಮುಂದುವರೆಯುವವರಿದ್ದಾರೆ.

ಭಾವವಾಹಿನಿಗೆ ಮರಳಿ

l ಭಾಷಾ ಪಠ್ಯದಲ್ಲಿರುವ ಪ್ರಬಂಧಗಳ ಲೇಖಕರ ಇತರ ಕೃತಿಗಳನ್ನು, ಲೇಖನಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವುದು

l ಕಾಲೇಜು ಪತ್ರಿಕೆಗೆ ಲೇಖನಗಳನ್ನು ಬರೆಯುವ ಅಭ್ಯಾಸ ಮಾಡಿಕೊಳ್ಳುವುದು.

l ಭಾಷಾ ತರಗತಿಗಳಿಗೆ ಸ್ವಇಚ್ಛೆಯಿಂದ ಹಾಜರಾಗುವುದು.

l ಸಾಹಿತ್ಯ ಪ್ರಕಾರಗಳಾದ ಕಾವ್ಯ, ನಾಟಕ, ಪ್ರಬಂಧದಂತಹ ವಿವಿಧ ಪ್ರಕಾರಗಳನ್ನು ಸವಿಯುವ ಮನಸ್ಥಿತಿಯನ್ನು ಅಭಿವೃದ್ಧಿಗೊಳಿಸಿಕೊಳ್ಳುವುದು. ಈ ಮೂಲಕ ಮಾನಸಿಕ ನೆಮ್ಮದಿ ಹೊಂದುವುದು.

l ಶಿಕ್ಷಕರ ಅಥವಾ ಪೋಷಕರ ಒತ್ತಾಯಕ್ಕಾಗಿಯೋ, ರ‍್ಯಾಂಕ್‌ನ ಆಮಿಷಕ್ಕೋ ಅಲ್ಲದೆ ತಮ್ಮ ವ್ಯಕ್ತಿತ್ವದ ಒಟ್ಟಾರೆ ಅಭಿವೃದ್ಧಿಗಾಗಿ ಭಾಷಾ ಪರೀಕ್ಷೆಯ ತಯಾರಿಯಲ್ಲಿಯೂ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT