ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮನವರಿತು ನಡೆದರೆ...

Last Updated 10 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಪೋ ಷಕರ ಪಾತ್ರ ಅತ್ಯಂತ ಕಠಿಣವಾದ ಕೆಲಸ. ಆದರೆ, ನೀವು ಪೋಷಕ ನಿರ್ವಹಣಾ ವಿಧಾನಗಳನ್ನು ಉಪಯೋಗಿಸಿ ನಿಮ್ಮ ಮಗುವಿನ ವರ್ತನೆಯಲ್ಲಿ ಬದಲಾವಣೆಯನ್ನು ನೋಡಬಹುದು. ನಡವಳಿಕೆ ತೊಂದರೆ ಇರುವ ಮಕ್ಕಳನ್ನು ಪೋಷಿಸುವಾಗ ಮತ್ತು ಅವರ ಜೊತೆ ವ್ಯವಹರಿಸುವಾಗ ಪೋಷಕರು ಅಸಹಾಯಕರಾಗಿರುತ್ತಾರೆ. ಇದರಿಂದ ಹೊರಬರಲು ಶಿಕ್ಷೆಯ ಮಾರ್ಗವನ್ನು ಅನುಸರಿಸುತ್ತಾರೆ. ಉದಾಹರಣೆಗೆ ಬಯ್ಯುವುದು ಮತ್ತು ಹೊಡೆಯುವುದು. ಬಹಳಷ್ಟು ಪೋಷಕರು ಇದು ಹೆಚ್ಚು ಸಹಕಾರಿಯಾಗಿಲ್ಲ ಎಂದೇ ಅಭಿಪ್ರಾಯಪಟ್ಟಿದ್ದಾರೆ. ಶಿಕ್ಷೆ ಒಂದೇ ಕೆಲಸ ಮಾಡುವುದಿಲ್ಲ. ಕಾರಣ

* ಅತಿಯಾದ ಶಿಕ್ಷೆಯ ಪ್ರಯೋಗದಿಂದ ಮಗು ಆಕ್ರಮಣಕಾರಿಯಾಗುತ್ತದೆ.

* ಶಿಕ್ಷೆ ಮಗುವಿಗೆ ಏನು ಮಾಡಬಾರದೆಂದು ಕಲಿಸುತ್ತದೆಯೆ ಹೊರತು, ಏನು ಮಾಡಬೇಕೆಂದು ಕಲಿಸುವುದಿಲ್ಲ. ಮಕ್ಕಳಿಗೆ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳುವುದನ್ನು ಕಲಿಸುವುದು ಉತ್ತಮ. ಇದನ್ನು ಮಾಡಿದಾಗ ಕೆಟ್ಟ ನಡವಳಿಕೆಗಳು ತಾವಾಗೇ ಕಡಿಮೆಯಾಗುತ್ತವೆ.

* ಹೆಚ್ಚಿನ ಮಕ್ಕಳು ಸಾಕಷ್ಟು ಶಿಕ್ಷೆಯನ್ನು ನೀಡುವ ಪೋಷಕರನ್ನು ಮೆಚ್ಚಿಕೊಳ್ಳುವುದಿಲ್ಲ. ಈ ಪೋಷಕರ ಶಿಕ್ಷೆಯು ಅವರವರ ಭಾವನೆಗಳ ಮೇಲೆ ಅವಲಂಬಿತವಾಗಿರುತ್ತದೆಯೇ ಹೊರತು ಮಕ್ಕಳ ಚಟುವಟಿಕೆಗಳ ಮೇಲಲ್ಲ.

ಬಹಳಷ್ಟು ಮಕ್ಕಳು ಇತರರ ನಡವಳಿಕೆಯನ್ನು ಅನುಕರಣೆ ಮಾಡುತ್ತಾರೆ. ಇದು ಕೂಡ ಕೆಟ್ಟ ನಡವಳಿಕೆ ಕಲಿಯಲು ಅನುವು ಮಾಡಿಕೊಡುತ್ತದೆ. ಆದರೆ, ಈ ವಿಧದ ಕಲಿಕೆಯು ಪೂರ್ವಯೋಜಿತವಾಗಿರುವುದಿಲ್ಲ. ಯಾವ ಪೋಷಕರಿಗೂ ತಮ್ಮ ಮಕ್ಕಳಿಗೆ ಕೆಟ್ಟ ನಡವಳಿಕೆಗಳನ್ನು ಕಲಿಸಬೇಕೆಂಬ ಉದ್ದೇಶ ಇರುವುದಿಲ್ಲ. ಆದರೆ, ಇದು ಸಂಭವಿಸುವುದು ಆಕಸ್ಮಿಕವಾಗಿ. ಮಕ್ಕಳು ತಮ್ಮ ಪೋಷಕರು ಮತ್ತು ಕುಟುಂಬವನ್ನು ನೋಡಿ ಅವರ ನಡವಳಿಕೆಯನ್ನು ಅನುಸರಿಸುತ್ತಾರೆ. ಇದರರ್ಥ ನಾವು ಅವರಿಗೆ ಒಳ್ಳೆಯ ಮಾದರಿಯನ್ನು ಕೊಡಬೇಕು. ನಮ್ಮ ಮಕ್ಕಳು ಯಾವ ರೀತಿ ವರ್ತಿಸಬೇಕು ಎಂದು ತಿಳಿದು ನಾವು ವರ್ತಿಸಬೇಕು.

ಚೆನ್ನಾಗಿ ವರ್ತಿಸುವ ಮಕ್ಕಳ ಪಾಲಕರನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಇದರಿಂದ ತಿಳಿದು ಬಂದಿದ್ದೇನೆಂದರೆ ಈ ಪಾಲಕರು ತಮ್ಮ ಮಕ್ಕಳ ನಡವಳಿಕೆಗೆ ಪ್ರತಿಫಲ ಮತ್ತು ಪ್ರಶಂಸೆಗಳನ್ನು ನೀಡುತ್ತಾರೆ ಮತ್ತು ಕಡಿಮೆ ಶಿಕ್ಷೆಯನ್ನು ಬಳಸುತ್ತಾರೆ.

ಪೋಷಕ ನಿರ್ವಹಣಾ ವಿಧಾನಗಳನ್ನು ಬಳಸಿದರೆ ನೀವು ಕೂಡ ನಿಮ್ಮ ಮಕ್ಕಳಲ್ಲಿ ಉತ್ತಮ ನಡವಳಿಕೆಯನ್ನು ಬೆಳೆಸಬಹುದು. ಒಂದು ಬಾರಿಗೆ ಒಂದೇ ವಿಧಾನವನ್ನು ಕಲಿಯುವುದು ಉತ್ತಮ. ಒಂದು ವಿಧಾನವನ್ನು ಕಲಿತು ಅದನ್ನು ಪ್ರಯತ್ನಿಸಿದ ನಂತರ ಮತ್ತೊಂದು ವಿಧಾನವನ್ನು ಪ್ರಯತ್ನಿಸಿ. ಒಂದು ಬಾರಿ ನೀವು ಎಲ್ಲ ವಿಧಾನಗಳನ್ನು ಕಲಿತ ನಂತರ ಅವೆಲ್ಲವನ್ನೂ ಒಟ್ಟುಗೂಡಿಸಿ ಪ್ರಯತ್ನಿಸಿ, ಇದಕ್ಕೆ ನಿಮ್ಮ ಕುಟುಂಬದ ವಯಸ್ಕರ ಸಹಾಯ ಪಡೆಯಲು ಪ್ರಯತ್ನಿಸಿ.

ಗಮನ ಹರಿಸುವುದು

ಯಾವಾಗ ನಾವು ಮಗುವಿನ ಒಳ್ಳೆಯ ನಡವಳಿಕೆಯ ಕಡೆಗೆ ಗಮನ ಹರಿಸುತ್ತೇವೆಯೊ ಆಗ ಮಗುವಿನ ಒಳ್ಳೆಯ ನಡವಳಿಕೆ ಹೆಚ್ಚುತ್ತದೆ. ಮತ್ತೆ ಮಗು ಪುನಃ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳುತ್ತದೆ. ಪೋಷಕರು ಮಾಡಬೇಕಾದ ಒಂದು ಒಳ್ಳೆಯ ಕೆಲಸವೆಂದರೆ ಮಗುವಿನ ಒಳ್ಳೆಯ ನಡವಳಿಕೆ ಕಡೆ ಗಮನ ಹರಿಸುವುದು ಮತ್ತು ಕೆಟ್ಟ ನಡವಳಿಕೆ ಕಡೆ ಗಮನ ಹರಿಸದಿರುವುದು. ನಿಮ್ಮ ಮಗುವಿನ ಒಳ್ಳೆಯ ನಡವಳಿಕೆಯನ್ನು ಹೆಚ್ಚಿಸಲು ನೀವು ದಿನದಲ್ಲಿ 15 ರಿಂದ 20 ನಿಮಿಷಗಳನ್ನು ಕಾಯ್ದಿರಿಸುವುದು. ಇದು ಕೇವಲ ನೀವು ಮತ್ತು ನಿಮ್ಮ ಮಗು ಏಕಾಂತವಾಗಿರುವ ಸಮಯವಾದ್ದರಿಂದ ನೀವು ಅವನಿಗಾಗಿ/ ಅವಳಿಗಾಗಿ ನಿತ್ಯದ ವಿಶೇಷವಾದ ಸಮಯವನ್ನು ಕಳೆಯುತ್ತೀರಿ ಎಂದು ಮನವರಿಕೆ ಮಾಡಿಸಿ. ಈ ಸಮಯದಲ್ಲಿ ಮಗು ಇಷ್ಟಪಡುವ ಕೆಲಸಗಳನ್ನು ಆಯ್ಕೆ ಮಾಡಲು ಅವಕಾಶ ಮಾಡಿಕೊಡಿ. (ಉದಾ: ಆಟ ಆಡುವುದು, ಬಣ್ಣ ಹಾಕುವುದು). ಈ ಸಮಯದಲ್ಲಿ ಈ ಕೆಳಗಿನವುಗಳನ್ನು ಮಾಡಬೇಡಿ.

* ಪ್ರಶ್ನೆ ಕೇಳುವುದು.

* ಸೂಚನೆಗಳನ್ನು ನೀಡುವುದು.

* ಅವನ/ಅವಳ ನಡತೆಯ ಬಗ್ಗೆ ತರಬೇತಿ ನೀಡುವುದು.

ನೀವು ಮಾಡಬೇಕಾದ ಕೆಲಸ ಏನೆಂದರೆ, ಮಕ್ಕಳು ಮಾಡುವ ಕೆಲಸದ ಕಡೆ ಗಮನ ಹರಿಸಿ. ಇದರರ್ಥ ಅವರನ್ನು ವೀಕ್ಷಿಸುವುದು ಮತ್ತು ಜೋರಾಗಿ ಅವರು ಮಾಡುತ್ತಿರುವುದನ್ನು ವಿವರಿಸುವುದು. ನೀವು ಅವನ/ಅವಳ ಕ್ರಿಯೆಗಳನ್ನು ಕುರುಡ ವ್ಯಕ್ತಿಗೆ ವಿವರಿಸುವಂತೆ ವಿವರಿಸುವುದು. ಉದಾಹರಣೆಗೆಅವನು/ಳು ಬಣ್ಣವನ್ನು ಹಾಕುತ್ತಿದ್ದಾನೆ ಎಂದು ಹೇಳುವ ಮೂಲಕ ಅವನು/ಅವಳು ಏನು ಮಾಡುತ್ತಿದ್ದಾನೆ/ಳೆ ಎಂದು ತಿಳಿದು ಅನುಸರಿಸಿ ಮತ್ತು ನೀನು ಕೆಂಪು ಬಣ್ಣದ ಪೆನ್ಸಿಲನ್ನು ಎತ್ತಿಕೊಂಡಿದ್ದೀಯಾ ಎಂದು ಹೇಳಬಹುದು. ಆಮೇಲೆ ನೀವು ಟೋಪಿಗೆ ಕೆಂಪು ಬಣ್ಣವನ್ನು ಹಚ್ಚುತ್ತಿದ್ದೀಯಾ ಎಂದು ಹೇಳಬಹುದು. ಆದರೆ ಅವನು/ಳು ಏನು ಮಾಡಬೇಕೆಂದು ಮಾತ್ರ ಹೇಳಬೇಡಿ. ನೀವು ಕೇವಲ ಅವನ/ಳ ಕ್ರಿಯೆಗಳನ್ನು ವಿವರಿಸಿ. ಅವನು/ಳು ಕೆಟ್ಟ ಕಾರ್ಯಗಳನ್ನು ಮಾಡುವಾಗ ನೀವು ಗಮನ ನೀಡುವುದನ್ನು ನಿಲ್ಲಿಸಿ. ಒಂದು ವೇಳೆ ಮಗು ಅಳಲು ಪ್ರಾರಂಭಿಸಿದರೆ, ನೀವು ಮಗುವಿಗೆ ನೀನು ಅಳುತ್ತಿದ್ದೀಯಾ? ಎಂದು ಕೇಳಬೇಡಿ. ಮಗುವಿನ ಈ ವರ್ತನೆಯನ್ನು ನಿರ್ಲಕ್ಷಿಸಿ.

ನಿರ್ಲಕ್ಷಿಸುವುದು

ನಿರ್ಲಕ್ಷ್ಯ ಗಮನ ನೀಡುವಿಕೆಗೆ ವಿರುದ್ಧವಾದುದು. ನಿರ್ಲಕ್ಷ್ಯ, ಗಮನ ನೀಡುವುದು ಮತ್ತು ಹೊಗಳುವುದು ಈ ಮೂರೂ ವಿಧಾನಗಳನ್ನು ಒಂದೇ ಬಾರಿಗೆ ಬಳಸಬಹುದು. ನೀವು ಮಗುವಿಗೆ ನೀಡಿದ ವಿಶೇಷವಾದ ಸಮಯದಲ್ಲಿ ಈ ಮೇಲಿನ ಮೂರನ್ನೂ ಪ್ರಯೋಗಿಸಿ. ಅವನು/ಳು ಉತ್ತಮ ನಡವಳಿಕೆ ತೋರಿಸಿದಾಗ ನೀವು ಕಡ್ಡಾಯವಾಗಿ ಅವರಿಗೆ ಬಹುಮಾನ ನೀಡಿ ಮತ್ತು ಹತ್ನಿತಿರದಿಮದ ಗಮನಿಸಿ. ಒಂದು ವೇಳೆ ಅವರು ಉತ್ತಮ ರೀತಿಯಲ್ಲಿ ವರ್ತಿಸದಿದ್ದಾಗ ಅವನು ಬೇರೆ ಯಾವುದೇ ಅಪಾಯಕಾರಿ ಕೆಲಸ ಮಾಡದಿದ್ದಾಗ ನಿರ್ಲಕ್ಷ್ಯ ಪ್ರದರ್ಶಿಸಿ. ಆದ್ದರಿಂದ ಕೆಟ್ಟ ನಡವಳಿಕೆಯನ್ನು ನಿರ್ಲಕ್ಷಿಸಿ. ಆದರೆ, ಕೆಟ್ಟ ನಡವಳಿಕೆಯನ್ನು ನಿಲ್ಲಿಸಿದ ತಕ್ಷಣವೇ ನೀವು ಅವರ ಕಡೆ ಗಮನ ನೀಡುವುದನ್ನು ಶುರು ಮಾಡಿ. ನಿರ್ಲಕ್ಷಿಸುವುದರಿಂದ ನೀವು ಅವರ ಕೆಟ್ಟ ನಡವಳಿಕೆಗಳ ಬಗ್ಗೆ ಗಮನ ನೀಡುವುದನ್ನು ತಡೆಯಬಹುದು. ನಿರ್ಲಕ್ಷಿಸಲು ನೀವು ಮಗುವನ್ನು ನೋಡಬೇಡಿ ಅಥವಾ ಅವರ ಜೊತೆ ಮಾತನಾಡಬೇಡಿ. ನೀವು ಅವನನ್ನು ಮತ್ತು ಅವನು ಹೇಳಿದ್ದನ್ನು ಕೇಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬಂತೆ ನಟಿಸಿ. ಅಗತ್ಯಬಿದ್ದರೆ ನೀವು ಆ ಸ್ಥಳದಿಂದ ದೂರ ಹೋಗಿ. ನೀವು ಮೊದಲ ಸಲ ಕೆಟ್ಟ ನಡವಳಿಕೆಯನ್ನು ನಿರ್ಲಕ್ಷಿಸಿದಾಗ ಅದು ಮತ್ತೆ ಮತ್ತೆ ಪುನರಾವರ್ತನೆಯಾಗಬಹುದು. ಆದರೆ, ನೀವು ನಿರ್ಲಕ್ಷ್ಯವನ್ನು ಮುಂದುವರಿಸಿದರೆ ಆ ಕೆಟ್ಟ ನಡವಳಿಕೆ ಮಗುವಿನಿಂದ ದೂರವಾಗಬಹುದು.

ಮಗುವಿಗೆ ಶಾಂತವಾದ ಜಾಗ ಅಗತ್ಯ

ಇದರ ಅರ್ಥ ಮಗು ಯಾವುದೇ ರೀತಿಯ ಸಮಸ್ಯಾತ್ಮಕ ವರ್ತನೆ ತೋರಿದರೆ, ಆ ಸಮಯದಲ್ಲಿ ಮಗು ಶಾಂತವಾಗುವವರೆಗೂ ಒಂದು ಜಾಗದಲ್ಲಿ ಇರಲು ಹೇಳುವುದು ಮತ್ತು ಆ ಸಮಯದಲ್ಲಿ ಮಗುವಿಗೆ ಬೇರೆಯವರ ಗಮನ ದೊರೆಯದಂತೆ ಮಾಡುವುದು. ಮಕ್ಕಳು ಅನುಚಿತ ವರ್ತನೆ ತೋರಿದಾಗ ಈ ತಂತ್ರವನ್ನು ದೈಹಿಕ ಶಿಕ್ಷೆಗೆ ಪರ್ಯಾಯವಾಗಿ ಪರಿಣಾಮಕಾರಿಯಾಗಿ ಬಳಸಬಹುದಾಗಿದೆ. ಇದನ್ನು ಅಪರೂಪಕ್ಕೆ ಸಂಭವಿಸುವ ಸಮಸ್ಯಾತ್ಮಕ ವರ್ತನೆಗೆ ಬಳಸಿಕೊಳ್ಳಬಹುದು. ಟೈಮ್‌ಔಟ್‌ನ ಸ್ಥಳವನ್ನು ಆಯ್ಕೆ ಮಾಡುವಾಗ ಈ ಕೆಳಗಿನ ವಿಷಯಗಳನ್ನು ಗಮನದಲ್ಲಿಡಿ.

ಆಟದ ಸಾಮಾನುಗಳು, ಗೊಂಬೆ, ಜನರು, ಕಿಟಕಿ, ದೂರದರ್ಶನ, ರೇಡಿಯೊ ಮತ್ತು ಅವನಿಗೆ ಇಷ್ಟವಾಗುವ ಯಾವುದೇ ವಸ್ತುಗಳು ಇಲ್ಲದಿರುವ ಸ್ಥಳವನ್ನು ಆಯ್ಕೆ ಮಾಡಿ. ಹತ್ತಿರದಲ್ಲಿ ಒಡೆದುಹೋಗುವ ಯಾವುದೇ ವಸ್ತುಗಳು ಇರಬಾರದು. ಒಂದು ಸಣ್ಣ ಕುರ್ಚಿಯನ್ನು ಟೈಮ್‌ಔಟ್‌ ಸ್ಥಳದಲ್ಲಿ ಇರಿಸಿ. ಇದು ನಿಮ್ಮ ಮಗುವಿಗೆ ನೆನಪಿಡುವಂತೆ ಮಾಡುತ್ತದೆ ಮತ್ತು ಇದು ಟೈಮ್‌ಔಟ್‌ ಸ್ಥಳದಲ್ಲಿ ಅವನು ಇರಲು ಸಹಾಯ ಮಾಡುತ್ತದೆ. ಅವನು ಕುರ್ಚಿಯನ್ನು ಗೋಡೆಗೆ ಒದೆಯಲು ಸಹಕಾರಿಯಾಗುವ ಸ್ಥಳದಲ್ಲಿ ಇಡಬೇಡಿ. ಟೈಮ್‌ಔಟ್‌ನ್ನು ಬಳಸುವುದಕ್ಕೆ ಮುಂಚೆ ನಿಮ್ಮ ಮಗುವಿಗೆ ಟೈಮ್‌ಔಟ್‌ ಬಗ್ಗೆ ವಿವರಿಸಿ. ಯಾವ ವರ್ತನೆಗೊಸ್ಕರ ಟೈಮ್‌ಔಟ್‌ ನೀಡುತ್ತಿದ್ದೀರಿ ಎಂದು ವಿವರಿಸಿ, ಅದರ ಪ್ರಕ್ರಿಯೆ ಬಗ್ಗೆ ವಿವರಿಸಿ.

ವಿವರಣೆ ನೀಡುವುದಕ್ಕೆ ಮುಂಚೆಯೆ ಯಾವುದೇ ಟೈಮ್‌ಔಟ್‌ ವಿಧಾನವನ್ನು ಬಳಸಬೇಡಿ. ನಿಮ್ಮ ಮಗುವಿಗೆ ಹೇಳಿ ‘ನೀನು ಜಗಳಮಾಡಿದ್ದಿ. ಈ ಕಾರಣಕ್ಕಾಗಿ ನೀನು ಟೈಮ್‌ಔಟ್‌ಅನ್ನು ತೆಗೆದುಕೊಳ್ಳಬೇಕು’. ನಿಮಗೆ ಟೈಮ್‌ಔಟ್‌ ಅನುಸರಿಸಲು ಮತ್ತು ಉಪಯೋಗಿಸಲು ಸಾಧ್ಯವಾಗದೆ ಇದ್ದರೆ, ಟೈಮ್‌ಔಟ್‌ ಉಪಯೋಗಿಸುತ್ತೇನೆ ಎಂದು ಮಗುವಿಗೆ ಬೆದರಿಕೆ ಹಾಕಬೇಡಿ.⇒v

ಪ್ರಶಂಸಿಸುವುದು

ಪೋಷಕರು ಮಗುವಿನ ಒಳ್ಳೆಯ ನಡತೆ ಹೆಚ್ಚಿಸಲು ಗಮನದ ಜೊತೆಜೊತೆಗೆ ಪ್ರಶಂಸೆ ಅಥವಾ ಬಹುಮಾನ ನೀಡಬೇಕು. ಪ್ರಶಂಸೆ ಅಥವಾ ಬಹುಮಾನವನ್ನು ಒಳ್ಳೆಯದಾದ ನಡತೆ ತೋರಿಸಿದ ತಕ್ಷಣವೆ ನೀಡಬೇಕು. ಈ ನಡುವೆ ಹೆಚ್ಚು ಸಮಯದ ಅಂತರವಾದರೆ ಅದು ಹೆಚ್ಚು ಪರಿಣಾಮಕಾರಿಯಾಗಿರುವುದಿಲ್ಲ. ಉತಸ್ಸಾಹ, ಸ್ಪರ್ಶದ ಮೂಲಕ ಮೆಚ್ಚುಗೆ ತಿಳಿಸಿ. ಕೌಶಲ ಕಲಿತಾಗ ಬೆನ್ನು ತಟ್ಟಿ, ಜಾಣ ಎನ್ನಿ. ಇಷ್ಟವಾದ ತಿನಿಸು ಕೊಡಿ, ಹೊರಗೆ ಸುತ್ತಾಡಲು ಕರೆದೊಯ್ಯಿರಿ.ಮಗುವು ದಿನಾಲೂ ಕೆಲಸ ಮಾಡಲು ಆರಂಭಿಸಿದ ನಂತರ ನಿಧಾನವಾಗಿ ಬಹುಮಾನದ ಮಟ್ಟವನ್ನು ಕಡಿಮೆ ಮಾಡಿ. ಮಗು ಯಾವ ಕೆಲಸ ಮಾಡುವುದಿಲ್ಲವೋ ಅದನ್ನು ಮಾಡಿಸಬೇಕೆಂದರೆ, ಕೆಲಸ ಮಾಡಿದ ನಂತರ ಪ್ರತಿಕ್ಷಣ ಪ್ರಶಂಸಿಸುವುದರ ಮೂಲಕ ಕೆಲಸ ಮಾಡಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT