ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿ ಸಂದರ್ಶನ | ಅಚ್ಚರಿಯ ಫಲಿತಾಂಶ ಬರುತ್ತದೆ ಕಾದು ನೋಡಿ: ವಿನಯ್‌ಕುಮಾರ್

Published 3 ಮೇ 2024, 22:27 IST
Last Updated 3 ಮೇ 2024, 22:27 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಿ.ಬಿ.ವಿನಯ್‌ಕುಮಾರ್ ಅದಾಗಲೇ ಪ್ರಚಾರಕ್ಕೆ ಹೊರಡಲು ಸಿದ್ಧವಾಗಿದ್ದರು. ಮನೆಯ ಮುಂದೆ ಸಿಲಿಂಡರ್ ಚಿಹ್ನೆಯನ್ನು ಚಿತ್ರಿಸಿದ ವಾಹನವನ್ನು ಪ್ರಚಾರಕ್ಕೆ ಅಣಿಗೊಳಿಸಲಾಗುತ್ತಿತ್ತು. ಬೆಳಿಗ್ಗೆ 8ಗಂಟೆಗೆ ಕಾರ್ಯಕರ್ತರು ಮನೆಯ ಮುಂದೆ ಜಮಾಯಿಸಿದ್ದರು. ಈ ನಡುವೆಯೇ ವಿನಯ್‌ಕುಮಾರ್ ಮಾತಿಗೆ ಸಿಕ್ಕರು. ಅವರ ಸಂದರ್ಶನದ ಭಾಗ ಇಲ್ಲಿದೆ.

ಪ್ರ

ಕಾಂಗ್ರೆಸ್, ಅದರಲ್ಲೂ ವಿಶೇಷವಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಿಮಗೆ ಮೋಸ ಮಾಡಿದ್ದಾರೆ ಅನಿಸುತ್ತಿಲ್ಲವಾ? 

ಮೋಸ ಮಾಡಿದ್ದಾರೆ ಎಂದು ಅನಿಸಿಲ್ಲ. ಬದಲಾಗಿ ಬೆಳೆಯಲು ಅವಕಾಶ ಕೊಟ್ಟಿದ್ದಾರೆ. ಕ್ಷೇತ್ರದಲ್ಲಿ ಓಡಾಡು, ಜನರನ್ನು ಭೇಟಿಯಾಗು, ಕ್ಷೇತ್ರ ಪ್ರವಾಸ ಮಾಡು ಎಂದು ಪ್ರೋತ್ಸಾಹಿಸಿದ್ದರು. ನಾವು ರಾಜಕೀಯವಾಗಿ ಬೆಳೆಯಬೇಕಾದರೆ ಪ್ರೋತ್ಸಾಹ ಬೇಕಿತ್ತು. ದಾವಣಗೆರೆ ಕ್ಷೇತ್ರದಲ್ಲಿ ಬಂದು ಓಡಾಡಿದೆ. ನನಗೆ ಟಿಕೆಟ್‌ ಕೊಡುತ್ತೇವೆ ಎಂದು ಖಾತ್ರಿ ಮಾಡಿರಲಿಲ್ಲ. ನಾಯಕತ್ವ ಗುಣ ಬೆಳೆಯಲಿ ಎಂಬುದು ಉದ್ದೇಶವಾಗಿತ್ತು. ನನಗೆ ಟಿಕೆಟ್ ಕೊಡಿಸಲು ಅವರು ಕೊನೆಗಳಿಗೆ ತನಕ ಪ್ರಯತ್ನ ಮಾಡಿದ್ದಾರೆ. ಆದರೆ ದಾವಣಗೆರೆ ಕುಟುಂಬ ರಾಜಕಾರಣ ನನಗೆ ಮೋಸ ಮಾಡಿದೆ. ನಾನು ಪಕ್ಷದ ಮೇಲಾಗಲೀ, ನಾಯಕರ ಮೇಲೆ ಆಪಾದನೆ ಮಾಡುತ್ತಿಲ್ಲ. ಬದಲಾಗಿ ಶಾಮನೂರು ಕುಟುಂಬದ ಮೇಲೆ ನನ್ನ ಆಪಾದನೆ. ಜಾತಿ, ಹಣದ ಬಲದಿಂದಲೇ ಹೈಕಮಾಂಡ್ ನಿಯಂತ್ರಣ ಮಾಡುತ್ತಿದ್ದಾರೆ ಎಂದು ಅನಿಸುತ್ತದೆ. ದಾವಣಗೆರೆಯಲ್ಲಿ ಹೊಸಬರು ಬೆಳೆಯದೇ ಇರುವಂತಹ ವಾತಾವರಣ ಸೃಷ್ಟಿ ಮಾಡಿದ್ದಾರೆ. ನಮ್ಮ ಹಿಡಿತದಲ್ಲಿಯೇ ಇರಬೇಕು ಎಂಬುದು ಅವರ ಉದ್ದೇಶ.

ಪ್ರ

ಭರವಸೆ ನೀಡಿದ್ದರಿಂದಲೇ ಸ್ಪರ್ಧೆ ಮಾಡಲು ನಿರ್ಧರಿಸಿದ್ದೀರಿ ಅಲ್ಲವೇ?

ಯಾವುದೇ ಪಕ್ಷಗಳು ಮೊದಲೇ ಭರವಸೆ ನೀಡಿ ಕಳುಹಿಸುವುದಿಲ್ಲ. ರಾಜಕೀಯದಲ್ಲಿ ಹಲವು ಅಂಶಗಳು ಇರುತ್ತವೆ. ದಾವಣಗೆರೆಯಲ್ಲಿ ಯಾರು ಬಲಿಷ್ಠವಾಗಿ ಹೊರಹೊಮ್ಮುತ್ತಾರೋ ಅವರಿಗೆ, ನಾನು ಬಲಿಷ್ಠವಾಗಿ ಹೊರಹೊಮ್ಮಿದ್ದೇನೆ. ಕಾಂಗ್ರೆಸ್‌ ವರಿಷ್ಠರಿಗೆ ನನ್ನ ಬಗ್ಗೆ ಒಲವು ಇರಲಿಲ್ಲ ಅನಿಸುತ್ತಿದೆ. ಶಾಮನೂರು ಶಿವಶಂಕರಪ್ಪ ಅವರಿಗೂ ವರಿಷ್ಠರಿಗೂ ಹಲವು ವರ್ಷಗಳಿಂದಲೂ ಗಾಢ ಸಂಬಂಧವಿದೆ. ಈ ನೆಟ್‌ವರ್ಕ್ ಅಪಾಯಕಾರಿ, ನಮ್ಮನ್ನು ಹೊಸಬರದಂತೆ ನೋಡುತ್ತಾರೆ.

ಪ್ರ

ನಿಮ್ಮ ರಾಜಕೀಯ ಜೀವನ ಆರಂಭದಲ್ಲಿ ನಿರಾಶೆ ಮೂಡಿಸಿತು ಅನಿಸುತ್ತಿಲ್ಲವಾ?

ನಿರಾಶೆಯಂತು ಆಗಿದೆ. ಏಕೆಂದರೆ ನಾನು ಪ್ರಾಮಾಣಿಕವಾಗಿ ರಾಜಕೀಯಕ್ಕೆ ಬಂದಿದ್ದೇನೆ. ಹಣ, ಅಧಿಕಾರದ ಆಸೆಗಾಗಿ ಬಂದಿಲ್ಲ. ಬದಲಾಗಿ ಪ್ರಾಮಾಣಿಕವಾಗಿ ದುಡಿಯಬೇಕು, ಸೇವೆ ಮಾಡಬೇಕು ಎನ್ನುವ ಉದ್ದೇಶದಿಂದ ಬಂದಿದ್ದೇನೆ. ಆರಂಭದಲ್ಲಿ ನಿರಾಶೆಯಾಗಿದೆ ನಿಜ. ಆದರೆ ಸುಮ್ಮನೆ ಕೂರುವ ವ್ಯಕ್ತಿ ನಾನಲ್ಲ. ಟಿಕೆಟ್ ಸಿಗದೇ ಇದ್ದರೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೇನೆ. ಹಳ್ಳಿಯಲ್ಲಿ ತಿರುಗಿ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನುಗತ್ತಿರಬೇಕು. ಅಚ್ಚರಿಯ ಫಲಿತಾಂಶ ಬರುತ್ತಿದೆ. ಕಾದು ನೋಡಿ.

ಪ್ರ

ಪ್ರಮುಖ ರಾಜಕೀಯ ಪಕ್ಷಗಳ ಜೊತೆ ಪೈಪೋಟಿ ನಡುವೆ ಸ್ಪರ್ಧಿಸಿದ್ದೀರಿ. ಈ ನಿರ್ಧಾರ ಎಷ್ಟು ಸೂಕ್ತ?

ನಿರ್ಧಾರ ನನಗೆ ಎಷ್ಟು ಸೂಕ್ತ ಎನ್ನುವುದಕ್ಕಿಂತ ಜನರಿಗೆ ಎಷ್ಟು ಸೂಕ್ತ ಎನ್ನುವುದು ಮುಖ್ಯ. ದಾವಣಗೆರೆ 30 ವರ್ಷಗಳಿಂದ ಎರಡು ಕುಟುಂಬಗಳ ಕಪಿಮುಷ್ಠಿಯಲ್ಲಿ ಇದೆ. ನನ್ನ ಈ ಪ್ರಯತ್ನ ಬೇರೆಯವರಲ್ಲಿ ಒಂದು ಆಶಾಭಾವನೆ, ಆಶಾಕಿರಣ ಮೂಡಿಸುತ್ತದೆ. ಹೋರಾಟ ಮಾಡಿದವರ ಮನದಲ್ಲಿ ಧೈರ್ಯ ಬರುತ್ತದೆ. ಈ ಕುಟುಂಬಗಳ ಹುಟ್ಟುಹಾಕಿರುವ ವ್ಯವಸ್ಥೆ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ನನ್ನದೇ ಗುರುತು ಸೃಷ್ಟಿಯಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಿದ ಮೇಲೆ ಜನರ ಮನಸ್ಸಿನಲ್ಲಿ ಉಳಿಯುತ್ತೇನೆ. ವಿಕಿಪೀಡಿಯಾದಲ್ಲಿ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನದೂ ಹೆಸರಿದೆ ಅದು ಮುಖ್ಯವಾಗಿದೆ. ಈ ಸ್ಪರ್ಧೆ ನನಗೆ ಮುಂದಿನ ರಾಜಕಾರಣಕ್ಕೆ ವೇದಿಕೆ ಕಲ್ಪಿಸುತ್ತದೆ. 

ಪ್ರ

ಯುವಕರಿಗೆ ಯಾವ ಯೋಜನೆ ರೂಪಿಸಿದ್ದಾರೆ. ಯಾವ ರೀತಿ ಸಹಾಯ ಮಾಡುತ್ತಿದ್ದಾರೆ?

ಶಿಕ್ಷಣದಿಂದ ಹಿನ್ನೆಲೆಯಿಂದ ಬಂದ ನನಗೆ ಯುವಕರು ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ. ಶಿಕ್ಷಣ ಬಳಸಿಕೊಂಡು ಉದ್ಯೋಗ ಸೃಷ್ಟಿ ಮಾಡುತ್ತೇನೆ. ವಿನಯ್‌ಕುಮಾರ್‌ಗೆ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಸೃಷ್ಟಿಸುವ ಸಾಮರ್ಥ್ಯ ಇದೆ. ದಾವಣಗೆರೆಯಲ್ಲಿ ಶಿಕ್ಷಣ, ಸುಧಾರಣೆ ಮಾಡಿ ಉದ್ಯೋಗಾವಕಾಶ ಕಲ್ಪಿಸುವುದು ನನ್ನ ಮುಖ್ಯ ಉದ್ದೇಶ. ದಾವಣಗೆರೆಯಲ್ಲಿ ಕೈಗಾರಿಕೆ ಆಗಬೇಕು. ಈ ನಿಟ್ಟಿನಲ್ಲಿ ಶ್ರಮಬಹುದು. ಆರೋಗ್ಯ, ಶಿಕ್ಷಣಕ್ಕೆ ಸಂಸ್ಥೆಗಳು ಎರಡೇ ಕುಟುಂಬದ ಕೈಯಲ್ಲಿ ಇರುವುದರಿಂದ, ಇಲ್ಲಿನ ಮಕ್ಕಳಿಗೆ  ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಇಲ್ಲಿ ಹೆಲ್ತ್ ಟೂರಿಸಂ ಮಾಡಬೇಕಾಗಿದೆ. ಕಡಿಮೆ ವೆಚ್ಷದಲ್ಲಿ ಆರೋಗ್ಯ ಸೇವೆ ಸಿಗಬೇಕಾದರೆ. ಬೇರೆಯವರಿಗೂ ಅವಕಾಶ ಕೊಡಬೇಕು.

ಪ್ರ

ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಿಮಗೆ ರಾಜಕಾರಣ ಒಗ್ಗುತ್ತದಾ?

ನನ್ನದು ಒಬ್ಬರ ಮೇಲೆ ಇನ್ನೊಬ್ಬರು ಮಾಡುವ ರಾಜಕಾರಣವಲ್ಲ. ಒಬ್ಬರನ್ನು ತೆಗಳಿ ನಾನು ರಾಜಕಾರಣ ಮಾಡುವುದಿಲ್ಲ. ನನ್ನದೇ ಶೈಲಿಯಲ್ಲಿ ಪ್ರಚಾರ ಮಾಡುತ್ತಿದ್ದೇನೆ. ಜನಮುಖಿ, ಅಭಿವೃದ್ಧಿ ರಾಜಕಾರಣ ಮಾಡುತ್ತೇನೆ. ನನ್ನ ಮೇಲೆ ಯಾರು ಎಷ್ಟೇ ಆರೋಪ ಮಾಡಿದರೂ ನಾನೂ ಪ್ರತ್ಯಾರೋಪ ಮಾಡದೇ ರಾಜಕಾರಣ ಮಾಡುತ್ತೇನೆ. ನನ್ನ ದೃಷ್ಟಿ ಜನರ ಮೇಲೆ ಇರುತ್ತದೆಯೇ ಹೊರತು ಆರೋಪಗಳಿಗಲ್ಲ. ನಾನು ಕೆಲಸದಿಂದ ದೂರ ಹೋಗಲಿ ಎಂದು ಆರೋಪ ಮಾಡುತ್ತಾರೆ. ಆದರೆ ನಾವು ಮಾಡುವ ಕೆಲಸದಲ್ಲಿ ಬದ್ಧತೆ ಇದ್ದರೆ ಪ್ರಗತಿ ಸಾಧಿಸಬಹುದು ನಂಬಿದವನು ನಾನು. ಯುಪಿಎಸ್ಸಿಯಲ್ಲಿ ಇರುವಂತೆಯೇ ಇಲ್ಲಿಯೂ ಒತ್ತಡ ತಂದುಕೊಳ್ಳದೇ ಕೆಲಸ ಮಾಡುತ್ತೇನೆ

ಪ್ರ

ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇದೆ. ಜನರು ನಿಮ್ಮನ್ನು ಬೆಂಬಲಿಸುತ್ತಾರಾ?

ರಾಜಕಾರಣದಲ್ಲಿ ಜನರಿಗೆ ಆಯ್ಕೆ ಇರಬೇಕು. ಆದರೆ ಇಲ್ಲಿನ ಕುಟುಂಬ ರಾಜಕಾರಣ ಜನರಿಗೆ ಆ ಆಯ್ಕೆಯನ್ನು ತಪ್ಫಿಸಿದೆ. ಈ ಎರಡು ಕುಟುಂಬಗಳಲ್ಲಿಯೂ ಗಂಟು, ನಂಟು ಎರಡೂ ಇದೆ. ಜನರಿಗೆ ಅನಿವಾರ್ಯವಾಗಿ ಎರಡರಲ್ಲಿ ಒಂದನ್ನು ಆಯ್ದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಜನರು ಹೊಸ ಆಯ್ಕೆ ಬಯಸುತ್ತಿದ್ದಾರೆ. ನಕಲಿ ಆಯ್ಕೆಯನ್ನು ಜನರು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಪ್ರಬಲವಾದ ಆಯ್ಕೆ ಇದ್ದಾಗ ಜನರು ಸ್ವೀಕಾರ ಮಾಡುತ್ತಾರೆ. ದಾವಣಗೆರೆಯಲ್ಲಿ ಆಗುತ್ತಿರುವುದು ಅದೇನೆ. ಒಂದು ವರ್ಷ ಜನರು ನನ್ನ ಕೆಲಸವನ್ನು ನೋಡಿದ್ದಾರೆ. ಈಗ ನಾನು ಗೆಲ್ಲುವ ಅಭ್ಯರ್ಥಿ ಎಂಬ ನಂಬಿಕೆ ಬಂದಿದೆ. ಇದರಿಂದಾಗಿ ಆ ಕುಟುಂಬಗಳಿಗೆ ಬುದ್ಧಿ ಕಲಿಸಲು ಜನರು ಕಾಯುತ್ತಿದ್ದಾರೆ.

ಪ್ರ

ರಾಜಕೀಯ ಸಂಕೀರ್ಣವಾದ ಕ್ಷೇತ್ರ. ಈ ಸಂಕೀರ್ಣಗಳನ್ನು ದಾಟಿ ಬರಲು ಪೂರಕ ವಾತಾವರಣ ಅಗತ್ಯವಲ್ಲವೇ?

ಪೂರಕ ವಾತಾವರಣ ವನ್ನು ನಾವು ಸೃಷ್ಟಿ ಮಾಡಿಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಹೇಳಿದರೆ ಬಿಜೆಪಿಗೆ ಪೂರಕ ವಾತಾವರಣ. ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ಗೆ ಪೂರಕ ವಾತಾವರಣ ಸೃಷ್ಟಿಸುತ್ತವೆ. ಪಾದಯಾತ್ರೆಯಿಂದ ಗ್ರಾಮೀಣ ಭಾಗದಲ್ಲಿ ಪೂರಕ ವಾತಾವರಣ ಸೃಷ್ಟಿಯಾಗಿದೆ. ಬದಲಾವಣೆ ಮುಂಚೆಯಿಂದಲೂ ಬದಲಾವಣೆ ಬಯಸುತ್ತಿದ್ದು, ಈ ಭದ್ರಕೋಟೆಯನ್ನು ಹೇಗೆ ಪ್ರವೇಶಿಸುವುದು ಅಂದುಕೊಳ್ಳುತ್ತಿದ್ದರು. ಈಗ ನಾನು ಬಂದ ಮೇಲೆ ಜನರಲ್ಲಿ ವಿಶ್ವಾಸ ಬಂದಿದೆ. ಸಂಕೀರ್ಣ ಇದ್ದರೂ ಜನರನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಎಂಬುದರ ಮೇಲೆ ನಿಂತಿದೆ‌. ನಾನು ಆ ಕೆಲಸದಲ್ಲಿ ಯಶಸ್ಸು ಕಂಡಿದ್ದೇನೆ. ಪ್ರತಿಯೊಂದು ಹಳ್ಳಿಗಳಲ್ಲೂ ಜನರು ಬಹಳ ಪ್ರೀತಿಯಿಂದ ನೋಡುತ್ತಿದ್ದಾರೆ. ಹಾಗಾಗಿಯೇ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇನೆ ಎಂಬ ಆರೋಪ ನನ್ನ ಮೇಲೆ ಬಂದರೂ ಜನ ಅದನ್ನು ನಂಬುತ್ತಿಲ್ಲ. ಆ ರೀತಿ ವಾತಾವರಣ ಸೃಷ್ಟಿಯಾಗಿದೆ.

ಜಿ.ಬಿ. ವಿನಯ್‌ಕುಮಾರ್  –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಜಿ.ಬಿ. ವಿನಯ್‌ಕುಮಾರ್  –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT