ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗ ಸಿಎಂ ತೆಗೆದವರ ಜೊತೆ ಶ್ರೀಗಳ ಬಳಿ ಹೋದರೆ ಹೇಗೆ?- ಡಿ.ಕೆ. ಶಿವಕುಮಾರ್‌

Published 11 ಏಪ್ರಿಲ್ 2024, 15:38 IST
Last Updated 11 ಏಪ್ರಿಲ್ 2024, 15:38 IST
ಅಕ್ಷರ ಗಾತ್ರ

ಬೆಂಗಳೂರು: ‘ಆದಿಚುಂಚನಗಿರಿ ಶ್ರೀಗಳ ಆಶೀರ್ವಾದ ಎಚ್‌.ಡಿ. ಕುಮಾರಸ್ವಾಮಿ, ಡಾ.ಸಿ.ಎನ್‌. ಮಂಜುನಾಥ್ ಕೇಳಿದ್ದರಲ್ಲಿ ತಪ್ಪೇನಿಲ್ಲ. ಆದರೆ, ಒಕ್ಕಲಿಗ ಮುಖ್ಯಮಂತ್ರಿಯನ್ನು ತೆಗೆದವರನ್ನೇ ಅವರು ಜತೆಗೆ ಕರೆದುಕೊಂಡು ಹೋದರೆ ಹೇಗೆ ಎನ್ನುವುದಷ್ಟೆ ನನ್ನ ಪ್ರಶ್ನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸ್ಪಷ್ಟ‍ಪಡಿಸಿದರು.

‘ಒಕ್ಕಲಿಗ ಸರ್ಕಾರ ಬೀಳಿಸಿದ ವಿಚಾರವಾಗಿ ಸ್ವಾಮೀಜಿ ಉತ್ತರ ಕೊಡಬೇಕು’ ಎಂದು ಡಿ.ಕೆ. ಶಿವಕುಮಾರ್‌ ಬುಧವಾರ ನೀಡಿದ್ದ ಹೇಳಿಕೆ ಚರ್ಚೆಗೆ ಗ್ರಾಸವಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿಯಾಗಿದ್ದ  ಕುಮಾರಸ್ವಾಮಿ ಮತ್ತು ಕೆಲವು ಸಚಿವರು ಸ್ವಾಮೀಜಿಗಳ ಕಾರ್ಯಕ್ರಮಕ್ಕೆ ಹೋಗಿ ವಾಪಸ್ ಬರುವ ವೇಳೆಗೆ ‘ಆಪರೇಷನ್ ಕಮಲ’ ನಡೆದಿತ್ತು. ಒಕ್ಕಲಿಗ ವ್ಯಕ್ತಿ ಮುಖ್ಯಮಂತ್ರಿ ಆಗಿರುವ ಬಗ್ಗೆ ಸ್ವಾಮೀಜಿಗೂ ಅಭಿಮಾನ ಇರುತ್ತದೆ. ಆದರೆ, ಸರ್ಕಾರ ತೆಗೆದವರ ಜೊತೆಯಲ್ಲಿ ಹೋಗಿರುವುದರಿಂದ ಸಮಾಜಕ್ಕೆ ಅವರು ಏನು ಉತ್ತರ ನೀಡುತ್ತಾರೆ’ ಎಂದು ಪ್ರಶ್ನಿಸಿದರು.

‘ವಿಧಾನಸಭೆ ಚುನಾವಣೆ ವೇಳೆ ಶೇ 5ರಷ್ಟು ಒಕ್ಕಲಿಗ ಮತ ಕಾಂಗ್ರೆಸ್ ಕಡೆ ವಾಲಿದ್ದವು. ಈ ಬಾರಿ ಒಕ್ಕಲಿಗರು ಯಾರನ್ನು ಬೆಂಬಲಿಸಲಿದ್ದಾರೆ’ ಎಂದು ಪ್ರಶ್ನೆಗೆ, ‘ಜನರು ದಡ್ಡರಲ್ಲ, ತಮ್ಮ ಬದುಕು ಕಟ್ಟಿಕೊಡುವವರಿಗೆ ಅವರು ಬೆಂಬಲ ನೀಡುತ್ತಾರೆ. ಕಾಂಗ್ರೆಸ್ ಪಕ್ಷ ಜನರ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತಿದೆ. ಹೀಗಾಗಿ, ಒಕ್ಕಲಿಗರೂ ಸೇರಿದಂತೆ ಎಲ್ಲ ವರ್ಗದ ಜನ ಕಾಂಗ್ರೆಸ್‌ಗೆ ಬೆಂಬಲ ನೀಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್‌ಗೆ ಅವರೇ ಮುಕ್ತಿ ಕೊಟ್ಟಿದ್ದಾರೆ: ‘ಸ್ವಾಮೀಜಿಗಳು ಕೃಷ್ಣನಂತೆ, ಪಾಂಡವರಂತೆ ಇರುವ ಜೆಡಿಎಸ್ ಪರವಾಗಿ ಸ್ವಾಮೀಜಿ ನಿಲ್ಲಲಿದ್ದಾರೆ’ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಜೆಡಿಎಸ್ ಎಲ್ಲಿದೆ? ಜೆಡಿಎಸ್‌ಗೆ ಅವರೇ ಮುಕ್ತಿ ಕೊಟ್ಟಿದ್ದಾರೆ. ತಮ್ಮ ಅಳಿಯನನ್ನೇ ಬಿಜೆಪಿಗೆ ಕಳುಹಿಸಿ ಜೆಡಿಎಸ್ ವಿಸರ್ಜನೆ ಮಾಡುವ ಸ್ಥಿತಿಗೆ ದೇವೇಗೌಡರು ಹೋಗಿದ್ದಾರೆ’ ಎಂದು ಲೇವಡಿ ಮಾಡಿದರು.

‘ಸ್ವಾಮೀಜಿಯವರನ್ನು ರಾಜಕಾರಣಕ್ಕೆ ಯಾಕೆ ಎಳೆಯುತ್ತಿದ್ದೀರಿ?’ ಎಂದು ಕೇಳಿದಾಗ, ‘ನಾನು ಸ್ವಾಮೀಜಿಯನ್ನು ರಾಜಕೀಯಕ್ಕೆ ಎಳೆಯುತ್ತಿಲ್ಲ. ಸ್ವಾಮೀಜಿಗೆ ಕೊಡಬೇಕಾದ ಗೌರವ ಕೊಡಬೇಕೆಂದು ಹೇಳುತ್ತಿದ್ದೇನೆ’ ಎಂದರು.

ಮೈತ್ರಿ ಸರ್ಕಾರ ಕೆಡವಲು ಶಾಸಕರನ್ನು ಬಿಜೆಪಿಗೆ ಕಳುಹಿಸಿದವರು ಯಾರು ಎಂಬ ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಅವರ ಪ್ರಶ್ನೆಗೆ, ‘ಯಾರು ಕಳುಹಿಸಿದ್ದಾರೆ ಎಂದು ನನಗೆ ಗೊತ್ತಿಲ್ಲ. ಅವರೇ ಹೇಳಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT