ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇನು ಗೂಡಿಗೆ ಕಲ್ಲು ಹೊಡೆದ ಸರ್ಕಾರ: ಮಂಜು

ಡಿ.ಕೆ. ಶಿವಕುಮಾರ್ ವಜಾಕ್ಕೆ ಆಗ್ರಹಿಸಿ ಜೆಡಿಎಸ್‌ ಕಾರ್ಯಕರ್ತರ ಪ್ರತಿಭಟನೆ
Published 8 ಮೇ 2024, 0:10 IST
Last Updated 8 ಮೇ 2024, 0:10 IST
ಅಕ್ಷರ ಗಾತ್ರ

ಹಾಸನ: ‘ದುರುದ್ದೇಶದಿಂದ ಶಾಸಕ ಎಚ್.ಡಿ. ರೇವಣ್ಣ ಅವರನ್ನು ಬಂಧಿಸಲಾಗಿದ್ದು, ಅಧಿಕಾರ ದುರುಪಯೋಗ ಮಾಡಿಕೊಂಡ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸಂಪುಟದಿಂದ ವಜಾ ಮಾಡಬೇಕು’ ಎಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಎನ್.ಆರ್. ವೃತ್ತದಲ್ಲಿ ಶಿವಕುಮಾರ್‌ ಪ್ರತಿಕೃತಿ ದಹಿಸಿ, ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಶಾಸಕ ಎ.ಮಂಜು, ‘ಸರ್ಕಾರ ಜೇನುಗೂಡಿಗೆ ಕಲ್ಲು ಹೊಡೆದಿದ್ದು, ಮುಂದೆ ಅನುಭವಿಸಲಿದ್ದಾರೆ. ನಮ್ಮ ಸಮುದಾಯವನ್ನು ಗುರಿ ಮಾಡಿಕೊಂಡಿರುವುದು ನೋವು ತಂದಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಪ್ರಕರಣದಿಂದ ಲಾಭ ಪಡೆಯಲು ಕಾಂಗ್ರೆಸ್‌ ಯತ್ನಿಸುತ್ತಿದೆ. ಆದರೆ, ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯಬಾರದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೆ.ಆರ್. ನಗರ ಶಾಸಕರ ಒತ್ತಡದಿಂದಲೇ ಎಚ್‌.ಡಿ. ರೇವಣ್ಣ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆ ಮಹಿಳೆ ರೇವಣ್ಣ ಅವರ ವಿರುದ್ಧ ದೂರು ಕೊಟ್ಟಿರಲಿಲ್ಲ. ಒತ್ತಡದಿಂದ ದೂರು ಕೊಡಿಸಿದ್ದಾರೆ. ಒಬ್ಬ ರೇವಣ್ಣನನ್ನು ಅವರು ಕೆಣಕಿದ್ದಾರೆ. ಈಗ ಪ್ರತಿಯೊಬ್ಬರೂ ರೇವಣ್ಣನಾಗಿಯೇ ಬಂದಿದ್ದೇವೆ’ ಎಂದರು.

‘ಎಸ್‌ಐಟಿ ಮೇಲೆ ನಮಗೆ ನಂಬಿಕೆ ಹೋಗಿದೆ. ಸರ್ಕಾರ ಎಸ್‌ಐಟಿಯನ್ನು ದುರುಪಯೋಗ ಮಾಡುತ್ತಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ಒತ್ತಾಯಿಸಿದ ಅವರು, ‘ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಪ್ರೊಡ್ಯೂಸರ್‌ ಯಾರು? ಇನ್ನುಳಿದವರು ಯಾರು ಎಂಬುದು ಹೊರಬರಲಿದೆ’ ಎಂದರು.

ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು, ಮನವಿ ಸಲ್ಲಿಸಿದರು. ಈ ವೇಳೆ ಜಿಲ್ಲಾಧಿಕಾರಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

‘ಆರೋಪ ಸಾಬೀತಾದರೆ ರಾಜಕೀಯ ಬಿಡುವೆ’

ಹೊಳೆನರಸೀಪುರ (ಹಾಸನ): ‘ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿ ವಕೀಲ ಜಿ.ದೇವರಾಜೇಗೌಡ ಸುಳ್ಳು ಹೇಳುತ್ತಿದ್ದಾರೆ. ನನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಸಾಬೀತುಪಡಿಸಿದರೆ ರಾಜಕೀಯದಿಂದ ಹಿಂದೆ ಸರಿಯುತ್ತೇನೆ. ಜೂನ್‌ 4 ರಂದು ಜನರ ಆಶೀರ್ವಾದಿಂದ ಗೆದ್ದರೆ ಅಂದೇ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಹಾಸನ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ ಸವಾಲು ಹಾಕಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ‘ಎಸ್‌ಐಟಿ ತನಿಖೆ ಮಾಡುತ್ತಿರುವಾಗಲೇ ವಕೀಲ ದೇವರಾಜೇಗೌಡರು ನನ್ನ ಹೆಸರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೆಸರನ್ನು ಹೇಳಿ ತಾವು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ’ ಎಂದು ದೂರಿದರು. ‘ಪೆನ್‌ಡ್ರೈವ್ ವಿಚಾರ ನನಗೆ ತಿಳಿದೇ ಇರಲಿಲ್ಲ. ಮತದಾನಕ್ಕೆ ಮುನ್ನಾ ದಿನ ಟಿ.ವಿ.ಯಲ್ಲಿ ಬಂದಾಗಲೇ ನನಗೂ ಗೊತ್ತಾಗಿದ್ದು. ದೇವರಾಜೇಗೌಡ ಹೇಳುವಂತೆ ನಾನು ಹಾಸನದ ಯಾವುದೇ ಹೋಟೆಲ್‌ನಲ್ಲಿ ಯಾರನ್ನೂ ಭೇಟಿ ಮಾಡಿಲ್ಲ. ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ನೋಡಲಿ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT