ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕ ವಿಶ್ಲೇಷಣೆ: ‘ಕೈ’ ಬಲಪಡಿಸಿದ ಖರ್ಗೆ ‘ಪ್ರತಿಷ್ಠೆ’

ಕಲ್ಯಾಣ ಕರ್ನಾಟಕದಲ್ಲಿ 26 ಸ್ಥಾನ ಗಳಿಸಿದ ಕಾಂಗ್ರೆಸ್
Published 13 ಮೇ 2023, 19:32 IST
Last Updated 13 ಮೇ 2023, 19:32 IST
ಅಕ್ಷರ ಗಾತ್ರ

ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಬಳಿಕ ತವರು ಜಿಲ್ಲೆ ಸೇರಿ ಇಡೀ ಕಲ್ಯಾಣ ಕರ್ನಾಟಕ ಪ್ರದೇಶದ 7 ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಕೋಟೆ ಭದ್ರವಾಗಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಖರ್ಗೆ ಅವರು ಅಧ್ಯಕ್ಷರಾದ ನಂತರ ರಾಜ್ಯದಲ್ಲಿ ನಡೆದ ಮೊದಲ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ‘ತಾಕತ್ತು’ ಸಾಬೀತುಪಡಿಸಿದ್ದಾರೆ. 2013ರ ವಿಧಾನಸಭಾ ಚುನಾವಣೆಯಲ್ಲಿ 24 ಮತ್ತು 2018ರ ವಿಧಾನಸಭಾ ಚುನಾವಣೆಯಲ್ಲಿ 21 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದ ಕಾಂಗ್ರೆಸ್‌, ಪ್ರಸಕ್ತ ಚುನಾವಣೆಯಲ್ಲಿ 26 ಸ್ಥಾನಗಳನ್ನು ಗಳಿಸಿದೆ.

ಬಳ್ಳಾರಿ ಜಿಲ್ಲೆಯ ಎಲ್ಲಾ 5 ಕ್ಷೇತ್ರಗಳನ್ನೂ ತನ್ನದಾಗಿಸಿಕೊಂಡ ಕಾಂಗ್ರೆಸ್ ಕಲಬುರಗಿ, ಯಾದಗಿರಿ, ಬೀದರ್‌, ರಾಯಚೂರು, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮತದಾರರ ಮನ ಗೆದ್ದಿದೆ. ಒಂದೆಡೆ ಖರ್ಗೆಯವರ ‘ಪ್ರತಿಷ್ಠೆ’ ಉಳಿಸುವ ಸವಾಲು, ಮತ್ತೊಂದೆಡೆ ಬಿಜೆಪಿ ಆಡಳಿತದ ವಿರುದ್ಧದ ‘ಅಲೆ’ ಇವೆರಡೂ ಈ ಭಾಗದಲ್ಲಿ ಪರಿಣಾಮಕಾರಿ ಪಾತ್ರ ವಹಿಸಿದವು. ಬಿಜೆಪಿಗೆ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲು, ಜೆಡಿಎಸ್‌ಗೆ ಚಿಗುರಲು ಅವಕಾಶ ಸಿಗಲಿಲ್ಲ. ಇತರೆ ಪಕ್ಷಗಳಿಗೆ ಪ್ರಭಾವ ಬೀರಲೂ ಸಾಧ್ಯವಾಗಲಿಲ್ಲ.

2019ರ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದಂತೆಯೇ ಚಿತ್ತಾಪುರದಲ್ಲಿ ಪ್ರಿಯಾಂಕ್ ಖರ್ಗೆ ಅವರನ್ನು ಮಣಿಸುವುದಾಗಿ ಹೇಳಿದ್ದ ಬಿಜೆಪಿಯ ಎಲ್ಲಾ ತಂತ್ರಗಳು ಬುಡಮೇಲಾದವು. ರೌಡಿಶೀಟರ್ ಮಣಿಕಂಠ ರಾಠೋಡಗೆ ಕಣಕ್ಕಿಳಿಸಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಜಿಲ್ಲೆಯಲ್ಲೇ ‘ಠಿಕಾಣಿ’ ಹೂಡುವಂತೆ ಮಾಡಿದರೂ ಕಿಂಚಿತ್ತೂ ಪ್ರಯೋಜನವಾಗಲಿಲ್ಲ. ಮಣಿಕಂಠ ರಾಠೋಡಗೆ ಟಿಕೆಟ್‌ ಸಿಕ್ಕಿದ್ದು ಅಲ್ಲಿನ ಬಿಜೆಪಿಯ ನಾಯಕರಿಗೆ ಅಸಮಾಧಾನ ಮೂಡಿಸಿದರೆ, ಪ್ರಚಾರದ ಸಂದರ್ಭದಲ್ಲಿ ರಾಠೋಡ್‌ ಅವರ ಕುರಿತಾಗಿ ಹರಿದಾಡಿದ ವಿಡಿಯೊಗಳು ‌‘ಎಡವಟ್ಟಿ’ಗೆ ಕಾರಣವಾದವು. ‘ಇಂಥವರು ಶಾಸಕರು ಆಗಬೇಕೆ’ ಎಂದು ಪ್ರಶ್ನಿಸಿ ಕಾಂಗ್ರೆಸ್‌ನಿಂದ ನಡೆದ ಅಭಿಯಾನವು ‘ಕೈ’ ಹಿಡಿಯಿತು.

‘ಹೈದರಾಬಾದ್ ಕರ್ನಾಟಕ’ ಪ್ರದೇಶವನ್ನು ‘ಕಲ್ಯಾಣ ಕರ್ನಾಟಕ’ ಎಂದು ಮರುನಾಮಕರಣ ಮಾಡಿದ ಬಿಜೆಪಿಯು ವಿಜಯ ಸಂಕಲ್ಪ ಯಾತ್ರೆ ಮೂಲಕ ‘ಅಭಿವೃದ್ಧಿ’ಯ ಕುರಿತು ಭರವಸೆಗಳ ಮಹಾಪೂರವನ್ನೇ ಹರಿಸಿತು. ಆದರೆ, ಆಡಳಿತ ಅವಧಿಯ‌ಲ್ಲಿನ ಪಿಎಸ್‌ಐ ಹಗರಣ, ಶೇ 40ರಷ್ಟು ಕಮಿಷನ್ ಪ್ರಕರಣ, ಕೆಕೆಆರ್‌ಡಿಬಿಗೆ ಸಿಗದ ಅನುದಾನ, ಕಲ್ಯಾಣ ಕರ್ನಾಟಕಕ್ಕೆ ಸಿಗದ ಪ್ರತ್ಯೇಕ ಸಚಿವಾಲಯ ಸೇರಿದಂತೆ ಹಲವು ವಿಷಯಗಳು ಬಿಜೆಪಿಗೆ ಮುಳುವಾದವು. ಇವೆಲ್ಲವನ್ನೂ ಮರೆಮಾಚಿ, ಬಿಜೆಪಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಜಯ ಸಂಕಲ್ಪ ಯಾತ್ರೆ ಕೈಗೊಂಡು, ಪ್ರಧಾನಿ ನರೇಂದ್ರ ಮೋದಿ ಅವರಿಂದ ರೋಡ್‌ ಶೋ ನಡೆಸಿದರೂ ಫಲಕಾರಿಯಾಗಲಿಲ್ಲ. ತಾಂಡಾಗಳನ್ನು ಕಂದಾಯ ಗ್ರಾಮ ಮಾಡಿಸಿ, ಹಕ್ಕುಪತ್ರಗಳ ವಿತರಣೆ ಮೂಲಕ ‘ಲಂಬಾಣಿ’ಗರ ವಿಶ್ವಾಸ ಗಳಿಸಲು ಪ್ರಯತ್ನಿಸಿದರೂ ಪ್ರಯೋಜನ ಆಗಲಿಲ್ಲ.

‘ಹಳೆಯ ಮೈಸೂರು ಭಾಗಕ್ಕೆ ಸೀಮಿತ ಪಕ್ಷ’ ಎಂಬ ಹಣೆಪಟ್ಟಿಯನ್ನು ಕಳಚಿ ಹಾಕಿ ಕಲ್ಯಾಣ ಕರ್ನಾಟಕದ ಜನರಿಗೆ ಹತ್ತಿರವಾಗಲು ಜೆಡಿಎಸ್‌ ನಡೆಸಿದ ಕಸರತ್ತು ಫಲಿಸಲಿಲ್ಲ. ಬಿಜೆಪಿಯಿಂದ ಟಿಕೆಟ್‌ ಸಿಗದೆ ಬಂಡಾಯವೆದ್ದು ಜೆಡಿಎಸ್‌ಗೆ ಸೇರ್ಪಡೆಯಾದ ಕೆಲವರ ‘ಕೃಪೆ’ಯಿಂದಾದರೂ ಚಿಗುರುವ ನಿರೀಕ್ಷೆಯೂ ಹುಸಿಯಾಯಿತು. ಜೆಡಿಎಸ್‌ನಿಂದ ಜೇವರ್ಗಿ, ಯಾದಗಿರಿ ಮತ್ತು ಬೀದರ್ ಕ್ಷೇತ್ರದಿಂದ ಸ್ಪರ್ಧಿಸಿದ ಎಲ್ಲಾ ‘ಬಂಡಾಯ’ವೆದ್ದವರು ಸೋತರು. ಜೇವರ್ಗಿಯಲ್ಲಿ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಶಹಾಪುರದಲ್ಲಿ ಗುರು ಪಾಟೀಲ ಶಿರವಾಳ ಮತ್ತು ಬೀದರ್‌ನಲ್ಲಿ ಸೂರ್ಯಕಾಂತ ನಾಗಮಾರಪಳ್ಳಿ ಅವರಿಗೆ ಸ್ವತಃ ಬೆಂಬಲಿಗರಿಂದ, ಅಲ್ಲದೇ ಜೆಡಿಎಸ್‌ ಕಾರ್ಯಕರ್ತರ ಮತಗಳು ಗೆಲುವಿನ ಹಾದಿ ಸುಗಮ ಗೊಳಿಸುತ್ತವೆ ಎಂಬ ನಿರೀಕ್ಷೆ ಇತ್ತು. ಆದರೆ, ಅದೂ ಕೈಗೂಡಲಿಲ್ಲ.

ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಯೇ ಗುರಿ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಸ್ಥಾಪಿಸಿ ಗಂಗಾವತಿಯಿಂದ ಕಣಕ್ಕಿಳಿದ ಜನಾರ್ದನ ರೆಡ್ಡಿ, ತಾವೊಬ್ಬರೇ ಗೆಲುವಿನ ಸಿಹಿ ಪಡೆಯಬೇಕಾಯಿತು. ಅವರ ಪತ್ನಿ, ಸೋದರ ಹಾಗೂ ಕಣಕ್ಕಿಳಿಸಿದ್ದ ಇತರರಿಂದ ರೆಡ್ಡಿಗೆ ‘ಕಹಿ’ ದೊರೆಯಿತು.

‘ಹನುಮನ ಜನ್ಮಸ್ಥಳ ಅಂಜನಾದ್ರಿ ಅಭಿವೃದ್ಧಿ’ ಜೊತೆಗೆ ಹಿಂದುತ್ವದ ಅಲೆಯೆಬ್ಬಿಸಿಕೊಂಡು ಬಿಜೆಪಿ ನಿರಂತರ ಕೈಗೊಂಡ ಅಭಿಯಾನಕ್ಕೆ ಫಲ ಸಿಗಲಿಲ್ಲ. ‘ಹೊರಗಿನವರು’ ಎಂದು ಎಷ್ಟೇ ಬಿಂಬಿಸಿದರೂ ರೆಡ್ಡಿ ಅವರಿಗೆ ಅಲ್ಲಿನ ಜನರು ನಿರಾಸೆಗೊಳಿಸಲಿಲ್ಲ. ‘ಬಿಜೆಪಿಯಿಂದ ನಿರಂತರ ಅನ್ಯಾಯವಾಯಿತು. ಜೈಲು ಸೇರುವಂತಾಯಿತು’ ಎಂದು ಪದೇ ಪದೆ ಹೇಳಿಕೊಂಡು ಜನರಿಂದ ‘ಅನುಕಂಪ’ ಗಳಿಸಲು ಪ್ರಯತ್ನಿಸಿದ್ದು ಗೆಲುವಿನ ದಡ ಸೇರಿಸಿದೆ.

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT