ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನರ ಲೋಕಸಭಾ ಕ್ಷೇತ್ರ: 14 ಅಭ್ಯರ್ಥಿಗಳ ವೃತ್ತಿ, ಶೈಕ್ಷಣಿಕ ಅರ್ಹತೆ ವಿವರ

ಪಿಯುಸಿಯಿಂದ ಎಂಜಿನಿಯರಿಂಗ್‌ವರೆಗೆ...
Published 20 ಏಪ್ರಿಲ್ 2024, 5:09 IST
Last Updated 20 ಏಪ್ರಿಲ್ 2024, 5:09 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳು ಕಣದಲ್ಲಿದ್ದು, ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಈ ಬಾರಿ ನಾಲ್ವರು ಅಭ್ಯರ್ಥಿಗಳು ಹೆಚ್ಚಿದ್ದಾರೆ. 2019ರಲ್ಲಿ 10 ಮಂದಿ ಅಖಾಡದಲ್ಲಿದ್ದರು.

14 ಹುರಿಯಾಳುಗಳ ಶೈಕ್ಷಣಿಕ ಅರ್ಹತೆಯನ್ನು ನೋಡುವುದಾದರೆ, ಎಲ್ಲರೂ ಕನಿಷ್ಠ ಪದವಿ ಪೂರ್ವ ಶಿಕ್ಷಣ ಪಡೆದಿದ್ದಾರೆ. ಗರಿಷ್ಠ ಸ್ನಾತಕೋತ್ತರ, ಎಂಜಿನಿಯರಿಂಗ್‌ ಪದವಿ ಮಾಡಿದ್ದಾರೆ. ವೃ‌ತ್ತಿಯಲ್ಲಿ ಹೆಚ್ಚಿನವರು ಕೃಷಿಕರೇ. ಇಬ್ಬರು ಪತ್ರಕರ್ತರಿದ್ದಾರೆ. ಒಬ್ಬರು ವಕೀಲರಿದ್ದಾರೆ. ಇನ್ನೂ ಕೆಲವರು ಸ್ವ ಉದ್ಯೋಗ ಹಾಗೂ ಸಮಾಜ ಸೇವೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

ಯಾರು ಎಷ್ಟು ಓದಿದ್ದಾರೆ?: ಬಿಜೆಪಿಯ ಎಸ್‌.ಬಾಲರಾಜು ಎಂಜಿನಿಯರಿಂಗ್‌ ಪದವೀಧರ. 1990ರಲ್ಲಿ ಬೆಂಗಳೂರಿನ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ಕೋರ್ಸ್‌ನಲ್ಲಿ ಪದವಿ ಪಡೆದಿದ್ದಾರೆ. ವೃತ್ತಿಯಲ್ಲಿ ಅವರು ಕೃಷಿಕರು. ವ್ಯವಸಾಯ ಮತ್ತು ಶಾಸಕರ ನಿವೃತ್ತಿ ವೇತನ ಪ್ರಮುಖ ಆದಾಯ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.  

ಎಸ್‌ಯುಸಿಐ–ಸಿಯ ಅಭ್ಯರ್ಥಿ, ಕಣದಲ್ಲಿರುವ ಏಕೈಕ ಮಹಿಳೆ ಸುಮ ಎಸ್‌. ಸ್ನಾತಕೋತ್ತರ ಪದವೀಧರೆ, ಮೈಸೂ‌ರು ವಿವಿಯಲ್ಲಿ 2017ರಲ್ಲಿ ಎಂಎ ಮಾಡಿದ್ದಾರೆ. ಪಕ್ಷದ ಪೂರ್ಣಾವಧಿ ಕಾರ್ಯಕರ್ತೆ ಎಂದು ಪ‍್ರಮಾಣ ಪತ್ರದಲ್ಲಿ ಹೇಳಿಕೊಂಡಿದ್ದಾರೆ. 

ಬಿಎಸ್‌ಪಿ ಅಭ್ಯರ್ಥಿ ಎಂ.ಕೃಷ್ಣಮೂರ್ತಿ ಕೂಡ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಬಿಇಡಿ ಮಾಡಿದ್ದಾರೆ. 1998ರಲ್ಲಿ ಮೈಸೂರಿನಲ್ಲಿ ಬಿಇಡಿ ಮಾಡಿದ್ದರೆ, 2000ದಲ್ಲಿ ಮೈಸೂರು ವಿವಿಯಲ್ಲಿ ಎಂ.ಎ ಮಾಡಿದ್ದಾರೆ. ಉಪನ್ಯಾಸಕ ಹುದ್ದೆಯನ್ನು ತೊರೆದು ಬಿಎಸ್‌ಪಿ ಸೇರಿರುವ ಅವರು ಈಗ ಪೂರ್ಣಕಾಲಿಕ ಸಮಾಜ ಸೇವಕರು. 

ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಯಾಗಿರುವ ನಿಂಗರಾಜು ಎಸ್‌ ಅವರು ಎಂಎಸ್‌ಸಿ ಪದವೀಧರ. ಶಿವಮೊಗ್ಗದ ಕುವೆಂಪು ವಿವಿಯ ದೂರ ಶಿಕ್ಷಣ ಸೌಲಭ್ಯ ಬಳಸಿಕೊಂಡು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009ರಲ್ಲಿ ಮೈಸೂರಿನಲ್ಲಿ ಬಿಇಡಿ ಕೂಡ ಮಾಡಿದ್ದಾರೆ. ಸ್ವಯಂ ಉದ್ಯೋಗಿಯಾಗಿರುವ ಅವರು ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದಾರೆ. 

ಪಕ್ಷೇತರ ಅಭ್ಯರ್ಥಿಯಾಗಿರುವ ಕಣಕ್ಕಿಳಿದಿರುವ ನಿಂಗರಾಜ್‌ ಜಿ. ಅವರು ಮೈಸೂರಿನ ಮಹಾರಾಜ ಪದವಿ ಕಾಲೇಜಿನಲ್ಲಿ ಬಿಎ ಓದಿದ್ದಾರೆ. ಜೀವನಕ್ಕೆ ಸ್ವಯಂ ಉದ್ಯೋಗ ನೆಚ್ಚಿಕೊಂಡಿದ್ದಾರೆ. 

ಸ್ವತಂತ್ರವಾಗಿ ಕಣಕ್ಕಿಳಿದಿರುವ ಮತ್ತೊಬ್ಬ ಅಭ್ಯರ್ಥಿ ಮಹದೇವಸ್ವಾಮಿ ಬಿ.ಎಂ ಅವರು ನಂಜನಗೂಡಿನಲ್ಲಿ ಬಿಎ ಪದವಿ ಪೂರೈಸಿದ್ದಾರೆ. ಫೈರ್‌ ಅಂಡ್‌ ಸೇಫ್ಟಿ ವಿಷಯದಲ್ಲಿ ಡಿಪ್ಲೊಮಾ ಕೂಡ ಮಾಡಿದ್ದಾರೆ. 

ಡಾ.ಅಂಬೇಡ್ಕರ್‌ ಪೀಪಲ್ಸ್‌ ಪಾರ್ಟಿಯ ಅಭ್ಯರ್ಥಿಯಾಗಿರುವ ಸಿ.ಎಂ.ಕೃಷ್ಣ ಅವರು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಡಿಪ್ಲೊಮಾ ಮಾಡಿದ್ದಾರೆ. ಕೃಷಿಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. 

ಕರ್ನಾಟಕ ಪ್ರಜಾ ಪಾರ್ಟಿಯಿಂದ (ರೈತ ಪರ್ವ) ಕಣಕ್ಕಿಳಿರುವ ಪ್ರಸನ್ನಕುಮಾರ್ ಬಿ. ವೃತ್ತಿಯಲ್ಲಿ ವಕೀಲರು. ಬಿ.ಎ. ಎಲ್‌ಎಲ್‌ಬಿ ಪದವಿ ಪೂರೈಸಿದ್ದಾರೆ. 

ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌ ಅವರು ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಅಳಿಕೆಯಲ್ಲಿರುವ ಸತ್ಯಸಾಯಿ ಲೋಕಸೇವಾ ಪಿಯು ಕಾಲೇಜಿನ ಹಳೆ ವಿದ್ಯಾರ್ಥಿ ಅವರು. ಕೃಷಿಯೊಂದಿಗೆ ಉದ್ಯಮವನ್ನೂ ನಡೆಸುತ್ತಿರುವ ಅವರು ತಾವು ಸಮಾಜ ಸೇವಕ ಎಂದು ಹೇಳಿಕೊಂಡಿದ್ದಾರೆ. 

ಪಕ್ಷೇತರ ಅಭ್ಯರ್ಥಿ ಪ್ರದೀಪ್‌ ಕುಮಾರ್‌ ಎಂ ಅವರು ದ್ವಿತೀಯ ಪಿಯುಸಿವರೆಗೆ ಓದಿದ್ದಾರೆ. ವೃತ್ತಿ ಪತ್ರಕರ್ತ ಎಂದು ತೋರಿಸಿಕೊಂಡಿದ್ದಾರೆ. 

ಮತ್ತೊಬ್ಬ ಸ್ವತಂತ್ರ ಅಭ್ಯರ್ಥಿ ಜಿ.ಡಿ.ರಾಜಗೋಪಾಲ್‌ ಅವರು ಪಿಯುಸಿ ಶಿಕ್ಷಣ ಪಡೆದಿದ್ದು, ವ್ಯವಸಾಯ ಮಾಡುತ್ತಾರೆ. 

ಪಕ್ಷೇತರ ಅಭ್ಯರ್ಥಿ ಎನ್‌.ಅಂಬರೀಷ್‌ ಅವರು ಜೆಒಸಿ ಪೂರ್ಣಗೊಳಿಸಿದ್ದು, ಪತ್ರಕರ್ತ ಎಂದು ಗುರುತಿಸಿಕೊಂಡಿದ್ದಾರೆ. ಸಮಾಜಸೇವೆಯನ್ನೂ ಮಾಡುತ್ತಿದ್ದಾರೆ. 

ಸ್ವತಂತ್ರವಾಗಿ ಕಣಕ್ಕಿಳಿದಿರುವ ಎಚ್‌.ಕೆ.ಸ್ವಾಮಿ ಅವರು ಕೂಡ ಪಿಯುಸಿ ಓದಿದವರು. ವ್ಯವಸಾಯ ಮಾಡುತ್ತಿದ್ದಾರೆ. 

ಕೆಆರ್‌ಎಸ್‌ ಪಕ್ಷದ ಅಭ್ಯರ್ಥಿ ಕೂಲಿ ಕಾರ್ಮಿಕ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಯಾಗಿರುವ ಕಂದಹಳ್ಳಿ ಮಹೇಶ್‌ ಅವರು ರಾಜ್ಯ ಮುಕ್ತ ವಿವಿಯ ಮೂಲಕ ಎಂ.ಎ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋತ್ಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮಾಡಿದ್ದಾರೆ. ವೃತ್ತಿಯಲ್ಲಿ ಕೂಲಿ ಕಾರ್ಮಿಕರಾಗಿರುವ ಅವರು ವಾರ್ಷಿಕವಾಗಿ ₹1 ಲಕ್ಷ ಸಂಪಾದನೆ ಇದೆ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT