ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕ: ಕಲ್ಯಾಣ ‘ಕ್ರಾಂತಿ’ಗೆ ಕೈ, ಕಮಲ, ತೆನೆ ಸಜ್ಜು

ಕಲ್ಯಾಣ ಕರ್ನಾಟಕ: ಸುಭದ್ರ ನೆಲೆಯ ನಿರೀಕ್ಷೆಯಲ್ಲಿ ಜೆಡಿಎಸ್‌; ಬಿಜೆಪಿ ವಿರುದ್ಧ ಪ್ರತೀಕಾರಕ್ಕೆ ಕಾಂಗ್ರೆಸ್‌ ಯತ್ನ l ಟಿಕೆಟ್ ವಂಚಿತರಿಂದ ಬಂಡಾಯ
Last Updated 19 ಏಪ್ರಿಲ್ 2023, 23:00 IST
ಅಕ್ಷರ ಗಾತ್ರ

ಕಲಬುರಗಿ: ವಿಧಾನಸಭೆ ಚುನಾವಣೆ ಘೋಷಣೆಯಾದರೆ ಸಾಕು, ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆ ಸಿದ್ಧವಾಯಿತೆಂದೇ ಅರ್ಥ. ಎರಡೂ ಪಕ್ಷಗಳ ನಾಯಕರು ಆಯಾ ಕ್ಷೇತ್ರಗಳ ಮೇಲೆ ವರ್ಷಗಳಿಂದ ನಿರಂತರ ಹಿಡಿತ ಕಾಯ್ದುಕೊಂಡರೆ, ಕುಟುಂಬ ರಾಜಕಾರಣವು ‘ಅನ್ಯರಿಗೆ’ ಚಿಗುರಲು ಅವಕಾಶವನ್ನೇ ಮಾಡಿಕೊಟ್ಟಿಲ್ಲ. ಇದೆಲ್ಲದರ ಮಧ್ಯೆ ಈ ಸಲ ಟಿಕೆಟ್ ವಂಚಿತರ ‘ಬಂಡಾಯದ ಬಿರುಗಾಳಿ’ ಬೀಸಿದೆ. ಇದರಿಂದ ಕಲ್ಯಾಣ ಕರ್ನಾಟಕದ ರಾಜಕೀಯ ಚಿತ್ರಣವನ್ನು ಸ್ವಲ್ಪ ಮಟ್ಟಿಗಾದರೂ ಬದಲಿಸುವ ಲಕ್ಷಣ ಗೋಚರಿಸಿದೆ.

ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಮತ್ತು ಕೊಪ್ಪಳದಲ್ಲಿ ಜೆಡಿಎಸ್‌ಗೆ ನೆಲೆಯೇ ಇಲ್ಲ ಎಂದು ವ್ಯಂಗ್ಯವಾಡುವವರಿಗೆ ತಿರುಗೇಟು ನೀಡುವ ‘ಸದಾವಕಾಶ’ ಈ ಬಾರಿ ಪಕ್ಷದ ವರಿಷ್ಠರಿಗೆ ಲಭಿಸಿದೆ. ತಾವು ಕಟ್ಟಿ ಬೆಳೆಸಿದ ಮತ್ತು ವಿಧಾನಸಭೆಯಲ್ಲಿ ಪ್ರತಿನಿಧಿಸಿದ, ಪಕ್ಷದ ಹೈಕಮಾಂಡ್‌ನಿಂದ ಟಿಕೆಟ್ ವಂಚಿತರಾದ ಪ್ರಬಲ ಆಕಾಂಕ್ಷಿಗಳು ಜೆಡಿಎಸ್‌ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಇದು ಆ ಪಕ್ಷಕ್ಕೆ ಬಲವನ್ನು ತಂದುಕೊಟ್ಟಿದೆ.

ಕಾಂಗ್ರೆಸ್‌ನ ಭದ್ರಕೋಟೆಯನ್ನು ಭೇದಿಸಲು ಸಂಘ ಪರಿವಾರವು ಬಿಜೆಪಿ ಮೂಲಕ ಕಾರ್ಯತಂತ್ರ ರೂಪಿಸಿದೆ. ಶಿವರಾತ್ರಿ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯ ಆಳಂದದ ಲಾಡ್ಲೆ ಮಶಾಕ್‌ ದರ್ಗಾ ಆವರಣದಲ್ಲಿನ ರಾಘವ ಚೈತನ್ಯ ಲಿಂಗಕ್ಕೆ ಶ್ರೀರಾಮ ಸೇನೆ ಮತ್ತು ಬಿಜೆಪಿಯವರು ವಿಶೇಷ ಪೂಜೆ ಮಾಡಿದರು. ಇದರಿಂದ ಪರಿಸ್ಥಿತಿ ಬಿಗಡಾಯಿಸಿತ್ತು.

ಕಲ್ಯಾಣ ಕರ್ನಾಟಕದಲ್ಲಿ ಜನರ ಒಲವು ಗಳಿಸಲು ಯತ್ನಿಸಿದ ಬಿಜೆಪಿ 2018ರ ವಿಧಾನಸಭೆ ಚುನಾವಣೆಯಲ್ಲಿ ಯಶ ಕಂಡಿತು. ಅವಿಭಜಿತ ಬಳ್ಳಾರಿ ಜಿಲ್ಲೆ ಹೊರತುಪಡಿಸಿ ಒಟ್ಟು 31ರ ಪೈಕಿ 14 ಕ್ಷೇತ್ರಗಳಲ್ಲಿ ಕಮಲ ಅರಳಿತು. 13 ಕ್ಷೇತ್ರಗಳಲ್ಲಿ ‘ಕೈ’ ಹಿಡಿತ ಸಾಧಿಸಿತು. 2019ರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಣಿಸಿದ ಬಿಜೆಪಿಯು ತನ್ನ ಶಕ್ತಿಯನ್ನು ಇನ್ನಷ್ಟು ವೃದ್ಧಿಸಿಕೊಂಡಿತು. ಪ್ರಸಕ್ತ ಚುನಾವಣೆಯಲ್ಲಿ ಸುಭದ್ರ ನೆಲೆ ಕಂಡುಕೊಳ್ಳಲು ಪ್ರಯತ್ನ ನಡೆಸಿದೆ.

ಪ್ರತೀಕಾರಕ್ಕೆ ಸಿದ್ಧತೆ: ಸೋಲಿನ ಕಹಿ ಮರೆಯಲು ಮತ್ತು ಪ್ರತೀಕಾರ ತೀರಿಸಿಕೊಳ್ಳಲು ಕಾಯುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಸಲದ ಚುನಾವಣೆಯು ಅವಕಾಶ ಮಾಡಿಕೊಟ್ಟಿದೆ. ಎಐಸಿಸಿ ಅಧ್ಯಕ್ಷರಾಗಿರುವ ಖರ್ಗೆ ಅವರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ಇಲ್ಲಿನ ಕ್ಷೇತ್ರಗಳ ಸ್ಥಿತಿಗತಿ ಮತ್ತು ಜನರ ಮನೋಭಾವ ದಶಕಗಳಿಂದ ಅರಿತಿದ್ದು ಕಾರ್ಯತಂತ್ರ ರೂಪಿಸಿದ್ದಾರೆ.

‘ಹೈದರಾಬಾದ್ ಕರ್ನಾಟಕ’ ಬದಲು ‘ಕಲ್ಯಾಣ ಕರ್ನಾಟಕ’ ಎಂದು ಮರುನಾಮಕರಣ ಮಾಡಿದ ಬಿಜೆಪಿ ‘ಡಬಲ್ ಎಂಜಿನ್ ಸರ್ಕಾರದ ಮೂಲಕ ಅಭಿವೃದ್ಧಿಯ ಸರಣಿಯೇ ಮುಂದುವರೆಯಲಿದೆ’ ಎಂದು ಹೇಳುತ್ತಿದೆ. ಆದರೆ, ಶೇ 40ರಷ್ಟು ಕಮಿಷನ್ ಹಗರಣ, ಪಿಎಸ್‌ಐ ಅಕ್ರಮ ನೇಮಕಾತಿ, ಪಕ್ಷದ ಬೆಂಬಲಿಗರು ಜೈಲುಪಾಲಾಗಿದ್ದು ಎಲ್ಲವನ್ನೂ ಜನರ ಸ್ಮೃತಿ ಪಟಲದಿಂದ ಮರೆಸಲು ಹರಸಾಹಸ ಪಡುತ್ತಿದೆ. ‘ಕಲ್ಯಾಣ ಕರ್ನಾಟಕ ಉತ್ಸವ’, ‘ಬೀದರ್ ಉತ್ಸವ’ ಮುಂತಾದವನ್ನು ಆಯೋಜಿಸಿ ಜನರು ಸಂಭ್ರಮದಲ್ಲಿ ತೇಲಾಡುವಂತೆ ಸರ್ಕಾರ ಮಾಡಿತು. ಆದರೆ ಮೂಲಸೌಕರ್ಯ, ಬಡತನ ನಿವಾರಣೆ ಮುಂತಾದವುಗಳಿಗೆ ಆದ್ಯತೆ ನೀಡುವ ಬದಲು ವಿನಾಕಾರಣ ದುಂದುವೆಚ್ಚ ಮಾಡಿದೆ ಎಂದು ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿತು.

ಚಿತ್ತಾಪುರದ ಶಾಸಕ, ಕೆಪಿಸಿಸಿ ಮಾಧ್ಯಮ ಸಂಯೋಜಕ ಪ್ರಿಯಾಂಕ್ ಖರ್ಗೆ ನಿರಂತರವಾಗಿ ರಾಜ್ಯ ಸರ್ಕಾರದ ಹಗರಣಗಳನ್ನು ಬಯಲು ಮಾಡುವುದರ ಜೊತೆಗೆ ತನಿಖೆಗೆ ಒತ್ತಾಯಿಸುತ್ತಿರುವುದು ಬಿಜೆಪಿಯ ಕಣ್ಣು ಕೆಂಪಾಗಿಸಿದೆ. ಇದಕ್ಕೆಲ್ಲ ಕೊನೆ ಹಾಡಬೇಕೆಂದು ರೌಡಿಶೀಟರ್ ಮಣಿಕಂಠ ರಾಠೋಡ ಅವರನ್ನು ಕಣಕ್ಕಿಳಿ ಸಿರುವ ಪಕ್ಷವು ಹೇಗಾದರೂ ಮಾಡಿ ಪ್ರಿಯಾಂಕ್ ಖರ್ಗೆಯನ್ನು ಹಣಿಯಲೇಬೇಕು ಎನ್ನುವ ಹಟಕ್ಕೆ ಬಿದ್ದಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರು ನಿರಂತರ ಸಭೆಗಳನ್ನು ನಡೆಸಿದ್ದಾರೆ.

‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ವಾರ್ಷಿಕ ಅನುದಾನವನ್ನು ₹ 1,500 ಕೋಟಿಯಿಂದ ₹ 5,000 ಕೋಟಿವರೆಗೆ ಏರಿಸಲಾಗಿದೆ. ಹಾಗೆಯೇ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮತ್ತು ಸರ್ವಜನರ ಏಳ್ಗೆಯೇ ಮುಖ್ಯ’ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಇದೆಲ್ಲವೂ ಬರೀ ಸುಳ್ಳು ಎಂದು ಹೇಳುತ್ತಿರುವ ಕಾಂಗ್ರೆಸ್‌, ‘371 (ಜೆ) ಕಲಂ ಅನುಷ್ಠಾನಕ್ಕೆ ತರುವ ಮೂಲಕ ಇಲ್ಲಿನ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವಲ್ಲಿ ಮಲ್ಲಿಕಾರ್ಜುನ ಖರ್ಗೆ ಅಪಾರವಾಗಿ ಶ್ರಮಿಸಿದ್ದಾರೆ. ವಿಶೇಷ ಸ್ಥಾನಮಾನದ ಸೌಲಭ್ಯಗಳನ್ನು ಪಡೆದುಕೊಂಡಲ್ಲಿ ಇಲ್ಲಿನ ಜನರಿಗೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಸಿಗುತ್ತದೆ’ ಎನ್ನುತ್ತಿದೆ.

ರಾಯಚೂರು ಜಿಲ್ಲೆಯಲ್ಲಿ ಇಬ್ಬರು, ಬೀದರ್ ಮತ್ತು ಯಾದಗಿರಿ ಜಿಲ್ಲೆಯಲ್ಲಿ ತಲಾ ಒಂದೊಂದು ಶಾಸಕರನ್ನು ಹೊಂದಿರುವ ಜೆಡಿಎಸ್‌ಗೆ ಕಲಬುರಗಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕಳೆದ ಚುನಾವಣೆಯಲ್ಲಿ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ‘ಕಲ್ಯಾಣ’ದ ಬಹುತೇಕ ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಉತ್ತಮ ಪೈಪೋಟಿ ನೀಡುವ ಹುಮ್ಮಸ್ಸಿನಲ್ಲಿದೆ. ಪಂಚರತ್ನ ಯಾತ್ರೆ ಮೂಲಕ ಸಂಚರಿಸಿದ ಎಚ್.ಡಿ.ಕುಮಾರಸ್ವಾಮಿ, ‘ಒಮ್ಮೆಯಾದರೂ ಬಹುಮತ ನೀಡಿ’ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬಿಜೆಪಿಯಲ್ಲಿನ ಬಂಡಾಯ ಜೆಡಿಎಸ್‌ಗೆ ವರವಾಗಿದೆ. ಬಿಜೆಪಿ ತೊರೆದ ದೊಡ್ಡಪ್ಪಗೌಡ ಪಾಟೀಲ ನರಿಬೋಳ (ಜೇವರ್ಗಿ), ಡಾ. ಎ.ಬಿ.ಮಾಲಕರೆಡ್ಡಿ (ಯಾದಗಿರಿ), ಗುರು ಪಾಟೀಲ ಶಿರವಾಳ (ಶಹಾಪುರ), ಸೂರ್ಯಕಾಂತ ನಾಗಮಾರಪಳ್ಳಿ (ಬೀದರ್), ಸಿ.ವಿ.ಚಂದ್ರಶೇಖರ್ (ಕೊಪ್ಪಳ), ಎಚ್.ಆರ್.ಚನ್ನಕೇಶವ (ಗಂಗಾವತಿ) ಕಠಿಣ ಸವಾಲು ಒಡ್ಡುವುದು ನಿಶ್ಚಿತ.

ಚುನಾವಣೆ ಹೊಸ್ತಿಲಲ್ಲಿ ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ)ವನ್ನು ಸ್ಥಾಪಿಸಿದ್ದು, ಗಂಗಾವತಿಯಿಂದ ಸ್ಪರ್ಧಿ ಸುತ್ತಿದ್ದಾರೆ. ಹೆಚ್ಚಾಗಿ ಕಲ್ಯಾಣ ಕರ್ನಾಟಕ ಭಾಗವನ್ನೇ ಕೇಂದ್ರೀಕರಿಸಿದ್ದಾರೆ. ರೆಡ್ಡಿ ಪಕ್ಷದಿಂದ ಕೆಲವು ಕ್ಷೇತ್ರಗಳಲ್ಲಿನ ಫಲಿತಾಂಶದಲ್ಲಿ ವ್ಯತ್ಯಾಸ ಆಗಬಹುದು ಎನ್ನುವ ಮಾತಿದೆ.

ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆಯೇ ಇರುತ್ತಿದ್ದ ಕಾದಾಟವು ಜೆಡಿಎಸ್‌ ಪ್ರಬಲ ಅಭ್ಯರ್ಥಿಗಳನ್ನು ಕಣ ಕ್ಕಿಳಿಸಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಅನಿರೀಕ್ಷಿತ ಬೆಳವಣಿಗೆಯಿಂದ ಜೆಡಿಎಸ್‌ ಪುಟಿದ್ದೆದಿದೆ.

ಹಲವು ವರ್ಷಗಳಿಂದ ತಾವು ನಂಬಿದ ಪಕ್ಷದ ನೀತಿ, ಸಿದ್ಧಾಂತ, ತತ್ವಗಳನ್ನು ಅನುರಿಸಿಕೊಂಡು ಬಂದ ಪ್ರಮುಖರು ಈ ಸಲ ಪಕ್ಷಾಂತರ ಮಾಡಿದ್ದಾರೆ. ಮತದಾರರು ಪಕ್ಷಕ್ಕೆ ಮಣೆ ಹಾಕುವರೋ ಅಥವಾ ವ್ಯಕ್ತಿತ್ವಕ್ಕೆ ಆದ್ಯತೆ ನೀಡುವರೋ ಎನ್ನುವ ಕುತೂಹಲ ಉಳಿದಿದೆ.



ಪರಿಣಾಮ ಬೀರಬಹುದಾದ ವಿಷಯಗಳು...

ಕಲಬುರಗಿ

*ಜಲಾಶಯಗಳಿಂದ ಗ್ರಾಮಗಳಿಗೆ, ಕೃಷಿ ಜಮೀನುಗಳಿಗೆ ನೀರು ಹರಿದಿಲ್ಲ.

*ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಕೊರತೆ ನೀಗಿಲ್ಲ.

*ಅಂತರರಾಷ್ಟ್ರೀಯ ಕ್ರೀಡಾ ಸಂಕೀರ್ಣ ಇನ್ನೂ ನಿರ್ಮಾಣಗೊಂಡಿಲ್ಲ.

ಯಾದಗಿರಿ

*ಹೊಸ ತಾಲ್ಲೂಕುಗಳಲ್ಲಿ ಇನ್ನೂ ಪೂರ್ಣಪ್ರಮಾಣದಲ್ಲಿ ಸರ್ಕಾರಿ ಕಚೇರಿಗಳು ಆರಂಭಗೊಂಡಿಲ್ಲ.

*ಕಾಲುವೆಯ ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲ.

*ವಲಸೆ ಸಮಸ್ಯೆ ಇನ್ನೂ ಬಗೆಹರಿದಿಲ್ಲ.

ಬೀದರ್

*ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ಕಟ್ಟಡ ಕಾಮಗಾರಿ ಇನ್ನೂ ಆರಂಭವಾಗಿಲ್ಲ.

*ತಾಲ್ಲೂಕು ಕೇಂದ್ರಗಳಲ್ಲಿ ರಸ್ತೆಗಳು ವಿಸ್ತರಣೆಗೊಂಡಿಲ್ಲ.

*ಗ್ರಾಮಗಳಿಗೆ ಬಸ್‌ ಸಂಪರ್ಕ ವ್ಯವಸ್ಥೆಯಿಲ್ಲ.

ರಾಯಚೂರು

*ಏಮ್ಸ್ ಸ್ಥಾಪನೆಗಾಗಿ 300ಕ್ಕೂ ಹೆಚ್ಚು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆದರೂ ದೊರೆಯದ ಸ್ಪಂದನೆ.

*ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ.

*ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಯಾಗಿಲ್ಲ.

ಕೊಪ್ಪಳ

*ಹೊಸ ವಿಶ್ವವಿದ್ಯಾಲಯ ಮಂಜೂರಾದರೂ ಜಾಗ ಸಿಕ್ಕಿಲ್ಲ.

*ಕೆರೆಗೆ ನೀರು ತುಂಬಿಸುವ ಯೋಜನೆ ಕಡತಗಳಿಗೆ ಸೀಮಿತ.

*ಹನುಮಸಾಗರ ಪ್ರತ್ಯೇಕ ತಾಲ್ಲೂಕು ರಚನೆಗೆ ಹೋರಾಡಿದರೂ ಪ್ರಯೋಜನ ಆಗಿಲ್ಲ

****

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಳೆದ ಸಲಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತೇವೆ

-ಜಗದೇವ ಗುತ್ತೇದಾರ, ಅಧ್ಯಕ್ಷ, ಕಾಂಗ್ರೆಸ್ ಜಿಲ್ಲಾ ಘಟಕ

****

ಕಲ್ಯಾಣ ಕರ್ನಾಟಕದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಮತದಾರರ ಮೇಲೆ ಉತ್ತಮ ಪ್ರಭಾವ ಬೀರಿ, ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ

-ಸುರೇಶ ಮಹಾಗಾಂವಕರ್, ಅಧ್ಯಕ್ಷ, ಜೆಡಿಎಸ್ ಜಿಲ್ಲಾ ಘಟಕ

****

* ಪೂರಕ ಮಾಹಿತಿ: ಮನೋಜಕುಮಾರ್ ಗುದ್ದಿ, ಚಂದ್ರಕಾಂತ ಮಸಾನಿ, ನಾಗರಾಜ ಚಿನಗುಂಡಿ, ಪ್ರಮೋದ ಮತ್ತು ಬಿ.ಜಿ.ಪ್ರವೀಣಕುಮಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT