ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷಾತ್ ಸಮೀಕ್ಷೆ: ಕೋಲಾರ ಜಿಲ್ಲೆ– ಕೈ, ತೆನೆಗೆ ‘ಕಮಲ’ ಸವಾಲು

ಕೋಲಾರ ಎರಡರಲ್ಲಿ ಕಾಂಗ್ರೆಸ್‌–ಜೆಡಿಎಸ್‌; ಒಂದರಲ್ಲಿ ಚತುಷ್ಕೋನ, ಇನ್ನುಳಿದೆಡೆ ತ್ರಿಕೋನ ಸ್ಪರ್ಧೆ
Published 29 ಏಪ್ರಿಲ್ 2023, 21:04 IST
Last Updated 29 ಏಪ್ರಿಲ್ 2023, 21:04 IST
ಅಕ್ಷರ ಗಾತ್ರ

ಕೋಲಾರ: ಬಯಲುಸೀಮೆ ಜಿಲ್ಲೆಯಲ್ಲಿ ತಮ್ಮ ಮಧ್ಯೆ ಮಾತ್ರ ಸ್ಪರ್ಧೆ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ದಶಕಗಳಿಂದ ಭಾವಿಸಿಕೊಂಡು ಬಂದಿವೆ. ಆದರೆ, ಈ ಬಾರಿ ಈ ಎರಡೂ ಪಕ್ಷಗಳಿಗೆ ಸವಾಲು ಎಸೆಯಲು ಬಿಜೆಪಿ ಮೈಕೊಡವಿಕೊಂಡು ಎದ್ದು ನಿಂತಿದೆ.

ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರನ್ನು ನೀಡಿದ್ದ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಕೋಲಾರ, ಬಂಗಾರಪೇಟೆ, ಕೆಜಿಎಫ್‌ನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟರೆ, ಶ್ರೀನಿವಾಸಪುರ ಹಾಗೂ ಮುಳಬಾಗಿಲಿನಲ್ಲಿ ಕಾಂಗ್ರೆಸ್‌– ಜೆಡಿಎಸ್‌ ನಡುವೆ ನೇರ ಪೈಪೋಟಿ. ಬಿಜೆಪಿಯಲ್ಲಿನ ಬಂಡಾಯದ ಕಾರಣ ಮಾಲೂರಿನಲ್ಲಿ ಚತುಷ್ಕೋನ ಸ್ಪರ್ಧೆ ಇದೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಕಾರಣಕ್ಕೆ ಜಿಲ್ಲೆಯಲ್ಲಿ ಸೃಷ್ಟಿಯಾಗಿದ್ದ ಹವಾ ತಗ್ಗಿದಂತೆ ಕಾಣುತ್ತಿಲ್ಲ. ಕಾಂಗ್ರೆಸ್‌ ಪಕ್ಷದವರು, ಪ್ರತಿಸ್ಪರ್ಧಿಗಳು ನಿತ್ಯ ಅದೇ ವಿಚಾರ ಚರ್ಚಿಸುತ್ತಾ, ಪರಸ್ಪರ ಕಾಲೆಳೆಯುತ್ತಾ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ‘ಮೋದಿ ಉಪನಾಮ’ದ ಕುರಿತು ನೀಡಿದ್ದ ಹೇಳಿಕೆ ಸೃಷ್ಟಿಸಿದ ವಿವಾದ, ನಂತರ ಅವರು ಕೋಲಾರಕ್ಕೆ ಬಂದು ಎಬ್ಬಿಸಿದ ದೂಳು ಅಲ್ಲಲ್ಲಿ ಚದುರಿಕೊಂಡಿದೆ. ಇದು ಕಾಂಗ್ರೆಸ್‌ ಪಾಲಿಗೆ ‘ಪ್ಲಸ್‌ ಪಾಯಿಂಟ್‌’ ಕೂಡ.

ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹಾಗೂ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಬೆಂಬಲಿಗರ ನಡುವಣ ಭಿನ್ನಾಭಿಪ್ರಾಯ ಬೂದಿಮುಚ್ಚಿದ ಕೆಂಡದಂತಿದೆ. ಮುನಿಯಪ್ಪ ದೇವನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದು, ಕೋಲಾರದಿಂದ ದೂರವೇ ಉಳಿದಿದ್ದಾರೆ. ಕೋಲಾರದ ಕಾಂಗ್ರೆಸ್‌ ಅಭ್ಯರ್ಥಿ ಕೊತ್ತೂರು ಮಂಜುನಾಥ್‌, ‘2019ರ ಲೋಕಸಭೆ ಚುನಾವಣೆಯಲ್ಲಿ ನಾನು ಮುನಿಯಪ್ಪ ಅವರನ್ನು ವಿರೋಧಿಸಿದ್ದೂ ನಿಜ, ಬಿಜೆಪಿಗೆ ಬೆಂಬಲ ನೀಡಿದ್ದೂ ನಿಜ’ ಎಂದು ಬಹಿರಂಗವಾಗಿ ಹೇಳಿರುವುದು ಉರಿವ ಬೆಂಕಿಗೆ ತು‌ಪ್ಪ ಸುರಿದಂತಾಗಿದೆ. ಜೊತೆಗೆ ಕೋಲಾರ, ಮುಳಬಾಗಿಲು ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ರಾದ್ಧಾಂತವೇ ನಡೆದಿತ್ತು.

ಜಿಲ್ಲೆಯಲ್ಲಿ ಬಹು ಚರ್ಚಿತ ವಿಷಯವಾಗಿರುವ ಕೆ.ಸಿ.ವ್ಯಾಲಿಯ ಮೂರನೇ ಹಂತದ ಶುದ್ಧೀಕರಣ ಮಾಡುವುದಾಗಿ ಭರವಸೆ ಕೊಟ್ಟಿರುವುದು ಬಿಜೆಪಿಗೆ ‘ಪ್ಲಸ್‌ ಪಾಯಿಂಟ್‌’ ಆಗಲಿದೆ. ಆದರೆ, ಬಜೆಟ್‌ನಲ್ಲಿ ಜಿಲ್ಲೆಗೆ ಏನೂ ನೀಡಿಲ್ಲ ಎಂಬ ಕೋಪ ಜನರಲ್ಲಿದೆ.

ಜೆಡಿಎಸ್‌ ಪಾಲಿಗೆ ಪಂಚರತ್ನ ಯಾತ್ರೆ ವೇಳೆ ಸಿಕ್ಕ ಯಶಸ್ಸು ಅನುಕೂಲಕರ. ಆದರೆ ಈ ಪಕ್ಷದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಘಟನೆ ಕೊರತೆಯೂ ಎದ್ದು ಕಾಡುತ್ತಿದೆ.

ಕೋಲಾರ ಸೇರಿದಂತೆ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ದಲಿತ) ಮತದಾರರೇ ನಿರ್ಣಾಯಕ. ಹೀಗಾಗಿ, ಆರೂ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹಿಂದೆ ಸರಿದು ಜಾತಿ ಲೆಕ್ಕಾಚಾರವೇ ಮುನ್ನೆಲೆಗೆ ಬಂದಿದೆ. ಜತೆಗೆ ಜನರ ನಡುವೆ ಚರ್ಚೆಗೆ ಗ್ರಾಸ ಒದಗಿಸುವಷ್ಟು ‘ಕಾಂಚಾಣ’ವೂ ಸದ್ದು ಮಾಡುತ್ತಿದೆ.

ಹೆಚ್ಚು ಕುತೂಹಲ ಮೂಡಿಸಿರುವ ಕೋಲಾರ ಕ್ಷೇತ್ರದಲ್ಲಿ ತ್ರಿಕೋನ ಪೈಪೋಟಿ. ಪಕ್ಷೇತರರಾಗಿ ಗೆದ್ದು 2008ರಿಂದ 2018ರವರೆಗೆ ಎರಡು ಅವಧಿಗೆ ಶಾಸಕರಾಗಿದ್ದ ವರ್ತೂರು ಪ್ರಕಾಶ್‌ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಟೊಮೆಟೊ ಮಂಡಿ ಮಾಲೀಕ ಸಿ.ಎಂ.ಆರ್‌ ಶ್ರೀನಾಥ್‌ ಪೈಪೋಟಿ ವೊಡ್ಡಿದ್ದಾರೆ.

ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಕೊತ್ತೂರು ಮಂಜುನಾಥ್‌, ‘ಮುಳಬಾಗಿಲು ಕ್ಷೇತ್ರಕ್ಕೆ ಪರಿಚಯವೇ ಇಲ್ಲದ ಪಕ್ಷೇತರ ಅಭ್ಯರ್ಥಿ ಎಚ್‌.ನಾಗೇಶ್‌ ಅವರನ್ನು 2018ರಲ್ಲಿ ಏಳು ದಿನಗಳಲ್ಲಿ ಗೆಲ್ಲಿಸಿದ್ದೆ. ಕೋಲಾರದಲ್ಲಿ ನನಗೆ ಐದೇ ದಿನ ಸಾಕು’ ಎಂದು ಪ್ರಚಾರ ಶುರುವಿಟ್ಟುಕೊಂಡಿದ್ದಾರೆ. ಸಿದ್ದರಾಮಯ್ಯ ಸ್ಪರ್ಧಿಸದಿರುವುದಕ್ಕೆ ಮುಸ್ಲಿಮರ ಒಂದು ಗುಂಪು ಮುನಿಸಿಕೊಂಡಿದೆ.

ಕೊತ್ತೂರು ಮಂಜುನಾಥ್‌ ಮುಳಬಾಗಿಲು ಮೀಸಲು ಕ್ಷೇತ್ರದಲ್ಲಿ ಜಾತಿ ಪ್ರಮಾಣಪತ್ರ ವಿವಾದ ಕಾರಣ ಸ್ಪರ್ಧಿಸಲು ಸಾಧ್ಯವಾಗದೆ ತಮ್ಮ ಬೆಂಬಲಿಗ ವಿ.ಆದಿನಾರಾಯಣ ಅವರನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿಸಿದ್ದು, ಗೆಲ್ಲಿಸುವ ಹೊಣೆ ಹೊತ್ತಿದ್ದಾರೆ.

ಶ್ರೀನಿವಾಸಪುರ ಕ್ಷೇತ್ರದಲ್ಲಿ 40 ವರ್ಷಗಳಿಂದ ಕಾಂಗ್ರೆಸ್‌ನ ಕೆ.ಆರ್.ರಮೇಶ್‌ ಕುಮಾರ್‌ ಹಾಗೂ ಜೆಡಿಎಸ್‌ನ ಜಿ.ಕೆ.ವೆಂಕಟಶಿವಾರೆಡ್ಡಿ ನಡುವೆಯೇ ಜಿದ್ದಾಜಿದ್ದಿನ ಪೈಪೋಟಿ. 1983ರಿಂದ ಅವರೊಮ್ಮೆ ಇವರೊಮ್ಮೆ ಗೆಲ್ಲುತ್ತಿದ್ದರು. 2013 ಹಾಗೂ 2018ರಲ್ಲಿ ರಮೇಶ್‌ ಕುಮಾರ್‌ ಗೆದ್ದಿದ್ದಾರೆ.

ಕೋಲಾರ, ಮುಳಬಾಗಿಲು ಹಾಗೂ ಶ್ರೀನಿವಾಸಪುರ ಕ್ಷೇತ್ರದಲ್ಲಿ ಒಮ್ಮೆಯೂ ‘ಕಮಲ’ ಅರಳಿಲ್ಲ. ಆದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಮೊದಲ ಬಾರಿ ಗೆದ್ದಿರುವುದು ಬಿಜೆಪಿ ವಿಶ್ವಾಸ ಹೆಚ್ಚಿಸಿದೆ.

ಕೆಜಿಎಫ್‌ ಮೀಸಲು ಕ್ಷೇತ್ರದಲ್ಲಿ ಮಹಿಳೆಯರ ನಡುವೆಯೇ ಹಣಾಹಣಿ. ಕಾಂಗ್ರೆಸ್‌ನ ರೂಪಕಲಾ ಎಂ. ಪುನರಾಯ್ಕೆ ಬಯಸಿದ್ದರೆ, ಬಿಜೆಪಿಯ ಅಶ್ವಿನಿ ಸಂಪಂಗಿ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. 2011ರಲ್ಲಿ ‘ಆಪರೇಷನ್‌ ಕಮಲ’ಕ್ಕೆ ಒಳಗಾಗಿದ್ದ ಬಂಗಾರಪೇಟೆ ಕ್ಷೇತ್ರದಲ್ಲೂ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಆಗಿನ ಉಪಚುನಾವಣೆಯಲ್ಲಿ ಗೆದ್ದಿದ್ದ ಎಂ.ನಾರಾಯಣಸ್ವಾಮಿ ಅವರೇ ಬಿಜೆಪಿ ಅಭ್ಯರ್ಥಿ.

ಕೋಲಾರ ಜಿಲ್ಲೆ ಮತದಾರರು: 12,70,718

ಪುರುಷರು: 6,31,147

ಮಹಿಳೆಯರು: 6,39,408

ಲೈಂಗಿಕ ಅಲ್ಪಸಂಖ್ಯಾತರು: 163

ಆರು ಕ್ಷೇತ್ರಗಳಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು: 72

ಜಿಲ್ಲೆಯಲ್ಲಿ ಪಕ್ಷಗಳ ಬಲಾಬಲ

ನಾಲ್ವರು ಗೆದ್ದರು, ಇಬ್ಬರು ಬಂದರು!

2018ರ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ನಾಲ್ಕರಲ್ಲಿ ಗೆದ್ದಿತ್ತು. ಇನ್ನುಳಿದ ಎರಡು ಕ್ಷೇತ್ರಗಳ ಶಾಸಕರೂ ಕೊನೆಯಲ್ಲಿ ಕಾಂಗ್ರೆಸ್ ಸೇರಿದರು. ಮುಳಬಾಗಿಲು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದ ಎಚ್‌.ನಾಗೇಶ್‌, ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ

ಕೆ. ಶ್ರೀನಿವಾಸಗೌಡ ಈಗ ಕಾಂಗ್ರೆಸ್‌ನಲ್ಲಿದ್ದಾರೆ. ನಾಗೇಶ್‌ ಮಹದೇವಪುರ ಕ್ಷೇತ್ರಕ್ಕೆ ಸ್ಥಳಾಂತರ ಗೊಂಡಿದ್ದರೆ, ಶ್ರೀನಿವಾಸಗೌಡ ಸಿದ್ದರಾಮಯ್ಯ ಅವರಿಗಾಗಿ ‘ತ್ಯಾಗ’ ಮಾಡಿದರೂ ಸಿದ್ದರಾಮಯ್ಯ ಬಾರದ ಕಾರಣ ಅವರ ಉದ್ದೇಶ ಈಡೇರಲಿಲ್ಲ.

ಮಾಲೂರು ಜೆಡಿಎಸ್‌ ಕಾಂಗ್ರೆಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT