ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ತಪ್ಪುವ ಭಯವಿಲ್ಲದ ಪ್ರಣಾಳಿಕೆಗಳು

Last Updated 29 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಸಿನಿಕತನದ ಇಂದಿನ ದಿನಮಾನದಲ್ಲಿ ಚುನಾವಣಾ ಪ್ರಣಾಳಿಕೆಗಳು ಮತದಾರರನ್ನು ಸೆಳೆಯುವ ಉದ್ದೇಶದಿಂದ ರೂಪಿಸಿದ ಭರವಸೆಗಳ ಪಟ್ಟಿಯಂತೆ ಕಾಣಿಸುತ್ತದೆ. ಕಾನೂನಾತ್ಮಕವಾಗಿ ಜಾರಿಗೊಳಿಸಲು ಸಾಧ್ಯವಿಲ್ಲದೇ ಇದ್ದರೂ ಗೆಲ್ಲುವ ಪಕ್ಷ ಪ್ರಣಾಳಿಕೆಯಲ್ಲಿನ ಕೆಲವು ಅಂಶಗಳನ್ನಾದರೂ ಈಡೇರಿಸುವ ಇರಾದೆ ಇಟ್ಟುಕೊಂಡಿರುತ್ತದೆ. ಮತದಾರ ಕೂಡ ಪ್ರಣಾಳಿಕೆಯಲ್ಲಿ ಸೂಚಿಸಿದ ಎಲ್ಲವನ್ನೂ ಈಡೇರಿಸಬೇಕು ಎಂದು ನಿರೀಕ್ಷಿಸುವುದಿಲ್ಲ. ಅಪ್ಪಿತಪ್ಪಿಯೂ ಪ್ರಣಾಳಿಕೆ ವಾಗ್ದಾನ ಎಂದು ಯಾರೂ ಭಾವಿಸುವುದಿಲ್ಲ. ಪ್ರಣಾಳಿಕೆಯ ಅಂಶಗಳ ಈಡೇರಿಕೆ ಅಸಾಧ್ಯವಾಗದೇ ಹೋಗುತ್ತದಲ್ಲ ಎಂಬ ಪಾಪಪ್ರಜ್ಞೆ ಪಕ್ಷಗಳಿಗಿಲ್ಲ. ಅಂತೆಯೇ ಅವುಗಳನ್ನು ಈಡೇರಿಸದೆ ಪಕ್ಷ ಮಾತು ತಪ್ಪಿದೆ ಎಂಬ ಭಾವನೆ ಮತದಾರರಲ್ಲೂ ಇಲ್ಲ.

ಚುನಾವಣಾ ನಂತರ ಏನಾಗುತ್ತದೆ ಎಂಬುದನ್ನು ಬದಿಗಿಟ್ಟರೂ ಪ್ರಣಾಳಿಕೆ ರಚನೆಯ ವಿಷಯದಲ್ಲಿ ಕೆಲವು ಪ್ರಶ್ನೆಗಳು ಮುಖ್ಯವಾಗಬೇಕು. ಅವುಗಳೆಂದರೆ: ರಾಜಕೀಯ ಪಕ್ಷಗಳು ರಾಜ್ಯಕ್ಕಾಗಿ ತಮ್ಮ ಕನಸಿನ ಯೋಜನೆಗಳನ್ನು ರೂಪಿಸುವ ಅವಕಾಶ ಇರುವಾಗ ಅವು ಏನನ್ನು ಕೊಡಲು ಇಚ್ಛಿಸುತ್ತವೆ? ಇಂದಿನ ಮತದಾರರ `ಬೇಕು'ಗಳನ್ನು ಅವು ಕಲ್ಪಿಸಿಕೊಂಡಿದ್ದಾದರೂ ಹೇಗೆ? ಪ್ರಣಾಳಿಕೆಯಲ್ಲಿರುವ ಭರವಸೆಗಳ ಹಿಂದೆ ಪಕ್ಷದ ಸಿದ್ಧಾಂತ ಎಷ್ಟು ಕೆಲಸ ಮಾಡಿದೆ?

ಪ್ರಣಾಳಿಕೆಗಳು ರಾಜ್ಯದ ಸಂಕೀರ್ಣ ಸಮಸ್ಯೆಗಳನ್ನು ತೋರಿಸುವ ಕಿಟಕಿಗಳಿದ್ದಂತೆ. ತಮಗಿರುವ ಬೆಂಬಲವನ್ನು ಉಳಿಸಿಕೊಳ್ಳಲು ಹಾಗೂ ವಿಸ್ತರಿಸಲು ಪಕ್ಷಗಳು ಹೊಸೆಯುವ ತಂತ್ರಗಳಿಗೂ ಅವು ಕನ್ನಡಿ ಹಿಡಿಯುತ್ತವೆ.2013ರ ವಿಧಾನಸಭಾ ಚುನಾವಣೆ ನಿಗದಿಯಾದ ನಂತರ, ಜಾತ್ಯತೀತ ಜನತಾದಳ (ಜೆಡಿಎಸ್) ಹಾಗೂ ಹೊಸದಾಗಿ ಹುಟ್ಟಿದ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಮೊದಲಿಗೆ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿದವು. ಬಿಜೆಪಿ, ಬಿಎಸ್‌ಆರ್ ನಂತರ ಕಾಂಗ್ರೆಸ್ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿದವು. ಎಲ್ಲಾ ಪಕ್ಷಗಳೂ ಸ್ವಚ್ಛ ಹಾಗೂ ಪಾರದರ್ಶಕ ಆಡಳಿತ ಭರವಸೆ ನೀಡುವ ಮೂಲಕ ರಾಜ್ಯದಲ್ಲಿನ ಭ್ರಷ್ಟಾಚಾರದ ತೀವ್ರತೆಯನ್ನು ಸ್ಪಷ್ಟಪಡಿಸಿವೆ.

ಬಹುಪಾಲು ಅಂಶಗಳು ಕೃಷಿ, ಆರೋಗ್ಯ, ಶಿಕ್ಷಣ, ಗೃಹ ನಿರ್ಮಾಣ, ವಿದ್ಯುಚ್ಛಕ್ತಿ, ಸಮಾಜ ಕಲ್ಯಾಣ ಮೊದಲಾದ ಕ್ಷೇತ್ರಗಳನ್ನು ದೃಷ್ಟಿಯಲ್ಲಿಟ್ಟುಕೊಂಡಿವೆ. ಪ್ರಣಾಳಿಕೆಗಳನ್ನು ತುಲನೆ ಮಾಡಿ ನೋಡಿದರೆ, ಜೆಡಿಎಸ್ ಪ್ರಣಾಳಿಕೆಯು ಉಳಿದೆಲ್ಲ ಪಕ್ಷಗಳಿಗಿಂತ ವಿಸ್ತೃತವಾಗಿಯೂ ವಿವರಣಾತ್ಮಕವಾಗಿಯೂ ಇದೆ. ಬಿಜೆಪಿ, ಕೆಜೆಪಿ ಹಾಗೂ ಕಾಂಗ್ರೆಸ್ ಈ ವಿಷಯದಲ್ಲಿ ಕ್ರಮವಾಗಿ ನಂತರದ ಸ್ಥಾನ ಸಂದಿದೆ.

ಜೆಡಿಎಸ್ ಬೆಂಗಳೂರಿಗೆಂದೇ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದ್ದರೆ, ಉಳಿದ ಪಕ್ಷಗಳು ನಗರಕ್ಕೆ ಪ್ರತ್ಯೇಕ ಅಂಶಗಳನ್ನು ಪ್ರಣಾಳಿಕೆಗಳಲ್ಲಿ ಉಲ್ಲೇಖಿಸಿವೆ. ಬೆಂಗಳೂರು ಪ್ರತ್ಯೇಕ ಪ್ರಣಾಳಿಕೆ ಬಯಸುವ ಕ್ಷೇತ್ರಗಳನ್ನು ಅಡಗಿಸಿಟ್ಟುಕೊಂಡಿರುವುದಂತೂ ಸತ್ಯ.

`ಸಿದ್ಧಾಂತಗಳೆಲ್ಲಾ ಮಣ್ಣುಪಾಲಾಗಿವೆ. ಈಗೇನಿದ್ದರೂ ಹಣ, ಶಕ್ತಿ ಪ್ರದರ್ಶನದ ಕಾಲ. ಎಲ್ಲಾ ಪಕ್ಷಗಳದ್ದೂ ಇದೇ ಜಾಯಮಾನ' ಎಂದು ಹಳಹಳಿಸುವವರಿಗೆ ಪ್ರಣಾಳಿಕೆಗಳು ಅಚ್ಚರಿಯನ್ನೊಡ್ಡಿವೆ. ಪಠ್ಯಪುಸ್ತಕಗಳು ಜಾತ್ಯತೀತವಾಗಿರಬೇಕು, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ರೂಢಿಸಬೇಕು ಎಂಬ ಅಂಶಗಳು ಕಾಂಗ್ರೆಸ್ ಪ್ರಣಾಳಿಕೆಯಲ್ಲಿವೆ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ `ರಾಷ್ಟ್ರೀಯತೆ ಹಾಗೂ ನೈತಿಕತೆ'ಯ ಪ್ರಸ್ತಾಪ ಮಾಡಿದೆ.

ಜೊತೆಗೆ ತಾಲ್ಲೂಕುಗಳಲ್ಲಿ ಯುವಕರಿಗಾಗಿ ವಿವೇಕಾನಂದ ಯುವ ನಿರ್ಮಾಣ ಕೇಂದ್ರಗಳನ್ನು ಸ್ಥಾಪಿಸುವ ಅಂಶವನ್ನೂ ಹೇಳಿದೆ. ರಾಜ್ಯದ ಜನಸಂಖ್ಯೆಯ ಶೇ 12ರಷ್ಟು ಇರುವ ಮುಸ್ಲಿಂ ಸಮುದಾಯದ ಬಗೆಗೆ ಪ್ರಣಾಳಿಕೆಗಳಲ್ಲಿ ಏನೂ ಇಲ್ಲ. ಅಲ್ಪಸಂಖ್ಯಾತರ ಆಯೋಗದಲ್ಲಿ ಪ್ರಾತಿನಿಧ್ಯ ಹೆಚ್ಚಿಸುವ ತುಪ್ಪವನ್ನು ಕ್ರಿಶ್ಚಿಯನ್ ಮತಬಾಂಧವರ ಮೂಗಿಗೆ ಪ್ರಣಾಳಿಕೆಗಳ ಮೂಲಕ ಸವರಲಾಗಿದೆ ಅಷ್ಟೆ. ಬಿಜೆಪಿ ತನ್ನ ಹಿಂದುತ್ವ ತತ್ತ್ವಕ್ಕೆ ಈಗಲೂ ಬದ್ಧ.

ಚುನಾವಣಾ ಪ್ರಣಾಳಿಕೆಗಳು ಭರವಸೆಗಳ ಪಟ್ಟಿಗಳಷ್ಟೇ ಅಲ್ಲ. ಅವುಗಳಲ್ಲಿ ಪಕ್ಷಗಳ ಚರಿತ್ರೆ ಹಾಗೂ ಅವುಗಳ ಹಳೆಯ ಸಾಧನೆಗಳೂ ಅಡಕವಾಗಬಲ್ಲದು.  ಮುಖ್ಯಮಂತ್ರಿಯಾಗಿ ಎಸ್.ಎಂ.ಕೃಷ್ಣ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಉತ್ತೇಜಿಸಿದ್ದು ಗೊತ್ತಿರುವ ವಿಷಯ. ಅದರ ಜನಪ್ರಿಯತೆ ಕಾಂಗ್ರೆಸ್‌ಗಷ್ಟೇ ಸಲ್ಲದಿರಲಿ ಎಂಬಂತೆ ಜೆಡಿಎಸ್‌ನ ಬೆಂಗಳೂರು ಪ್ರಣಾಳಿಕೆ ಒಂದು ಅಂಶವನ್ನು ಒಳಗೊಂಡಿದೆ. ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಆ ಕ್ಷೇತ್ರಕ್ಕೆ ತೆರಿಗೆ ವಿನಾಯಿತಿಯನ್ನು ನೀಡಿದ್ದು ಅಭಿವೃದ್ಧಿಗೆ ಕಾರಣವಾಯಿತು ಎಂಬುದೇ ಆ ಅಂಶ. ನಗರ ಮತದಾರರ ಅಗತ್ಯಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಬಲ್ಲ ಏಕೈಕ ಪಕ್ಷ ಎಂಬಂತೆ ಜೆಡಿಎಸ್ ಪ್ರಣಾಳಿಕೆಯಲ್ಲಿ ಬಿಂಬಿಸಿಕೊಂಡಿದೆ.

ಕೆಜೆಪಿ ಪ್ರಣಾಳಿಕೆಯು ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮಾಡಿದ ಸಾಧನೆಗಳನ್ನೆಲ್ಲಾ ತನ್ನದೇ ಎಂದು ಹೇಳಿಕೊಂಡಿದ್ದು, ಅವುಗಳಲ್ಲಿ ಬಿಜೆಪಿ ಪಾಲು ಏನೂ ಇಲ್ಲವೆಂಬಂತೆ ಉಲ್ಲೇಖಿಸಿದೆ. ಪ್ರಾದೇಶಿಕ ಪಕ್ಷ ಎಂದು ಗುರುತಿಸಿಕೊಳ್ಳಲು ಬಯಸಿರುವ ಕೆಜೆಪಿ, ಸಂಯುಕ್ತ ರಾಜಕೀಯ ವ್ಯವಸ್ಥೆಯಲ್ಲಿ ಇಂಥ ಪಕ್ಷದ ಪಾತ್ರಗಳ ಕುರಿತು ಹೇಳಿಕೊಂಡಿದೆ. ಅದಕ್ಕೆ ಸಮರ್ಥನೆ ನೀಡಲೆಂಬಂತೆ ಕುವೆಂಪು ಹಾಗೂ ಗೋಪಾಲಕೃಷ್ಣ ಅಡಿಗರ ಕವನಗಳ ಸಾಲುಗಳನ್ನು ಉಲ್ಲೇಖಿಸಿದೆ. ಬಿಜೆಪಿಯಿಂದ ತಾನು ಹೊರತು ಎಂಬುದನ್ನು ಸ್ಪಷ್ಟಪಡಿಸಲೆಂಬಂತೆ ಧಾರ್ಮಿಕ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಬದ್ಧ ಎಂದು ಹೇಳಿಕೊಂಡಿದೆ.

`ನಮ್ಮ ಸಂಕ್ಷಿಪ್ತ ಇತಿಹಾಸ' ಎಂಬ ವಿಭಾಗದಲ್ಲಿ ಬಿಜೆಪಿ ತನ್ನದು ಗಾಂಧಿ ತತ್ತ್ವಗಳ ನೆಲೆಗಟ್ಟಿನ ಪಕ್ಷ ಎಂದು ನಿಸ್ಸಂಕೋಚವಾಗಿ ಬರೆದುಕೊಂಡಿದೆ. `ಮಹಾತ್ಮಾ ಗಾಂಧಿಯವರ ರಾಮರಾಜ್ಯದ ಕನಸಿನ ಸ್ಫೂರ್ತಿಯಿಂದಲೇ 1952ರಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಜನ ಸಂಘ ಸ್ಥಾಪಿಸಿದರು' ಎಂಬ ಸಾಲೂ ಇದೆ! ಮತಗಳಿಕೆಯ ತಂತ್ರವಾಗಿ ಗಾಂಧೀ ಎಂಬ ಸಂಕೇತವನ್ನು ಬಿಜೆಪಿ ಹೈಜಾಕ್ ಮಾಡಿರುವುದು ಇಲ್ಲಿ ಸ್ಪಷ್ಟ. ಗಾಂಧೀ ತತ್ತ್ವಕ್ಕೆ ಬಿಜೆಪಿ ಸಿದ್ಧಾಂತ ವಿರುದ್ಧವಾದುದು ಎಂಬುದು ಎಂಥವರಿಗೂ ಅರ್ಥವಾಗುವಂಥದ್ದೇ.
ಪಕ್ಷಗಳ ಪ್ರಣಾಳಿಕೆಗಳು ಒಂದರ ಇನ್ನೊಂದು ಪ್ರತಿಧ್ವನಿಗಳಂತೆ ಕಂಡರೂ ತಮ್ಮದೇ ಕೆಲವು ವಿಭಿನ್ನ ಅಂಶಗಳನ್ನೂ ಒಳಗೊಂಡಿವೆ.

ವುಗಳಲ್ಲಿ ಕೆಲವು ಉದಾಹರಣೆಗಳು ಇಲ್ಲಿವೆ:
1.ರಾಜ್ಯದಲ್ಲಿ ಅಣು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವುದಿಲ್ಲ (ಜೆಡಿಎಸ್)
2. ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪ್ರತ್ಯೇಕವಾಗಿಯೇ ಪರಿಹಾರ ಹುಡಕಬೇಕೇ ವಿನಾ ಮಹಿಳಾ ಸಮಸ್ಯೆಗಳ ಸಾಲಿಗೆ ಅವನ್ನು ಸೇರಿಸಬಾರದು (ಕೆಜೆಪಿ)
3. ಕನ್ನಡ ತಂತ್ರಾಂಶ ಅಭಿವೃದ್ಧಿಗೆ ಒಂದು ಸಮಿತಿ ರಚಿಸಲಾಗುವುದು (ಬಿಜೆಪಿ)
4. ಸಾರ್ವಜನಿಕ ಸಾರಿಗೆಯಲ್ಲಿ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್‌ಜಿ) ಬಳಕೆಯನ್ನು ಜಾರಿಗೆ ತರಲಾಗುವುದು (ಕಾಂಗ್ರೆಸ್).

ಅಂಗವಿಕಲರ ಹೋರಾಟದ ಪರಿಣಾಮವೋ ಎಂಬಂತೆ ಎಲ್ಲಾ ಪಕ್ಷಗಳು ವಿಶೇಷ ಸಾಮರ್ಥ್ಯವುಳ್ಳವರಿಗೆ ಉದ್ಯೋಗ ಖಾತರಿಯನ್ನೂ ಪ್ರಣಾಳಿಕೆಗಳಲ್ಲಿ ಉಲ್ಲೇಖಿಸಿವೆ. ಕೆಜೆಪಿ ಹಾಗೂ ಬಿಜೆಪಿ ಲೈಂಗಿಕ ಅಲ್ಪಸಂಖ್ಯಾತರ ಕಲ್ಯಾಣದ ಪ್ರಸ್ತಾಪ ಮಾಡಿದ್ದು, ಅವರಿಗೆ ಮತದಾನದ ಅವಕಾಶ ಕೊಡಬೇಕೆಂದೂ ಹೇಳಿವೆ. (ಈ ಹಕ್ಕು ಈಗಾಗಲೇ ಇದೆ)

ಪ್ರಣಾಳಿಕೆಗಳ ಬಹುಪಾಲು ಅಂಶಗಳು ಮತದಾರರ ನಿರೀಕ್ಷೆಗಳನ್ನು ಕಲ್ಪಿಸಿಕೊಂಡು ರೂಪಿತವಾಗಿವೆ. ಆದರೆ ಅವುಗಳಲ್ಲಿ ಕೆಲವು ಜನಪ್ರಿಯವಾದ ಚುನಾವಣಾ ತಂತ್ರಗಳಾಗಿಯಷ್ಟೇ ಎದ್ದುಕಾಣುತ್ತವೆ. ಬಿಜೆಪಿ ಹಾಗೂ ಕಾಂಗ್ರೆಸ್ ಮಾತ್ರ ಅಂಥ ಅಂಶಗಳನ್ನು ಪ್ರಣಾಳಿಕೆಗಳಲ್ಲಿ ಬರೆದುಕೊಂಡಿವೆ. 25 ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ಕೊಡುವ ಹಾಗೂ ಪದವಿ ಪೂರ್ವ ಹಾಗೂ ಪದವಿ ತರಗತಿಗಳಲ್ಲಿ ಓದುವ ಎಲ್ಲ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್ ಒದಗಿಸುವ ಅಂಶ ಬಿಜೆಪಿ ಪ್ರಣಾಳಿಕೆಯಲ್ಲಿದೆ. ಕಾಂಗ್ರೆಸ್ ಇದೇ ಅಂಶವನ್ನು ಬರೆದುಕೊಂಡಿದ್ದು, 30 ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ಒದಗಿಸುವುದಾಗಿ ಹೇಳಿಕೊಂಡಿದೆ!

ಪ್ರಾಯೋಗಿಕವಾಗಿ ಜಾರಿಗೆ ತರುವುದು ಸಾಧ್ಯವೋ ಇಲ್ಲವೋ ಎಂಬುದನ್ನು ವಿವೇಚಿಸದೆಯೇ ಭಾರತೀಯ ರಾಜಕೀಯ ಕಲ್ಪನಾ ಶಕ್ತಿಗೆ ಅಕ್ಕಿ ಹಾಗೂ ಲ್ಯಾಪ್‌ಟಾಪ್ ಆಮಿಷ ಸೇರಿಕೊಂಡಿದೆ. ಇತ್ತೀಚೆಗೆ ಜಯಲಲಿತಾ ಹಾಗೂ ಅಖಿಲೇಶ್ ಯಾದವ್ ಕೂಡ ಲ್ಯಾಪ್‌ಟಾಪ್ ಕೊಡುವ ಆಶ್ವಾಸನೆ ನೀಡಿದ್ದರು.

(ಲೇಖಕರು ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದಲ್ಲಿ ಬೋಧಕ, ಸಂಶೋಧಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT