ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಧಾರಾವಾಹಿ ಎರಡೂ ನಮ್ಮನೆ

Last Updated 30 ಆಗಸ್ಟ್ 2019, 4:09 IST
ಅಕ್ಷರ ಗಾತ್ರ

ಇದು ಧಾರಾವಾಹಿಗಳ ಜಮಾನ. ಮೊದಲೆಲ್ಲಾ ಧಾರಾವಾಹಿಗಳೆಂದರೆ ಅತ್ತೆ-ಸೊಸೆ ಜಗಳ, ಪ್ರೀತಿ-ಪ್ರೇಮ, ಕುಟುಂಬ ಕಲಹ ಎಂಬುದಷ್ಟೇ ಕಥಾ ವಿಷಯವಾಗಿದ್ದರೆ ಇಂದು ಟ್ರೆಂಡ್ ಬದಲಾಗಿದೆ. ಎಲ್ಲಾ ವರ್ಗದವರನ್ನೂ ಸೆಳೆಯುವಂತಹ ಕಥೆಗಳು ಧಾರಾವಾಹಿ ಲೋಕದಲ್ಲಿ ವಿಹರಿಸುತ್ತಿವೆ. ಅಂತಹದ್ದೇ ವಿಭಿನ್ನ ಕಥೆಯೊಂದಿಗೆ ಕಿರುತೆರೆ ಕ್ಷೇತ್ರಕ್ಕೆ ಹೊಸದಾಗಿ ಸೇರ್ಪಡೆಯಾಗಿರುವುದು ‘ಇವಳು ಸುಜಾತಾ’.

ಸುಜಾತಾ 29 ವರ್ಷದ ವಿಧವೆ. ಆಕೆ ಗಂಡ ಸತ್ತ ಮೇಲೆ ಜೀವನವೇ ಮುಗಿಯಿತು ಎಂದು ಮೂಲೆಯಲ್ಲಿ ಕೂರದೇ ತನ್ನ ಕಾಲ ಮೇಲೆ ತಾನು ನಿಂತು ಸಂಸಾರ ನಿಭಾಯಿಸುವ ಹುಡುಗಿ. ತನ್ನೊಳಗೆ ಆಳವಾದ ನೋವಿದ್ದರೂ ಇನ್ನೊಬ್ಬರಿಗೆ ಸಂತೋಷ ಹಂಚಬೇಕು ಎಂಬ ತುಡಿತವುಳ್ಳ ಮಧ್ಯಮ ವರ್ಗದ ಹುಡುಗಿ ಅವಳು. ನಾಯಕ ಸುಜಾತಾಳಿಗಿಂತ ಮೂರು ವರ್ಷ ಚಿಕ್ಕವನು.ವಿಧವೆ ಹೆಂಗಸು ಹಾಗೂ ಅವಳಿಗಿಂತ ಚಿಕ್ಕವನ ನಡುವೆ ಹುಟ್ಟುವ ಪ್ರೀತಿ, ಆ ಇಬ್ಬರು ಕುಟುಂಬಗಳ ನಡುವೆ ಸಾಗುವ ಕಥೆಯೇ ‘ಇವಳು ಸುಜಾತಾ’.

ಈ ಧಾರಾವಾಹಿ ಸೋಮವಾರದಿಂದ ಸಂಜೆ 5.30ಕ್ಕೆ ಕಲರ್ಸ್ ಕನ್ನಡದಲ್ಲಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಮೊದಲ ದಿನದಿಂದಲೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿರುವ ಧಾರಾವಾಹಿ ಯುವ ಮನಸ್ಸುಗಳನ್ನು ಸೆಳೆಯುತ್ತಿದೆ.

ಸುಜಾತಾ ಪಾತ್ರಕ್ಕೆ ಜೀವ ತುಂಬಿದವರು ಹಿರಿತೆರೆ ನಟಿ ಮೇಘಶ್ರೀ. ಮಾರ್ಚ್ 22, ಕೃಷ್ಣ ತುಳಸಿ, ಕದ್ದು ಮುಚ್ಚಿ, ದಶರಥ ಸಿನಿಮಾಗಳಲ್ಲಿ ನಟಿಸುವ ಮೂಲಕ ಚಂದನವನದಲ್ಲಿ ಮಿಂಚಿದ್ದ ಈ ಸಿಂಪಲ್ ಹುಡುಗಿ ನಾಗಕನ್ನಿಕೆ ಧಾರಾವಾಹಿ ಮೂಲಕ ಕಿರುತೆರೆಗೂ ಪರಿಚಯವಾಗಿದ್ದರು.

ತೀರ್ಥಹಳ್ಳಿ ಮೂಲದ ಇವರು ಶಾಲಾ ದಿನಗಳಿಂದಲೂ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಎಚ್ಎಎಲ್ ಶಾಲೆಯಲ್ಲಿ ಓದುತ್ತಿದ್ದಾಗ ಎಚ್ಎಎಲ್ ಕಲಾವಿದರ ಸಂಘದಲ್ಲಿ ಎರಡು ವರ್ಷ ನಾಟಕಗಳಲ್ಲಿ ಅಭಿನಯಿಸಿದ್ದರು. 10ನೇ ತರಗತಿಯಲ್ಲಿ ಓದುತ್ತಿದ್ದಾಗಲೇ ನಟಿಯಾಗುವ ಅವಕಾಶ ಇವರನ್ನು ಹುಡುಕಿಕೊಂಡು ಬಂದಿತ್ತು.

ತೆಲುಗು ಸಿನಿಮಾಗಳ ಮೂಲಕ ನಟನೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದ ಇವರು‘ಅನಗನಗಾ ಒಕ್ಕ ಚಿತ್ರಂ’, ‘ಓ ಮೈ ಗಾಡ್’, ‘ಕಾಕಿ’ ಸೇರಿದಂತೆ ಇನ್ನೂ ಕೆಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

‘ನಾಗಕನ್ನಿಕೆ’ ಧಾರಾವಾಹಿಯಾದ ಮೇಲೆ ಒಂದು ವರ್ಷ ಕಿರುತೆರೆಯಿಂದ ದೂರವಿದ್ದ ಇವರು, ಈಗ ಮತ್ತೆ ಸುಜಾತಾ ಪಾತ್ರದ ಮೂಲಕ ಕಿರುತೆರೆಯಲ್ಲಿ ಸದ್ದು ಮಾಡುತ್ತಿದ್ದಾರೆ.

‘ನನಗೆ ಕಿರುತೆರೆ ಹಾಗೂ ಹಿರಿತೆರೆ ಎಂಬ ಭೇದವಿಲ್ಲ. ಕೃಷ್ಣ ತುಳಸಿ, ಮಾರ್ಚ್ 22 ಸಿನಿಮಾ ಮಾಡುತ್ತಿರಬೇಕಾದರೆ ‘ನಾಗಕನ್ನಿಕೆ’ ಧಾರಾವಾಹಿಯಲ್ಲಿ ನಟಿಸುತ್ತಿದ್ದೆ. ಅದರೊಂದಿಗೆ ಕಳೆದ ಸೀಸನ್ ಬಿಗ್‌ಬಾಸ್‌ನಲ್ಲೂ ಭಾಗವಹಿಸಿದ್ದೆ. ಈಗ ಮತ್ತೆ ಕಿರುತೆರೆಗೆ ಬಂದಿದ್ದೇನೆ. ನಾನು ನಟಿಸಲು ಆರಂಭಿಸಿದ ದಿನಗಳಿಂದಲೂ ಎರಡೂ ಕ್ಷೇತ್ರಗಳನ್ನು ಸಮಾನವಾಗಿ ಕಂಡಿದ್ದೇನೆ. ಮುಂದೆ ಕೂಡ ಹಾಗೆ ಇರುತ್ತೇನೆ’ ಎನ್ನುವ ಮೂಲಕ ನಟನೆಯ ಮೇಲೆ ಇರುವ ಪ್ರೀತಿಯನ್ನು ಅಭಿವ್ಯಕ್ತಗೊಳಿಸುತ್ತಾರೆ.

ಇಂದು ಸಿನಿಮಾ ಹಾಗೂ ಸಿರಿಯಲ್ ಎಂಬ ಭೇದವಿಲ್ಲ. ಸಿನಿಮಾದವರು ಧಾರಾವಾಹಿಗಳಲ್ಲಿ ನಟಿಸುತ್ತಾರೆ, ಧಾರಾವಾಹಿಯವರು ಸಿನಿಮಾಗಳಲ್ಲಿ ನಟಿಸುತ್ತಾರೆ. ಕರ್ನಾಟಕದ ಮಂದಿ ಸಿನಿಮಾಗಳಷ್ಟೇ ಧಾರಾವಾಹಿಗಳನ್ನು ಇಷ್ಟಪಡುತ್ತಾರೆ. ನಟನಾದವನಿಗೆ ಎರಡೂ ಕಡೆ ಸ್ಕೋಪ್ ಇರಬೇಕಾದ್ರೆ, ಯಾಕೆ ಎರಡೂ ಕಡೆ ನಮ್ಮ ನಟನಾ ಚಾತುರ್ಯ್ಯವನ್ನು ತೋರಬಾರದು ಎಂಬುದು ಇವರ ಮಾತು.

ಮೇಘಶ್ರೀ ಇಲ್ಲಿಯವರೆಗೆ ನಟಿಸಿದ ಸಿನಿಮಾ, ಧಾರಾವಾಹಿಗಳಲ್ಲಿ ತುಂಬಾ ಭಿನ್ನವಾದ ಪಾತ್ರಗಳಲ್ಲೇ ನಟಿಸಿದ್ದು, ಚಾಲೆಂಜಿಂಗ್ ಪಾತ್ರಗಳಿಗೆ ಬಣ್ಣ ಹಚ್ಚುವುದು ಇವರಿಗೆ ಇಷ್ಟ. ನಟನೆಗೆ ಬಂದಿಲ್ಲವೆಂದರೆ ಪೊಲೀಸ್ ಇಲಾಖೆ ಇಲ್ಲವೆ, ಮಿಲಿಟರಿಯಲ್ಲಿ ಕೆಲಸ ಮಾಡಬೇಕು ಎಂಬುದು ಇವರ ಕನಸಾಗಿತ್ತು.

ಸದ್ಯಕ್ಕೆ ಮೇಘಶ್ರೀ ‘ಇವಳು ಸುಜಾತಾ’ದೊಂದಿಗೆನಟ ಚಿರಂಜೀವಿಸರ್ಜಾ ಜೊತೆ ‘ರಾಜ ಮಾರ್ತಂಡ’ ಸಿನಿಮಾದಲ್ಲಿ ನಟಿಸುತ್ತಿದ್ದು, ‘ರಿದಂ’ ಹೆಸರಿನ ಚಿತ್ರದ ಶೂಟಿಂಗ್ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT