ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಸಂಕಟ | ಆತ್ಮನಿರ್ಭರವಲ್ಲ ; ಆತ್ಮದುರ್ಭರ

Last Updated 18 ಜುಲೈ 2020, 19:30 IST
ಅಕ್ಷರ ಗಾತ್ರ

ಚಲನಚಿತ್ರ ಎಂಬ ಪದದಲ್ಲೇ ಚಲನೆ ಎಂಬ ಪರಿಭಾಷೆ ಇದೆ. ಅದು ಆಧುನಿಕ ಕಾಲದ ಅಭಿವ್ಯಕ್ತಿಯ ಆತ್ಮಗಳಲ್ಲೊಂದು. ಆದ್ದರಿಂದಲೇ ಅದು ಅವಿನಾಶಿ ಕೂಡಾ. ಯುದ್ಧ, ರೋಗರುಜಿನಗಳು ಬಂದೆರಗಿದರೂ ಅದು ಚಲಿಸುತ್ತ ಹೊಸ ಸ್ವರೂಪದಲ್ಲಿ ಮರುಹುಟ್ಟು ಪಡೆಯುತ್ತದೆಯೇ ಹೊರತು ನಾಶವಾಗಲಾರದು. ವಿಶಾಲ ಪರದೆಯಿಂದ ಟಿವಿ ಪರದೆಗೆ, ಟಿವಿ ಪರದೆಯಿಂದ ಮೊಬೈಲ್ ಪರದೆಗೆ ಸಂಕುಚಿತಗೊಳ್ಳಬಹುದು, ಮತ್ತೆ ಸಣ್ಣ ಪರದೆಯಿಂದ ವಿಶಾಲಪರದೆಗೆ ಮರುಪ್ರಯಾಣ ಕೈಗೊಳ್ಳಬಹುದು. ಇಂದು ಕೊರೊನಾ ದಾಳಿಯಿಂದ ಇಡೀ ಜಗತ್ತಿನ ಚಲನಚಿತ್ರ ಉದ್ಯಮವು ಇತರ ಅನೇಕ ಉದ್ಯಮಗಳಂತೆ ತತ್ತರಿಸಿ ಹೋಗಿದೆ. ತನ್ನ ಹುಟ್ಟಿದಾರಭ್ಯ ಸಿನಿಮಾ ಇಂಥ ಬಹು ಕಾಲದ ಸ್ಥಾಗಿತ್ಯ ಮತ್ತು ನಷ್ಟ ಅನುಭವಿಸಿದ್ದಿಲ್ಲ.

ಇಲ್ಲಿ ನಿರ್ಮಾಪಕ, ನಿರ್ದೇಶಕ, ಕಲಾವಿದ, ತಂತ್ರಜ್ಞ, ಪ್ರದರ್ಶಕ, ವಿತರಕ ಹೀಗೆ ಆರು ಅಂಗಗಳಿವೆ. ಈ ಆರು ಅಂಗಗಳೂ ಈಗ ಗಾಯಗೊಂಡಿವೆ. ರಥದ ಎಲ್ಲ ಗಾಲಿಗಳು ಮುರಿದುಬಿದ್ದ ಸ್ಥಿತಿ ಇದು. ಉತ್ಪನ್ನ - ಮಾರುಕಟ್ಟೆ ಎರಡೂ ಏಕಕಾಲಕ್ಕೆ ನಿಂತು ಹೋಗಿವೆ. ಸಿನಿಮಾ ಬಿಟ್ಟು ಬೇರೇನೂ ಗೊತ್ತಿಲ್ಲದವರಿಗೆ ಇದು ದಾರುಣ ಸ್ಥಿತಿ. ನಿರ್ಮಾಪಕರಲ್ಲಿ ಬಹುತೇಕರು ಬಡ್ಡಿಗೆ ಹಣ ತಂದು ಸಿನಿಮಾ ಮಾಡುವವರು. ಅನ್ನದಾತನೆಂದು ಗೌರವಿಸಲ್ಪಡುತ್ತಿದ್ದ ನಿರ್ಮಾಪಕ ಈಗ ಅಕ್ಕಿ ಬೇಳೆ, ಸಕ್ಕರೆಯ ಉಚಿತ ಕಿಟ್ ಪಡೆಯಲು ಕ್ಯೂ ನಿಂತಿರುವುದು ವಿಡಂಬನಾತ್ಮಕವಾಗಿಯೂ, ಕಠೋರ ವಾಸ್ತವವಾಗಿಯೂ ಕಾಣಿಸುತ್ತಿದೆ. ಹೆಚ್ಚಿನ ನಿರ್ಮಾಪಕರು ಕೇವಲ ವ್ಯಾಪಾರ ಎಂದು ಪರಿಭಾವಿಸಿ ಲಾಭಕೋರತನದಿಂದ ಇಲ್ಲಿಗೆ ಬಂದವರಲ್ಲ. ಶೇಕಡಾ ತೊಂಬತ್ತು ಮಂದಿ ಲಾಭ ಗಳಿಸಿದವರೂ ಅಲ್ಲ. ಕನಸು ಮತ್ತು ಭ್ರಮೆಗಳ ನಡುವೆ ಸಂಚರಿಸುತ್ತಾ ವಿಚಿತ್ರ ಮೋಹದಿಂದ ಬಂದವರು. ಇದ್ದ ಮನೆ, ಆಸ್ತಿ ಮಾರಿ ಚಿತ್ರ ನಿರ್ಮಾಣಕ್ಕೆ ಧುಮುಕುವವರು ಅನೇಕ ಮಂದಿ. ಸಿನಿಮಾ ಮಾಡುವ ಮುನ್ನ ಮಾರುತ್ತಾರೋ, ಮಾಡಿದ ಮೇಲೆ ಮಾರುತ್ತಾರೋ - ಅಂತೂ ಮಾರಿ ಬೀದಿಗೆ ಬರುವ ಅಮಾಯಕರೇ ಅನೇಕ.

ನಿರ್ಮಾಪಕ ಎಂಥ ದುರ್ದೈವಿ ಎಂದರೆ ತನ್ನ ಚಿತ್ರಗಳ ಹಕ್ಕನ್ನು ಬರೆದುಕೊಟ್ಟು ಬರಿಗೈ ಆಗುತ್ತಾನೆ. ಬರೆಸಿಕೊಳ್ಳುವ ಜಾಣರು ನೂರು ವರ್ಷ ಮುಂದೆ ಬರುವ ಟೆಕ್ನಾಲಜಿಗಳನ್ನು ಸೇರಿಸಿ ಹಕ್ಕು ಬರೆಸಿಕೊಳ್ಳುತ್ತಾರೆ. ಇದೀಗ ನಿರ್ಮಾಪಕರ ಸಂಘ ಕೋರ್ಟ್ ಮೆಟ್ಟಿಲೇರಿದೆ. ಚಲನಚಿತ್ರವನ್ನು ಮಾರುವ ಸಂದರ್ಭದಲ್ಲಿ ಅಸ್ತಿತ್ವದಲ್ಲಿರುವ ಟೆಕ್ನಾಲಜಿಗಳಿಗೆ ಮಾತ್ರ ಹಕ್ಕುಗಳು ಸೀಮಿತವಾಗಿರಬೇಕು. ಅವನ ಆರ್ಥಿಕ ದುರವಸ್ಥೆಯ ದುರ್ಲಾಭವನ್ನು ಟಿವಿ ಮತ್ತು ಒಟಿಟಿ ಮಾಧ್ಯಮಗಳು ಪಡೆದುಕೊಳ್ಳಬಾರದು. ಇದಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿರುವುದು ನಿರ್ಮಾಪಕರಿಗೆ ನಿಟ್ಟುಸಿರುಬಿಡುವಂತಾಗಿದೆ. ನಿರ್ಮಾಪಕನದು ಆರ್ಥಿಕ ನಾಯಕತ್ವವಾದರೆ ನಿರ್ದೇಶಕನದು ಸೃಜನಶೀಲ ನಾಯಕತ್ವ. ಈ ಜೋಡಿ ದಿಕ್ಕೆಟ್ಟಿದೆ. ತರುಣ ನಿರ್ದೇಶಕರು, ಸಹ ನಿರ್ದೇಶಕರ ಸಂಕಟಗಳನ್ನು ಹೇಳುವಂತೆಯೇ ಇಲ್ಲ.

ಕ್ಯಾಮೆರಾ, ಸ್ಟುಡಿಯೊ, ಲ್ಯಾಬ್ ಮತ್ತಿತರ ಸಲಕರಣೆಗಳ ಮೇಲೆ ಹಣ ಸುರಿದ ಉದ್ಯಮಿಗಳದು ಶೋಚನೀಯ ಸ್ಥಿತಿ. ಒಂದು ಸುಸಜ್ಜಿತ ಕ್ಯಾಮೆರಾ ಕೊಳ್ಳಲು ಕೋಟ್ಯಂತರ ರೂಪಾಯಿ ಸುರಿದಿರುವ ವ್ಯಕ್ತಿ ಅದನ್ನು ಇರಿಸಿಕೊಳ್ಳಲೂ ಆಗದು, ಮಾರಲೂ ಆಗದು. ಸಲಕರಣೆಗಳು ನಿರುಪಯುಕ್ತವಾಗುತ್ತಿದ್ದಂತೆ ತಂತ್ರಜ್ಞನೂ ನಿರುಪಯುಕ್ತ. ಕೆಲಸವಿಲ್ಲದ ಛಾಯಾಗ್ರಾಹಕ, ಸಂಕಲನಕಾರ, ಸಿ.ಜಿ ಪರಿಣಿತ, ಕಲಾ ನಿರ್ದೇಶಕ, ನೃತ್ಯ ನಿರ್ದೇಶಕ, ಸಾಹಸ ನಿರ್ದೇಶಕ.. ಈ ಪಟ್ಟಿ ಬಹಳ ದೊಡ್ಡದು.

ಕಾರ್ಮಿಕರ ಬದುಕು ಅಸಹನೀಯ

ಕಾರ್ಮಿಕರಲ್ಲಿ ಕಟ್ಟಕಡೆಯ ವ್ಯಕ್ತಿಯ ಬದುಕು ಅಸಹನೀಯಾಗಿದೆ. ಇದು ಮಧ್ಯವಯಸ್ಕರಾಗಿಯೂ ಲೈಟ್ ಬಾಯ್ಸ್, ಪ್ರೊಡಕ್ಷನ್ ಬಾಯ್‌ಗಳೆಂದು ಕರೆಯಲ್ಪಡುವ ಕಾರ್ಮಿಕ ವರ್ಗ. ಸಿನಿಮಾ - ಕಿರುತೆರೆ ಮಾಧ್ಯಮಗಳಿಂದ ಅಂದಾಜು ಹನ್ನೆರಡು ಸಾವಿರ ಕಾರ್ಮಿಕರು ತಬ್ಬಲಿಗಳಾಗಿದ್ದಾರೆ. ಈ ತಬ್ಬಲಿತನಕ್ಕೆ ಮೊದಲನೆಯದು ಕೊರೊನಾ ದಾಳಿ. ಎರಡನೆಯದು ಡಬ್ಬಿಂಗ್. ಡಬ್ಬಿಂಗ್‍ಗೆ ಕಂಠದಾನ ಕಲಾವಿದರನ್ನು ಹೊರತುಪಡಿಸಿ ಯಾರೂ ಬೇಕಿಲ್ಲ. ಲಾಭಕೋರ ಉದ್ದಿಮೆದಾರರಿಗೆ ಕಾನೂನು ಸಾಥ್ ನೀಡಿದೆ. ಡಬ್ಬಿಂಗ್ ವಿರೋಧಿಗಳಿಗೆ ಸುಪ್ರೀಂ ಮೆಟ್ಟಿಲು ಹತ್ತುವ ಶಕ್ತಿ ಇಲ್ಲ. ನೆಲೆ ತಪ್ಪಿರುವ ಕಾರ್ಮಿಕರು ಸ್ವರೂಪವನ್ನು ಬದಲಿಸಿಕೊಂಡು ಸಹಕಾರಿ ತತ್ವದ ಮೂಲಕ ಸಂಘಟಿತರಾಗಿ ತಮ್ಮ ಕ್ಷೇಮಾಭ್ಯುದಯವನ್ನು ನೋಡಿಕೊಳ್ಳಬೇಕಾಗಿದೆ. ಈ ದಿಸೆಯಲ್ಲಿ ಕಾರ್ಮಿಕ ನಾಯಕರು ಚಿಂತನೆ ನಡೆಸುತ್ತಿದ್ದಾರೆ. ಕೊರೊನಾ ದಾಳಿಯ ಸನ್ನಿವೇಶವನ್ನು ದುರುಪಯೋಗ ಮಾಡಿಕೊಂಡು ಡಬ್ಬಿಂಗ್ ಧಾರಾವಾಹಿಗಳು, ಡಬ್ಬಿಂಗ್ ಸಿನಿಮಾಗಳು ಟಿವಿಯಲ್ಲಿ ರಾರಾಜಿಸತೊಡಗಿವೆ.

ಕೆಲವು ಏಕಪರದೆಯ ಚಿತ್ರಮಂದಿರಗಳು ಮುಚ್ಚಿಹೋಗಲಿವೆ ಎಂಬ ವದಂತಿ ಕೇಳಿಬರುತ್ತಿದೆ. ಅವುಗಳ ನಿರ್ವಹಣೆಯನ್ನು ನೋಡಿದರೆ ಅವು ಮುಚ್ಚಿಹೋಗುವುದೇ ಸರಿ. ಆದರೆ ಚಿತ್ರಮಂದಿರದ ಭವ್ಯ ಪರದೆಯ ಮೇಲೆ ಸಿನಿಮಾ ನೋಡುವ ಕೌತುಕ ಅಳಿಯಲಾರದು; ಅಳಿಯಬಾರದು. ತಮ್ಮ ಚಿತ್ರಮಂದಿರಗಳನ್ನು ವಿಶೇಷ ಆಸಕ್ತಿಯಿಂದ ಅಚ್ಚುಕಟ್ಟಾಗಿ ನಡೆಸುವ ಕೆಲವು ಮಾಲೀಕರಿದ್ದಾರೆ. ಜನತಾ ಮಂದಿರ ಕಟ್ಟಲು ಸರ್ಕಾರ ₹50 ಲಕ್ಷ ಸಬ್ಸಿಡಿ ಕೊಡುತ್ತದೆ, ನವೀಕರಿಸಲು ₹25 ಲಕ್ಷ ಕೊಡುತ್ತದೆ. ಆದರೂ ಈ ಯೋಜನೆ ಫಲಪ್ರದವಾಗಿಲ್ಲ; ಕಾರಣ ಸರ್ಕಾರದ ಸಂಕೀರ್ಣ ನಿಯಮಾವಳಿಗಳು. ಅದನ್ನು ಏಕಗವಾಕ್ಷಿಯ ಸರಳ ಸೂತ್ರಗಳಿಗೆ ಅಳವಡಿಸಿದರೆ ಈ ಯೋಜನೆ ನಿಜಕ್ಕೂ ಉಪಯುಕ್ತವಾಗಬಲ್ಲುದು.

‘ಚಿತ್ರಮಂದಿರಗಳಲ್ಲೇ ಚಿತ್ರ ನೋಡಿ’ ಎಂಬ ಪರಂಪರೆ ಉಳಿಸಬೇಕಾದವರು ತಾರೆಗಳು. ಮೊದಲ ಪ್ರದರ್ಶನಕ್ಕಾಗಿ ಕ್ಯೂ ನಿಲ್ಲುವ ಅಭಿಮಾನಿ ಸಮೂಹ ಹೊಂದಿದ ತಾರೆಗಳಿಂದ ಮಾತ್ರ ಇದು ಸಾಧ್ಯ. ಇದಕ್ಕಾಗಿ ತಾರೆಗಳು ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಬೇಕೆಂಬ ವಾದವೂ ಇದೆ. ಆದರೆ ಇದು ಪ್ರಾಯೋಗಿಕ ಅಲ್ಲ. ಒಂದು ಕಾಲದಲ್ಲಿ ವರ್ಷಕ್ಕೆ ರಾಜ್‍ಕುಮಾರ್ ಅವರ 12 ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಆ ಸಂದರ್ಭವೇ ಬೇರೆ. ಕಥೆ, ನಿರ್ಮಾಣ ಸಂಸ್ಥೆ, ನಿರ್ಮಾಣದ ಶೈಲಿ, ತನ್ನ ವರ್ಚಸ್ಸು, ಆರೋಗ್ಯ ಇತ್ಯಾದಿಗಳನ್ನು ಅವಲಂಬಿಸಿ, ತಾರೆಗಳು ತಮ್ಮ ಚಿತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಕಲಾವಿದನಿಗೆ ಆಯ್ಕೆಯ ಸ್ವಾತಂತ್ರ್ಯ ಇದ್ದೇ ಇರುತ್ತದೆ. ಪ್ರತಿ ತಾರೆಯೂ ಸಮಕಾಲೀನ ತಾರೆಯಿಂದ ಪೈಪೋಟಿ, ತನ್ನ ಯಶಸ್ಸು ಕಾಪಾಡಿಕೊಳ್ಳುವ ಇರಾದೆ, ತನ್ನ ಅಭಿಮಾನಿಗಳನ್ನು ತಣಿಸುವ ಆತಂಕದಲ್ಲಿರುತ್ತಾರಾದ್ದರಿಂದ ಸಂಖ್ಯೆಯನ್ನು ತಾರೆಯರ ಮೇಲೆ ಹೇರುವುದು ಅಪ್ರಾಯೋಗಿಕ. ಆದರೆ ಈಗ ನಿಜಕ್ಕೂ ಸಂಕಷ್ಟದಲ್ಲಿರುವವರು ಸಹಕಲಾವಿದರು, ಪೋಷಕ ಕಲಾವಿದರು. ಅರವತ್ತು ದಾಟಿದ ಹಿರಿಯ ಕಲಾವಿದರ ಭವಿಷ್ಯ ಅನಿಶ್ಚಿತವಾಗಿದೆ.

ವಿಮೆ ಕಡ್ಡಾಯವಾಗಲಿ

ಚಿತ್ರೀಕರಣ ತಾಣಗಳಲ್ಲಿ ನಾಲ್ಕಾರು ವ್ಯಾನಿಟಿ ವ್ಯಾನ್‍ಗಳು, ಕಾರವಾನ್‍ಗಳು ನಿಂತಿರುವುದು ಈಗ ಪ್ರತಿಷ್ಠೆಯ ಸಂಕೇತ. ಆದರೆ ಒಂದು ಸರಳವಾದ ಪ್ರಥಮ ಚಿಕಿತ್ಸೆಯ ಕಿಟ್ ಇರುವುದಿಲ್ಲ. ಇನ್ನು ಮುಂದಾದರೂ ಚಿತ್ರೀಕರಣ ಜಾಗದಲ್ಲಿ ಅಗತ್ಯ ವೈದ್ಯಕೀಯ ಸಲಕರಣೆ, ಒಬ್ಬ ವೈದ್ಯ ಇರುವುದು ಅಗತ್ಯ. ಪ್ರತಿ ಸೆಟ್‍ಗೂ ವಿಮೆ ಕಡ್ಡಾಯವಾಗಬೇಕು. ಆಹಾರ ತಯಾರಿಕೆ, ಸರಬರಾಜು, ಕುಡಿಯುವ ನೀರು ಇವುಗಳ ವಿಷಯದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕಿದೆ. ಇದೇ ಅಂಶ ಚಿತ್ರ ಮಂದಿರಗಳಿಗೂ ಅನ್ವಯವಾಗುತ್ತದೆ. ಚಲನಚಿತ್ರ ಕ್ಷೇತ್ರದ ಎಲ್ಲಾ ವಿಭಾಗಗಳ ಗಣ್ಯರು, ಪರಿಣಿತರು ಕೂಡಿ ಚಿತ್ರ ನಿರ್ಮಾಣದ ಸಂಖ್ಯೆಯನ್ನು ತಗ್ಗಿಸಿ ಗುಣಮಟ್ಟಕ್ಕೆ ಒತ್ತು ಕೊಡುವ ದಿಸೆಯಲ್ಲಿ ಕಾರ್ಯಸೂಚಿಯನ್ನು ಕಂಡುಕೊಳ್ಳಬೇಕಿದೆ.

ಪವನ್ ಕುಮಾರ್ ಕ್ರಿಯಾತ್ಮಕ ನಿರ್ದೇಶಕರನ್ನೊಳಗೊಂಡ ಎಫ್.ಯು.ಸಿ ಸಂಘಟನೆ ಆರಂಭಿಸಿದ್ದಾರೆ. ಕೊರೊನಾ ಹಾವಳಿಯ ನಡುವೆ ಚಿತ್ರರಂಗದಲ್ಲಿ ಸಂಭವಿಸಿರುವ ಉಪಯುಕ್ತವಾದ ಸಾಂಘಿಕ ಕೆಲಸ ಇದು. ಈ ಸಂಘಟನೆ ಸೃಜನಶೀಲ ಸಾಧ್ಯತೆಯ ಅನ್ವೇಷಣೆಯಷ್ಟೇ ಮುಖ್ಯವಾಗಿ ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆಯ ವಿಸ್ತಾರಕ್ಕೆ ಶ್ರಮಿಸಬೇಕಾಗಿದೆ. ಈಗ ಇರುವ ರಾಷ್ಟ್ರೀಯ, ಅಂತರರಾಷ್ಟ್ರೀಯ ಒಟಿಟಿ ವೇದಿಕೆಗಳು ಕನ್ನಡ ಸಿನಿಮಾಗಳನ್ನು ತಾತ್ಸಾರದಿಂದ ನೋಡುತ್ತಿವೆ. ಕನ್ನಡಕ್ಕೆ ಸುಭದ್ರ ಮತ್ತು ಸ್ಥಳೀಯ ಮಾರುಕಟ್ಟೆಯನ್ನು ಹುಟ್ಟುಹಾಕದಿದ್ದರೆ ನಮಗೆ ಉಳಿಗಾಲವಿಲ್ಲ. ನನ್ನ ಇತ್ತೀಚಿನ ಚಿತ್ರ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಉತ್ತಮ ವಿತರಕರು, ಉತ್ತಮ ಚಿತ್ರಮಂದಿರಗಳು ದೊರಕಿಯೂ ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರಲಿಲ್ಲ. ಆದರೆ ಅಮೆಜಾನ್ ಪ್ರೈಂನ ಒಟಿಟಿ ಮೂಲಕ ಲಕ್ಷಾಂತರ ಜನರನ್ನು ತಲುಪಲು ಸಾಧ್ಯವಾಯಿತು. ಆದರೆ ಒಮ್ಮೆ ಒಟಿಟಿಯಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಪೈರಸಿ ಆರಂಭವಾಗಿಬಿಡುತ್ತದೆ. ಯೂಟ್ಯೂಬ್‍ನಲ್ಲಿ ಪೈರಸಿ ತಡೆಯಲು ಕಾವಲುಪಡೆಯನ್ನೇ ನೇಮಿಸಬೇಕಾಗುತ್ತದೆ. ಕೆಲವು ಪ್ರೇಕ್ಷಕರು ಪೈರಸಿಗಾಗಿಯೇ ಕಾದು ಕುಳಿತಿರುತ್ತಾರೆ. ಈ ಮನಸ್ಥಿತಿ ಕನ್ನಡದಂಥ ಪುಟ್ಟ ಮಾರುಕಟ್ಟೆಗೆ ಬಹಳ ಮಾರಕ. ಒಂದು ಕಡೆ ತನ್ನದೇ ಕಾರಣಗಳಿಂದ ಚಿತ್ರಮಂದಿರಕ್ಕೆ ಬರಲೊಪ್ಪದ ಪ್ರೇಕ್ಷಕ, ಇನ್ನೊಂದು ಕಡೆ ಒಟಿಟಿಯಲ್ಲೂ ಪೈರಸಿ ಬಯಸುವ ಪ್ರೇಕ್ಷಕ - ಈ ಎರಡು ವರ್ಗದ ಪ್ರೇಕ್ಷಕರು ಗಮನಾರ್ಹ ಸಂಖ್ಯೆಯಲ್ಲಿದ್ದಾರೆಂಬುದು ಆತಂಕಕಾರಿಯ ವಿಷಯ.

ಜಗತ್ತು ಕೊರೊನಾದಿಂದ ತಲ್ಲಣಿಸಿಹೋಗಿದೆ. ತಾತ್ಕಾಲಿಕವಾದರೂ ಇದು ದುರ್ಭರ ಸ್ಥಿತಿ. ಮತ್ತೆ ಹೊಸ ದಿನಗಳು ಬಂದೇ ಬರುತ್ತವೆ. ಮುರಿದುಬಿದ್ದ ಬದುಕನ್ನ ದುರಸ್ತಿ ಮಾಡಿಕೊಂಡು ಆತ್ಮದುರ್ಭರತೆಯಿಂದ ಆತ್ಮನಿರ್ಭರತೆಯ ಕಡೆಗೆ ಚಲಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT