ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಾಚಾರಿ 2.0 ಸಿನಿಮಾ ವಿಮರ್ಶೆ | ಬುದ್ಧಿವಂತ ರಾಮಾಚಾರಿಯ ಕರ್ಮ ಸಿದ್ಧಾಂತ

Last Updated 8 ಏಪ್ರಿಲ್ 2023, 9:48 IST
ಅಕ್ಷರ ಗಾತ್ರ

ಮಳವಳ್ಳಿಯಿಂದ ಬೆಂಗಳೂರಿಗೆ ಬಂದ ರಾಮಾಚಾರಿಗೆ ಕಂಡದ್ದನ್ನೆಲ್ಲಾ ಆಳವಾಗಿ ಅರಿಯುವ ಕುತೂಹಲ. ಅತಿಯಾದ ಕುತೂಹಲ ಎಂದರೂ ತಪ್ಪಲ್ಲ. ಅದು ಸುತ್ತಮುತ್ತಲಿನವರಿಗೆ ಅರ್ಥವಾಗಬೇಕಾದರೆ ರಾಮಾಚಾರಿಯ ಆಲೋಚನೆ ಮತ್ತು ಕಾರ್ಯರೂಪಕ್ಕಿಳಿಸುವ ಪ್ರಕ್ರಿಯೆ ಹತ್ತಾರು ಮೈಲಿ ಮುಂದಕ್ಕೆ ಹೋಗಿರುತ್ತದೆ.

ಒಂದೇ ರೀತಿಯ ಘಟನೆಗಳು ಎರಡು ತಲೆಮಾರುಗಳಲ್ಲಿ ಹೇಗೆ ಘಟಿಸುತ್ತವೆ ಎಂಬುದನ್ನು ಹುಡುಕುತ್ತಾ ಸಾಗುತ್ತಾನೆ ರಾಮಾಚಾರಿ. ಈ ನಡುವೆ ಬಾಡಿಗೆ ಮನೆಯ ಒಡತಿಯ ಚಿನ್ನ ಕದಿಯುವುದು, ಅದನ್ನು ಬಚ್ಚಿಡುವ ನೆಪದಲ್ಲಿ ಮಂಡ್ಯದ ಹಳ್ಳಿ, ಚಿತ್ರದುರ್ಗ ಸುತ್ತುವುದು, ತನ್ನ ಹಿಂದಿನ ತಲೆಮಾರನ್ನು ಪತ್ತೆ ಹಚ್ಚುವುದು ಚಿತ್ರದಲ್ಲಿ ಕಾಣುವ ರಾಮಾಚಾರಿಯ ಬುದ್ಧಿವಂತಿಕೆ.

ಕೊನೆಗೂ ಕದ್ದ ಚಿನ್ನವು ಅಗತ್ಯವುಳ್ಳವರಿಗೆ ಸಿಕ್ಕಿತೇ? ರಾಮಾಚಾರಿಗೆ ನಂದಿನಿ ಹೇಗೆ ಒಲಿದಳು ಎಂಬುದು ಚಿತ್ರದ ಕಥೆ. ಚಿನ್ನ ಕಳ್ಳತನ ಮಾಡಿ ಅದನ್ನು ಯಾರದೋ ತಲೆಗೆ ಕಟ್ಟಿ ತಪ್ಪಿಸಿಕೊಳ್ಳುವುದು ರಾಮಾಚಾರಿಯ ‘ಬುದ್ಧಿವಂತಿಕೆ’. ಒಂದೇ ರೀತಿಯ ಘಟನೆಗಳು ಮರುಕಳಿಸುವುದು, ಕರ್ಮದ ಫಲ ಬೆಂಬಿಡದೆ ಕಾಡಿ ಕೊನೆಗೂ ಮುಂದುವರಿಯುವುದು ಚಿತ್ರ ಹೇಳಿದ ಕರ್ಮ ಸಿದ್ಧಾಂತ. ಯಾವುದೇ ತರ್ಕ ಪ್ರಶ್ನಿಸದೆ, ಕಥೆಯ ಹರಿವು, ಒಂದಕ್ಕೊಂದು ಕೊಂಡಿ ಎಲ್ಲಿದೆ ಎಂದೆಲ್ಲಾ ಹುಡುಕುವುದಿಲ್ಲವೆಂದಾದರೆ ಎರಡೂವರೆ ಗಂಟೆ ಕಳೆಯಲಡ್ಡಿಯಿಲ್ಲ.

ನಾಯಕನ ಹೀರೋಯಿಸಂಗೆ ನಾಯಕನ ಗೆಳೆಯ (ವಿಜಯ್‌ ಚೆಂಡೂರ್‌) ಹರಕೆಯ ಕುರಿಯಾಗುತ್ತಲೇ ಹೋಗುತ್ತಾನೆ. ಚಿತ್ರದ ಶೀರ್ಷಿಕೆಗೂ ವಿಷ್ಣುವರ್ಧನ್‌, ರವಿಚಂದ್ರನ್‌ ಅವರ ರಾಮಾಚಾರಿ ಪಾತ್ರಗಳ ಖದರಿಗೂ ಸಂಬಂಧವೇ ಇಲ್ಲ. ನಾಯಕಿಯರು ಹೆಸರಿಗಷ್ಟೇ ಇದ್ದಾರೆ. ವಿಜಯ್‌ ಚೆಂಡೂರ್‌ ತೆರೆಯ ಮೇಲೆಯೇ ನಾಯಕನ ಬುದ್ಧಿವಂತಿಕೆಯನ್ನು ಪದೇ ಪದೇ ಪ್ರಶ್ನಿಸುತ್ತಾರೆ. ಅದನ್ನು ತೆರೆಯಾಚೆಗೂ ಯೋಚಿಸಬೇಕಿತ್ತು.

ಚಿತ್ರ ಮಾಡಬೇಕು ಎಂಬ ಹಂಬಲ, ಸೀಮಿತ ಬಜೆಟ್‌ನಲ್ಲಿ ಒಂದೆರಡು ಲೊಕೇಷನ್‌ಗಳಲ್ಲಿ ಅಬ್ಬರವಿಲ್ಲದೆ ಕತೆ ಹೇಳುವುದನ್ನು ಸಾಧ್ಯವಾಗಿಸಿದ್ದಾರೆ ತೇಜ್‌. ತೇಜ್‌, ರಾಘವೇಂದ್ರ ರಾಜ್‌ ‌ಕುಮಾರ್‌ ನಟನೆ, ನೋಟ ಇಷ್ಟವಾಗುತ್ತದೆ. ಇವರೆಲ್ಲರನ್ನೂ ಮೀರಿಸಿದವರು ವಿಜಯ್‌ ಚೆಂಡೂರ್‌. ಸಂಭಾಷಣೆಗಳು ಸ್ವಲ್ಪ ಖುಷಿಕೊಡುತ್ತವೆ. ಛಾಯಾಗ್ರಹಣ ಉತ್ತಮವಾಗಿದೆ. ಬಹುಪಾಲು ನಾಯಕನೇ ಆವರಿಸಿದ್ದಾನೆ. ನಾಯಕನ ಸಂಚಾರವೇ ಹತ್ತಾರು ನಿಮಿಷಗಳಿಗೂ ಹೆಚ್ಚು ಪ್ರೇಮ್‌ನಲ್ಲಿ ಎಳೆದಾಡಿದೆ. ಸಂಗೀತ ಪರವಾಗಿಲ್ಲ. ಬಹುಶಃ ನಿರ್ದೇಶಕರ ಮುಂದಿನ ಯೋಜನೆಗಳಿಗೆ ಈ ಚಿತ್ರ ಕಲಿಕಾ ಪ್ರಯೋಗ ಅನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT