ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓ ಮನಸೇ ಸಿನಿಮಾ ವಿಮರ್ಶೆ: ಪೇಲವ ತ್ರಿಕೋನ ಪ್ರೇಮಕಥೆ

ವಿಜಯ್‌ ರಾಘವೇಂದ್ರ ಧರ್ಮ ಕೀರ್ತಿರಾಜ್‌ ಸಂಚಿತಾ ಪಡುಕೋಣೆ ಸಾಧು ಕೋಕಿಲ ಅಭಿನಯ
Published 14 ಜುಲೈ 2023, 19:26 IST
Last Updated 14 ಜುಲೈ 2023, 19:26 IST
ಅಕ್ಷರ ಗಾತ್ರ

ಚಿತ್ರ: ಓ ಮನಸೇ  ನಿರ್ಮಾಣ: ಶ್ರೀ ಫ್ರೆಂಡ್ಸ್‌ ಮೂವಿ ಮೇಕರ್ಸ್‌ ನಿರ್ದೇಶನ: ಡಿ.ಜಿ.ಉಮೇಶ್‌ ಗೌಡ ತಾರಾಗಣ: ವಿಜಯ್‌ ರಾಘವೇಂದ್ರ ಧರ್ಮ ಕೀರ್ತಿರಾಜ್‌ ಸಂಚಿತಾ ಪಡುಕೋಣೆ ಸಾಧು ಕೋಕಿಲ ಮತ್ತಿತರರು

––––

ಹತ್ತು ವರ್ಷ ಹಿಂದಿನ ಕೆಟ್ಟ ಹಾಸ್ಯದ ಸನ್ನಿವೇಶಗಳು, ವಾಟ್ಸ್‌ಆ್ಯಪ್‌ನಲ್ಲಿ ಹಳತಾದ ಜೋಕುಗಳನ್ನೆಲ್ಲ ಸೇರಿಸಿ, ಅದಕ್ಕೊಂದು ತ್ರಿಕೋನ ಪ್ರೇಮ ಕಥೆ ಜೋಡಿಸಿ ಸಿದ್ಧಗೊಂಡ ಚಿತ್ರವೇ ‘ಓ ಮನಸೇ’! ನಾಯಕ ವಿಜಯ್‌ ರಾಘವೇಂದ್ರ ಇನ್‌ಸ್ಪೆಕ್ಟರ್‌ ಕಾರ್ತಿಕ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಕ್ಷ ಅಧಿಕಾರಿಯಾದ ಅವರು ಭ್ರಷ್ಟತೆ ವಿರುದ್ಧ ಧ್ವನಿಯೆತ್ತಿದಾಗಲೆಲ್ಲ ವರ್ಗಾವಣೆಯಾಗುತ್ತಾರೆ. ಹೀಗೆ ವರ್ಗಾವಣೆಯಾಗಿ ಮಡಿಕೇರಿಗೆ ಬರುವಲ್ಲಿಂದ ಕಥೆ ಪ್ರಾರಂಭವಾಗುತ್ತದೆ.

ಮಡಿಕೇರಿ ಠಾಣೆಯಲ್ಲಿನ ಮುಖ್ಯಪೇದೆ ಸಾಧುಕೋಕಿಲ. ಹಾಸ್ಯಕ್ಕಾಗಿಯೇ ಹೆಣೆದ ಇಲ್ಲಿನ ಸನ್ನಿವೇಶಗಳು ಈಗಾಗಲೇ ಹತ್ತಾರು ಸಿನಿಮಾಗಳಲ್ಲಿ ಬಳಸಿ ಹಳತಾದವು. ಹೀಗಾಗಿ ಈ ಸನ್ನಿವೇಶಗಳು ಪ್ರೇಕ್ಷಕರಿಗೆ ನಗು ತರಿಸುವುದಕ್ಕಿಂತ ಹೆಚ್ಚಾಗಿ ಕಿರಿಕಿರಿ ಉಂಟು ಮಾಡುತ್ತವೆ. ಇಂತಹ ಠಾಣೆಗೆ ಬಂದ ಕಾರ್ತಿಕ್‌ಗೆ ಠಾಣೆಯ ಎದುರಲ್ಲೇ ನಾಯಕಿ ಸ್ನೇಹ ಪರಿಚಯವಾಗುತ್ತಾಳೆ. ಅಲ್ಲಿಂದ ಸಿನಿಮಾ ಪ್ರೇಮಕಥೆಯಾಗಿ ಬದಲಾಗುತ್ತದೆ. ಸ್ನೇಹ ಆಗಿ ಸಂಚಿತಾ ಪಡುಕೋಣೆ ನಟಿಸಿದ್ದಾರೆ. ಸಾಕಷ್ಟು ಕಡೆ ಇವರ ನಟನೆಯನ್ನು ಉತ್ತಮವಾಗಿಸುವ ಅವಕಾಶ ನಿರ್ದೇಶಕರಿಗಿತ್ತು. 

ಇಬ್ಬರ ಪರಿಚಯವಾಗುತ್ತಿದ್ದಂತೆ ಹಾಡು ಶುರುವಾಗುತ್ತದೆ. ವಿಜಯ್‌ ರಾಘವೇಂದ್ರ ಬಹಳ ಕಷ್ಟಪಟ್ಟು ಹಾಡಿಗೆ ಹೆಜ್ಜೆ ಹಾಕಿದಂತೆ ಕಾಣಿಸುತ್ತದೆ. ಇಬ್ಬರೂ ಪ್ರೇಮಿಗಳಾದರು ಎನ್ನುವ ಹೊತ್ತಿಗೆ ನಾಯಕಿ ಸಂಚಿತ ತಲಕಾವೇರಿಯಲ್ಲಿ ಬಿದ್ದು ಸಾಯುತ್ತಾರೆ. ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ಹುಡುಕಾಟದತ್ತ ಸಿನಿಮಾ ಹೊರಳುತ್ತದೆ. ಇದರ ನಡುವೆ ಬರುತ್ತಾರೆ ನಾಯಕಿಯ ಮಾವ ಹಾಗೂ ಮಹಿಳೆಯರಿಗೆ ಮಾತ್ರ ಬಡ್ಡಿಗೆ ಸಾಲ ನೀಡುವ ಶೋಭರಾಜ್‌. ಸಾಧು ಕೋಕಿಲ ಮತ್ತು ಶೋಭರಾಜ್‌ ಅವರಂತಹ ಅಂತಹ ಒಳ್ಳೆಯ ನಟರನ್ನಿಟ್ಟುಕೊಂಡು ಹೆಣೆದ ಕೆಟ್ಟ ಹಾಸ್ಯದ ದೃಶ್ಯಗಳನ್ನು ಜೀರ್ಣಿಸಿಕೊಳ್ಳುವ ಹೊತ್ತಿಗೆ ಚಿತ್ರದ ಮೊದಲಾರ್ಧ ಮುಗಿದು, ದ್ವಿತೀಯಾರ್ಧವೂ ಗೊತ್ತಾಗಿ ಹೋಗಿರುತ್ತದೆ.

ಮೊದಲಾರ್ಧದ ಕೊನೆಯಲ್ಲಿ ಸಕಾರಾತ್ಮಕ ಪಾತ್ರದಲ್ಲಿ ಬರುವ ಧರ್ಮ ಕೀರ್ತಿರಾಜ್‌, ದ್ವೀತಿಯಾರ್ಧದಲ್ಲಿ ಖಳನಾಯಕನಾಗುತ್ತಾರೆ. ಕಥೆ ತ್ರಿಕೋನ ಪ್ರೇಮದ ಸ್ವರೂಪ ಪಡೆಯುತ್ತದೆ. ಮಡಿಕೇರಿಯ ದೃಶ್ಯಗಳನ್ನು ಛಾಯಾಚಿತ್ರಗ್ರಾಹಕ ಎಂ.ಆರ್‌.ಸೀನು ಬಹಳ ಸೊಗಸಾಗಿ ಸೆರೆ ಹಿಡಿದಿದ್ದಾರೆ. ನಗು ತರಿಸುವಂತಿರುವ ಪೊಲೀಸ್‌ ಠಾಣೆ, ಕೊಲೆ, ಅಪರಾಧಿ ಹುಡುಕಾಟದ ದೃಶ್ಯಗಳನ್ನು ಕುತೂಹಲ ಮೂಡಿಸುವಷ್ಟು ಚೆನ್ನಾಗಿ ಮಾಡಬಹುದಿತ್ತು. ‘ಸೀತಾರಾಮ್‌ ಬಿನೋಯ್‌’ ತರಹದ ಗಟ್ಟಿ ಇನ್‌ಸ್ಪೆಪೆಕ್ಟರ್‌ ಪಾತ್ರ ಮಾಡಿದ್ದ ವಿಜಯ್‌ ರಾಘವೇಂದ್ರ, ಇಲ್ಲಿ ದುರ್ಬಲ ಪೋಷಣೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜೆಸ್ಸಿ ಗಿಫ್ಟ್‌ ಸಂಗೀತದಲ್ಲಿ ಒಂದೆರಡು ಹಾಡುಗಳು ಮಧುರವಾಗಿದ್ದರೂ ನೆನಪಿನಲ್ಲಿ ಉಳಿಯುವುದಿಲ್ಲ. ಕಲಾ ನಿರ್ದೇಶನ, ಸಾಹಸ ದೃಶ್ಯಗಳಿಗೆ ಬೇಕಂತಲೇ ವಸ್ತುಗಳನ್ನಿಟ್ಟಂತೆ ಕಾಣುವಷ್ಟು ಪೇಲವವಾಗಿದೆ.

–ವಿನಾಯಕ ಕೆ.ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT