ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಘವೇಂದ್ರ ರಾಜ್‌ಕುಮಾರ್‌ ನಟನೆಯ ‘ರಾಜತಂತ್ರ’ದಲ್ಲಿ ಸಂದೇಶದ ತಿರುಳು

Last Updated 1 ಜನವರಿ 2021, 8:34 IST
ಅಕ್ಷರ ಗಾತ್ರ

ಚಿತ್ರ: ರಾಜತಂತ್ರ

ನಿರ್ಮಾಣ: ಜೆ.ಎಂ.ಪ್ರಹ್ಲಾದ್‌, ವಿಜಯಭಾಸ್ಕರ್ ಹರಪನಹಳ್ಳಿ, ಪಿ.ಆರ್‌. ಶ್ರೀಧರ್

ನಿರ್ದೇಶನ: ಪಿ.ವಿ.ಆರ್ ಸ್ವಾಮಿ ಗೂಗರದೊಡ್ಡಿ

ತಾರಾಗಣ: ರಾಘವೇಂದ್ರ ರಾಜ್‌ಕುಮಾರ್, ಭವ್ಯ, ದೊಡ್ಡಣ್ಣ, ಶ್ರೀನಿವಾಸಮೂರ್ತಿ, ಶಂಕರ್ ಅಶ್ವತ್ಥ್, ರಂಜನ್‍ ಹಾಸನ್.

ಈ ಕ್ಯಾಪ್ಟನ್ ರಾಜನೂ ಹೌದು, ರಾಮನೂ ಹೌದು. ಸೈನ್ಯದಿಂದ ಹೊರಬಂದ ಮೇಲೂ ತನ್ನ ಕರ್ತವ್ಯ ಮುಗಿದಿಲ್ಲ ಎಂದು ಕೊಂಡು ಜವಾಬ್ದಾರಿ ನಿಭಾಯಿಸುವ ವ್ಯಕ್ತಿ. ಸಮಾಜಕ್ಕೆ ಅಂಟಿರುವ ಡ್ರಗ್‌ ಮಾಫಿಯಾ, ಭಯೋತ್ಪಾದನೆಯಂತಹ ಸಮಾಜ ವಿರೋಧಿ ಚಟುವಟಿಕೆಗಳನ್ನು ಮಟ್ಟ ಹಾಕುವ ಉಮೇದು ಹೊಂದಿರುವ ದೇಶ ಸೇವಕ.

ನಟ, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ಅಭಿನಯದ ‘ರಾಜತಂತ್ರ’ದೊಂದಿಗೆ ಕನ್ನಡ ಚಿತ್ರರಂಗದ ಹೊಸ ವರ್ಷ ಪ್ರಾರಂಭವಾಗಿದೆ. ದುಷ್ಟಶಕ್ತಿಗಳನ್ನು ತನ್ನ ಬುದ್ಧಿಶಕ್ತಿ ಮತ್ತು ತಂತ್ರಗಾರಿಕೆಯಿಂದ ಮಣಿಸುವ ನಿವೃತ್ತ ಕ್ಯಾಪ್ಟನ್ ರಾಜಾರಾಮ್‌ ಆಗಿ ರಾಘವೇಂದ್ರ ರಾಜ್‍ಕುಮಾರ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಹೊರಗಿನಿಂದ ಬರುವ ಶತ್ರುಗಳಿಂದ ದೇಶವನ್ನು ರಕ್ಷಿಸುತ್ತಿದ್ದ ಆತ, ದೇಶದ ಒಳಗೆ ಬಂದಾಗ ಯಾವ ರೀತಿ ಸಮಾಜ, ದೇಶವನ್ನು ದುಷ್ಟರಿಂದ ರಕ್ಷಿಸುತ್ತಾನೆ ಎಂಬುದನ್ನು ಈ ಪಾತ್ರದ ಮೂಲಕ ತೋರಿಸಲು ಹೊರಟಿದ್ದಾರೆ ನಿರ್ದೇಶಕರು. ಡ್ರಗ್‌ ಮಾಫಿಯಾದ ಕಬಂಧಬಾಹು, ಯುವಜನರನ್ನು ಈ ಜಾಲಕ್ಕೆ ಸಿಲುಕಿಸುವ ಷಡ್ಯಂತ್ರದ ಕಥಾಹಂದರ ಮೊದಲಾರ್ಧದಲ್ಲಿ ಬಿಗಿಯಾಗಿಯೇ ಸಾಗುತ್ತದೆ.

ಮಧ್ಯಂತರ ನಂತರ ಕಥೆಯ ಓಘ ಎಲ್ಲೆಲ್ಲೋ ಸಾಗುತ್ತದೆ. ಡ್ರಗ್‌ ಮಾಫಿಯಾಗೂ ಭಯೋತ್ಪಾದನೆಗೂ ನಂಟು ಕಲ್ಪಿಸಲು ನಿರ್ದೇಶಕರು ತಿಣುಕಾಡಿದ್ದಾರೆ. ಇಂತಹ ಕೊರತೆಗಳ ಹೊರತಾಗಿಯೂ ರಾಜಕಾರಣ, ಭ್ರಷ್ಟಾಚಾರ, ಗಣಿಗಾರಿಕೆ, ಡ್ರಗ್ಸ್, ಚಿನ್ನ, ಗನ್‌ ಮಾಫಿಯಾದಂತಹ ಕಥಾವಸ್ತುಗಳ ತಿರುಳು ಗಮನ ಸೆಳೆಯುತ್ತದೆ. ಮಾಜಿ ಸೇನಾಧಿಕಾರಿ ದೃಷ್ಟಿಕೋನದಿಂದ ದೇಶದ ಸ್ಥಿತಿಗತಿ, ರಾಜಕಾರಣದ ಧರ್ಮಸಂಕಟದ ಒಳಸುಳಿಗಳು ಅರಿಯುವ ಪ್ರಯತ್ನ ಇಲ್ಲಿದೆ.

ಈ ಎಲ್ಲ ಲಂಪಟತನಗಳಿಗೂಜನಪ್ರತಿನಿಧಿಗಳೇ ಕಾರಣ. ಇವರು ಪ್ರಜಾಸೇವೆ ಮಾಡಿದರೆ ಇಡೀ ವ್ಯವಸ್ಥೆ ಸುಧಾರಣೆ ಕಂಡಿತು ಎನ್ನುವ ಪ್ರಸ್ತುತ ಘಟನೆಗಳಿಗೆ ಕಥೆಯನ್ನು ಕನೆಕ್ಟ್‌ ಮಾಡಿರುವ ಕೂತೂಹಲವನ್ನು ತಿಳಿಯಲು ಚಿತ್ರವನ್ನೇ ನೋಡಬೇಕು.

ರಾಘವೇಂದ್ರ ರಾಜ್‌ಕುಮಾರ್ ಇದೇ ಮೊದಲ ಬಾರಿಗೆ ಇಂತದ್ದೊಂದು ಪಾತ್ರ ಮಾಡಿರುವುದು ವಿಶೇಷ.

ಛಾಯಾಗ್ರಾಹಕರಾಗಿದ್ದ ಪಿ.ವಿ.ಆರ್.ಸ್ವಾಮಿ ಕ್ಯಾಮೆರಾ ಹಿಡಿಯುವ ಜತೆಗೆ ಇದೇ ಮೊದಲ ಬಾರಿಗೆ ನಿರ್ದೇಶಕನ ಸ್ಥಾನ ಅಲಂಕರಿಸಿದ್ದಾರೆ. ಹಿರಿಯ ಸಾಹಿತಿ ಜೆ.ಎಂ.ಪ್ರಹ್ಲಾದ್ ಚಿತ್ರಕತೆ ಹಾಗೂ ಸಾಹಿತ್ಯ ರಚಿಸಿದ್ದಾರೆ. ಶ್ರೀಸುರೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT