ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕೋಳಿ ಎಸ್ರು' ಸಿನಿಮಾ ವಿಮರ್ಶೆ: ಸಂಸಾರವೆಂಬ ಪಾತ್ರೆಯಲ್ಲಿ ಕುದಿಯುವ ಎಸ್ರು

Published 25 ಜನವರಿ 2024, 20:40 IST
Last Updated 25 ಜನವರಿ 2024, 20:40 IST
ಅಕ್ಷರ ಗಾತ್ರ

ಸಿನಿಮಾ: ಕೋಳಿ ಎಸ್ರು 

ನಿರ್ದೇಶನ: ಚಂಪಾ ಶೆಟ್ಟಿ

ನಿರ್ಮಾಣ: ಎಪ್ರೊನ್‌ ಪ್ರೊಡಕ್ಷನ್‌

ತಾರಾಗಣ: ಅಕ್ಷತಾ ಪಾಂಡವಪುರ, ಪ್ರಕಾಶ್‌ ಶೆಟ್ಟಿ, ಬೇಬಿ ಅಪೇಕ್ಷಾ ಮತ್ತಿತರರು 

***

ಚಾಮರಾಜನಗರದ ಹೆಣ್ಣುಮಗಳು ಹುಚ್ಚೇರಿ. ಗಂಡ, ಮಗಳೇ ಆಕೆಯ ಪ್ರಪಂಚ. ತನ್ನ ಕನಸುಗಳನ್ನೆಲ್ಲ ಮೂಟೆ ಕಟ್ಟಿ ಕುಡುಕ ಗಂಡನ ಜೊತೆಗೆ ಬದುಕುವ ಆಕೆಯ ಜೀವನದ ಏರಿಳಿತಗಳ ಕಥೆಯೇ ‘ಕೋಳಿ ಎಸ್ರು’ ಚಿತ್ರದ ಒಂದೆಳೆ. ಕೆ.ಟಿ.ಚಿಕ್ಕಣ್ಣ ಅವರ ‘ಹುಚ್ಚೇರಿ ಎಸರಿನ ಪ್ರಸಂಗ’ ನಾಟಕದ ಕಥೆಯನ್ನು ಆಧರಿಸಿದ ಈ ಚಿತ್ರಕ್ಕೆ ಈಗಾಗಲೇ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ. ನಿರ್ದೇಶಕಿ ಚಂಪಾ ಶೆಟ್ಟಿ ಸಿನಿಮಾ, ಮನರಂಜನೆ, ಹಾಸ್ಯ ಎಂಬಿತ್ಯಾದಿ ಅಂಶಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಒಂದು ಸಂಪೂರ್ಣ ಕಲಾತ್ಮಕ ಚಿತ್ರವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಚಿತ್ರ ಪ್ರಾರಂಭದಿಂದ ಕೊನೆಯ ತನಕ ನಿಧಾನವಾಗಿಯೇ ಸಾಗುತ್ತದೆ.

ಹುಚ್ಚೇರಿಯಾಗಿ ನಟಿಸಿರುವ ನಟಿ ಅಕ್ಷತಾ ಪಾಂಡವಪುರ ನಟನೆಯಿಂದಲೇ ಇಡೀ ಚಿತ್ರವನ್ನು ಹೆಗಲ ಮೇಲೆ ಹೊತ್ತುಕೊಂಡು ಸಾಗುತ್ತಾರೆ. ಈಕೆಯ ಗಂಡ, ನಯಾ ಪೈಸೆ ಕೆಲಸ ಮಾಡದೆ ಹೆಂಡತಿ ದುಡಿದಿರುವುದನ್ನೂ ಕದ್ದು ಮದ್ಯ ಕುಡಿಯುವವ. ಗಂಡನ ಬೈಗುಳ, ಹಿಂಸೆಗೆ ಹುಚ್ಚೇರಿ ಮೌನ, ದುರುಗುಟ್ಟಿದ ನೋಟದಿಂದಲೇ ಉತ್ತರಿಸುವ ರೀತಿ ಅವರ ನಟನೆಯ ತಾಕತ್ತಿಗೆ ಹಿಡಿದ ಕನ್ನಡಿಯಂತಿದೆ. ಹುಚ್ಚೇರಿ ಗಂಡನಾಗಿ ಪ್ರಕಾಶ್‌ ಶೆಟ್ಟಿ ಇಷ್ಟವಾಗುತ್ತಾರೆ. ಆದರೆ ಆ ಪಾತ್ರದ ಪೋಷಣೆ ಇನ್ನಷ್ಟು ಗಟ್ಟಿಯಾಗಬೇಕಿತ್ತು.

ರಂಗಭೂಮಿ ಹಿನ್ನೆಲೆಯುಳ್ಳ ಚಂಪಾ ಶೆಟ್ಟಿ ರಂಗಗೀತೆಗಳನ್ನು, ನಾಟಕದ ದೃಶ್ಯಗಳನ್ನು ಕಥೆಗೆ ಪೂರಕವಾಗಿ ಬಳಸಿಕೊಂಡು ಚಿತ್ರವನ್ನು ವರ್ಣಮಯವಾಗಿಸಿದ್ದಾರೆ. ಹುಚ್ಚೇರಿ ಮಗಳಾಗಿ ಬೇಬಿ ಅಪೇಕ್ಷಾ ಮುದ್ದಾಗಿ ನಟಿಸಿದ್ದಾಳೆ. ಚಾಮರಾಜನಗರ ಪ್ರದೇಶದ ಹಳ್ಳಿ ಚಿತ್ರಣ, ಭಾಷೆ ಎಲ್ಲವೂ ಸೊಗಸಾಗಿದೆ. ಸೂಕ್ತ ಲೈಟಿಂಗ್‌ ಮೂಲಕ ಚೆಂದದ ದೃಶ್ಯಗಳು ಸೆರೆ ಹಿಡಿಯುವಲ್ಲಿ ಛಾಯಾಚಿತ್ರಗ್ರಾಹಕ ಫ್ರಾನ್ಸಿಸ್‌ ರಾಜ್‌ಕುಮಾರ್‌ ಯಶಸ್ವಿಯಾಗಿದ್ದಾರೆ. ಆದರೆ ಹಿನ್ನೆಲೆ ಸಂಗೀತ ಇನ್ನಷ್ಟು ಉತ್ತಮವಾಗಬಹುದಿತ್ತು.

ಕೂಲಿ ಕೆಲಸ ಮಾಡುವವರೂ ಮೊಬೈಲ್‌ ಹೊಂದಿರುವ ಈ ಕಾಲದಲ್ಲಿ ‘ಕೋಳಿ ಎಸ್ರು’ ತಿನ್ನಬೇಕೆಂಬ ಮಗಳ ಆಸೆಗಾಗಿ ತಾಯಿ ಶೀಲ ಕಳೆದುಕೊಳ್ಳುವ ಸ್ಥಿತಿಗೆ ಹೋಗುವ ಕಥೆಯ ಎಳೆಯನ್ನು ಇಂದಿನ ಕಾಲಮಾನಕ್ಕೆ ಒಗ್ಗಿಸಬಹುದಿತ್ತು. ಚಿತ್ರ ಒಂದು ಗಟ್ಟಿಯಾದ ಸಂದೇಶದೊಂದಿಗೆ ಕಾಡುವುದಿಲ್ಲ. ಎಲ್ಲಿಯೂ ಕಥೆ ನಡೆಯುವ ಕಾಲಘಟ್ಟವನ್ನು ಸ್ಪಷ್ಟವಾಗಿ ಹೇಳದೆ ನಿರ್ದೇಶಕರು ಜಾಣ್ಮೆ ಮೆರೆದಿದ್ದಾರೆ. ಎತ್ತಿನಗಾಡಿ ಬಳಕೆಯಲ್ಲಿದ್ದ ಕಾಲದ ಕಥೆ ಎಂಬುದು ಅಲ್ಲಲ್ಲಿ ಗೋಚರವಾಗುತ್ತದೆ. ಚಿತ್ರಕಥೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಅವಕಾಶ ನಿರ್ದೇಶಕರಿಗಿತ್ತು. ಚಿತ್ರದ ದ್ವಿತೀಯಾರ್ಧದಲ್ಲಿ ಒಂದಷ್ಟು ಕಾಲ ಹುಚ್ಚೇರಿ ತೆರೆಯ ಮೇಲೆ ಕಾಣಿಸದೆ ಸಿನಿಮಾದ ವೇಗ ಇನ್ನಷ್ಟು ಕುಸಿಯುತ್ತದೆ. ಹುಚ್ಚೇರಿ ಪಾತ್ರದ ಪೋಷಣೆ, ಆಕೆಗಾಗುವ ಅವಮಾನಗಳು, ತಂದೆ–ತಾಯಿ ಸಂಘರ್ಷದಿಂದ ಮಗಳು ಲಕ್ಷ್ಮಿ ಮನಸ್ಸಿನ ಮೇಲಾಗುವ ಪರಿಣಾಮಗಳನ್ನು, ಭಾವುಕ ಸನ್ನಿವೇಶಗಳನ್ನು ಚಿತ್ರಕಥೆಯಲ್ಲಿ ತರಬಹುದಾಗಿತ್ತು.⇒–ವಿನಾಯಕ ಕೆ.ಎಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT