ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಗರು ಪಲ್ಯ ಸಿನಿಮಾ ವಿಮರ್ಶೆ: ಹದದ ಒಗ್ಗರಣೆಯ ಪಲ್ಯ 

Published 27 ಅಕ್ಟೋಬರ್ 2023, 10:29 IST
Last Updated 27 ಅಕ್ಟೋಬರ್ 2023, 10:29 IST
ಅಕ್ಷರ ಗಾತ್ರ

ಚಿತ್ರ: ಟಗರು ಪಲ್ಯ

ನಿರ್ಮಾಣ: ಡಾಲಿ ಧನಂಜಯ 

ನಿರ್ದೇಶನ: ಉಮೇಶ್​ ಕೆ. ಕೃಪ

ಪಾತ್ರವರ್ಗ: ನಾಗಭೂಷಣ ಅಮೃತಾ ಪ್ರೇಮ್​ ರಂಗಾಯಣ ರಘು ತಾರಾ ಅನುರಾಧಾ ಮತ್ತಿರರು

--------

ಮಂಡ್ಯದ ಒಂದೂರಲ್ಲಿ ಗೌಡರ ಮಗಳ ಮದುವೆ ಸಂಭ್ರಮ. ಹುಡುಗ–ಹುಡುಗಿಗೆ ಮದುವೆ ನಿಕ್ಕಿ ಮಾಡುವ ಮೊದಲು ಊರದೇವಿಗೆ ಪೂಜೆ ನೀಡುವ ವಾಡಿಕೆ. ಬೆಳಗಿನ ಜಾವದಲ್ಲಿ ಊರಿನವರೆಲ್ಲ ದಟ್ಟ ಕಾಡಿನ ನಡುವಿನ ನದಿ ತೀರದಲ್ಲಿರುವ ದೇವಿಯ ತಾಣಕ್ಕೆ ಹೊರಡುವುದರಿಂದ ‘ಟಗರು ಪಲ್ಯ’ ಸಿನಿಮಾ ಪ್ರಾರಂಭವಾಗುತ್ತದೆ. ಟಗರು ಸತಾಯಿಸಿ ಸತಾಯಿಸಿ ತಲೆ ಒದರಿ, ಪೂಜೆ ಮುಗಿಯುವ ಹೊತ್ತಿಗೆ ಸಿನಿಮಾವೂ ಮುಗಿದಿರುತ್ತದೆ. ಮುಂಜಾನೆಯಿಂದ ಸಂಜೆಯೊಳಗೆ ನಡೆಯುವ ‘ಪಲ್ಯ’ದ ಸಣ್ಣ ಕಥೆಯನ್ನು ಹದವಾದ ಒಗ್ಗರಣೆಯೊಂದಿಗೆ ತೆರೆಯ ಮೇಲೆ ತರುವ ಯತ್ನದಲ್ಲಿ ಯಶಸ್ವಿಯಾಗಿದ್ದಾರೆ ನಿರ್ದೇಶಕ ಉಮೇಶ್​ ಕೆ. ಕೃಪ.

ಹುಡುಗಿಗೆ ಈ ಮದುವೆ ಇಷ್ಟವಿಲ್ಲ; ಮತ್ತೊಬ್ಬ ಹುಡುಗನನ್ನು ನೋಡಿಕೊಂಡಿದ್ದಾಳೆ ಎಂಬುದನ್ನು ನಿರ್ದೇಶಕರು ಮೊದಲ ದೃಶ್ಯದಲ್ಲಿಯೇ ಹೇಳಿಬಿಡುತ್ತಾರೆ. ಹೀಗಾಗಿ ಸಿನಿಮಾ ಶುರುವಾಗಿ 10 ನಿಮಿಷದೊಳಗೆ ಕಥೆಯನ್ನು ಊಹಿಸಿಬಿಡಬಹುದು. ಆದರೆ ನಿರೂಪಣೆ ಬಹಳ ಸಹಜವಾಗಿ, ಒಂದಿಡೀ ಊರನ್ನು ಕಣ್ಣಮುಂದೆ ಕಟ್ಟಿಕೊಡುವಂತಿದೆ. ಇದು ಚಿತ್ರದ ದೊಡ್ಡ ಸಕಾರಾತ್ಮಕ ಅಂಶ. ಊರಿನ ಗೌಡರಾಗಿ, ಮದುವೆ ಹುಡುಗಿಯ ಅಪ್ಪನಾಗಿ ರಂಗಾಯಣ ರಘು ನಟಿಸಿದ್ದಾರೆ. ಪತ್ನಿಯಾಗಿ ತಾರಾ ಜೊತೆಯಾಗಿದ್ದಾರೆ. ನಾಯಕ ನಾಗಭೂಷಣ್‌ ಗೌಡರ ಅಳಿಯ ‘ಚಿಕ್ಕ’ನಾಗಿ ಇಷ್ಟವಾಗುತ್ತಾರೆ. ಸಾಮಾನ್ಯವಾಗಿ ನಗಿಸುವ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದ ನಾಗಭೂಷಣ್‌ ಇಲ್ಲಿ ನಗಿಸುವುದಕ್ಕಿಂತ ಹೆಚ್ಚಾಗಿ ಭಾವುಕರಾಗಿ ನಟಿಸಿದ್ದಾರೆ. ಗೌಡರ ಮಗಳಾಗಿ ನಾಯಕಿ ಅಮೃತಾ ಪ್ರೇಮ್‌ ಕಾಣಿಸಿಕೊಂಡಿದ್ದು, ಮೊದಲ ಸಿನಿಮಾ ಎನ್ನಿಸದಷ್ಟು ಚೆನ್ನಾಗಿ ನಟಿಸಿದ್ದಾರೆ. ಮೊದಲಾರ್ಧದಲ್ಲಿ ಇವರ ಪಾತ್ರಕ್ಕೆ ಅಷ್ಟೊಂದು ಪ್ರಾಮುಖ್ಯ ನೀಡಿಲ್ಲ. ಕ್ಲೈಮ್ಯಾಕ್ಸ್‌ ವೇಳೆ ಮಗಳ ಮನದೊಳಗಿನ ತಳಮಳದ ಮಾತುಗಳೊಂದಿಗೆ ಕಣ್ಣಂಚಿನಲ್ಲಿ ನೀರು ತರಿಸುವ ನಟನೆ ಮಾಡಿದ್ದಾರೆ.

ರಂಗಾಯಣ ರಘು ಹಾಗೂ ತಾರಾ ಪಾತ್ರಗಳೇ ತಾವಾಗಿ ಆವರಿಸಿಕೊಂಡುಬಿಡುತ್ತಾರೆ. ಪೇಟೆಯ ಹುಡುಗನಾಗಿ ಬರುವ ವಾಸುಕಿ ವೈಭವ್‌ ಇಷ್ಟವಾಗುತ್ತಾರೆ. ಆದರೆ ಪೇಟೆಯ ಹುಡುಗರನ್ನು ಕುರಿಯ ಹಿಕ್ಕೆಯನ್ನೂ ಗುರುತಿಸಲಾಗದಷ್ಟು ದಡ್ಡರು ಎಂಬಂತೆ ತೋರಿಸಿರುವುದು ಸ್ವಲ್ಪ ಕಿರಿಕಿರಿ ಮೂಡಿಸುತ್ತದೆ. ಬಹುತೇಕ ಎಲ್ಲ ಕಲಾವಿದರು ಅವರವರ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವಾಸುಕಿ ವೈಭವ್‌ ಹಿನ್ನೆಲೆ ಸಂಗೀತ ದೃಶ್ಯಗಳಿಗೆ ಸೂಕ್ತವಾಗಿದೆ. ಆದರೆ, ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಜೊತೆಗೆ ಎರಡು ಹಾಡುಗಳು ಈ ಕಥೆಗೆ ಅಗತ್ಯವೂ ಆಗಿರಲಿಲ್ಲ. ಕುಡಿತವನ್ನೇ ಹಾಸ್ಯದ ಪ್ರಮುಖ ಸರಕಾಗಿಸಿಕೊಂಡಿರುವುದು, ಅರ್ಧದಷ್ಟು ಪಾತ್ರಗಳು ‘ಎಣ್ಣೆ’ಯ ನಶೆಯಲ್ಲಿರುವುದು, ಅವವೇ ದೃಶ್ಯಗಳ ಮರುಕಳಿಸುವಿಕೆಯಿಂದ ಮೊದಲಾರ್ಧ ಬಿಗಿ ಕಳೆದುಕೊಳ್ಳುತ್ತದೆ. ಇರುವ ಮಿತಿಯಲ್ಲಿ ದೃಶ್ಯಗಳನ್ನು ವರ್ಣಮಯವಾಗಿಸಲು ಛಾಯಾಗ್ರಾಹಕ ಎಸ್‌.ಕೆ.ರಾವ್‌ ಯತ್ನಿಸಿದ್ದಾರೆ. ಆದರೆ ಇಡೀ ಕಥೆ ನಡೆಯುವುದು ಒಂದೇ ಸ್ಥಳದಲ್ಲಿ ಮತ್ತು ತೀರ ಸಹಜವಾಗಿ. ಹೀಗಾಗಿ ಅಲ್ಲಲ್ಲಿ ಚಿತ್ರ ಧಾರಾವಾಹಿ ಅನುಭವ ನೀಡುತ್ತದೆ.

ಅಮೃತ–ಚಿಕ್ಕನ ಪ್ರೇಮವನ್ನು ಇನ್ನಷ್ಟು ಗಾಢವಾಗಿಸಿ, ಅವರ ಹಳೆಯ ನೆನಪುಗಳೊಂದಿಗೆ ಕಥೆ ನಡೆಸುವ ಸ್ಥಳವನ್ನು ಬದಲಿಸಿ, ತಾರಾ ಅವರ ಅನೇಕ ಮಾತುಗಳನ್ನು ದೃಶ್ಯಗಳ ರೂಪದಲ್ಲಿಯೇ ತೋರಿಸಿ ಒಂದಷ್ಟು ದೃಶ್ಯಗಳನ್ನು ವರ್ಣಮಯವಾಗಿಸುವ ಅವಕಾಶವನ್ನು ನಿರ್ದೇಶಕರು ಕೈಚೆಲ್ಲಿದ್ದಾರೆ. ಇಂತಹ ಸಣ್ಣ,ಪುಟ್ಟ ಸಂಗತಿಗಳನ್ನು ಸರಿಪಡಿಸಿದ್ದರೆ, ಇವತ್ತಿಗೆ ಅತ್ಯಗತ್ಯವಾದ ಸಂಬಂಧಗಳ ಮೌಲ್ಯವನ್ನು ಹೇಳಿರುವ ಘಮ್ಮೆನ್ನುವ ಒಗ್ಗರಣೆಯ ಪಲ್ಯವೇ ಆಗುತ್ತಿತ್ತೇನೋ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT