ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಕರ್ನಾಟಕದ 25 ವರ್ಷಗಳ ಮುನ್ನೋಟ: ಗಾಯಗೊಂಡ ಪರಿಸರ ಮತ್ತು ನಾವು
ಕರ್ನಾಟಕದ 25 ವರ್ಷಗಳ ಮುನ್ನೋಟ: ಗಾಯಗೊಂಡ ಪರಿಸರ ಮತ್ತು ನಾವು
ಮುಂದಿನ ಇಪ್ಪತೈದು ವರ್ಷಗಳಲ್ಲಿ ರಾಜ್ಯದ ಪರಿಸರ ಸಂರಕ್ಷಣೆಗೆ ನಾವೇನು ಮಾಡಬೇಕು ಎಂಬ ಪ್ರಶ್ನೆಗೆ, ನಾವು ಏನೆಲ್ಲಾ ಮಾಡಬಾರದೆಂಬುದನ್ನು ಅರಿಯುವುದೇ ಉತ್ತರ.
Published 15 ಡಿಸೆಂಬರ್ 2023, 1:27 IST
Last Updated 15 ಡಿಸೆಂಬರ್ 2023, 1:27 IST
ಅಕ್ಷರ ಗಾತ್ರ

ಮುಂದಿನ ಇಪ್ಪತೈದು ವರ್ಷಗಳಲ್ಲಿ ರಾಜ್ಯದ ಪರಿಸರ ಸಂರಕ್ಷಣೆಗೆ ನಾವೇನು ಮಾಡಬೇಕು ಎಂಬ ಪ್ರಶ್ನೆಗೆ, ನಾವು ಏನೆಲ್ಲಾ ಮಾಡಬಾರದೆಂಬುದನ್ನು ಅರಿಯುವುದೇ ಉತ್ತರ. ಏಕೆಂದರೆ ಪರಿಸರದ ವಿಷಯದಲ್ಲಿ ಅಭಿವೃದ್ಧಿ ಎಂಬ ಪದಕ್ಕೆ ಅರ್ಥವೇ ಇಲ್ಲ. ಇಡೀ ಜನಮಾನಸದಲ್ಲಿ ನಾವು ಇದೇ ಭೂಮಿಯ ಪರಿಸರದ ಒಂದು ಭಾಗ ಎಂಬ ತಿಳಿವಳಿಕೆ ಮೂಡಿದರೆ ಅದಷ್ಟೇ ಸಾಕು. ಪರಿಹಾರದ ಬಾಗಿಲುಗಳು ತಮಗೆ ತಾವೇ ತೆರೆದುಕೊಳ್ಳುತ್ತವೆ

---

ಐವತ್ತು ವರ್ಷಗಳ ಹಿಂದೆ ಅಭಯಾರಣ್ಯಗಳನ್ನು ಗುರುತಿಸುವ ಕಾರ್ಯ ಶುರುವಾದಾಗ ನಮ್ಮ ದೇಶದ ಪರಿಸ್ಥಿತಿ ಬೇರೆಯದೇ ಆಗಿತ್ತು, ರಾಜ್ಯದ್ದೂ ಕೂಡ. ಹಸಿವು, ಜನಸಂಖ್ಯಾ ಸ್ಫೋಟ ಮತ್ತಿತರ ನೂರಾರು ಸಮಸ್ಯೆಗಳಿಗೆ ಉತ್ತರ ಹುಡುಕುವುದು ಅಂದಿನ ಆದ್ಯತೆಯಾಗಿತ್ತು. ಈ ಎಲ್ಲಾ ಸಮಸ್ಯೆಗಳ ನಡುವೆ ಇಷ್ಟಾದರೂ ಕಾಡುಗಳನ್ನು ಉಳಿಸಿಕೊಂಡಿದ್ದು ಹೆಮ್ಮೆಪಡಬೇಕಾದ ಸಾಧನೆ. ಸಂಶಯವೇ ಬೇಡ.

ಜೊತೆಗೆ ಆ ದಿನಗಳಲ್ಲಿ ಜೀವ ವಿಜ್ಞಾನ ಶೈವಾವಸ್ಥೆಯಲ್ಲಿತ್ತು. ಹಾಗಾಗಿ ಜೀವಿಗಳ ಬದುಕಿಗೆ ಏನು ಬೇಕೆಂಬ ತಿಳಿವಳಿಕೆ ಇಲ್ಲದೆ, ಭೂಪಟದಲ್ಲಿ ಗೆರೆಗಳನ್ನು ಎಳೆದು ಕಾಡೆಂದು ಘೋಷಿಸಿದೆವು. ಆನೆಗಳಿಗಿಷ್ಟು, ಹುಲಿಗಳಿಗಿಷ್ಟು ಎಂದು ಕಾಡನ್ನು ಆಸ್ತಿ ಪಾಲುಮಾಡಿದಂತೆ ಹಂಚಿದೆವು. ಉಳಿದ ಕಾಡನ್ನು ಸವರಿ ಸಾಗುವಳಿಗೆ ಕಾದಿರಿಸಿದೆವು.  

ಕಾಡಾನೆಗಳ ವಲಸೆಯ ನಕ್ಷೆಯನ್ನು ಅದರ ವಿಕಾಸದ ಪಥದಲ್ಲಿ ಎದುರಾದ ಒತ್ತಡಗಳು ತೀರ್ಮಾನಿಸಿರುತ್ತವೆ. ಆದರೆ ಈಗ ಆ ಹಾದಿಯಲ್ಲಿ ಕಂದಕಗಳಿವೆ, ಸೌರಬೇಲಿಗಳಿವೆ, ಜೋಳ, ಕಬ್ಬುಗಳು ಬೆಳೆದು ನಿಂತಿವೆ. ತಮ್ಮ ಮಾರ್ಗವನ್ನು ಬದಲಿಸಿ ಬೇರೊಂದು ದಾರಿ ಹಿಡಿದರೆ ಅದು ಮತ್ತೊಂದು ಗುಂಪಿನ ಖಾಸಗಿ ವಲಯಕ್ಕೆ ಅತಿಕ್ರಮಣ ಮಾಡಿದಂತೆ. ಇದು, ಒಂದು ರೀತಿಯಲ್ಲಿ ಮಾನಸಿಕ ತಡೆಗೋಡೆಯಂತೆ. ಅದನ್ನು ಅವು ಉಲ್ಲಂಘಿಸಲಾಗಲಿ ಅಥವಾ ಮೀರಲಾಗಲಿ ಸಾಧ್ಯವಿಲ್ಲ.

ಇನ್ನು ದಿನನಿತ್ಯ ಸುದ್ದಿಯಲ್ಲಿರುವ ಹುಲಿಗಳ ಕಥೆ ಭಿನ್ನವಾಗಿಲ್ಲ. 1972ರಲ್ಲಿ ಪ್ರಧಾನಿ ಇಂದಿರಾಗಾಂಧಿ ಕಾರ್ಯರೂಪಕ್ಕೆ ತಂದ ಹುಲಿ ಯೋಜನೆ ಮತ್ತು ಜಾರಿಗೊಳಿಸಿದ ವನ್ಯಜೀವಿ ಕಾಯ್ದೆಗಳು ಅಭಿನಂದನಾರ್ಹ. ಆ ನಂತರ ಹುಲಿಗಳ ಸಂತತಿ ಚೇತರಿಸಿಕೊಂಡಿದ್ದು ಕೂಡ ನಿಜ. ಇದಾದ ಬಳಿಕ ಮುಂದಿನ ಕಾರ್ಯಯೋಜನೆಗಳು ಏನಿರಬೇಕೆಂಬ ಚಿಂತನೆಗೆ ಯಾರೂ ಮುಂದಾಗಲಿಲ್ಲ.

ಕೇವಲ ಹೆಚ್ಚಿದ ಹುಲಿಗಳ ಸಂಖ್ಯೆಯನ್ನು ತಮ್ಮ ಅವಧಿಯ ಸಾಧನೆ ಎಂದು ಬಣ್ಣಿಸಿಕೊಳ್ಳುವುದಕ್ಕಷ್ಟೆ ಸರ್ಕಾರಗಳು ಸೀಮಿತವಾಗಿವೆ. ಹುಲಿಗಳು ಹೊಲಗದ್ದೆಗಳಲ್ಲಿ, ಕಾಫಿತೋಟಗಳಲ್ಲಿ ಪ್ರತ್ಯಕ್ಷಗೊಳ್ಳಲು ಕಾರಣವೇನು? ಸಂತತಿಗಳು ಬಲಿಷ್ಠವಾಗಿ ದೀರ್ಘಕಾಲ ಬದುಕುಳಿಯಲು ಅವಶ್ಯವಿರುವ ಅನುಷಂಗಿಕ ವೈವಿಧ್ಯದ ಪರಿಸ್ಥಿತಿ ಏನಾಗಿದೆ? ಇತ್ತೀಚಿನ ಸಂಶೋಧನೆಗಳು ಏನು ಹೇಳುತ್ತಿವೆ? ನಮ್ಮ ಅನೇಕ ಕಾಡುಗಳನ್ನು ಆಳುತ್ತಿರುವ ಆಕ್ರಮಣಕಾರಿ ವಿದೇಶಿ ಸಸ್ಯಗಳಿಂದ ಒಟ್ಟಾರೆ ಜೀವಪರಿಸರಕ್ಕೆ ಆಗಿರಬಹುದಾದ ಅನಾಹುತಗಳೇನು? ಒಟ್ಟು ಕಾಡಿನ ಪರಿಸರದ ಆರೋಗ್ಯ ಹೇಗಿದೆ? ಕುಟುಂಬಗಳಿಂದ ಹೊರನಡೆದು ಹೊಸ ವಾಸಸ್ಥಾನಗಳನ್ನು ಹುಡುಕುವ ಪ್ರಾಣಿಗಳಿಗೆ ಈಗಿರುವ ಕಾಡುಗಳಲ್ಲಿ ಸ್ಥಳಾವಕಾಶದ ಕೊರತೆ ಇದೆಯೇ? ಕಾಡು–ಕಾಡುಗಳ ನಡುವೆ ಸಂಪರ್ಕವಿದೆಯೇ? ಅದನ್ನು ಸರಿಪಡಿಸುವ ಸಾಧ್ಯತೆಗಳಿವೆಯೇ? ಹೀಗೆ ಪ್ರಶ್ನೆಗಳ ದೊಡ್ಡಪಟ್ಟಿಯೇ ನಮ್ಮೆದುರು ನಿಲ್ಲುತ್ತದೆ.

Great Indian Bustard

Great Indian Bustard

ಇಂತಹ ಅನೇಕ ಗಂಭೀರ ಸಮಸ್ಯೆಗಳು ನಮ್ಮ ಮುಂದಿರುವಾಗ ಈಗಾಗಲೇ ಕಣ್ಮರೆಯಾಗಿರುವ ಹುಲ್ಲುಗಾವಲುಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ರಾಜ್ಯ ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನದಲ್ಲಿದೆ. ಹುಲ್ಲುಗಾವಲು ಎಂದರೆ ಕೇವಲ ಹುಲ್ಲುಗಳ ಬಯಲುಗಳಲ್ಲ. ಅದೊಂದು ಜೀವ ಪರಿಸರ. ಲಕ್ಷಾಂತರ ವರ್ಷಗಳಲ್ಲಿ ಜರುಗಿದ ವಿಕಾಸ ಕ್ರಿಯೆಯ ಪ್ರಕ್ರಿಯೆಗೆ ಪೂರಕವಾಗಿ ರೂಪುಗೊಂಡಿರುವ ನೆಲೆ. ಸಂಪೂರ್ಣವಾಗಿ ನಾಶಗೊಂಡಿರುವ ಹುಲ್ಲುಗಾವಲುಗಳಲ್ಲಿದ್ದ ವಿಭಿನ್ನ ಪ್ರಭೇದದ ಹುಲ್ಲು ಮತ್ತು ಉಳಿದ ಸಸ್ಯ, ಕೀಟಗಳ ಸಂಯೋಜನೆಗಳನ್ನು ಮತ್ತೆ ವಿನ್ಯಾಸಗೊಳಿಸುವುದಾದರು ಹೇಗೆ? ಇಲ್ಲಿ ಮತ್ತೆ ಮತ್ತೆ ಹೇಳಬೇಕಾದ ವಿಷಯವೆಂದರೆ, ನಶಿಸಿಹೋದ ಜೀವ ಪರಿಸರಗಳನ್ನು ಮಾನವ ಎಂದಿಗೂ ಪುನರ್ ಸೃಷ್ಟಿಸಲಾರ. ಈ ಹಿನ್ನೆಲೆಯಲ್ಲಿ ಇಂತಹ ಯೋಜನೆಗಳು ವಿಫಲಗೊಳ್ಳಲೆಂದೆ ವಿನ್ಯಾಸಗೊಳಿಸಿ ಸಿದ್ಧಪಡಿಸಿರುವ ಯೋಜನೆಗಳು ಎಂಬಂತೆ ಕಾಣುತ್ತವೆ. ವಿನಾಶದಂಚಿಗೆ ಬಂದಿರುವ  ಗ್ರೇಟ್ ಇಂಡಿಯನ್ ಬಸ್ಟರ್ಡ್‌ ಹಕ್ಕಿಗಳನ್ನು ಉಳಿಸಿಕೊಳ್ಳುವ ಉದ್ದೇಶ ಈ ಯೋಜನೆಗಿರಬಹುದು. ಆದರೆ ಇದೇ ಸಮಯದಲ್ಲಿ ಅಳಿದುಳಿದಿರುವ ಈ ಹಕ್ಕಿಗಳ ಆವಾಸಸ್ಥಾನವನ್ನು ಛಿದ್ರಗೊಳಿಸುವ ಅಭಿವೃದ್ಧಿ ಯೋಜನೆಗಳು ವೇಗವಾಗಿ ಅನುಷ್ಠಾನಕ್ಕೆ ಬರುತ್ತಿವೆ.

ಹುಲ್ಲುಗಾವಲು ಪ್ರದೇಶಗಳನ್ನು ನಿರುಪಯುಕ್ತ ಭೂಮಿ ಎಂದು ತೀರ್ಮಾನಿಸಿ ಸಾಗುವಳಿಗೆ, ಕೈಗಾರಿಕೆಗಳಿಗೆ ಮಂಜೂರು ಮಾಡುವ ಕೆಲಸ ಇಂದಿಗೂ ಮುಂದುವರೆದಿದೆ. ಇದರಿಂದ ನೂರಾರು ವರ್ಷಗಳಿಂದ ಕುರಿಮಂದೆಗಳೊಂದಿಗೆ ಓಡುವ ಮೋಡಗಳನ್ನು ಹಿಂಬಾಲಿಸುತ್ತಿದ್ದ ಸಾವಿರ, ಸಾವಿರ ಅಲೆಮಾರಿ ಕುರಿಗಾಹಿಗಳ ಗತಿ ಏನಾಗಿದೆ? ಅವರ ನೆರಳಲ್ಲಿ ಕದ್ದು ಮುಚ್ಚಿ ಬದುಕು ಸಾಗಿಸುತ್ತಿದ್ದ ತೋಳಗಳ ಪರಿಸ್ಥಿತಿ ಏನಾಗಿದೆ? ಇಂಡಿಯನ್ ಬಸ್ಟರ್ಡ್‌ ಹಕ್ಕಿಗಳು ಎಲ್ಲಿ ಹೋದವು? ಇಂದು ನೆಲೆ ತಪ್ಪಿ ಬೀದಿಪಾಲಾಗುತ್ತಿರುವ ಈ ಸಂಸ್ಕೃತಿಯನ್ನು ನಾಶಮಾಡಿ, ನಿರುದ್ಯೋಗವೇ ಉದ್ಯೋಗವಾಗಿರುವ ದೇಶದಲ್ಲಿ ಇವರಿಗೆಲ್ಲ ಬೇರೆ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವೆ? ವಿಶಿಷ್ಟವಾದ ಈ ಕಸುಬನ್ನು, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಅಲೆಮಾರಿ ಕುರಿಗಾಹಿಗಳ ಅಳಿದುಳಿದ ಪರಿಸರವನ್ನು ಸಂರಕ್ಷಿಸಿಕೊಳ್ಳಬೇಕಾದ ಅಗತ್ಯವಿದೆ. ‘ಅಭಿವೃದ್ಧಿ’ಗೆ ಚಿಂತಿಸುತ್ತಿರುವ ಸರ್ಕಾರ, ಬದುಕು ಛಿದ್ರಗೊಂಡು ಇವರು ನಗರಗಳಲ್ಲಿ ಕೂಲಿಗಾಗಿ ಅಲೆದಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಇದೇ ರೀತಿ ನಮ್ಮ ನದಿಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಅವು ಮಲಿನಗೊಂಡಿರುವುದಷ್ಟೆ ಅಲ್ಲ, ತಮ್ಮ ನೈಜ ಸ್ವರೂಪವನ್ನೇ ಕಳೆದುಕೊಂಡಿದೆ. ಕುಡಿಯುವ ನೀರಿಗೂ ಧಕ್ಕೆ ಬರುವಂತೆ ಕೈಗಾರಿಕೆಗಳು ವಿಷವನ್ನು ನದಿಗೆ ಸೇರಿಸುತ್ತಿವೆ. ಇಲ್ಲಿ ಕಾನೂನು ನಿದ್ರಿಸಿಬಿಟ್ಟಿದೆ. ಮೀನುಗಾರಿಕೆ ಇಲಾಖೆ ಬೇರೆಲ್ಲಿಂದಲೋ ತಂದ ಮೀನು ತಳಿಗಳನ್ನು ನದಿಗೆ ಇಳಿಸುತ್ತಿದೆ. ಈ ನಡುವೆ ಸರ್ಕಾರ ನದಿ ಜೋಡಣೆಯ ಪ್ರಸ್ತಾಪ ಮುಂದಿಟ್ಟಿದೆ. ಇದೊಂದು ಮಹಾ ಅನಾಹುತಕ್ಕೆ ಮುನ್ನುಡಿಯಂತೆ ಕಾಣುತ್ತಿದೆ.

ಹರಿಯುವ ನದಿಗಳಿಗೆ ಅವುಗಳದೇ ಆದ ವಿಶಿಷ್ಟ ಜೀವ ಪರಿಸರಗಳಿರುತ್ತವೆ. ಅಲ್ಲಿ ಬಂಡೆಗಳು ಬೇಕು, ಗುಡ್ಡಗಳು ಬೇಕು, ಜೌಗು ಪ್ರದೇಶಗಳು ಬೇಕು, ನದಿಗಳು ಬದಿಗೆ ಬಿಸಾಡಿದ ಮರುಳು ರಾಶಿಗಳು ಇರಬೇಕು, ಆಗಷ್ಟೆ ಅದು ನದಿ.

ಸಹಜ ಜೀವ ಪರಿಸರಕ್ಕೆ ಹೊಸ ಪ್ರಾಣಿ, ಪಕ್ಷಿ, ಮೀನು ಅಥವಾ ಸಸ್ಯಗಳನ್ನು ಮಾನವ ಪರಿಚಯಿಸಿ ಜೀವಪರಿಸರವನ್ನು ಧ್ವಂಸಗೊಳಿಸಿದ ಉದಾಹರಣೆಗಳು ನಮ್ಮ ಭೂಮಿಯ ಇತಿಹಾಸದಲ್ಲಿ ಹೇರಳವಾಗಿವೆ. ಇತಿಹಾಸದಿಂದ ನಾವು ಏನನ್ನೂ ಕಲಿಯದಿದ್ದಾಗ ಇತಿಹಾಸ ಮತ್ತೆ ಮತ್ತೆ ಮರುಕಳಿಸುತ್ತಿರುತ್ತದೆ.

ಮೊದಲಿಗೆ ನಾವು ಒಂದು ಜೀವ ಪರಿಸರವನ್ನು ‘ಅಭಿವೃದ್ಧಿ’ಪಡಿಸುತ್ತೇವೆಂಬ ಭ್ರಮೆಯಿಂದ ಹೊರಬರಬೇಕಾದ ಅವಶ್ಯಕತೆ ಇದೆ. ಪರಿಸರ ಸಂರಕ್ಷಣೆಯ ವಿಷಯದಲ್ಲಿ ಅಭಿವೃದ್ಧಿ ಎಂದರೆ ನಾಶಗೊಳಿಸುವುದೆಂಬ ಅರ್ಥ ಬರುತ್ತದೆ. ಉದಾಹರಣೆಗೆ ಕಾಡಿನಲ್ಲಿ ಹೆಚ್ಚು ಹೆಚ್ಚು ಕೆರೆಗಳನ್ನು ನಿರ್ಮಿಸುವ ಕೆಲಸ ಬರದಿಂದ ಸಾಗಿದೆ. ಇದು ತರ್ಕಬದ್ಧವಾದುದ್ದಲ್ಲ ಮತ್ತು ಅವೈಜ್ಞಾನಿಕ ಕೂಡ. ಯಾವುದೇ ಜೀವ ಪರಿಸರದಲ್ಲಿ ಸಹಜವಾಗಿ ರೂಪುಗೊಂಡಿರುವ ಜಲಮೂಲಗಳು ಅಲ್ಲಿಯ ಜೀವಿಗಳ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಪ್ರಾಕೃತಿಕ ತಡೆಗೋಡೆಗಳಾಗಿ ಕಾರ್ಯನಿರ್ವಹಿಸುತ್ತವೆ. ಈ ರೀತಿಯ ತಡೆಗೋಡೆಗಳು ಒಟ್ಟು ಜೀವಜಾಲದ ಆರೋಗ್ಯಕ್ಕೆ ಅತ್ಯವಶ್ಯಕ.

ನಾವು ಉಳಿಸಿಕೊಳ್ಳಲು ಯತ್ನಿಸುತ್ತಿರುವುದು ಜೈವಿಕ ವಲಯಗಳನ್ನು ಎಂಬುದನ್ನು ಯಾವಾಗಲು ನೆನಪಿನಲ್ಲಿಟ್ಟುಕೊಳ್ಳಬೇಕು. ಒಂದು ಪರಿಸರ ವ್ಯವಸ್ಥೆಯಲ್ಲಿ (ಇಕೋಸಿಸ್ಟಂ) ಎಲ್ಲವೂ ಹೆಣೆದುಕೊಂಡಿರುತ್ತವೆ. ಮಣ್ಣು ಕಲ್ಲುಗಳಿಂದ ಮಳೆನೀರಿನವರೆಗೆ. ಅಣಬೆಯಿಂದ ಆನೆಯವರೆಗೆ... ಹಾಗಾಗಿ ಇಲ್ಲಿ ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ.

ಒಟ್ಟಾರೆ ಇಲ್ಲಿ ಅರಿವಿನ ಕೊರತೆ ಇದೆ. ಎಲ್ಲವೂ ಸಾಂಪ್ರದಾಯಿಕವಾಗಿ ಜರುಗುತ್ತಿವೆ. ಹಾಗಾದರೆ ನಾವೀಗ ಏನು ಮಾಡಬೇಕು? ಗುಣಮಟ್ಟದ ದೀರ್ಘಕಾಲದ ವೈಜ್ಞಾನಿಕ ಸಂಶೋಧನೆಗಳನ್ನು ಸರ್ಕಾರ ಪ್ರೋತ್ಸಾಹಿಸಬೇಕು ಮತ್ತು ಈ ಸಂಶೋಧನೆಗಳ ತಳಹದಿಯಲ್ಲೇ ನಮ್ಮ ಮುಂದಿನ ಪರಿಸರ ಸಂರಕ್ಷಣೆಯ ಹಾದಿಯನ್ನು ಗುರುತಿಸಿಕೊಳ್ಳಬೇಕು. ಒಳನೋಟಗಳಿರುವ ತಜ್ಞರ ಸಲಹೆಗೆ ತೆರೆದುಕೊಳ್ಳಬೇಕು. ಪರಿಸರದ ಸೂಕ್ಷ್ಮಗಳನ್ನು ಬಲ್ಲ ಅನುಭವಿಗಳನ್ನು ರಾಜ್ಯ ವನ್ಯಜೀವಿ ಸಲಹಾ ಮಂಡಳಿಗಳಂತಹ ಸಮಿತಿಗಳಿಗೆ ಪರಿಗಣಿಸಬೇಕು. ಅದು ರಾಜಕೀಯ ನಿರಾಶ್ರಿತರ ಅಥವಾ ಪ್ರಭಾವಿಗಳನ್ನು ಓಲೈಸುವ ಕೆಲಸಕ್ಕೆ ಸೀಮಿತವಾಗಬಾರದು.

ಲೇಖಕರು: ವನ್ಯಜೀವಿ ಸಾಕ್ಷ್ಯಚಿತ್ರ ನಿರ್ಮಾಪಕರು

ಸೇನಾನಿ, ಕೃಪಾಕರ

ಸೇನಾನಿ, ಕೃಪಾಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT