ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಡಳಿತದಲ್ಲಿ ರಾಜಕಾರಣಿಗಳು ಬೇಡ

ಅನಿಸಿಕೆ
Last Updated 2 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಭಾರತದ ಕ್ರೀಡಾಡಳಿತದಲ್ಲಿ ರಾಜಕಾರಣಿಗಳ ಪಾತ್ರ ಈಚೆಗಿನ ದಿನಗಳಲ್ಲಿ ಹೆಚ್ಚಾಗುತ್ತಲೇ ಇದೆ. ಇದರ ಸಾಧಕ ಬಾಧಕಗಳೇನೇ ಇದ್ದರೂ, ಕ್ರೀಡಾಪಟುಗಳ ಕೈಗೆ ಕ್ರೀಡಾಡಳಿತದ ಚುಕ್ಕಾಣಿ ಸಿಗುವಂತಾಗಬೇಕು ಎಂದು ನಾನು ಹಿಂದಿನಿಂದಲೂ ವಾದಿಸುತ್ತಾ ಬಂದಿದ್ದೇನೆ.

ಕ್ರೀಡಾಪಟುಗಳಿಗೆ ಸಂಬಂಧಪಟ್ಟ ಕ್ರೀಡೆಗಳ ಬಗ್ಗೆ ನಿಖರ ತಿಳಿವಳಿಕೆ ಇರುತ್ತದೆ. ಅದರ ಒಳಿತಿಗೆ ಯಾವ ತೆರನಾದ ಕಾರ್ಯಕ್ರಮಗಳನ್ನು ರೂಪಿಸಬಹುದೆಂಬ ಸ್ಪಷ್ಟ ಅರಿವು ಇರುತ್ತದೆ. ಅಂತಹವರಿಂದ ಉತ್ತಮ ಕ್ರೀಡಾಡಳಿತ ಸಾಧ್ಯ. ಕ್ರೀಡಾ ಪ್ರಗತಿಗೆ ಬೇಕಾದ ಅರ್ಥ ಪೂರ್ಣ ಕಾರ್ಯಕ್ರಮಗಳ ಅನುಷ್ಠಾನವೂ ಸಾಧ್ಯ. ಮಿಲ್ಕಾಸಿಂಗ್‌ ಮತ್ತು ಸಿ.ಎಂ.ಮುತ್ತಯ್ಯ ಅವರಂತಹ ಖ್ಯಾತ ಕ್ರೀಡಾಪಟುಗಳು ತಾವು ಉತ್ತಮ ಕ್ರೀಡಾಡಳಿತಗಾರರು ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಈಚೆಗಿನ ದಿನಗಳಲ್ಲಿ ಕ್ರೀಡಾಡಳಿತ ಎಂದರೆ ಪ್ರಭಾವಿ ರಾಜಕಾರಣಿಗಳ ಆಡುಂಬೊಲವಾಗಿದೆ ಎಂದರೆ ಅತಿಶಯೋಕ್ತಿಯಂತೂ ಅಲ್ಲವೇ ಅಲ್ಲ. ಬಹುಶಃ ಈ ಹಿನ್ನೆಲೆಯಲ್ಲಿಯೇ ಈಚೆಗೆ ಕಾಂಗ್ರೆಸ್‌ ಪಕ್ಷದ ಮುಖಂಡ ರಾಹುಲ್‌ ಗಾಂಧಿಯವರು ‘ಕ್ರೀಡಾಡಳಿತದಲ್ಲಿ ರಾಜಕಾರಣಿಗಳಿರುವುದು ಬೇಡ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆನಿಸುತ್ತದೆ.

ಕ್ರೀಡಾ ಚಟುವಟಿಕೆಗಳಲ್ಲಿ ಅತೀವ ಆಸಕ್ತಿ ಇರುವ ಕೆಲವು ರಾಜಕಾರಣಿಗಳು ಕ್ರೀಡಾಡಳಿತಕ್ಕೆ ಬಂದಿರು ವುದೂ ಇದೆ. ಆದರೆ ಇಂತಹ ಉದಾಹರಣೆಗಳು ಬಹಳ ಕಡಿಮೆ. ಕ್ರೀಡಾಡಳಿತದಲ್ಲಿ ಹೆಚ್ಚು ಪ್ರಚಲಿತಕ್ಕೆ ಬಂದು ಅದರ ಮೂಲಕ ರಾಜಕೀಯ ರಂಗದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿಕೊಳ್ಳಲು ಪ್ರಯತ್ನಿಸುವವರೂ ಇಲ್ಲದಿಲ್ಲ. ಇಂತಹವರಿಂದ ಕ್ರೀಡಾರಂಗ ಪಡೆದುಕೊಳ್ಳುವುದು ಅಷ್ಟರಲ್ಲೇ ಇದೆ.
ಕೆಲವೊಮ್ಮೆ ರಾಜಕೀಯ ರಂಗದಲ್ಲಿ ಸೋತವರು ಕ್ರೀಡಾರಂಗದತ್ತ ಕಾಲಿಡುವುದೂ ಇದೆ.

ಸಾರ್ವಜನಿಕ ಬದುಕಿನ ಎಲ್ಲಾ ಕ್ಷೇತ್ರಗಳಲ್ಲೂ ರಾಜಕಾರಣಿಗಳು ಮೂಗು ತೂರಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲಿಯೂ ಕ್ರೀಡಾ ರಂಗದತ್ತ ನುಗ್ಗಲು ಈಗ ರಾಜಕಾರಣಿಗಳ ನೂಕುನುಗ್ಗಲು ಜಾಸ್ತಿಯಾಗಿಬಿಟ್ಟಿದೆ. ಕ್ರೀಡಾಪಟುಗಳು ಮತ್ತು ಕ್ರೀಡಾ ಸಂಘಸಂಸ್ಥೆಗಳಿಗೆ  ಹಣಕಾಸಿನ ಸಮಸ್ಯೆ ಇದ್ದೇ ಇದೆ. ಹೀಗಾಗಿ ಕ್ರೀಡಾರಂಗದ ಮಂದಿ ರಾಜಕಾರಣಿಗಳತ್ತ ನೋಡುವುದು ಸಹಜ. ಇಂತಹ ಅಸಹಾಯಕ ಸ್ಥಿತಿಯ ಲಾಭ ಮಾಡಿಕೊಳ್ಳಲು ರಾಜಕಾರಣಿಗಳು ಸದಾ ತುದಿಗಾಲಲ್ಲಿ ನಿಂತಿರುತ್ತಾರೆ.

ರಾಜಕಾರಣಿಗಳು ಯಾವುದೇ ಕ್ರೀಡಾ ಸಂಘ ಸಂಸ್ಥೆಯೊಳಗೆ ಒಂದು ಸಲ ಕಾಲಿಟ್ಟರೆ ಅಲ್ಲಿಂದ ಅವರು ಅಷ್ಟು ಸುಲಭದಲ್ಲಿ ಕಾಲ್ತೆಗೆಯುವುದಿಲ್ಲ. ರಾಜಕಾರಣಿಗಳಿಗೆ ಒಳಗೆ ಹೋಗುವುದು ಗೊತ್ತಿದೆ. ಆದರೆ ಹೊರಗೆ ಹೋಗುವ ದಾರಿಯನ್ನು ಉದ್ದೇಶ ಪೂರ್ವಕವಾಗಿಯೇ ಕಡಿದುಕೊಂಡು ಬಿಡುತ್ತಾರೆ.

ಕ್ರೀಡಾ ಸಂಸ್ಥೆಗಳು ಯಾವ ಉದ್ದೇಶಕ್ಕಾಗಿ ರಾಜಕಾರಣಿಗಳನ್ನು ಒಳಗೆ ಸೇರಿಸಿಕೊಳ್ಳುತ್ತವೋ, ಆ ಉದ್ದೇಶಗಳು ಬಹಳಷ್ಟು ಸಲ ಈಡೇರುವುದೇ ಇಲ್ಲ. ಕ್ರೀಡಾರಂಗದ ಮಂದಿ ರಾಜಕಾರಣಿಗಳ ಬಣ್ಣದ ಮಾತುಗಳಿಗೆ ಮರುಳಾಗುವುದೇ ಹೆಚ್ಚು. ರಾಜಕಾರಣಿಗಳ ಅತಿಯಾದ ಪಾಲ್ಗೊಳ್ಳುವಿಕೆಯಿಂದಲೇ ಭಾರತ ಒಲಿಂಪಿಕ್‌ ಸಂಸ್ಥೆಯು ಹಲವು ಹಗರಣಗಳಲ್ಲಿ ಸಿಲುಕು ವಂತಾಯಿತು. ಕೊನೆಗೆ ಐಒಸಿಯ ಕೆಂಗಣ್ಣಿಗೂ ಗುರಿಯಾಗಬೇಕಾಗಿ ಬಂದು ಜಗತ್ತಿನ ರಾಷ್ಟ್ರಗಳ ಎದುರು ಇನ್ನಿಲ್ಲದ ಮುಜುಗರ ಅನುಭವಿಸುವಂತಾ ಯಿತು ಎನ್ನುವುದನ್ನು ನಾವು ಮರೆಯುವಂತಿಲ್ಲ.

ಅದೇನೇ ಇದ್ದರೂ, ಕ್ರೀಡಾ ರಂಗದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಮುಂತಾದ ಹತ್ತು ಹಲವು ವಿಭಾಗಗಳಲ್ಲಿ ಯಶಸ್ಸು ಕಾಣಬೇಕಾದರೆ ರಾಜಕೀಯ ಇಚ್ಛಾಶಕ್ತಿಯಂತು ಬೇಕೇ ಬೇಕು. ಈ ಹಿನ್ನೆಲೆಯಲ್ಲಿ ಕ್ರೀಡಾರಂಗಕ್ಕೆ ರಾಜಕಾರಣಿಗಳ ಬೆಂಬಲ ಬೇಕು, ನಿಜ. ಆದರೆ ರಾಜಕಾರಣಿಗಳೇ ಕ್ರೀಡಾಡಳಿತವನ್ನು ಕೈಗೆತ್ತಿಕೊಳ್ಳಬೇಕೆಂದೇನಿಲ್ಲ.

ಭಾರತದಲ್ಲಿ ಇವತ್ತು ಬಹುತೇಕ ಎಲ್ಲಾ ಕ್ರೀಡಾ ಸಂಸ್ಥೆಗಳಲ್ಲೂ ರಾಜಕಾರಣಿಗಳೇ  ತುಂಬಿಕೊಂಡಿ ದ್ದಾರೆ. ಇಂತಹ ಸಂಸ್ಥೆಗಳನ್ನು ಶುದ್ಧೀಕರಣಗೊಳಿಸಿ ಕ್ರೀಡಾಪಟುಗಳೇ ಆಡಳಿತವನ್ನು ಕೈಗೆತ್ತಿಕೊಳ್ಳಬೇಕಾದ ಅಗತ್ಯ ಬಹಳಷ್ಟಿದೆ.

(ಲೇಖಕರು ಏಷ್ಯನ್‌ ಕ್ರೀಡಾಕೂಟದಲ್ಲಿ ರಜತ ಪದಕ ವಿಜೇತ ಅಥ್ಲೀಟ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT