ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣುಮಕ್ಕಳ ಪೂರ್ಣ ಪ್ರಮಾಣದ ನಾಟಕ ಅಪೂರ್ಣ!

Last Updated 17 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಹೆಣ್ಣುಮಕ್ಕಳ ತಂಡವೊಂದನ್ನು ಕಟ್ಟಿಕೊಂಡು ಪ್ರಿಯಾ ಬೆಳ್ಳಿಯಪ್ಪ ಅವರು ‘ರಿಂಗ್‌ರೋಡ್‌’ ಸಿನಿಮಾ ನಿರ್ದೇಶಿಸಿರುವ ಸುದ್ದಿ ಚಿತ್ರರಸಿಕರಿಗೆ ಗೊತ್ತು. ಇಂತಹುದೇ ಪ್ರಯೋಗವೊಂದನ್ನು ಕೊಪ್ಪಳದ ಹೆಣ್ಣುಮಕ್ಕಳು ನಾಟಕದ ಮೂಲಕ ಮಾಡಿದ್ದಾರೆ. ಸಂಪೂರ್ಣವಾಗಿ ಕಲಾವಿದೆಯರೇ ಅಭಿನಯಿಸಿದ ಈ ನಾಟಕದ ಶೀರ್ಷಿಕೆ ‘ಅಪೂರ್ಣ’.

ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಇರುವ ಕೊಪ್ಪಳದ ಒಂದಷ್ಟು ಹೆಣ್ಣುಮಕ್ಕಳು ಸೇರಿ ರೂಪಿಸಿಕೊಂಡಿರುವ ಸಂಸ್ಥೆ ‘ಅಭಿನೇತ್ರಿ’ ಮಹಿಳಾ ಕಲಾಬಳಗ. ಈ ಬಳಗದಡಿ ಪ್ರದರ್ಶನ ಕಂಡ ‘ಅಪೂರ್ಣ’ ನಾಟಕ ಕಳೆದ ‘ಮಹಿಳಾ ದಿನ’ (ಮಾರ್ಚ್‌ 8) ರಂದು ಪ್ರದರ್ಶನಗೊಂಡು ಸಹೃದಯರ ಗಮನಸೆಳೆಯಿತು. ಒಟ್ಟು ಹನ್ನೊಂದು ಪಾತ್ರಗಳಿರುವ ಈ ನಾಟಕದಲ್ಲಿ ಎರಡು ಸ್ತ್ರೀ ಪಾತ್ರಗಳನ್ನು ಹೊರತುಪಡಿಸಿದರೆ, ಉಳಿದೆಲ್ಲವೂ ಪುರುಷ ಪಾತ್ರಗಳು. ಆದರೆ, ಗಂಡಸರ ಪಾತ್ರಗಳನ್ನೂ ಹೆಣ್ಣುಮಕ್ಕಳೇ ಪರಿಣಾಮಕಾರಿಯಾಗಿ ನಿರ್ವಹಿಸಿದ್ದು ನಾಟಕದ ವಿಶೇಷ. ರಂಗದ ಮೇಲೆ ಕಲಾವಿದೆಯರು ಮೀಸೆ ತಿರುವಿದ್ದು ನೋಡಿ ಗಂಡಸರು ‘ಭಲೇ’ ಎಂದು ಉದ್ಗರಿಸಿದ್ದು ನಾಟಕದ ಯಶಸ್ಸಿಗೆ ಸಂದ ಪ್ರಶಂಸೆ.

‘ಅಪೂರ್ಣ’ ನಾಟಕದ ಸೂತ್ರವನ್ನು ನಿರ್ವಹಿಸಿದ್ದು ಕೂಡ ಮಹಿಳೆಯೇ. ಶೀಲಾ ಹಾಲ್ಕುರಿಕೆ ಅವರ ನಿರ್ದೇಶನದಲ್ಲಿ ಪ್ರಯೋಗ ಪರಿಣಾಮಕಾರಿಯಾಗಿ ಮೂಡಿಬಂದಿತು. ನಿರ್ದೇಶನ ಮಾತ್ರವಲ್ಲದೆ ನಾಟಕದಲ್ಲಿನ ಪ್ರಮುಖ ಪಾತ್ರಗಳಲ್ಲೊಂದಾದ ನಾಟಕಕಾರನ ಪಾತ್ರದಲ್ಲಿ ಶೀಲಾ ನಟಿಸಿದ್ದರು ಕೂಡ. ವಿಜಯಲಕ್ಷ್ಮಿ ಕೊಟಗಿ, ಸವಿತಾ ಬಂಗಾರಶೆಟ್ಟರ, ಲತಾ ಹಿರೇಮಠ, ಮಾಲಾ ಬಡಿಗೇರ, ಅರುಣಾ ನರೇಂದ್ರ, ಪುಷ್ಪಾ ನಿಲೋಗಲ್‌, ಅಂಜನಾದೇವಿ ಕಲ್ಲೂರಕರ್‌, ಸರೋಜ ಬಾಕಳೆ, ಶಕುಂತಲಾ ಬೆನ್ನಾಳ ಹಾಗೂ ಮಂಜುಳಾ ಮೂಲಿಮನಿ ನಾಟಕವನ್ನು ಕಳೆಗಟ್ಟಿಸಿದ ಇತರ ಕಲಾವಿದೆಯರು.

ನಟನೆ, ನಿರ್ದೇಶನ ಹೆಣ್ಣುಮಕ್ಕಳಾದರೂ ಈ ನಾಟಕ ರಚನೆಕಾರರು ಮಾತ್ರ ಮಹಿಳೆಯಲ್ಲ! ‘ಅಪೂರ್ಣ’ ಕೊಪ್ಪಳದ ಸಾಹಿತಿ ಈಶ್ವರ ಹತ್ತಿ ಅವರ ರಂಗಕೃತಿ. ಮನುಷ್ಯನ ಅಂತರಂಗದೊಳಗಿನ ಸನ್ಯಾಸ, ಸಂಸಾರ, ಮನೆಮಠ, ಒಲುಮೆ, ಚಪಲ– ಹೀಗೆ ಹಲವು ಭಾವಗಳ ತಾಕಲಾಟಗಳ ಕಥೆಯಿದು. ಅಂದಹಾಗೆ, ಭಾಷಣ–ಬೋಧನೆಗಳಿಂತಲೂ ಇಂಥ ಪ್ರಯೋಗಗಳೇ ಸ್ತ್ರೀ ಅಸ್ಮಿತೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಳಿಸುತ್ತವೆ, ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT