ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನಿಂದಲೇ ಬದುಕಲು ಸಾಧ್ಯ!

Last Updated 12 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಹೊಟ್ಟೆ ತುಂಬಿದಮೇಲೆ ಹುಲಿ, ಸಿಂಹ ಕೂಡ ಪಕ್ಕದಲ್ಲಿಯೇ ಜಿಂಕೆ ಸುಳಿದಾಡಿದರೂ ತಲೆ ಎತ್ತಿ ನೋಡುವುದಿಲ್ಲ. ಮನುಷ್ಯ ಮಾತ್ರ ದಿನಕ್ಕೆ ಮೂರು ಹೊತ್ತು ಊಟ, ಮಧ್ಯದಲ್ಲಿ ಕಾಫಿ, ತಿಂಡಿ, ಕುರುಕಲು ತಿಂಡಿ - ಹೊಟ್ಟೆ ತುಂಬಿದ್ದರೂ ಕಣ್ಣಿಗೆ ಕಂಡದ್ದನ್ನು ತುರುಕುತ್ತಲೇ ಇರುವ ಪ್ರಾಣಿ. ಹಸಿವಿಲ್ಲದಿದ್ದರೂ ತಿನ್ನುವುದು, ಬಾಯಾರಿಕೆಯಿಲ್ಲದಿದ್ದರೂ ಕುಡಿಯುವುದು, ಸೋಮಾರಿಯಾಗಿ ನಿದ್ದೆ ಮಾಡುವುದು, ಬುದ್ಧಿವಂತ ಪ್ರಾಣಿ ಎನ್ನುವ ಮನುಷ್ಯನ ವೈಪರಿತ್ಯ.

ರೋಮನ್ ಸಾಮ್ರಾಜ್ಯದಲ್ಲಿ ಹೊಟ್ಟೆ ತುಂಬಾ ತಿಂದು, ಕೃತಕವಾಗಿ ಹೊರಹಾಕಿ, ಮತ್ತೆ ತಿನ್ನುವ ಕಾಲವಾಗಿತ್ತು. ಇದನ್ನು ನೋಡಿ ಅಸಹ್ಯಗೊಂಡ ತತ್ವಶಾಸ್ತ್ರಜ್ಞ ಸೆನಕ ಅದನ್ನು ‘ಕಕ್ಕುವ ಕಾಲ’ (Age of vomitorium) ಎಂದಿದ್ದ. ‘ಕ್ಷಯ’ ಎನ್ನುವುದರ ಮೂಲ ಅರ್ಥ ಎಗ್ಗಿಲ್ಲದೆ ತಿನ್ನುವುದು, ಕಬಳಿಸುವುದು ಎಂದರ್ಥ. ಅದೇ ಹೆಸರು ಕಾಯಿಲೆಗೂ ಬಂತು. ಇಂದಿನ ಶ್ರೀಮಂತಿಕೆಯಿಂದ ಬಂದ ರೋಗವನ್ನು ‘ಅಫ್ಲುಯೆನ್ಸಾ’ ಎನ್ನುವುದುಂಟು. ಮನುಷ್ಯನ ಸಾವು ಸ್ವಾಭಾವಿಕವಲ್ಲ, ತಿಂದು ತಂದುಕೊಳ್ಳುವ ಗಂಡಾಂತರ ಎಂದಿದ್ದ ಸೆನಕ (People don’t die, they kill themselves with fork and spoons).

ಹೊಟ್ಟೆಯ ವಿಷಯದಲ್ಲಿ ಸ್ವಲ್ಪ ಖಾಲಿ ಜಾಗ ಬಿಡುವುದು ಉತ್ತಮವೆಂದು ಹಿಂದಿನಿಂದಲೂ ಕೇಳಲ್ಪಟ್ಟಿದ್ದೇವೆ. ಕೆಲವರು ಹೇಳುವ ಪ್ರಕಾರ ಚೀಲ ತುಂಬುವಾಗ, ಬಾಯಿಕಟ್ಟಲು ಜಾಗವಿರಬೇಕು ಎನ್ನುವುದಾಗಿದೆ. ಇತ್ತೀಚೆಗೆ ಉಪವಾಸದಿಂದ ದೇಹದಲ್ಲಿ ಉಂಟಾಗುವ ಜೈವಿಕ ರಿಪೇರಿ ಕೆಲಸದ ಬಗ್ಗೆ ಬಹಳಷ್ಟು ಮಾಹಿತಿಗಳು ಹೊರಬಂದಿವೆ. ಅದು, ಧಾರ್ಮಿಕವಾಗಿ ಭಕ್ತಿ ಮತ್ತು ಶ್ರದ್ಧೆಯಿಂದ ಮಾಡುವ ಉಪವಾಸವಿರಬಹುದು ಅಥವಾ ಒಂದು ಹೊತ್ತಿನ ಊಟ ಹೆಚ್ಚಾದಾಗ, ಇನ್ನೊಂದು ಹೊತ್ತು ತಿನ್ನದೆ ಇರುವುದಾಗಬಹುದು. ಧಾರ್ಮಿಕ ಆಚರಣೆಗಳು ಅನೇಕ ಬಾರಿ ಈ ರೀತಿಯ ಲೌಕಿಕ ಪ್ರಯೋಜನಗಳಿಗೂ ಒದಗುವುದುಂಟು. ಉಪವಾಸ ಅಥವಾ ಕಟ್ಟುನಿಟ್ಟೆಂದರೆ, ಕಾಯಿಲೆ ಬಂದಾಗಅಪರೂಪಕ್ಕೊಮ್ಮೆ ಪ್ರಕೃತಿ ಚಿಕಿತ್ಸಾಲಯದಲ್ಲಿ ಒಳರೋಗಿಯಾಗಿ ಅಲ್ಲಿನ ನಿಬಂಧನೆಗಳಿಗೆ ಒಳಪಟ್ಟು, ದೇಹದ ತೂಕ ಇಳಿಸಿಕೊಳ್ಳುವುದು ಎನ್ನುವುದು ಇತ್ತೀಚಿನ ವ್ಯಾಖ್ಯಾನಗಳಲ್ಲಿ ಒಂದು!

ನಮ್ಮನ್ನು ಆರೋಗ್ಯವಾಗಿರಿಸಲು ದೇಹದಲ್ಲಿ ಎರಡು ಜೈವಿಕ ಪ್ರಕ್ರಿಯೆಗಳು ನಡೆಯುವುದು ಅನಿವಾರ್ಯ ಎನ್ನುವುದನ್ನು ಈಚೆಗೆ ಪ್ರತಿಪಾದಿಸಲಾಗಿದೆ. ಇದು ನಮ್ಮ ದೇಹದ ಅತ್ಯಂತ ಸೂಕ್ಷ್ಮ ಘಟಕವಾದ ಜೀವಕೋಶದೊಳಗೆ ಉಂಟಾಗುವ ಅಥವಾ ಜೀವಕೋಶಕ್ಕೇ ಉಂಟಾಗುವ ಪ್ರಕ್ರಿಯೆ. ಒಂದನ್ನು ‘ಆಟೋಫೇಜಿ’ (autophagy), ಇನ್ನೊಂದನ್ನು ‘ಏಪಾಪ್ಟೋಸಿಸ್’ (apoptosis) ಎನ್ನಲಾಗುತ್ತದೆ. ಇವೆರಡೂ ಪ್ರಕ್ರಿಯೆಗಳು ಉತ್ತಮವಾಗಿ ನಡೆಯಲು ಉಪವಾಸ ಮತ್ತು ವ್ಯಾಯಾಮ ಅತ್ಯಂತ ಸಹಾಯಕಾರಿ; ಅದರ ಪರಿಣಾಮ ಅನೇಕ ಕಾಯಿಲೆಗಳನ್ನು ದೂರವಿಡುವುದು. ‘ಆಟೋಫೇಜಿ’ ಎಂದರೆ ತನ್ನ ದೇಹವನ್ನು ತಾನೇ ತಿನ್ನುವುದು ಎಂದರ್ಥ. ಜೀವಕೋಶದೊಳಗೆ ಕೆಲವು ಜೈವಿಕ ರಸಾಯನಿಕಗಳನ್ನು ಗುಡಿಸಿ, ಒಂದೆಡೆ ರಾಶಿ ಹಾಕಿ, ಅವುಗಳನ್ನು ತುಂಡರಿಸಿ, ಅಲ್ಲಿ ಬಳಸಬಹುದಾದ ಉತ್ತಮ ವಸ್ತುಗಳನ್ನು ಮತ್ತೆ ಬಳಸಿಕೊಂಡು, ಬೇಡದ್ದನ್ನು ತ್ಯಾಜ್ಯವಸ್ತುವಾಗಿ ಹೊರಹಾಕುವ ಪ್ರಕ್ರಿಯೆ. ಮನೆಯ ಕಸವನ್ನು ಗುಡಿಸಿ, ಸ್ವಚ್ಛಗೊಳಿಸುವ ರೀತಿಯಲ್ಲಿ ನಮ್ಮ ಜೀವಕೋಶದೊಳಗೆ ನಡೆಯುವ ಪ್ರಕ್ರಿಯೆ. ಇದು ತಿಂಡಿಪೋತನ ದೇಹದಲ್ಲಿ ಪರಿಣಾಮಕಾರಿಯಾಗಿ ನಡೆಯುವುದಿಲ್ಲ. ಆಗಾಗ್ಗೆ ಹೊಟ್ಟೆ ಖಾಲಿ ಬಿಟ್ಟು ಅಥವಾ ಹೆಚ್ಚು ಆಹಾರಸೇವನೆ ಮಾಡದೆ, ಹಿತಮಿತವಾಗಿ ಆಹಾರವನ್ನು ಸೇವಿಸುವವರ ದೇಹದಲ್ಲಿ ಇದು ಅತ್ಯಂತ ಪರಿಣಾಮಕಾರಿಯಾಗಿ ಸಂಭವಿಸುತ್ತದೆ. ಇದರ ಸ್ವಿಚ್ ಚಾಲನೆಯಾಗುವುದೇ ಕ್ಯಾಲೊರಿ ಕಡಿಮೆ ಇದ್ದಾಗ. ಇನ್ನೊಂದು ಪ್ರಕ್ರಿಯೆ ಜೀವಕೋಶಗಳ ಉತ್ಪಾದನೆ ಆರೋಗ್ಯಕ್ಕೆ ಹಾನಿಯಾಗುವ ರೀತಿಯಲ್ಲಿ ಉಂಟಾದಾಗ, ಅವುಗಳಿಗೆ ‘ಆತ್ಮಹತ್ಯೆ’ ಮಾಡಿಕೊಳ್ಳುವಂತೆ ಸೂಚನೆ ಸಿಗುತ್ತದೆ. ಅವು ತಮ್ಮನ್ನು ತಾವು ನಮ್ಮ ದೇಹದೊಳಗೆ ಸಾಯಿಸಿಕೊಳ್ಳುತ್ತವೆ. ಈ ಪ್ರಕ್ರಿಯೆಯ ಮೇಲೆ ಕೇಂಬ್ರಿಜ್ಡ್ ಪ್ರಕಾಶನ ‘ಡೈಯಿಂಗ್ ಟು ಲಿವ್’ ಎಂಬ ಪುಸ್ತಕವೊಂದನ್ನು ಹೊರತಂದಿದೆ. ಇದರರ್ಥ ನಮ್ಮ ದೇಹದಲ್ಲಿ ನಿತ್ಯ ನಡೆಯುವ ಸಾವಿನಿಂದಲೇ ನಾವು ಬದುಕಿ ಉಳಿಯಲು ಸಾಧ್ಯ.

ಜೀವಕೋಶಗಳು ಆತ್ಮಹತ್ಯೆ ಮಾಡಿಕೊಳ್ಳದಿದ್ದಲ್ಲಿ ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ನಾಂದಿಯಾಗುವ ಸಾಧ್ಯತೆಯುಂಟು. ಅಂದರೆ ನಮ್ಮ ದೇಹ ಪ್ರಕೃತಿ ಇನ್ನೂ ನಮಗೆ ನಿಗೂಢ ಲೋಕವಾಗಿದೆ. ಇಲ್ಲಿ ಕಂಡುಬರುವ ಪ್ರಕ್ರಿಯೆ ನಮ್ಮನ್ನು ವಿಜ್ಞಾನದ ಮಾಹಿತಿಯ ಜೊತೆಗೆ ತತ್ವಶಾಸ್ತ್ರಕ್ಕೆ ತಳ್ಳಲೂಬಹುದು. ಹಾಗೆಯೇ ನಮ್ಮ ದೇಹದ ಜೀವಕೋಶಗಳು ವ್ಯವಹರಿಸುವ ರೀತಿ ಗಮನಿಸಿದರೆ, ಪರಿಸರ ವಿಜ್ಞಾನ, ಸುಸ್ಥಿರತೆ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ನಮಗೆ ಮಾರ್ಗಸೂಚಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT