ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಮೂತ್ರಕ ಸೋಂಕು

Last Updated 4 ಆಗಸ್ಟ್ 2018, 10:57 IST
ಅಕ್ಷರ ಗಾತ್ರ

ಚಿಣ್ಣರಲ್ಲೂ ಅಷ್ಟೆ , ಹೆಣ್ಣು ಮಕ್ಕಳಲ್ಲೇ ಮೂತ್ರಕ ಸೋಂಕುಗಳನ್ನು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ . ದೊಡ್ಡವರಲ್ಲಿ ಸಹ ಇದೇ ತಾರತಮ್ಯವನ್ನು ಗಮನಿಸುತ್ತೇವಲ್ಲಾ .. ಹೀಗೇಕೆ ? ಹೆಣ್ಣುಮಕ್ಕಳಲ್ಲಿ ಮೂತ್ರನಾಳದ ಉದ್ದ ಕಡಿಮೆ . ಅದು ನೇರವಾಗಿ ಯೋನಿ ಮುಖದಲ್ಲಿ ತೆರೆದುಕೊಳ್ಳುತ್ತದೆ . ಹಾಗಾಗಿ ,, ಮಕ್ಕಳ ಮೂತ್ರಕ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ , ಸೂಕ್ತ ಸಮಯದಲ್ಲಿ ನಾವು ನೀಡದೆ ಹೋದರೆ , ಮುಂದೆ ಅವರ ಮೂತ್ರಪಿಂಡಗಳು ಹಾಳಾಗುವ ಸಾಧ್ಯತೆ ಇದೆ . ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ .

ಇಲ್ಲೊಂದು ತೊಡಕಿದೆ . ಮಕ್ಕಳು ತಮ್ಮ ಮೂತ್ರಕ ತೊಂದರೆಗಳನ್ನು ಬೇಗನೇ ಹೇಳಿಕೊಳ್ಳುವುದೂ ಇಲ್ಲ . ಅದರಿಂದ ಪೋಷಕರು ಮಕ್ಕಳನ್ನು ಗಮನಿಸುತ್ತಲೇ ಇರಬೇಕು . ಅವರು , ಪದೇ ಪದೇ ಮೂತ್ರವಿಸರ್ಜನೆಗೆ ಓಡುತ್ತಿರುವಾಗ ಅಥವಾ ಆ ಸಮಯದಲ್ಲಿ ನೋವಿನಿಂದ ಮುಖ ಕಿವಿಚುತ್ತಿದ್ದಾಗ , ಮನೆಯ ಹಿರಿಯರು ಅದಕ್ಕೆ ಕಾರಣ ಹುಡುಕಲು ಪ್ರಯತ್ನ ಮಾಡಬೇಕು . ಆಗ ಜ್ವರವೂ ಇರಬಹುದಾದ್ದರಿಂದ , ಬರೀ ಮೆಟಾಸಿನ್ , ಕ್ರೋಸಿನ್ ಮಾತ್ರೆಗಳನ್ನು ಕೊಡುವುದಕ್ಕಿಂತ ಅದಕ್ಕೆ ಕಾರಣವನ್ನು ಕಂಡುಹಿಡಿಯುವುದು ಒಳ್ಳೆಯದು . ಮೂತ್ರಕ ಸೋಂಕುಗಳಿದ್ದಾಗ ಮಗುವಿಗೆ ವಾಂತಿ , ಹೊಟ್ಟೆನೋವುಗಳೂ ಸಾಮಾನ್ಯವಾಗಿ ಇರುತ್ತವೆ . ಅವರಿಗೆ ಆಹಾರವೂ ಸೇರುವುದಿಲ್ಲ . ಈ ಪರಿಸ್ಥಿತಿಯಲ್ಲಿ ತಡಮಾಡದೆ ಮಕ್ಕಳನ್ನು ತಜ್ಞರ ಬಳಿಗೆ ಕರೆದೊಯ್ಯಲೇಬೇಕು .

ಅಲ್ಲಿ , ಮಗುವಿನ ಮೂತ್ರಪರೀಕ್ಷೆ ಮಾಡುತ್ತಾರೆ . ಅದರಲ್ಲಿ , ಕೀವಿನ ಜೀವಕೋಶಗಳೂ ಕ್ರಿಮಿಗಳೂ ಕಂಡರೆ , ಮೂತ್ರದ ಸೋಂಕು ಖಚಿತವಾಗುತ್ತದೆ . ಆ ಕ್ರಿಮಿಗಳನ್ನು ಪ್ರಯೋಗಶಾಲೆಯಲ್ಲಿ ವೃದ್ಧಿಸಿ , ಅವು ಯಾವಯಾವ ಜೀವಿರೋಧಕಗಳಿಗೆ ಮಣಿಯುತ್ತವೆ ಎಂತಲೂ ಮುಂದಿನ ದಿನಗಳಲ್ಲಿ ತಿಳಿಸುತ್ತಾರೆ . ಅವೇ ಜೀವಿರೋಧಕಗಳನ್ನು ( ಆಂಟಿಬಯಾಟಿಕ್ಸ್ ) 7-–10 ದಿನಗಳವರೆಗೂ ನೀಡುತ್ತಾರೆ . ಅಗತ್ಯವಿದ್ದಾಗ ಕ್ಷ - ಕಿರಣಗಳಲ್ಲಿ ಕಾಣುವಂಥ ದ್ರವಗಳನ್ನು ಮೂತ್ರಕೋಶಕ್ಕೆ ಸಾಗಿಸಿ , ಎಕ್ಸ್ - ರೇ ತೆಗೆದು ನೋಡುತ್ತಾರೆ . ಇತ್ತೀಚೆಗಂತೂ ಅತ್ಯಾಧುನಿಕ ವಿಶೇಷ ತಪಾಸಣೆಗಳೂ ಬಂದಿವೆ . ಸ್ಕಾನಿಂಗ್ ಮಾಡಲೇ ಬೇಕಾಗುತ್ತದೆ .

ಇವೆಲ್ಲಾ ಪರೀಕ್ಷೆಗಳಿಂದ ಸೋಂಕು ಎಷ್ಟು ಮೇಲಕ್ಕೇರಿದೆ , ಮೂತ್ರಪಿಂಡಗಳಿಗೇನಾದರೂ ( ಕಿಡ್ನಿ ) ಹಾನಿಯಾಗಿದೆಯೇ , ಮೂತ್ರವೇನಾದರೂ ಮೂತ್ರಕೋಶದಿಂದ ಹಿಮ್ಮುಖವಾಗಿ ಹರಿದು , ಯೂರಿಟರ್ ಗಳನ್ನು ( ಮೂತ್ರಪಿಂಡಕ್ಕೆ ಹೋಗುವ ನಾಳ ) ಪ್ರವೇಶಿಸುತ್ತಿದೆಯೇ , ಮೂತ್ರಪಿಂಡಗಳಲ್ಲಿ ಕಲ್ಲು ಉತ್ಪತ್ತಿಯಾಗಿದೆಯೇ .. ಎಂದೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕುತ್ತದೆ . ಕೆಲವೊಮ್ಮೆ ಈ ತೊಂದರೆಗಳು , ವಂಶಪಾರಂಪರ್ಯವಾಗಿಯೂ ಬರುವ ಕಾರಣ , ಮನೆಯಲ್ಲಿ ಯಾರಿಗಾದರೂ ಮೂತ್ರಕ ಸಮಸ್ಯೆಗಳು ಇದ್ದವೇ ಎಂದು ಕೇಳುವುದು ಒಳ್ಳೆಯದು .

ಮೂತ್ರಕ ವ್ಯವಸ್ಥೆಯಲ್ಲಿ ಅಡಚಣೆ ಉಂಟಾದಾಗ , ಮೂತ್ರಪಿಂಡಗಳಲ್ಲಿ ಮೂತ್ರ ಸಂಚಯವಾಗಿ , ಆ ಅಂಗಗಳು ಗಾತ್ರದಲ್ಲಿ ಹಿಗ್ಗುತ್ತವೆ . ದೊಡ್ಡವರಂತೆ ಮಕ್ಕಳಲ್ಲೂ ಸಹ ಮೂತ್ರಪಿಂಡಗಳಲ್ಲಿ ಕಲ್ಲು ಉತ್ಪತ್ತಿಯಾಗುವುದುಂಟು . ಅಂಥ ಸಂದರ್ಭಗಳಲ್ಲಿಯೂ ಸೋಂಕು ಒಳನುಗ್ಗುತ್ತದೆ . ಇದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಯೊಂದೇ ದಾರಿಯಾಗಿದ್ದ ಕಾಲವಿತ್ತು . ಆದರೆ , ಈಗ ಆ ಕಲ್ಲುಗಳನ್ನು ಲೇಸರ್ ಕಿರಣಗಳ ಸಹಾಯದಿಂದ ಪುಡಿ ಪುಡಿ ಮಾಡುತ್ತಾರೆ . ಆ ಕಲ್ಲಿನ ಚೂರುಗಳು ಮೂತ್ರದಲ್ಲಿ ಹೊರಬೀಳುತ್ತವೆ . ಉದರದರ್ಶಕವನ್ನು ಬಳಸಿಯೂ ಚಿಕಿತ್ಸೆ ಜಾರಿಯಿದೆ . ಹೊರಬೀಳುವ ಕಲ್ಲುಗಳನ್ನು ನಂತರ ತಪಾಸಣೆಗೆ ರವಾನಿಸುತ್ತಾರೆ . ಅವುಗಳ ರಚನೆಯನ್ನು ತಿಳಿದುಕೊಂಡು , ಮಗುವಿನ ಆಹಾರ ಹೇಗಿರಬೇಕೆಂದೂ ಸೂಚನೆ ನೀಡುತ್ತಾರೆ .

ಗಂಡುಮಕ್ಕಳಲ್ಲಿ ಶಿಶ್ನದ ಮುಂದೊಗಲು ಕೆಲವೊಮ್ಮೆ ಗಟ್ಟಿಯಾಗಿ ಅಂಟಿಕೊಂಡು , ಮೂತ್ರ ಸಲೀಸಾಗಿ ಹೋಗಲು ಅಡ್ಡಿಯಾಗುತ್ತದೆ . ಅದರಿಂದಲೂ ಮೂತ್ರಕ ಸೋಂಕುಗಳು ಮಗುವಿಗೆ ತೊಂದರೆ ಕೊಡುತ್ತವೆ . ಇಲ್ಲಿ ಚಿಕಿತ್ಸೆ ಸುಲಭ . ‘ ಸುನ್ನತಿ’ ಎನ್ನುವ ಚಿಕ್ಕ ಆಪರೇಷನ್ ಮಾಡಿ ಮುಂದೂಗಲನ್ನು ತೆಗೆದಾಗ ಮೂತ್ರ ಸುಲಭವಾಗಿ ಹರಿದು ಸೋಂಕು ವಾಸಿಯಾಗುತ್ತದೆ .

ಮಕ್ಕಳು , ಮೂತ್ರವಿಸರ್ಜನೆಯನ್ನು ಮುಂದೂಡುವ ಅಭ್ಯಾಸವನ್ನು ಇಟ್ಟುಕೊಂಡಿದ್ದರೆ ಅದರಿಂದಲೂ ಸೋಂಕು ಒಳಸೇರುವ ಸಾಧ್ಯತೆ ಇರುತ್ತದೆ . ನೀರನ್ನು ಧಾರಾಳವಾಗಿ ಕುಡಿಯಲು ನಾವು ಮಕ್ಕಳಿಗೆ ಕಲಿಸಬೇಕು . ಮೂತ್ರಕ ಸೋಂಕುಗಳಿದ್ದಾಗ ಮೂತ್ರ ಉರಿಯುತ್ತದೆ . ಮೂತ್ರವಿಸರ್ಜನೆಯ ನಿಯಂತ್ರಣವೂ ತಪ್ಪಿಹೋಗಬಹುದು .

ಮಲಬದ್ಧತೆ ಇದ್ದರೂ ಅಷ್ಟೆ . ಆ ಮಗುವಿಗೆ ಮೂತ್ರಕ ಸೋಂಕು ಸೇರುವ ಸಾಧ್ಯತೆ ಇರುತ್ತದೆ . ಇದಕ್ಕಾಗಿ ಮಗು ಸಾಕಷ್ಟು ಸೊಪ್ಪು , ತರಕಾರಿ ಹಣ್ಣುಗಳನ್ನು ತಿನ್ನುವಂತೆ ನೋಡಿಕೊಳ್ಳಬೇಕು . ಮಗುವಿನ ಶುಚಿತ್ವಕ್ಕೆ ವಿಪರೀತ ಕಾಳಜಿ ತೋರಿ ಅದರ ಜನನಾಂಗಗಳಿಗೆ ಸೋಪು , ಶಾಂಪು ಇತ್ಯಾದಿಗಳನ್ನು ಹೆಚ್ಚಾಗಿ ಹಾಕುತ್ತಾರೆ . ಇದು ತಪ್ಪು . ಮೂತ್ರಕ ಸೋಂಕುಗಳಿಗೆ ಇದರಿಂದ ಮಣೆ ಹಾಕಿದಂತಾಗುತ್ತದೆ . ಟಬ್ ಬಾತ್ ಕೊಡುವಾಗ ಅಲ್ಲಿನ ನೀರಿನಲ್ಲಿ ಸುವಾಸನೆ ನೀಡುವ , ನೊರೆ ಕೊಡುವ ವಸ್ತುಗಳನ್ನು ಸೇರಿಸಿದಾಗ ಈ ತೊಂದರೆಯನ್ನು ಆಹ್ವಾನಿಸಿದಂತೆ .

ಮಕ್ಕಳಿಗೆ ಟೀ , ಕಾಫಿ , ಕೋಲಾಗಳ ಅಭ್ಯಾಸ ಇಲ್ಲದಿರಲಿ . ಇವು ಸೂಕ್ಷ್ಮವಾಗಿರುವ ಮೂತ್ರಕವ್ಯವಸ್ಥೆಗೆ ಆರೋಗ್ಯಕರವಲ್ಲ . ಬದಲಾಗಿ . ಮೊಸರು , ಮಜ್ಜಿಗೆಗಳು , ನಿಂಬೆ . ಕಿತ್ತಳೆ ರಸಗಳೇ ಧಾರಾಳವಾಗಿರಲಿ . ಅವರಿಗೆ ಮೂತ್ರಮಾಡಬೇಕೆಂಬ ಅನಿಸಿಕೆ ಬಂದೊಡನೆ ವಿಸರ್ಜನೆಗೆ ಹೋಗುವಂತೆ ನೋಡಿಕೊಳ್ಳಿ . ಶಾಲಾಮಕ್ಕಳ ಜೊತೆಯಲ್ಲಿ ಸದಾ ನೀರಿನ ಶೀಸೆ ಇರಲಿ .

ಈ ಪುಟಾಣಿಗಳಲ್ಲಿ ತಮ್ಮ ಜನನೇಂದ್ರಿಯವನ್ನು ಪದೇ ಪದೇ ಮುಟ್ಟಿ ನೋಡಿಕೊಳ್ಳುವ ಅಭ್ಯಾಸವಿದ್ದರೆ ಅದನ್ನು ಮೃದು ಮಾತುಗಳಿಂದಲೇ ದೂರ ಮಾಡಿರಿ . ಚಿಕ್ಕ ಹುಡುಗಿಯರಂತೂ ಆಟವಾಡುತ್ತಾ ತಮ್ಮ ಯೋನಿಯೊಳಗೆ ಬಳಪದ ಚೂರನ್ನೋ ಕಡಲೆ ಬೀಜವನ್ನೋ ಇನ್ನಿತರ ಯಾವುದಾದರೂ ಬೀಜವನ್ನೋ ತುರುಕಿಕೊಳ್ಳುವುದನ್ನೂ ಸಾಮಾನ್ಯವಾಗಿ ಗಮನಿಸುತ್ತೇವೆ . ಇದು ಅಲ್ಲಿ ಸೋಂಕನ್ನು ತಂದಿಟ್ಟು , ಅದು ಮೂತ್ರಕೋಶದೊಳಗೂ ಮೂತ್ರನಾಳಕ್ಕೂ ಪ್ರವೇಶಿಸುತ್ತದೆ .

ಹೆಣ್ಣು ಮಕ್ಕಳ ಮೇಲೆ ಜರುಗುವ ಅತ್ಯಾಚಾರಗಳೂ ಸುಲಭವಾಗಿ ಮೂತ್ರಕ ಸೋಂಕುಗಳನ್ನು ತಂದಿಡುತ್ತವೆ . ನಮ್ಮಲ್ಲಿ ವ್ಯಾಪಕವಾಗಿರುವ ಮೂಢನಂಬಿಕೆಗಳೂ ಇದಕ್ಕೆ ಕಾರಣವಾಗುತ್ತಿವೆ . ಯಾವತ್ತೂ ಮಕ್ಕಳಲ್ಲಿ ಮೂತ್ರಕ ಸೋಂಕನ್ನು ಹಗುರವಾಗಿ ತೆಗೆದುಕೊಳ್ಳುವುದು ಬೇಡ .

ಸುಧಾ, ಸಂಪುಟ 54 ಸಂಚಿಕೆ 32

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT