ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗನಿರೋಧಕ ಶಕ್ತಿ ವೃದ್ಧಿಸುವ ಸತು

Last Updated 10 ಜುಲೈ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಕೊರೊನಾ ಸೋಂಕು ಇಡೀ ವಿಶ್ವವನ್ನೇ ಕಾಡುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಎಲ್ಲರ ಬಾಯಿಯಲ್ಲೂ ರೋಗನಿರೋಧಕ ಶಕ್ತಿಯದ್ದೇ ಮಾತು. ರೋಗನಿರೋಧಕ ಶಕ್ತಿ ಕುಂಠಿತವಾಗಿರುವ ವ್ಯಕ್ತಿಗಳಲ್ಲಿ ಕೊರೊನಾ ಸೋಂಕಿನ ತೀವ್ರತೆ ಹೆಚ್ಚು ಎಂದು ತಿಳಿದು ಬಂದಿರುವುದರಿಂದ, ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಜನಸಾಮಾನ್ಯರು ಮನೆಮದ್ದು, ಕಷಾಯ, ಚೂರ್ಣ, ವ್ಯಾಯಾಮ, ಯೋಗ, ಧ್ಯಾನ.. ಹೀಗೆ ನಾನಾ ವಿಧಾನಗಳ ಮೊರೆ ಹೋಗಿದ್ದಾರೆ. ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಕಾರಿ ಎಂದು ಸಾಬೀತಾಗಿರುವ ಸತು ಮತ್ತು ‘ಸಿ’ ಜೀವಸತ್ವವನ್ನು ಕೊರೊನಾ ಸೋಂಕಿತ ವ್ಯಕ್ತಿಗಳಿಗೆ ವೈದ್ಯರೇ ನೀಡುತ್ತಿದ್ದಾರೆ.

ಏನಿದು ಸತು?
ಖನಿಜಾಂಶಗಳ ಗುಂಪಿಗೆ ಸೇರುವ ಇದೊಂದು ಸೂಕ್ಷ್ಮ ಪೌಷ್ಟಿಕಾಂಶ. ಜೀವಕೋಶಗಳ ಬೆಳವಣಿಗೆ, ಚಯಾಪಚಯ ಕ್ರಿಯೆಗಳು ಮತ್ತು ನರವ್ಯೂಹದ ಬೆಳವಣಿಗೆಗಳಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿ, ಹಲವಾರು ರೋಗಾಣುಗಳ ಸೋಂಕಿನಿಂದ ದೇಹವನ್ನು ರಕ್ಷಿಸುತ್ತದೆ. ಮಕ್ಕಳ ಭೇದಿಯ ತೀವ್ರತೆ ಮತ್ತು ಅವಧಿಯನ್ನು ನಿಯಂತ್ರಿಸುವುದರಿಂದ ಓಆರ್‌ಎಸ್ ದ್ರಾವಣದ ಜೊತೆಯಲ್ಲಿ ಕಡ್ಡಾಯವಾಗಿ ಸತುವನ್ನೂ ಸಹ ನೀಡಲಾಗುತ್ತದೆ. ಹೀಗಾಗಿಯೇ ಈ ಜೋಡಿಯನ್ನು ‘ಭೇದಿಯ ಜೋಡಿ’ ಎನ್ನಲಾಗುತ್ತದೆ.

‘ವಿಲ್ಸನ್ ಕಾಯಿಲೆ’ ಎಂಬ ತಾಮ್ರದ ಚಯಾಪಚಯಕ್ಕೆ ಸಂಬಂಧಿಸಿದ ಕಾಯಿಲೆಯ ಚಿಕಿತ್ಸೆಯಲ್ಲಿಯೂ ಇದನ್ನು ಬಳಸಲಾಗುತ್ತದೆ. ಮಲೇರಿಯಾದ ನಿಯಂತ್ರಣ ಮತ್ತು ಹದಿಹರೆಯದವರನ್ನು ಬಹುವಾಗಿ ಕಾಡುವ ಮೊಡವೆಯ ನಿಯಂತ್ರಣದಲ್ಲಿಯೂ ಇದು ಸಹಕಾರಿ. ಇಂತಹ ಬಹೂಪಯೋಗಿ ಗುಣಗಳಿರುವುದರಿಂದಲೇ ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರ ‌ಸತುವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ.

ನೈಸರ್ಗಿಕವಾಗಿ..
ಎದೆಹಾಲು, ದ್ವಿದಳ ಧಾನ್ಯಗಳು, ಮೀನು, ಮೊಟ್ಟೆ, ಹಾಲು, ಗಿಣ್ಣು, ಕಡಲ ಮೀನು, ಕುಸುಬೆ ಹಾಗೂ ಕಲ್ಲಂಗಡಿಯ ಬೀಜಗಳು ಮುಂತಾದ ಆಹಾರ ಪದಾರ್ಥಗಳಲ್ಲಿ ಸತು ಲಭ್ಯವಿರುತ್ತದೆ. ಬೆಳೆಯುವ ಮಕ್ಕಳಿಗೆ ಪ್ರತಿನಿತ್ಯ 3– 5 ಮಿ.ಗ್ರಾಂ, ವಯಸ್ಕರಿಗೆ 8– 11 ಮಿ.ಗ್ರಾಂ. ಮತ್ತು ಗರ್ಭಿಣಿ ಮಹಿಳೆಯರಿಗೆ ಅದಕ್ಕಿಂತಲೂ ತುಸು ಹೆಚ್ಚಿನ ಪ್ರಮಾಣದ ಸತುವಿನ ಅಗತ್ಯವಿರುತ್ತದೆ.

ಸತು ಅಡಕಗೊಂಡಿರುವ ಆಹಾರ ಪದಾರ್ಥಗಳನ್ನು ಸೇವಿಸದಿರುವುದು, ಅಪೌಷ್ಟಿಕತೆ ಮತ್ತು ಪೌಷ್ಟಿಕಾಂಶಗಳನ್ನು ಹೀರಿಕೊಳ್ಳಲಾಗದಂಥ ಕೆಲವು ಕರುಳಿನ ಸಮಸ್ಯೆ ಮುಂತಾದ ಕಾರಣಗಳಿಂದ ದೇಹದಲ್ಲಿ ಸತುವಿನ ಕೊರತೆಯುಂಟಾಗಬಹುದು.

ಕೊರತೆಯ ಲಕ್ಷಣಗಳು
ಅತ್ಯಂತ ಕಡಿಮೆ ಪ್ರಮಾಣದ ಸತುವಿನ ಕೊರತೆಯೂ ಸಹ ತೀವ್ರ ಸ್ವರೂಪದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಲ್ಲದು. ಸತುವಿನ ಕೊರತೆಯ ಲಕ್ಷಣಗಳೆಂದರೆ-

*ಮಕ್ಕಳಲ್ಲಿ ದೈಹಿಕ ‌ಬೆಳವಣಿಗೆಯ ಕುಂಠಿತ

* ಹದಿಹರೆಯದವರಲ್ಲಿ ಲೈಂಗಿಕ ಬೆಳವಣಿಗೆಯ ಕುಂಠಿತ

* ರಕ್ತಹೀನತೆ

* ಹಸಿವಿಲ್ಲದಿರುವಿಕೆ

* ಕೂದಲುದುರುವಿಕೆ

* ಗಾಯ ಮಾಯುವುದರಲ್ಲಿ ನಿಧಾನ

* ಕೀಲೆಲುಬುಗಳ ಸಮಸ್ಯೆಗಳು

* ರೋಗನಿರೋಧಕ ಶಕ್ತಿ ಕುಗ್ಗುವುದರಿಂದ ತೀವ್ರತರದ ನ್ಯುಮೋನಿಯಾ ಇತ್ಯಾದಿ.

‘ಆ್ಯಕ್ರೋಡರ್ಮಟೈಟಿಸ್ ಎಂಟೆರೋಪಥಿಕಾ’ ಎಂಬ ಒಂದು ಆನುವಂಶೀಯ ಕಾಯಿಲೆಯಲ್ಲಿ ಆಹಾರ ಪದಾರ್ಥಗಳಲ್ಲಿರುವ ಸತು ಸಮರ್ಪಕವಾಗಿ ರಕ್ತಕ್ಕೆ ಹೀರಿಕೊಳ್ಳದೆ, ಶೈಶವಾವಸ್ಥೆಯಿಂದಲೇ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳತೊಡಗುತ್ತವೆ. ಅವು ಯಾವುವೆಂದರೆ-

* ಬಾಯಿ ಮತ್ತು ಗುದದ್ವಾರದ ಸುತ್ತ ಹಾಗೂ ಅಂಗೈ- ಅಂಗಾಲುಗಳಲ್ಲಿ ಇಸುಬು ಮತ್ತು ಒಣಗಿ ಚಕ್ಕಳಗಟ್ಟಿದ ಚರ್ಮ

* ದೀರ್ಘಕಾಲದ ಭೇದಿ

* ಬಾಯಿಯಲ್ಲಿ ಹುಣ್ಣು

ಪರಿಹಾರೋಪಾಯಗಳು
ಸತು ಅಡಕಗೊಂಡಿರುವ ಆಹಾರ ಪದಾರ್ಥಗಳ ಸೇವನೆಯನ್ನು ಉತ್ತೇಜಿಸುವುದು, ರಕ್ತ ಪರೀಕ್ಷೆಗಳಿಂದ ಸತುವಿನ ಕೊರತೆ ದೃಢಪಟ್ಟವರಿಗೆ ಬಾಹ್ಯರೂಪದ ಸತು (ಮಾತ್ರೆ ಮತ್ತು ದ್ರವ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ) ವನ್ನು ನೀಡುವುದು ಮುಂತಾದ ಸುಲಭೋಪಾಯಗಳಿಂದ ಕೊರತೆಯನ್ನು ನೀಗಿಸಿ ಆರೋಗ್ಯವನ್ನು ಸಂರಕ್ಷಿಸಬಹುದು. ಆನುವಂಶೀಯ ಕೊರತೆಯ ಕಾಯಿಲೆಯಲ್ಲಿ ಅಧಿಕ ಪ್ರಮಾಣದ ಬಾಹ್ಯರೂಪದ ಸತುವನ್ನು ಜೀವನಪರ್ಯಂತ ನೀಡಬೇಕಾಗುತ್ತದೆ.

(ಲೇಖಕ: ಪ್ರಾಧ್ಯಾಪಕರು ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ, ತುಮಕೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT