ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಋತುಬಂಧ, ಖಿನ್ನತೆ

Last Updated 5 ಜೂನ್ 2015, 19:30 IST
ಅಕ್ಷರ ಗಾತ್ರ

ಸಾಮಾನ್ಯವಾಗಿ 25 ಪ್ರತಿಶತ ಮಹಿಳೆಯರಲ್ಲಿ ‘ಮಾನಸಿಕ ಖಿನ್ನತೆ’ ಜೀವನದಲ್ಲಿ ಎಂದಾದರೊಮ್ಮೆ ಕಂಡು ಬರುವ ಸಾಧ್ಯತೆ ಹೆಚ್ಚು. ಗಂಡಸರಿಗೆ ಹೋಲಿಸಿದಲ್ಲಿ ಇದರ ಪ್ರಮಾಣ ಬಹಳ ಹೆಚ್ಚಿರುತ್ತದೆ. ಮೂಳೆನೋವು, ಹೃದಯದ ತೊಂದರೆ ಮುಂತಾದ ದೈಹಿಕ ತೊಂದರೆಗಳಷ್ಟೇ ಪ್ರಮಾಣದಲ್ಲಿ ಶರೀರವನ್ನು ದುರ್ಬಲಗೊಳಿಸುವ ಸಾಮರ್ಥ್ಯವಿದೆ ಈ ಖಿನ್ನತೆಗೆ.

ಸಾಮಾನ್ಯವಾಗಿ ಯಾವುದೇ ವಯಸ್ಸಿನಲ್ಲೂ ಕಾಣಿಸಬಹುದಾದ ಈ ತೊಂದರೆ ಮುಟ್ಟು ನಿಲ್ಲುವ ಸಮಯದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬದಲ್ಲಿ ಎಲ್ಲರ ಮಧ್ಯೆ ರಜೋನಿವೃತ್ತಿ ಅಥವಾ ಮೆನೊಪಾಸ್ ಎಂಬುದು ಒಂದು ಪ್ರಮುಖ ಘಟ್ಟವೆಂದು ತೋರುತ್ತಿರಲಿಲ್ಲ. ಮಾನಸಿಕ ತುಮುಲ ಅಷ್ಟಾಗಿ ಎದ್ದು ಕಂಡಿರಲಿಲ್ಲ. ಆದರೆ ಅನೇಕ ಜವಾಬ್ದಾರಿಗಳನ್ನು ತೂಗಿಸಿಕೊಂಡು ನಿರ್ವಹಿಸಬೇಕಾ ಗಿರುವ ಇಂದಿನ ಮಹಿಳೆ ಈ ತೊಂದರೆಗೊಳಗಾಗುವುದು ಹೆಚ್ಚು.

ಇಂದು ಮಹಿಳೆಗೆ ಮೆನೊಪಾಸ್ ಅವಧಿ ಹೆಚ್ಚಾಗಿ ಜೀವನದ ಎಲ್ಲ ಆಯಾಮಗಳಲ್ಲೂ ಒಂದು ರೀತಿಯ ಪಕ್ವತೆಯ ಹಂತ ತಲುಪಿಯೂ ತಲುಪದಂತಹ ಕಿರಿಕಿರಿ ಸಮಯ.  ಮನಸ್ಸು ಮುನಿಸಿಕೊಂಡಿರುವಾಗಲೇ  ಹಾರ್ಮೋನ್‌ಗಳ ಏರುಪೇರು ಮತ್ತಷ್ಟು ಖಿನ್ನತೆಯೆಡೆ ದೂಡುವುದು ಸಹಜ.  

ಓದಿ ಸಂಪಾದಿಸುತ್ತಿರುವ ವರನ್ನೂ ಸೇರಿಸಿ, ಹೆಚ್ಚಿನ ಮಹಿಳೆಯರು, ಇಂದಿಗೂ ರಕ್ತಹೀನತೆ ಹೊಂದಿರುವುದೂ ನಿಜ! ವಿಟಮಿನ್ ‘ಡಿ’ ಕೊರತೆಯಿಂದ ಮೈ ಕೈ ನೋವು, ದೌರ್ಬಲ್ಯದಿಂದ ಸಾಧಾರಣವಾಗಿಯೇ ಕುಗ್ಗಿರುವ ಮಹಿಳೆಗೆ ಮುಟ್ಟು ನಿಲ್ಲುವ ಸಮಯದಲ್ಲುಂಟಾಗುವ ಅತಿ ರಕ್ತಸ್ರಾವ, ಹಾರ್ಮೋನ್‌ಗಳ ಏರುಪೇರು, ಗರ್ಭಾಶಯದ ತೊಂದರೆಗಳು, ಇತ್ಯಾದಿ ಮತ್ತಷ್ಟು ಖಿನ್ನತೆಗೊಳಪಡಿಸುವುದು.  ಖಿನ್ನತೆ ತಡೆಯಲು ಅದರ ಬಗ್ಗೆ ಅರಿವಿರುವುದು ಅಗತ್ಯ.  ಮೆನೊಪಾಸ್ ನುಂಗಲಾರದ ಬಿಸಿ ತುಪ್ಪವೆನಿಸದು.

ಮುಖ್ಯ ಲಕ್ಷಣಗಳು
ಇಳಿಮುಖವಾಗಿರುವ ಹಾರ್ಮೋನ್‌ಗಳಿಂದ ಒಮ್ಮೆಗೆ ಮೈಯಲ್ಲಿ ಬಿಸಿಯ ಬುಗ್ಗೆಯೊಡೆದಂತೆ ಭಾಸವಾಗುವುದು. ಇದಲ್ಲದೇ ಬೇಗನೆ ಕಿರಿಕಿರಿಯಾಗುವುದು, ಬೇಜಾರಾಗುವುದು, ದುಃಖ ಉಂಟಾಗುವುದು, ಬೇಗನೆ ಅಳಬೇಕೆನಿಸುವುದು. ಅಲ್ಲದೇ ಯಾವುದೇ ಕೆಲಸದಲ್ಲೂ ನಿರಾಸಕ್ತಿ, ಭಯ, ಎದೆ ಹೊಡೆದುಕೊಳ್ಳುವುದು, ಗಾಬರಿ, ಕೋಪ,  ಬದಲಾಗುವ ಮನಸ್ಥಿತಿ. ಕೋಪಕ್ಕೆ ತೆಗೆದುಕೊಂಡ ಅವಸರದ ನಿರ್ಧಾರಕ್ಕೆ ಕೂಡಲೇ ಪಶ್ಚಾತ್ತಾಪ ಪಟ್ಟು ಅಳುವುದು. ಕ್ಷಣ ಕೋಪ, ಕ್ಷಣ ದುಃಖ ಎಂಬಂತೆ. ಸುತ್ತಲಿನವರ ಮೇಲೆ ವಿನಾಕಾರಣ ರೇಗುವುದು. ಅಥವಾ ಎಲ್ಲರಿಂದ ದೂರ ಸರಿದು ಒಬ್ಬಂಟಿಯಾಗಿ ಕುಳಿತು ಬೇಸರಿಸಿಕೊಳ್ಳುವುದು.

ನಿದ್ರಾಹೀನತೆ, ಮರೆಗುಳಿತನ ಮುಂತಾದ ಕೆಲ ತೊಂದರೆಗಳಿಂದ ಖಿನ್ನತೆ ಮತ್ತಷ್ಟು ಉದ್ವಿಗ್ನಗೊಳ್ಳಬಹುದು. ಅಲ್ಲದೇ ತನಗೇನೋ ಆಗಿದೆಯೆಂಬ ಅತೀವ ಭಯ ಹುಟ್ಟಬಹುದು. 

ಇದಲ್ಲದೇ ಲೈಂಗಿಕ ನಿರಾಸಕ್ತಿ ಕಂಡುಬರಬಹುದು. ಇದರಿಂದ ಸಂಬಂಧಗಳ ಮಧ್ಯೆ ಸಮಸ್ಯೆಯುಂಟಾಗಿ ಉರಿವ ಖಿನ್ನ ಮನಸ್ಥಿತಿಗೆ ತುಪ್ಪ ಹಾಕಿದಂತಾಗಬಹುದು. ಯೋನಿ ಸ್ರಾವ ಕಡಿಮೆಯಾಗುವುದು, ಮೂಳೆ ತೊಂದರೆಗಳು ಇತ್ಯಾದಿಗಳು ಲೈಂಗಿಕ ಜೀವನಕ್ಕೆ ಮತ್ತಷ್ಟು ತೊಡಕುಂಟುಮಾಡುತ್ತವೆ. ಅವಳಲ್ಲಾಗುತ್ತಿರುವ ಬದಲಾವಣೆಗಳ ಬಗ್ಗೆ ಸಂಗಾತಿಗೂ ಅರಿವಿರಬೇಕು ಹಾಗೂ ಅರ್ಥೈಸಿಕೊಳ್ಳುವ ಮನಸ್ಥಿತಿ ಹೊಂದಿರುವುದು ಬಹು ಮುಖ್ಯ.

ತನಗೆ ವಯಸ್ಸಾಯಿತು, ತಾನ್ಯಾವುದೇ ಕೆಲಸಕ್ಕೂ ಉಪಯೋಗಿಯಲ್ಲ ಎಂಬ ಭಾವನೆ ಕೆಲವರಲ್ಲಿ ಕಂಡು ಬರಬಹುದು. ಆಗ ಜಿಗುಪ್ಸೆ, ತನ್ನ ಬಗ್ಗೆ ಕೀಳರಿಮೆ ಕಾಣಿಸಿಕೊಳ್ಳಬಹುದು. ಏಕಾಗ್ರತೆಯ ತೊಂದರೆ ಬಹಳಷ್ಟು ಜನರಲ್ಲಿ ಕಾಣಿಸಿಕೊಳ್ಳಬಹುದು. ಹೀಗಾಗಿ ಕೆಲಸಗಳಲ್ಲಿ ಎಡವಟ್ಟಾಗಬಹುದು.

ಇವೆಲ್ಲ ಮಾನಸಿಕ ತೊಂದರೆಗಳು ಮುಟ್ಟು ನಿಲ್ಲುವಾಗ ಮಾತ್ರ ಬರುತ್ತದೆಂದಲ್ಲ. ಬೇರೆ ಸಮಯದಲ್ಲೂ ಬರಬಹುದು ಅಥವಾ ಥೈರಾಯಿಡ್, ಮುಂತಾದ ಹಾರ್ಮೋನ್‌ಗಳ ಏರುಪೇರಿನಿಂದಲೂ ಬರಬಹುದು. ಆನುವಂಶಿಯವೂ ಇರಬಹುದು. ಸಾಮಾನ್ಯವಾಗಿ ಖಿನ್ನತೆ ಅಥವಾ ಉದ್ರೇಕರಾಗುವ ಸ್ವಭಾವವಿದ್ದಲ್ಲಿ ಈ ಸಮಯದಲ್ಲಿ ಇನ್ನಷ್ಟು ನರಳುವ ಸಾಧ್ಯತೆ ಹೆಚ್ಚು. ಹೀಗಾಗಿ ಈ ರೀತಿಯ ಬಾಧೆಗಳಿದ್ದಲ್ಲಿ ಕಡೆಗಣಿಸದೆ ಆಗಾಗ್ಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಿ. 

ಮೆನೊಪಾಸ್‌ನಲ್ಲಿ ಆಗಬಹುದಾದ ಏರಿಳಿತಗಳ ಬಗ್ಗೆ ಮುಂಚೆಯೇ ತಿಳಿದಿರುವುದು ಉತ್ತಮ. ಅಲ್ಲದೇ ರಕ್ತಹೀನತೆ, ಬೊಜ್ಜು, ಮೂಳೆಯ ದೌರ್ಬಲ್ಯ, ಥೈರಾಯಿಡ್ ಸಮಸ್ಯೆ, ಮಧುಮೇಹ, ಅತಿರಕ್ತದೊತ್ತಡ ಇತ್ಯಾದಿಗಳ ಬಗ್ಗೆ ಪರೀಕ್ಷಿಸಿಕೊಂಡಿರುವುದು ಉತ್ತಮ.

ಮನಸ್ಸು ಸ್ತಿಮಿತಗೊಳಿಸುವ ಯೋಗ, ಯೋಗನಿದ್ರೆ, ಧ್ಯಾನ ಮುಂತಾದ ಪ್ರಕ್ರಿಯೆಗಳ ಬಗ್ಗೆ ಅರಿವಿಟ್ಟುಕೊಂಡು ಅಳವಡಿಸಿಕೊಳ್ಳುವುದು ಉತ್ತಮ. ಏಕಾಗ್ರಚಿತ್ತವನ್ನು ಒದಗಿಸುವಲ್ಲೂ ಇವು ಸಹಕಾರಿ.  ಶಾರೀರಿಕವಾಗಿ ಸಕ್ರಿಯರಾಗಿದ್ದು, ವ್ಯಾಯಾಮವನ್ನು ಕಡ್ಡಾಯವಾಗಿ ಅಭ್ಯಾಸದಲ್ಲಿಟ್ಟುಕೊಳ್ಳುವುದು ಒಳಿತು. ಒಂದು ಗಂಟೆ ಚುರುಕಾದ ನಡಿಗೆ ಅಗತ್ಯ. ಆಗಾಗ ಸೂರ್ಯನ ಬಿಸಿಲಿಗೆ ಮೈಒಡ್ಡುವುದು ಒಳ್ಳೆಯದು. ಸೈಕ್ಲಿಂಗ್, ಗಾಲ್ಫ್, ಮುಂತಾದ ಹೊರಾಂಗಣದ ಕ್ರೀಡೆ ಹಾಗೂ ಚಟುವಟಿಕೆಗಳು ಮನಸ್ಸಿಗೂ, ದೇಹಕ್ಕೂ ಮುದ ನೀಡುತ್ತವೆ. ಹಾಗೂ ಆರೋಗ್ಯಕರ. ಖಿನ್ನತೆಯಿಂದಲೂ ದೂರವಿಡುತ್ತವೆ.

ಆಹಾರದಲ್ಲಿ ಎಲ್ಲ ಪೌಷ್ಟಿಕಾಂಶ ಸೇರಿರಲಿ. ಗೋಧಿ, ರಾಗಿ, ಜೋಳ, ನವಣೆ, ಸಜ್ಜೆ, ಮೊಳಕೆ ಕಟ್ಟಿದ ಕಾಳುಗಳ ಬಳಸಿ. ಅನ್ನದಂಶ ಕಡಿಮೆಯಿರಲಿ. ಪಿಷ್ಟಾಂಶ (ಸ್ಟಾರ್ಚ್), ಎಣ್ಣೆ (ಜಿಡ್ಡು) ಮತ್ತು ಸಕ್ಕರೆಯಂಶ ಬಹಳ ಕಡಿಮೆಯಿರಲಿ. ಮೈದಾ, ಕರಿದ ತಿಂಡಿ ಮುಂತಾದ ಸಂಸ್ಕರಿತ ಪದಾರ್ಥ ವರ್ಜ್ಯ. ಆದಷ್ಟೂ ಅಖಂಡ(ತೌಡಿನಂಶ ಉಳಿಸಿ ಕೊಂಡಿರುವ) ಧಾನ್ಯಗಳ ಬಳಕೆ ಹೆಚ್ಚಿರಲಿ.

ಹಸಿರು, ಹಳದಿ, ಕೆಂಪು ಬಣ್ಣ ಹೆಚ್ಚಿರುವ ತರಕಾರಿ ಅಥವಾ ಹಣ್ಣುಗಳನ್ನು ಹೇರಳವಾಗಿ ಬಳಸಿ. ಇವುಗಳಲ್ಲಿರುವ ಐಸೋಫ್‌ಲೇವೋನ್ ಅಂಶಗಳು ಮೆನೊಪಾಸ್ ತೊಂದರೆಯಿಂದ ದೂರವಿಡುವವು. ಬಾದಾಮಿ, ಒಣದ್ರಾಕ್ಷಿ, ಖರ್ಜೂರ, ಅಂಜೂರ ಉಪಯೋಗಿಸಿ. ಕಾಫಿ, ಟೀ ಬಳಕೆ ಮಿತವಾಗಿರಲಿ. ಮದ್ಯ ಸೇವನೆ, ಧೂಮಪಾನ ಹಾನಿಕಾರಿ. ಇವು ಖಿನ್ನತೆಯನ್ನು ಉಲ್ಬಣಗೊಳಿಸುತ್ತವೆ. ಹಸಿರು, ತುಳಸಿ ಮುಂತಾದ ಚಹಾ ಮನಸ್ಸಿಗೆ ಉಲ್ಲಾಸವನ್ನು ತರುವವು.

ನಿಯಮಿತ ಎಣ್ಣೆಸ್ನಾನ (ಅಭ್ಯಂಗ), ಶಿರೋಧಾರ ಮುಂತಾದ ಕ್ರಿಯೆಗಳು ನಿದ್ರೆಗೆ ಸಹಕಾರಿ. ಹಾಗೂ ಖಿನ್ನತೆಯನ್ನು ಕಡಿಮೆ ಮಾಡುತ್ತವೆ. ಜಟಾಮಾಂಸಿ, ತಗರ, ಅಶ್ವಗಂಧಾ, ಶತಾವರಿ, ಬ್ರಾಹ್ಮೀ, ಮೆಂತ್ಯ, ಅರಶಿನ, ಸೋಯಾ, ಮುಂತಾದ ದ್ರವ್ಯಗಳನ್ನು ಸೂಕ್ತ ಸಲಹೆಯೊಂದಿಗೆ ತೆಗೆದುಕೊಂಡಲ್ಲಿ ಲಾಭದಾಯಿ. ಇವೆಲ್ಲವೂ ತಕ್ಕ ಪರಿಹಾರ ನೀಡದಿದ್ದಲ್ಲಿ ಮನಃಶಾಸ್ತ್ರಜ್ಞರ ಸೂಕ್ತ ಸಲಹೆಯನ್ನು ಪಡೆಯುವುದು ಅತ್ಯಗತ್ಯ.

ಹೀಗೆ ದೇಹ ಹಾಗೂ ಮನಸ್ಸನ್ನು ಚೆನ್ನಾಗಿ ನೋಡಿಕೊಂಡು, ಜೀವನಶೈಲಿಯನ್ನು ರೂಪಿಸಿಕೊಂಡಲ್ಲಿ ಮೆನೊಪಾಸ್ ಎಂಬುದು ಒಂದು ಸರಳ ಹಾಗೂ ಸಾಮಾನ್ಯವಾಗಿ ಸಾಗಿ ಹೋಗುತ್ತದೆ. ಜೀವನದ ಹೊಸ, ಸುಂದರ ಅನುಭವ ಅದರಾಚೆಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT