ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಲೊಳಗಿದ್ದ ಮಗು ಮಡಿಲಿಗೆ ಬರದಿದ್ದರೆ...

Last Updated 3 ಜುಲೈ 2015, 19:30 IST
ಅಕ್ಷರ ಗಾತ್ರ

ಗರ್ಭಧಾರಣೆಗೆ ಮುಂಚೆ ತಜ್ಞ ವೈದ್ಯರಿಂದ ತಪಾಣೆಗೆ ಒಳಪಡಬೇಕು. ತೊಡಕಾಗುವಂತಹ ಹೆಂಗಸರಲ್ಲಿ ಸೂಕ್ತ ಚಿಕಿತ್ಸೆ ಕೊಟ್ಟು ಕಾಳಜಿ ವಹಿಸಬೇಕು. ಅಂಗ  ಊನ ಅಥವಾ ಇನ್ನಾವುದೇ ತೊಂದರೆ ಇರುವ ಭ್ರೂಣವನ್ನು ಗರ್ಭಾವಸ್ಥೆಯ ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಬೇಕು. ರಕ್ತದೊತ್ತಡ, ಮಧುಮೇಹದಂತಹ ವೈದ್ಯಕೀಯ ತೊಂದರೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದರಿಂದ ಮಗು ಗರ್ಭದಲ್ಲಿ ಸಾಯದಂತೆ ಮುನ್ನೆಚ್ಚರಿಕೆ ವಹಿಸಬಹುದು.

ಮಾಧುರಿ ತನ್ನ ಕೋಣೆಯ ಮೂಲೆಯಲ್ಲಿ ತಲೆಯನ್ನು ಎರಡೂ ಕೈಗಳಿಂದ ಗಟ್ಟಿಯಾಗಿ ಬಿಗಿಹಿಡಿದು ತೊಡೆಗಳ ಮಧ್ಯೆ ಹುದುಗಿಸಿ ಮುಖ ಹಿಪ್ಪೆ ಮಾಡಿ ಕುಳಿತಿದ್ದಳು. ಎರಡು ಗಂಟೆಗಳಿಂದ ತನ್ನ ಪತಿರಾಯ ಮತ್ತು ಭಾಮೈದ ಜಗಳವಾಡುವುದನ್ನು ನೋಡಲಾಗದೆ ಕೋಣೆ ಸೇರಿದ್ದಾಳಾಕೆ. ಮತ್ತೊಂದು ಗಂಟೆಯ ನಂತರ ಗಂಡ ಕೋಣೆ ಸೇರಿದಾಗ ಪ್ರತಿದಿನದ ಜಗಳದಿಂದ ತನ್ನ ಮನಃಶಾಂತಿ ಕದಡಿ ಆಗುವ ಹಿಂಸೆ ಬೇಸರ ತೋಡಿಕೊಂಡು ಅಳಲಾರಂಭಿಸಿದಳು.

ಮಾಯಾಂಕ್‌ ಮಾಧುರಿಯನ್ನು 8 ವರ್ಷಗಳಿಂದ ಪ್ರೀತಿಸಿ ಮನೆವರನ್ನು ಒಪ್ಪಿಸಿ ಮದವೆಯಾಗಿದ್ದ. ತುಂಬು ಗರ್ಭಿಣಿಯಾದ ಮಾಧುರಿಗೆ ಸ್ವಲ್ಪ ನೋವಾದರೂ ಅವನಿಂದ ಸಹಿಸಲಾಗುತ್ತಿರಲಿಲ್ಲ. ಆದರೂ ಸಂಸಾರ ತಾಪತ್ರಯಗಳು ದಿನದಿಂದ ದಿನಕ್ಕೆ ಕೈಮೀರಿ ಹೋಗುತ್ತಿದ್ದುದರಿಂದ ಮಾಧುರಿಯ ಸಮಸ್ಯೆಗೆ ಪರಿಹಾರ ಸಿಗದಂತಾಗಿತ್ತು. ಆಕೆಯನ್ನು ಸಮಾಧಾನ ಪಡಿಸಿ, ಮಲಗಲು ಹೇಳಿ ಹೊರಹೊದನು.

ಪ್ರತಿದಿನ ರಾತ್ರಿ ಮಲಗುವಾಗ ಹೊಟ್ಟೆಯೊಳಗೆ ಮಗುವಿನ ಓಡಾಟ ಗುದ್ದಾಟಗಳನ್ನು ಆನಂದಿಸುತ್ತಾ ಮಲಗುತ್ತಿದ್ದಳು. ಮಾಧುರಿ ಹೆರಿಗೆಯ ದಿನ ಹತ್ತಿರ ಬರುತ್ತಿದ್ದುದರಿಂದ, ಮಗು ಎಷ್ಟು ಭಾರಿ ಗರ್ಭದೊಳಗೆ ಚಲಿಸುತ್ತದೆ ಎಂದು ಎಣಿಸಿಕೊಳ್ಳಲು ಆಕೆಯ ವೈದ್ಯರು ಸೂಚಿಸಿದ್ದರು. ಅಂದೇಕೋ ದಿನಕ್ಕಿಂತ ಕಡಿಮೆ ಚಲನೆಗಳಿದ್ದವು ಎಂದೆನಿಸಿತು ಆಕೆಗೆ. ದಿನದ ಜಂಜಾಟದಲ್ಲಿ ಲೆಕ್ಕ ತಪ್ಪಿ ಹೋಗಿರಬೇಕೆಂದುಕೊಂಡು ನಿದ್ದೆಗೆ ಜಾರಿದಳು ಮಾಧುರಿ.

ಸುಸ್ತಾಗಿದ್ದರಿಂದ ಬೆಳಿಗ್ಗೆ ಏಳುವಾಗ 9 ಗಂಟೆ ದಾಟಿತ್ತು. ತುಂಬು ಗರ್ಭಿಣಿ, ಆರಾಮವಾಗಿ ಏಳಲಿ ಎಂದು ಯಾರೂ ಅವಳನ್ನು ಎಬ್ಬಿಸಿರಲಿಲ್ಲ. ದೈನಂದಿನ ಕೆಲಸವೆಲ್ಲ ಮುಗಿಸಿ, ಬೆಳಗಿನ ಉಪಹಾರ ಸೇವಿಸುವಾಗ 11 ಗಂಟೆ. ಇಷ್ಟಾದರೂ ತನ್ನ ಮಗು ಏಕೆ ಇನ್ನೂ ತನ್ನ ಗುದ್ದಾಟ ಪ್ರಾರಂಭಿಸಿಲ್ಲ ಎಂದು ಆಶ್ಚರ್ಯಗೊಂಡಳಾಕೆ. ಮಗು ಮಲಗಿ ನಿದ್ರಿಸುತ್ತಿರಬಹುದು ಎಂದು ಯೋಚಿಸಿ, ತನ್ನ ತುಂಬು ಹೊಟ್ಟೆಯನ್ನು ನಯವಾಗಿ ಸ್ಪರ್ಶಿಸಿಕೊಂಡು, ಮೊದಲ ಮಗುವಿನ ಬರವಿಕೆಯ ಕ್ಷಣಗಳನ್ನು ಮನದಲ್ಲೇ ಕಲ್ಪಿಸುತ್ತಾ ಆನಂದಿಸತೊಡಗಿದಳು.

ಮಧ್ಯಾಹ್ನ ಊಟ ಮುಗಿಸಿ ಮಲಗ ಹೊರಟಾಗ ಮಾಧುರಿಗೆ ಮನದಲ್ಲಿ ಕಾರ್ಮೋಡ ಕವಿದಂತೆ ಭಾಸವಾಗುತ್ತಿತ್ತು. ಇಂದೇಕೋ ತಾನು, ತನ್ನ ಮಗು ಎಂದಿನಂತಿಲ್ಲ ಎಂದೆನಿಸಿ ಗಾಬರಿಯಾಗತೊಡಗಿತು. ತಕ್ಷಣ ಗಂಡನಿಗೆ ಫೋನ್‌ ಮಾಡಿ ವಿಷಯ ತಿಳಿಸಿದಾಗ, ಮಯೂರ್‌ ಅವಳಿಗೆ ರ್ಧೈರ್ಯ ತುಂಬಿ, ಸಂಜೆ ವೈದ್ಯರ ಬಳಿ ಕರೆದೊಯ್ಯುವ ಭರವಸೆಯಿತ್ತನು.

ರೋಗಿಗಳಿಂದ ಬಿಗಡಾಯಿಸಿದ್ದ ವೈದ್ಯರ ಕ್ಲಿನಿಕ್‌ನಲ್ಲಿ ತನ್ನ ಸರದಿಗಾಗಿ ಕಾಯುತ್ತಾ  ಮಾಧುರಿ ಬಸವಳಿದಳು. ಆಕೆಯ ಗಾಬರಿ ಕಂಡು  ತಕ್ಷಣ ಸ್ಕ್ಯಾನಿಂಗ್‌ ಮಾಡಿದ ವೈದ್ಯರ ಹೇಳಿಕೆ ನವದಂಪತಿಗೆ ಬರಸಿಡಿಲಿನಂತೆ ಬಂದೆರಗಿತು. ಗರ್ಭದಲ್ಲೇ ಮಗು ಅಸುನೀಗಿ 16 ಗಂಟೆಗಳು ಕಳೆದಿವೆ ಎಂದು ಪ್ರಕಟಿಸಿದ ವೈದ್ಯರು ಅವರಿಬ್ಬರಿಗೆ ಧೈರ್ಯ ತುಂಬುವ, ಮುಂದಿನ ದಾರಿಯನ್ನು ವಿವರಿಸುವ ಕೆಲಸದಲ್ಲಿ ತೊಡಗಿದರು. ಆದರೆ ಅವರ ಯಾವುದೇ ಮಾತು ಮಾಧುರಿ ಮತ್ತಾಕೆಯ ಗಂಡನ ಕಿವಿಗಳಿಗೆ ತಾಗಲಿಲ್ಲ.

ಹಿಂದಿನ ದಿನ ತನ್ನ ಮನೆಯಲ್ಲಿ ನಡೆದಿದ್ದ ಜಗಳದಿಂದ ಮಾಧುರಿಯ ರಕ್ತದೊತ್ತದ ದುಪ್ಪಟ್ಟಾಗಿ ಮಗುವಿಗೆ ರಕ್ತ ಸಂಚಾರವಾಗುವುದರಲ್ಲಿ ವ್ಯತ್ಯಯವಾಗಿ ಅಮಾಯಕ ಜೀವ ಇಹಲೋಕ ಸ್ಪರ್ಶಿಸುವ ಮೊದಲೇ ಕೊನೆಯುಸಿರೆಳೆದಿತ್ತು. ಈ ರೀತಿ ಗರ್ಭದಲ್ಲೇ ಒಂಬತ್ತು ತಿಂಗಳುಗಳ ಕಾಲ ಹೊತ್ತು ಹೆರುವ ಮುನ್ನವೇ ಮಗುವನ್ನು ಕಳೆದುಕೊಳ್ಳುವವರ ಸಂಖ್ಯೆ ಕಡಿಮೆ ಏನಿಲ್ಲ. 500 ಗ್ರಾಂ ಗಿಂತ ಹೆಚ್ಚು ತೂಕವಿರುವ ಭ್ರೂಣ ಗರ್ಭದಲ್ಲೇ ಅಥವಾ ಪ್ರಸವದ ಸಮಯದಲ್ಲಿ ಅಸುಗೀಗಿದರೆ ‘ಇಂಟ್ರಾಯಿಟಿರೀನ್‌ ಫೀಟಲ್‌ ಡೆತ್‌‘ (ಐ ಯು ಡಿ) ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯುತ್ತಾರೆ.

ಇದಕ್ಕೆ ಕಾರಣಗಳು‌
* ತಾಯಿಯ ಅಧಿಕ ರಕ್ತದೊತ್ತಡ
* ಮಧುಮೇಹ
* ಸೋಂಕು (ಮಲೇರಿಯಾ, ಹೆಪಟೈಟಿಸ್‌, ಇನ್‌ಪ್ಲುಯಂಜಾ, ಸಿಫಿಲಿಸ್‌ ....)
* ಅತಿಯಾದ ಜ್ವರ

*ಮಗುವಿನ ಅಸಮತೋಲನ ಬೆಳವಣಿಗೆ, ಸೋಂಕು, ಇತ್ಯಾದಿ.
* ಮಾಸುವಿನ ಸಮಸ್ಯೆಗಳು
* ಹೊಕ್ಕಳು ಬಳ್ಳಿಯ ತೊಂದರೆಗಳು
ಆದರೆ ಶೇ 25–30 ಐಯುಡಿಗಳಲ್ಲಿ ಕಾರಣಗಳು ತಿಳಿದು ಬರುವುದಿಲ್ಲ. ಇದನ್ನು ತಕ್ಷಣ ಗುರುತಿಸಿದರೆ ಮಗುವನ್ನು ಬದುಕಿಸಿ ಕೊಳ್ಳಬಹುದಲ್ಲವೆ? ಎಂಬ ಪ್ರಶ್ನೆ ಕಾಡಬಹುದು. ಮಗು ಗರ್ಭದಲ್ಲಿ ಸಾಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸವುದು ಸೂಕ್ತ.
ಗರ್ಭಧಾರಣೆಗೆ ಮುಂಚೆ ತಜ್ಞ ವೈದ್ಯರಿಂದ ತಪಾಣೆಗೆ ಒಳಪಡಬೇಕು. ತೊಡಕಾಗುವಂತಹ ಹೆಂಗಸರಲ್ಲಿ ಸೂಕ್ತ ಚಿಕಿತ್ಸೆ ಕೊಟ್ಟು ಕಾಳಜಿ ವಹಿಸಬೇಕು.

* ಅಂಗ  ಊನ ಅಥವಾ ಇನ್ನಾವುದೇ ತೊಂದರೆ ಇರುವ ಭ್ರೂಣವನ್ನು ಗರ್ಭಾವಸ್ಥೆಯ ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಬೇಕು.
*ರಕ್ತದೊತ್ತಡ, ಮಧುಮೇಹದಂತಹ ವೈದ್ಯಕೀಯ ತೊಂದರೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು

ವೈದ್ಯರು ಎಷ್ಟೇ ಔಷಧಿಗಳನ್ನು ಕೊಟ್ಟು ಸಲಹೆ ಸೂಚನೆಗಳನ್ನು ಪದೇ ಪದೇ ಹೇಳಿದರೂ ಅದನ್ನು ಪಾಲಿಸುವವವರು ಬೆರಳೆಣಿಕೆಯಷ್ಟು ಜನ ಮಾತ್ರ. ಇಂತಹ ಅನಾಹುತಗಳಿಂದ ರೋಗಿಯ ಮನೆಯವರು ದೂಷಿಸುವುದು ವೈದ್ಯರನ್ನೇ. ಇಂತಹ ಕೆಟ್ಟ ಸುದ್ದಿಯನ್ನು ರೋಗಿಯ ಕಡೆಯವರಿಗೆ ತಿಳಿಸುವುದು ವೈದ್ಯರಿಗೊಂದು ಬಹುದೊಡ್ಡ ಸವಾಲು.

ಮಗು ಹೇಗೂ ಬದುಕಿಲ್ಲ. ನನ್ನ ಮಗಳು/ ಸೊಸೆ ಹೆರಿಗೆ ನೋವು ಅನುಭವಿಸುವುದು ಬೇಡ. ಆಪರೇಶನ್‌ ಮಾಡಿ ತೆಗೆದು ಬಿಡಿ ಎಂದು ವೈದ್ಯರಿಗೆ ಒತ್ತಡ ಹೇರುವವರು ಬಹಳಷ್ಟಿದ್ದಾರೆ. ಆದರೆ ಮಗು ಬದುಕಿರಲಿ, ಸತ್ತಿರಲಿ ಅದು ಬರುವ ದಾರಿಯಲ್ಲಿ ನೈಸರ್ಗಿಕವಾಗಿ ಬರುವುದೇ ಸೂಕ್ತ. ಹೆರಿಗೆ ನೈಸರ್ಗಿಕವಾದರೂ ಅದು ವೈದ್ಯರ ಮಾರ್ಗದರ್ಶನದಲ್ಲಿ ನಿಗದಿತ ಸಮಯದಳಗೇ ಆಗಬೇಕು. ಇಲ್ಲದಿದ್ದರೆ ಸತ್ತ ಭ್ರೂಣದಿಂದ ತಾಯಿಯ ರಕ್ತ ಹೆಪ್ಪುಗಟ್ಟಿ, ದೇಹ ಸೋಂಕಾಗಿ ಆಗುವ ಅನಾಹುತಗಳು ಅಪಾರ.

ಒಡಲೊಳಗಿದ್ದ ಮಗು ಮಡಿಲಿಗೆ ಬರದಿದ್ದರೆ ಯಾರಿಗಾದರೂ ಆಗುವ ನೋವು ಅಪಾರ. ಗರ್ಭಿಣಿ ಸ್ವಚ್ಛಂದವಾದ, ಆಹ್ಲಾದಕರವಾದ ವಾತಾವರಣದಲ್ಲಿದ್ದರೆ ತಾಯಿ – ಮಗು ಇಬ್ಬರಿಗೂ ಕ್ಷೇಮ. ವೈದ್ಯರ ಸಲಹೆಗಳನ್ನು ನಿರ್ಲಕ್ಷಿಸಿದರೆ ಮಗುವಿನ ಒಳಿತಿಗಾಗಿ 9 ತಿಂಗಳು ಮನೆ – ಮನಗಳನ್ನು ಶಾಂತಿಯಲ್ಲಿಟ್ಟುಕೊಳ್ಳುವುದು ಅವಶ್ಯಕ. ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ ಎಂಬ ಗಾದೆಯನ್ನು ನೆನಪಿಟ್ಟುಕೊಂಡು ಹೊಸ ಬದುಕು ಪ್ರಾರಂಭಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT