ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯುತಿದೆ ಜಗವೊಂದು ನಿಧಾನಿಸು ನಿಧಾನಿಸು

Last Updated 11 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಅಂದು ಯಾವುದೋ ಕಾರಣಕ್ಕೆ ಆಫೀಸಿನಿಂದ ಬೇಗ ಹೊರಟಿದ್ದೆ. ಕಾರು ಒಂದು ಟ್ರಾಫಿಕ್ ದೀಪದ ಹತ್ತಿರ ನಿಂತಾಗ ಕಿಟಕಿಯಿಂದ ಗಮನಿಸಿದೆ. ಸೂರ್ಯಾಸ್ತವಾಗುತ್ತಿತ್ತು. ಫುಲ್ಲವಾದ ದೃಶ್ಯ. ನೋಡುತ್ತಾ ನಿಂತು ಕೆಲವು ಕ್ಷಣಗಳು ಕಳೆದಿರಲಿಲ್ಲ, ಹಿಂಬದಿಯ ವಾಹನಗಳೆಲ್ಲಾ ತಮ್ಮ ಹಾರನ್ನುಗಳಿಂದ ಕೀರಲು ಸದ್ದು ಮಾಡಲು ಮೊದಲುಮಾಡಿದವು.

ಏನೂ ಆಗಿದೆ ಎಂದು ಗಾಬರಿಯಿಂದ ನೋಡಿದಾಗ ತಿಳಿದದ್ದು ಟ್ರಾಫಿಕ್ ದೀಪ ಕೆಂಪಿನಿಂದ ಹಸಿರಿಗೆ ತಿರುಗಿದೆ ಎಂದು. ಬೆಂಗಳೂರಿನ ಎಲ್ಲ ಟ್ರಾಫಿಕ್ ಸಿಗ್ನಲ್‌ಗಳಲ್ಲೂ ದೀಪ ಕೆಂಪಿನಿಂದ ಹಳದಿ ತಿರುಗಿದೊಡನೆ ವಾಹನಗಳೆಲ್ಲಾ ಎಂಜಿನ್ನಿನ ಸದ್ದು ಮಾಡುತ್ತಾ, ಏರಿದ ಧ್ವನಿಯಲ್ಲಿ ಹಾರನ್ ಕಿರುಚುತ್ತಾ ಮುನ್ನುಗ್ಗಬೇಕೆಂಬುದು ಅಲಿಖಿತ ನಿಯಮ! ಆದರೆ ಟ್ರಾಫಿಕ್ ದೀಪ ಹಸಿರುಬಣ್ಣಕ್ಕೆ ತಿರುಗಿದಾಗಲೂ ನನ್ನ ವಾಹನ ಮುಂದೆ ಚಲಿಸದಿದ್ದಕ್ಕೆ ಹಿಂದೆ ಇದ್ದ ವಾಹನ ಚಾಲಕರಿಗೆಲ್ಲಾ ನಖಶಿಖಾಂತ ಕೋಪ ಬಂದಿದ್ದು. ಕೋಪವನ್ನು ವ್ಯಕ್ತಪಡಿಸಲು ಹಲವರು ನನ್ನ ವಾಹನವನ್ನು ದಾಟಿ ಹೋಗುವಾಗ ದುರುಗುಟ್ಟಿಕೊಂಡು ನೋಡಿದರೆ ಇನ್ನೂ ಕೆಲವರು ಬಾಯ್ತುಂಬ ಬೈದರು.
***
ಮೊನ್ನೆಯಷ್ಟೇ ಬೊಂಬಾಯಿನಿಂದ ಬೆಂಗಳೂರಿಗೆ ಹಿಂದುರಿಗಿ ಬರುತ್ತಿದ್ದೆ. ವಿಮಾನ ಬೆಂಗಳೂರಿನಲ್ಲಿ ಭೂಸ್ಪರ್ಶ ಮಾಡಿ ನಿಂತಿದ್ದೇ ತಡ, ಪ್ರಯಾಣಿಕರಿಗೆಲ್ಲ ರಣೋತ್ಸಾಹ ಬಂದಿತ್ತು. ಧಡಾರನೆ ಎದ್ದು ತಮ್ಮ ಕೈಚೀಲಗಳನ್ನು ಹಿಡಿದು ಬಾಗಿಲ ಬಳಿ ಓಡತೊಡಗಿದರು. ಸುಮ್ಮನೆ ಕುಳಿತಿದ್ದ ನನ್ನನ್ನು, ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ, ಈ ವಿಮಾನ ಮುಂದೆ ಹೋಗುವುದಿಲ್ಲ, ಬೆಂಗಳೂರೇ ಕೊನೆ ಎಂಬಂತೆ ನೋಡಿದ.

ನಾನು, ಅವನತ್ತ ತಿರುಗಿ, ಬಾಗಿಲ ಬಳಿ ಓಡಿಹೋಗಿ ನಿಂತರೂ ಮೆಟ್ಟಿಲು ಜೋಡಿಸಿ ಬಾಗಿಲು ತೆಗೆಯುವವರೆಗೆ ಕಾಯಲೇಬೇಕು ಎಂದೆ. ಅವನಿಗೆ ನನ್ನ ಮಾತಿನಿಂದ ಸಮಾಧಾನವಾಗಲಿಲ್ಲ. ನನ್ನನ್ನು ತಳ್ಳಿಕೊಂಡು ಸೀಟಿನಿಂದ ಆಚೆ ಹೋಗಿ ಸರದಿಸಾಲಿನಲ್ಲಿ ನಿಂತು ಬಾಗಿಲನ್ನು ಬಗ್ಗಿ ಬಗ್ಗಿ ನೋಡುತ್ತಲೇ ಇದ್ದ.
***
ಇನ್ನೊಮ್ಮೆ ಒಂದು ಸಂಗೀತ ಕಚೇರಿಗೆ ಹೋಗಿದ್ದೆ. ಸುಮಾರು ಎರಡೂವರೆ ಗಂಟೆ ಕಚೇರಿ ನಡೆದಿರಬಹುದು, ಅಲ್ಲಿಯವರೆಗೂ ನನ್ನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಇನ್ನೇನು ಕಚೇರಿ ಮುಗಿಯುತ್ತದೆ ಎಂಬ ಸೂಚನೆ ಸಿಕ್ಕೊಡನೆಯೇ ಕಾರ್ಯಪ್ರವೃತ್ತರಾದರು.

ಹೊರಗೆ ತೆಗೆದಿಟ್ಟಿದ್ದ ತಮ್ಮ ಫೋನನ್ನು ಜೇಬಿನೊಳಗೆ ಇಳಿಸಿ, ಬೆನ್ನು ನೇರವಾಗಿಸಿ, ಗಡಿಯಾರವನ್ನು ಮತ್ತೆ ಮತ್ತೆ ನೋಡಲು ಪ್ರಾರಂಭಿಸಿದರು. ಸಂಗೀತಗಾರರು ಪವಮಾನ ಸುತುಡು ಬಟ್ಟು ... ’ ಎಂದು ಮಂಗಳ ಪ್ರಾರಂಭಿಸಿದ್ದೇ ತಡ ಆ ವ್ಯಕ್ತಿ ಚಪ್ಪಲಿ ಮೆಟ್ಟಿಕೊಂಡು ಹೊರಟೇ ಬಿಟ್ಟರು. ಎರಡೂವರೆ ಗಂಟೆಯ ಕಚೇರಿ ಕೇಳಿದವರಿಗೆ ಏಕೋ ಎರಡು ನಿಮಿಷದ ಕೀರ್ತನೆ ಅಸಹನೀಯವಾಗಿ ತೋರಿತ್ತು.
***
ಈ ರೀತಿಯ ನಡವಳಿಕೆಗಳನ್ನು ನಾವು ದಿನನಿತ್ಯ ನೋಡುತ್ತಲೇ ಇರುತ್ತೇವೆ. ಇವೆಲ್ಲವನ್ನೂ ನಾವು ಗಮನಿಸಿದರೆ ತಿಳಿಯುವುದು, ನಮ್ಮ ಇಂದಿನ ನಗರಜೀವನದ ವೇಗದಲ್ಲಿ ಮುಂದೆ ನಡೆಯುತ್ತಿದ್ದಂತೆಲ್ಲಾ ಹಿಂದೆ ಉಳಿಯುತ್ತಿರುವುದು ಸಂಯಮ-ಸಹನೆ-ಸಮಾಧಾನ.

ಬೌದ್ಧರಲ್ಲಿ ಒಬ್ಬ ರಾಕ್ಷಸನ ಸ್ವಾರಸ್ಯಕಾರಿಯಾದ ಕಥೆಯಿದೆ. ಈ ರಾಕ್ಷಸನ ವಿಶೇಷವೇನೆಂದರೆ ಅವನು ಆಹಾರವಾಗಿ ಸೇವಿಸುತ್ತಿದ್ದುದು ಮನುಷ್ಯನ ಮನಸ್ಸಿನಲ್ಲಿ ಸೃಷ್ಟಿಯಾಗುತ್ತಿದ್ದ ‘ಕೋಪ’ವನ್ನು. ಭೂಲೋಕದಲ್ಲಿ ಮನುಷ್ಯರಲ್ಲಿ ಕೋಪಕ್ಕೇನು ಕೊರತೆಯೇ? ಹೀಗಾಗಿ ಅವನಿಗೆ ನಿತ್ಯವೂ ಪುಷ್ಕಳವಾದ ಆಹಾರ  ದೊರೆಯುತ್ತಿತ್ತು. ಆದರೂ ತನ್ನ ಆಹಾರದ ಥೈಲಿ ಎಂದಾದರೂ ಖಾಲಿಯಾಗಿಬಿಡಬಹುದು ಎಂಬ ಭಯ ಅವನ ಮನಸ್ಸಿನ ಒಂದು ಮೂಲೆಯಲ್ಲಿ ಇದ್ದೇ ಇತ್ತು.

ಅದಕ್ಕೇ, ಆ ರಾಕ್ಷಸ ಕೌಟುಂಬಿಕ ಕಲಹಗಳನ್ನು ಆಗಾಗ ಸೃಷ್ಟಿಸುತ್ತಿದ್ದ. ಅವನ ಹಸಿವು ಹೆಚ್ಚಾಗಿ ಇವುಗಳಿಂದ ನೀಗದಿದ್ದಾಗ, ದೇಶ-ದೇಶಗಳ ನಡುವೆ ಯುದ್ಧವಾಗುವಂತೆ ನೋಡಿಕೊಳ್ಳುತ್ತಿದ್ದ. ಯುದ್ಧವೇನಾದರೂ ಪ್ರಾರಂಭವಾಯಿತೆಂದರೆ ಆ ರಾಕ್ಷಸನಿಗೆ ಸುಗ್ಗಿಯ ಕಾಲ ಬಂದಿತೆಂದೇ ಲೆಕ್ಕ. ನಿರಾಯಾಸವಾಗಿ ಅಲ್ಲಿ ಜನಗಳ ನಡುವಿನ ಕೋಪ ಇಮ್ಮಡಿ ಮೂರ್ಮಡಿಗೊಂದು ಅವನಿಗೆ ತಿಂದು ತೇಗುವಷ್ಟೂ ಆಹಾರ ದೊರಕುತ್ತಿತ್ತು.

ಪರಿಸ್ಥಿತಿ ಹೀಗಿರುವಾಗ ಅವನಿಗೆ ಏನಾದರೂ ಹೆಚ್ಚಿನದನ್ನು ಸಾಧಿಸಬೇಕೆಂಬ ಹಂಬಲ ಮೂಡಿ, ಮಾನವರನ್ನು ಬಿಟ್ಟು ಈಗ ದೇವತೆಗಳ ಮೇಲೆ ತನ್ನ ಶಕ್ತಿಯನ್ನು ಪ್ರಯೋಗಿಸಬೇಕು ಎಂದು ತೀರ್ಮಾನ ಮಾಡಿದ. ಸರಿ, ತಡಮಾಡದೆ ಅವನು ದೇವಲೋಕಕ್ಕೆ ಹೋದಾಗ, ಅಲ್ಲಿ ದೇವರಾಜ ಇರಲಿಲ್ಲ. ಅವನ ಸಿಂಹಾಸನ ಖಾಲಿಯಿತ್ತು.  ಇದೇ ಸರಿಯಾದ ಸಮಯವೆಂದು ಆ ರಾಕ್ಷಸ ದೇವರಾಜನ ಸಿಂಹಾಸನದ ಮೇಲೆ ಕುಳಿತುಕೊಂಡ.

ದೇವಸಭೆಗೆ ಒಬ್ಬೊಬ್ಬರಾಗಿ ದೇವತೆಗಳ ಆಗಮನವಾಗುತ್ತಿದ್ದಂತೆ, ಎಲ್ಲರ ಮುಖದಲ್ಲೂ ಆಶ್ಚರ್ಯ.  ದೇವರಾಜನ ಸಿಂಹಾಸನವನ್ನು ಯಾರೋ ರಾಕ್ಷಸನೊಬ್ಬ ಆಕ್ರಮಿಸಿಕೊಂಡಿರುವುದನ್ನು ಕಂಡು ದೇವತೆಗಳ ಪಿತ್ತ ನೆತ್ತಿಗೇರಿ, ರಾಕ್ಷಸನನ್ನು ಜರಿಯಲು ಶುರುಮಾಡಿದರು. ಎಲ್ಲರ ಮುಖವೂ ಕೆಂಪಾಗಿತ್ತು. ಈ ದೇವತೆಗಳ ಕೋಪವನ್ನು ತಿನ್ನುತ್ತಾ ರಾಕ್ಷಸ ಇನ್ನೂ ದೈತ್ಯಾಕಾರದಲ್ಲಿ ಬೆಳೆಯಲು ಪ್ರಾರಂಭಿಸಿದ.

ಆದರೆ ದೇವತೆಗಳ ಕೋಪ ಕ್ಷೀಣಿಸಲಿಲ್ಲ.  ಅವರು ತಬ್ಬಿಬ್ಬಾದರು. ಈಗ ಸಭೆಯ ಇನ್ನೊಂದು ಮೂಲೆಯಿಂದ ದೇವರಾಜ ಬಂದ. ಪರಿಸ್ಥಿತಿಯನ್ನು ಅವಲೋಕಿಸಿದಾಗ ಈ ರಾಕ್ಷಸನ ಹುನ್ನಾರ ಅರ್ಥವಾಗಿ ದೇವರಾಜ ಸಾವಧಾನದಿಂದ ಒಳಗೆಬಂದು, ‘ದೇವಲೋಕಕ್ಕೆ ನಿನಗೆ ಸ್ವಾಗತ ಮಿತ್ರ. ನೀನು ನನ್ನ ಸಿಂಹಾಸನದಮೇಲೆ ಕುಳಿತಿರುವುದು ನನಗೆ ಸಂತೋಷದ ವಿಷಯವೇ.

ನಿನ್ನ ಪಕ್ಕದಲ್ಲಿ ಖಾಲಿ ಇರುವ ಆಸನವನ್ನು ನಾನು ತೆಗೆದುಕೊಳ್ಳುತ್ತೇನೆ, ನೀನು ಅಲ್ಲಿ ಕುಳಿತರೇ ಶೋಭೆ’ ಎಂದ. ದೇವರಾಜನ ಈ ಮಾತು ಕೇಳಿ, ದೇವತೆಗಳೆಲ್ಲಾ ಶಾಂತರಾದರು. ಎಲ್ಲರಲ್ಲಿ ಇದ್ದ ಕೋಪವೂ ಕಾಣೆಯಾಗಿ ರಾಕ್ಷಸ ಆಹಾರವಿಲ್ಲದೆ ತನ್ನ ಗಾತ್ರದಲ್ಲಿ ಕುಗ್ಗಿ, ಕೊನೆಗೆ ಕಣ್ಣಿಗೆ ಕಾಣದಷ್ಟು ಸೂಕ್ಷ್ಮವಾಗಿ ಗಾಳಿಯಲ್ಲಿ ಬೆರೆತುಹೋದ.

ಈ ಕಥೆಯಲ್ಲಿ ಪ್ರತಿಫಲಿತವಾಗಿರುವ ಧ್ವನಿಯನ್ನು ನೋಡಿದರೆ ನಮಗೆ ಸ್ಪಷ್ಟವಾಗುವುದು, ಕೋಪವಷ್ಟೇ ಅಲ್ಲದೆ ನಾವು ಒತ್ತಡ, ದಣಿವು, ಆಯಾಸ ಎಂದು ಹೇಳಿಕೊಳ್ಳುವ ಕ್ಲೇಶಗಳ ವಾಸಸ್ಥಾನ ನಮ್ಮ ಮನಸ್ಸು ಎಂಬುದು. ಅಂದು ಟ್ರಾಫಿಕ್ ಸಿಗ್ನಲ್ಲಿನಲ್ಲಿ ನನ್ನ ಕಾರಿನ ಹಿಂದೆ ನಿಂತಿದ್ದ ವಾಹನಗಳು ಒಂದೇ ಸಮನೆ ತಮ್ಮ ಹಾರನ್ನುಗಳನ್ನು ಬಜಾಯಿಸುವ ಬದಲು ಒಂದೈದು ಸೆಕೆಂಡು ಕಾದಿದ್ದಾರೆ ಅಥವಾ ನನ್ನ ಕಾರನ್ನು ದಾಟಿ ಮುಂದೆಹೋಗುವಾಗ ನನ್ನ ಕಡೆ ತಿರುಗಿ ದುರುಗುಟ್ಟಿ ನೋಡುವ ಬದಲು, ನಕ್ಕು ಬಿಟ್ಟಿದ್ದಾರೆ ಆ ಸವಾರನಲ್ಲಿ ಕೋಪ ಉದ್ಭವವೇ ಆಗುತ್ತಿರಲಿಲ್ಲ.

ವಿಮಾನದಲ್ಲಿ, ನನ್ನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ, ನನ್ನನ್ನು ದೂಡಿಕೊಂಡು ಹೋಗಿ ವಿಮಾನದ ಬಾಗಿಲು ಕಾಯುವ ಬದಲು, ಬಾಗಿಲಿನ ಹತ್ತಿರ ಕುಳಿತವರಿಗೆ ಮೊದಲು ಹೊರಹೋಗಲು ಅವಕಾಶ ಕೊಟ್ಟು, ತಾನು ಎರಡು ನಿಮಿಷ ತಡವಾಗಿ ಎದ್ದಿದ್ದರೆ, ಆತ ಕಾದು ಕಾದು ಕಳವಳಪಡುವ ಅಗತ್ಯವೇ ಇರಲಿಲ್ಲ. ಸಂಗೀತ ಕಚೇರಿಯಲ್ಲಿ ಎರಡೂವರೆ ಗಂಟೆ ಕುಳಿತಿದ್ದ ವ್ಯಕ್ತಿ, ಇನ್ನೆರಡು ನಿಮಿಷ ತಡವಾಗಿ ಎದ್ದು ಹೋಗಿದ್ದರೆ ಯಾವ ರಾಜ್ಯವೂ ಕೊಳ್ಳೆ ಹೋಗುತ್ತಿರಲಿಲ್ಲ.

ನಮ್ಮ ಸಂಯಮ, ಸಹನೆಗಳು ಹೆಚ್ಚು ಪರೀಕ್ಷೆಗೆ ಬರುವುದು ದಿನನಿತ್ಯದ ಇಂಥ ಸಣ್ಣ ಪುಟ್ಟ ವಿಚಾರಗಳಲ್ಲೇ.  ಅವುಗಳನ್ನು ಸಮರ್ಥವಾಗಿ ನಿಭಾಯಿಸಿದರೆ, ಜೀವನ ಎಷ್ಟೋ ದೊಡ್ಡ ಸವಾಲುಗಳನ್ನು ಎದುರಿಸಲು ಸಶಕ್ತರಾಗುತ್ತೇವೆ. ಊಟ ಮಾಡುವಾಗ ಅದರ ಸೊಗಸಿರುವುದು, ಮೊಸರನ್ನದ ಕೊನೆಯ ತುತ್ತು ತಿಂದ ನಂತರ ತಟ್ಟೆಯಲ್ಲಿರುವ ಮೊಸರನ್ನು ಬಳಿದು ಸವರಿ ಬೆರಳು ನೆಕ್ಕುವುದರಲ್ಲಿ.

ಸಂಗೀತದ ಆಸ್ವಾದನೆ ಇರುವುದು ಸಂಗೀತಕಛೇರಿ ಮುಗಿದ ನಂತರದ ಮೌನದಲ್ಲಿಯೂ ಸ್ವರಗಳು ಅನುರಣನವಾಗುವುದನ್ನು ಅನುಭವಿಸುವುದರಲ್ಲಿ. ಮುಂಜಾವಿನ ತಾಜಾತನ ದೊರಕುವುದು, ಕಾಫಿಯ ಬಟ್ಟಲಿನಿಂದ ಕಾಫಿಯನ್ನು ಹೀರುವಮುನ್ನ ಅದರ ಘಮ ಮೂಗಿಗೆ ಬಡಿಯುವುದರಲ್ಲಿ. ಇವೆಲ್ಲಕ್ಕೂ ಅತ್ಯಗತ್ಯವಾಗಿರುವುದು ಸಮಾಧಾನ.

ಆತುರವಿಲ್ಲದೆ ಕಾಫಿ ಕುಡಿಯುವ, ಸಾವಧಾನದಿಂದ ಊಟಮಾಡುವ, ಸಹನೆಯಿಂದ ಒಳ್ಳೆಯ ಕಾವ್ಯವನ್ನು ಆಲಿಸುವ, ಆಸನಶುದ್ಧಿಯಿಂದ ಒಂದೆಡೆ ಕುಳಿತು ಸಂಗೀತವನ್ನು ಕೇಳುವ ಸಂಯಮ ನಮ್ಮಲ್ಲಿದ್ದರೆ, ಎಲ್ಲ ಚಿಕ್ಕ ಪುಟ್ಟ ವಿಚಾರಗಳೂ ಮನಸ್ಸಿಗೆ ಮುದ ನೀಡುತ್ತವೆ. ಆಗ ನೆಮ್ಮದಿ, ಶಾಂತಿಯೂ ಮೂಡುತ್ತದೆ. ಸಹಜವಾಗಿಯೇ ಶಾಂತವಾಗಿರುವ ಮನಸ್ಸು, ಸಕಾರಾತ್ಮಕ ವಿಚಾರಗಳನ್ನು ಯೋಚಿಸಿ, ಒಂದು ಶ್ರೇಷ್ಠವಾದ ಗುರಿಯ ಕಡೆಗೆ ಕಾರ್ಯೋನ್ಮುಖವಾಗಿ ಔನ್ನತ್ಯವನ್ನು ಪಡೆಯಲು ಸಾಧ್ಯ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT