ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಪವೆಂಬ ಶಕ್ತಿಯಲ್ಲಿ ಇರಲಿ ನಂಬಿಕೆ

Last Updated 8 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಕೋಪ ಒಳ್ಳೆಯದೇ ಕೆಟ್ಟದ್ದೇ ಎಂದರೆ ನೂರಕ್ಕೆ ನೂರು ಅದು ಕೆಟ್ಟದ್ದೇ ಎಂಬ ಅಭಿಪ್ರಾಯ ಬರುತ್ತದೆ. ದೇಹದ ಸ್ನಾಯುಗಳಿಂದ ಹಿಡಿದು ಅದರ ದುಷ್ಪರಿಣಾಮಗಳ ಬಗ್ಗೆ ಪುಟಗಟ್ಟಲೇ ಬರೆಯುವ ತಜ್ಞರು ಬೆಳೆದುಬಿಟ್ಟಿದ್ದಾರೆ.  ಅದರ ಉಪಶಮನಕ್ಕೆಂದು ಮಕ್ಕಳಿಂದ ಹಿಡಿದು ವೃದ್ಧರವರೆಗೂ ಅನೇಕರು ಬಾಯಲ್ಲಿ ಚಾಕಲೇಟ್, ಜೀರಿಗೆ ಜಗಿಯುವುದು ಒಂದು, ಎರಡು... ಎಣಿಸಲು ಮೊದಲು  ಮಾಡುತ್ತಾರೆ.

ಕೋಪದಿಂದ ರೋಗ ತಂದುಕೊಂಡವರು, ಕೆಲಸ ಕಳೆದುಕೊಂಡವರು, ಮನೆ ಕಳೆದುಕೊಂಡವರು, ಸಂಸಾರವನ್ನೇ ಕಳೆದುಕೊಂಡವರ ದೊಡ್ಡ ಪಟ್ಟಿಯೇ ಸಿಗುತ್ತದೆ. ಆದರೆ, ಕೋಪ ಕೆಟ್ಟದ್ದಲ್ಲ ಅದು ಒಳ್ಳೆಯದೇ ಎಂದು ಹೇಳಿದರೆ ಎಲ್ಲರ ಕಿವಿಯೂ ನಿಮಿರುತ್ತದೆ.  ಆದರೆ ಇದು ಸತ್ಯಸ್ಯ ಸತ್ಯ ಎಂದರೆ ತಪ್ಪಲ್ಲ. ಕೋಪದ ಕಾರಣದಿಂದಲೇ ಅನೇಕ ಧರ್ಮಬದ್ಧವಾದ, ನ್ಯಾಯಯುತ ಕಾರ್ಯಗಳು ಈ ಸಮಾಜದಲ್ಲಿ ನಡೆದಿವೆ.

ನಾಡು ನುಡಿ ಉಳಿಸಿಕೊಳ್ಳುವಲ್ಲಿ, ಸ್ವಾತಂತ್ರ್ಯ ತಂದುಕೊಳ್ಳುವಲ್ಲಿ, ವ್ಯವಸ್ಥೆಯನ್ನು ಹಿಡಿದಿಡುವಲ್ಲಿ ಕೋಪವೆಂಬುದರ ಮಹಾಪಾತ್ರ ಇದೆ.  ‘ಭೀಮ’ ಎಂದರೆ ಎಲ್ಲರಿಗೂ ಮಧ್ಯಮ ಪಾಂಡವ ಎಂದು ಗೊತ್ತು. ‘ಭಯಂಕರನಾದವನಿಗೆ ಪ್ರತಿಭಯವನ್ನು ಉಂಟುಮಾಡುವವನು’ ಎಂದು ಅದರ ಅರ್ಥ.  ‘ಭೀಮನು ತನ್ನ ಘೋರತನದಿಂದ ಶಂಕರನಾಗುತ್ತಾನೆ’ ಎಂದು ವ್ಯಾಖ್ಯಾನಿಸುತ್ತಾರೆ. 

ಶಾಂತಿ, ಸುವ್ಯವಸ್ಥೆ, ಉದ್ಧಾರಕ್ಕಾಗಿ ಉಂಟಾಗುವ ಕೋಪವು ಒಳ್ಳೆಯದೇ. ಹೀಗಿದ್ದ ಮೇಲೆ ಅದರ ಶಕ್ತಿಯ ಅಗಾಧತೆ ಎಷ್ಟು ಇರಬಹುದು!  ಅಸುರಸಂಹಾರಕ್ಕಾಗಿ ಬಳಸಿದ್ದು ಈ ಕೋಪಾಗ್ನಿಯನ್ನೇ. ಅದು ಎಲ್ಲೆಲ್ಲಿ ನಿರ್ದಿಷ್ಟ ಕಾರಣಕ್ಕಾಗಿ ಉಪಯೋಗಿಸಲ್ಪಡುತ್ತದೆಯೋ ಅಲ್ಲೆಲ್ಲ ಅದು ಒಳ್ಳೆಯದೇ.  ಅದು ತನ್ನ ನಿರ್ದಿಷ್ಟತೆಯನ್ನು ಕಳೆದುಕೊಂಡ ಸ್ಥಳದಲ್ಲಿ ರೋಗವಾಗಿಯೋ ವ್ಯಸನವಾಗಿಯೋ ಬದಲಾಗುತ್ತದೆ.

ಹೋಮಾಗ್ನಿಯಲ್ಲಿ ಅದು ನಿಸರ್ಗ ಸಮತೋಲನತೆಗೆ ಉಪಯೋಗಿಸಲ್ಪಟ್ಟರೆ, ಅಡುಗೆಯನ್ನು ಪಕ್ವ ಮಾಡಲು ಒಲೆಯಲ್ಲಿ ಅಗ್ನಿಯಾಗಿರುತ್ತದೆ, ದೇವರ ಮುಂದಿನ ನಂದಾದೀಪವಾಗುತ್ತದೆ, ಕಸವನ್ನು ಬೂದಿ ಮಾಡುತ್ತದೆ, ಹಾಗೆಯೇ ಜೀವ ತೊರೆದ ದೇಹವನ್ನು ಕೂಡ.  ಅಗ್ನಿಯಷ್ಟು ಪ್ರಚಂಡತೆ ಇರುವ ಆ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದೇ ಇದ್ದಾಗ ಮಾತ್ರ ರೋಗ–ರುಜಿನಗಳು.

ಕೆಲವರಿಗೆ ಕೋಪವೇ ಬರುವುದಿಲ್ಲ, ಅವರು ತುಂಬ ಒಳ್ಳೆಯವರು ಎಂಬ ಕುರುಡುತನ ಬೆಳೆದಿರುತ್ತದೆ.  ಆದರೆ ಅವರಿಂದ ಯಾವ ಜವಾಬ್ದಾರಿಯುತ ಕೆಲಸಗಳನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ.  ಧರ್ಮರಾಯನು ಕೋಪಗೊಳ್ಳಲೇ ಇಲ್ಲ. ಹೆಂಡತಿಯ ಸೀರೆ ಸೆಳೆದಾಗಲು ಕೂಡ.  ಆದರೆ ಭೀಮನಿಗೆ ಭಯಂಕರ ಸಿಟ್ಟು.ಸಹಜವಾದ, ಪ್ರಕೃತಿದತ್ತವಾದ, ಧರ್ಮಯುತವಾದ, ನ್ಯಾಯಬದ್ಧವಾದ ಕಾರ್ಯಗಳು ಜರುಗಬೇಕೆಂದರೆ ಕೋಪವಿಲ್ಲದೇ ಸಾಧ್ಯವೇ ಇಲ್ಲ.  ಅನೇಕರು ಇಂತಹ ಜವಾಬ್ದಾರಿಹೀನವಾದ ಕೋಪರಾಹಿತ್ಯವನ್ನು ಅಭ್ಯಾಸ ಮಾಡಲು ತೊಡಗಿದ್ದಾರೆ.

 ಪತಿ, ಪತ್ನಿ, ಮಕ್ಕಳು ಇವರಲ್ಲಿ ಯಾರು ಯಾರನ್ನು ಪ್ರಶ್ನಿಸಿದರೂ ಕೋಪವು ತಾಂಡವ ಆಡುತ್ತದೆ.  ಆದ್ದರಿಂದ ಮನೆಯಲ್ಲಿ ಶಾಂತಿ ಬೇಕು ಅಂದರೆ ಕೋಪವನ್ನು ತ್ಯಜಿಸಬೇಕು ಎಂಬ ಅವಿವೇಕವನ್ನು ದುಡಿಸತೊಡಗಿದ್ದಾರೆ.  ಆದರೆ ವಾಸ್ತವದಲ್ಲಿ ಯಾರಿಗೂ ಕೋಪವನ್ನು ತ್ಯಜಿಸಲು ಆಗಿರುವುದಿಲ್ಲ. ಅದು ವ್ಯವಸ್ಥೆಯ ಮತ್ತೊಂದು ಭಾಗದಲ್ಲಿ ಅನಗತ್ಯವಾಗಿ ವ್ಯಕ್ತವಾಗುತ್ತದೆ.

ಮನೆಯ ಮಂದಿ ತಮ್ಮ ಹಠ, ಅಹಂಕಾರ, ಮದಗಳಿಗೆ ಯಾವುದೇ ಅಂಕೆಯಿಲ್ಲದೆ ವರ್ತಿಸುವುದಕ್ಕೆ ಪ್ರೋತ್ಸಾಹ ದೊರಕಿರುತ್ತದೆ.  ತಮಗೆ ಬೇಕಾದ್ದನ್ನು ಸಾಧಿಸಲು ಅನೇಕರು ಈ ಕೋಪವೆಂಬ ಅಗ್ನಿಗೆ ಶರಣಾಗಿದ್ದಾರೆ. ಸ್ವಾರ್ಥಕ್ಕಾಗಿ, ತೀಟೆಗಾಗಿ ಅದು ಬಳಕೆ ಆಗುತ್ತಿದೆ. ಅದನ್ನು ವ್ಯವಸ್ಥಿತ ಬದುಕಿಗಾಗಿ ಹೋರಾಡಲು ಬಳಸಿದಾಗ ಅದು ಅದ್ಭುತ ಆಯುಧವಾಗುತ್ತದೆ.

ಕೆಲವು ಕುಟುಂಬಗಳಲ್ಲಿ ಬಿರುಕು ಬಂದಿರುವುದರ ಮುಖ್ಯ ಕಾರಣ ಇದೇ ಆಗಿದೆ.  ಆದರೆ ಈ ಬಿರುಕುಗಳು ಅವರಿಗೆ ಬಲುದೊಡ್ಡ ಪಾಠವನ್ನು ಕಲಿಸಿರುತ್ತದೆ ಎಂಬುದನ್ನು ಮರೆಯಲಾಗುವುದಿಲ್ಲ. ಶಿವನ ಸಂಯಮ, ಔದಾರ್ಯವನ್ನು ಪರೀಕ್ಷೆಗಿಟ್ಟ ದಕ್ಷನಿಗೆ ಪಾಠ ಕಲಿಸಲು ವೀರಭದ್ರನನ್ನೇ ಸೃಷ್ಟಿಸಿದಂತಹ ಆ ದಕ್ಷಿಣಾಮೂರ್ತಿ ಬ್ರಹ್ಮನೊಂದಿಗೆ ಹೇಳುತ್ತಾನೆ ‘ನಾನು ಧಕ್ಷನಂತಹವನನ್ನು ನೆನೆಯಲು ಕೂಡ ಇಷ್ಟಪಡುವುದಿಲ್ಲ’ ಎಂದು.

ಹುಡುಗನೊಬ್ಬನು ತನ್ನ ಪ್ರಿಯತಮೆ ಕೈಕೊಟ್ಟಳು ಎಂಬ ಸಿಟ್ಟಿಗೆ ಮನೆಯಲ್ಲಿ ವಿಪರೀತವಾದ ವರ್ತನೆ ತೋರತೊಡಗಿದ್ದ. ತಂದೆ, ತಾಯಿ, ತಂಗಿ ಎಲ್ಲರೂ ಅವನು ಹೇಳಿದಂತೆಯೇ ಕೇಳಬೇಕು. ಕೋಪದಿಂದ ಅವನು ಏನು ಬೇಕಾದರೂ ತೆಗೆದು ಒಗೆಯಲು, ಒಡೆಯಲು ಸಿದ್ಧನಿದ್ದ. ತಂಗಿ ನಗುತ್ತಾ ಫೋನ್‌ನಲ್ಲಿ ಮಾತನಾಡಬಾರದು, ತಾಯಿ ಗೆಳತಿಯರೊಂದಿಗೆ ಸ್ನೇಹದಿಂದ ಇರಬಾರದು, ಯಾರೂ ಮನೆಗೆ ಬರಬಾರದು, ತಂದೆ ತಡಮಾಡಿ ಮನೆಗೆ ಬರುವಂತಿಲ್ಲ – ಇಂತಹ ಹುಂಬ ಕಟ್ಟು ಪಾಡುಗಳು.  ಆದರೆ ಇಡೀ ಕುಟುಂಬ ಇದನ್ನು ಪಾಲಿಸುತ್ತಾ ನೆಮ್ಮದಿಯನ್ನೇ ಕಳೆದುಕೊಂಡುಬಿಟ್ಟಿತು.  ಇವರು ಮೆದುವಾದಷ್ಟೂ ಅವನ ಆಕ್ರಮಣಕಾರಿ ಪ್ರವೃತ್ತಿ ಹೆಚ್ಚಾಗುತ್ತ ಬಂದಿತು. 

ಎಲ್ಲಿಯವರೆಗೆ ಎಂದರೆ ತಂಗಿ ತನ್ನ ಡ್ಯಾನ್ಸ್ ತರಗತಿಯನ್ನು ಕೂಡ ಬಿಡಬೇಕು ಎಂಬಷ್ಟರ ಮಟ್ಟಿಗೆ. ಒಂದು ಸಲಹೆ ನೀಡಿದೆ: ‘ನೀವೆಲ್ಲ ನಿಮಗೆ ಬೇಕಾದಂತೆ ಇರಿ. ಅವನ ಮಾತಿಗೆ ಬೆಲೆ ಕೊಡಬೇಡಿ.’ ಅವರು ಹಾಗೆ ಪ್ರಾರಂಭಿಸಿದಾಗ ಪರಿಣಾಮ ಅವನ ಕೊನೆಯ ಅಸ್ತ್ರ – ‘ಮನೆ ಬಿಟ್ಟು ಹೋಗ್ತೀನಿ’. ಅಂದು ಅವನ ತಾಯಿಗೆ ರೋಸಿತ್ತು ‘ಹೋದ್ರೆ ಹೋಗೋ.. ಸಾಕಾಗಿದೆ ನನಗೆ ನಿನ್ನ ಉಪಟಳ’ ಅಂದುಬಿಟ್ಟಳು. ಹೊರಗೆ ಹೋದವನು ಎರಡು ಗಂಟೆಗಳಲ್ಲಿ ವಾಪಸ್ ಬಂದ.  ಮನೆ ಈಗ ನಂದನವನ.  ಕೋಪವು ವಿವೇಕವಿಲ್ಲದಾಗ ಸತ್ತ್ವಹೀನವಾಗುತ್ತದೆ. 

ವ್ಯವಸ್ಥೆಯನ್ನು ಕಾಪಾಡಲೆಂದು ಉಂಟಾಗುವ ಕೋಪವು ಭಯವನ್ನು ತರುತ್ತದೆ. ಈ ಭಯವು ಕೂಡ ಒಳ್ಳೆಯದೇ. ಮನೆಯೆಂಬ ಸುಂದರ ಸ್ಥಳವನ್ನು ಸದಾಕಾಲ ಮಲಿನಗೊಳಿಸುವ ಸ್ವೇಚ್ಛಾಭಾವನೆ–ಚಿಂತನೆ–ವರ್ತನೆಗಳನ್ನು ಹದ್ದುಬಸ್ತಿನಲ್ಲಿ ಇಡಲು ಭಯವು ಒಳ್ಳೆಯ ಸಾಧನ. ಆದರೆ ಕೆಲವು ಹಿರಿಯರು ಭಯವನ್ನು ಸೃಷ್ಟಿಸಲೆಂದೇ ಕೋಪವನ್ನು ದೋಷಯುಕ್ತವಾಗಿ ಬಳಸುತ್ತಿದ್ದಾರೆ. 

ತಾವು ವಯಸ್ಸಿನಲ್ಲಿ ದೊಡ್ಡವರು, ಮಕ್ಕಳು ತಾವು ನೀಡುವ ಹಣದಿಂದಲೇ ಬದುಕುತ್ತಿರುವುದು ಎಂಬ ಕೆಲವು ಮೇಲುಸ್ತರದ ಕ್ಷುಲ್ಲಕ ಭಾವನೆಗಳನ್ನು ಮನೆಯ ಮಕ್ಕಳ ಮೇಲೆ ಹೇರುತ್ತಾ ಅವರನ್ನು ಹದ್ದುಬಸ್ತಿನಲ್ಲಿಡಲು ಕೋಪವೆಂಬ ಅಸ್ತ್ರವನ್ನು ಬಳಸುತ್ತಿದ್ದಾರೆ. ಸಹಜವಾದ ವಯಸ್ಸಿನ ಭಾವನೆಗಳನ್ನು ಹಂಚಿಕೊಳ್ಳಲು ಕೂಡ ಮಕ್ಕಳಿಗೆ ಅವಕಾಶ ನೀಡದಂತೆ ನಿರ್ಭಂಧಗಳನ್ನು ತರುತ್ತಾರೆ. ಇಂತಹ ಭಯಗಳು ಎಂದಿಗೂ ಒಳ್ಳೆಯದಲ್ಲ.  ಅತಿಯಾದ ಯಾವ ವಿಚಾರವೂ ಒಳ್ಳೆಯದಲ್ಲ ಅದು ಶಿಸ್ತೇ ಇರಬಹುದು, ಉಢಾಳತನವೂ ಇರಬಹುದು. 

ಕೋಪವೆಂಬುದು ಹಿಡಿತದಲ್ಲಿದ್ದಾಗ ಅದ್ಭುತವಾದ ಸಾಧನೆಗಳನ್ನು ವ್ಯಕ್ತಿ ಮಾಡುತ್ತಾನೆ. ಯಾರೇ ಉನ್ನತ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಗಮನಿಸಿದರೂ ಅವರು ತಮಗಾದ ಅನ್ಯಾಯ, ಅಕ್ರಮ, ಅವಮಾನ, ನೋವು, ಸಂಕಟಗಳಿಂದ ಉಂಟಾದ ಕ್ರೋಧವನ್ನು ಸಾಧನೆಗೆ ಉಪಯೋಗಿಸಿ ಹಿರಿದಾಗಿ ಬೆಳೆದಿದ್ದಾರೆ. ಕೋಪವೆಂಬ ಶಕ್ತಿಯನ್ನು ಸಮಾಜಕ್ಕೆ, ಸಾಧನೆಗೆ, ತಮ್ಮ ಪ್ರತಿಭೆಗೆ ಬೆಳಕಾಗಿಸಿಕೊಳ್ಳುವ ಶಕ್ತಿ ಅದನ್ನು ಹಿಡಿತದಲ್ಲಿ ಇಟ್ಟುಕೊಂಡಾಗ ಮಾತ್ರ ದೊರಕುತ್ತದೆ.

ಕೆಲವರು ‘ಕೋಪ ತೋರದೇ ಇರುವುದೇ ಉತ್ತಮ ಸಂಸ್ಕಾರ’ ಎಂಬ ಕುರುಡು ನಂಬಿಕೆಗೆ ಜೋತು ಬಿದ್ದಿರುತ್ತಾರೆ.  ಅಂತಹ ಕಡೆಗಳಲ್ಲಿ ಅವ್ಯವಸ್ಥೆ ಎಂಬುದು ಎಲ್ಲ ಕೋನಗಳಲ್ಲಿಯೂ ಗೋಚರವಾಗುತ್ತಿರುತ್ತದೆ. ನಾವು ಯಾವುದನ್ನು ಒಳ್ಳೆಯದು ಎನ್ನುತ್ತೇವೆಯೋ ಅದನ್ನು ಪರಿಣಾಮಗಳಿಂದಲೇ ತಿಳಿಯಬೇಕು. ಇಂದು ಅನೇಕ ರೀತಿಯ ತರಬೇತಿ ಶಿಬಿರಗಳಿವೆ. ಕೋಪವನ್ನು ಕುರಿತಾದ ಧನಾತ್ಮಕ ಕಾರ್ಯಾಗಾರದ ಅಗತ್ಯವಿದೆ.

ಕೋಪವೆಂಬ ಶಕ್ತಿಯು ಸುಮ್ಮನೇ ಹುಟ್ಟುವುದಿಲ್ಲ; ಅದಕ್ಕೆ ಕೆಲವು ಕಾರಣಗಳಿರುತ್ತವೆ. ಅದನ್ನು ನಾವು ವಿಮರ್ಶಿಸಿ ತಿಳಿಯಬೇಕು. ಸಾಧಾರಣವಾಗಿ ಕೋಪ ಬಂದಾಗ ನಾವು ಮತ್ತೊಬ್ಬರ ವರ್ತನೆಗಳನ್ನು ವಿಮರ್ಶಿಸುತ್ತೇವೆ. ಅದು ಮನಸ್ಸಿಗೆ ಆನಂದವೇ ಹೊರತು ಬುದ್ಧಿಗಲ್ಲ; ಕೋಪದಿಂದ ಬುದ್ಧಿ ನಾಶ.  ಅದನ್ನು ತಿಳಿಯುತ್ತಾ ಹೋದಾಗ ಅದು ಒಳಗಿನ ಬೆಳಕು.

ಕೋಪಕ್ಕೆ ಕಾರಣವಾದ ವಿರೋಧಗಳು ಮೇಲುಸ್ತರದಲ್ಲಿ ಸಕಾರಣ ಎನಿಸಿದರು ಸ್ವಲ್ಪವೇ ಬಗೆದು ನೋಡಿದಾಗ ಅದು ನಮ್ಮಲ್ಲಿ ಇರುವ ಅನೇಕ ಶಿಥಿಲತೆಗಳನ್ನು ಎತ್ತಿ ತೋರಿಸುತ್ತದೆ.   ಅನೇಕ ಸಲ ಮನುಷ್ಯ ಕೋಪದ ಬುದ್ಧಿಯಿಂದ ಮಾಡಿದ ಕೇಡನ್ನು ಅವನೇ ಜನ್ಮಪೂರ್ತಿ ಪರಿತಪಿಸುವಂತೆ ಮಾಡುತ್ತದೆ.  ಕೋಪವು ಪ್ರಾಜ್ಞವಾಗಿ ವ್ಯಕ್ತವಾಗಬೇಕು.  ಅನಾಗರಿಕವಾಗಿ ವ್ಯಕ್ತವಾದಾಗ ಅದು ಹಿಂಸೆಯೇ. ಯಾರೊಂದಿಗೆ ವಿರೋಧವಿದೆಯೋ ಅಲ್ಲಿಯೇ ಅದನ್ನು ಬಗೆಹರಿಸಿಕೊಳ್ಳುವ ವಿವೇಕವನ್ನು ಬೆಳೆಸಿಕೊಳ್ಳಬೇಕು.

ವಿರೋಧದ ಲೋಫಗಳನ್ನು ಅಲ್ಲಿಯೇ ತಿಳಿಯಲು ಸಾಧ್ಯ.  ಕೆಲವು ಸಲ ಕೋಪದ ಅಭಿವ್ಯಕ್ತಿಯ ರೀತಿಗಳು ಅಸಹ್ಯವನ್ನು ಉಂಟುಮಾಡುತ್ತವೆ.  ಐದು ವರ್ಷದ ಮಗುವೊಂದು ತಾಯಿ ಬೆಲ್ಲ ನೀಡಲಿಲ್ಲ ಎಂದು ರಸ್ತೆಯಲ್ಲಿ ಹೊರಳಿ ಅತ್ತದ್ದೂ ಇದೆ. ಮನೆಯ ಒಳಗೇ ಬುದ್ಧಿ ಕಲಿಸುವ ವ್ಯವಸ್ಥೆ ಇಲ್ಲದಾಗ ಅದು ರಸ್ತೆಗೆ ಬರುವುದರಲ್ಲಿ ಸಂಶಯವಿಲ್ಲ.

ರಾಜಕೀಯ ಜಗಳಗಳೂ ಕೂಡ ಅವ್ಯವಸ್ಥಿತವಾಗಿಯೇ ಇರುತ್ತವೆ.  ಹೌದು, ನಾವೆಲ್ಲ ಈಗ ವಿದ್ಯಾವಂತರು. ಹಾಗೆ ಹೇಳಿಕೊಳ್ಳಬಹುದೇ?  Uneducated literates, ಅಂದರೆ ಅನಾಗರಿಕ ವಿದ್ಯಾವಂತರು. ಕೋಪವನ್ನು ಶೋಧಿಸಿ ನೋಡಬೇಕು. ಕಾರಣವನ್ನು ಎಲ್ಲ ಕೋನಗಳಲ್ಲಿಯೂ ಸಮರ್ಥವಾಗಿ ಚಿಂತಿಸಿ ತಿಳಿಯಬೇಕು. ಅದರ ಬಳಕೆಯನ್ನು ಎಚ್ಚರಿಕೆಯಿಂದ ಗಮನಿಸಬೇಕು. ಅದರ ಪರಿಣಾಮವನ್ನು ಒರೆಹಚ್ಚಿ ನೋಡಬೇಕು. ಆಗ ಕೋಪವೆಂಬ ಶಕ್ತಿಯ ಮೂಲಕ ವ್ಯವಸ್ಥೆಯ ದುರುಪಯೋಗವನ್ನು ತಡೆಯಬಹುದು. ಕೋಪವನ್ನು ಅರಿಯಬೇಕು. 

ಸಾಧಕ ಮತ್ತು ಬಾಧಕಗಳನ್ನು ಅರಿತು ಉಪಯೋಗಿಸಿದಾಗ ಅದು ಸಮಾಜಕ್ಕೆ, ದೇಶಕ್ಕೆ, ಸಂಸ್ಕೃತಿಗೆ ಮಹತ್ತಾದ ಮಾರ್ಗನಿರ್ಮಾಣವನ್ನು ಮಾಡುತ್ತದೆ. ಆ ಸನ್ಮಾರ್ಗದಲ್ಲಿ ನಡೆಯುವ ಯಾವುದೇ ವ್ಯಕ್ತಿಯಾಗಲೀ ದೇಶವಾಗಲೀ ಉದ್ಧಾರದ ಹಾದಿಯಲ್ಲಿಯೇ ನಡೆಯುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ.  ನಿಸರ್ಗದತ್ತವಾದ ಈ ಅದ್ಭುತ ಶಕ್ತಿಯ ಬಳಕೆಯನ್ನು ತಿಳಿಯುತ್ತಹೋದಂತೆ ಮನಸ್ಸಿನಲ್ಲಿ ಅದ್ಭುತವಾದ ಆನಂದದ ಅಲೆಗಳು ಏಳುತ್ತವೆ. ಅದೇ ವ್ಯಕ್ತಿತ್ತ್ವದ ವಿಕಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT