ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಾಶಯ ತೆಗೆಸುವುದಿದ್ದರೆ... ಯೋಚಿಸಿ

Last Updated 19 ಜೂನ್ 2015, 19:30 IST
ಅಕ್ಷರ ಗಾತ್ರ

ಮೂವತ್ನಾಲ್ಕು ವರ್ಷದ ನಯನಾಳಿಗೆ ಮುದ್ದಾದ ಎರಡು ಮಕ್ಕಳು. ಹತ್ತು ವರ್ಷದ ಮಗ ಮತ್ತು ಆರು ವರ್ಷದ ಮಗಳು. ತುಮತಿಯಾದಂದಿನಿಂದ ನಿಯಮಿತವಾಗಿ ತಿಂಗಳಿಗೊಮ್ಮೆ ಕಿರಿಕಿರಿಯುಂಟುಮಾಡದೆ, ದೈನಂದಿನ ಕೆಲಸಗಳಿಗೆ ಅಡೆತಡೆ ಮಾಡದೆ ಬಂದು ಹೋಗುತ್ತಿದ್ದ ಋತುಸ್ರಾವದ ದಿನಗಳು, ಮಗಳು ಹುಟ್ಟಿದ ನಂತರ ಯಾಕಾದರೂ ಹೆಣ್ಣಾದೆನೋ ಎನಿಸುವಷ್ಟು ಕಿರಿಕಿರಿಯುಂಟು ಮಾಡಿ ಅವಳಲ್ಲಿ ಜಿಗುಪ್ಸೆ ತರಿಸುತ್ತಿದೆ.

ಇತ್ತೀಚೆಗೆ ಪ್ರತಿ ಹದಿನೆಂಟು–ಇಪ್ಪತ್ತು ದಿನಗಳಿಗೊಮ್ಮೆ ಮುಟ್ಟು ಕಾಣಿಸಿಕೊಂಡು ಅತಿಯಾದ ರಕ್ತಸ್ರಾವ, ಸೊಂಟ ನೋವು, ವಿಪರೀತ ಬಳಲಿಕೆ, ಎಂಟತ್ತು ಬಾರಿ ಸ್ಯಾನಿಟರಿ ಪ್ಯಾಡ್‌ ಬದಲಾಯಿಸುವಂತಹ ಪರಿಸ್ಥಿತಿಯಿಂದ ರೋಸಿಹೋಗಿದೆ.  ವೈದ್ಯರನ್ನು ಭೇಟಿಮಾಡಿ ಒಂದೆರಡು ತಿಂಗಳು ಚಿಕಿತ್ಸೆ ತೆಗೆದುಕೊಂಡರೂ ಪರಿಸ್ಥಿತಿ ಸುಧಾರಿಸದಿದ್ದಾಗ ಗರ್ಭಾಶಯ ತೆಗೆಸಿಬಿಡಬೇಕು (Hysterectomy)  ಎಂದು ನಿರ್ಧರಿಸಿದ್ದಾಳೆ. ಮನೆಯಲ್ಲಿ ಈ ವಿಷಯ ತಿಳಿದು ಎಲ್ಲರೂ ಗಾಬರಿಯಾದರು.

ಇಷ್ಟು ಸಣ್ಣ ವಯಸ್ಸಿಗೆ ಗರ್ಭಕೋಶ ತೆಗೆಸುವುದಾ? ಮುಂದೆ ತನಗಾಗಲೀ, ಸಂಸಾರಕ್ಕಾಗಲೀ ಯಾವುದೇ ತೊಂದರೆಯಾಗುವುದಿಲ್ಲವೇ? ಹೇಗೆ? ಎಂದು. ಆದರೆ ತನ್ನ ಪರಿಸ್ಥಿತಿಯಿಂದ ಬೇಸತ್ತಿದ್ದ ನಯನಾ ಹಟ ಹಿಡಿದು ಮನೆಯವರನ್ನು ಒಪ್ಪಿಸಿ ಗರ್ಭಾಶಯ ತೆಗಿಸಿಯೇಬಿಟ್ಟಳು. ನಲವತ್ತೆರಡು ವರ್ಷದ ಭವಾನಿಯವರಿಗೆ ಎರಡು ಗಂಡು ಮಕ್ಕಳು. ಹದಿನಾಲ್ಕರ ವಯಸ್ಸಿನಿಂದ ಪ್ರತಿ ತಿಂಗಳೂ ಅನುಭವಿಸಿದ ಋತುಸ್ರಾವವೆಂಬ ಹಿಂಸೆಗೆ ಕೊನೆಹಾಡಲು ಯೋಚಿಸಿದ್ದಾರೆ. ಅವರಿಗೆ ಯಾವುದೇ ತೊಂದರೆ ಇಲ್ಲವಾದರೂ, ಇತ್ತೀಚೆಗಷ್ಟೇ ಗರ್ಭಾಶಯ ತೆಗೆಸಿಕೊಂಡು ಯಾವುದೇ ತೊಂದರೆಯಿಲ್ಲದೆ ಆರಾಮವಾಗಿ ಓಡಾಡಿಕೊಂಡಿರುವ ಅವರ ಗೆಳತಿಯನ್ನು ನೋಡಿ, ಪ್ರತಿ ತಿಂಗಳ ಕಿರಿಕಿರಿಯಿಲ್ಲದೆ ತಾವೂ ಹಾಗಿದ್ದರೆ ಎಷ್ಟು ಚೆನ್ನ ಎನಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ.

ಈ ಎರಡೂ ಪ್ರಕರಣಗಳನ್ನು ನೋಡಿದಾಗ ಋತುಸ್ರಾವಕ್ಕೆ ಸಂಬಂಧಪಟ್ಟ ಏನೇ ತೊಂದರೆಗಳಿದ್ದರೂ ಗರ್ಭಕೋಶ ತೆಗೆಸುವುದೊಂದೇ ಪರಿಹಾರವೇ ಎನಿಸುತ್ತದೆ? ಗರ್ಭಕೋಶ ತೆಗೆಸಿದ ನಂತರ ಯಾವುದೇ ತೊಂದರೆಗಳು ಕಾಡದೆ ಜೀವನ ನಿರಾಳವಾಗಿಬಿಡುವುದೇ? ಇನ್ನು ಎಲ್ಲ ಸುಖಾಂತ್ಯವೇ? ಖಂಡಿತ ಇಲ್ಲ ಎನ್ನುತ್ತದೆ ವೈದ್ಯಲೋಕ. ಗರ್ಭಕೋಶ ತೆಗೆಸುವುದರಿಂದ ತಕ್ಷಣಕ್ಕೆ ಎಲ್ಲ ಕಷ್ಟಗಳಿಂದ ಮುಕ್ತಿ ದೊರಕಿಸಂತೆನಿಸಿ ನಿರಾಳವಾಗಬಹುದಾದರೂ, ಮುಂದೆ ಎದುರಿಸಬೇಕಾದ ಪರಿಣಾಮಗಳು ಅನೇಕ. ಅವು ಏನೆಂದು ತಿಳಿದುಕೊಳ್ಳುವ ಮುನ್ನ ಒಂದು ಹೆಣ್ಣಿಗೆ ಗರ್ಭಕೋಶದಿಂದಿರುವ ಉಪಯೋಗಗಳನ್ನು ತಿಳಿದುಕೊಳ್ಳೋಣ.

ಗರ್ಭಕೋಶ ಹೆಣ್ಣಿನ ಕಿಬ್ಬೊಟ್ಟೆಯ ಆಳದಲ್ಲಿ ಹುದುಗಿರುವ ಅರವತ್ತು ಗ್ರಾಂ (60 ಗ್ರಾಂ) ತೂಕದ ಒಂದು ಸಣ್ಣ ಅಂಗ. ಕಿಬ್ಬೊಟ್ಟೆಯ ಒಳಗೆ ಹುದುಗಿರುವ ಈ ಅಂಗ ಹೊರಗಡೆಗೆ ಯೋನಿಯ ಮೂಲಕ ತೆಗೆದುಕೊಂಡು ಒಳಗೆ ಎಡ ಮತ್ತು ಬಲಗಡೆಗಳಲ್ಲಿ ಗರ್ಭನಾಶದ ಮೂಲಕ ಅಂಡಾಶಯಗಳಿಗೆ ಅಂಟಿಕೊಂಡಿರುತ್ತದೆ.

ಗರ್ಭಾಶಯ, ಋತುಮತಿಯಾದ ಪ್ರತಿ ಹೆಣ್ಣಿನಲ್ಲಿ ಪ್ರತಿ ತಿಂಗಳು ಋತುಸ್ರಾವವಾಗಲು ನೆರವಾಗುತ್ತದೆ ಮತ್ತು ಅಂಡಾಶಯದಿಂದ ಬಿಡುಗಡೆಯಾದ ಅಂಡಾಣು ಗರ್ಭನಾಶದ ಮುಖಾಂತರ ಗರ್ಭಾಶಯಕ್ಕೆ ತಲುಪಿ, ವೀರ್ಯಾಣುವಿನ ಸಂಪರ್ಕಕ್ಕೆ ಬಂದಾಗ ಮೂಡುವ ಭ್ರೂಣವನ್ನು ಹಿಡಿದಿಟ್ಟುಕೊಂಡು ಅದರ ಬೆಳವಣಿಗೆಗೆ ಸಹಾಯಕವಾಗುತ್ತದೆ.

ಇದಲ್ಲದೆ ಕಿಬ್ಬೊಟ್ಟೆಯಲ್ಲಿರುವ ಗರ್ಭಾಶಯ, ತನ್ನ ಮುಂದಿರುವ ಮೂತ್ರಕೋಶ ಮತ್ತು ಹಿಂದಿರುವ ಗುದನಾಳಕ್ಕೆ ಆಧಾರವಾಗಿ ಅವುಗಳ ಕಾರ್ಯಕ್ಷಮತೆಯಲ್ಲಿ ಸಹಾಯ ಮಾಡುತ್ತದೆ. ತನ್ನ ಸುತ್ತಲಿರುವ ಹಲವಾರು ಅಸ್ತಿಬಂಧಕಗಳ (Ligame*ts) ಸಹಾಯದಿಂದ ಕಿಬ್ಬೊಟ್ಟೆಯ ತಳಕ್ಕೆ ಬಲ ನೀಡುವಲ್ಲಿಯೂ ಗರ್ಭಾಶಯ ಮುಖ್ಯ ಪಾತ್ರ ವಹಿಸುತ್ತದೆ.

ಗರ್ಭಾಶಯ ತೆಗೆಸಲು ಕಾರಣಗಳು
ಗರ್ಭಾಶಯ ಪ್ರತಿ ಹೆಣ್ಣಿನ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಆದ್ದರಿಂದ ಈ ಅಂಗಕ್ಕೆ ಊನವಾದಾಗ, ಬೇರೆ ಯಾವುದೇ ರೀತಿಯ ಚಿಕಿತ್ಸೆ ಫಲಕಾರಿಯಾಗದೆ, ಕಾಯಿಲೆ ಗುಣಕಾಣದೆ– ಬಿಗಡಾಯಿಸಿದಾಗ ಮಾತ್ರ ವೈದ್ಯರು ಗರ್ಭಾಶಯ ತೆಗೆದುಬಿಡಲು (Hysterectomy)  ನಿರ್ಧರಿಸುತ್ತಾರೆ.– 

ಗರ್ಭಾಶಯ ಅಥವ ಅದಕ್ಕೆ ಸಂಬಂಧಪಟ್ಟ ಅಂಗಗಳಾದ ಅಂಡಾಶಯ, ಗರ್ಭಕೊರಳಿನ ಕ್ಯಾನ್ಸರ್‌, ದೃಢಪಟ್ಟಾಗ.
*  ಗಡ್ಡೆಗಳಿದ್ದಾಗ
*  ಎಂಡೊಮೆಟ್ರಿಯೋಸಿಸ್‌ ಮತ್ತು ಅಡಿನೊಮಯೋಸಿಸ್‌ ಎಂಬ ತೊಂದರೆಗಳಿದ್ದಾಗ.
*  ಯಾವುದೇ ಚಿಕಿತ್ಸೆಯಿಂದ ಫಲ ಕಾಣದ ದೀರ್ಘ ಕಾಲದ ಕೊಬ್ಬೊಟ್ಟೆಯ ನೋವು.
*  ಗರ್ಭಾಶಯ ಜಾರಿದಾಗ ಮತ್ತು.
*  ಮಗುವಿನ ಜನನದ ನಂತರ ಅತಿಯಾದ ರಕ್ತಸ್ರಾವವಾಗುತ್ತಿದ್ದರೆ ಮಾತ್ರ ವೈದ್ಯರು ಹಿಸ್ಟರೆಕ್ಟಮಿಗೆ ಸೂಚಿಸುತ್ತಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಹೆಂಗಸರು ಜೀವನ ಶೈಲಿಯ ಸುಧಾರಣೆಗಾಗಿ ಮತ್ತು ಋತುಸ್ರಾವಕ್ಕೆ ಪ್ರತ್ಯಕ್ಷ/ ಪರೋಕ್ಷವಾಗಿ ಸಂಬಂಧಪಟ್ಟ ಕಾರಣಗಳಿಂದ ಮುಕ್ತಿ ಹೊಂದಲು ಗರ್ಭಾಶಯ ತೆಗೆಸಲು ತೀರ್ಮಾನಿಸುತ್ತಿದ್ದಾರೆ. ಹಿಸ್ಟರೆಕ್ಟಮಿ ಸರಳ ಚಿಕಿತ್ಸೆಯಾಗಿದ್ದು, ಶಸ್ತ್ರಕ್ರಿಯೆಯಾದ ಕೂಡಲೇ ನಂತರದ ದಿನಗಳಲ್ಲಿ ಯಾವುದೇ ತೊಂದರೆಗಳು ಕಾಣಿಸಿಕೊಳ್ಳುವುದು ಅಪರೂಪ ಮತ್ತು ಅದರಿಂದ ದಿನಚರಿಯಲ್ಲಿ ಯಾವುದೇ ತೊಂದರೆಯಿಲ್ಲದೆ, ಮುಟ್ಟಿನ ದಿನಗಳ ಕಿರಿಕಿರಿಯಿಲ್ಲದೆ ಓಡಾಡುವ ನೆರೆಹೊರೆ/ ಬಂಧುಗಳನ್ನು ನೋಡಿ ತಾವೂ ಹಾಗೆ ಇರುವಂತಾದರೆ ಎಷ್ಟು ಚೆನ್ನ ಎನಿಸಿ ಹಿಸ್ಟರೆಕ್ಟಮಿಗೆ ಒಳಗಾಗುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ.

ಆದರೆ ಕಾಲ ಕಳೆದಂತೆ, ವಯಸ್ಸಾಗಿ, ದೇಹದ ಕಾರ್ಯಕ್ಷಮತೆ ತಗ್ಗಿದಾಗ ಕಿಬ್ಬೊಟ್ಟೆಯ ತಳ ಮತ್ತು ಅಂಗಗಳಿಗೆ ಆಧಾರವಾದ ಪ್ರಬಲ ಅಂಗ ಇಲ್ಲವಾಗಿ ಹಲವಾರು ತೊಂದರೆಗಳಿಂದ ನರಳಬೇಕಾಗುತ್ತದೆ. ಒಂದು ಸಂಶೋಧನೆಯ ಪ್ರಕಾರ ಶಸ್ತ್ರಚಿಕಿತ್ಸೆಯ ಹತ್ತು ವರ್ಷಗಳ ನಂತರ, ಗರ್ಭಕೋಶ ತೆಗೆಯಲ್ಪಟ್ಟ ಮಹಿಳೆಯರು ಮೂತ್ರದ ಅಸಂಯತೆ   ಗುನಾಳ ಮತ್ತು ಗುದದ್ವಾರದ ಅಸಂಯತೆ,   ಕಿಬ್ಬೊಟ್ಟೆಯ ನೆಲ ಅಂಗ ಜಾರುವಿಕೆ , ಮತ್ತು ಕುರುವಿನ   ಸಮಸ್ಯೆಗಳಿಂದ ಬಳಲುತ್ತಾರೆ.

ಮೂತ್ರ ಅಸಂಯತೆ
ಮೂತ್ರದ ಅಸಂಯತೆಗೆ  ಹಲವಾರು ಕಾರಣಗಳನ್ನು ಗುರುತಿಸಲಾಗಿದೆಯಾದರೂ, (ಮಗುವಿನ ಜನನ ಕ್ರಿಯೆ, ವಯಸ್ಸು ಹೆಚ್ಚಾದಂತೆ, ಅತಿಯಾದ ತೂಕ ಮತ್ತು ಸ್ಥೂಲಕಾಯ) ಇತ್ತೀಚಿನ ದಿನಗಳಲ್ಲಿ ಹಿಸ್ಟರೆಕ್ಟಮಿಗೆ ಒಳಗಾದ ಮಹಿಳೆಯರಲ್ಲಿ ಈ ತೊಂದರೆ ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕೆ ಸಾಕಷ್ಟು ಪುರಾವೆಗಳು ಇನ್ನೂ ಲಭ್ಯವಾಗಿಲ್ಲವಾದರೂ, ಈ ಕುರಿತ ಸಂಶೋಧನೆ ಜಾರಿಯಲ್ಲಿದೆ. ಗರ್ಭಕೋಶ, ಮೂತ್ರಕೋಶಕ್ಕೆ ಹಿಂದಿನಿಂದ ಅಂಟಿಕೊಂಡಂತ್ತಿರುತ್ತದೆಯಾದ್ದರಿಂದ ಮತ್ತು ಶಸ್ತ್ರಕ್ರಿಯೆಯ ವೇಳೆ ಮೂತ್ರಕೋಶ ಮತ್ತು ಅದಕ್ಕೆ ಸಂಬಂಧಪಟ್ಟ ನರಗಳು ಮತ್ತು ಅಸ್ತಿಬಂಧಕಗಳಿಗೆ ಹಾನಿಯಾಗುವ ಸಂಭವವಿರುತ್ತದೆಯಾದ್ದರಿಂದ ಈ ತೊಂದರೆ ತಲೆದೋರುವ ಸಂಭವಗಳು ಅಧಿಕ.

ಇದೇ ರೀತಿ ಗುದನಾಳ, ಗರ್ಭಕೋಶದ ಹಿಂದೆ ಇರುವುದರಿಂದ ಶಸ್ತ್ರಕ್ರಿಯೆಯ ವೇಳೆ ಅದರ ನರ/ ಅಸ್ತಿಬಂಧಕಗಳಿಗೆ ಹಾನಿಯಾದರೆ, ಗುದನಾಳ ಅಥವಾ ಗುದದ್ವಾರದ ಅಸಂಯತೆ ಉಂಟಾಗಬಹುದು.

ಇವೇ ಅಲ್ಲದೆ ಶಸ್ತ್ರಕ್ರಿಯೆಯಿಂದ ಕಿಬ್ಬೊಟ್ಟೆಯ ತಟ್ಟೆಲುಬಿನ ತಳ/ ನೆಲದಲ್ಲಿರುವ ಮಾಂಸಖಂಡಗಳಿಗೆ ಹಾನಿಯಾದರೆ, ಮೂತ್ರಕೋಶ ಅಥವಾ ಗುದನಾಳ ಜಾರುವ ಸಂಭವಗಳೂ ಅಧಿಕವೆಂದು ಸಂಶೋಧನೆಗಳಿಂದ ದೃಢಪಟ್ಟಿದೆ. ಕಿಬ್ಬೊಟ್ಟೆಯ ಅಂಗಗಳ ಜಾರುವಿಕೆಗೆ ಜನನ ಕ್ರಿಯೆ, ಸ್ಥೂಲಕಾಯ, ವಯಸ್ಸು, ಹೆಚ್ಚು ತೂಕದ ಮಗುವಿನ ಜನನ ಮುಂತಾದ ಕಾರಣಗಳನ್ನು ಗುರುತಿಸಲಾಗಿದೆಯಾದರೂ, ಇತ್ತೀಚಿನ ಸಂಶೋಧನೆಗಳ ಪ್ರಕಾರ ಈ ಎಲ್ಲ ಕಾರಣಗಳನ್ನು ಹೊರತುಪಡಿಸಿ ಕೊಬ್ಬೊಟ್ಟೆಯ ಅಂಗಗಳ ಜಾರುವಿಕೆಯ ದುರಸ್ಥಿಗೆ ಸಂಬಂಧಪಟ್ಟ ಶಸ್ತ್ರಚಿಕಿತ್ಸೆಗಾಗಿ ದಾಖಲಾಗುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಮತ್ತು ಅಂತಹವರು ಹಿಸ್ಟರೆಕ್ಟಮಿಗೆ ಒಳಗಾದ ಸಂಗತಿ ಗುರುತಿಸಲ್ಪಟ್ಟಿದೆ.

ನಲವತ್ತನಾಲ್ಕು ವರ್ಷಕ್ಕಿಂತ ಕಿರಿಯ ವಯಸ್ಸಿಗೆ ಹಿಸ್ಟರೆಕ್ಟಮಿಗೆ ಒಳಗಾದ ಮಹಿಳೆಯರಲ್ಲಿ ಮೂತ್ರಪಿಂಡದ ಕ್ಯಾನ್ಸರ್‌ನ ಸಂಭವಗಳು ಅಧಿಕವಾಗಿರುವುದನ್ನು ಸಂಶೋಧನೆಗಳು ದೃಢಪಡಿಸಿವೆ. ಇದು ಹೇಗೆ ಎಂಬ ಅಂಶ ಇನ್ನೂ ದೃಢಪಟ್ಟಿಲ್ಲವಾದರೂ ಹಿಸ್ಟರೆಕ್ಟಮಿಯ ನಂತರ ದೇಹದಲ್ಲಿ ಕೆಟೆಕೊಲಮೈನ್‌ , ಕಬ್ಬಿಣ  ಮತ್ತು ಹಾರ್ಮೋನುಗಳ ವೈಪರೀತ್ಯ ಮತ್ತು ಮೂತ್ರ ಉತ್ಪಾದನೆಯಲ್ಲಾಗುವ ಬದಲಾವಣೆಗಳಿಂದ ಈ ಕ್ಯಾನ್ಸರ್‌ ಬರಬಹುದೆಂದು ಅಂದಾಜಿಸಲಾಗಿದೆ.

ಕೆಲವೊಮ್ಮೆ ಹಿಸ್ಟರೆಕ್ಟಮಿಯ ವೇಳೆ ಅಂಡಾಶಯವನ್ನೂ ತೆಗೆದುಹಾಕುವುದರಿಂದ (ಹೆಚ್ಚಾಗಿ ಗರ್ಭಕೊರಳಿನ/ ಗರ್ಭಕೋಶದ/ ಅಂಡಾಶಯದ ಕ್ಯಾನ್ಸರ್‌ನ ಕಾರಣಗಳಿಗೆ) ಅಂಡಾಶಯದ ಹಾರ್ಮೋನುಗಳಾದ ಈಸ್ಟ್ರೋಜನ್‌  ಮತ್ತು ಪ್ರೊಜೆಸ್ಟರಾನ್‌ನ ರಕ್ಷಣೆಯಿಂದ ವಂಚಿತರಾಗಬಹುದು. ಈ ಹಾರ್ಮೋನುಗಳು ಮಹಿಳೆಯರ ಆರೋಗ್ಯ ರಕ್ಷಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಈಸ್ಟ್ರೋಜನ್‌ನಲ್ಲಿ ಹೃದ್ರೋಗವನ್ನು ಮತ್ತು ಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವದನ್ನು ತಡೆಯುವ ಶಕ್ತಿಯಿದೆ. ಹಿಸ್ಟರೆಕ್ಟಮಿಗೆ ಒಳಗಾದ ಐವತ್ತು ವರ್ಷಕ್ಕಿಂತ ಕಿರಿಯ ಮಹಿಳೆಯರು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವದು, ಹೃದ್ರೋಗ ಮತ್ತು ಪಾರ್ಶ್ವವಾಯುವಿಗೆ ತುತ್ತಾಗುವ ಪ್ರಮಾಣ ಅಧಿಕವಾದದ್ದನ್ನು ಸಂಶೋಧನೆಗಳು ದೃಢಪಡಿಸಿವೆ.

ಆದ್ದರಿಂದ ಮಹಿಳೆಯರೇ ಯೋಚಿಸಿ ಗರ್ಭಕೋಶ ತೆಗೆಸುವುದು ಅತಿ ಸುಲಭ ಆದರೆ ಅದರಿಂದ ಮುಂದೆ ಉಂಟಾಗಬಹುದಾದ ದೈಹಿಕ–ಮಾನಸಿಕ ಯಾತನೆ ಋತುಸ್ರಾವಕ್ಕೆ ಸಂಬಂಧಪಟ್ಟ ಕಷ್ಟಗಳಿಗಿಂತ ದೊಡ್ಡದಾಗಬಹುದು. ಮೂವತ್ತರಿಂದ ನಲವತ್ತು ವರ್ಷದ ಆಸುಪಾಸಿನವರು ಋತುಸ್ರಾವಕ್ಕೆ ಸಂಬಂಧಪಟ್ಟ ಯಾವುದೇ ತೊಂದರೆಯಿದ್ದಾಗ, ತಜ್ಞ ವೈದ್ಯರನ್ನು ಸಂಪರ್ಕಿಸಿ ಕೂಲಂಕುಷವಾಗಿ ಎಲ್ಲ ಪರೀಕ್ಷೆ ಮಾಡಿಸಿ, ಸಂಬಂಧಪಟ್ಟ ಚಿಕಿತ್ಸೆಯನ್ನು ತಪ್ಪದೆ ಪಾಲಿಸಬೇಕು. ಕಾಯಿಲೆ ಸಾಮಾನ್ಯ ಸ್ವರೂಪದ್ದಾದರೆ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ವ್ಯಾಯಾಮ, ವಿರಾಮ, ಪಥ್ಯವನ್ನನುಸರಿಸಿ ಪುಷ್ಟಿದಾಯಕ, ಪೌಷ್ಟಿಕ ಆಹಾರ ಸೇವಿಸಿ, ಒತ್ತಡರಹಿತ ಜೀವನ ಶೈಲಿಯನ್ನು ಪಾಲಿಸಿ.

ಆದಷ್ಟೂ ಶಸ್ತ್ರಚಿಕಿತ್ಸೆ ಇಲ್ಲದೆ ಕಾಯಿಲೆಯನ್ನು ನಿಯಂತ್ರಿಸುವ ಪ್ರಯತ್ನ ಮಾಡಬೇಕು. ಮುಟ್ಟು ಕೊನೆಗೊಳ್ಳುವ ಹಂತ ತಲುಪಿದ ಮಹಿಳೆಯರು (ನಲ್ವತ್ತೈದರಿಂದ–ಐವತ್ತು ವಯಸ್ಸಿನ) ಗರ್ಭಾಶಯ ತೆಗೆಸುವ ನಿರ್ಧಾರ ಕೈಗೊಳ್ಳುವ ಮುನ್ನ ಖಂಡಿತ ಯೋಚಿಸಬೇಕು.

ಯೋಗ, ಧ್ಯಾನ, ವ್ಯಾಯಾಮ, ವಿರಾಮ, ಪೌಷ್ಟಿಕ ಆಹಾರ ಸೇವನೆ, ಸಕಾರಾತ್ಮಕ ಚಿಂತೆಗಳಿಂದ ಕೆಲದಿನಗಳ ಮಟ್ಟಿಗೆ ಋತುಚಕ್ರದ ಸಮಸ್ಯೆಗಳನ್ನು ಸಹಿಸಿಕೊಂಡರೆ, ಗರ್ಭಾಶಯ ತೆಗೆಸಿಕೊಂಡ ನಂತರ ಅನುಭವಿಸಬೇಕಾದ ಯಾತನೆಯನ್ನು ತಡೆಗಟ್ಟಬಹುದು. ಎಲ್ಲ ತೊಂದರೆಗಳಿಗೆ ಶಸ್ತ್ರಚಿಕಿತ್ಸೆಯೊಂದೇ ಮದ್ದಲ್ಲ! ಗರ್ಬಕೋಶ ತೆಗೆಸಿಕೊಂಡ ಎಲ್ಲ ಮಹಿಳೆಯರೂ ತೊಂದರೆಗಳನ್ನು ಎದುರಿಸುತ್ತಾರೆಂದು ಹೇಳಲಾಗುವುದಿಲ್ಲವಾದರೂ, ಅಕಸ್ಮಾತ್ತಾಗಿ ಅನುಭವಿಸಬೇಕಾಗಿ ಬಂದರೆ ಅದರ ಹಿಂಸೆ ವರ್ಣಿಸಲಸಾಧ್ಯ. ಇಡೀ ಕುಟುಂಬದ ಮೇಲೆ ಬೀಳುವ ಆರ್ಥಿಕ, ದೈಹಿಕ, ಮಾನಸಿಕ, ಭಾವುಕ ಹೊರೆ ಅನವಶ್ಯಕ. ಆದ್ದರಿಂದ ನಿಧಾನವಾಗಿ ಯೋಚಿಸಿ ನಿರ್ಧಾರಕ್ಕೆ ಬನ್ನಿ!
ದುಡುಕದಿರಿ! ಮನಸ್ಸಿದ್ದರೆ ಮಾರ್ಗ.
ಮಾಹಿತಿಗೆ: veebhas@hotmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT