ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಜನನ ಗೊತ್ತೆ?

Last Updated 25 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಯುಗ ಯುಗ ಗಳಿಂದಲೂ ಸ್ತ್ರೀಯರು ಗರ್ಭಿಣಿಯರಾಗುತ್ತಿದ್ದಾರೆ. ಹೆರಿಗೆಗಳೂ ಆಗುತ್ತಿವೆ. ಆದರೆ ಹೆರಿಗೆ ವಿಧಾನಗಳಲ್ಲಿ ಹೆಚ್ಚಾಗೇನಾದರೂ ಪರಿಷ್ಕಾರಗಳಾಗಿವೆಯೇ ಎಂದರೆ ‘ಅಷ್ಟೇನೂ ಇಲ್ಲ’. ಈ ಏಕತಾನತೆಯನ್ನು ನಿವಾರಿಸಲು ಹೆರಿಗೆಯ ಪ್ರಕ್ರಿಯೆಯಲ್ಲಿ ವೈವಿಧ್ಯವನ್ನು ತರಲು, ಹಾಗೂ ಅದನ್ನು ಇನ್ನಷ್ಟು ಸುರಕ್ಷಿತವಾಗಿಸಲು ಕೆಲ ಪ್ರಯತ್ನಗಳೇನೋ ಜರುಗಿವೆ.

ಸಮ್ಮೋಹನ ವಿಧಾನವನ್ನು ಬಳಸಿ  ಹೆಣ್ಣನ್ನು ಕಾಡುವ ಹೆರಿಗೆ ನೋವನ್ನು ತಗ್ಗಿಸಲು ಅಲ್ಲಲ್ಲಿ ಪ್ರಯತ್ನಗಳಾಗಿವೆ. ನಿಗದಿತ ಉಸಿರಾಟಕ್ಕೆ ಪ್ರಾಧಾನ್ಯ ನೀಡುವ ಲಾಮಾಜ್‌ ವಿಧಾನವಿದೆ. ನಿರ್ವಾತದ ಉಡುಪು ಧರಿಸಿದರೆ, ಹೆರಿಗೆ ಸುಸೂತ್ರವಾಗಿ ಮುಂದುವರಿಯುತ್ತದೆ ಎನ್ನುವವರಿದ್ದಾರೆ. ಅರಿವಳಿಕೆಯಲ್ಲಿಯೂ ಸಾಕಷ್ಟು ಪ್ರಗತಿ ಕಂಡಿದ್ದೇವೆ.

ಇತ್ತೀಚೆಗೆ, ಪತಿಯನ್ನೂ ಹೆರಿಗೆ ಕೋಣೆಗೆ ಬರಮಾಡಿಕೊಂಡು, ಗರ್ಭಿಣಿಯ ಆತಂಕ, ತಲ್ಲಣಗಳನ್ನು ತಗ್ಗಿಸುವ ಪ್ರಯತ್ನಗಳೂ ಉಂಟು, ಆದರೆ ಈ 30–35 ವರ್ಷಗಳಿಂದೀಚೆಗೆ ‘ಜಲಜನನ’ (ವಾಟರ್‌ ಬರ್ತ್) ಜನಪ್ರಿಯವಾಗುತ್ತಿದೆ.

ಹೌದು, ಗರ್ಭಸ್ಥಮಗು, ಇಡೀ ಗರ್ಭಾವಧಿಯಲ್ಲಿ, ನೀರಿನಿಂದಲೇ ‘ಆವೃತವಾಗಿರುತ್ತ’ಲ್ಲವೆ? ಹಾಗಾಗಿ ಅದು ನೀರಿನಲ್ಲೇ ಜನಿಸಿದರೆ ಆ ಕ್ಷಣಗಳಲ್ಲಿ ಜರುಗುವ ವಾತಾವರಣದ ದಿಢೀರ್‌ ವ್ಯತ್ಯಯ ತರುವ ಆಘಾತವನ್ನು ತಪ್ಪಿಸಬಹುದು ತಾನೆ? ಈ ವಿಧಾನದಲ್ಲಿ ಒಂದು ವಿಶಾಲ, ಫೈಬರ್‌ ಗಾಜಿನ ತೊಟ್ಟಿ ಟಬ್‌ ಅನ್ನು ಬಳಸುತ್ತಾರೆ. ಅದರಲ್ಲಿನ ನೀರು ಗರ್ಭಿಣಿಯ ಎದೆಮಟ್ಟದವರೆಗೂ ಬರುವಂತೆ, ಹಾಗೂ ಆ ನೀರಿನ ಉಷ್ಣತೆ 97.7 ಡಿಗ್ರಿಯಲ್ಲಿ ಇರುವಂತೆ ವ್ಯವಸ್ಥೆ ಮಾಡಿರುತ್ತಾರೆ. ಗರ್ಭಿಣಿ ಕೂರಲು ಒಂದು ಸಣ್ಣ ಚಾಚುವಿಕೆಯೂ ಇರುತ್ತದೆ. ಸಾಮಾನ್ಯವಾದ ಹೆರಿಗೆ ವಿಧಾನದಲ್ಲಿ ಗರ್ಭಿಣಿಯ ನೋವು ಸುಮಾರಾಗಿ ಹೆಚ್ಚಿದ ನಂತರ, ಅವಳನ್ನು ಮಂಚದ ಮೇಲೆ ಮಲಗಿಸಿ, ಕೊನೆಯವರೆಗೂ ಅವಳು ಅದೇ ನಿಲುವಿನಲ್ಲಿರುವುದೇ ಇದುವರೆಗಿನ ಅಭ್ಯಾಸ. ಹೆಚ್ಚೆಂದರೆ, ಸ್ವಲ್ಪ ಈ ಕಡೆ ಆ ಕಡೆ  ತಿರುಗಿಕೊಳ್ಳಬಹುದು ಅಷ್ಟೆ. ಆದರೆ ಜಲಜನನದಲ್ಲಿ, ಹೆರಿಗೆ ಆಗುತ್ತಿರುವ ಹೆಣ್ಣಿನ ಚಲನವಲನಗಳಿಗೆ ಹೆಚ್ಚಿನ ಸ್ವಾತಂತ್ರ್ಯವಿದ್ದು ಅವಳು, ತನಗೆ ಸಮಾಧಾನ ತರುವ ಯಾವುದೇ ಭಂಗಿಯನ್ನು ಅನುಸರಿಸಬಹುದು. ಬಾಗಬಹುದು, ಕುಕ್ಕರಗಾಲಿನಲ್ಲಿ ಕೂರಬಹುದು, ನಿಲ್ಲಬಹುದು, ಇತ್ತ ಅತ್ತ ಸಲೀಸಾಗಿ ತಿರುಗಬಹುದು. ಇದು ಈ ವಿಧಾನದ ಲಾಭ.

ಆ ಸುಖೋಷ್ಣ ನೀರಿನಲ್ಲಿರುವುದು ಗರ್ಭಿಣಿಗೆ ಹಾಯೆನಿಸುತ್ತದೆ. ಹೆಚ್ಚು ಉಡುಪಿನ ಜಂಝಡವಿಲ್ಲ, ಸಡಿಲವಾದೊಂದು ಬ್ರಾ ಇದ್ದರೆ ಸಾಕು, ಮೈಮನಸ್ಸುಗಳು ಹಗುರವಾಗಿರುವ ಕಾರಣ, ಹೆರಿಗೆ

ತೃಪ್ತಿಕರವಾಗಿ ಮುಂದುವರಿಯುವ ಸಂಭವ ಹೆಚ್ಚಾಗಿರುತ್ತದೆ. ಅವಳಿಗೆ ಬೇಕೆನಿಸಿದಾಗ, ತೊಟ್ಟಿಯನ್ನು ಬಿಟ್ಟು ಹೊರಕ್ಕೆ ಬರಲೂಬಹುದು. ಹೆಣ್ಣಿನ ಮನಸ್ಸನ್ನು ಇನ್ನಷ್ಟು ಪ್ರಶಾಂತವಾಗಿರಿಸಲು ಅವಳ ಪತಿಯನ್ನೂ ಹೆರಿಗೆ ಕೋಣೆಗೆ ಕರೆತರುವ ಪ್ರಯೋಗಗಳೂ ಜರುಗಿವೆ. ಅವಳಿಗೆ ನೋವೆದ್ದಾಗ, ಪತಿ, ಸಾಂತ್ವನ ನೀಡುತ್ತಾನೆ, ಅವಳಿಗೆ ಧೈರ್ಯ ಹೇಳುತ್ತಾನೆ, ಅವಳ ಮುಖದಲ್ಲಿನ ಬೆವರನ್ನೂ ಒರೆಸುತ್ತಾನೆ. ಅವಳಿಗೆ ಕುಡಿಯಲು ಏನನ್ನಾದರೂ ನೀಡುತ್ತಾನೆ, ಅವಳ ಬೆನ್ನನ್ನು ಪ್ರೀತಿಯಿಂದ ಸವರುತ್ತಾನೆ. ಇವೆಲ್ಲವೂ ಗರ್ಭಕಂಠದ ವಿಕಸನಕ್ಕೆ ಹಾಗೂ ಗರ್ಭಾಶಯದ ಸ್ನಾಯುಗಳ ಕ್ರಮವಾದ ಆಕುಂಚನಗಳಿಗೆ ಸಹಾಯಕವಾಗುವುದರಲ್ಲಿ ಅನುಮಾನವೇ ಇಲ್ಲ.

ಹೆರಿಗೆ ನೋವು ಪ್ರಾರಂಭವಾದೊಡನೆಯೇ ಗರ್ಭಿಣಿಯನ್ನು ಆ ತೊಟ್ಟಿಯಲ್ಲಿರಿಸುವುದಿಲ್ಲ. ಅದು ಇನ್ನಷ್ಟು ಜೋರಾಗಿ ಎದ್ದು, ಎರಡು ನೋವುಗಳ ನಡುವಣ ಅಂತರ ಕಡಿಮೆಯಾಗಿ ಗರ್ಭಕಂಠ ಅರ್ಧದಷ್ಟಾದರೂ (5 ಸೆಂ.ಮೀ.) ಅಗಲವಾದಾಗ ಅವಳನ್ನು ತೊಟ್ಟಿಗೆ

ಬರಮಾಡುತ್ತಾರೆ. ಅವಳಿಗೆ ಆಸರೆಯಾಗಿ ಕೆಲವೊಮ್ಮೆ ಒಂದು ಗಟ್ಟಿ ಬಲೂನನ್ನು ಅವಳ ಕೈಗಳಲ್ಲಿರಿಸುವುದೂ ಉಂಟು. ಗರ್ಭಿಣಿಯು ತೊಟ್ಟಿಯಲ್ಲಿರುವಾಗಲೂ ತಜ್ಞರು ಅವಳ ನಾಡಿ ಹಾಗೂ ಗರ್ಭಸ್ಥ ಮಗುವಿನ ಹೃದಯದ ಬಡಿತವನ್ನು ಗಮನಿಸುತ್ತಿರುತ್ತಾರೆ, ಗರ್ಭಿಣಿಗೆ ತನ್ನ ಭಾರ ಕಡಿಮೆಯಾದಂತಾಗಿ ಆ ನೀರಿನಲ್ಲಿ ತಾನು ತೇಲುತ್ತಿದ್ದೇನೋ ಎನ್ನುವ ಅನುಭವವಾಗುತ್ತದೆ. ಇದು ಅವಳ ಮನಸ್ಸಿಗೊಂದು ಉಲ್ಲಾಸವನ್ನು ತಂದುಕೊಡುತ್ತದೆ.

ಜಲಜನನವನ್ನು ಆಯ್ಕೆಮಾಡಿ ನೀರಿನಲ್ಲಿರುವ ಗರ್ಭಿಣಿ ಹೆಣ್ಣಿನ ರಕ್ತದೊತ್ತಡ ಹದ್ದುಬಸ್ತಿನಲ್ಲಿರುವುದೊಂದು ವಿಶೇಷವೇ. ಸಾಮಾನ್ಯ ಹೆರಿಗೆಯಲ್ಲಿ ಏರಿದ ರಕ್ತದೊತ್ತಡವು ಬಸಿರು ನಂಜುಗಳಿಗೆ ದಾರಿ ಮಾಡಿಕೊಟ್ಟು ತಾಯಿ ಮಗುವಿಗೆ ಅಪಾಯ ತರುವುದನ್ನು ಕಾಣುತ್ತೇವೆ. ಜಲಜನನದಲ್ಲಿ, ಒತ್ತಡ ಹೆಚ್ಚಿಸುವ ಕ್ಯಾಟಕಾಲಮಿನ್‌, ಆಡ್ರಿನ ಅನ್‌ ರಸದೂತಗಳ ಸ್ರವಿಕೆಗಳು ತಗ್ಗಿ ಮನಸ್ಸಿಗೆ ಉಲ್ಲಾಸ ತರುವ ಆಕ್ಸಿಟೋಸಿಸ್‌ ಹಾಗೂ ಬೀಟಾ ಎಂಡಾರ್ಫಿನ್‌ ರಸದೂತಗಳ ಪ್ರಮಾಣ ಏರುತ್ತದೆ. ಇದರ ಪರಿಣಾಮವಾಗಿ ಅವಳ ಮನಸ್ಸು ಪ್ರಶಾಂತವಾಗಿದ್ದು ಅವಳಲ್ಲಿ ಒಂದು ‘ಆಹಾಭಾವನಕೆ’ ಮೂಡುತ್ತದೆ. ಈ ವಿಧಾನದಲ್ಲಿ ನೋವನ್ನು ತಗ್ಗಿಸಲು ನೀಡುವ ಮದ್ದುಗಳ ಅಗತ್ಯವೂ ಇರುವುದಿಲ್ಲ. ಅಕಸ್ಮಾತ್‌ ಯಾವುದೇ ಅಸಹಜತೆ ಎದ್ದರೆ ಗರ್ಭಿಣಿಯನ್ನು ತೊಟ್ಟಿಯಿಂದ ಹೊರತಂದು, ಅವಳಿಗೆ ಸೂಕ್ತ ಚಿಕಿತ್ಸೆ ಪ್ರಾರಂಭಿಸುತ್ತಾರೆ.

ಜಲಜನನದಲ್ಲಿ ಇನ್ನೊಂದು ಲಾಭವಿದೆ. ಗರ್ಭಿಣಿಯು ಜಲಾವೃತ ಪರಿಸರದಲ್ಲಿರುವಾಗ ಅವಳ ಯೋನಿ ಮುಖವು ಮಿದುವಾಗಿ ಅಲ್ಲಿನ ಸ್ನಾಯುಗಳು ಸುಲಭವಾಗಿ ವಿಸ್ತೃತ­ಗೊಂಡು, ಮಗುವಿನ ತಲೆ ಸಲೀಸಾಗಿ ಹೊರಬರುತ್ತದೆ. ನಾವು ಸಹಜ ಹೆರಿಗೆಯಲ್ಲಿ ರೂಢಿಯಾಗಿ ನೀಡುವ ‘ಯೋನಿಕೊಯ್ತ’ (ಎಪಿಸಿಯಾಟಮಿ) ಇಲ್ಲಿ ಅಷ್ಟಾಗಿ ಬೇಕಾಗುವುದಿಲ್ಲ. ಗರ್ಭಕೋಶದ ಸ್ನಾಯುಗಳ ರಕ್ತಪರಿಚಲನೆಯೂ ಇಲ್ಲಿ ಸಮರ್ಪಕವಾಗಿರುತ್ತದೆ.

ಯಾವುದೇ ಹಂತದಲ್ಲಿ ತಾಯಿಗೆ ಆಯಾಸವಾದಾಗ ಅಥವಾ ಗರ್ಭಸ್ಥ ಮಗುವಿನ ಹೃದಯದ ಬಡಿತ ನಿಮಿಷಕ್ಕೆ 120–140ರ ಮಿತಿಯನ್ನು
ಮೀರಿದಾಗ, ಗರ್ಭಿಣಿಯನ್ನು ಹೊರ ತಂದು, ವಿಶೇಷ ಚಿಕಿತ್ಸೆಯನ್ನು ಪ್ರಾರಂಭಿಸುತ್ತಾರೆ. ಗರ್ಭಸ್ಥ ಮಗುವಿಗೆ ಆಯಾಸವಾಗಿ, ಅದರ ಹಸಿರು ಗಪ್ಪು ಮಲ (ಮಿಕೋನಿಯಂ)ವೇನಾದರೂ ಹೆಚ್ಚಿನ ಪ್ರಮಾಣದಲ್ಲಿ ಹೊರಬಿದ್ದರೂ, ತುರ್ತು ಚಿಕಿತ್ಸೆ ಬೇಕಾಗುತ್ತದೆ.

ಜಲಜನನದಲ್ಲಿ ಹುಟ್ಟಿದ ಮಗು, ಇನ್ನೂ ತನ್ನ ಸ್ವಾಭಾವಿಕ ಪರಿಸರದಲ್ಲೇ ಇರುವುದರಿಂದ ಅದು ಕೂಡಲೇ ಉಸಿರಾಡಲು ಅಳಲು ತೊಡಗುವುದಿಲ್ಲ. ಕೆಲವು ಕ್ಷಣಗಳು ಅದು ಈ ಸ್ಥಿತಿಯಲ್ಲಿದ್ದರೆ ಅದಕ್ಕೇನೂ ಬಾಧಕವಿಲ್ಲ, ನೀರಿನಿಂದ ಹೊರಬಂದೊಡನೆಯೇ, ಅದರ ಸ್ವಸ್ಥತೆಯ ಸೂಚಕವಾದ ‘ಆಪ್ಲಾಸ್‌ ಸ್ಕೋರ್‌’ ತೃಪ್ತಿಕರವಾಗಿಯೇ ಇರುತ್ತದೆ, ಹುಟ್ಟಿದ ಮೇಲೆ ಮಗುವನ್ನು ತಾಯಿಯ ಹೊಟ್ಟೆಮೇಲೆ ಮಲಗಿಸಿ ಅವಳು ಅದನ್ನು ಅಪ್ಪಿಕೊಂಡು, ತನ್ನ ಮೊಲೆ ತೊಟ್ಟನ್ನು ಅದರ ಬಾಯಿಗಿಟ್ಟಾಗ ತಾಯಿ–ಮಗುವಿನ ದಿವ್ಯ ಅನುಬಂಧಕ್ಕೆ ಅನುವು ಮಾಡಿಕೊಟ್ಟಂತೆ ಆಗುತ್ತದೆ. ಅನೇಕ ತಾಯಿಯರನ್ನು ಕಬಳಿಸಿರುವ ಪ್ರಸವೋತ್ತರ ರಕ್ತಸ್ರಾವವೂ ಜಲಜನನ ವಿಧಾನದಲ್ಲಿ ತೀರಾ ಕಡಿಮೆಯೆನ್ನಬಹುದು.

ಈ ಜಲಶಿಶುಗಳು ಸಾಮಾನ್ಯವಾಗಿ ಶಾಂತವಾಗಿರುತ್ತವೆ. ಬೇರೆ ಮಕ್ಕಳಷ್ಟು ಕಿರಿಕಿರಿ ಮಾಡುವುದಿಲ್ಲ. ಶಿಶುಗಳನ್ನು ಬಾಧಿಸುವ ‘ಕೋಲಿಕ್‌’ ತೊಂದರೆ ಇಲ್ಲಿ ಅಪರೂಪ.

ಹೆರಿಗೆಯ ಪ್ರಕ್ರಿಯೆಯು ಯಾವಾಗಲೂ ಕ್ರಿಮಿರಹಿತ ಪರಿಸರದಲ್ಲಿಯೇ ಜರುಗುವ ಅಗತ್ಯವಿರುತ್ತದೆ ಅಲ್ಲವೆ? ಅದರಂತೆ, ಜಲಜನನದಲ್ಲಿಯೂ ಈ ವಿಷಯದಲ್ಲಿ ತುಂಬಾ ಎಚ್ಚರಿಕೆ ವಹಿಸುತ್ತಾರೆ. ಈ ವಿಧಾನದ ಆಯ್ಕೆಯಾದಾಗ ಗರ್ಭಿಣಿಗೆ ಹಾಗೂ ಅವಳ ಕಡೆಯವರಿಗೆ ಅದರ ವೈಶಿಷ್ಟ್ಯಗಳನ್ನು ಮೊದಲೇ ತಿಳಿಸಿ, ಅವರೆಲ್ಲರ ಒಪ್ಪಿಗೆ ಪಡೆಯುತ್ತಾರೆ.

ಬೆಂಗಳೂರಿನಲ್ಲಿ ಈಗಾಗಲೇ ಕೆಲವು ಪ್ರಸೂತಿ ತಜ್ಞರು ತಮ್ಮ ಆಸ್ಪತ್ರೆಗಳಲ್ಲಿ ಜಲಜನನಕ್ಕೆ ಬೇಕಾಗುವ ಪರಿಕರಗಳನ್ನು ಹೊಂದಿಸಿಕೊಂಡು, ಈ ಪ್ರಕಾರದ ಹೆರಿಗೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಆ ವಸ್ತುಗಳನ್ನು ಬಾಡಿಗೆಗೆ ಪಡೆಯುವ ಪರಿಪಾಠವೂ ಕೆಲವೆಡೆಗಳಲ್ಲಿ ಉಂಟು.
ಒಟ್ಟಿನಲ್ಲಿ, ಪ್ರಸೂತಿ ತಜ್ಞರ ಬತ್ತಳಿಕೆಯಲ್ಲಿರುವ ಕೆಲವೇ ಬಾಣಗಳಲ್ಲಿ ಜಲಜನನವೂ ಒಂದು, ಎನ್ನಬಹುದು!

ಎಲ್ಲರಿಗೂ ಅಲ್ಲ
ಜಲಜನನಕ್ಕೆ ಎಲ್ಲ ಗರ್ಭಿಣಿಯರೂ ಅರ್ಹರಾಗಿರುವುದಿಲ್ಲ. ಗರ್ಭಿಣಿಯರನ್ನು ಆಯ್ಕೆ ಮಾಡುವಾಗ ಕೆಲವರನ್ನು ದೂರವಿಡುತ್ತಾರೆ.

ಗರ್ಭಸ್ಥ ಮಗುವಿನ ನಿಲುವು ಗಾತ್ರಗಳು ಅಸಹಜವಾಗಿದ್ದಾಗ, ಅದಕ್ಕೆ ವಿಶೇಷ ಚಿಕಿತ್ಸೆ ಬೇಕಾಗುವುದರಿಂದ ಅಂಥಾ ಗರ್ಭಿಣಿಯರಿಗೆ ಜಲಜನನದ ಸಲಹೆ ನೀಡುವುದಿಲ್ಲ? ಸರ್ಪಸುತ್ತು (ಹರ್ಪಿಸ್‌) ಮುಂತಾದ ಚರ್ಮ ವ್ಯಾಧಿಗಳಿದ್ದರೂ ಅಷ್ಟೆ. ಗರ್ಭಿಣಿಯಲ್ಲಿ ರಕ್ತಸ್ರಾವವಾಗುತ್ತಿದ್ದರೆ ಅಥವಾ ಅವಳಲ್ಲಿ ಯಾವುದೇ ಸೋಂಕು ಕಂಡುಬಂದಿದ್ದರೆ ಜಲಜನನ ಅವಳಿಗೆ ವರ್ಜ್ಯ. ಅಂಥವರಿಗೆ ಮಾಮೂಲು ಹೆರಿಗೆಯ ವ್ಯವಸ್ಥೆ ಮಾಡಿಕೊಡುತ್ತಾರೆ ಅವಧಿಗೆ ಮುನ್ನವೇ ಹೆರಿಗೆ ನೋವು ಪ್ರಾರಂಭವಾಗಿದ್ದರೂ, ಗರ್ಭಿಣಿಗೆ ಮಾಮೂಲು ಹೆರಿಗೆ ಅವಕಾಶವನ್ನೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT