ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊನ್ನು ತೋರದಿರಿ ಬೆನ್ನು

Last Updated 17 ಮೇ 2013, 19:59 IST
ಅಕ್ಷರ ಗಾತ್ರ

ಶ್ವೇತಚರ್ಮ, ಬಿಳಿಚರ್ಮ ಅಥವಾ ತೊನ್ನು ಎಲ್ಲವೂ ಒಂದೇ ಕಾಯಿಲೆ. ಇದನ್ನು ಇಂಗ್ಲಿಷಿನಲ್ಲಿ ಲ್ಯೂಕೊಡರ್ಮ ಅಥವಾ ವಿಟಿಲಿಗೊ ಎಂದು ಕರೆಯುತ್ತಾರೆ. ಈ ಪ್ರಾಚೀನ ಕಾಯಿಲೆಗೆ ಎರಡು ಸಾವಿರ ವರ್ಷಗಳ ಇತಿಹಾಸ ಇದೆ. ಹಲವು ಪ್ರಾಚೀನ ವೈದ್ಯರು ಕಾಯಿಲೆ ಕುರಿತು ಸಾಕಷ್ಟು ಮಾಹಿತಿಯನ್ನು ಉಲ್ಲೇಖಿಸಿದ್ದಾರೆ. ಆದರೂ ಇದು ಮೊದಲು ಎಲ್ಲಿ ಪ್ರಾರಂಭವಾಯಿತೆಂದು ಹೇಳಲು ಯಾರಿಗೂ ಸಾಧ್ಯವಾಗಿಲ್ಲ. ವಿಶ್ವದ ನಾನಾ ಕಡೆ ಈ ಕಾಯಿಲೆ ಪಸರಿಸಿದ್ದರೂ ಸಾಮಾನ್ಯವಾಗಿ ಉಷ್ಣ ವಲಯ ಮತ್ತು ಒಳ ಉಷ್ಣ ವಲಯ ಪ್ರದೇಶಗಳಲ್ಲಿ, ಅದರಲ್ಲೂ ಭಾರತ ಮತ್ತು ಈಜಿಪ್ಟ್ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ನಮ್ಮಲ್ಲಿ ಗುಜರಾತ್ ಮತ್ತು ರಾಜಸ್ತಾನಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಇದೆ.

ಶ್ವೇತಚರ್ಮ ಅಥಾವ ಬಿಳಿಚರ್ಮ ಎಂದಾಗ ಯಾರೂ ಆ ಕಾಯಿಲೆ ಬಗ್ಗೆ ಗಾಢವಾಗಿ ಯೋಚಿಸುವ ಗೋಜಿಗೆ ಹೋಗುವುದಿಲ್ಲ. ಅದೇ `ತೊನ್ನು' ಎಂದಾಗ ಮಾತ್ರ ರೋಗಿಗಳಿಂದ ಹಿಡಿದು ಬೇರೆಲ್ಲರೂ ದಿಗಿಲುಗೊಳ್ಳುವುದು ಸಾಮಾನ್ಯ. ಅಷ್ಟೊಂದು ಮನಸ್ಸುಗಳಲ್ಲಿ ತಳಮಳ ಹುಟ್ಟುಹಾಕುವ ತೊನ್ನು, ಹಳ್ಳಿ ಮಂದಿಯಲ್ಲಂತೂ ಅಸಹ್ಯ ಭಾವನೆ ಹುಟ್ಟುಹಾಕುವುದರಲ್ಲಿ ಬಹಳಷ್ಟು ಸಫಲವಾಗಿದೆ. ಅದಕ್ಕೆ ಮುಖ್ಯ ಕಾರಣ ಈ ಕಾಯಿಲೆಯ ಬಗ್ಗೆ ಸಾಕಷ್ಟು ತಿಳಿವಳಿಕೆ ಇಲ್ಲದಿರುವುದು. ಇದಕ್ಕೆ ಪೂರಕವಾಗಿ ನಮ್ಮ ಜನ ಮೂಢನಂಬಿಕೆಗಳಿಗೆ ಜೋತು ಬಿದ್ದಿರುವುದು.

ಕಾರಣವೇನು?
ಜನಸಂಖ್ಯೆಯ ಸುಮಾರು ಶೇ 1-2 ರಷ್ಟು ಮಂದಿ ತೊನ್ನುಪೀಡಿತರು. ಸಾಮಾನ್ಯವಾಗಿ ಈ ಕಾಯಿಲೆ 20ರಿಂದ 40 ವರ್ಷಗಳ ಒಳಗಿನವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಕಾಯಿಲೆಯ ಪ್ರಮಾಣ ಕಡಿಮೆ. ಸ್ತ್ರೀ- ಪುರುಷರಲ್ಲಿ ಸರಿಸಮಾನವಾಗಿ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆ ಬರಲು ಆನುವಂಶೀಯತೆಯ ಪ್ರಭಾವ ಕೇವಲ ಶೇ 20ರಷ್ಟು.

ನಮ್ಮ ಚರ್ಮಕ್ಕೆ ಬಣ್ಣ ನೀಡುವ `ಮೆಲನಿನ್' ಅಂಶದ ಕೊರತೆ ಕಂಡುಬಂದಾಗ ಈ ಕಾಯಿಲೆ ಗೋಚರಿಸುತ್ತದೆ. ತಜ್ಞರ ಪ್ರಕಾರ ನಮ್ಮ ರಾಸಾಯನಿಕಗಳು ಸಹ ಪರಿಣಾಮವನ್ನು ಬೀರುತ್ತವೆ. ಕೆಲವರು ಭಾವಿಸಿರುವಂತೆ ತೊನ್ನು ಅಂಟುರೋಗವಲ್ಲ. ಯಾವುದೇ ರೋಗಾಣುವಿನಿಂದ ಈ ಕಾಯಿಲೆ ಬರುವುದಿಲ್ಲ. ಅದೂ ಅಲ್ಲದೆ ಈ ರೋಗಕ್ಕೆ ತುತ್ತಾದವರಿಗೆ ಯಾವ ಅಂಗವೈಕಲ್ಯವೂ ಉಂಟಾಗುವುದಿಲ್ಲ. ತೊನ್ನು ರೋಗಿಗಳಲ್ಲಿ ಬಾಹ್ಯ ಸೌಂದರ್ಯಕ್ಕೆ ಕುಂದು ಬರುತ್ತದೆ ಹೊರತು ಅಂತರಂಗದಲ್ಲಿ ಇದರ ಪರಿಣಾಮವಾಗಿ ಯಾವುದೇ ಅನ್ಯ ಕಾಯಿಲೆಗಳು ಕಂಡುಬರುವುದಿಲ್ಲ. ಅವರು  ಆರೋಗ್ಯವಂತರಾಗಿದ್ದು, ಯಾವುದೇ ರೀತಿಯ ಆರೋಗ್ಯ ಶೋಧನೆಯ ಅಗತ್ಯ ಇರುವುದಿಲ್ಲ. ಇದೆಲ್ಲವನ್ನು ಅರಿತಿದ್ದರೂ ರೋಗಿಗಳು ಮಾತ್ರ ಸದಾ ಮಾನಸಿಕ ಸಂಕಟವನ್ನು ಅನುಭವಿಸುತ್ತಾರೆ. ಏಕೆಂದರೆ ನಮ್ಮ ಸಮಾಜದ ವರ್ತನೆ ಅದಕ್ಕೆ ಪೂರಕವಾಗಿದೆ.

ಚಿಕಿತ್ಸೆ
ಪ್ರತಿ ಕಾಯಿಲೆಗೂ ಚಿಕಿತ್ಸೆ ಇರುವಂತೆ ತೊನ್ನಿಗೂ ನಿರ್ದಿಷ್ಟ ಚಿಕಿತ್ಸೆ ಉಂಟು. ಇದು ಅಂಟುರೋಗವಲ್ಲ ಎಂಬುದನ್ನು ಎಲ್ಲರೂ ಅರಿಯಬೇಕು. ಆದರೂ ಸಮಾಜದ ಹೀನದೃಷ್ಟಿಯಿಂದ ಮರೆಯಾಗಲು ಮತ್ತು ತಮ್ಮ ಮಾನಸಿಕ ತೊಳಲಾಟಕ್ಕೆ ಕಡಿವಾಣ ಹಾಕಿಕೊಳ್ಳಲು ರೋಗಿಗಳಿಗೆ ಚಿಕಿತ್ಸೆಯ ಅಗತ್ಯವಿದೆ ಅಷ್ಟೆ.

ಚಿಕಿತ್ಸೆಯ ಪರಿಣಾಮ ರೋಗದ ಪ್ರಗತಿಯನ್ನು ಅವಲಂಬಿಸಿರುತ್ತದೆ. ದೇಹದ ಹೆಚ್ಚು ಭಾಗದಲ್ಲಿ ಕಾಯಿಲೆ ವ್ಯಾಪಿಸಿದ್ದರೆ ವಾಸಿಯಾಗುವ  ಪ್ರಮಾಣ ಅತ್ಯಲ್ಪ. ಅಲ್ಲದೆ ಕೈಕಾಲು, ಬೆರಳುಗಳ ತುದಿ, ಕಣ್ಣು ಮತ್ತು ಬಾಯಿಯ ಸುತ್ತ ಹರಡಿದ ರೋಗದಲ್ಲಿ ಪೂರ್ಣ ಪ್ರಮಾಣದ ವರ್ಣಗಳ ನಿರ್ಮಾಣ ಬಹಳಷ್ಟು ಕಡಿಮೆ. ಹೀಗಾಗಿ ಅಲ್ಪ ಪ್ರಮಾಣದ ತೊನ್ನು ಇರುವ ರೋಗಿಗಳು ವೈದ್ಯರ ಸಲಹೆಯಂತೆ ಕೆಲವು ಮುಲಾಮುಗಳನ್ನು ಲೇಪಿಸಿದರೆ ರೋಗ ವಾಸಿಯಾಗುತ್ತದೆ. ದೇಹದಲ್ಲಿ ರೋಗದ ಪ್ರಮಾಣ ಹೆಚ್ಚಿದ್ದು, ಬಲುಬೇಗನೇ ಬೇರೆ ಭಾಗಗಳಿಗೂ ಹಬ್ಬುತ್ತಿದ್ದರೆ ಅಂತಹವರಿಗೆ ಟ್ಠ ಎಂಬ ಚಿಕಿತ್ಸೆ ಬೇಕಾಗುತ್ತದೆ. ಜೊತೆಗೆ ಕೆಲವು ಉಪಯುಕ್ತ ಔಷಧಿಗಳನ್ನೂ ಸೇವಿಸಬೇಕಾಗುತ್ತದೆ. ಚಿಕಿತ್ಸೆಯ ದುಷ್ಪರಿಣಾಮಗಳ ಬಗ್ಗೆ ರೋಗಿಗೆ ಮುಂಜಾಗ್ರತೆ ನೀಡಬೇಕಾಗುತ್ತದೆ. ರೋಗವು ಒಂದು ಹಂತಕ್ಕೆ ಬಂದು, ಹಬ್ಬುವುದು ಕುಂಠಿತಗೊಂಡಾಗ ಅವರನ್ನು ನೀಲಾತೀತ ಕಿರಣಗಳಿಗೆ ಒಡ್ಡುವುದರಿಂದ ರೋಗ ಮತ್ತಷ್ಟು ಶಮನಗೊಳ್ಳುತ್ತದೆ. ಹಚ್ಚೆ ಹಾಕುವ ಮುಖಾಂತರವೂ ಗುಣಪಡಿಸಬಹುದು. ಈ ಚಿಕಿತ್ಸೆ ಫಲ ನೀಡದಿದ್ದರೆ ಮೆಲನಿನ್ ವರ್ಣ ಜೀವಕೋಶಗಳ ಕೃಷಿ ಮತ್ತು ಸ್ವ-ಕಸಿ ವಿಧಾನಕ್ಕೂ ಮೊರೆಹೋಗಬಹುದು.

ತೊನ್ನು ರೋಗಿಗಳು ಸಮಾಜದಲ್ಲಿ ನೆಮ್ಮದಿಯಿಂದ ಬಾಳಲು ಪ್ರಯತ್ನಿಸಬೇಕು. ತಮ್ಮನ್ನು ಸಮಾಜ ಅಸ್ಪಶ್ಯರಂತೆ ಕಾಣುತ್ತಿದೆ ಎಂಬ ಭಾವನೆಯನ್ನು ದೂರ ಮಾಡಬೇಕು. ಕೀಳರಿಮೆ ಬೆಳೆಸಿಕೊಳ್ಳಬಾರದು. ಸೇವಾ ಸಂಸ್ಥೆಗಳು, ತೊನ್ನಿನ ಬಗ್ಗೆ ಜನರಿಗೆ ಇರುವ ಪೂರ್ವಗ್ರಹಗಳನ್ನು ದೂರ ಮಾಡಬೇಕು. ರೋಗಿಗಳು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಮತ್ತು ನಾಗರಿಕರು ರೋಗಿಗಳ ಜೊತೆ ಸ್ನೇಹಸೌಜನ್ಯದಿಂದ ವರ್ತಿಸಬೇಕು. ಆಗ ತೊನ್ನು ರೋಗಿಗಳ ಮಾನಸಿಕ ದ್ವಂದ್ವಗಳಿಗೆ ತೆರೆ ಎಳೆಯಬಹುದು. ಏಕೆಂದರೆ ತೊನ್ನು ದೇವರು ಕೊಟ್ಟ ಶಾಪವಲ್ಲ. ಬದಲಿಗೆ ಅದೊಂದು ಸಾಮಾನ್ಯ ಕಾಯಿಲೆಯಷ್ಟೆ!

ಹೀಗಿರುತ್ತದೆ ಲಕ್ಷಣ
ಮೊದಮೊದಲು ಚರ್ಮದಲ್ಲಿ ಸಣ್ಣ ಬಿಳಿ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಕಾಲಕ್ರಮೇಣ ಇದು ಬಲುಬೇಗನೆ ದೇಹದ ಎಲ್ಲ ಭಾಗಕ್ಕೂ ವ್ಯಾಪಿಸಿಕೊಳ್ಳುತ್ತದೆ. ಕೂದಲು ಬೆಳೆಯುವ ಭಾಗ ಸಹ ವರ್ಣರಹಿತವಾಗುತ್ತದೆ.

ಈ ಬಿಳಿ ಮಚ್ಚೆಗಳು ಕಂದು ಮತ್ತು ಕಪ್ಪು ವರ್ಣ ಇರುವ ರೋಗಿಗಳಲ್ಲಿ ಅತಿ ಸ್ಪಷ್ಟವಾಗಿ ಗೋಚರಿಸುತ್ತವೆ.

ಚರ್ಮದಲ್ಲಿನ ಶ್ವೇತವರ್ಣದ ಮಚ್ಚೆಗಳ ಸುತ್ತಲೂ ವರ್ಣ ಸಂಗ್ರಹ ಹೆಚ್ಚಾಗಿರುತ್ತದೆ. ಇದರಿಂದ ಕೆಲವರು ಇದನ್ನು ಕುಷ್ಟರೋಗ ಎಂದು ತಪ್ಪಾಗಿ ಭಾವಿಸುವುದುಂಟು. ಕುಷ್ಟರೋಗಿಗಳಿಗೆ ಆ ಸ್ಥಳದಲ್ಲಿ ಯಾವುದೇ ರೀತಿಯ ಸ್ಪರ್ಶ, ಬಿಸಿ ಹಾಗೂ ತಣ್ಣನೆಯ ಜ್ಞಾನ ಇರುವುದಿಲ್ಲ.


ಈ ಕ್ರಮ ಪಾಲಿಸಿ
ವೈದ್ಯರ ಸಲಹೆಯಂತೆ ಪ್ರತಿ ದಿನ ಬೆಳಿಗ್ಗೆ 10-20 ನಿಮಿಷ ಚರ್ಮವನ್ನು ಸೂರ್ಯನ ಬೆಳಕಿಗೆ ಒಡ್ಡಬೇಕು.

ಸೇವಿಸುವ ಆಹಾರ ಪದಾರ್ಥದಲ್ಲಿ ಕಬ್ಬಿಣದ ಅಂಶ ಅಗತ್ಯವಾದಷ್ಟು ಇರಬೇಕು.

ಸೊಪ್ಪು, ತರಕಾರಿಗಳನ್ನು ಉಪಯೋಗಿಸಬೇಕು.

ಯಾವಾಗಲೂ ಮಾನಸಿಕ ಒತ್ತಡಕ್ಕೆ ಒಳಗಾಗಬಾರದು.

ಚಿಕಿತ್ಸೆಯ ಅವಧಿಯಲ್ಲಿ ರೋಗಿ ತಾಳ್ಮೆಯಿಂದ ಸ್ಪಂದಿಸಬೇಕು.

ಶ್ವೇತಚರ್ಮಕ್ಕೆ ಎಚ್ಚರಿಕೆ ಮತ್ತು ಚಿಕಿತ್ಸೆ ಅತ್ಯಗತ್ಯ.

ರೋಗಿಗಳು ತಮ್ಮ ಸಾಮಾನ್ಯ ಆರೋಗ್ಯವನ್ನು ಕಾಯ್ದುಕೊಳ್ಳಬೇಕು.

ವೈದ್ಯರ ಮಾರ್ಗದರ್ಶನವನ್ನು ಚಾಚೂ ತಪ್ಪದೆ ಪಾಲಿಸಬೇಕು.

ಕಾಯಿಲೆ ಗುಣವಾಗಲು ನಂಬಿಕೆ ಮತ್ತು ಆಸೆಯೇ ಮೂಲಾಧಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT