ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಆರೋಗ್ಯ ನಿಮ್ಮ ಕಾಲಲ್ಲಿದೆ!

Last Updated 16 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

‘ನಡಿಗೆ’ಗೂ ಒಂದು ಕ್ರಮವಿದೆ. ಸರಿಯಾಗಿ ನಡೆಯುವುದರಿಂದ ದೇಶಹ ಆರೋಗ್ಯ ಕಾಪಾಡಿ ಕೊಳ್ಳಬಹುದು. ಬೆಳಗಿನ ನಡಿಗೆ ಇನ್ನೂ ಹೆಚ್ಚು  ಪ್ರಯೋಜನಕಾರಿ.

ಈ ‘ನಡಿಗೆ’ ಇಂದು ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂಬಷ್ಟು ಪ್ರಚಲಿತ. ಅಭ್ಯಸಿಸುತ್ತಾರೋ ಇಲ್ಲವೋ ಉಪಯುಕ್ತ ಎಂಬುದು ಎಲ್ಲರೂ ತಿಳಿದಿರುವಂತಹ ವಿಷಯ. ಆದರೆ ಇಂತಹ ಜನಪ್ರಿಯ ಹಾಗೂ ಎಲ್ಲರೂ ತಿಳಿದಂತಹ ವಿಷಯದಲ್ಲೂ ಗಮನವಹಿಸಬೇಕಾದ ಅಂಶಗಳಿವೆಯೆಂದರೆ ಅಚ್ಚರಿಯ ಮಾತಲ್ಲ. ಮೇಲೆ ಹೇಳಿದಂತೆ ನಡಿಗೆ ಬಹಳ ಆರೊಗ್ಯಕರ. ಆದರೆ ಇದರ ಪೂರ್ಣ ಉಪಯೋಗ ಹೊಂದಲು ಸರಿಯಾಗಿ ನಡೆಯುವುದೂ ಅಷ್ಟೇ ಮುಖ್ಯ. ನಡೆಯುವಾಗ ನಾವು ಸಾಮಾನ್ಯವಾಗಿ ಮಾಡುವ ತಪ್ಪುಗಳು ಹಾಗೂ ಅದನ್ನು ಸರಿಪಡಿಸಿಕೊಳ್ಳುವ ಕ್ರಮಗಳನ್ನು ತಿಳಿಯೋಣ.

* ದೇಹದ ನಿಲುವನ್ನು ನೇರವಾಗಿಟ್ಟುಕೊಂಡು, ತಲೆ ಬಗ್ಗಿಸದೇ, ಕಾಲನ್ನು ಸರಿಯಾಗಿ ಮಡಚಿ ಎತ್ತಿಹಾಕುತ್ತಾ, ಅದಕ್ಕೆ ಸಮನಾಗಿ ಕೈ ಬೀಸುತ್ತಾ ನಡೆಯಿರಿ. ನಡೆಯುವಾಗ ದೇಹದ ನಿಲುವನ್ನು ತಪ್ಪಾಗಿಟ್ಟುಕೊಳ್ಳುವುದು ಉದಾ: ಬೆನ್ನು ಬಗ್ಗಿಸುವುದು, ಕೈ ಸಮನಾಗಿ ಬೀಸದೇ ಇರುವುದು, ಕಾಲೆತ್ತಿ ನಡೆಯದೇ ಎಳೆದುಕೊಂಡು ನಡೆಯುವುದು, ಒಂದೇ ಬದಿಗೆ ವಾಲಿಕೊಂಡು ನಡೆಯುವುದು, ಜೋರಾಗಿ ಕಾಲನ್ನು ನೆಲಕ್ಕಪ್ಪಳಿಸಿ ನಡೆಯುವುದು ಇತ್ಯಾದಿ ಮಾಡಬೇಡಿ.

ಅವಸರದ ಉಸಿರಾಟ ಅಥವಾ ಉಸಿರು ಕಟ್ಟಿಹಿಡಿಯುವುದು ಬೇಡ. ಹೊಟ್ಟೆಯ ಭಾಗವನ್ನು ಬಿಗಿಯಾಗಿ ಹಿಡಿದುಕೊಳ್ಳದೇ ಸಡಿಲವಾಗಿಟ್ಟು ಪೂರ್ಣ ಉಸಿರಾಟದೊಂದಿಗೆ ನಡೆಯಿರಿ. ನಡೆಯುವಾಗ ಕಾರ್ಯನಿರತ ವಾಗಿರುವ ಮಾಂಸಖಂಡಗಳಿಗೆ ಹೆಚ್ಚಿನ ಆಮ್ಲಜನಕದ ಅವಶ್ಯಕತೆಯಿರುತ್ತದೆ.  

* ವಾಕಿಂಗ್ ಮಾಡುವಾಗ ಸಂಪೂರ್ಣ ಗಮನ ನಡೆತದತ್ತ ಇರಲಿ. ಅನ್ಯ ಚಟುವಟಿಕೆಗಳು ಉದಾ: ನಗುತ್ತಾ, ಮಾತಾಡುತ್ತಾ, ನಾಯಿಯನ್ನು ನಡೆಸುತ್ತಾ, ಟೈಮ್ ಪಾಸ್ ಮಾಡುವಂತೆ ನಿಧಾನ ನಡಿಗೆ ಬೇಡ. 

* ಆದಷ್ಟು ಹತ್ತಿ ಬಟ್ಟೆಯ ಬಳಕೆ ಉತ್ತಮ. ನಡೆಯುವಾಗ ಹತ್ತಿಯ ಟ್ರ್ಯಾಕ್ ಪ್ಯಾಂಟ್ ಅಥವಾ ಪೈಜಾಮಾ ರೀತಿಯ ಉಡುಗೆ ಒಳ್ಳೆಯದು. ಇದರಿಂದ ತೊಡೆಚರ್ಮಗಳ ಮಧ್ಯೆ ಘರ್ಷಣೆ ಕಮ್ಮಿಯಾಗಿ ಚರ್ಮದ ಉರಿಯೂತ, ತುರಿಕೆ, ಸೋಂಕು ಮುಂತಾದ ತೊಂದರೆಗಳಾಗುವುದಿಲ್ಲ. ಕಾಲಿಗೆ ತೊಡರುವ ಮತ್ತು ಗತಿಯನ್ನು ಕುಂಠಿಸುವಂತಹ ಉಡುಪುಗಳಾದ ಸೀರೆ, ಲಂಗ, ನೈಟಿ, ಪಂಚೆ ಇತ್ಯಾದಿಗಳನ್ನು ಧರಿಸುವುದು ಸೂಕ್ತವಲ್ಲ.

ಹಾಗೆಯೇ ಸೂರ್ಯನ ಬಿಸಿಲು ಮೈಗೆ ತಾಕುವಂತಿರಲಿ. ಅದೇ ರೀತಿ ಸೂಕ್ತ ಪಾದರಕ್ಷೆಯನ್ನು ಧರಿಸುವುದೂ ಅತ್ಯಗತ್ಯ. ಮೆತ್ತನೆಯ ಹಾಗೂ ಹಗುರಾದ ಚಪ್ಪಲಿ ಅಥವಾ ಶೂ ಧರಿಸುವುದು ಒಳ್ಳೆಯದು. ಸವೆದ/ಗಟ್ಟಿ/ಎತ್ತರದ ಚಪ್ಪಲಿ ಬೇಡ. ಸಪಾಟಾದ ಪಾದವಿರುವವರು (ಫ಼್ಲ್ಯಾಟ್ ಫ಼ುಟ್) ಮೆತ್ತನೆಯ ಸ್ವಲ್ಪ ಎತ್ತರ ಹಿಮ್ಮಡಿಯುಳ್ಳ ಚಪ್ಪಲಿ ಧರಿಸುವುದು ಉತ್ತಮ. ಅಥವಾ ’ಆರ್ಚ್ ಸಪೋರ್ಟ್’ ಬಳಸಬಹುದು.

* ಮೇಲೆ ಹೇಳಿದ ಪ್ರಯೋಜನ ಪಡೆಯಲು ದಿನಕ್ಕೆ ಕನಿಷ್ಟ ೩೦-೪೫ ನಿಮಿಷದ ನಡಿಗೆ ಅಗತ್ಯ. ತೂಕ ಇಳಿಸಲು ಈ ಅವಧಿಯನ್ನು ಕನಿಷ್ಟ ೩-೪ಕಿ.ಮೀ ನಡೆಯುವುದು ಅತ್ಯಗತ್ಯ.  

* ವೈದ್ಯಕೀಯ ಕಾರಣಗಳಿಲ್ಲದಲ್ಲಿ ನಿಮ್ಮ ನಡಿಗೆಯಲ್ಲಿ ದಿಬ್ಬ/ದಿಣ್ಣೆ ಅಥವಾ ಹತ್ತುವಂಥ ಏರು ರಸ್ತೆಗಳನ್ನೂ ಸೇರಿಸಿಕೊಳ್ಳಿ. ತೂಕ ಇಳಿಸುವುದಕ್ಕೂ ಇದು ಉತ್ತಮ.

ಬೆಳಗಿನ ಸಮಯದ ನಡಿಗೆಯನ್ನು ಒಂದು ಧ್ಯಾನದಂತೆ ನೋಡಿ ಎಂದರೆ ಹುಬ್ಬೇರಿಸಬೇಡಿ. ಬೆಳಗಿನ ಆಹ್ಲಾದ, ಮೈಗೆ ಸೋಕುವ ಎಳೆ ಬಿಸಿಲು, ನವಿರಾದ ತಂಗಾಳಿ, ಗಿಡಮರಗಳೊಂದಿಗೆ ಮೌನ ಸಂವಾದ ಇವೆಲ್ಲ ನಿಮಗರಿವಿಲ್ಲದೇ ಮನಸ್ಸಿಗೆ ಹಿತ ನೀಡುತ್ತವೆ. ಈ ಪ್ರಫುಲ್ಲತೆಯನ್ನು ಪೂರ್ಣ ಅನುಭವಿಸಿ. ಸಹಚರರೊಂದಿಗೆ ಅನವಶ್ಯಕ ಮಾತು, ಅಥವಾ ಕಿವಿಯಲ್ಲಿ ಇಯರ್ ಫೋನ್ ಭರಾಟೆ, ಮುಂದಿನ ಕೆಲಸಗಳಿಂದಾಗಿ ಧಾವಂತ, ಇವೆಲ್ಲವನ್ನೂ ಬಿಟ್ಟು ನೀವು, ಬೆಳಗು ಮತ್ತು ನಿಮ್ಮ ನಡಿಗೆಯೊಂದಿಗೆ ಬೆರೆತು ಹೋಗಿಬಿಡಿ.

ಇದರಿಂದ ನಿಮ್ಮ ಪೂರ್ಣ ದಿನ ಎಷ್ಟು ಲವಲವಿಕೆಯಿಂದಿರುತ್ತದೆಂದು ಸ್ವತಃ ಅನುಭವಿಸಿ ನೋಡಿ. ಅಲ್ಲದೇ ಏಕಾಗ್ರಚಿತ್ತರಾಗಿ ನಡೆಯುತ್ತಿರುವಾಗ ಮನದಲ್ಲಿ ದಿನದ ಯೋಜನೆಗಳೂ ರೂಪುಗೊಳ್ಳಬಹುದು. ಟ್ರೆಡ್ ಮಿಲ್ ಮೇಲೆ ನಡೆಯುವವರೂ ಅತ್ತಿತ್ತ ಗಮನವಿಡದೇ ಚಲನೆಯ ಮೇಲೆ ಗಮನವಿಡುವುದು ಒಳ್ಳೆಯದು. ಆದಷ್ಟು ಬಯಲಿನಲ್ಲಿ, ಹಸಿರಿನ ನಡುವಿನ ನಡಿಗೆ ಒಳ್ಳೆಯದೆಂದು ಕೆಲ ಸಂಶೋಧನೆಗಳು ಹೇಳುತ್ತವೆ. ಇಂಥವರಲ್ಲಿ ಖಿನ್ನತೆ, ಸುಸ್ತು ಅಷ್ಟಾಗಿ ಕಾಣಿಸುವುದಿಲ್ಲ ಎನ್ನುತ್ತವೆ.

ಆದರೂ ಮಳೆಗಾಲ, ಕೆಲಸದ ಒತ್ತಡ ಮುಂತಾದ ಸಮಯದಲ್ಲಿ ಟ್ರೆಡ್ ಮಿಲ್ ನಲ್ಲಿ ನಡೆಯುವುದು ಅನಿವಾರ್ಯವಾಗುತ್ತದೆ. ಇದರ ಮೇಲೆ ನಡೆಯುವಾಗ ಕಡ್ಡಾಯವಾಗಿ ಶೂ ಧರಿಸಿ. ನೋಟ ನೇರವಿರಲಿ. ಕಾಲನ್ನು ನೋಡುತ್ತಾ ನಡೆಯಬೇಡಿ. ರಸ್ತೆಯಲ್ಲಿ ನಡೆಯುವಂತೆ ಸರಳವಾಗಿ, ಕೈ ಬೀಸಿ ನಿಮಗೆ ಆರಾಮವೆನಿಸುವ ವೇಗದಲ್ಲಿ ನಡೆಯಿರಿ. ಪಕ್ಕದ ಹಿಡಿಕೆ(ಬಾರ್)ಗಳನ್ನು ಹಿಡಿದು ನಡೆಯಬೇಡಿ. ಪಾದವನ್ನು ಜೋರಾಗಿ ಅಪ್ಪಳಿಸದಿರಿ. ಬೀಳುವ ಭಯದಲ್ಲಿ ತ್ವರಿತಗತಿಯಲ್ಲಿ ವಕ್ರ ನಡಿಗೆ ಬೇಡ.

ವೇರಿಕೋಸ್ ವೈನ್ಸ್ (ರಕ್ತನಾಳಗಳ ಉಬ್ಬಿರುವುದು) ಇರುವವರಿಗೆ ಅತಿ ದೂರದ ನಡಿಗೆ ಸಲ್ಲದು. ೨ ಕಿ.ಮೀ ಒಳಗಿರಲಿ. ಬೇಕಾದಲ್ಲಿ ದಿನಕ್ಕೆ ಎರಡು ಬಾರಿ ನಡೆಯಿರಿ. ಸಂಧಿವಾತವಿರುವವರು, ಮೂಳೆಯ ಸವೆತ, ಮಂಡಿ ನೋವಿರುವವರು ಮಂಡಿಗೆ ಔಷಧಿ ಅಂಗಡಿಗಳಲ್ಲಿ ಸಿಗುವ ’ನೀಕ್ಯಾಪ್’ ಧರಿಸಿ ನಡೆಯುವುದು ಒಳ್ಳೆಯದು. ಮತ್ತು ಏರಿಳಿತ ಜಾಗದಲ್ಲಿ ನಡಿಗೆ ಬೇಡ.

ಒಟ್ಟಿನಲ್ಲಿ, ಈ ನಿಯಮಿತ ನಡಿಗೆಯು ಹೆಚ್ಚು ಖರ್ಚಿಲ್ಲದೇ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಸಾಧನ. ಇದರ ಸಂಪೂರ್ಣ ಲಾಭ ಪಡೆಯುವುದು ನಿಮ್ಮ ಕೈಯ್ಯಲ್ಲೇ ಇದೆ ಅಥವಾ ಕಾಲಲ್ಲಿದೆ ಎಂದರೆ ತಪ್ಪಿಲ್ಲ?! ನಿಮ್ಮ ನಡಿಗೆ ಸುಗಮ ಹಾಗೂ ಆರೋಗ್ಯದಾಯಿಯಾಗಲಿ.

ನಡಿಗೆಯಿಂದೇನು ಉಪಯೋಗ?
* ನಿಯಮಿತ ನಡಿಗೆ ರಕ್ತ ಸಂಚಲನೆಯನ್ನು ಚುರುಕುಗೊಳಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ೩೦ ನಿಮಿಷ ಬಿರುಸು ನಡಿಗೆ ೨೦ರಿಂದ ೪೦% ರಷ್ಟು ಹೃದಯಾಘಾತವನ್ನು ಕಡಿಮೆ ಮಾಡುತ್ತದೆಂದು ಸಂಶೋಧನೆಗಳು ಹೇಳುತ್ತವೆ. ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ. ಅಲ್ಲದೇ ರಕ್ತದಲ್ಲಿರುವ ಸಕ್ಕರೆಯಂಶವನ್ನೂ ನಿಯಂತ್ರಿಸುತ್ತದೆ.

* ವಿಟಮಿನ್ ಡಿಯನ್ನು ದೇಹಕ್ಕೆ ಒದಗಿಸಿ, ಮೂಳೆಸವೆತ (ಓಸ್ಟಿಯೋಪೀನಿಯಾ)ವನ್ನು ತಡೆಗಟ್ಟುವುದು. ನಿಯಮಿತ ನಡಿಗೆ ಮೂಳೆಮುರಿತದ ಸಾಧ್ಯತೆಯನ್ನು ೪೦% ಕಡಿಮೆ ಮಾಡುತ್ತದೆ.

* ನಿಯಮಿತ ನಡಿಗೆ ಆಯಸ್ಸನ್ನು ಹೆಚ್ಚಿಸುತ್ತದೆ ಎಂದೂ ಕೆಲ ಸಂಶೋಧನೆಗಳು ಹೇಳುತ್ತವೆ.

* ಸಂಧಿಗಳು, ಮಾಂಸಖಂಡಗಳು ಮತ್ತು ಸ್ನಾಯುಗಳನ್ನು ಗಟ್ಟಿ ಮಾಡುವುದರೊಂದಿಗೆ, ಮೇದಸ್ಸನ್ನು ಕರಗಿಸಿ ತೂಕ ಇಳಿಸಲು ಸಹಕರಿಸುತ್ತದೆ.

* ನಿದ್ರೆಗೆ ಸಹಕಾರಿ.

* ದೇಹದಾರ್ಢ್ಯವನ್ನು ಕಾಪಾಡುವುದರೊಂದಿಗೆ, ಮಿದುಳು ಮುಪ್ಪಾಗುವುದನ್ನು ನಿಧಾನಗೊಳಿಸಿ, ಆಲ್ಷೈಮರ್, ಮುಪ್ಪಿನ ಮರೆಗುಳಿತನ ಮುಂತಾದ ತೊಂದರೆಗಳಿಂದ ದೂರವಿರಿಸುತ್ತದೆ.

* ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ವ್ಯಾಧಿಕ್ಷಮತ್ವವನ್ನು ಹೆಚ್ಚಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT