ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಶ್ವವಾಯು ಇರಲಿ ಅರಿವು

Last Updated 30 ಅಕ್ಟೋಬರ್ 2015, 19:56 IST
ಅಕ್ಷರ ಗಾತ್ರ

ಅಕ್ಟೋಬರ್ 29 ವಿಶ್ವ ಪಾರ್ಶ್ವವಾಯು (ಲಕ್ವ) ಪೀಡಿತರ ದಿನ, ವಿಶ್ವ ಆರೋಗ್ಯ ಸಂಸ್ಥೆ 2006 ರಿಂದ ಪ್ರತಿವರ್ಷ ಅಕ್ಟೋಬರ್ 29ರಂದು ಕಡ್ಡಾಯಗೊಳಿಸಿದೆ ಹಾಗೂ ಲಕ್ವ ವ್ಯಾಧಿಯನ್ನು ಸಾರ್ವಜನಿಕ ಆರೋಗ್ಯ ವಿಪತ್ತು (public emergency) ಎಂದು 2010ರಲ್ಲಿ ಘೊಷಿಸಿದೆ. ಈ ದಿನ  ಪ್ರಪಂಚದಾದ್ಯಂತ ಹಲವಾರು ಸಾರ್ವಜನಿಕ ಹಾಗೂ ಸರಕಾರಿ ಸಂಘ ಸಂಸ್ಥೆಗಳು, ಆಸ್ಪತ್ರೆಗಳು, ಪಾರ್ಶ್ವವಾಯು ಪುನಃಶ್ಚೇತನ ಕೇಂದ್ರಗಳು, ಪಾರ್ಶ್ವವಾಯು ಪೀಡಿತರಿಗೆ ಹಾಗೂ ಸಂಬಂಧಿಗಳಿಗೆ ಮಾನಸಿಕ ಧೈರ್ಯ ತುಂಬುವ ಸಲುವಾಗಿ ಚಿಕಿತ್ಸೆ, ತಪಾಸಣೆ, ವಿವಿಧ ಜಾಥಾಗಳು, ಸಮಾಲೋಚನೆ, ಅರಿವು ಮೂಡಿಸುವಿಕೆ, ಆಧುನಿಕ ಚಿಕಿತ್ಸಾ ವಿಧಾನಗಳ ಬಗ್ಗೆ ವೈದ್ಯಕೀಯ ಚರ್ಚೆ, ನೂತನ ಆವಿಷ್ಕಾರಗಳ ಲೋಕಾರ್ಪಣೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ.

ನಮ್ಮ ಮೆದುಳು ಸುಮಾರು ಹತ್ತು ಸಾವಿರ ಶತಕೋಟಿ ನರತಂತುಗಳ ಸಮೂಹದಿಂದ ಪ್ರಕೃತಿದತ್ತವಾಗಿ ರಚಿಸಲ್ಪಟ್ಟಿದೆ. ಇದರಲ್ಲಿ ಎರಡು ಭಾಗಗಳಿವೆ ಎಡ ನರಮಂಡಲ ಮತ್ತು ಬಲ ನರಮಂಡಲ ಎಂದು. ನಮ್ಮ ಮೆದುಳು ಬೆನ್ನು ಹುರಿಯ ಮುಖಾಂತರ ದೇಹದ ಇತರ ಭಾಗಗಳಿಗೆ ವಿಸ್ತರಿಸಲಾಗಿದೆ. ಎಡಭಾಗದ ಮೆದುಳು ದೇಹದ ಬಲ ಭಾಗವನ್ನು ಹಾಗೂ ಬಲಭಾಗ ದೇಹದ ಎಡ ಭಾಗವನ್ನು ನಿಯಂತ್ರಿಸುತ್ತದೆ. ಕೆಲವೊಮ್ಮೆ ಮೆದುಳಿನ ರಕ್ತನಾಳ ಗಳಲ್ಲಾಗುವ ಹಠಾತ್ ವ್ಯತ್ಯಾಸಗಳಿಂದ (ರಕ್ತನಾಳಗಳು ಒಡೆದು ಹೋಗುವುದು ಅಥವಾ ನಾಳಗಳಲ್ಲಿ ಗಂಟುಗಳುಂಟಾಗಿ ರಕ್ತಪರಿಚಲನೆಗೆ ತೊಡಕುಂಟಾಗುವುದು)  ಮೆದುಳಿನ ಯಾವುದೊ ಭಾಗದಲ್ಲಿ ನರಕೋಶಗಳಿಗೆ ಸರಿಯಾದ ಆಹಾರ ಹಾಗೂ ಆಮ್ಲಜನಕ ಸಿಗದೇ ನರತಂತುಗಳು ನಿಷ್ಕ್ರಿಯಗೊಳ್ಳುವವು. ಇದರಿಂದ ಆಘಾತಕ್ಕೊಳಗಾದ ಭಾಗಗಳು ನಿಯಂತ್ರಿಸುವ ದೇಹದ ಒಂದು ಪಾರ್ಶ್ವದ ಅಂಗಗಳು ಚಲನೆ ಕಳೆದುಕೊಳ್ಳುವವು. ಇದನ್ನು ನಾವು ಮೆದುಳಿನ ಆಘಾತ, ಲಕ್ವ ಅಥವಾ ಪಾರ್ಶ್ವವಾಯು ಎಂದು ಕರೆಯುವುದುಂಟು.

ಪಾರ್ಶ್ವವಾಯುವಿನ(ಲಕ್ವದ) ವಿಧಗಳು
1. ಹೆಮೊರೆಜಿಕ್ ಮೆದುಳಿನ ಆಘಾತ ( hemorrhagic stroke): ಈ ವಿಧದಲ್ಲಿ ರಕ್ತ ನಾಳಗಳು ಒಡೆದು ನರಕೋಶಗಳ ಮೇಲೆ ರಕ್ತ ಸ್ರವಿಸುವುದು
2. ಇಸ್ಕಿಮಿಕ್ ಮೆದುಳಿನ ಆಘಾತ (ischimic stroke): ಈ ವಿಧದಲ್ಲಿ ರಕ್ತನಾಳಗಳಲ್ಲಿ ಗಂಟುಗಳುಂಟಾಗಿ ರಕ್ತ ಪರಿಚಲನೆ ನಿಲ್ಲುವುದು
3. ಅಸ್ಥಿರ ಇಸ್ಕಿಮಿಕ್ ಮೆದುಳಿನ ಆಘಾತ (transient ischemic attack): ಈ ವಿಧದಲ್ಲಿ ಕಡಿಮೆ ಸಮಯದವರೆಗೆ ರಕ್ತ ಪರಿಚಲನೆ ನಿಂತು-ನಿಂತು ಮತ್ತೆ ಸ್ವಲ್ಪ ಸಮಯದಲ್ಲಿ ರಕ್ತಪರಿಚಲನೆ ಸುಗಮಗೊಳ್ಳುವುದು.

ಪಾರ್ಶ್ವವಾಯು ಮುನ್ಸೂಚನೆಗಳು
ಪಾರ್ಶ್ವವಾಯುವಿಗೆ ಮುನ್ಸೂಚನೆಗಳು ಬರಲೇಬೆಕೆಂದೆನಿಲ್ಲ, ಕೆಲವೊಮ್ಮೆ  ಸೂಚನೆಗಳು ಲಕ್ವಕ್ಕೂ ಮೊದಲೆ ಕಾಣಿಸಿಕೊಳುತ್ತವೆ.
ಲಕ್ಷಣಗಳು
1. ತತಕ್ಷಣದಲ್ಲಿ ಮುಖದ, ಕೈಕಾಲುಗಳು, ಮುಖ್ಯವಾಗಿ ದೇಹದ ಒಂದು ಪಾರ್ಶ್ವದಲ್ಲಿ ಜೋಮು ಹಿಡಿಯುವ ಅಥವಾ ಬಲ ಕಳೆದುಕೊಂಡಂತಹ ಅನುಭವ.
2. ಮಾತನಾಡಲು, ಅಹಾರ ನುಂಗಲು, ಇತರ ಮಾತುಗಳನ್ನು ಅಥವಾ ತಮ್ಮನ್ನು ತಾವು ಅರ್ಥೈಸಿಕೊಳ್ಳಲು ಕಷ್ಟವೆನಿಸುವುದು
3.  ಕಣ್ಣುಗಳು ಮಂಜಾಗುವಿಕೆ, ಒಂದು ಅಥವಾ ಎರಡು ಕಣ್ಣುಗಳಲ್ಲಿ.
4. ನಡೆಯಲು ಕಷ್ಟವೆನಿಸುವುದು, ದೇಹದ ಸಮತೋಲನ ತಪ್ಪಿದ ಅನುಭವ  
5. ಅತಿಯಾದ ತಲೆನೋವು ಅಥವಾ ವಾಂತಿ ಅನುಭವ
ಈ ಮೇಲ್ಕಂಡ ಸೂಚನೆಗಳು ಕಂಡು ಬಂದರೆ ಹತ್ತಿರದ ನರರೋಗ ತಜ್ಞರನ್ನು ಸಂಪರ್ಕಿಸುವುದು ಅತಿ ಸೂಕ್ತ.

ಲಕ್ವ ಬರಲು ಕಾರಣಗಳು
1. ಮಧುಮೇಹ ( ಸಕ್ಕರೆ ಕಾಯಿಲೆ)
2. ಹೃದಯ ಸಂಬಂಧಿ ಕಾಯಿಲೆಗಳು
3. ಆನುವಂಶಿಕ ಲಕ್ವ ಸಮಸ್ಯೆ, ಅಪಘಾತದಿಂದ ಮೆದುಳಿಗಾಗುವ ತೀವ್ರ ಪೆಟ್ಟು
4.  ಮೆದುಳಿನ ಕಾಯಿಲೆಗಳು, ಮೆದುಳಿನಲ್ಲಿ ಗೆಡ್ಡೆ ಸಮಸ್ಯೆ
5. ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡ
6. ದೇಹದ ರಕ್ತನಾಳಗಳಲ್ಲಾಗುವ ಹಠಾತ್ ವ್ಯತ್ಯಾಸ
7. ಹುಟ್ಟುವ ಮಕ್ಕಳಲ್ಲಿ ಹೆರಿಗೆ ಸಮಯದಲ್ಲುಂಟಾಗುವ ಸಮಸ್ಯೆ ಹೀಗೆ ಹೇಳುತ್ತಾ ಹೋದರೆ ಕಾರಣಗಳು ನೂರಾರು. ಹಾಗಾಗಿ ಎಲ್ಲಾ ಲಕ್ವ ಪೀಡಿತರನ್ನು ಒಂದೇ ತಕ್ಕಡಿಗೆ ತೂಗಬಾರದು, ಪ್ರತಿಯೊಬ್ಬನ ಸಮಸ್ಯೆಗೂ ಕಾರಣ ಬೇರೆ ಬೇರಯೇ ಆಗಿರುತ್ತದೆ. ಎಲ್ಲರಿಗೂ ಚಿಕಿತ್ಸೆಯೂ ಸಹಾ ಬೇರೆಯದೇ ಆಗಿರುತ್ತದೆ.

ಪಾರ್ಶ್ವವಾಯುವಿಗೆ ಚಿಕಿತ್ಸಾ ಕ್ರಮಗಳು
1. ಪಾರ್ಶ್ವವಾಯುವಿಗೆ (ಲಕ್ವಕ್ಕೆ) ತುತ್ತಾದ ಪಕ್ಷದಲ್ಲಿ ರೋಗಿಯ ಸಂಬಂಧಿಕರು ಹಾಗೂ ಹತ್ತಿರದವರು ಮಾಡಬೇಕಾದ ಮೊದಲ ಕೆಲಸವೆಂದರೆ ಮಿಂಚಿನ ಸಮಯದಲ್ಲಿ ಹತ್ತಿರ ನರರೋಗ ತಜ್ಞರಿರುವ ಆಸ್ಪತ್ರೆಗೆ ದಾಖಲಿಸುವುದು ಸೂಕ್ತ.

ಪ್ರತಿ ಅರ್ಧಗಂಟೆಯ ವಿಳಂಬ ಸುಮಾರು 5ರಿಂದ 10 ಲಕ್ಷ ನರಕೋಶಗಳು ನಾಶ ಹೊಂದುವವು. ತಡವಾದರೆ ಆಘಾತದ ಪ್ರಮಾಣ ಹೆಚ್ಚುವುದು. ಒಮ್ಮೆ ಆಸ್ಪತ್ರೆ ತಲುಪಿದ ನಂತರ ಸಂಬಂಧಪಟ್ಟ ನರರೋಗ ತಜ್ಞರು ಮೆದುಳಿನ ಸಿಟಿ ಸ್ಕ್ಯಾನ್, ಎಂಆರ್‌ಐ ಹಾಗೂ ರಕ್ತ ಪರೀಕ್ಷೆಗಳನ್ನು ಮಾಡಿ ರೋಗಿಯ ಉಳಿಸುವಿಕೆಗೆ ಹಾಗು ಲಕ್ವದ ಪ್ರಮಾಣ ಮೆದುಳಿನ ಮೇಲೆ ಜಾಸ್ತಿ ಆಗದಂತೆ ತಡೆಯುವ ಕ್ರಮಗಳನ್ನು ತೆಗೆದುಕೊಳ್ಳುವರು. ಹೆಚ್ಚಿನ ರಕ್ತಸ್ರಾವವಾದರೆ  ಸರ್ಜರಿ ಮಾಡಬೇಕಾದ ಸಂಭವಗಳುಂಟು.

2. ಒಮ್ಮೆ ರೋಗಿಯ ಸ್ಥಿತಿ ಸುಧಾರಿಸಿದಾಗ ವೈದ್ಯರು ಪುನಃಶ್ಚೇತನ ಪ್ರಕ್ರಿಯೆಗೆ ಸಲಹೆ ನೀಡುವರು. ಇದಕ್ಕೆಂದೇ ನುರಿತ ಚಿಕಿತ್ಸಾತಜ್ಞರು ಇರುತ್ತಾರೆ. ಇವರು ರೋಗಿಯನ್ನು ಮತ್ತೆ ಮೊದಲಿನ ಹಂತಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಲಕ್ವದಿಂದುಂಟಾದ ಅಂಗ ವೈಕಲ್ಯವನ್ನು ಸರಿಮಾಡಲು ಫಿಸಿಯೋಥೆರಪಿಸ್ಟಗಳು ರೋಗಿಯ ಕೈಕಾಲುಗಳನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವಲ್ಲಿ ಶ್ರಮವಹಿಸುವರು

ಆಕ್ಯುಪೇಷನಲ್ ಥೆರಪಿಸ್ಟ್‌ಗಳು ರೋಗಿಯ ಕೈಗಳು ದಿನನಿತ್ಯದ ಕೆಲಸಗಳಿಗೆ ಬಳಸಲು ತರಬೇತಿ ನೀಡುವರು, ಸ್ಪೀಚ್ ಥೆರಪಿಸ್ಟ್‌ಗಳು(ವಾಕ್‌-ಶ್ರವಣ ತಜ್ಞರು) ರೋಗಿಗೆ ಮಾತನಾಡಲು ತೊಂದರೆಯಿದ್ದಲ್ಲಿ ಸರಿಪಡಿಸಲು ತರಬೇತಿ ನೀಡುವರು.

ಮೆಲ್ಕಂಡ ಚಿಕಿತ್ಸಾ ಕ್ರಮಗಳು ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಮಾಣಿತವಾದುವು. ಆದುದರಿಂದ ರೋಗಿಗಳು ಬೇರೆ ಯಾವ ರೀತಿಯ ಅಡ್ಡ ಪರಿಣಾಮದ ಚಿಕಿತ್ಸೆಗಳನ್ನು ಅನುಸರಿಸದೇ ವೈಜ್ಞಾನಿಕ ಪುನಃಶ್ಚೇತನ  ಚಿಕಿತ್ಸೆಗಳನ್ನು ಅನುಸರಿಸುವುದು ಸೂಕ್ತ  ಇದರಿಂದ ಲಕ್ವ ನಂತರ ರೋಗಿಯು ಸಮಸ್ಯೆಯಿಂದ ಆದಷ್ಟು ಬೇಗ ಗುಣ ಮುಖ ಹೊಂದುವನು. ಅಲ್ಲದೇ ಕುಟುಂಬದ ಮೇಲೆ ಅನಗತ್ಯ ಆರ್ಥಿಕ, ಮಾನಸಿಕ ಕಷ್ಟ ಕೋಟಲೆಗಳು ತಪ್ಪುವವು.

ಲಕ್ವ ಸಮಸ್ಯೆ ಕಡಿಮೆಗೊಳಿಸಲು ಪಾಲಿಸುವ ಸೂತ್ರಗಳು
ಎರಡನೆಯ ಬಾರಿಯ  ಲಕ್ವ ಆಘಾತವನ್ನು ತಡೆಯಲು ರೋಗಿಯು ತಪ್ಪದೇ ವೈದ್ಯರು ಸೂಚಿಸಿರುವ ಮಾತ್ರೆಗಳನ್ನು ಸೇವಿಸುದು ಸೂಕ್ತ. ಮೇಲೆ ತಿಳಿಸಿದಂತಹ ಲಕ್ವದ ಮುನ್ಸೂಚನೆಗಳ ಬಗ್ಗೆ ತಿಳಿದುಕೊಂಡು ಮುಂಬರುವ ಲಕ್ವದ ಸಮಸ್ಯೆಗಳನ್ನು ತಡೆಯಬಹುದು. ಅನಗತ್ಯ ಮಾನಸಿಕ ಒತ್ತಡ ಮಧುಮೇಹ, ರಕ್ತದೊತ್ತಡ, ದೇಹದಲ್ಲಿನ ಕೊಲೆಸ್ಟರಾಲ್ ಮುಂತಾದ ಅಂಶಗಳನ್ನು ವ್ಯಾಯಾಮದ ಮುಖಾಂತರ ನಿಂತ್ರಣದಲ್ಲಿಡಬೇಕು.

ಲಕ್ವ ನಂತರ ಈ ಕ್ರಮಗಳು ಬೇಡ
ಇತ್ತೀಚಿನ ದಿನಗಳಲ್ಲಿ ಲಕ್ವ ನಂತರ ಸಂಬಂಧಿಕರು ಪೋಷಕರು ಇತರರ ಪ್ರಚೋದನೆಗೊಳಗಾಗಿ ಮೇಲೆ ತಿಳಿಸಿದಂತಹ ವೈಜ್ಞಾನಿಕ ಚಿಕಿತ್ಸಾ ವಿಧಾನಗಳನ್ನು ಅನುಸರಿಸದೇ ಪ್ರಯೋಜನಕ್ಕೆ ಬಾರದ ಚಿಕಿತ್ಸಾ ಕ್ರಮಗಳನ್ನು ಅನುಸರಿಸುತ್ತಿರುವುದು ಹೆಚ್ಚಾಗಿದೆ. ಇದು ಅತ್ಯಂತ ಕಳವಳಕಾರಿ. ಹೇಗೆಂದರೆ ಪಾರಿವಾಳದ ರಕ್ತ ಮೈಗೆ ಲೇಪಿಸುವುದು, ಮಸಾಜ್, ಗುಳಿಗೆ ಮದ್ದು ಬೇರು ರಸ ಸೇವಿಸುವುದು, ಲಕ್ವ ಪೀಡಿತರಿಗೆ ಎಣ್ಣೆ ಕುಡಿಸುವುದು, ಕೈಕಾಲುಗಳಿಗೆ ಬರೆ ನೀಡುವುದು, ಬೆಚ್ಚಗಿರಬೇಕೆಂದು ದಿನದ ಸಾಕಷ್ಟು ಹೊತ್ತು ಕೋಣೆಯಲ್ಲಿಯೆ ಮಲಗಿಸುವುದು, ಇಂತಹ ಸಮಯ ಹಾಳು ಮಾಡುವ ಚಿಕಿತ್ಸೆಗಳನ್ನು ಪಾಲಿಸದಿರುವುದು ಹೆಚ್ಚು ಸೂಕ್ತ.

ಇವೆಲ್ಲವುಗಳಿಂದ ರೋಗಿಯ ದೇಹದ ಸ್ಥಿತಿ ಹಾಳಾಗುವುದಲ್ಲದೆ ಮುಂದೆ ಮತ್ತೆ ವೈಜ್ಞಾನಿಕ ಚಿಕಿತ್ಸೆಯಿಂದ ಸರಿಮಾಡುವುದು ಅತ್ಯಂತ ಶ್ರಮದ ಕೆಲಸ. ರೋಗಿಯ ಕುಟುಂಬದವರು ಮುಂದೊಂದು ದಿನ ಆರ್ಥಿಕ ಸಂಕಷ್ಟಗಳಿಗೆ ಸಿಲುಕಿ ನರಳಲೂಬಹುದು. ದೇಹದ ಅಂಗ ವೈಕಲ್ಯವನ್ನು ಯಾವುದೇ ಮಾತ್ರೆಗಳ ಚಿಕಿತ್ಸೆ ಸಹಾಯದಿಂದಲೇ ಸರಿಮಾಡಬಹುದು ಎಂಬುದು ಶುದ್ಧ ಸುಳ್ಳು. ಹಾಗೂ  ಕೇವಲ ಮಾತ್ರೆಯಿಂದಲೆ ಸರಿಮಾಡುವೆನೆಂದು ಹೇಳುವರು ಶತಮೂರ್ಖರು. ದಯವಿಟ್ಟು ರೋಗಿಗಳು, ಸಂಬಂಧಿಗಳು ಈ ತರಹದ ಪ್ರಚೋದನೆಗೆ ಒಳಗಾಗದಿರಿ ಎಂಬುದು ಸಲಹೆ.

ಲಕ್ವ ಬಗೆಗಿನ ಮೂಢನಂಬಿಕೆಗಳು
1.  ಲಕ್ವ ಬರುವುದು ಹೃದಯಕ್ಕೆ ಅಥವಾ ದೇಹದ ಪಾರ್ಶ್ವದ ಕೈಕಾಲುಗಳಿಗೆ  - ಇದು ಶುದ್ದ ಸುಳ್ಳು
2. ಲಕ್ವ  ಥಂಡಿ ಅಥವಾ ಶೀತಗಾಳಿಯಿಂದ ಬರುತ್ತದೆ - ಇದು ಶುದ್ದ ಸುಳ್ಳು
3.  ಲಕ್ವ ರೋಗಿಯು ಥಂಡಿ ಅಥವಾ ಶೀತ ಪದಾರ್ಥಗಳನ್ನು ತಿನ್ನಕೂಡದು - ಇದು  ಮೂಢ ನಂಬಿಕೆ
4.  ಮುಖಕ್ಕೆ ಬರುವ ಮಾಂಸಖಂಡಗಳ ದೌರ್ಬಲ್ಯ ಸಮಸ್ಯೆ ಯನ್ನು ಸಹಾ ಲಕ್ವ ಎಂದು ತಿಳಿಯುವುದು -  ಇದೂ ತಪ್ಪು ನಂಬಿಕೆ.
ಈಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಲಕ್ವ ಹಾಗೂ ಅದರ ವೈದ್ಯಕೀಯ ಚಿಕಿತ್ಸೆ ಮತ್ತು ಪುನಃಶ್ಚೇತನ ಚಿಕಿತ್ಸೆಗಳ ಬಗೆಗೆ ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ. ಇವುಗಳ ಪರಿಣಾಮದಿಂದ ಇಂದು ಲಕ್ವ  ಪೀಡಿತನ ಸ್ಥಿತಿ ಎಷ್ಟೇ ಹಳೆಯದಾದರೂ ಮತ್ತೆ ಮೊದಲಿನ ಹಂತಕ್ಕೆ ಸರಿಪಡಿಸಬಹುದು. ಅತ್ಯಾಧುನಿಕ ಸ್ಟೆಮ್ ಸೆಲ್ಸ್ ಚಿಕಿತ್ಸೆಗಳೂ ಲಭ್ಯವಿವೆ.

ಕೊನೆಯ ಕಿವಿಮಾತು
ಲಕ್ವ ಪೀಡಿತರು ಅವೈಜ್ಞಾನಿಕ ಚಿಕಿತ್ಸೆಗಳತ್ತ ವಾಲದೆ ಸರಿಯಾದ ಚಿಕಿತ್ಸಾ ಕ್ರಮಗಳನ್ನು ಅನುಸರಿಸಿ ತಮ್ಮ ಜೀವ, ಹಣ, ಸಮಯ ಹಾಗೂ ಕುಟುಂಬದ ಮೇಲಾಗುವ ಆರ್ಥಿಕ, ಮಾನಸಿಕ ಸಂಕಷ್ಟಗಳಿಂದ ಪಾರಾಗುವುದು ಅವಶ್ಯಕ. ಅದಕ್ಕೆ ನರರೋಗ ತಜ್ಞರನ್ನು ಮೊದಲ ಆದ್ಯತೆಯಾಗಿಸುವುದು ಅತ್ಯವಶ್ಯ.
 *
ಹೆಚ್ಚಿನ ಮಾಹಿತಿಗೆ: 8710964433 

(ಲೇಖಕರು ಪಾರ್ಶ್ವವಾಯು ಪುನಃಶ್ಚೇತನ ತಜ್ಞ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT