ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಶ್ವವಾಯು ಪುನಶ್ಚೇತನ ಸಾಧ್ಯ

ಅಕ್ಷರ ಗಾತ್ರ

ಒಂದು ಕಾಲವಿತ್ತು. ಒಮ್ಮೆ ಪಾರ್ಶ್ವವಾಯುವಿಗೆ (ಲಕ್ವ) ತುತ್ತಾದ ವ್ಯಕ್ತಿ ಒಂದರಿಂದ ಎರಡು ವರ್ಷಗಳಲ್ಲಿ ಎಷ್ಟು ಗುಣ ಕಾಣುತ್ತಾನೋ ಅದೇ ಅಂತಿಮ ಎಂದು ನಂಬಲಾಗಿತ್ತು. ಆದರೆ ಕಳೆದ ಎರಡು ದಶಕಗಳಿಂದ ವಿಶ್ವದಾದ್ಯಂತ ಪಾರ್ಶ್ವವಾಯುವಿನ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ಅದರಲ್ಲಿ ಸಂಶೋಧಕರು ಅಭೂತಪೂರ್ವ ಯಶಸ್ಸನ್ನು ಕಂಡಿದ್ದಾರೆ.

ಅದರ ಫಲವಾಗಿ ದೀರ್ಘಕಾಲದ ಪಾರ್ಶ್ವವಾಯುವನ್ನು ಸಹ ಯಶಸ್ವಿಯಾಗಿ ಗುಣಪಡಿಸಬಹುದು, ಅದರಲ್ಲೂ ಕೆಲವೇ ಕೆಲವು ವಾರಗಳ ಪುನಶ್ಚೇತನ ಚಿಕಿತ್ಸೆಯಿಂದ ದೈಹಿಕ ನ್ಯೂನತೆಗಳಲ್ಲಿ ಉತ್ತಮ ಸುಧಾರಣೆಗಳನ್ನು ತಂದು, ರೋಗಿ ಮತ್ತೆ ತನ್ನ ದೈನಂದಿನ ಕೆಲಸಗಳನ್ನು ಮಾಡುವಂತೆ ಮಾಡಬಹುದು ಎಂಬುದು ತಿಳಿದುಬಂದಿದೆ. ಅಂತಹ ಒಂದು ಚಿಕಿತ್ಸೆಯೇ ಸಿಐಎಂಟಿ (Constraint-induced movement therapy for stroke)

ಸಿಐಎಂಟಿ ಎಂದರೇನು?
ಸಿಐಎಂಟಿ ಎಂದರೆ ಅಂಗಗಳನ್ನು ನಿರ್ಬಂಧಿಸಿ ಚಲನೆಗೆ ಪ್ರೇರೇಪಿಸುವ ಚಿಕಿತ್ಸೆ. ಅಂದರೆ, ರೋಗಿಯ ಆರೋಗ್ಯವಂತ ಅಂಗಗಳನ್ನು ಕೆಲ ಸಮಯ ನಿರ್ಬಂಧಿಸಿ, ನ್ಯೂನ ಅಂಗಗಳನ್ನು ನಿರಂತರ ಪುನಶ್ಚೇತನ ಚಿಕಿತ್ಸೆಗೆ ಒಳಪಡಿಸುವುದು ಎಂದರ್ಥ. ಹೀಗೆ ಮಾಡುವುದರಿಂದ ಕೆಲವೇ ವಾರಗಳಲ್ಲಿ ನ್ಯೂನ ಅಂಗಗಳು ಮತ್ತೆ ಚಲನಾಶಕ್ತಿಯನ್ನು ಪಡೆದುಕೊಳ್ಳುತ್ತವೆ.

ಈ ಚಿಕಿತ್ಸೆಯನ್ನು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಕೊಡಬಹುದು. ಆದರೆ ಮಕ್ಕಳು ಮತ್ತು ಮಧ್ಯವಯಸ್ಕರಲ್ಲಿ ಹೆಚ್ಚಿನ ಪ್ರಮಾಣದ ಸುಧಾರಣೆ ಸಾಧ್ಯ.

ಚಿಕಿತ್ಸೆ ಹೇಗೆ?
ರೋಗಿಯ ಪೂರ್ವಾಪರಗಳನ್ನು ಸಮಗ್ರವಾಗಿ ಅಭ್ಯಸಿಸಿ, ಕುಟುಂಬದವರನ್ನು ಗಣನೆಗೆ ತೆಗೆದುಕೊಂಡು ಚಿಕಿತ್ಸೆಯ ಬಗ್ಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ. ನಂತರ ಅವರ ಅಂಗಗಳ ನ್ಯೂನತೆಯ ಪ್ರಮಾಣವನ್ನು ವಿವಿಧ ಪರೀಕ್ಷೆಗಳ ಮೂಲಕ ಅರಿಯಲಾಗುತ್ತದೆ. ಈ ಪ್ರಕ್ರಿಯೆ ಮುಗಿದ ನಂತರ ರೋಗಿ ಮತ್ತು ಅವರ ಕುಟುಂಬದವರನ್ನು ಮಾನಸಿಕವಾಗಿ ಚಿಕಿತ್ಸೆಗೆ ಸಿದ್ಧಪಡಿಸಲಾಗುತ್ತದೆ. ಒಂದು ವೇಳೆ ರೋಗಿ ಮಾನಸಿಕವಾಗಿ ಸಿದ್ಧರಿಲ್ಲದಿದ್ದರೆ, ಸ್ವಲ್ಪ ಸಮಯದವರೆಗೆ ಕಾರಣಗಳನ್ನು ಸಮಗ್ರವಾಗಿ ಅಭ್ಯಸಿಸಿ, ಚಿಕಿತ್ಸೆ ನೀಡಿ ನಂತರ ಅವರ ಸಂಪೂರ್ಣ ಒಪ್ಪಿಗೆ ಪಡೆದ ಮೇಲಷ್ಟೇ ಪುನಶ್ಚೇತನ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ.

ಮೊದಲಿಗೆ ರೋಗಿಯ ಆರೋಗ್ಯವಂತ ಅಂಗವನ್ನು ವಿಶೇಷವಾಗಿ ಮಾಡಿದ ಸಾಧನದಿಂದ ಕಟ್ಟಿ ಹಾಕಲಾಗುತ್ತದೆ. ಇದನ್ನು ರೋಗಿಯು ನಿತ್ಯಕರ್ಮ ಹಾಗೂ ಮಲಗುವ ಸಮಯವನ್ನು ಹೊರತುಪಡಿಸಿ ದಿನದ ಶೇ 90ರಷ್ಟು ಸಮಯ ಯಾವುದೇ ಕಾರಣಕ್ಕೂ ಬಿಚ್ಚಬಾರದು. ಪ್ರತಿ ದಿನ 4ರಿಂದ 6 ಗಂಟೆಗಳ ಕಾಲ ಪುನಶ್ಚೇತನ ಕೇಂದ್ರದಲ್ಲಿ 8ರಿಂದ 12 ವಾರಗಳವರೆಗೆ, ಬಲಹೀನ ಅಂಗವನ್ನು ನಿರಂತರ ವ್ಯಾಯಾಮ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಅದೇ ರೀತಿ ಕುಟುಂಬದವರಿಗೆ ಮನೆಯಲ್ಲಿ ಮಾಡುವ ವ್ಯಾಯಾಮ ಕ್ರಮಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಅಂಗಗಳಲ್ಲಿ ಆಗುವ ಬದಲಾವಣೆಗಳನ್ನು ಪ್ರತಿ 3 ದಿನಕ್ಕೊಮ್ಮೆ ಪರೀಕ್ಷೆಗಳ ಮೂಲಕ ಗುರುತಿಸಿ, ಇನ್ನೂ ಹೆಚ್ಚಿನ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತದೆ.

ಸುಮಾರು ಒಂದು ಅಥವಾ ಎರಡು ವಾರಗಳಲ್ಲಿ ರೋಗಿಯ ಅಂಗಗಳಲ್ಲಿ ಬದಲಾವಣೆಗಳು ಕಾಣತೊಡಗುತ್ತವೆ. ಈ ಹಂತದಲ್ಲಿ ರೋಗಿಗೆ ಮಾನಸಿಕ ಒತ್ತಡಗಳು ಬರುವುದು ಸಹಜ. ಆದರೆ ಯಾವುದೇ ಕಾರಣಕ್ಕೂ ಆರೋಗ್ಯವಂತ ಅಂಗಕ್ಕೆ ಹಾಕಿರುವ ಸಾಧನವನ್ನು ಸುತಾರಾಂ ತೆಗೆಯಬಾರದು. ಆದಷ್ಟೂ ಹೆಚ್ಚಿನ ಸಮಯ ಮನೆಯಲ್ಲಿ ಮತ್ತು ಪುನಶ್ಚೇತನ ಕೇಂದ್ರದಲ್ಲಿ ವ್ಯಾಯಾಮಗಳನ್ನು ಚಿಕಿತ್ಸಕರ ಸಲಹೆಯಂತೆ ನಿರಂತರವಾಗಿ ಮಾಡಬೇಕು.

ಹೀಗೆ ಮಾಡಿದ್ದೇ ಆದಲ್ಲಿ 8ರಿಂದ 12 ವಾರಗಳ ಒಳಗೆ ರೋಗಿಯ ಕೈಕಾಲುಗಳಲ್ಲಿ ಶೇ 80ರಿಂದ 90ರಷ್ಟು ಬದಲಾವಣೆಗಳು ಕಂಡುಬಂದು, ಎಂದಿನಂತೆ ದೈನಂದಿನ ಕೆಲಸಗಳಿಗೆ ಮರಳಬಹುದು. ಉಳಿದ ಶೇ 10ರಿಂದ 15ರಷ್ಟು ಭಾಗವನ್ನು ಅವರು ಸಾಮಾನ್ಯ ಪುನಶ್ಚೇತನ ವ್ಯಾಯಾಮ ಕ್ರಿಯೆಗಳ ಮೂಲಕ ಸರಿಪಡಿಸಿಕೊಳ್ಳಬಹುದು. ಒಮ್ಮೆ ಚಿಕಿತ್ಸಕರಿಗೆ ರೋಗಿಯ ಅಂಗಗಳು ಗುಣವಾಗುತ್ತಿರುವ ಬಗ್ಗೆ ಸಮಾಧಾನವಾದರೆ, ಅವರು ಆರೋಗ್ಯವಂತ ಅಂಗಕ್ಕೆ ಅಳವಡಿಸಿರುವ ಸಾಧನವನ್ನು ತೆಗೆದುಹಾಕಲು ಹೇಳುತ್ತಾರೆ. ಆಗ ಎಂದಿನಂತೆ ಅವರು ತಮ್ಮ ಎರಡೂ ಕೈ ಅಥವಾ ಕಾಲುಗಳನ್ನು ದಿನನಿತ್ಯದ ಕೆಲಸಗಳಿಗೆ ಯಾವುದೇ ಆತಂಕವಿಲ್ಲದೆ ಬಳಸಬಹುದು.

ಮೆದುಳಿನಲ್ಲಿ ಏನಾಗುತ್ತದೆ?
ನಮ್ಮ ಮೆದುಳಿನಲ್ಲಿ ಸುಮಾರು 10,000 ಶತಕೋಟಿ ನರತಂತುಗಳಿದ್ದು, ಇವು ನಿರಂತರ ವಿದ್ಯುತ್ ಪ್ರಕ್ರಿಯೆಯಿಂದ ಕೂಡಿರುತ್ತವೆ. ದೇಹದ ಎಲ್ಲ ಅಂಗಗಳ ಚಲನೆಯನ್ನೂ ನಿಯಂತ್ರಿಸುತ್ತವೆ. ಈ ರೀತಿ ಕೆಲಸ ಮಾಡಲು ಅವುಗಳಿಗೆ ನಿರಂತರ ಆಮ್ಲಜನಕದ ಪೂರೈಕೆ ಅತ್ಯಂತ ಅವಶ್ಯಕ. ಒಬ್ಬ ಮನುಷ್ಯನ ಮೆದುಳು ಕೆಲಸ ಮಾಡಲು ಸುಮಾರು ಶೇ 40ರಷ್ಟು ಆಮ್ಲಜನಕವನ್ನು ಉಪಯೋಗಿಸುತ್ತದೆ. ಈ ಅಗತ್ಯವನ್ನು ರಕ್ತವು ರಕ್ತನಾಳಗಳ ಮೂಲಕ ನಿರಂತರವಾಗಿ ಪೂರೈಸುತ್ತದೆ.

ಕೆಲವೊಮ್ಮೆ ಮೆದುಳಿನ ಆಘಾತವಾದಾಗ ರಕ್ತನಾಳಗಳಿಂದ ರಕ್ತ ಹೊರಚೆಲ್ಲುವುದರಿಂದ ಅಥವಾ ರಕ್ತನಾಳಗಳಲ್ಲಿ ಗಂಟುಗಳಾಗಿ ರಕ್ತಪೂರೈಕೆಯ ಕೊರತೆಯಿಂದ ನರತಂತುಗಳಿಗೆ ಆಮ್ಲಜನಕದ ಪೂರೈಕೆ ನಿಂತುಹೋಗುತ್ತದೆ. ಇದರಿಂದ ಆಘಾತವಾದ ಭಾಗದ ನರತಂತುಗಳು ಆಮ್ಲಜನಕದ ಕೊರತೆಯಿಂದ ಕೆಲಸ ಮಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಹೀಗೆ ಆಘಾತಗೊಂಡ ಭಾಗವು ದೇಹದ ಯಾವ ಅಂಗವನ್ನು ನಿಯಂತ್ರಿಸುತ್ತದೋ ಆ ಅಂಗವು ಬಲಹೀನತೆಗೆ ತುತ್ತಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಉದಾಹರಣೆಗೆ, ಮೆದುಳಿನ ಎಡಭಾಗವು ಆಘಾತಕ್ಕೀಡಾದರೆ ದೇಹದ ಬಲಭಾಗದ ಅಂಗವು ಬಲಹೀನತೆಗೆ ತುತ್ತಾಗುತ್ತದೆ. ಇದಕ್ಕೆ ಆದಷ್ಟು ಮಿಂಚಿನ ವೇಗದ ಚಿಕಿತ್ಸೆ ಅಗತ್ಯ. ಎಷ್ಟು ಬೇಗ ಪೀಡಿತನಿಗೆ ಸರಿಯಾದ ಚಿಕಿತ್ಸೆ ದೊರೆಯುವುದೋ ಅಷ್ಟು ಬೇಗ ಆತನ ಅಂಗ ನ್ಯೂನತೆಯ ಪ್ರಮಾಣ ಕಡಿಮೆಯಾಗುತ್ತದೆ.

ಒಮ್ಮೆ ಮೆದುಳಿಗೆ ಆಘಾತವಾದರೆ ಆ ಭಾಗದ ಎಲ್ಲ ನರತಂತುಗಳೂ ವಿನಾಶವಾಗಿ ಮತ್ತೆ ಅವು ಕೆಲಸ ಮಾಡುವುದಿಲ್ಲ ಎಂಬ ಭಾವನೆ ಎರಡು ದಶಕಗಳ ಹಿಂದೆ ವೈದ್ಯಲೋಕದಲ್ಲಿ ಇತ್ತು. ಆದರೆ ನಿರಂತರ ಸಂಶೋಧನೆಗಳು ಹಾಗೂ ವೈದ್ಯಕೀಯ ಜಗತ್ತಿನಲ್ಲಾದ ಅತ್ಯಾಧುನಿಕ ಉಪಕರಣಗಳ ಆವಿಷ್ಕಾರದಿಂದ, ಆಘಾತವಾದ ಭಾಗದ ಎಲ್ಲ ನರತಂತುಗಳೂ ವಿನಾಶ ಹೊಂದಿರುವುದಿಲ್ಲ ಎಂಬುದನ್ನು ಕಂಡುಕೊಳ್ಳಲಾಗಿದೆ. ಕೆಲವು ನರತಂತುಗಳು ಮಾತ್ರ ವಿನಾಶವಾಗಿ ಉಳಿದವು ಸರಿಯಾದ ಸಂಪರ್ಕದ ಕೊರತೆಯಿಂದ ಕಾಲಕ್ರಮೇಣ ಸುಪ್ತಾವಸ್ಥೆಗೆ ಜಾರುತ್ತವೆ. ಅಂತಹ ನರತಂತುಗಳಿಗೆ ಮತ್ತೆ ಮತ್ತೆ ಸಂದೇಶಗಳನ್ನು ಕಳುಹಿಸುವುದರಿಂದ ಅವು ಜಾಗೃತಗೊಂಡು ತಮ್ಮ ಅಕ್ಕಪಕ್ಕದ ನರತಂತುಗಳ ಜೊತೆ ಪುನಃ ಸಂಪರ್ಕ ಸಾಧಿಸುತ್ತವೆ. ಈ ಪ್ರಕ್ರಿಯೆಗೆ `ನ್ಯೂರೋಪ್ಲಾಸ್ಟಿಸಿಟಿ' ಎನ್ನುತ್ತಾರೆ.

ಈ ನರತಂತುಗಳಲ್ಲಿ ಆಗುವ ನಿರಂತರ ಬದಲಾವಣೆ ಪ್ರಕ್ರಿಯೆಯಿಂದ ರೋಗಿಯ ನ್ಯೂನ ಅಂಗಗಳು ಮತ್ತೆ ಚೇತನಗೊಂಡು ಚಲನೆಯನ್ನು ಕಂಡುಕೊಳ್ಳುತ್ತವೆ. ಇದರಿಂದ ದೀರ್ಘಕಾಲದ ಪಾರ್ಶ್ವವಾಯು ಪೀಡಿತರ ಅಂಗವೈಕಲ್ಯವನ್ನು ಸಂಪೂರ್ಣವಾಗಿ ಸರಿಮಾಡಲಾಗದಿದ್ದರೂ ಶೇಕಡಾ 80ರಿಂದ 90ರಷ್ಟನ್ನು ಗುಣಪಡಿಸಬಹುದು. ಇದರಿಂದ ರೋಗಿ ದೈನಂದಿನ ಕೆಲಸಗಳಿಗೆ ಯಾರ ಮೇಲೂ ಹೊರೆಯಾಗದಂತೆ ಸಂತೋಷದಿಂದ ಮರಳಬಹುದು.

ಅಡ್ಡಪರಿಣಾಮ?
ಸಿಐಎಂಟಿ ಚಿಕಿತ್ಸೆಯಲ್ಲಿ ಯಾವುದೇ ತೀವ್ರ ತರಹದ ಅಡ್ಡಪರಿಣಾಮಗಳು ಇರುವುದಿಲ್ಲ. ಹಾಗೇನಾದರೂ ಅಂತಹ ಸೂಚನೆಗಳು ಕಂಡುಬಂದರೆ ತಕ್ಷಣ ಚಿಕಿತ್ಸೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುತ್ತದೆ. ಒಮ್ಮೆ ಚೇತರಿಸಿಕೊಂಡ ನಂತರ ಮತ್ತೆ ಚಿಕಿತ್ಸೆಯನ್ನು ಮುಂದುವರಿಸಲಾಗುತ್ತದೆ.

ಕೆಲವೊಮ್ಮೆ ನಿರಂತರ ವ್ಯಾಯಾಮದಿಂದ ಮಾಂಸಖಂಡಗಳು ಸೆಳೆತಕ್ಕೊಳಗಾಗಿ ನೋವು ಬರುವುದು ಸಹಜ. ಈ ಸಮಯದಲ್ಲಿ ನೋವು ನಿವಾರಕ ಮಾತ್ರೆಗಳಿಂದ ಅದನ್ನು ಕಡಿಮೆ ಮಾಡಬಹುದು. ಚಿಕಿತ್ಸಾ ಸಮಯದಲ್ಲಿ ರೋಗಿಯು ಯಾವುದೇ ಕಾರಣಕ್ಕೂ ಮಾನಸಿಕ ಸ್ಥಿಮಿತ ಕಳೆದುಕೊಳ್ಳಬಾರದು. ಅತ್ಯಂತ ಉತ್ಸಾಹದಿಂದ ಪುನಶ್ಚೇತನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಹೆಚ್ಚಿನ ಮಟ್ಟದ ಗುಣ ಕಂಡುಕೊಳ್ಳಬಹುದು.

ನಿಬಂಧನೆ ಇದೆ
1. ಪಾರ್ಶ್ವವಾಯು ಪೀಡಿತ ಅಂಗಗಳಲ್ಲಿ ಯಾವುದೇ ಚಲನೆ ಇಲ್ಲದಿದ್ದರೆ ಅಂತಹವರು ಈ ಚಿಕಿತ್ಸೆಗೆ ಅರ್ಹರಲ್ಲ. ಅಂದರೆ ಇದರರ್ಥ ರೋಗಿಯ ಅಂಗಗಳು ಕನಿಷ್ಠ ಶೇ 50ರಿಂದ 60ರಷ್ಟು ಚಲನೆಯನ್ನು ಹೊಂದಿರಬೇಕು.

2. ರೋಗಿಯ ಅಂಗಗಳಲ್ಲಿ ಯಾವುದೇ ರೀತಿಯ ದೀರ್ಘಕಾಲದ ಊನ ಇರಕೂಡದು.

3. ಅವರು ಯಾವುದೇ ರೀತಿಯ ಹೃದ್ರೋಗ ಸಮಸ್ಯೆಗಳನ್ನು ಹೊಂದಿರಬಾರದು.

4. ಅವರಿಗೆ ಕಿವಿ ಕೇಳುತ್ತಿರಬೇಕು. ಇದರಿಂದ ಚಿಕಿತ್ಸಕ ಕೊಡುವ ಎಲ್ಲ ಸಲಹೆಗಳನ್ನೂ ಅರ್ಥ ಮಾಡಿಕೊಂಡು ಪುನಶ್ಚೇತನ ಪ್ರಕ್ರಿಯೆಗಳಲ್ಲಿ ಸಂತೋಷದಿಂದ ಭಾಗವಹಿಸಲು ಸಾಧ್ಯವಾಗುತ್ತದೆ.

5. ರೋಗಿಯ ಕುಟುಂಬದವರ ಸಹಕಾರ ಅತ್ಯಗತ್ಯ. ಚಿಕಿತ್ಸಕರು ಕೊಡುವ ಎಲ್ಲ ಸಲಹೆಗಳನ್ನೂ ಕುಟುಂಬದವರು ಪಾಲಿಸಿ ರೋಗಿಯನ್ನು  ಪ್ರೋತ್ಸಾಹಿಸಿದರೆ, ಅವರು ಬೇಗ ಗುಣ ಕಂಡುಕೊಂಡು ಅತಿ ಶೀಘ್ರದಲ್ಲಿ ದೈನಂದಿನ ಕೆಲಸಗಳಿಗೆ ಮರಳಬಹುದು.
 -ಡಾ. ಚಂದ್ರಶೇಖರ್ ಬೆಳ್ಳೂಡಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT