ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಶ್ವವಾಯು ಬಗ್ಗೆ ಇರದಿರಲಿ ಅಲಕ್ಷ

ವಿಶ್ವ ಪಾರ್ಶ್ವವಾಯು ದಿನ ಅ.29
Last Updated 28 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ
ಪಾರ್ಶ್ವವಾಯು (ಪ್ಯಾರಾಲಿಸಿಸ್ ಅಥವಾ ಲಕ್ವ) ಮೆದುಳಿನ ಆಘಾತ ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಕಾಡುತ್ತಿರುವ ವಿಪರೀತ ದೇಹದ ತೊಂದರೆಗಳಲ್ಲಿ ಒಂದು.
 
ಇತ್ತೀಚಿನ ಅಂಕಿ–ಅಂಶಗಳ ಪ್ರಕಾರ ಪ್ರತಿ ಸಾವಿರ ಜನರಲ್ಲಿ 30ರಿಂದ 50 ಜನರು ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ. ಇದರಿಂದಲೇ ಪಾರ್ಶ್ವವಾಯು ಅಗಾಧತೆ ಎಷ್ಟೆಂಬುದನ್ನು ಊಹಿಸಿಕೊಳ್ಳಬಹುದು.
 
ಪಾರ್ಶ್ವವಾಯು ಯಾರಿಗೆ ಬೇಕಾದರೂ ಬರಬಹುದು; ಚಿಕ್ಕವರಿರಲಿ, ದೊಡ್ಡವರಿರಲಿ, ವಯೋವೃದ್ಧರಿರಲಿ; ಮಹಿಳೆಯರು ಮಕ್ಕಳು ಪುರುಷರೆಂಬ ಬೇಧವಿಲ್ಲ. ಮೆದುಳು ನಮ್ಮ ದೇಹದ ಕಂಟ್ರೋಲ್ ಸೆಂಟರ್ (ದೇಹದ ಪ್ರತಿಯೊಂದು ಚಲನವಲನಗಳನ್ನು ನಿಯಂತ್ರಿಸುವ ಅಂಗ). 
 
ಮೆದುಳಿನ ಎಡಬಾಗವು ದೇಹದ ಬಲ ಬಾಗವನ್ನು ಮೆದುಳಿನ ಬಲಭಾಗವು ದೇಹದ ಎಡಭಾಗವನ್ನು ದಿನದ 24 ಗಂಟೆ ಮನುಷ್ಯನ ಹುಟ್ಟಿನಿಂದ ಜೀವಿತದ ಕೊನೆಯವರೆಗೂ ಕಾರ್ಯನಿರತವಾಗಿರುತ್ತದೆ.  
 
ಮನುಷ್ಯನ  ಪ್ರತಿಯೊಂದು ನರಕೋಶವೂ ವಿದ್ಯುತ್ತನ್ನು ಉತ್ಪಾದಿಸಿ ನಿರ್ದಿಷ್ಟ ರೀತಿಯಲ್ಲಿ ದೇಹದ ಇತರ ಅಂಗಗಳಿಗೆ ಸಂದೇಶಗಳನ್ನು ಕಳುಹಿಸುವುದರ ಮೂಲಕ ದೇಹದ ಚಲನವಲನ ಹಾಗೂ ಇನ್ನಿತರ ಕೆಲಸಗಳನ್ನು ನಿಯಂತ್ರಿಸುತ್ತವೆ.
 
ಈ ರೀತಿ ಕೆಲಸ ನಿರ್ವಹಿಸಲು ನಿರಂತರ ಆಮ್ಲಜನಕ ಹಾಗೂ ಶಕ್ತಿಗಾಗಿ ಗ್ಲೂಕೋಸ್ ಅತ್ಯಗತ್ಯ. ಇವೆಲ್ಲವುಗಳ ಪೂರೈಕೆ ಹಿಮೋಗ್ಲೋಬಿನ್ ರಕ್ತಕಣಗಳಿಂದ ರಕ್ತನಾಳಗಳ ಮೂಲಕ ನಿರಂತರವಾಗಿ ಆಗುತ್ತಿರುತ್ತದೆ.
 
ಪಾರ್ಶ್ವವಾಯು ಏಂದರೇನು?
ಪಾರ್ಶ್ವವಾಯು ಅಥವಾ ಮೆದುಳಿನ ಆಘಾತ ಇದು ಮೆದುಳಿನ ರಕ್ತನಾಳಗಳಲ್ಲಾಗುವ ವ್ಯತ್ಯಾಸದಿಂದ ಊಂಟಾಗುವ ತತ್‌ಕ್ಷಣದ ಬದಲಾವಣೆ.
 
ಕೆಲವೊಮ್ಮೆ ವಿವಿಧ ರೀತಿಯ ಕಾರಣಗಳಿಂದ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ (ಕೊಬ್ಬಿನ) ಇನ್ನಿತರ ಅಂಶಗಳಿಂದ ಗಂಟುಗಳುಂಟಾಗಿ ನರಕೋಶಗಳಿಗೆ ರಕ್ತಚಲನೆ ನಿಲ್ಲುವುದು (ಇಸ್ಕಿಮಿಕ್ ಆಘಾತ) ಅಥವಾ ರಕ್ತನಾಳಗಳು ಒಡೆದು ರಕ್ತವು ನರತಂತುಗಳ ಮೇಲೆಚೆಲ್ಲುವುದರಿಂದ (ಹೆಮೋರೆಜಿಕ್ ಆಘಾತ) ನರಕೋಶಗಳು ನಾಶಗೊಂಡು ದೇಹದ ನಿಯಂತ್ರಣ ಕಳೆದುಕೊಳ್ಳುತ್ತವೆ.
 
ಈ ಪ್ರಕ್ರಿಯೆಯಿಂದ ನರತಂತುಗಳ ನಿಯಂತ್ರಣಕ್ಕೊಳಪಟ್ಟಿರುವ ಮಾಂಸಖಂಡಗಳು ತಾತ್ಕಾಲಿಕ ಚಲನೆ ಕಳೆದುಕೊಳ್ಳುವುವು. ಇದರಿಂದ ಮನುಷ್ಯನ ದೇಹದ ಒಂದು ಪಾರ್ಶ್ವದ ಅಂಗಗಳು ಬಲಹೀನಗೊಳ್ಳುತ್ತದೆ.
 
ಮೆದುಳಿನ ಆಘಾತದ ಪ್ರಮಾಣನುಸಾರವಾಗಿ ದೇಹದ ಬಲಹೀನತೆ ಅವಲಂಬಿತವಾಗಿರುತ್ತದೆ. ಅಂದರೆ ಮೆದುಳಿನ ಹೆಚ್ಚು ಭಾಗ ಹಾಳಾಗಿದ್ದರೆ ದೇಹದ ಅಂಗವೈಕಲ್ಯ ಜಾಸ್ತಿ ಇರುತ್ತದೆ. ಮೆದುಳಿನ ಸ್ವಲ್ಪಭಾಗ ಹಾಳಾಗಿದ್ದರೆ ಅಂಗವೈಕಲ್ಯ ಕಡಿಮೆ ಪ್ರಮಾಣದ್ದಾಗಿರುತ್ತದೆ.
 
ಪಾರ್ಶ್ವವಾಯು ಮುನ್ಸೂಚನೆಗಳು
* ನಮ್ಮ ದೇಹದ ಚಲನವಲನಗಳ ಮೇಲೆ ಮಿದುಳಿನ ನಿಯಂತ್ರಣ ಕ್ಷೀಣಿಸುವುದು ಅಥವಾ ದೇಹದ ಕೆಲವು ಭಾಗಗಳು ಸ್ವಾಧೀನ ಕಳೆದುಕೊಂಡಂತೆ ಭಾಸವಾಗುವುದು.
* ನಡೆಯಲು ಕಷ್ಟವಾಗುವುದು.
* ದೇಹದ ಸಮತೋಲನ ಕಳೆದುಕೊಳ್ಳುವುದು.
* ಕಣ್ಣು ಮಂಜಾಗುವುದು.
* ಮಾತು ತೊದಲುವಿಕೆ ಮತ್ತು ಅಹಾರ ನುಂಗಲು ಕಷ್ಟವಾಗುವುದು.
* ಮೆದುಳಿನ ಸ್ಮರಣೆ ಕಡಿಮೆಯಾಗುವುದು.
* ಭಾವನೆಗಳ ಮೇಲೆ ನಿಯಂತ್ರಣ ತಪ್ಪುವುದು.
 
ಮುನ್ನೆಚ್ಚರಿಕೆಯ ಕ್ರಮಗಳು
ಮೇಲೆ ಕಾಣಿಸಿರುವ ಲಕ್ವ ಲಕ್ಷಣಗಳು ಯಾವಾಗಲಾದರೂ ತಾತ್ಕಾಲಿಕವಾಗಿ ಕಾಣಿಸಿಕೊಂಡು ಮಾಯವಾಗಬಹುದು. ಇದನ್ನು ಅಸ್ಥಿರ ಇಸ್ಕಿಮಿಕ ಅಟ್ಯಾಕ್ ಆಥವಾ TIA (TRANSITISCHIMIC ATTACK)  ಎಂದು ಕರೆಯುವುದುಂಟು. ಈ ಲಕ್ಷಣಗಳು ಕಾಣಿಕೊಂಡರೆ ಕೂಡಲೇ ಸಮೀಪದ ವೈದ್ಯರನ್ನು ಸಂಪರ್ಕಿಸುವುದು ಒಳಿತು.
 
ಲಕ್ವಕ್ಕೆ ಒಳಗಾದ ವ್ಯಕ್ತಿ ಅಥವಾ ಅವನ ಸಂಬಂಧಿಕರು ತಗೆದುಕೊಳ್ಳಬೇಕಾದ ಕ್ರಮಗಳು ಪಾರ್ಶ್ವವಾಯು ಯಾವುದೇ ಪ್ರಥಮಚಿಕಿತ್ಸೆ ಇರುವುದಿಲ್ಲ. ಆದ್ದರಿಂದ ತಕ್ಷಣ ಸಂಬಂಧಿಗಳು ಹತ್ತಿರದ ನರರೋಗತಜ್ಞರಿರುವ ಆಸ್ಪತ್ರೆಗೆ ದಾಖಲಿಸಬೇಕು. ಈ ಸಮಯದಲ್ಲಿ ಪ್ರತಿ ನಿಮಿಷವೂ ಅಮೂಲ್ಯ. 
 
ಏಕೆಂದರೆ ಪೀಡಿತನ ತತ್‌ಕ್ಷಣದ ಚಿಕಿತ್ಸೆಗೆ ವಿಳಂಬವಾದಷ್ಟು ಮೆದುಳಿನ ಆಘಾತದ ಪ್ರಮಾಣ ಹೆಚ್ಚಾಗುವುದು. ಒಂದು ಅಂದಾಜಿನ ಪ್ರಕಾರ ಆರ್ಧ ಗಂಟೆ ವಿಳಂಬವಾದರೆ ಸುಮಾರು 10ರಿಂದ 20  ಪಾರ್ಶ್ವವಾಯು ಮೆದುಳಿನ ನರಕೋಶಗಳು ಸಾಯುವವು ಅಥವಾ ನಿಯಂತ್ರಣ ಕಳೆದುಕೊಳ್ಳುತ್ತದೆ.  
 
ಈ ಸಮಯದಲ್ಲಿ ನರರೋಗವೈದ್ಯರ ಸಲಹೆಯಂತೆ ಕ್ರಮಗಳನ್ನು ತೆಗೆದುಕೊಂಡರೆ ಮೆದುಳಿನ ಆಘಾತದ ಪ್ರಮಾಣವನ್ನು ಶೇ. 80ರಿಂದ 95ರಷ್ಟು ಕಡಿಮೆ ಮಾಡಬಹುದು.
 
ಈ ಸಮಯದಲ್ಲಿಯೆ ಹೆಚ್ಚಾಗಿ ಸಂಬಂಧಿಕರು ಪೀಡಿತನನ್ನು ನುರಿತ ನರರೋಗತಜ್ಞರ ಬಳಿಗೆ ಕರೆದುಕೊಂಡು ಹೋಗುವ ಬದಲು ಅಸಂಪ್ರದಾಯಿಕ ಹಾಗೂ ಪಾರ್ಶ್ವವಾಯು ಬಗ್ಗೆ ಏನೊಂದೂ ಅರಿಯದ ವೈದ್ಯರ ಬಳಿಗೆ ತೆರಳಿ ಅವೈಜ್ಞಾನಿಕ ಚಿಕಿತ್ಸಾಪದ್ಧತಿಯನ್ನು ಅನುಸರಿಸುವರು.
 
ಇದು ಪೀಡಿತನ ಸಂಬಂಧಿಗಳು ಮಾಡುವ ಪ್ರಾಥಮಿಕ ತಪ್ಪು. ಮೊದಲ ಮೂರರಿಂದ ಆರು ತಿಂಗಳು ಲಕ್ವ ಪೀಡಿತನ ಚಿಕಿತ್ಸೆಗೆ ಸರಿಯಾದ ಸಮಯ. ಈ ಸಮಯದಲ್ಲಿ ಸರಿಯಾದ ವ್ಯಾಯಾಮದ ಪುನಶ್ಚೇತನ ಕ್ರಿಯೆಗಳನ್ನು ತಗೆದುಕೊಂಡರೆ ಪೀಡಿತನ ಸುಮಾರು 95ರಷ್ಟು ಅಂಗವಿಕಲತೆಯನ್ನು ಕಡಿಮೆ ಮಾಡಬಹುದು; 
 
ಪುನಶ್ಚೇತನದ ಕ್ರಮಗಳು 
ಮೆದುಳಿನ ಆಘಾತದ ನಂತರ ಎಷ್ಟು ಶೀಘ್ರವಾಗಿ ಪುನಶ್ಚೇತನವನ್ನು ಪ್ರಾರಂಭಿಸುತ್ತೆವೆಯೊ ಅಷ್ಟು ಪರಿಣಾಮಕಾರಿಯಾಗಿ ಹಾಗೂ ಅಷ್ಟೆ ಕಡಿಮೆ ಸಮಯದಲ್ಲಿ ಪೀಡಿತನನ್ನು ಸಹಜಸ್ಥಿತಿಗೆ ತರಬಹುದು.
 
ಆದರೆ ಬಹಳಷ್ಟು ಮಂದಿ ಕೆಲವು ತಪ್ಪು ಚಿಕಿತ್ಸಾಕ್ರಮಗಳಿಗೆ ಈಗಲೂ ಮೊರೆಹೋಗುತ್ತಿದ್ದಾರೆ; ಉದಾಹರಣೆಗೆ ಮಸಾಜ್ ಮಾಡುವುದು, ಬಿಳಿ ಪೌಡರ್ ಹಚ್ಚುವುದು, ದೇಹ ಉಷ್ಣವಾಗಲೆಂದು ತೆಂಗಿನ ಎಣ್ಣೆಯನ್ನು ಪೀಡಿತನಿಗೆ ಕುಡಿಸುವುದು, ಯಾವುದೇ ವ್ಯಾಯಾಮಪದ್ಧತಿಗಳನ್ನು ಅನುಸರಿಸದೇ ಕೇವಲ ಔಷಧಗಳನ್ನು ನುಂಗುವುದು, ಪಾರಿವಾಳದ ರಕ್ತವನ್ನು ಪೀಡಿತನ ಮೈಗೆ ಲೇಪಿಸುವುದು, ಮುಂತಾದವು.
 
ಕೆಲವು ಅಪರೂಪದ ಸಂದರ್ಭಗಳಲ್ಲಿ ದೇಹ ತಂತಾನೆ ಚೇತರಿಸಿಕೊಳ್ಳುತ್ತದೆ. ಮೆದುಳಿನ ರಕ್ತನಾಳಗಳು ತಾನಾಗಿ ಸರಿಹೋಗಿ ರಕ್ತದ ಚಲನೆ ಸುಗಮವಾಗುತ್ತದೆ. ಆದರೆ ಅದು ಪಾರಿವಾಳದ ರಕ್ತ ಹೀರಿದ್ದರಿಂದ ಸರಿ ಹೋಯಿತು ಎಂದು ಜನರು ತಿಳಿಯುತ್ತಾರೆ.
 
ಈ ಎಲ್ಲ ಅವೈಜ್ಞಾನಿಕ ಪದ್ಧತಿಗಳನ್ನು ಪ್ರಯತ್ನಿಸಿ ಕೊನೆಯ ಪ್ರಯತ್ನವೆಂಬಂತೆ ವೈದ್ಯರ ಬಳಿಗೆ– ಬರುವರ ಸಂಖ್ಯೆ ಹೆಚ್ಚು. ಇಷ್ಟರಲ್ಲಾಗಲೆ ಸಾಕಷ್ಟು ಸಮಯ–ಹಣ ಹಾಳುಮಾಡಿಕೊಂಡಿರುತ್ತಾರೆ.  ಜನರು ಪ್ರಾಥಮಿಕ ಹಂತದಲ್ಲಿ ಈ ಪದ್ಧತಿಗಳ ಕಡೆಗೆ ವಾಲದಿರುವುದೇ ಒಳಿತು.
 
ಮೂಢನಂಬಿಕೆಗಳು 
* ಪಾರ್ಶ್ವವಾಯು ಥಂಡಿಗಾಳಿಗೆ ಹೆಚ್ಚು ಮೈಯೊಡ್ಡಿದರೆ ಬರುತ್ತದೆ. ಆದರೆ ಥಂಡಿಗಾಳಿಗೂ ಪಾರ್ಶ್ವವಾಯುವಿಗೂ ಯಾವುದೇ ಸಂಬಂಧ ಇಲ್ಲ. ಪಾರ್ಶ್ವವಾಯುವಿಗೆ ಮುಖ್ಯ ಕಾರಣ ಮೆದುಳಿನ ರಕ್ತನಾಳಗಳಲ್ಲಾಗುವ ತತಕ್ಷಣದ ಬದಲಾವಣೆಯೇ ಹೊರತು ಚಳಿ ಅಥವಾ ಥಂಡಿಗಾಳಿ ಕಾರಣವಲ್ಲ.
 
* ಲಕ್ವ ಕೇವಲ ವಯಸ್ಸಾದವರಿಗೆ ಬರುತ್ತದೆ. ಇದು ಶುದ್ಧ ತಪು ಗ್ರಹಿಕೆ; ಪಾರ್ಶ್ವವಾಯು ಯಾರಿಗೆ ಬೇಕಾದರೂ ಬರಬಹುದು; ಆಗ ತಾನೆ ಹುಟ್ಟುವ ಮಕ್ಕಳಿಂದ ಹಿಡಿದು 90ರ ವಯೋವೃದ್ಧರಿಗೂ ಬರಬಹುದು.
 
* ಎಲ್ಲ ಪಾರ್ಶ್ವವಾಯು ಪೀಡಿತರು ಒಂದೇ 
ಇದು ಸುಳ್ಳು. ಯಾವುದೇ ಕಾರಣಕ್ಕೂ  ಪಾರ್ಶ್ವವಾಯು– brain stroke ಎಲ್ಲರಿಗೂ ಒಂದೇ ಪ್ರಮಾಣದಲ್ಲಿ ಇರುವುದಿಲ್ಲ. ಉದಾಹರಣೆಗೆ ಹತ್ತು ಸಾವಿರ ಪಾರ್ಶ್ವವಾಯು ಪೀಡಿತರನ್ನು ಒಂದೆಡೆ ನಿಲ್ಲಿಸಿದರೆ ಅಂಗವೈಕಲ್ಯ ನೋಡಲು ಒಂದೇ ರೀತಿಯಲ್ಲಿ ಕಾಣುತ್ತಿದ್ದರೂ ಕಾರಣ ಹಾಗೂ ಆಘಾತದ ಪ್ರಮಾಣ ಬೇರೆಯೇ ಆಗಿರುತ್ತದೆ.
 
ಕೆಲವರಿಗೆ ತುಂಬ ಕಡಿಮೆ ಪ್ರಮಾಣದ ಅಘಾತವಾಗಿದ್ದರೆ ಇನ್ನು ಕೆಲವರಿಗೆ ತೀವ್ರ ಪ್ರಮಾಣದ್ದಾಗಿರುತ್ತದೆ. ಕಡಿಮೆ ಪ್ರಮಾಣದವರು ಕೆಲವೊಮ್ಮೆ ಯಾವುದೇ ಔಷಧದ ನೆರವಿಲ್ಲದೆ ಗುಣ ಹೊಂದಿದ ಪ್ರಕರಣಗಳೂ ಉಂಟು.
 
ಹೆಚ್ಚಿದ್ದವರು ಗುಣವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುವುದುಂಟು. ಹೀಗಾಗಿ ಯಾವುದೇ ಕಾರಣಕ್ಕೂ ಒಬ್ಬ ಪೀಡಿತರನ್ನು ಇನ್ನೊಬ್ಬ ಪೀಡಿತರೊಂದಿಗೆ ಹೋಲಿಸಕೂಡದು.
(ಲೇಖಕರು ಪಾರ್ಶ್ವವಾಯು ಪುನಶ್ಚೇತನತಜ್ಞರು) 
 
**
ಪಾರ್ಶ್ವವಾಯು ಕಾರಣಗಳು
* ರಕ್ತದೊತ್ತಡ, ಬಿ.ಪಿ.
* ಸಕ್ಕರೆ ಕಾಯಿಲೆ (ಡಯಾಬಿಟಿಸ್), ವಂಶವಾಹಿನಿ ಕಾಯಿಲೆ
* ವಿಪರೀತ ಮಾನಸಿಕ ಒತ್ತಡ
* ಅತಿಯಾದ ಸಿಗರೇಟ್ ಸೇವನೆ
* ಅಪಘಾತದಿಂದ ಮೆದುಳಿಗೆ ಪೆಟ್ಟು ಬೀಳುವಿಕೆ
* ತಂಬಾಕು ಹಾಗು ಆಲ್ಕೊಹಾಲ್ ಸೇವನೆ (ಭಾರತದಲ್ಲಿ ಅತಿ ಹೆಚ್ಚಿನ ಪಾರ್ಶ್ವವಾಯು ಸಮಸ್ಯೆಗೆ ಇದು ಪ್ರಮುಖ ಕಾರಣ)
* ರಕ್ತನಾಳಗಳು ಗಡುಸಾಗುವಿಕೆ ಅಥವಾ ಕಿರಿದಾಗುವಿಕೆ (ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಯಾಗುವುದರಿಂದ ದೀರ್ಘಕಾಲದ ನಂತರ ಈ ಸಮಸ್ಯೆ ಉಂಟಾಗುತ್ತದೆ).
* ಗರ್ಭಿಣಿಯರಿಗೆ ಹೆರಿಗೆಯ ಸಮಯದಲ್ಲಿ ತೊಂದರೆಗಳುಂಟಾಗಿ ಹುಟ್ಟುವ ಮಗುವಿಗೂ ಲಕ್ವ ಬರುವ ಸಾಧ್ಯತೆಗಳುಂಟು.
ಹೀಗೆ ಇನ್ನೂ ಹಲವು ಕಾರಣಗಳು ಕಾಣಸಿಗುತ್ತವೆ. ಆದರೆ ಲಕ್ವ ಇಂಥದ್ದೇ ಕಾರಣಗಳಿಂದ ಬರುತ್ತದೆಂದು ಊಹಿಸುವುದು ಕಷ್ಟ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT