ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಮೇಹಕ್ಕೆ ನೂತನ ಔಷಧ

Last Updated 1 ಜನವರಿ 2016, 19:30 IST
ಅಕ್ಷರ ಗಾತ್ರ

ಇತ್ತೀಚಿನ ವರ್ಷಗಳಲ್ಲಿ ಮನುಕುಲವನ್ನು ಕ್ಯಾನ್ಸರ್‌, ಮಧುಮೇಹ, ರಕ್ತದೊತ್ತಡ ಮುಂತಾದ ಹಲವು ಕಾಯಿಲೆಗಳು ಮನುಷ್ಯನನ್ನು ಕಾಡುತ್ತಿವೆ. ಇವುಗಳಲ್ಲಿ ಮಧುಮೇಹ ವಿಶ್ವವ್ಯಾಪಿಯಾಗಿ ಹರಡಿದೆ. ಮಧುಮೇಹದಿಂದ ಬಳಲುತ್ತಿದ್ದರೂ ತಮ್ಮ ದೈನಂದಿನ ಬದುಕು ಅದರಿಂದ ವ್ಯತ್ಯಾಸವಾಗಿಲ್ಲವೆಂಬುದು ಬಹುಮಂದಿಯ ಅನಿಸಿಕೆ. ಆದರೆ  ಮಧುಮೇಹ ಮನುಷ್ಯನ ಹೃದಯ, ಕಣ್ಣುಗಳ, ನರನಾಡಿಗಳ, ಮೂತ್ರ ಪಿಂಡದಂತಹ ಭಾಗಗಳ ಆರೋಗ್ಯದ ಮೇಲೆ ಅತಿಕ್ರಮಣ ಮಾಡುತ್ತದೆ. 

ಅನಾದಿ ಕಾಲದಿಂದಲೂ ಸಹ, ಮನುಷ್ಯ ತನಗೆ ಬರುವ ಉಪಟಳಗಳಿಂದ ಪಾರಾಗುವ ಬಗ್ಗೆ ಹೊಸ – ಹೊಸ ತಂತ್ರ – ಪ್ರತಿತಂತ್ರಗಳನ್ನು ರೂಪಿಸುತ್ತಿರುತ್ತಾನೆ. ಹಾಗೆಯೇ ಮಧುಮೇಹ ಮತ್ತು ಮಧುಮೇಹದಿಂದ ಪಾರಾಗಲು ಅನೇ ಕಾನೇಕ ಉಪಾಯಗಳನ್ನು ಆವಿಷ್ಕರಿಸಿದ್ದಾನೆ. ಮಧುಮೇಹ ನಿಯಂತ್ರಣದಲ್ಲಿ ಹಲವು ಬಗೆ ಇದ್ದರೂ, ಮೊದಲ ಸ್ಥಾನ ವ್ಯಾಯಾಮಕ್ಕೆ ಲಭಿಸುತ್ತದೆ.

ಹೌದು ವ್ಯಾಯಾಮ ಎಲ್ಲರಿಗೂ ಅತ್ಯವಶ್ಯಕ ಅದರಲ್ಲೂ ಮಧುಮೇಹದಿಂದ ಬಳಲುತ್ತಿರುವವರಿಗೆ ಅದು ರಾಮಬಾಣವೇ ಸರಿ. ಪ್ರತಿ ದಿನ ಸುಮಾರು ನಲವತ್ತು ನಿಮಿಷ ನಡಿಗೆ ಮಧುಮೇಹವನ್ನು ನಿಯಂತ್ರಿಸಲು ಸಹಕಾರಿ. ವ್ಯಾಯಾಮದಿಂದ ಮಾಂಸ ಖಂಡಗಳಿಗೆ ಹೆಚ್ಚು ಪ್ರಮಾಣದ ಗ್ಲುಕೋಸ್‌ ಅತ್ಯಗತ್ಯ. ರಕ್ತದಲ್ಲಿ ಹೆಚ್ಚಾಗಿರುವ ಗ್ಲುಕೋಸ್‌ ಅಂಶವನ್ನು ಮಾಂಸಖಂಡಗಳು ಉಪಯೋಗಿಸುವುದರಿಂದ ರಕ್ತದಲ್ಲಿ ಗ್ಲುಕೋಸ್‌ ಅಂಶ ನಿಯಂತ್ರಣಕ್ಕೆ ಬರುತ್ತದೆ.

ಎರಡನೆಯದಾಗಿ ಆಹಾರದಲ್ಲಿ ಕಟ್ಟು ನಿಟ್ಟಾಗಿರುವುದು ಅತ್ಯವಶ್ಯಕ. ಸಿಹಿ ಪದಾರ್ಥಗಳನ್ನು ವರ್ಜಿಸುವುದು, ಅನ್ನವನ್ನು ಮಿತವಾಗಿ ಬಳಸುವುದು, ರಾಗಿ, ಗೋಧಿ, ಜೋಳ ಮುಂತಾದವುಗಳನ್ನು ಹೇರಳವಾಗಿ ಬಳಸುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು.  ಹಣ್ಣುಗಳಲ್ಲಿ ಮಾವು, ಸಪೋಟ, ಕಲ್ಲಂಗಡಿ ಮತ್ತು ಹಲಸಿನ ಹಣ್ಣನ್ನು ವರ್ಜಿಸಲೇ ಬೇಕು. ಸ್ವಲ್ಪ ಮಟ್ಟಿಗೆ ಸೇಬು, ಮೂಸಂಬಿ, ಕಿತ್ತಳೆ, ಪರಂಗಿ, ಸೀಬೆ ಹಣ್ಣನ್ನು ಸೇವಿಸಬಹುದು.

ತರಕಾರಿಗಳಲ್ಲಿ ಕ್ಯಾರೆಟ್‌, ಆಲೂಗಡ್ಡೆ ಮತ್ತು ಬೀಟ್‌ರೋಟ್‌ ಸೇವನೆ ನಿಷಿದ್ಧ. ನವಿಲುಕೋಸ್‌, ಹಾಗಲಕಾಯಿ, ಗೋರಿಕಾಯಿ, ಮೆಂಥ್ಯೆ ಮುಂತಾದವುಗಳ ಸೇವನೆ ಮಧುಮೇಹ  ನಿಯಂತ್ರಣಕ್ಕೆ ಅನುಕೂಲಕರ. ವ್ಯಾಯಾಮ, ಆಹಾರ ಪದ್ಧತಿಯ ನಿಯಂತ್ರಣದಿಂದ ಮಧುಮೇಹ ಹೇಗೆ ನಿಯಂತ್ರಣದಲ್ಲಿ ಇಡಲು ಅನುಕೂಲವೋ ಹಾಗೆಯೇ ಅದಕ್ಕೆ ಔಷಧ ಸೇವನೆ ಅಷ್ಟೇ ಮುಖ್ಯವಾಗುತ್ತದೆ. ನಿಗದಿತ ಸಮಯದಲ್ಲಿ ನಿಯಮಿತವಾಗಿ ಔಷಧ ಸೇವಿಸುವುದರಿಂದ ಮಧುಮಹೇಹ ನಿಯಂತ್ರಿಸಬಹುದಾಗಿದೆ. 

ಇತ್ತೀಚಿನ ವರ್ಷಗಳಲ್ಲಿ  ಮಧುಮೇಹ ನಿಯಂತ್ರಿಸಲು ಅನೇಕ ನೂತನ ಔಷಧಗಳು ಮಾರುಕಟ್ಟೆಗೆ ಬಂದಿವೆ.  ತೀರ ಇತ್ತೀಚಿನ ಅಂದರೆ ಕಳೆದ ಎರಡು – ಮೂರು ತಿಂಗಳುಗಳಿಂದ ಎರಡು – ಮೂರು ತರಹದ ವಿನೂತನ  ಔಷಧಗಳು ಮಧುಮೇಹಕ್ಕೆ ರಾಮಬಾಣವಾಗಿ ಪರಿಣಮಿಸಿದೆ. SGJP 2 ಎಂಬ ವಿನೂತನ ಬಗೆಯ ಮಧುಮೇಹದ ಔಷಧ, ರಕ್ತದಲ್ಲಿನ ಸಕ್ಕರೆ ಅಂಶವನ್ನು ಹತೋಟಿಯಲ್ಲಿಡಲೂ ಬಹಳ ಉಪಕಾರಿ. ರಕ್ತದಲ್ಲಿ ಹೆಚ್ಚಾಗಿರುವ ಸಕ್ಕರೆ ಅಂಶವನ್ನು ಮೂತ್ರಪಿಂಡದ ಸಹಾಯದಿಂದ ಅದನ್ನು ಮೂತ್ರದ ಮೂಲಕ ಹೊರಹಾಕುತ್ತದೆ.

ಇದಲ್ಲದೇ ಸಕ್ಕರೆ ಅಂಶ ಮೂತ್ರದಿಂದ ಹೊರಹೋಗುವುದರಿಂದ ಸುಮಾರು 4 ರಿಂದ 5 ತಿಂಗಳಲ್ಲಿ 3 ರಿಂದ 5 ಕೆ.ಜಿ. ಅಷ್ಟು ದೇಹದ ತೂಕ ಕಡಿಮೆಯಾಗುತ್ತದೆ. ಇದು ಸ್ಥೂಲಕಾಯ ಶರೀರದವರಿಗೆ ಒಂದು ವರದಾನವಾಗಿದೆ. ಮೂರು ತಿಂಗಳ ಸಮಾನಂತರ ಸಕ್ಕರೆ ಅಂಶ ತೋರಿಸುವ  HbAIC ಪರೀಕ್ಷೆಯಲ್ಲಿ ಗಣನೀಯವಾಗಿ ಸಕ್ಕರೆ ಅಂಶ ಇಳಿಕೆ ಕಂಡು ಬರುತ್ತದೆ. ಸರಿಸುಮಾರು 0.8–1.1 ನಷ್ಟು HbAIC ಯಲ್ಲಿ ಇಳಿಕೆ ಕಂಡುಬರುತ್ತದೆ.

ದಿನಕ್ಕೊಮ್ಮೆ ಸೇವಿಸುವ ಮಾತ್ರೆ, ದಿನವಿಡಿ ಸಕ್ಕರೆ ಅಂಶವನ್ನು ಹತೋಟಿಯಲ್ಲಿಡಲು ಸಹಾಯ ಮಾಡುತ್ತದೆ. ಆದರೆ ಇದರ ಬೆಲೆ ಸದ್ಯಕ್ಕಂತೂ ದುಬಾರಿ. ಸುಮಾರು 45 ರಿಂದ 51 ರೂಪಾಯಿಗಳಷ್ಟು ಇದೆ. ಇದರ ಮತ್ತೊಂದು ಅನುಕೂಲವೆಂದರೆ ಈ ಮಾತ್ರೆಯ ಸೇವನೆಯಿಂದ ಸಾಮಾನ್ಯವಾಗಿ ಲೋ ಬ್ಲಡ್‌ಶುಗರ್‌ (ಹೈಪೋಗ್ಲೈ ಸೀಮಿಯಾ) ಆಗುವುದಿಲ್ಲ.

ಕಳೆದ ಒಂದು ತಿಂಗಳ ಹಿಂದೆ ಬಂದ Teneligliptin ಮಧುಮೇಹ ನಿಯಂತ್ರಿಸಲು ಬಹಳ ಸಹಾಯಕಾರಿ. ಇದು DPP4 Inhibitors ಎಂಬ ಗುಂಪಿಗೆ ಸೇರಿದ ಮಾತ್ರೆಯಾಗಿದೆ. ಬೇರೆ ಮಾತ್ರೆಗಳು ಈ ಗುಂಪಿನಲ್ಲಿ ಸುಮಾರು 40–45 ರೂಪಾಯಿಗಳಷ್ಟು ಇದ್ದರೆ, ಈ ಮಾತ್ರೆ ಕೇವಲ 10–20 ರೂಪಾಯಿಗೆ ಸಿಗುವಂತಾಹದಾಗಿದೆ. ದಿನಕ್ಕೊಮ್ಮೆ ಸೇವಿಸಿದರೆ ಈ ಮಾತ್ರೆ ಉತ್ತಮ ರೀತಿಯಲ್ಲಿ ಮಧುಮೇಹವನ್ನು ಹತೋಟಿಯಲ್ಲಿಡುತ್ತದೆ. ದಿನಪೂರ್ತಿ ಇದರ ಪರಿಣಾಮ ಬೀರಿದರು ಇದರಿಂದ ಲೋ ಬ್ಲಡ್‌ ಶುಗರ್‌ ಆಗುವುದಿಲ್ಲ. ಇನ್ನಿತರೆ ಮಧುಮೇಹದ ಮಾತ್ರೆ ಜೊತೆಗೆ, ಇದು ಉತ್ತಮ ಹೊಂದಾಣಿಕೆಯಾಗುತ್ತದೆ. ಇದರ ದುಷ್ಪರಿಣಾಮ ತೀರ ಗೌಣ.

ಮುಂದಿನ ಮಾರ್ಚ್‌ನಲ್ಲಿ ಮಾರುಕಟ್ಟೆಗೆ ಬರಲಿರುವ ಹೊಸ ಇನ್ಸುಲಿನ್‌ (GLP) ಒಂದು ಕ್ರಾಂತಿಕಾರಕ ಬದಲಾವಣೆ ತರಲಿದೆ. ವಿದೇಶದಲ್ಲಿ ಈಗಾಗಲೇ ಬಂದಿರುವ ಈ ಔಷಧ ವಾರಕ್ಕೊಮ್ಮೆ ತೆಗೆದುಕೊಂಡರೆ ಸಾಕು. ಇಡೀ ವಾರ ಮಧುಮೇಹ ಹತೋಟಿಯಲ್ಲಿಡಲು ಇದು ಸಹಕರಿಸುತ್ತದೆ. ಆದರೆ ಇದನ್ನು ತೆಗೆದುಕೊಂಡ ಕೆಲವು ದಿನಗಳು, ವಾಂತಿ, ಸುಸ್ತು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ ಕಾಲಕ್ರಮೇಣ ಅದು ಸರಿಹೊಂದುತ್ತದೆ. ಅಲ್ಲದೇ ಇದರಿಂದ ಕೂಡ 3–5 ಕೆ.ಜಿ. ಯಷ್ಟು ತೂಕ ಇಳಿಯುತ್ತದೆ. ಆದರೆ ಇದರ ಬೆಲೆ ಬಹಳ ದುಬಾರಿ. ಹೌದು ಇತ್ತೀಚೆಗೆ ಬಂದಿರುವ ಈ ಔಷಧಗಳು ಮಧುಮೇಹವನ್ನು ನಿಯಂತ್ರಿಸಲು ಸಹಕಾರಿ. ದುಷ್ಪರಿಣಾಮ ಕಡಿಮೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT