ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದುಡಿದ ಮನಗಳಿಗೆ ಇಲ್ಲಿದೆ ಸಂಗೀತ ಚಿಕಿತ್ಸೆ

Last Updated 5 ಜನವರಿ 2016, 19:46 IST
ಅಕ್ಷರ ಗಾತ್ರ

ಸಂಪಿಗೆ ಮರಗಳ ನೆರಳು ಮತ್ತು  ಸುವಾಸನೆಗೆ ಹೆಸರಾಗಿರುವ ಬೆಂಗಳೂರಿನ ಮಲ್ಲೇಶ್ವರದಲ್ಲಿ ಹೆಜ್ಜೆಗೊಂದರಂತಿರುವ  ನೃತ್ಯ ಮತ್ತು ಸಂಗೀತ ಶಾಲೆಗಳು ಈ ಪ್ರದೇಶದ ಮೆರುಗನ್ನು ಹೆಚ್ಚಿಸಿವೆ. ಮಲ್ಲೇಶ್ವರದ ಅಂಚಿನಲ್ಲಿರುವ ‘ಹಂಸಧ್ವನಿ ಕುಟೀರ’ ಸಂಗೀತ ಶಾಲೆ ಮತ್ತು ‘ಸ್ವಯಂಭು’ ಕೌನ್ಸೆಲಿಂಗ್‌ ಸೆಂಟರ್‌ನಲ್ಲಿ ಕೇಳಿಸುವ ಸರಿಗಮಪ... ಎಂಬ ಸಂಗೀತದ ಆಲಾಪ, ಮಕ್ಕಳ ಕಲರವ, ವೀಣೆಯಿಂದ ಹೊರಹೊಮ್ಮುವ ನಾದ ಈ ಸೊಬಗನ್ನು ಮತ್ತಷ್ಟು ಹೆಚ್ಚಿಸಿವೆ.  ಹಂಸಧ್ವನಿ ಮತ್ತು ಸ್ವಯಂಭು ಇನ್ನಿತರ ಸಾಮಾನ್ಯ ಸಂಗೀತ ಶಾಲೆ ಮತ್ತು ಕೌನ್ಸೆಲಿಂಗ್ ಸೆಂಟರ್‌ನಂತೆ ಅಲ್ಲ. 

ಸಂಗೀತವನ್ನು ಇಲ್ಲಿ ಬುದ್ಧಿಮಾಂದ್ಯ ಮಕ್ಕಳ  ಚಿಕಿತ್ಸೆಗಾಗಿ ಬಳಸಲಾಗುತ್ತಿದೆ. ‘ಮ್ಯೂಸಿಕ್‌ ಥೆರಪಿ’ ಹೆಸರಿನ ವಿಶಿಷ್ಟ ಚಿಕಿತ್ಸೆಯಿಂದ ಮಕ್ಕಳ ಮನಸ್ಸು ಮತ್ತು ಬುದ್ದಿಗೆ ಸಾಣೆ ಹಿಡಿಯುವ ಕೆಲಸ ದಶಕಗಳಿಂದ ಸದ್ದಿಲ್ಲದೆ ನಡೆಯುತ್ತಿದೆ. ಕೆರಳಿದ ಮನಸನ್ನು ಅರಳಿಸಿ ಜಿಡ್ಡುಗಟ್ಟಿದ ಜೀವನಕ್ಕೊಂದು ಹೊಸ ಚೈತನ್ಯ ತುಂಬುವ ಅಗಾಧ ಶಕ್ತಿ ಸಂಗೀತಕ್ಕಿದೆ.  ಆ ವಿಶಿಷ್ಟ ಶಕ್ತಿಯನ್ನು ಬುದ್ಧಿಮಾಂದ್ಯ ಮಕ್ಕಳ ಮನೋವಿಕಾಸಕ್ಕೆ ವೀಣಾ ವಾದಕಿ ಡಾ. ಗೀತಾ ಭಟ್ ಪರಿಣಾಮಕಾರಿ ಬಳಸುತ್ತಿದ್ದಾರೆ.

ದಶಕದ ಅನುಭವ ಕಲಿಸಿದ ಪಾಠ
ಸಂಗೀತವನ್ನು ಔಷಧಿಯಂತೆ ಬಳಸುವುದೇ? ಎಂದು ಆಶ್ಚರ್ಯದಿಂದ ಪ್ರಶ್ನಿಸಿದರೆ,  ‘ಸಂಗೀತ ಚಿಕಿತ್ಸೆ  ಮೂಲಕ  ಬುದ್ಧಿಮಾಂದ್ಯ ಮಕ್ಕಳ ಬೌದ್ಧಿಕ ವಿಕಸನ ಮತ್ತು ಕಲಿಕಾ ಸಾಮರ್ಥ್ಯ ಹೆಚ್ಚಿಸಬಹುದು ಎನ್ನುವುದನ್ನು 13 ವರ್ಷಗಳ ಅನುಭವದಿಂದ ಕಂಡುಕೊಂಡಿದ್ದೇನೆ. ಅದರಲ್ಲಿ ಯಶಸ್ವಿಯೂ ಆಗಿದ್ದೇನೆ’ ಎನ್ನುತ್ತಾರೆ.

ದೊಡ್ಡವರ  ಮಾನಸಿಕ ಉದ್ವೇಗ, ಖಿನ್ನತೆ, ಕೋಪ ಶಮನ ಮಾಡುವ ಮಾಂತ್ರಿಕ ಶಕ್ತಿಯೂ ಸಂಗೀತಕ್ಕಿದೆ. ಯಾವ ಅಡ್ಡಪರಿಣಾಮದ ಭೀತಿ ಮತ್ತು ಹೆಚ್ಚಿನ ಖರ್ಚಿಲ್ಲದೆ ಮನೋರೋಗಗಳನ್ನು ಸಂಗೀತ ಚಿಕಿತ್ಸೆ ಮೂಲಕ ಗುಣಪಡಿಸಬಹುದು ಎನ್ನುತ್ತಾರೆ  ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಗೀತಾ.

ಕರ್ನಾಟಕ ಸಂಗೀತ ಮತ್ತು ವೀಣಾ ವಾದನದಲ್ಲಿ ವಿದ್ವತ್‌ ಪದವಿ ಪಡೆದಿರುವ ವಿದುಷಿ. ತಮ್ಮ ಮನೋವಿಜ್ಞಾನ ಮತ್ತು ಸಂಗೀತ ಜ್ಞಾನವನ್ನು ಬೆರೆಸಿ ಬುದ್ಧಿಮಾಂದ್ಯ ಮಕ್ಕಳ ಚಿಕಿತ್ಸೆಗೆ ಬಳಸುತ್ತಿದ್ದಾರೆ. ನಡವಳಿಕೆ ಸಮಸ್ಯೆ, ಭಾವನಾತ್ಮಕ ಸಂವೇದನೆ ಮತ್ತು ಬುದ್ಧಿಮತ್ತೆ ಕೊರತೆ ಇರುವ ಮಕ್ಕಳಿಗಾಗಿಯೇ ‘ಸ್ವಯಂಭು’  ಕೌನ್ಸೆಲಿಂಗ್‌ ಸೆಂಟರ್‌ನಲ್ಲಿ ಸಂಗೀತ ಚಿಕಿತ್ಸೆ ನೀಡುತ್ತಿದ್ದಾರೆ.

ಸಾಹಸದ ಕೆಲಸ
ಭಾವ, ರಾಗ, ತಾಳ, ಲಯಗಳಿಗೆ  ಮನೋ ವಿಕಾರವನ್ನು ಶಮನಗೊಳಿಸುವ ವಿಶಿಷ್ಟ ಶಕ್ತಿ ಇದೆ. ಮನೋಚಿಂತನೆಗೆ ಉತ್ತೇಜನ ನೀಡುವ ಮೂಲಕ ವಿಶಿಷ್ಟ ಸಾಮರ್ಥ್ಯದ ಮಕ್ಕಳ ಮನಸ್ಸಿನ ಮೇಲೆ ಬೇಗ ಪ್ರಭಾವ ಬೀರುತ್ತವೆ. ನರ ಸಂಬಂಧಿ ಸಮಸ್ಯೆ, ಕಲಿಕಾ ಮತ್ತು ಗ್ರಹಿಕಾ ಸಮಸ್ಯೆ, ಭಾವನಾತ್ಮಕ ಸಂವೇದನೆಗಳ ಸಮಸ್ಯೆ, ವರ್ತನೆಯ ದೋಷದಿಂದ ಬಳಲುತ್ತಿರುವ ಮಕ್ಕಳನ್ನು ಒಟ್ಟುಗೂಡಿಸಿ ಸಂಗೀತ ಕಚೇರಿ ಏರ್ಪಡಿಸಿದ್ದಾರೆ.  ಇದು ಸಾಧ್ಯವಾದದ್ದು ‘ಸಂಗೀತ ಚಿಕಿತ್ಸೆ’ಯ ಫಲಿತಾಂಶ ಎನ್ನುತ್ತಾರೆ ಅವರು.

ಇಂಥ ಮಕ್ಕಳೊಂದಿಗೆ ವ್ಯವಹರಿಸುವಾಗ  ಅಗಾಧವಾದ ತಾಳ್ಮೆ, ಸಹನೆ, ಸಮಾಧಾನ ಬೇಕಾಗುತ್ತದೆ.  ಮಕ್ಕಳ ಮನೋವಿಜ್ಞಾನ, ನರ ಸಂಗೀತ ಶಾಸ್ತ್ರ ಮತ್ತು ಚಿಕಿತ್ಸಾ ವಿಧಾನ ಕುರಿತು ಅನೇಕ ಪತ್ರಿಕೆಗಳಲ್ಲಿ ಮಕ್ಕಳು ಮತ್ತು ಪೋಷಕರಿಗೆ ಉಪಯುಕ್ತ ಮಾರ್ಗದರ್ಶನ ನೀಡುವ ಲೇಖನ ಬರೆದಿದ್ದಾರೆ.

ವಿಶ್ವಭಾಷೆ, ಧಾನ್ಯದ ಪರಿ
‘ಮೊದಲನೆಯದಾಗಿ ಸಂಗೀತಕ್ಕೆ ಗಡಿ, ಭಾಷೆ, ಜಾತಿ, ಧರ್ಮದ ಬೇಲಿಗಳಿಲ್ಲ. ಅದು ಎಲ್ಲರೂ ಸುಲಭವಾಗಿ ಅರ್ಥವಾಗುವ ವಿಶ್ವ ಭಾಷೆ. ಸಂಗೀತ ಒಂದು ರೀತಿಯಲ್ಲಿ ಧ್ಯಾನವೂ ಹೌದು.  ಇದನ್ನೇ ಸಂಗೀತ ಚಿಕಿತ್ಸೆಯಲ್ಲಿ ಬಳಸಿಕೊಳ್ಳುತ್ತೇವೆ’ ಎನ್ನುತ್ತಾರೆ ಅವರು.

‘ಸಂಗೀತ ಚಿಕಿತ್ಸೆ ಎಂದರೆ ಸಂಗೀತ ಕೇಳಿಸಿಕೊಂಡು ಮರೆತು ಬಿಡುವುದಲ್ಲ.   ದೈಹಿಕ, ಮಾನಸಿಕ ಹಾಗೂ  ಭಾವನಾತ್ಮಕವಾಗಿ ರೋಗಿಯ ಮನಸ್ಸಿನ ಮೇಲಾಗುವ ಅವ್ಯಕ್ತ ಪರಿಣಾಮಗಳನ್ನು ಸೂಕ್ಷ್ಮವಾಗಿ ಗಮನಿಸಿ ಅದಕ್ಕೆ ತಕ್ಕಂತೆ   ರೋಗ ವಾಸಿ ಮಾಡುವ ವಿಶಿಷ್ಟ ಚಿಕಿತ್ಸಾ ವಿಧಾನ ಇದು.  ಬೇಸರ, ಕ್ರೋಧ, ನೋವು, ಭಯ, ಸಂತಸ ಹೀಗೆ ನವರಸಗಳನ್ನು ನಿಯಂತ್ರಿಸುವಲ್ಲಿ ಸಂಗೀತದ ರಾಗ, ತಾಳ, ಲಯಗಳು ಪ್ರಮುಖ ಪಾತ್ರ ವಹಿಸುತ್ತವೆ ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ ಎನ್ನುತ್ತಾರೆ ಗೀತಾ ಭಟ್‌.    

ವರ್ಷಗಳ ಪರಿಶ್ರಮ
ಸಂಗೀತ ಚಿಕಿತ್ಸೆ ಒಂದು ದಿನ ಅಥವಾ ತಿಂಗಳಲ್ಲಿ ಫಲಿತಾಂಶ ನೀಡುವ ಕ್ರಿಯೆ ಅಲ್ಲ. ವರ್ಷಗಟ್ಟಲೆ ನಡೆಯುವ ಪ್ರಕ್ರಿಯೆ. ಸಾಕಷ್ಟು ತಾಳ್ಮೆ, ಪರಿಶ್ರಮವನ್ನು ಇದು ಬೇಡುತ್ತದೆ. ಇಂತಿಂಥ ಕಾಯಿಲೆಗೆ ಇದೇ ರೀತಿಯ ಸಂಗೀತ, ರಾಗ, ತಾಳ ಪರಿಣಾಮಕಾರಿ ಮದ್ದು ಎಂದು ನಿಖರವಾಗಿ ಹೇಳುವಂತಿಲ್ಲ. ನಿರ್ದಿಷ್ಟ ತರಂಗಗಳು ರೋಗಿಯ ಮೆದುಳಲ್ಲಿಯ ಆಡಿಟರಿ ಸೆಂಟರ್ ಪ್ರವೇಶಿಸಿದಾಗ ಅದಕ್ಕೆ ಆತ ಯಾವ ರೀತಿ ಸ್ಪಂದಿಸುತ್ತಾನೆ. ಯಾವ ರಾಗ ಕೇಳಿದರೆ ಹೇಗೆ ವರ್ತಿಸುತ್ತಾನೆ ಎಂಬುವುದರ ಮೇಲೆ ಚಿಕಿತ್ಸೆ ನಿರ್ಧಾರವಾಗುತ್ತದೆ’ ಎಂಬುವುದನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುತ್ತಾರೆ.

ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಂಗೀತ ಚಿಕಿತ್ಸೆ ಹೆಚ್ಚು ಜನಪ್ರಿಯವಾಗುತ್ತಿದೆ. ಶಾಲೆಗಳಲ್ಲಿ ಸಂಗೀತ ಚಿಕಿತ್ಸೆಗಾಗಿ ವಿಶೇಷ ಪಠ್ಯಕ್ರಮ ರೂಪಿಸಲಾಗಿದೆ. ಆದರೆ, ಎಲ್ಲ ಬಗೆಯ ಸಂಗೀತ ಪ್ರಕಾರಗಳ ತಾಯಿಯಾದ ನಮ್ಮ  ದೇಶದಲ್ಲಿ ಆ ಬಗ್ಗೆ ಇನ್ನೂ ಜಾಗೃತಿ ಮೂಡಿಲ್ಲ ಎನ್ನುವುದು ಡಾ. ಗೀತಾ ಭಟ್ ಅವರ ನೋವಿನ ಮಾತು.

‘ನಾದಪ್ರಯತ್ನ’
ಜನವರಿ 8ರಂದು ಬೆಂಗಳೂರಿನ ಮಲ್ಲೇಶ್ವರದ ಸೇವಾಸದನದಲ್ಲಿ ‘ನಾದಪ್ರಯತ್ನ’ ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ. ‘ಮ್ಯೂಸಿಕ್‌ ಫಾರ್ ಸೋಲ್‌ ಆ್ಯಂಡ್‌ ಆಲ್‌’ ಎಂಬ ಧ್ಯೇಯದೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಸಂಗೀತ ಚಿಕಿತ್ಸೆಯಿಂದ ಚೇತರಿಸಿಕೊಂಡ ಮತ್ತು ಚೇತರಿಸಿಕೊಳ್ಳುತ್ತಿರುವ ವಿಶೇಷ ಸಾಮರ್ಥ್ಯದ ಮಕ್ಕಳು, ದೈಹಿಕ ಹಾಗೂ ಮಾನಸಿಕ ನ್ಯೂನತೆ ಮಕ್ಕಳ ಪ್ರತಿಭೆ ಅನಾವರಣಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT