ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌನದ ಮಾತು ಮಾತಿನ ಮೌನ

Last Updated 1 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಮೊನ್ನೆಯಷ್ಟೇ ದೀಪಾವಳಿಯ ಹಬ್ಬ ಮುಗಿದಿದೆ. ಹಬ್ಬ ಮುಗಿದಿದ್ದರೂ ಪಟಾಕಿಯ ಸದ್ದು ಅಲ್ಲಲ್ಲಿ ಇನ್ನೂ ಕೇಳಿಸುತ್ತಲೇ ಇದೆ. ಬೆಳಕಿನ ಹಬ್ಬವಾದ ದೀಪಾವಳಿ, ಬೆಳಕಿಗಿಂತ ಶಬ್ದದ ಹಬ್ಬವಾಗಿ ಮಾರ್ಪಾಡಾಗಿ ಹಲವು ವರ್ಷಗಳೇ ಆದವು. ಪಟಾಕಿಯನ್ನು ಸಿಡಿಸುವುದರಿಂದ ಹೊರಬರುವ ಸದ್ದಿನಿಂದ ಹಲವರಿಗೆ ಖುಷಿಯುಂಟಾದರೆ ಇನ್ನೂ ಹಲವರಿಗೆ ಅದು ಕಿರಿಕಿರಿ ಮತ್ತು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ.

ದೀಪಾವಳಿಯ ಸಮಯದ ಪಟಾಕಿಯ ಸದ್ದು ಮಾತ್ರವಲ್ಲ  ನಮ್ಮ ನಿತ್ಯಜೀವನದಲ್ಲಿ ಗಮನಿಸಿದರೆ, ಸುತ್ತಮುತ್ತ ಮೌನ ಎಂದೂ ಇರುವುದಿಲ್ಲ, ಯಾವಾಗಲೂ ಒಂದಲ್ಲ ಒಂದು ಶಬ್ದ ಕಿವಿಗೆ ಬೀಳುತ್ತಲೇ ಇರುತ್ತದೆ. ಮನೆಯ ಹೊರಗಾದರೆ ವಾಹನಗಳೂ ಯಂತ್ರಗಳೂ ಸತತವಾಗಿ ಸದ್ದು ಮಾಡುತ್ತಲೇ ಇದ್ದರೆ, ಮನೆಯ ಒಳಗೆ ಬೇರೆ ಯಾವ ಸದ್ದು  ಇಲ್ಲದಿದ್ದರೂ ನಮ್ಮ  ಮನೆಯ ಜನರ ಮಾತಿನಿಂದಲಂತೂ ತಪ್ಪಿಸಿಕೊಳ್ಳುವುದು ಅಸಾಧ್ಯ.

ಹಾಗಾದರೆ ನಮ್ಮ ಸುತ್ತಮುತ್ತಲಿನ ಶಬ್ದದಿಂದ ದೂರಹೋಗಲು ಯಾರೂ ಇರದ ಒಂದು ನಿರ್ಜನಪ್ರದೇಶವನ್ನು ಆಯ್ದುಕೊಂಡು ಅಲ್ಲಿ ಒಂದು ಕೋಣೆಯೊಳಗೆ ಸೇರಿ, ಅದರ ಕಿಟಕಿ ಬಾಗಿಲನ್ನು ಭದ್ರಪಡಿಸಿ ಕಣ್ಣುಮುಚ್ಚಿ ಕುಳಿತರೆ ನಿಃಶಬ್ದವಾದ ವಾತಾವರಣ ಸಿಗುತ್ತದೆ ಎನಿಸುತ್ತದೆ. ಆದರೆ ಹಾಗೆ ಮಾಡಿರೆ ನಮಗೆ ವ್ಯತಿರಿಕ್ತವಾದ ಅನುಭವವೇ ಆಗುವುದು.

ನೀರವತೆಯಲ್ಲಿ ಕುಳಿತಾಗ ಸುತ್ತಮುತ್ತಲಿನ ಶಬ್ದಗಳೆಲ್ಲ ನಿಂತಾಗ, ನಮ್ಮ ಮನಸ್ಸಿನ ಶಬ್ದ ಕೇಳುತ್ತದೆ. ಅದು ಸತತವಾಗಿ ಮಾತನಾಡಲು ಪ್ರಾರಂಭಿಸುತ್ತದೆ. ನಮ್ಮ ಕಣ್ಣಮುಂದೆ ಎಂದೋ ನೋಡಿದ ಸಿನಿಮಾದ ಹಾಡು, ಯಾವುದೋ ಸಭೆಯಲ್ಲಿ ನೋಡಿದ ವ್ಯಕ್ತಿ, ನಮಗೆ ಇಷ್ಟವಾದ ತಿಂಡಿಗಳು ಎಲ್ಲವೂ ಒಂದರಮೇಲೊಂದು ಬಂದು ತಮ್ಮ ಮಾತನ್ನು ಎಡೆಬಿಡದೆ ನಡೆಸುತ್ತವೆ. ಆಗಲೇ ತಿಳಿಯುವುದು ನಮಗೆ ಕೇಳುತ್ತಿರುವ ಸದ್ದು ಹೊರಗಿನದಕ್ಕಿಂತ ಹೆಚ್ಚಾಗಿ ಒಳಗಿನದು ಎಂದು.

ಎಲ್ಲ ಪರಂಪರೆಗಳಲ್ಲೂ ಇದೇ ಕಾರಣಕ್ಕೆ ಮಾತಿಗಿಂತ ಮೌನಕ್ಕೆ ಹೆಚ್ಚಿನ ಮೌಲ್ಯ ದೊರಕಿದೆ. ಈ ಮೌನ ಹಲವು ಜಗಳಗಳನ್ನು ತಡೆಯಬಹುದು, ಸಮ್ಮತಿ-ಅಸಮ್ಮತಿಯ ಅಡಕತ್ತರಿಯಲ್ಲಿ ನಾವು ಸಿಲುಕಿಕೊಂಡು ಏನು ಜವಾಬು ಕೊಡುವುದು ಎಂಬ ಸಂದಿಗ್ಧ ವಾದಾಗ ನಮ್ಮ ಕೈಹಿಡಿಯಬಹುದು. ಹಾಗಾದರೆ ಮಾತನಾಡದೆ ಮೌನದಿಂದಿರುವುದು ಅಷ್ಟು ಸುಲಭವೆ? ಅದನ್ನು ತಿಳಿಯಬೇಕಾದರೆ, ಮೌನದಿಂದ ಕೂರುವ ಪ್ರಯತ್ನ ಮಾಡಬೇಕು.

ಒಮ್ಮೆ ಹೀಗೆ ನಾಲ್ವರು ಭಿಕ್ಷುಗಳು, ಒಂದು ದೀಪವನ್ನು ನೋಡುತ್ತಾ ಎರಡು ವಾರ ಕಾಲ ಸತತವಾಗಿ ಮೌನದಿಂದ ಕುಳಿತುಕೊಳ್ಳುವ ತೀರ್ಮಾನ ಮಾಡಿದರು. ಬೆಳಗ್ಗಿನಿಂದ ಸಂಜೆಯವರೆಗೂ ಯಾರೂ ಮೌನ ಮುರಿಯಲಿಲ್ಲ. ಆದರೆ ಸಂಜೆಯಾಗುತ್ತಲೇ ದೀಪದ ಎಣ್ಣೆ ಕಡಿಮೆಯಾಗಿ, ದೀಪದ ಜ್ಯೋತಿ ಕಂಪಿಸಲು ಪ್ರಾರಂಭಿಸಿತು. ಇದನ್ನು ನೋಡಿದ ಒಬ್ಬ ಭಿಕ್ಷು, 'ಅಯ್ಯೋ ದೀಪ ಆರುತ್ತಿದೆ' ಎಂದು ಉದ್ಗಾರ ತೆಗೆದ. ಅಲ್ಲಿಯವರೆಗೂ ಮೌನದಿಂದಲೇ ಇದ್ದ ಇನ್ನೊಬ್ಬ ಭಿಕ್ಷುವು, 'ನಾವು ಮೌನವ್ರತದಲ್ಲಿದ್ದೇವೆ, ನೀ ಹೇಗೆ ಮಾತನಾಡಿದೆ' ಎನ್ನುತ್ತಾ ಪ್ರಶ್ನಾರ್ಥಕವಾಗಿ, ಮೊದಲನೆಯ ಭಿಕ್ಷುವನ್ನು ನೋಡಿದೆ.

ಮೂರನೇ ಭಿಕ್ಷುವಿಗೆ ಕೋಪ ಏರಿ 'ನೀವಿಬ್ಬರೂ ಏಕೆ ಮಾತನಾಡಿದಿರಿ?' ಎಂದು ಚೀರಿ ತನ್ನ ಮೌನ ಮುರಿದ. ಇಷ್ಟನ್ನೂ ನೋಡುತ್ತಿದ್ದ ಕೊನೆಯ ಭಿಕ್ಷುವಿಗೆ ಹಿಗ್ಗೋ ಹಿಗ್ಗು. 'ಅಬ್ಬಾ ನಾನೊಬ್ಬನೇ ಮಾತನಾಡಲಿಲ್ಲ' ಎಂದು ಖುಷಿಯಿಂದ ಹೇಳಿದ. ಹೀಗೆ ಎರಡು ವಾರ ಮೌನದಿಂದ ಕುಳಿತುಕೊಳ್ಳಬೇಕಿದ್ದ ಭಿಕ್ಷುಗಳು ಒಂದೇ ದಿನದಲ್ಲಿ ತಮ್ಮ ಮೌನ ಮುರಿದರು.

ಈಗ ಈ ಕಥೆಯನ್ನು ಮತ್ತೆ ಗಮನಿಸೋಣ. ಈ ನಾಲ್ವರೂ ತಮ್ಮ ಮೌನ ಮುರಿದದ್ದು ಬೇರೆ ಬೇರೆ ಕಾರಣಗಳಿಗೆ. ದೀಪ ಆರುತ್ತಿದೆ ಎಂದು ವಿಚಲಿತಗೊಂಡು ಮಾತನಾಡಿದ ಮೊದಲ ಭಿಕ್ಷು, ಲೌಕಿಕ ವಸ್ತುವಿನ ಪ್ರಲೋಭನೆಗೆ ಒಳಗಾದವನು. ಆದರೆ ಎರಡನೆಯ ಭಿಕ್ಷುವಿಗೆ, ಲೌಕಿಕ ಸಂಗತಿಗಳು ಬಾಧಿಸಲಿಲ್ಲ. ಅವನನ್ನು ಕಾಡಿದ್ದು ನಿಯಮವನ್ನು ಮೀರಿದ ಮೊದಲನೆಯ ಭಿಕ್ಷುವಿನ ನಡವಳಿಕೆ. ಅವನ ಗಮನವಿದ್ದಿದ್ದು ಮೌನವ್ರತಕ್ಕಿಂತಲೂ ಹೆಚ್ಚಾಗಿ ಅದನ್ನು ಪಾಲಿಸುವ ನಿಯಮಗಳ ಬಗ್ಗೆ.

ಇನ್ನು ಮೂರನೆಯ ಭಿಕ್ಷು ತುತ್ತಾಗಿದ್ದದ್ದು ಮಾನವಸಹಜವಾದ ಕೋಪಕ್ಕೆ. ಲೌಕಿಕ ವಿಷಯಗಳು, ನಿಯಮವನ್ನು ಮೀರುವುದು, ಈ ಎಲ್ಲಕ್ಕಿಂತಲೂ ಅವನ ಭಾವನೆಗಳು ಅವನನ್ನು ಆಳುವುದರಿಂದ ಅವನು ತಪ್ಪಿಸಿಕೊಳ್ಳಲಾಗಲಿಲ್ಲ. ಆದರೆ ಕೊನೆಯ ಭಿಕ್ಷುವಿನ ಸ್ಥಿತಿ ಎಲ್ಲಕ್ಕಿಂತಲೂ ಭಿನ್ನ. ಅವನು ಮೌನ ಮುರಿಯಲು ಕಾರಣವಾಗಿದ್ದು ತಾನು ಇತರರೆಲ್ಲರಿಗಿಂತಲೂ ಶ್ರೇಷ್ಠ ಎಂಬ ಅಹಂಕಾರ.

ಈ ನಾಲ್ವರೂ ಭಿಕ್ಷುಗಳು ನಮ್ಮೊಳಗೆ ಯಾವಾಗಲೂ ವಾಸ ಮಾಡಿ ನಮ್ಮ ಮಾತುಗಳನ್ನು ಪ್ರಚೋದಿಸುತ್ತಿರುತ್ತಾರೆ. ನಮಗೆ ಮಾತನಾಡುವ ಪ್ರಚೋದನೆ ಸಿಗುವುದು ಮುಖ್ಯವಾಗಿ ನಮ್ಮ ಯಾವುದೂ ವಿಷಯವನ್ನು ಇತರರೊಂದಿಗೆ ಹಂಚಿಕೊಳ್ಳಬೇಕೆಂಬ ಹಪಾಹಪಿಯಿಂದ. ಈ ಪ್ರಚೋದನೆಗೆ ಕಾರಣ, ಎರಡನೆಯ ಭಿಕ್ಷುವಿನಂತೆ ‘ನೀನು ಸರಿ ಇಲ್ಲ’ ಎಂದು ಇತರರ ತಪ್ಪನ್ನು ತೋರಿಸುವ ಹಂಬಲ ಅಥವಾ ನಾಲ್ಕನೇ ಭಿಕ್ಷುವಿನಂತೆ ‘ನಾನು ನಿನಗಿಂತ ಶ್ರೇಷ್ಠ’ ಎಂಬ ಅಹಂಕಾರ. ಹಾಗಾದರೆ ಮನಸ್ಸಿನ ಒಳಗಿನ ನಿಃಶಬ್ದತೆಯನ್ನು ಸಾಧಿಸಲು ಇರುವ ಸೂತ್ರ, ಲೌಕಿಕದ ವಿಷಯಗಳು ನಮ್ಮನ್ನು ಅತಿಯಾಗಿ ಕಾಡದಂತೆ ಎಚ್ಚರ ವಹಿಸಿ ಅಹಂಕಾರವನ್ನು ಬಿಡುವುದು. ಈ ಸೂತ್ರ ಕೇಳಲು ಸರಳವೆನಿಸಿದರೂ ಪಾಲಿಸಲು ಕಠಿಣವಾದದ್ದು. ಏಕೆಂದರೆ ನಮ್ಮೊಳಗೆ ಈ ನಾಲ್ಕು ಭಿಕ್ಷುಗಳು ಯಾವಾಗಲೂ ಇದ್ದೇ ಇರುತ್ತಾರೆ!

ಮೌನದ ಮಾತು ಇದಾದರೆ, ಮಾತಿನ ಕಥೆಯೇ ಬೇರೆ ಇದೆ. ಮನಸ್ಸು ಮಾತನ್ನು ಅಷ್ಟು ಸುಲಭವಾಗಿ ನಿಲ್ಲಿಸುವುದಿಲ್ಲ ಎಂಬುದನ್ನು ನೋಡಿದ್ದೇವೆ. ಆದರೆ ಮನಸಿನಲ್ಲಿ ಮೂಡುವ ಈ ಮಾತಿಗೆ ಒಂದು ನಿರ್ದಿಷ್ಟ ಕ್ರಮ ಇರುವುದಿಲ್ಲ. ಅದನ್ನು ಒಂದು ಕ್ರಮದಲ್ಲಿ ಜೋಡಿಸಿ ಎಲ್ಲರಿಗೂ ಅರ್ಥವಾಗುವಂತೆ ಮತ್ತು ಒಪ್ಪಿತವಾಗುವಂತೆ ಹೇಳುವುದು ಒಂದು ಕಲೆ. ನಾವು ಹಲವು ಭಾಷಣಕಾರರ ಮಾತುಗಳನ್ನು ಕೇಳಿರುತ್ತೇವೆ, ಆದರೆ ನಮಗೆ ಹಿತವೆನಿಸುವುದು ಮತ್ತು ಇಷ್ಟವಾಗುವುದು ಕೆಲವರ ಮಾತುಗಳು ಮಾತ್ರ.

ಎಷ್ಟೋ  ಭಾಷಣಕಾರರ ಮಾತುಗಳು, ಶ್ರೋತೃಗಳು ತೂಕಡಿಸುವಂತೆ ಮಾಡಿದರೆ ಇನ್ನು ಹಲವರ ಮಾತುಗಳು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.  ಅವರು ಆಡುತ್ತಿರುವ  ಮಾತುಗಳು  ಸುಲಭವಾಗಿ  ನಮಗೆ ಸತ್ಯವೆಂದು ಖಾತ್ರಿಯೂ ಆಗುತ್ತದೆ. ಹೀಗೆ ಪರಿಣಾಮಕಾರಿಯಾಗಿ ಮಾತನಾಡುವ ಎಲ್ಲರಲ್ಲೂ  ನಾವು ಸಾಮಾನ್ಯವಾಗಿ ಗಮನಿಸಬಹುದಾದ ಅಂಶ, ಅವರು ಉಪಯೋಗಿಸುವ ಬಾಡಿ ಲ್ಯಾಂಗ್ವೇಜ್ (Body Language). ಇದನ್ನು ದೇಹಭಾಷೆ ಎಂಬ ಹೆಸರಿನಿಂದ ಬೇಕಾದರೆ ಕರೆಯಬಹುದು.

ಹಲವು ಸಂಶೋಧನೆಗಳ ಪ್ರಕಾರ ಈ ದೇಹಭಾಷೆಯು ನಮ್ಮ ಮಾತಿನ ಸುಮಾರು ಶೇ. 90ರಷ್ಟು ಭಾಗವಾಗಿರುತ್ತದೆ. ಇದರಲ್ಲಿ ನಾವು ಮಾತನಾಡುವಾಗ ನಮ್ಮ ಹಾವಭಾವಗಳು, ಧ್ವನಿಯ ಏರಿಳಿತ, ನಾವು ಉಪಯೋಗಿಸುವ ಯಾವುದಾದರೂ ವಸ್ತುಗಳು ಎಲ್ಲವೂ ಸೇರಿರುತ್ತವೆ. ಹೀಗೆ ನಮಗೇ ತಿಳಿಯದಂತೆ ನಮ್ಮ ಪದಗಳಿಗಿಂತ ಮೊದಲೇ ನಮ್ಮ ದೇಹ ವಿಷಯವನ್ನು ಹೇಳಿಯಾಗಿರುತ್ತದೆ. ಇದನ್ನೇ Non Verbal Communication (ಮೌಖಿಕೇತರ ಸಂವಹನ) – ಎಂದು ಕರೆಯುತ್ತಾರೆ.

ಈ ದೇಹಭಾಷೆಯ ಬಗ್ಗೆ ಹಲವು ಸಂಶೋಧನೆಗಳು ನಡೆದಿವೆ ಮತ್ತು ಇಂದಿಗೂ ನಡೆಯುತ್ತಿವೆ. ಈ ಸಂಶೋಧನೆಗಳಿಂದ ದೊರಕಿರುವ ಕೆಲವು ಮಾಹಿತಿಗಳು ನಿಜಕ್ಕೂ ಕುತೂಹಲಕಾರಿ ಮತ್ತು ನಮ್ಮೆದುರಿನ ವ್ಯಕ್ತಿಯನ್ನು ಅಳೆಯಲು ಸಹಕಾರಿ. ನಾವು ಮಾತನಾಡುತ್ತಿರುವ ವ್ಯಕ್ತಿ ತನ್ನ ಕೈಬೆರಳನ್ನು ಆಡಿಸುತ್ತಾ, ಮೇಜನ್ನು ಕುಟ್ಟುತ್ತಿದ್ದಾನೆ ಎಂದರೆ ಅವನಿಗೆ ಅಸಹನೆ ಮೂಡುತ್ತಿದೆ, ಅಶಾಂತನಾಗುತ್ತಿದ್ದಾನೆ ಎಂದೇ ಅರ್ಥ.

ಇನ್ನು ಕೆಲವರು ಮಾತನಾಡುವಾಗ ತಮ್ಮ ತೋಳುಗಳನ್ನು ಮಡಿಸಿಕೊಂಡಿರುವುದನ್ನು ನೋಡಿರಬಹುದು. ಮಡಿಸಿದ ತೋಳುಗಳು ರಕ್ಷಣಾತ್ಮಕತೆಯ ಸಂಕೇತ. ಅವರು ನಮ್ಮ ಮಾತುಗಳನ್ನು ಒಪ್ಪಿದ್ದಾರೆ, ನಂಬಿದ್ದಾರೆ  ಎಂದು ಮಾತಿನಲ್ಲಿ ಹೇಳುತ್ತಿದ್ದರೂ ಅವರ ದೇಹವು ವ್ಯತಿರಿಕ್ತವಾದದ್ದನ್ನು ಸೂಚಿಸುತ್ತಿರುತ್ತದೆ. ಇನ್ನೊಮ್ಮೆ ಯಾರೊಡನೆಯಾದರೂ ಮಾತನಾಡುವಾಗ ಸೂಕ್ಷ್ಮವಾಗಿ ಗಮನಿಸಿ, ಸಾಧಾರಣವಾಗಿ ಸುಳ್ಳು ಹೇಳುವವನು ಅವನಿಗೇ ತಿಳಿಯದಂತೆ ತನ್ನ ಮೂಗನ್ನು ಆಗಾಗ ಮುಟ್ಟುತ್ತಾನೆ. ಸಂವಹನದ ಸಂದರ್ಭದಲ್ಲಿ ಈ ರೀತಿಯ ಸ್ವಾರಸ್ಯಕಾರಿ ವಿಷಯಗಳನ್ನು ದೇಹವು ನಮ್ಮ ಆಜ್ಞೆಗೆ ಕಾಯದೆ ಹೊರಹಾಕುತ್ತಿರುತ್ತದೆ.

ಹೀಗೆ ಮಾತು ಮತ್ತು ಮೌನದ ಬಗ್ಗೆ ಹೆಚ್ಚು ವಿಚಾರ ಮಾಡಿದಂತೆಲ್ಲಾ ಮೌನವೆಂಬುದು ಮಾತಿನ ಅಭಾವದ ಸ್ಥಿತಿ ಮತ್ತು ಮಾತೆಂಬುದು ವಿಚಾರಗಳನ್ನು ಒಬ್ಬರಿಂದ ಮತ್ತೊಬ್ಬರಿಗೆ ಸರಿಯಾಗಿ ವರ್ಗಾಯಿಸುವಲ್ಲಿ ಸರ್ವಶಕ್ತ ಎನ್ನುವುದು ಅರ್ಧಸತ್ಯ ಮಾತ್ರ ಎಂಬುದು ತಿಳಿಯುತ್ತದೆ. ಕೆಲವು ವಿಚಾರಗಳನ್ನು ಮಾತಿಗಿಂತ ಮೌನವೇ ಹೆಚ್ಚು ಶಕ್ತವಾಗಿ ಮತ್ತು ಸಮಗ್ರವಾಗಿ ಸಂವಹಿಸುತ್ತದೆ. ಅದಕ್ಕೆ ನಮ್ಮ ಉಪನಿಷತ್ಕಾರರು ಪರಬ್ರಹ್ಮನನ್ನು ‘ಮಾತು ತಲುಪದ ಸ್ಥಳ’ ಎಂದಿದ್ದು (ಯತೋ ವಾಚೋ ನಿವರ್ತನ್ತೇ). ಆಧ್ಯಾತ್ಮಿಕ ವಿಷಯಗಳು ಏನೇ ಇರಲಿ, ನಮ್ಮ ನಿತ್ಯ ಜೀವನದ ಶಾಂತಿ ಮತ್ತು ನೆಮ್ಮದಿಗೆ ಮಾತ್ರ ಮಾತು ಮತ್ತು ಮೌನ ಎರಡರ ಹಿತ–ಮಿತ ಉಪಯೋಗ ಅಗತ್ಯ.

ಸಂವಹನದ ಸಂದರ್ಭದಲ್ಲಿ ದೇಹವು ನಮ್ಮ ಆಜ್ಞೆಗೆ ಕಾಯದೆ ಕೆಲವು ಸ್ವಾರಸ್ಯಕಾರಿ ವಿಷಯಗಳನ್ನು ಹೊರಹಾಕುತ್ತಿರುತ್ತದೆ...
*ನಾವು ಮಾತನಾಡುತ್ತಿರುವ ವ್ಯಕ್ತಿ ತನ್ನ ಕೈಬೆರಳನ್ನು ಆಡಿಸುತ್ತಾ, ಮೇಜನ್ನು ಕುಟ್ಟುತ್ತಿದ್ದಾನೆ ಎಂದರೆ ಅವನಿಗೆ ಅಸಹನೆ ಮೂಡುತ್ತಿದೆ, ಅಶಾಂತನಾಗುತ್ತಿದ್ದಾನೆ ಎಂದೇ ಅರ್ಥ.
*ಇನ್ನು ಕೆಲವರು ಮಾತನಾಡುವಾಗ ತಮ್ಮ ತೋಳುಗಳನ್ನು ಮಡಿಸಿಕೊಂಡಿರುತ್ತಾರೆ. ಮಡಿಸಿದ ತೋಳುಗಳು ರಕ್ಷಣಾತ್ಮಕತೆಯ ಸಂಕೇತ.
*ಸುಳ್ಳು ಹೇಳುವವನು ಅವನಿಗೇ ತಿಳಿಯದಂತೆ ತನ್ನ ಮೂಗನ್ನು ಆಗಾಗ ಮುಟ್ಟುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT