ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದಾನದಿಂದ ಆರೋಗ್ಯ ವೃದ್ಧಿ

Last Updated 10 ಜೂನ್ 2016, 19:30 IST
ಅಕ್ಷರ ಗಾತ್ರ

‘ರಕ್ತದಾನ ಮಾಡಿ ಇನ್ನೊಂದು ಜೀವಕ್ಕೆ ಉಡುಗೊರೆಯನ್ನು ನೀಡಿ.’ ಇದು 2013ರ ವಿಶ್ವ ರಕ್ತದಾನಿಗಳ ದಿನದ ಧ್ಯೇಯವಾಕ್ಯ. ನೀವು ಮಾಡುವ ರಕ್ತದಾನಕ್ಕೆ ಜೀವದಾನದ ಶಕ್ತಿ ಇದೆ. ಆಯುರ್ವೇದದಲ್ಲೂ ರಕ್ತದ ಮಹತ್ವವನ್ನು ವರ್ಣಿಸುವಾಗ ‘ರಕ್ತಂ ಜೀವ ಇತಿ ಸ್ಥಿತಿ’ ಎಂದಿದ್ದಾರೆ. ಅಂದರೆ ರಕ್ತವನ್ನು ‘ಜೀವ’ ಎಂದಿದ್ದಾರೆ.

ಕೆಲವು ದಿನಗಳ ಹಿಂದೆ ನನ್ನ ಸ್ನೇಹಿತನ ಸಂಬಂಧಿಕರೊಬ್ಬರ ಮಗುವಿಗೆ ತುರ್ತು ಶಸ್ತ್ರಚಿಕಿತ್ಸೆಯ ಸಂದರ್ಭ, ಮಗುವಿಗೆ ಎ-ನೆಗೆಟಿವ್ ರಕ್ತ ಬೇಕಾಗಿತ್ತು. ರಕ್ತ ನಿಧಿಯಲ್ಲಿ ಆ ಗುಂಪಿನ ರಕ್ತ ಲಭ್ಯವಿತ್ತಾದರೂ ವೈದ್ಯರು ತಾಜಾ ರಕ್ತ ಬೇಕೆಂದರು. ಮಗುವಿನ ಸಂಬಂಧಿಕರೊಬ್ಬರದ್ದೂ ಎ-ನೆಗೆಟಿವ್ ರಕ್ತಗುಂಪು ಎಂದು ತಿಳಿದು ಎಲ್ಲರೂ ಸಂತೋಷದಿಂದಿದ್ದರು. ಆದರೆ ಆ ವ್ಯಕ್ತಿ ರಕ್ತದಾನಕ್ಕೆ ಒಪ್ಪಲಿಲ್ಲ!

ಹೌದು, ರಕ್ತದಾನದ ಬಗ್ಗೆ ಬಹಳಷ್ಟು ಜನರಿಗೆ ಅನಗತ್ಯ ಭಯ, ತಪ್ಪು ತಿಳಿವಳಿಕೆಗಳೇ ಹೆಚ್ಚು.  ಜೂನ್ 14 ವಿಶ್ವ ರಕ್ತದಾನಿಗಳ ದಿನ.  ವಿಶ್ವದಾದ್ಯಂತ ರಕ್ತದಾನದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮತ್ತು ಜೀವವನ್ನು ಉಳಿಸಲು ನೆರವಾದ ರಕ್ತದಾನಿಗಳನ್ನು ಗುರುತಿಸಿ, ಅಭಿನಂದಿಸಿ, ಸನ್ಮಾನಿಸುವುದು ಇದರ ಮೂಲ ಉದ್ದೇಶವಾಗಿದೆ. ತುರ್ತುಸ್ಥಿತಿಯಲ್ಲಿ ರಕ್ತದಾನ ಮಾಡುವವರು ನಮ್ಮ ದೇಶದಲ್ಲಿ ಸಿಗುತ್ತಾರೆ. ಆದರೆ ಎಲ್ಲ ಆರೋಗ್ಯವಂತರನ್ನೂ ಸ್ವಯಂಪ್ರೇರಿತ ರಕ್ತದಾನಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಚರಿಸುವ ದಿನವೇ ‘ವಿಶ್ವ ರಕ್ತದಾನಿಗಳ ದಿನ’.

ರಕ್ತದಾನದಿಂದ ರಕ್ತದ ಅವಶ್ಯಕತೆಯಿರುವವರಿಗೆ ಮಾತ್ರ ಲಾಭವಾಗುವುದಿಲ್ಲ; ರಕ್ತದಾನಿಗಳೂ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ರಕ್ತದಾನ ಮಾಡಿದವರಲ್ಲಿ ಹೊಸ ರಕ್ತಕಣಗಳ ಉತ್ಪತ್ತಿಗೆ ಪ್ರಚೋದನೆ ಸಿಗುತ್ತದೆ, ಹೃದಯಾಘಾತದ ಸಂಭವ ಕಡಿಮೆಯಾಗುತ್ತದೆ, ರಕ್ತದಲ್ಲಿ ಕೊಲೆಸ್ಟರಾಲ್ ಅಂಶ ಕಡಿಮೆಯಾಗುತ್ತದೆ, ಮತ್ತು ಆತ ಇನ್ನಷ್ಟು ಆರೋಗ್ಯವಂತನಾಗಿರಲು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ಆಯುರ್ವೇದದಲ್ಲಿ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ರಕ್ತದುಷ್ಟಿಯಿಂದಾಗುವ ರೋಗಗಳನ್ನು ತಡೆಗಟ್ಟಬಹುದು ಎಂದಿದ್ದಾರೆ. ರಕ್ತದುಷ್ಟಿಯಿಂದಾದ ರೋಗಗಳಲ್ಲಿ ‘ರಕ್ತಮೋಕ್ಷಣ’ ಎಂಬ ಪಂಚಕರ್ಮ ಚಿಕಿತ್ಸೆಯನ್ನು ಸುಶ್ರುತ ವರ್ಣಿಸಿದ್ದಾರೆ. ರಕ್ತಮೋಕ್ಷಣ ಎಂದರೆ ರೋಗಿಯ ಶರೀರದಿಂದ ನಿರ್ದಿಷ್ಟ ಪ್ರಮಾಣದಲ್ಲಿ ದುಷ್ಟರಕ್ತವನ್ನು ಹೊರಹಾಕುವುದು ಎಂದರ್ಥ. ತಾತ್ಪರ್ಯವಿಷ್ಟು: ರಕ್ತದಾನಿ ಮತ್ತು ರಕ್ತಪಡೆದವರು – ಇಬ್ಬರಿಗೂ ಲಾಭಾವಾಗುವುದು ನಿಶ್ಚಿತ. ಹೀಗೆಂದು ಎಲ್ಲರೂ ರಕ್ತದಾನ ಮಾಡುವಂತಿಲ್ಲ.

ರಕ್ತದಾನಕ್ಕೆ ಅರ್ಹರು ಯಾರು?
*18-60 ವರ್ಷದೊಳಗಿನ ಎಲ್ಲ ಆರೋಗ್ಯವಂತ ವ್ಯಕ್ತಿಗಳು

*ವ್ಯಕ್ತಿಯ ತೂಕ 45 ಕಿ.ಗ್ರಾಂ.ಗಿಂತ ಹೆಚ್ಚಿರುವವರು

*ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಾಂ. ಗಿಂತ ಹೆಚ್ಚಿರುವವರು

*ಆರೋಗ್ಯವಂತ ಪುರುಷರು ಮೂರು ತಿಂಗಳಿಗೊಮ್ಮೆ ಹಾಗೂ ಮಹಿಳೆಯರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.

ರಕ್ತದಾನಕ್ಕೆ ಅನರ್ಹರು ಯಾರು?
*ಯಕೃತ್, ಮೂತ್ರಪಿಂಡ, ಹೃದಯ ಸಂಬಂಧಿ ಕಾಯಿಲೆ ಮತ್ತು ಕ್ಯಾನ್ಸರ್ ಇರುವವರು.

*ಗರ್ಭಿಣಿಯರು, ಋತುಸ್ರಾವದಲ್ಲಿರುವ ಸ್ತ್ರೀ, ಮಗುವಿಗೆ ಹಾಲುಣಿಸುವ ತಾಯಂದಿರು, ರಕ್ತಹೀನತೆ ಇರುವವರು

*ರಕ್ತದಾನ ಮಾಡಿದವರು ಮುಂದಿನ ಮೂರು ತಿಂಗಳ ವರೆಗೆ

*ರಕ್ತವರ್ಗಾವಣೆ ಮಾಡಿಸಿಕೊಂಡವರು, ಮಲೇರಿಯಾ, ಟೈಫಾಯ್ಡ್, ಕಾಮಾಲೆಯಿಂದ ಬಳಲಿದವರು ಮುಂದಿನ ಮೂರು ತಿಂಗಳ ವರೆಗೆ

*ಶಸ್ತ್ರಚಿಕಿತ್ಸೆಗೆ ಒಳಗಾದವರು

*ಯಾವುದೇ ಸೋಂಕಿನ ವಿರುದ್ಧ ಲಸಿಕೆ ಹಾಕಿಸಿಕೂಂಡವರು ಮುಂದಿನ ಮೂರು ತಿಂಗಳವರೆಗೂ  ರಕ್ತದಾನಕ್ಕೆ ಅರ್ಹರಲ್ಲ.

ರಕ್ತವು ಅಮೂಲ್ಯವಾದ ವಸ್ತು. ಆಸ್ಪತ್ರೆಗಳಲ್ಲಿ ತುರ್ತುಪರಿಸ್ಥಿತಿಗಳಲ್ಲಿ ರಕ್ತಕ್ಕೆ ಪರ್ಯಾಯವಾದ ವಸ್ತು ಮತ್ತೊಂದಿಲ್ಲ. ಒಬ್ಬ ದಾನಿಯಿಂದ ಪಡೆದ ರಕ್ತದಿಂದ ರಕ್ತ ಹಾಗೂ ರಕ್ತದ ಘಟಕಗಳನ್ನು ಆವಶ್ಯಕತೆಗನುಗುಣವಾಗಿ ಬಳಸಿ ಅನೇಕ ವ್ಯಕ್ತಿಗಳ ಪ್ರಾಣ ಉಳಿಸಬಹುದು. ಅಲ್ಲದೆ ಒಬ್ಬ ದಾನಿಯಿಂದ ಪಡೆದ ರಕ್ತವನ್ನು ಕೇವಲ 35 ದಿನಗಳ ಒಳಗೆ ಉಪಯೋಗಿಸಲು ಸಾಧ್ಯ; ಅದೇ ರಕ್ತಗುಂಪಿನ ವ್ಯಕ್ತಿಗೆ ಮಾತ್ರ ಉಪಯೋಗಿಸಬಹುದು. ದಾನ ಮಾಡಿದ ವ್ಯಕ್ತಿಯಲ್ಲಿ ಶುದ್ಧ ರಕ್ತ ಮತ್ತೆ ಮೂರು ತಿಂಗಳಲ್ಲಿ ಉತ್ಪತ್ತಿಯಾಗುತ್ತದೆ.

ಒಬ್ಬ ಆರೋಗ್ಯವಂತನ ದೇಹದಲ್ಲಿ ಸುಮಾರು ಆರು ಲೀಟರ್‌ನಷ್ಟು ರಕ್ತವಿರುತ್ತದೆ. ರಕ್ತದಾನಕ್ಕೆ ಕೇವಲ 350 ಮಿ.ಲೀ. ರಕ್ತವನ್ನು ಮಾತ್ರವೇ ದಾನಿಯಿಂದ ಸ್ವೀಕರಿಸಲಾಗುತ್ತದೆ; ಇದರಿಂದ ದಾನಿಗೆ ಯಾವುದೇ ಅಪಾಯವಿಲ್ಲ. ಈ ಸೂಕ್ಷ್ಮ ಅಂಶಗಳ ಅರಿವು ಸಮಾಜದ ಕೆಲವು ವರ್ಗದ ಜನರಿಗಷ್ಟೇ ಇರುವುದು ದುರ್ದೈವ. ಈ ಕಾರಣದಿಂದಲೇ ಇಂದಿಗೂ ಹೆಚ್ಚಿನ ದೇಶಗಳಲ್ಲಿ ರಕ್ತದ ಬೇಡಿಕೆ ಮತ್ತು ಪೂರೈಕೆಯ ನಡುವೆ ದೊಡ್ಡ ಪ್ರಮಾಣದ ಅಸಮತೋಲನ ಎದ್ದುಕಾಣುತ್ತಿದೆ.

ವಿಶ್ವದಾದ್ಯಂತ ಸಾಕಷ್ಟು ದೇಶಗಳಲ್ಲಿ ರಕ್ತದಾನದಿಂದ ಸಂಗ್ರಹಿಸಿದ ರಕ್ತದ ಕೊರತೆಯಿದೆ. ಇಂತಹ ಸಂದರ್ಭಗಳಲ್ಲಿ ರೋಗಿಯ ಕುಟುಂಬದ ಸದಸ್ಯರು ಅಥವಾ ವೃತ್ತಿಪರ ರಕ್ತದಾನಿಗಳಿಂದ ಪಡೆದ ರಕ್ತವನ್ನೇ ಅವಲಂಬಿಸಬೇಕಾಗಿದೆ. ಇದಕ್ಕೆ ಕಾರಣ ರಕ್ತನಿಧಿಗಳಲ್ಲಿ ರಕ್ತದ ಕೊರತೆ. ವರ್ಷವಿಡೀ ಶಸ್ತ್ರಚಿಕಿತ್ಸೆ, ಅಪಘಾತ, ರಕ್ತಹೀನತೆ ಮುಂತಾದ ಸಂದರ್ಭಗಳಲ್ಲಿ ರಕ್ತವರ್ಗಾವಣೆ ಅವಶ್ಯವಿರುತ್ತದೆ. ಆದರೆ ಈ ಬೇಡಿಕೆ ಸಂಪೂರ್ಣವಾಗಿ ಪೂರೈಸಲು ರಕ್ತನಿಧಿಗಳಿಗೆ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿ ಸಂಪೂರ್ಣವಾಗಿ ಇಲ್ಲದಂತಾಗಬೇಕು. ಆದರೆ ಇದಕ್ಕೆ ಮುಖ್ಯವಾಗಿ ಸಾರ್ವಜನಿಕರಲ್ಲಿ ರಕ್ತದಾನದ ಬಗ್ಗೆ ಇರುವ ಭಯ, ಆತಂಕ, ಅಪನಂಬಿಕೆಗಳು ದೂರವಾಗಬೇಕು. ರಕ್ತದಾನದಿಂದ ಯಾವುದೇ ಅಪಾಯವಿಲ್ಲ ಎಂದು ಮನವರಿಕೆಯಾಗಿ, ಎಲ್ಲ ಆರೋಗ್ಯವಂತರು ಆಗಾಗ ರಕ್ತದಾನ ಮಾಡುವಂತಾಗಬೇಕು. ಇದರ ದುರುಪಯೋಗವೂ ಆಗುವ ಸಂಭವವಿರುತ್ತದೆ, ವೃತ್ತಿಪರ ರಕ್ತದಾನಿಗಳು ಹಣದ ದುರಾಸೆಗಾಗಿ ಕೆಲವರು ನಿರಂತರವಾಗಿ ರಕ್ತದಾನ ಮಾಡುವವರೂ ಇದ್ದಾರೆ. ಇದು ಅಪರಾಧ.

ವಿಶ್ವ ಆರೋಗ್ಯ ಸಂಸ್ಥೆ, ಅಂತರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಇನ್ನಿತರ ಸ್ವಯಂ ಸೇವಾ ಸಂಘ ಸಂಸ್ಥೆಗಳ ನಿರಂತರ ಪರಿಶ್ರಮದಿಂದಾಗಿ ಇಂದು ಜಗತ್ತಿನ ಸುಮಾರು 60 ದೇಶಗಳಲ್ಲಿ ಸ್ವಯಂಪ್ರೇರಿತ ರಕ್ತದಾನದಿಂದಲೇ ನೂರಕ್ಕೆ ನೂರರಷ್ಟು ರಕ್ತದ ಬೇಡಿಕೆಯನ್ನು ಪೂರೈಸಲಾಗುತ್ತಿದೆ. ಇದು ಒಂದು ಸಾಧನೆಯೇ ಸರಿ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು 2020ರ ಒಳಗಾಗಿ ವಿಶ್ವದ ಎಲ್ಲ ರಾಷ್ಟ್ರಗಳಲ್ಲೂ ಸ್ವಯಂಪ್ರೇರಿತ ರಕ್ತದಾನದಿಂದಲೇ ರಕ್ತದ ಬೇಡಿಕೆಯನ್ನು ಪೂರೈಸುವಂತಾಗಬೇಕು ಎಂಬ ಧ್ಯೇಯವನ್ನೇ ಹೊಂದಿದೆ.

ತುರ್ತು ಸಂದರ್ಭಗಳಲ್ಲಿ ನಿರ್ದಿಷ್ಟ ಗುಂಪಿನ ರಕ್ತಕ್ಕಾಗಿ ರೋಗಿಗಳ ಸಂಬಧಿಕರು ರಕ್ತನಿಧಿಗಳಲ್ಲಿ ಪರದಾಡುವುದನ್ನು ತಪ್ಪಿಸಲು ಇದೀಗ ನಮ್ಮ ರಾಜ್ಯದಲ್ಲಿ ‘ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್‌ ಸೊಸೈಟಿಯು’ ಹೊಸ ಆದೇಶವೊಂದನ್ನು ಹೊರಡಿಸಿದೆ. ಈ ಆದೇಶದಂತೆ ರಾಜ್ಯದ ಎಲ್ಲ ರಕ್ತನಿಧಿಗಳ ನಡುವೆ ಆಂತರಿಕ ಜಾಲಬಂಧದ ಸಂಪರ್ಕ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಲಾಗಿದೆ. ಇದರಿಂದ ರಾಜ್ಯದ ಎಲ್ಲ ರಕ್ತನಿಧಿಗಳಲ್ಲಿ ಇರಬಹುದಾದ ವಿವಿಧ ಗುಂಪಿನ ರಕ್ತದ ಘಟಕಗಳ ಸಂಗ್ರಹದ ಬಗ್ಗೆ ನಿಖರವಾದ ಮಾಹಿತಿ ಯಾವುದೇ ರಕ್ತನಿಧಿಯಲ್ಲಿಯೂ ಲಭಿಸುತ್ತದೆ. ತುರ್ತುಪರಿಸ್ಥಿತಿಗಳಲ್ಲಿ ತಮ್ಮ ಸಮೀಪದ ರಕ್ತನಿಧಿಯಲ್ಲಿ ನಿರ್ದಿಷ್ಟ ಗುಂಪಿನ ರಕ್ತ ದೊರೆಯದೇ ಇದ್ದಾಗ ರೋಗಿಯ ಸಂಬಂಧಿಕರು ಅಲ್ಲಿಂದಲೇ ಅದು ದೊರೆಯಬಹುದಾದ ರಕ್ತನಿಧಿಯ ವಿಳಾಸವನ್ನು ಪಡೆಯಬಹುದು. ದೂರವಾಣಿಯ ಮೂಲಕ ತಮಗೆ ಅವಶ್ಯವಿರುವ ರಕ್ತದ ಘಟಕವನ್ನು ಕಾದಿರಿಸಿ ನಂತರ ಅದನ್ನು ಪಡೆದುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ನೀವೂ ಸಹ ನಿಮ್ಮ ಮೊಬೈಲ್‌ನಲ್ಲಿ ಪರಿಚಯಸ್ಥರ ನಂಬರ್ ಸೇರಿಸುವಾಗ ಅದರೊಂದಿಗೆ ಅವರ ರಕ್ತದ ಗುಂಪನ್ನೂ ನಮೂದಿಸಿದರೆ ತುರ್ತುಪರಿಸ್ಥಿತಿಗಳಲ್ಲಿ ಉಪಯುಕ್ತವಾದೀತು.

ರಕ್ತದಾನದಿಂದ ನಿಮಗೇನಾದರೂ ತೊಂದರೆಯಾಗುವಂಥ ಸಂದರ್ಭಗಳಲ್ಲಿ ಖಂಡಿತ ನಿಮ್ಮಿಂದ ರಕ್ತ ಪಡೆಯುವುದಿಲ್ಲ. ಅದಕ್ಕಾಗಿಯೇ ಪ್ರತಿಯೊಬ್ಬ ರಕ್ತದಾನಿಯಿಂದ ರಕ್ತವನ್ನು ಪಡೆಯುವ ಮೊದಲು ವೈದ್ಯಾಧಿಕಾರಿಗಳು ವ್ಯಕ್ತಿಯ ವಯಸ್ಸು, ತೂಕ, ರಕ್ತದೊತ್ತಡ, ಹಿಮೋಗ್ಲೋಬಿನ್ ಪ್ರಮಾಣ, ಆರೋಗ್ಯ ಸ್ಥಿತಿ – ಹೀಗೆ ಎಲ್ಲವನ್ನೂ ಪರೀಕ್ಷಿಸಿ ಎಲ್ಲವೂ ಸರಿಯಿದ್ದಲ್ಲಿ ಮಾತ್ರ ರಕ್ತ ಪಡೆಯುವ ಕ್ರಿಯೆಗೆ ಮುಂದಾಗುತ್ತಾರೆ. ಹಾಗಾಗಿ ಯಾವುದೇ ಆತಂಕವಿಲ್ಲದೇ ನಿರ್ಭೀತರಾಗಿ ಸ್ವಯಂಪ್ರೇರಿತ ರಕ್ತದಾನಕ್ಕೆ ಮುಂದಾಗಿ.
ರಕ್ತದಾನ ಜೀವದಾನ, ನಿಮ್ಮ ರಕ್ತ ಎಷ್ಟೋ ಜನರ ಜೀವ ಕಾಪಾಡುವುದರೊಂದಿಗೆ ನಿಮ್ಮ ಆರೋಗ್ಯವನ್ನೂ ವೃದ್ಧಿಸುವುದು. ನಿಮ್ಮ ಜೀವನದ ಮಹತ್ವದ ದಿನಗಳಂದು ರಕ್ತದಾನ ಮಾಡುವ ಮೂಲಕ ಆರೋಗ್ಯವಂತರಾಗಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT