ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ತ್ವಚೆಗೆ ಸರಳ ಫೇಸ್‌ಪ್ಯಾಕ್

Last Updated 16 ಜೂನ್ 2015, 19:30 IST
ಅಕ್ಷರ ಗಾತ್ರ

ಸೌಂದರ್ಯದ ಮಾತು ಬಂದಾಗ ಮೊದಲಿಗೆ ಕೇಳಿಬರುವುದು ಫೇಸ್‌ಪ್ಯಾಕ್‌. ಬ್ಯೂಟಿ ಪಾರ್ಲರ್‌ಗಳಿಗೆ ಹೋಗಿ ಫೇಸ್‌ಪ್ಯಾಕ್‌ ಮಾಡಿಕೊಳ್ಳುವುದು ಇಂದು ಸಾಮಾನ್ಯ. ಆದರೆ ಹೆಚ್ಚಿನ ದುಡ್ಡು ಖರ್ಚು ಮಾಡುವ ಬದಲು ಮನೆಯಲ್ಲಿಯೇ ಸಿಗುವ ಪದಾರ್ಥಗಳಿಂದ ನೈಸರ್ಗಿಕವಾಗಿ ಫೇಸ್‌ಪ್ಯಾಕ್‌ ಮಾಡಿಕೊಳ್ಳುವ ವಿಧಾನಗಳನ್ನು ಇಲ್ಲಿ ತಿಳಿಸಲಾಗಿದೆ.

ವಿವಿಧ ಸಮಸ್ಯೆಗಳಿಗೆ...
ಸಾಧಾರಣ ತ್ವಚೆಯಿದ್ದರೆ ಚೆನ್ನಾಗಿ ಕಳಿತ ಪಪ್ಪಾಯಿ ಹಣ್ಣಿಗೆ ಒಂದು ಚಮಚದಷ್ಟು ಹಾಲು ಮತ್ತು ಜೇನನ್ನು ಮಿಕ್ಸ್‌ ಮಾಡಬೇಕು. ಇದನ್ನು ಮುಖ ಮತ್ತು ಕುತ್ತಿಗೆಗೆ ವೃತ್ತಾಕಾರವಾಗಿ ಹಚ್ಚಿ. ಅರ್ಧ ಗಂಟೆ ಹಾಗೆಯೇ ಬಿಟ್ಟು ನಂತರ ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆಯಿರಿ. ಒಣತ್ವಚೆಯಿದ್ದರೆ ಪಪ್ಪಾಯ ಹಣ್ಣಿನ ರಸಕ್ಕೆ ಅರ್ಧ ಚಮಚ ಜೇನು ಮತ್ತು ಅಷ್ಟೇ ಪ್ರಮಾಣದ ಗಂಧ ಸೇರಿಸಿ. ಇದನ್ನು ವೃತ್ತಾಕಾರವಾಗಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆಯಿರಿ. ಮುಖದ ಮೇಲೆ ಮೊಡವೆ ಇದ್ದರೆ ಕಳಿತ ಪಪ್ಪಾಯ ಹಣ್ಣಿಗೆ ಮುಲ್ತಾನಿ ಮಿಟ್ಟಿ ಬೆರೆಸಿ ಮುಖಕ್ಕೆ ಹಚ್ಚಬೇಕು. 15-20 ನಿಮಿಷ ಬಿಟ್ಟು ತಣ್ಣನೆ ನೀರಿನಲ್ಲಿ ತೊಳೆಯಬೇಕು. ವಾರಕ್ಕೆ 2-3 ಬಾರಿಯಾದರೂ ಮಾಡಬೇಕು.

ಕಾಂತಿಯುಕ್ತ ತ್ವಚೆಗೆ
ತುಳಸಿ ಎಲೆಗಳನ್ನು ಒಣಗಿಸಿ ಪುಡಿ ಮಾಡಿಕೊಳ್ಳಿ. ಸುಮಾರು ಎರಡು ಚಮಚದಷ್ಟು ಈ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಅಷ್ಟೇ ಪ್ರಮಾಣದ ಬೇವಿನ ಪುಡಿ ಮತ್ತು ಒಂದು ಚಮಚ ಮುಲ್ತಾನಿ ಮಿಟ್ಟಿ ಸೇರಿಸಿ ಮಿಕ್ಸ್‌ ಮಾಡಿ. ಇದಕ್ಕೆ ಸ್ವಲ್ಪವೇ ರೋಸ್ ವಾಟರ್ ಹಾಕಿ ಪೇಸ್ಟ್ ಮಾಡಿ. ಈ ಪೇಸ್ಟನ್ನು ಮುಖ ಮತ್ತು ಕುತ್ತಿಗೆಗೆ ಬೆರಳುತುದಿಯಿಂದ ಕೆಳಗಿನಿಂದ ಮೇಲಕ್ಕೆ ಬರುವಂತೆ ಹಚ್ಚಿಕೊಂಡು ಅದು ಒಣಗಿದ ಮೇಲೆ ಉಗುರು ಬೆಚ್ಚನೆ ನೀರಿನಲ್ಲಿ ಮುಖ ತೊಳೆಯಿರಿ. ಇದರಂತೆಯೇ ಒಂದು ಚಮಚ ಜೇನು ತುಪ್ಪಕ್ಕೆ  ಅಷ್ಟೇ ಪ್ರಮಾಣದ ಬೇವಿನ ಪುಡಿ ಸೇರಿಸಿ. ಇದಕ್ಕೆ ಚಿಟಿಕೆಯಷ್ಟು ಅರಿಶಿಣದ ಪುಡಿ ಹಾಕಿ.  ಇದಕ್ಕೆ ಸ್ವಲ್ಪ ರೋಸ್ ವಾಟರ್ ಹಾಕಿ ಪೇಸ್ಟ್‌ ಮಾಡಿ. ಮೇಲೆ ತಿಳಿಸಿದ ರೀತಿಯೇ ಇದನ್ನೂ ಲೇಪಿಸಿಕೊಂಡು ಒಣಗಿದ ಮೇಲೆ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಮುಖದಲ್ಲಿ ಕಲೆಗಳಿದ್ದರೆ...
ಮುಖದ ಮೇಲೆ ಕಪ್ಪು ಕಲೆಗಳಿದ್ದರೆ ಟೊಮೆಟೊ ಫೇಸ್‌ಪ್ಯಾಕ್‌ ಒಳ್ಳೆಯ ಫಲಿತಾಂಶ ನೀಡುತ್ತದೆ. ಟೊಮೆಟೊ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಅದನ್ನು ವೃತ್ತಾಕಾರವಾಗಿ ಮಸಾಜ್ ಮಾಡಿ. ಒಂದರ್ಧ ಗಂಟೆ ಅದನ್ನು ಮುಖದ ಮೇಲೆ ಒಣಗಲು ಬಿಡಿ. ತಣ್ಣನೆಯ ನೀರಿನಿಂದ ತೊಳೆಯಿರಿ. ಇದರಿಂದ ತ್ವಚೆಯಲ್ಲಿ ಹೊಳಪು ಕೂಡ ಬರುತ್ತದೆ.

ಮೊಡವೆ ಇದ್ದರೆ...
ಮೊಡವೆಯಿಂದ ಮುಕ್ತಿ ಹೊಂದಬೇಕೆಂದರೆ ಕೆಲವೊಂದು ಫೇಸ್‌ಪ್ಯಾಕ್‌ಗಳಿವೆ. ಚೆಂಡುಹೂವು ಫೇಸ್‌ಪ್ಯಾಕ್‌ ಇಂಥ ಸಮಸ್ಯೆಗೆ ದಿವ್ಯ ಔಷಧ. ಚೆಂಡು ಹೂವಿನ ದಳ ತೆಗೆದು ಅದನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ಪೇಸ್ಟ್ ಮಾಡಿ. ಅದಕ್ಕೆ ಒಂದು ಚಮಚ ಜೇನನ್ನು ಸೇರಿಸಿ. ಅದನ್ನು ಸಂಪೂರ್ಣ ಮುಖಕ್ಕೆ ಹಚ್ಚಿ. ಮೊಡವೆ ಇರುವಲ್ಲಿ ತುಸು ಹೆಚ್ಚಿಗೆ ಹಚ್ಚಿ. ಅದು ಒಣಗುವವರೆಗೆ ಬಿಟ್ಟು, ಅರ್ಧ ಗಂಟೆ ನಂತರ ತುಸು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಕಹಿ ಬೇವಿನ ಎಲೆಯನ್ನು ಪೇಸ್ಟ್ ಮಾಡಿ ಅದಕ್ಕೆ ಚಿಟಿಕೆ ಅರಿಶಿಣ ಪುಡಿ ಸೇರಿಸಿ ಪೇಸ್ಟ್ ಮಾಡಿ ಮೊಡವೆ ಇರುವ ಜಾಗಕ್ಕೆ ಲೇಪಿಸಿಕೊಂಡು  ಅರ್ಧ ಗಂಟೆ ಬಿಟ್ಟು ತೊಳೆಯುವ ಮೂಲಕ ಮೊಡವೆಗೆ ಪರಿಹಾರ ಕಂಡುಕೊಳ್ಳಬಹುದು.  ಮುಲ್ತಾನಿ ಮಿಟ್ಟಿಗೆ ರೋಸ್‌ವಾಟರ್‌ ಸೇರಿಸಿ ಮುಖದ ಮೇಲೆ ಲೇಪಿಸಿ ಒಣಗಿದ ನಂತರ ತೊಳೆದುಕೊಳ್ಳುವುದರಿಂದಲೂ ಮೊಡವೆಯಿಂದ ಮುಕ್ತಿ ಪಡೆಯಬಹುದು.

ಬಿಸಿಲಿನಿಂದ ಬಳಲಿದ್ದರೆ
ಬಿಸಿಲಿನಿಂದ ಬಳಲಿದ್ದರೆ ಸೌತೆಕಾಯಿ ಫೇಸ್‌ಪ್ಯಾಕ್‌ ಉತ್ತಮ ಫಲಿತಾಂಶ ನೀಡುತ್ತದೆ. ಮೊದಲು ಸೌತೆಕಾಯಿಯನ್ನು ಸಿಪ್ಪೆ ತೆಗೆದು ಅದನ್ನು ತುರಿದುಕೊಳ್ಳಿ. ಅದಕ್ಕೆ ಒಂದು ಚಮಚದಷ್ಟು ಶುದ್ಧ ಕೊಬ್ಬರಿ ಎಣ್ಣೆ ಹಾಕಿ. ಇದಕ್ಕೆ ಲೋಳೆಸರದ ರಸ ಹಾಕಿ ಮಿಶ್ರಣ ಮಾಡಿ. ಇದನ್ನು ಮುಖ ಮತ್ತು ಕುತ್ತಿಗೆಗೆ ವರ್ತುಲಾಕಾರವಾಗಿ ಹಚ್ಚಿ. ಒಣಗಿದ ಮೇಲೆ ತುಸು ಬೆಚ್ಚನೆಯ ನೀರಿನಲ್ಲಿ ತೊಳೆಯಿರಿ. ಎಣ್ಣೆ ತ್ವಚೆಯವರಾಗಿದ್ದರೆ ಎಣ್ಣೆ ಸ್ವಲ್ಪ ಕಮ್ಮಿ ಬಳಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT