ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಲ್ಲಿ ಭಾರತ-ಪಾಕ್ ಕದನ ವಿರಾಮಕ್ಕೆ 100 ದಿನ; ಭೂ ಸೇನಾ ಮುಖ್ಯಸ್ಥರ ಭೇಟಿ

Last Updated 2 ಜೂನ್ 2021, 9:38 IST
ಅಕ್ಷರ ಗಾತ್ರ

ನವದೆಹಲಿ: ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಭಾರತ ಹಾಗೂ ಪಾಕಿಸ್ತಾನ ಸೈನ್ಯಗಳ ನಡುವಣ ಕದನ ವಿರಾಮವು 100ನೇ ದಿನಕ್ಕೆ ಕಾಲಿಡುತ್ತಿರುವಂತೆಯೇ ಭೂ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್‌ ಮನೋಜ್ ಮುಕುಂದ್ ನರವಾಣೆ ಅವರು ಬುಧವಾರದಿಂದ ಎರಡು ದಿನಗಳ ಭೇಟಿ ಹಮ್ಮಿಕೊಂಡಿದ್ದಾರೆ.

ಗಡಿಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಲಿರುವ ಸೇನಾ ಮುಖ್ಯಸ್ಥರು ಕಣಿವೆಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಕುರಿತು ಪರಿಶೀಲಿಸಲಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ನಡುವಣ ಕದನ ವಿರಾಮ ಒಪ್ಪಂದವು ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಎರಡೂ ಸೇನೆಗಳ ಮಿಲಿಟರಿ ಕಾರ್ಯಾಚರಣೆಯ ಮಹಾ ನಿರ್ದೇಶಕರ (ಡಿಜಿಎಂಒ) ಮಾತುಕತೆ ಮೂಲಕ ಪಾಲನೆ ಮಾಡಲಾಗಿತ್ತು. ಅಲ್ಲಿಂದ ಬಳಿಕ ಉಭಯ ದೇಶಗಳು ಕದನ ವಿರಾಮ ನಿಯಮವನ್ನು ಉಲ್ಲಂಘಿಸಿಲ್ಲ.

ಸೇನಾ ಮುಖ್ಯಸ್ಥರು ಸೇನೆಯ ಇತರ ಉನ್ನತ ಕಮಾಂಡರ್‌ಗಳ ಜೊತೆಗೆ ಕಣಿವೆಯಲ್ಲಿ ಭಯೋತ್ಪಾದನೆ ನಿಗ್ರಹ ಮತ್ತು ಒಳನುಸುಳಿವಿಕೆಯ ನೈಜ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಒಳನುಸುಳುವಿಕೆಗೆ ಭಯೋತ್ಪಾದಕರು ಮಾಡುವ ಯಾವುದೇ ಪ್ರಯತ್ನವನ್ನು ಮಟ್ಟ ಹಾಕಲು ಸೈನ್ಯ ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರಿಶೀಲಿಸಲು ಗಡಿಗೆ ಸೇನಾ ಮುಖ್ಯಸ್ಥರು ಭೇಟಿ ಕೊಡಲಿದ್ದಾರೆ.

ಕದನ ವಿರಾಮ ಒಪ್ಪಂದದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮುಖ್ಯ ಪಾತ್ರ ವಹಿಸಿದ್ದು, ಕಳೆದ ಕೆಲವು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೀರ್ಘಾವದಿಯ ವರೆಗೆ ಗಡಿಯಲ್ಲಿ ಶಾಂತಿ ನೆಲೆಸಿದೆ.

2003ನೇ ಇಸವಿಯಲ್ಲಿ ಕದನ ವಿರಾಮ ನಿಯಮ ಒಪ್ಪಂದಕ್ಕೆ ಸಹಿ ಹಾಕಿದ್ದರೂ ಪದೇ ಪದೇ ಉಲ್ಲಂಘಿಸಲಾಗಿತ್ತು. ಕೆಲವು ತಿಂಗಳುಗಳ ಹಿಂದೆಯಷ್ಟೇ ನಡೆದ ಮಾತುಕತೆಯಲ್ಲಿ ಜಂಟಿ ಹೇಳಿಕೆಯ ಮೂಲಕ ಉಭಯ ಸೇನೆಗಳು ಕದನ ವಿರಾಮ ಘೋಷಣೆ ಮಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT