ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತದ ಬಾವಿಯ ಕಥೆಗಳು

Last Updated 3 ಜೂನ್ 2019, 19:30 IST
ಅಕ್ಷರ ಗಾತ್ರ

ವಾರ್ಷಿಕ ಮೂರ್ನಾಲ್ಕು ಸಾವಿರ ಮಿಲಿಮೀಟರ್ ಮಳೆ ಬೀಳುವ ಕರಾವಳಿ, ಮಲೆನಾಡಿನಲ್ಲಿ ಈ ಬಾರಿ ನದಿಯೇ ಬತ್ತಿ ಹೋಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು, ಕ್ಷೇತ್ರಕ್ಕೆ ಬರುವ ಭಕ್ತರಿಗೆ, ‘ನೀರಿನ ಕೊರತೆ ಇದೆ, ನಿಮ್ಮ ಪ್ರವಾಸವನ್ನು ಮುಂದೂಡಿ’ ಎಂದು ಮನವಿ ಮಾಡಿದ್ದಾರೆ. ಇದೇ ರೀತಿ ನಾಡಿನ ವಿವಿಧೆಡೆ ಜಲಮೂಲಗಳು ಬತ್ತಿ ಹೋಗಿವೆ. ಸಾಲು ಸಾಲು ಕೊಳವೆಬಾವಿಗಳು ಬರಿದಾ ಗುತ್ತಿವೆ. ತೆರೆದ ಬಾವಿಗಳಲ್ಲಿ ನೀರು ಖಾಲಿಯಾಗಿ ತಿಂಗಳುಗಳೇ ಕಳೆದಿವೆ.

ಇಂಥ ಸಂದರ್ಭದಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಕರಿಯಾಲ ಗ್ರಾಮದ ಸಮೀಪವಿರುವ ದೇವರ
ಗುಡ್ಡದ ತೆರೆದ ಬಾವಿಯಲ್ಲಿ ಬರಿಗಣ್ಣಿಗೆ ಕಾಣಿಸುವಷ್ಟು ನೀರು ಲಭ್ಯವಿದೆ. 75 ಅಡಿ ಆಳ, 35 ಅಡಿ ಅಗಲವಿರುವ ಈ ಬಾವಿ ಮಳೆಗಾಲದಲ್ಲಿ ಭರ್ತಿಯಾಗುತ್ತದೆ. ಬಿರು ಬೇಸಿಗೆಯಲ್ಲಿ ಕನಿಷ್ಠ ಏಳೆಂಟು ಅಡಿಯಾದರೂ ನೀರು ಇರುತ್ತದೆಯಂತೆ. ಬಾವಿಯಲ್ಲಿ ಇಲ್ಲಿವರೆಗೂ ನೀರು ಬತ್ತಿದ ಉದಾಹರಣೆಯೇ ಇಲ್ಲ ಎನ್ನುತ್ತಾರೆ ಸ್ಥಳೀಯರು. ಇವತ್ತಿಗೂ ಅಷ್ಟೇ ಪ್ರಮಾಣದ ನೀರಿದೆ.

ಬಹಳ ವರ್ಷಗಳ ಹಿಂದೆ ಈ ಬಾವಿ ನಿರ್ಮಾಣ ವಾಗಿದೆಯಂತೆ. ಈ ಬಾವಿ ಕಟ್ಟಲು (ತೆಗೆಸಲು) ತುಂಬಾ ವರ್ಷಗಳು ಹಿಡಿಯಿತು ಎಂದು ಹಿರಿಯರು ಹೇಳುತ್ತಾರೆ.

ಈ ಬಾವಿಯಲ್ಲಿ ಸದಾ ಕಾಲ ನೀರು ಇರುವ ಕಾರಣ, ಸುತ್ತಮುತ್ತಲಿನ ಕೃಷಿ ಜಮೀನುಗಳಲ್ಲಿರುವ ಕೊಳವೆ ಬಾವಿ ಗಳಲ್ಲೂ ನೀರು ಬತ್ತುವುದಿಲ್ಲ. ಸುತ್ತಲಿನ ಗ್ರಾಮಗಳಾದ ಕರಿ ಯಾಲ, ಶಿಡಗನಾಳ, ದೇವರಗುಡ್ಡ ಸೇರಿದಂತೆ, ಮೂರ‍್ನಾಲ್ಕು ತಾಂಡಾಗಳಿಗೆ ಇದೇ ಬಾವಿಯ ನೀರೇ ಆಧಾರ. ಹೀಗಾಗಿ ಈ ಭಾಗದ ಜನರಿಗೆ ಇದು ‘ಪವಾಡ’ದ ಬಾವಿಯಾಗಿದೆ.

ಅಂತರ್ಜಲ ಸುಸ್ಥಿರತೆಗೆ ಕಾರಣ?

ಬಾವಿಯಲ್ಲಿ ಅಂತರ್ಜಲ ಸುಸ್ಥಿರವಾಗಿರಲು ಏನು ಕಾರಣ ಎಂಬ ಪ್ರಶ್ನೆ ಹಿಡಿದು ಹುಡುಕುತ್ತಾ ಹೊರಟರೆ, ಹಲವು ಕುತೂಹಲದ ಕಥೆಗಳು ಬಿಚ್ಚಿಕೊಳ್ಳುತ್ತವೆ. ಮೊದಲನೆಯದು; ಈ ಬಾವಿ ಇರುವ ಜಾಗ ತಗ್ಗು ಪ್ರದೇಶದಲ್ಲಿದೆ. ಪಕ್ಕದಲ್ಲಿ ದೇವರಗುಡ್ಡವಿದೆ. ಮಳೆಗಾಲದಲ್ಲಿ ಈ ಗುಡ್ಡದಿಂದ ಹರಿದು ಬರುವ ನೀರು ಹಾಗೂ ಸುತ್ತಲಿನ ಕಜ್ಜರಿ, ಕಾಕೋಳ ಗ್ರಾಮಗಳ ಜಮೀನುಗಳಿಂದ ಹರಿಯುವ ನೀರು ಕರಿಯಾಲ ಬಾವಿ ಇರುವ ಸುತ್ತಲಿನ ಪ್ರದೇಶಗಳಲ್ಲಿ ಅಲ್ಲಲ್ಲೇ ಇಂಗುತ್ತದೆ. ಇದು ಯಾರೋ ಮಾಡಿದ್ದ ಜಲಸಂರಕ್ಷಣಾ ರಚನೆಗಳಲ್ಲ. ಪ್ರಕೃತಿಯೇ ರೂಪಿಸಿಕೊಂಡಿರುವ ‘ಇಂಗು ಗುಂಡಿಗಳು’. ಜತೆಗೆ ಅಕ್ಕಪಕ್ಕದ ಜಮೀನುಗಳಲ್ಲಿ ಹುದಿ ಮತ್ತು ಬದು (ಟ್ರೆಂಚ್ ಕಮ್ ಬಂಡ್) ಗಳನ್ನು ಮಾಡಿದ್ದಾರೆ. ಆಸುಪಾಸಿನಲ್ಲಿರುವ ಗೋಕಟ್ಟೆಗಳಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುತ್ತದೆ.

ಈ ಬಾವಿ ಇರುವ ಜಾಗದಿಂದ ಸುಮಾರು 10 ಕಿ.ಮೀ ವ್ಯಾಪ್ತಿಯಲ್ಲಿ ಹೊನ್ನತ್ತಿ, ಬುಡುಪನಹಳ್ಳಿ ಗ್ರಾಮದ ಆಸುಪಾಸಿನಲ್ಲಿ ದೊಡ್ಡ ಕೆರೆಗಳಿವೆ. ಹನುಮಾಪುರ, ಸಿಡಗನಾಳ, ಕಜ್ಜರಿ ಗ್ರಾಮಗಳಲ್ಲಿ ಸಣ್ಣ ಕೆರೆಗಳಿವೆ. ದೇವರಗುಡ್ಡ-ಕರಿಯಾಲದಿಂದ ಎರಡು ಕಿಮೀ ಅಂತರದಲ್ಲಿ ತುಂಗಾ ಮೇಲ್ದಂಡೆ ಕಾಲುವೆ ಹಾದು ಹೋಗಿದೆ. ಇಲ್ಲೆಲ್ಲ ನಿಂತು, ಹರಿದು, ಇಂಗಿದ ನೀರು, ಬಾವಿಯಲ್ಲಿ ಒರತೆಯಾಗಿ ಕಾಣಿಸಿಕೊಳ್ಳುತ್ತದೆ ಎಂಬುದು ತಜ್ಞರ ಅಭಿಪ್ರಾಯ.

‘ಕಾಕೋಳ‘ದ ಪರಿಣಾಮ

ಕರಿಯಾಲದಿಂದ 10ಕಿ.ಮೀ ದೂರದಲ್ಲಿರುವ ಕಾಕೋಳ ಗ್ರಾಮದಲ್ಲಿ ಜಲಕಾರ್ಯಕರ್ತ ಚನ್ನಬಸಪ್ಪ ಕೋಂಬಳಿ ಅವರು ಸಮುದಾಯದ ಸಹಭಾಗಿತ್ವದಲ್ಲಿ ತೆರೆದ ಬಾವಿಗಳಿಗೆ ಮಳೆ ನೀರು ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಜತೆಗೆ ಕೊಳವೆಬಾವಿಗಳಿಗೆ ಜಲಮರುಪೂರಣ ಚಟುವಟಿಕೆಗಳೂ ನಡೆಯುತ್ತಿವೆ. ‘ಈ ಕೆಲಸಗಳೂ, ಬಾವಿಯಲ್ಲಿ ಅಂತರ್ಜಲ ಸುಸ್ಥಿರವಾಗಿರಲು ಕಾರಣವಾಗಿರಬಹುದು’ ಎನ್ನುತ್ತಾರೆ ಚನ್ನಬಸಪ್ಪ. ‘ಇಂಥ ಬಾವಿಗಳ ಸಂಖ್ಯೆಯೂ ಹೆಚ್ಚಾಗಬೇಕು. ಬಾವಿ ಸುತ್ತಲಿನ ಪ್ರದೇಶದಲ್ಲಿ ನಡೆದಿರುವ ಜಲಸಂರಕ್ಷಣಾ ಚಟುವಟಿಕೆಗಳು ನಿರಂತರವಾಗಿರಬೇಕು. ಸಮುದಾಯದ ಸಹಭಾಗಿತ್ವದೊಂದಿಗೆ ಇಂಥ ಕೆಲಸಗಳು ನಡೆಯಬೇಕು’ ಎಂಬುದು ಅವರ ಅಭಿಪ್ರಾಯ.

ಜಲದ ಕಣ್ಣು

ಕರಿಯಾಲದ ಬಾವಿಯಲ್ಲಿ ಜಲದ ಕಣ್ಣುಗಳು ಸ್ವಚ್ಛವಾಗಿವೆ. ಹೀಗಾಗಿ ಸುತ್ತ ಎಲ್ಲಿ ಮಳೆ ನೀರು ಇಂಗಿದರೂ, ಈ ಬಾವಿಯಲ್ಲಿ ಒರತೆ ಕಾಣಿಸಿಕೊಳ್ಳುತ್ತದೆ. ಸುತ್ತಲಿನ ಪ್ರದೇಶದಲ್ಲಿ ಅರಣ್ಯ ಇಲಾಖೆಯವರು ಆಲ, ಅರಳಿ, ನೇರಳೆ, ಅಂಜೂರದಂತಹ ಮರಗಳೂ ಮಳೆ ನೀರು ಇಂಗಿಸಲು ನೆರವಾಗಿವೆ. ಈ ಪ್ರಕ್ರಿಯೆ ಕೂಡ ಬಾವಿಯಲ್ಲಿನ ನೀರು ಸುಸ್ಥಿರವಾಗಿರಲು ಕಾರಣ ಎನ್ನುತ್ತಾರೆ ನಿವೃತ್ತ ಭೂ ವಿಜ್ಞಾನಿ ಬಾಲಕೃಷ್ಣ. ನೋಡಿ, ಒಂದು ಪುರಾತನ ಬಾವಿಯಲ್ಲಿರುವ ಸುಸ್ಥಿರ ಅಂತರ್ಜಲದ ಹಿಂದೆ ಎಷ್ಟೆಲ್ಲ ಜಲ ಸಂರಕ್ಷಣೆಯ ಕಥೆಗಳಿವೆ. ‘ನಾವೊಬ್ಬರು ನೀರಿಂಗಿಸಿದರೆ ಏನಾದೀತು’ ಎಂದು ಮಳೆ ನೀರು ಇಂಗಿಸುವಲ್ಲಿ ಸಿನಿಕತನ ತೋರುವವರಿಗೆ ಈ ಕರಿಯಾಲ ಬಾವಿಯ ಕಥೆ ಹಲವು ಜಲಸಂರಕ್ಷಣಾ ಪಾಠಗಳನ್ನು ಹೇಳುತ್ತದೆ.

ನೀರು ಮಲಿನವಾಗುವ ಆತಂಕ

ಸದಾ ಒಡಲಲ್ಲಿ ಜಲವಿಟ್ಟುಕೊಂಡಿರುವ ಕರಿಯಾಲ ಬಾವಿ ಮಲಿನವಾಗುತ್ತಿದೆ ಎಂಬ ಕೂಗು ಕೇಳುತ್ತಿದೆ. ಜತೆಗೆ ಬಾವಿ ಸುತ್ತ ರಕ್ಷಣಾ ಗೋಡೆ ಇಲ್ಲದ್ದು ನೀರು ಮಲಿನಗೊಳ್ಳಲು ಹಾಗೂ ಜನರಿಗೆ ಅಪಾಯಕಾರಿ ಸ್ಥಳವಾಗಿದೆ. ಈ ಬಾವಿಯ ಸುತ್ತ ಜಾಲರಿ ನಿರ್ಮಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಿದೆ.

ಬಾವಿ ನೀರು ಮಲಿನವಾಗುವ ಆತಂಕ

ಸದಾ ಒಡಲಲ್ಲಿ ಜಲವಿಟ್ಟುಕೊಂಡಿರುವ ಕರಿಯಾಲ ಬಾವಿ ಮಲಿನವಾಗುತ್ತಿದೆ ಎಂಬ ಕೂಗು ಕೇಳುತ್ತಿದೆ. ಜತೆಗೆ ಬಾವಿ ಸುತ್ತ ರಕ್ಷಣಾ ಗೋಡೆ ಇಲ್ಲದ್ದು ನೀರು ಮಲಿನಗೊಳ್ಳಲು ಹಾಗೂ ಜನರಿಗೆ ಅಪಾಯಕಾರಿ ಸ್ಥಳವಾಗಿದೆ. ಈ ಬಾವಿಯ ಸುತ್ತ ಜಾಲರಿ ನಿರ್ಮಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಿದೆ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT