ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನ ನೆನಪಿಗೆ ಅಳಿಲು ಸೇವೆ

Last Updated 27 ಜನವರಿ 2014, 19:30 IST
ಅಕ್ಷರ ಗಾತ್ರ

ಮೈಸೂರಿನ ಈ ಸಹೋದರರು ದಿನನಿತ್ಯ ನಸುಕಿನ 5.30ರ ವೇಳೆಗೆ ಕೈಯಲ್ಲೊಂದು ಚೀಲ ನೇತುಹಾಕಿಕೊಂಡು, ಅದರಲ್ಲಿ ಕಳ್ಳೆಪುರಿ, ಕೊಬ್ಬರಿ ಮಿಠಾಯಿ ಹಾಗೂ ಕಾಯಿ ಚೂರು ತುಂಬಿಕೊಂಡು ಪೊಲೀಸ್‌ ಕಮಿಷನರ್‌ ಕಚೇರಿ ಮೈದಾನ ಪಕ್ಕದಲ್ಲಿರುವ ವಿವಿಧ ಉದ್ಯಾನ ಸುತ್ತುತ್ತಾರೆ. ಮರದಲ್ಲಿ ತಾವು ಇಟ್ಟಿರುವ ಬೇರೆಬೇರೆ ಪ್ಲಾಸ್ಟಿಕ್‌ ಡಬ್ಬಗಳಲ್ಲಿ ಒಂದೊಂದು ತಿನಿಸಿ, ನೀರು ಹಾಕಿ ಮುಂದೆ ಸಾಗುತ್ತಾರೆ.

ಅವರು ಸಾಗುತ್ತಿದ್ದಂತೆಯೇ, ಎಲ್ಲಿಂದಲೋ ಅಳಿಲುಗಳ ಹಿಂಡು ಸರಸರನೇ ಬಂದೇ ಬಿಡುತ್ತದೆ. ಇನ್ನೊಂದೆರಡು ಹೆಜ್ಜೆ ಇಡುವುದರೊಳಗೆ ಪಾರಿವಾಳ, ಗುಬ್ಬಿ, ಕಾಗೆ ಸೇರಿದಂತೆ ವಿವಿಧ ಪಕ್ಷಿಗಳು ಅಲ್ಲಿಗೇ ಹಾಜರ್‌. ಆ ಡಬ್ಬಗಳಲ್ಲಿ ಇಟ್ಟಿರುವ ತಿನಿಸುಗಳು ಅದೇ ಮಾಯದಲ್ಲಿ ಖಾಲಿಯಾಗಿಬಿಡುತ್ತವೆ!

ಇಂಥ ಅಪರೂಪದ ಸೇವೆ ಸಲ್ಲಿಸುತ್ತಿರುವ ಸಹೋದರರೇ ಲೋಹಿತ್‌ ಮತ್ತು ಭರತ್‌. ತಂದೆ ಬಿ.ಕೆ. ಕೃಷ್ಣಮೂರ್ತಿ ಅವರ ನೆನಪಿನಲ್ಲಿ ಅವರದ್ದು ಈ ಸೇವೆ. ಮೊದಲು ಬಸ್‌ ಕಂಡಕ್ಟರ್‌ ಆಗಿ, ನಂತರ ಪೊಲೀಸ್‌ ಇಲಾಖೆಗೆ ಸೇರಿದ್ದ ಹಾಸನ ತಾಲ್ಲೂಕಿನ ಬೇಲೂರಿನ ಕೃಷ್ಣಮೂರ್ತಿ ಅವರು, ಗಾಯತ್ರಿಪುರದಲ್ಲಿ ‘ಬಡವರ ಬಂಧು’ ಎಂದೇ ಕರೆಯಿಸಿಕೊಂಡವರು. ಬಂಧು–ಬಳಗ ಮಾತ್ರವಲ್ಲ. ಈ ಪ್ರದೇಶದ ಸಾವಿರಕ್ಕೂ ಹೆಚ್ಚು ಜನರ ಮಕ್ಕಳ ಮದುವೆ, ಅನಾರೋಗ್ಯ, ಅಪಘಾತ, ನಿವೇಶನ ಖರೀದಿ ಹೀಗೆ ಸಾಕಷ್ಟು ಸಂದರ್ಭಗಳಲ್ಲಿ ಇವರಿಂದ ಸಹಾಯ ಪಡೆದಿದ್ದೂ ಉಂಟು.

ಇವರ ಸಹಾಯಹಸ್ತ ಪಶು- ಪಕ್ಷಿಗಳಿಗೂ ವಿಸ್ತರಿಸಿತು. ಮೊದಲು ಕಮಿಷನರ್‌ ಕಚೇರಿಯ ಮೈದಾನದಲ್ಲಿದ್ದ ಕೆಲ ಮರಗಳಿಗೆ ಕೈಗೆಟುಕುವ ಎತ್ತರದಲ್ಲಿ ಮೂರು ಪ್ಲಾಸ್ಟಿಕ್‌ ಡಬ್ಬ ಇಟ್ಟು ಮೊಳೆ ಹೊಡೆದರು. 2 ಎಕರೆ ಪ್ರದೇಶದಲ್ಲಿರುವ ಈ ಜಾಗದ ಒಂದೂ ಗಿಡ–ಮರ ಬಿಡದೇ ಪ್ಲಾಸ್ಟಿಕ್‌ ಬಾಟಲಿಯನ್ನು ಅರ್ಧಕ್ಕೆ ಕತ್ತರಿಸಿ ಇಟ್ಟರು. ಅದರಲ್ಲಿ ಒಂದಕ್ಕೆ ಕಳ್ಳೇಪುರಿ, ಇನ್ನೊಂದರಲ್ಲಿ ಕಾಯಿಚೂರು ಹಾಗೂ ಕೊಬ್ಬರಿ ಮಿಠಾಯಿ ಇಟ್ಟರು. ಮತ್ತೊಂದರಲ್ಲಿ ನೀರು. ಇವರ ಅಳಿಲು ಸೇವೆ ನಿಧಾನವಾಗಿ ಇನ್ನೂರಕ್ಕೂ ಹೆಚ್ಚು ಮರಗಳಿರುವ ಕುಪ್ಪಣ್ಣ ಉದ್ಯಾನಕ್ಕೂ ವಿಸ್ತರಣೆಯಾಯಿತು.

ನಂತರ ಕರ್ಜನ್‌ ಪಾರ್ಕ್‌, ಪುಟ್ಟಮನೆ ಪಾರ್ಕ್‌, ಡಾ.ರಾಜ್‌ಕುಮಾರ್‌ ಹಾಗೂ ವಿಷ್ಣುವರ್ಧನ್‌ ಉದ್ಯಾನಗಳಿಗೂ ವ್ಯಾಪಿಸಿತು. ಈ ಸೇವೆ ನಿವೃತ್ತಿ (2007) ನಂತರವೂ ಮುಂದುವರಿಯಿತು. ನಿಧನರಾಗುವವರೆಗೂ (2013 ಆಗಸ್ಟ್‌ 18) ಮಾಡುತ್ತಲೇ ಇದ್ದರು.

ಅದೇ ಮಾರ್ಗ ಅನುಸರಿಸುತ್ತಿದ್ದಾರೆ ಈ ಸಹೋದರರು. ಆರು ಕಿ.ಮೀ ದೂರದಿಂದ ಬರುವ ಇವರ ಪಕ್ಷಿ ಸೇವೆಗೆ ದಣಿವು ಅನ್ನುವುದೇ ಇಲ್ಲ. ದೊಡ್ಡ ಚೀಲದೊಂದಿಗೆ ಬಂದರೆ ಅದು ಮುಗಿಯುವ ತನಕವೂ ಪಾರ್ಕ್‌ನಿಂದ ಪಾರ್ಕ್‌ ಸುತ್ತುತ್ತಲೇ ಇರುತ್ತಾರೆ. ಇವರು ಪಕ್ಷಿಗಳಿಗಾಗಿಯೇ ವಾರಕ್ಕೆ ಆಗುವಷ್ಟು ಆಹಾರ ಖರೀದಿ ಮಾಡುತ್ತಾರೆ. ಒಂದು ವಾರಕ್ಕೆ  120 ಸೇರು ಕಳ್ಳೇಪುರಿ, 50 ಕಾಯಿ ಹಾಗೂ 50 ಪ್ಯಾಕೆಟ್‌ ಮಿಠಾಯಿ ಖರೀದಿ ಮಾಡುತ್ತಾರೆ. ಈ ಎಲ್ಲವೂ 300ಕ್ಕೂ ಹೆಚ್ಚು ಮರಗಳಿಗೆ ಸಾಕು.

‘ಸತ್ತವರಿಗಾಗಿ ಮೂರನೇ ದಿನ ಪಿಂಡ ಇಡುವುದು ಎಲ್ಲೆಡೆ ಇದೆ. ಪಿಂಡದ ಆಹಾರವನ್ನು ಕಾಗೆ ಮುಟ್ಟಿದರೆ ಸತ್ತವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬುದು ನಂಬಿಕೆ. ಆದರೆ, ಬಿ.ಕೆ. ಕೃಷ್ಣಮೂರ್ತಿ ಅವರ ಪಿಂಡವನ್ನು ಮೊದಲು ಕಾಗೆ ಮುಟ್ಟಲೇ ಇಲ್ಲ. ಮೊದಲು ಮುಟ್ಟಿದ್ದೇ ಅಳಿಲು. ಸಾಕಷ್ಟು ಸಮಯ ಕಾದರೂ ಕಾಗೆ ಆ ಕಡೆ ಸುಳಿಯಲೇ ಇಲ್ಲ. ಆಹಾರ ಇಡುತ್ತಿದ್ದಂತೆ ಅಳಿಲು ಬಂದು ಸೇವಿಸಿ ಹೊಯಿತು. ಒಂದಲ್ಲ. ನಾಲ್ಕು ಅಳಿಲುಗಳ ಸರಸರನೇ ಬಂದು ಪಿಂಡ ತಿಂದು ಮರ ಏರಿದವು. ಒಂದೂವರೆ ಗಂಟೆ ನಂತರ ಕಾಗೆ ಬಂದು ಆಹಾರ ಸೇವಿಸಿತು’ ಎಂದು ಸ್ಮರಿಸುತ್ತಾರೆ ಇವರು.

ಪಕ್ಷಿಗಳು ಹಾಗೂ ಅಳಿಲುಗಳು ಹೆಚ್ಚಾಗಿ ಇಷ್ಟಪಡುವುದು ಮಂಡಕ್ಕಿ ಹಾಗೂ ಸಿಹಿ ಪದಾರ್ಥವಾದ ಮಿಠಾಯಿ. ಇದು ಮೆದುವಾಗಿರುವುದರಿಂದ ಸೇವಿಸುತ್ತವೆ. ಅನ್ನ ಸೇರಿದಂತೆ ಇತರೆ ಧಾನ್ಯ ಹಾಕಿದರೆ ಕೊಳೆತು ಹೋಗುವ ಸಂಭವ ಇರುವುದರಿಂದ ಇದೇ ಧಾನ್ಯ ನೀಡುತ್ತಿದ್ದಾರೆ. ಇದೊಂದೇ ಕಾರಣ ಅಲ್ಲ. ಅಪ್ಪನೂ ಇದೇ ನಮೂನೆಯ ಆಹಾರ ಹಾಕುತ್ತಿದ್ದರು. ಅದನ್ನೇ ಮಕ್ಕಳು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಬಾಟಲಿಗೆ ಕಸ ಕಡ್ಡಿ ತುಂಬಿದಾಗ ತೆಗೆದು ಹಾಕುವುದು, ಹೊಸ ಬಾಟಲಿ ಕತ್ತರಿಸಿ ಇಡುವುದು ನಡೆದೇ ಇದೆ.

‘ಅಪ್ಪ, ಬಂಧು–ಬಳಗ ಎನ್ನದೇ ಸಾಕಷ್ಟು ಬಡವರಿಗೆ ಸಹಾಯ ಮಾಡಿದ್ದಾರೆ. ಅದರಲ್ಲಿ ತೃಪ್ತಿ ಸಿಗದೇ ಇದ್ದರಿಂದ ಪ್ರಾಣಿ–ಪಕ್ಷಿಗಳಿಗೆ ಆಹಾರ ಹಾಕಲು ಆರಂಭಿಸಿದರು. ತಮ್ಮ ಸಾವಿನ ಕೊನೆಯ ದಿನದಲ್ಲೂ ಆಹಾರ ಹಾಕಿದ್ದನ್ನು ನಾನು ನೋಡಿದ್ದೇನೆ. ಅಂದು ಅವರೊಂದಿಗೆ ನಾನೂ ಬಂದಿದ್ದೆ. ಈಗ ಅಪ್ಪನ ಆತ್ಮತೃಪ್ತಿಗಾಗಿ ಆಹಾರ ಹಾಕುವ ಪರಿ ಮುಂದುವರಿಸುತ್ತಿದ್ದೇವೆ. ನಾವಿರುವ ತನಕವೂ ಇದು ಮುಂದುವರಿಯುತ್ತದೆ. ಮರದಲ್ಲಿ ಇಟ್ಟಿರುವ ಆಹಾರ ತಿನ್ನಲು ಬರುವ ಪ್ರತೀ ಅಳಿಲು ಹಾಗೂ ಪಕ್ಷಿಯಲ್ಲಿಯೂ ಅಪ್ಪನ ಛಾಯೆ ಇರುತ್ತದೆ’ ಎನ್ನುತ್ತಲೇ ಕಣ್ಣಲ್ಲಿ ನೀರು ತುಂಬಿಕೊಂಡರು ಭರತ್‌.

‘ನಾವು ಯಾರಿಂದಲೂ ಸಹಾಯ ಬೇಡುವುದಿಲ್ಲ. ಯಾರಾದರೂ ಒಳ್ಳೇ ಕೆಲಸ ಮಾಡಬೇಕು ಎಂದಿದ್ದರೆ ಅವರ ಮನೆಯ ಬಳಿ ಇರುವ ಪಾರ್ಕ್‌ನಲ್ಲಿ ಮರ ಹಾಗೂ ಬೀದಿಯಲ್ಲಿರುವ ಮರಗಳಿಗೆ ಮೂರು ಪ್ಲಾಸ್ಟಿಕ್ ಬಾಟಲಿ ಕಟ್ಟಿ ನೀರು, ಆಹಾರ ಹಾಕಿದರೆ ಸಾಕು’ ಎನ್ನುತ್ತಾರೆ. ಅಪ್ಪ ಕಾಲವಾದ ನಂತರ ಅವರ ಆಸ್ತಿಗೆ ಹೊಯ್ದಾಡುವ ಮಕ್ಕಳ ನಡುವೆ ಭರತ್‌– ಲೋಹಿತ್‌ ಅವರದು ವಿಭಿನ್ನ ನಡೆ, ಇತರರಿಗೂ ಮಾರ್ಗದರ್ಶಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT