ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆರೆ... ರೇ ಮೀನು!

ಗುಲ್‌ಮೊಹರು
Last Updated 16 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಜಗತ್ಪ್ರಸಿದ್ಧ ಟೀವಿ ಸರಣಿ ‘ಕ್ರೊಕಡೈಲ್ ಹಂಟರ್’ ತಯಾರಿಸಿದ ಆಸ್ಟ್ರೇಲಿಯಾದ ವನ್ಯಜೀವಿ ತಜ್ಞ ಮತ್ತು ಸಂರಕ್ಷಕ ಸ್ಟೀವ್ ಇರ್ವಿನ್ ‘ಅನಿಮಲ್ ಪ್ಲಾನೆಟ್’ ವಾಹಿನಿಯ ವೀಕ್ಷಕರಿಗೆ ಚಿರಪರಿಚಿತರು. ಅವರು 46ನೇ ವಯಸ್ಸಿಗೇ ಸಾವಿಗೀಡಾದರು. ಇರ್ವಿನ್ 2006ರಲ್ಲಿ 8 ಅಡಿ ಉದ್ದದ ಕುಟುಕುರೇ ಮೀನಿನ ಚಲನವಲನ ಚಿತ್ರೀಕರಣ ಮಾಡುತ್ತಿದ್ದಾಗ, ಅದು ಹಲವು ಬಾರಿ ತನ್ನ ಬಾಲದಿಂದ ಅವರ ಮೇಲೆ ದಾಳಿ ನಡೆಸಿತು. ಆ ಬಾಲದಲ್ಲಿದ್ದ ಮುಳ್ಳು ಅವರ ಹೃದಯ ಭೇದಿಸಿತು. ಅತೀವ ರಕ್ತಸ್ರಾವದಿಂದ ಇರ್ವಿನ್ ಅಸುನೀಗಿದರು. ಈ ಸಾವಿನ ಕಾರಣದಿಂದಾಗಿಯೇ ‘ರೇ’ ಮೀನಿನ ಬಗ್ಗೆ ಹೆಚ್ಚು ಜನರು ಗಮನಹರಿಸಿದರು.

‘ರೇ’ ಮೀನನ್ನು ನೋಡಿದರೆ, ಅದೊಂದು ಮೀನು ಎಂದು ಭಾವಿಸುವುದೇ ಕಷ್ಟ. ಸಾಂಪ್ರದಾಯಿಕ ಮೀನುಗಳ ಆಕಾರ, ರೂಪ ಇದಕ್ಕಿಲ್ಲ. ಅಂದಹಾಗೆ, ನಮ್ಮ ಕರಾವಳಿ ಪ್ರದೇಶದಲ್ಲಿ ರೇ ಮೀನಿಗೆ ‘ತೊರಕೆ’ ಎನ್ನುತ್ತಾರೆ. ‘ರೇ’ ಮೀನು ಮೃದ್ವಸ್ಥಿ (ನಮ್ಮ ಹೊರ ಕಿವಿಯ ಮೃದು, ಬಳಕುವ ಮೂಳೆಯಂತೆ) ಮೀನುಗಳ ಗುಂಪಿಗೆ ಸೇರಿದ್ದು. ಇದು ಶಾರ್ಕ್ ಮೀನಿನ ಹತ್ತಿರದ ಸಂಬಂಧಿ. ಈ ಮೀನುಗಳು ಉಷ್ಣ ಮತ್ತು ಶೀತ ಸಮುದ್ರ ಎರಡೂ ಪರಿಸರಗಳಲ್ಲಿ ಕಂಡು ಬರುತ್ತವೆ.

ಮೀನುಗಳಲ್ಲಿ ಸಾಮಾನ್ಯವಾಗಿ ಭುಜದ ಈಜುರೆಕ್ಕೆ ಚಿಕ್ಕದಿದ್ದು, ದೇಹ ಪಾರ್ಶ್ವಿಕವಾಗಿ ಚಪ್ಪಟೆ ಆಗಿರುತ್ತದೆ. ಆದರೆ ‘ರೇ’ ಮೀನುಗಳಲ್ಲಿ ದೇಹ ತಟ್ಟೆಯಂತೆ ಚಪ್ಪಟೆ ಯಾಗಿರುತ್ತದೆ. ಭುಜದ ಈಜುರೆಕ್ಕೆ ಆನೆ ಕಿವಿಯಂತೆ ಅಗಲವಾಗಿದ್ದು ಮುದ್ದಾಗಿ ಕಾಣಿಸುತ್ತದೆ. ಈಜುವಾಗ ರೆಕ್ಕೆಗಳ ಅಲೆ ಅಲೆಯಂತಹ ನರ್ತನ ನೋಡಲು ಸೊಗಸು. ಆ ಕಾರಣದಿಂದಲೇ ಆಲಂಕಾರಿಕ ಮೀನು ಮಾರುಕಟ್ಟೆಯಲ್ಲಿ ‘ರೇ’ಗಳಿಗೆ ವಿಪರೀತ ಬೇಡಿಕೆ.

ವೇಗವಾಗಿ ಈಜಲು ‘ರೇ’ಗಳಿಗೆ ಅವುಗಳ ಚಪ್ಪಟೆ ದೇಹವೇ ಪ್ರತಿಕೂಲ. ಶಾರ್ಕ್ ಮೀನುಗಳು ಉತ್ಕೃಷ್ಟ ಬೇಟೆಗಾರರಾಗಿದ್ದು ಪ್ರಾಣಿಗಳನ್ನು ಅಟ್ಟಾಡಿಸಿಕೊಂಡು ಕಬಳಿಸಿದರೆ, ‘ರೇ’ಗಳು ಆಹಾರಕ್ಕಾಗಿ ಮರಳಲ್ಲಿ ಹೂತು ಹೊಂಚು ಹಾಕುತ್ತಾ ಬಕಪಕ್ಷಿಯಂತೆ ತಾಳ್ಮೆ ಯಿಂದ ಕಾಯುತ್ತವೆ. ಅವುಗಳ ಕಣ್ಣುಗಳು ದೇಹದ ಮೇಲ್ಭಾಗದಲ್ಲಿದ್ದು ಆಕಾಶ ಮುಖವಾಗಿರುತ್ತವೆ. ಬಾಯಿ ದೇಹದ ಕೆಳಭಾಗದಲ್ಲಿದ್ದು ಭೂಮುಖ ವಾಗಿರುತ್ತದೆ. ಹಾಗಾಗಿ ತಾನು ತಿನ್ನುವ ಆಹಾರವನ್ನು ನೋಡುತ್ತಾ ತಿಂದು ಆನಂದಿಸುವ ಭಾಗ್ಯ ಅವುಗಳಿಗಿಲ್ಲ. 

ಕೆಲವು ‘ರೇ’ ಮೀನುಗಳು ಮೊಟ್ಟೆಯಿಟ್ಟರೆ, ಇನ್ನು ಕೆಲವು ನೇರವಾಗಿ ಮರಿಗಳಿಗೆ ಜನ್ಮ ನೀಡುತ್ತವೆ. ಆದರೆ, ಸಸ್ತನಿಗಳಂತೆ ತಾಯಿ ಯಿಂದ ಭ್ರೂಣಕ್ಕೆ ಆಹಾರ ವರ್ಗಾವಣೆಯಾಗುವುದಿಲ್ಲ. ಹೆಚ್ಚು ‘ರೇ’ಗಳು ತೀರ ಸಮುದ್ರವಾಸಿಗಳು, ಕೆಲವಷ್ಟೇ ಆಳ ಸಮುದ್ರ ವಾಸಿಗಳು. ಚಪ್ಪಟೆ ದೇಹ ರಚನೆಯಿಂದಾಗಿ ಹೆಚ್ಚಿನ ಸಮಯ ನೀರಿನ ಕೆಳಸ್ತರದ ಮರಳ ಮೇಲೆ ಆಲಸ್ಯದಿಂದ ಕಳೆಯುತ್ತವೆ. ಗಟ್ಟಿಮುಟ್ಟಾದ ಚೂಪಿಲ್ಲದ ದುಂಡನೆಯ ಹಲ್ಲುಗಳು ಕವಚಯುಕ್ತ ಕಪ್ಪೆಚಿಪ್ಪು, ಏಡಿ ಮುಂತಾದ ಗಟ್ಟಿ ಆಹಾರ ವಸ್ತುಗಳನ್ನು ನಜ್ಜುಗುಜ್ಜು ಮಾಡಿ ಸ್ವಾಹ ಮಾಡಲು ಸಹಕಾರಿಯಾಗಿವೆ.

ಹೆಚ್ಚಿನ ಮೀನು ಪ್ರಭೇದ ಗಳಲ್ಲಿ ಮೊಟ್ಟೆಗಳ ಫಲೀಕರಣ ಹೆಣ್ಣುದೇಹದ ಹೊರಗಡೆ, ಅಂದರೆ ನೀರಿನ ಮಾಧ್ಯಮ ದಲ್ಲೇ ನಡೆಯುತ್ತದೆ. ಆದರೆ, ಶಾರ್ಕ್ ಹಾಗೂ ‘ರೇ’ಗಳಲ್ಲಿ ಈ ಪ್ರಕ್ರಿಯೆ ಹೆಣ್ಣು ದೇಹದ ಒಳಗಡೆ ಸಂಭವಿಸುತ್ತದೆ. ವೀರ್ಯವನ್ನು ಹೆಣ್ಣಿಗೆ ವರ್ಗಾಯಿಸಲು ಗಂಡಿಗೆ ವಿಶೇಷ ಉಪಾಂಗವಿರುತ್ತದೆ. ‘ರೇ’ ಮೀನಿನಲ್ಲಿ ಹಲವು ಪ್ರಭೇದಗಳಿದ್ದರೂ, ಕುಟಕುರೇ (ಸ್ಟಿಂಗ್ರೆ) ಮತ್ತು ವಿದ್ಯುತ್‌ರೇ  ಸ್ವಲ್ಪ ಅಪಾಯಕಾರಿ ಜಂತುಗಳಾದ್ದರಿಂದ, ಅವುಗಳ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚು.

ಕುಟುಕುರೇ
ಇದು ನೀಳ ಚಾವಟಿಯಂತಹ ಉದ್ದ ಬಾಲದ ಮೀನು. ಬಾಲದಲ್ಲಿ ಚೂಪು, ಗರಗಸದಂತೆ ಹಲ್ಲುಳ್ಳ, ಒಂದು ಅಥವಾ ಎರಡು ಮುಳ್ಳು ಇರುತ್ತವೆ. ಮುಳ್ಳು ಒಂದು ಅಡಿಯಷ್ಟು ಉದ್ದ ಇರಬಹುದಾಗಿದ್ದು, ಅದರ ಕೆಳಭಾಗದಲ್ಲಿ ವಿಷ ಕಕ್ಕುವ ಗ್ರಂಥಿಯಿರುತ್ತದೆ. 2 ಮೀ. ಅಗಲ, 4 ಮೀ. ಉದ್ದದ ಬೃಹತ್‌ ಕುಟಕುರೇ ಮೀನು ಗಳೂ ಇದೆ. ಅಪ್ಪಿತಪ್ಪಿ ಈ ಮೀನು ಕಾಲ್ತುಳಿತಕ್ಕೆ  ಒಳಗಾದರೆ, ಬಾಲದಿಂದ ಚಾವಟಿ ಏಟು ಖಂಡಿತ. ಆಗ ಮುದುರಿ ಕುಳಿತಿರುವ ಮುಳ್ಳು ಸಿಡಿದೆದ್ದು ದೇಹಕ್ಕೆ ಚುಚ್ಚುವ ಸಂಭವ ಹೆಚ್ಚು.

ಮಲ್ಪೆ ಸಮುದ್ರದಲ್ಲಿ 2014ರ ಸೆಪ್ಟೆಂಬರ್ ತಿಂಗಳಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಪ್ರವಾಸಿಗರಿಗೆ ರೇ ಮೀನಿನ ಕುಟುಕಿನಿಂದ ಕಾಲುಗಳಲ್ಲಿ ಗಾಯವಾಗಿ, ಅವರುಗಳೆಲ್ಲಾ ನೋವು, ಊತ, ಸ್ನಾಯ ಸೆಳೆತದಿಂದ ಬಳಲಿದರಂತೆ.  ಇವು ಸಾಮಾನ್ಯವಾಗಿ ಸಾಧು ಜೀವಿಗಳು. ಸ್ವಲ್ಪ ಗದ್ದಲವಾದರೂ ಆ ಜಾಗದಿಂದ ಓಟ ಕೀಳುತ್ತವೆ. ಕೆಲವೊಮ್ಮೆ, ಎದುರಾದ ಹೊಸ ವಸ್ತುಗಳನ್ನು ರೆಕ್ಕೆಯಲ್ಲಿ ಹಾಗೇ ಸವರುವ ಅಭ್ಯಾಸ ಅವುಗಳದು. ಮನುಷ್ಯರ ಒಡನಾಟ ಅಭ್ಯಾಸವಾದರೆ ಅವುಗಳು ನಿರುಪದ್ರವಿಗಳು. ಕೆರಿಬಿಯನ್ ಸಮುದ್ರದ ಕೇಮನ್ ದ್ವೀಪಗಳಲ್ಲಿ ಪ್ರವಾಸಿಗರಿಗೆ ಡೈವರ್ಸ್, ಸ್ನೋರ್ಕೆಲ್ಲರ್‌ಗಳು, ಬೃಹತ್ ರೇಗಳ ಜೊತೆಯಲ್ಲಿ ಈಜಲು, ಅವುಗಳಿಗೆ ತಮ್ಮ ಕೈಯಾರೆ ಆಹಾರ ಉಣಿಸಲು ಅವಕಾಶವಿದೆ.

ವಿದ್ಯುತ್‌ರೇ
ವಿದ್ಯುತ್ ರೇಗಳಲ್ಲಿ ಬಾಲ ಮೊಟಕು. ಬಾಲದಲ್ಲಿ ವಿಷಯುಕ್ತ ಮುಳ್ಳೂ ಇರುವುದಿಲ್ಲ. ಪ್ರಾಣಾಪಾಯ ದಿಂದ ರಕ್ಷಿಸಿಕೊಳ್ಳಲು ಹಾಗೂ ಭಕ್ಷ್ಯ ಮೀನುಗಳನ್ನು ನಿಸ್ತೇಜಗೊಳಿಸಲು ಅವುಗಳಲ್ಲಿ ಬೇರೊಂದು ಸಾಧನವಿರುತ್ತದೆ. ಅದೇ ವಿದ್ಯುತ್‌ಅಸ್ತ್ರ. ವಿದ್ಯುತ್‌ರೇ  ಮೀನುಗಳಲ್ಲಿ ಭುಜದ ಈಜು ರೆಕ್ಕೆಗಳ ಬುಡದಲ್ಲಿ ವಿದ್ಯುತ್ ಅಂಗಗಳಿರುತ್ತವೆ. 8 ರಿಂದ 220 ವೋಲ್ಟ್ ಶಕ್ತಿಯುತ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯ ಅವುಗಳದು.

ಒಬ್ಬ ಮನುಷ್ಯನನ್ನು ಪ್ರಜ್ಞೆ ತಪ್ಪಿಸುವಷ್ಟು ಶಕ್ತಿಯುತ ವಿದ್ಯುತ್‌ ಅನ್ನು ಅವು ತಯಾರಿಸುತ್ತವೆ. ಗ್ರೀಕರು ವಿದ್ಯುತ್‌ರೇ ಮೀನಿನಿಂದ ಶಾಕ್‌ ಕೊಟ್ಟು ಹೆರಿಗೆ ಮತ್ತು ಶಸ್ತ್ರಕ್ರಿಯೆಯ ನೋವು ಮರೆಸುತ್ತಿ ದ್ದರಂತೆ. ಕ್ರಿ.ಶ. 46ನೇ ಇಸವಿಯ ರೋಮನ್ ವೈದ್ಯ ನೊಬ್ಬ ತಲೆನೋವು ಮತ್ತು ಸಂಧಿವಾತ ಉಪಶಮನಕ್ಕೆ ಈ ಮೀನುಗಳ ಬಳಕೆಯ ಬಗ್ಗೆ ದಾಖಲಿಸಿದ್ದಾನೆ. ವಾಣಿಜ್ಯ ದೃಷ್ಟಿಯಿಂದ ಈ ಮತ್ಸ್ಯಮಣಿಗಳಿಗೆ ಬೇಡಿಕೆ ಅಷ್ಟಕಷ್ಟೆ. ಹಾಗಾಗಿ ಮನುಷ್ಯನ ಗಮನ ಇವುಗಳ ಮೇಲೆ ಬಿದ್ದಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT