ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪದ್ಬಾಂದವ ಮರಳಿನ ಕಟ್ಟ

Last Updated 2 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

1998ರ ಸುಮಾರು. ಬೇಕಾಬಿಟ್ಟಿ ವಿದ್ಯುತ್‌ ಕಡಿತದ ಸಮಯವದು. ದಿನಕ್ಕೆ ಮೂರ್ನಾಲ್ಕು ಗಂಟೆ ವಿದ್ಯುತ್‌ ಬಂದರೆ ಅದೇ ಪುಣ್ಯ. ಕುಡಿಯುವ ನೀರಿಗೇ ಹಾಹಾಕಾರವಾದಾಗ ಕೃಷಿಯ ಮಾತೆಲ್ಲಿ? ನೀರುಣಿಸಲಾಗದೇ ಕೃಷಿ ಸೊರಗತೊಡಗಿತು. ಹಾಕಿಸಿದ ಕೊಳವೆ ಬಾವಿಗಳಲ್ಲೂ ನೀರಿನ ಮಟ್ಟ ಕಡಿಮೆ ಆಗತೊಡಗಿತು. ಕೊಳವೆ ಬಾವಿಗಳೂ ನೀರಿಗಾಗಿ ಪರಿತಪಿಸಿದವು.

ಬಹುತೇಕ ಎಲ್ಲ ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಕೊಡಂಗೆಯ ಗೋವಿಂದ ಭಟ್‌ ಸೇರಿದಂತೆ ಕೆಲವು ರೈತರ ತಲೆಯಲ್ಲಿ ಥಟ್‌ ಎಂದು ಏನೋ ಹೊಳೆದು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ಆ ಯೋಚನೆಯ ಪರಿಣಾಮ ಇಂದು ನೀರಿನ ಸಮಸ್ಯೆ ನೀಗಿದೆ, ಕೃಷಿ ಜಮೀನಿನ ದಾಹ ಇಂಗಿದೆ.

ಜಲಮಟ್ಟ ಕೆಳಗೆ ಹೋಗುತ್ತಿದ್ದಂತೆ ಕೃಷಿಯನ್ನು ರಕ್ಷಿಸಿದ ಆಪದ್ಬಾಂಧವ ಎಂದರೆ ‘ಮರಳಿನ ಕಟ್ಟ’ (ಕಟ್ಟ ಎಂದರೆ ತಾತ್ಕಾಲಿಕ ತಡೆಗಟ್ಟ. ಪ್ರತಿವರ್ಷವೂ ಇದನ್ನು ಹೊಸದಾಗಿ ಕಟ್ಟಬೇಕು). ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಒಕ್ಕೆತ್ತೂರಿನ ಕೊಡಂಗೆ ಎಂಬಲ್ಲಿ ಹೊಳೆಗೆ ಮರಳು ಪೇರಿಸಿ ಅದಕ್ಕೆ ಪ್ಲಾಸ್ಟಿಕ್‌ ಹೊದೆಸಿ ಸುಮಾರು 16 ವರ್ಷಗಳಿಂದ ಈ ರೀತಿಯ ಕಟ್ಟ ಕಟ್ಟುತ್ತಿದ್ದಾರೆ. ಪರಿಣಾಮವಾಗಿ ನೀರೂ ಇಂಗುತ್ತಿದೆ, ಕೃಷಿ ಬಳಕೆಗೂ ನೀರು ಸಿಗುತ್ತಿದೆ.

2.5ಕಿ.ಮೀ. ವರೆಗೆ ನೀರು
ಈ ಕಟ್ಟ 9 ಅಡಿ ಎತ್ತರ ಇದೆ. ಸದ್ಯ 8 ಅಡಿಗಳಷ್ಟು ನೀರು ಇದೆ. ಸುಮಾರು 2.5 ಕಿ.ಮೀ. ದೂರದವರೆಗೆ ನೀರು ಶೇಖರವಾಗುತ್ತದೆ. ಹೊಳೆ ಸುಮಾರು 150 ಅಡಿ ಉದ್ದ ಇದೆ. 11 ಅಡಿ ಎತ್ತರದವರೆಗೆ ಕಟ್ಟ ಹಾಕಬಹುದು. ಆದರೆ ಹೊಳೆ ಬದಿಯಲ್ಲಿ ಬರೇ ಮಣ್ಣು ಇರುವುದರಿಂದ ಅಷ್ಟೊಂದು ಒತ್ತಡವನ್ನು ತಾಳಿಕೊಳ್ಳುವಷ್ಟು ಸಾಮರ್ಥ್ಯ ಅದಕ್ಕೆ ಇರುವುದಿಲ್ಲ. ಆದ್ದರಿಂದ ಕಟ್ಟದ ಎತ್ತರವನ್ನು 9 ಅಡಿಗೆ ಸೀಮಿತಗೊಳಿಸುತ್ತಾರೆ. 8 ಅಡಿಗಿಂತ ಹೆಚ್ಚು ನೀರು ಬಂದರೆ ಕಟ್ಟದ ಮಧ್ಯ ಭಾಗದಲ್ಲಿ ಹರಿದು ಹೋಗಲು ಅನುಕೂಲವಾಗುವಂತೆ ವ್ಯವಸ್ಥೆಯನ್ನೂ ಮಾಡಲಾಗಿದೆ.

18 ಗಂಟೆಯಲ್ಲೇ ನೀರು
ಆರಂಭದಲ್ಲಿ ಈ ಕಟ್ಟ ಕಟ್ಟುವಾಗ ವಿಜಾಪುರ ಭಾಗದಿಂದ ಕಾರ್ಮಿಕರನ್ನು ಕರೆಸಲಾಗುತ್ತಿತ್ತು. 15 ದಿನಗಳ ಒಳಗೆ ಕಟ್ಟ ಕಟ್ಟಿ ಮುಗಿಯುತ್ತಿತ್ತು. ಆದರೆ ಇದು ಹೇಳಿಕೇಳಿ ಮರಳಿನಿಂದ ನಿರ್ಮಾಣ ಮಾಡುವುದು. ಕಟ್ಟ ಕಟ್ಟಿದ ಬಳಿಕ ಮಳೆ ಬಂದರೆ ಮುಗಿದೇ ಹೋಯಿತು ಕೆಲಸ. ಮೊದಲು ಎರಡು ವರ್ಷಗಳು ಹೀಗೆಯೇ ಆಯಿತು. ಮಾಡಿದ ಶ್ರಮವೆಲ್ಲ ವ್ಯರ್ಥವಾಯಿತಲ್ಲ ಎಂದು ನೊಂದುಕೊಳ್ಳುತ್ತಿರುವಾಗಲೇ ರೈತರೊಬ್ಬರಿಗೆ ಹೊಳೆದದ್ದು ಟ್ರ್ಯಾಕ್ಟರಿನ ಟಿಪ್ಪರಿಗೆ ಪ್ಲಾಸ್ಟಿಕ್ ಹಾಸಿ ನೀರು ಸರಬರಾಜು ಮಾಡುವ ಹಾಗೆ ಏಕೆ ಇಲ್ಲೂ ಪ್ಲಾಸ್ಟಿಕ್‌ ಬಳಕೆ ಮಾಡಬಾರದು ಎಂಬ ಯೋಚನೆ. ಅದನ್ನವರು ಗೋವಿಂದ ಭಟ್‌ ಅವರ ಕಿವಿಗೆ ಹಾಕಿದ್ದೇ ತಡ, ಭಟ್ಟರು ಕಾರ್ಯಪ್ರವೃತ್ತರಾದರು. ಹೊಯಿಗೆಯ ಪ್ಲಾಸ್ಟಿಕ್‌ ಶೀಟ್‌ ಹಾಸಿದ ಕಟ್ಟ ಕಟ್ಟಲು ಮುಂದಾದರು.

ಹೊಳೆಯಲ್ಲೇ ಇರುವ ಮರಳನ್ನು ರಾಶಿ ಹಾಕಿ ನಿರ್ಮಿಸುವ ಈ ಕಟ್ಟ ಕಟ್ಟಲು ಹಿಟಾಚಿ ಯಂತ್ರಕ್ಕೆ ಎರಡು ದಿನ (22 ಗಂಟೆ) ಹಿಡಿಯಿತು. ಕಟ್ಟ ಕಟ್ಟಿದ ದಿನ ಇಡ್ಕಿದು ಪ್ರದೇಶದಲ್ಲಿ ಮಳೆ ಬಂದಿದ್ದರಿಂದ 18 ಗಂಟೆಗಳಲ್ಲೇ ನೀರು ತುಂಬಿತು. ಈ ಹೊಸ ಯೋಚನೆ ಅಂತೂ ಫಲಿಸಿತು. ಇದನ್ನೇ ನಂತರದ ವರ್ಷಗಳಲ್ಲಿ ಮುಂದುವರಿಸಲಾಯಿತು. ಕಳೆದ ವರ್ಷ ಒಂಬತ್ತು ಮಂದಿ ಆಳಿನ ಸಹಾಯದಲ್ಲಿ 12 ಗಂಟೆಯಲ್ಲಿ ಕಟ್ಟ ಕಟ್ಟಲಾಗಿದೆ.

ಈ ಬಾರಿ ಈ ಕಟ್ಟ ನಿರ್ಮಾಣಕ್ಕೆ ₨60 ಸಾವಿರ ವೆಚ್ಚ ಮಾಡಲಾಗಿದೆ. ಇದಕ್ಕೆ ಪ್ಲಾಸ್ಟಿಕ್‌ ಹಾಕಬೇಕಿರುವುದರಿಂದ ಅದರ ದರಕ್ಕೆ ಅನುಗುಣವಾಗಿ ಪ್ರತಿ ವರ್ಷ ವೆಚ್ಚದಲ್ಲಿ ವ್ಯತ್ಯಾಸ ಆಗುತ್ತದೆ. ಅದಕ್ಕೆ ಅನುಗುಣವಾಗಿ ಹಾಗೂ ಮರಳುಗಳ ಲಭ್ಯತೆಗೆ ಅನುಗುಣವಾಗಿ ಆಳುಗಳ ಸಂಖ್ಯೆಯಲ್ಲಿಯೂ ವ್ಯತ್ಯಾಸವಾಗುತ್ತದೆ. ಈ ಬಾರಿ ಕಟ್ಟ ನಿರ್ಮಾಣಕ್ಕೆ 15 ಆಳು ಬಳಸಲಾಗಿದೆ.

‘ನೀರಿನ ತೊಂದರೆ ಇದ್ದ ಸಂದರ್ಭದಲ್ಲಿ ನಮ್ಮ ತಂದೆಯವರು ಹಾಕಿಕೊಟ್ಟ ಈ ಕಟ್ಟದ ಉಪಾಯದಿಂದಾಗಿ ಹಲವು ವರ್ಷಗಳಿಂದ ನಾವು ಬೋರ್‌ ವೆಲ್‌ ನೀರು ಬಳಕೆಯೇ ಮಾಡುತ್ತಿಲ್ಲ. ಏಕೆಂದರೆ ಇಲ್ಲಿ ಇಷ್ಟೊಂದು ಪ್ರಮಾಣದ ನೀರು ನಿರಂತರವಾಗಿ ಸಿಗುತ್ತಿದೆ’ ಎನ್ನುತ್ತಾರೆ ಗೋವಿಂದ ಭಟ್‌ ಅವರ ಮಗ ರಾಮಚಂದ್ರ ಶರ್ಮ.

ಇದೇ ನೀರನ್ನು ಆಶ್ರಯಿಸಿ 12 ಕೃಷಿಕರು 12 ಪಂಪ್‌ಗಳ ಮೂಲಕ ನೀರು ತೆಗೆಯುತ್ತಿದ್ದಾರೆ. ಇದಕ್ಕಾಗಿ ಅವರು ಶರ್ಮ ಅವರಿಗೆ 30 ಸಾವಿರ ರೂಪಾಯಿ ನೀಡುತ್ತಿದ್ದಾರೆ. ಹಾಗೆಂದು ಇದುವರೆಗೆ ಶರ್ಮ ಅವರ ಕುಟುಂಬ ಯಾರಿಂದಲೂ ಹಣದ ಬೇಡಿಕೆ ಒಡ್ಡಿಲ್ಲ. ಆದರೆ ನೀರನ್ನು ಬಳಕೆ ಮಾಡುತ್ತಿರುವವರು ಸ್ವಯಂ ಪ್ರೇರಿತವಾಗಿ ನೀಡುತ್ತಿದ್ದಾರೆ. ಕಟ್ಟ ನಿರ್ಮಾಣಕ್ಕೆ ಈ ಹಣ ಬಳಕೆ ಮಾಡಲಾಗುತ್ತಿದ್ದು, ಉಳಿದ ವೆಚ್ಚಗಳನ್ನು ಶರ್ಮ ಕುಟುಂಬ ಸ್ವತಃ ಭರಿಸುತ್ತಿದೆ. ಅವರ 18 ಎಕರೆ ಕೃಷಿ ಭೂಮಿಯಲ್ಲಿರುವ ಅಡಿಕೆ, ತೆಂಗು, ಬಾಳೆ, ಕಾಳು ಮೆಣಸಿಗೆ ಇದೇ ನೀರು ಆಸರೆಯಾಗಿದೆ. ಕಟ್ಟದಿಂದ ಸೋರಿಕೆ ಆಗುವ ನೀರನ್ನು 5ಎಚ್‌ಪಿ ಸಾಮರ್ಥ್ಯದ ಯಂತ್ರ ಬಳಸಿ ಹಾಯಿಸಬಹುದಾಗಿದೆ.

ಅನುಭವವೇ ಪ್ರೇರಣೆ
ಇದರ ನಿರ್ಮಾಣಕ್ಕೆ ಯಾವುದೇ ಎಂಜಿನಿಯರಿಂಗ್‌ ಮಾರ್ಗದರ್ಶನ ಪಡೆದಿಲ್ಲ. ಇದರಲ್ಲಿ ಅನುಭವದ್ದೇ ಮೇಲುಗೈ. ಹರಿಯುವ ನೀರು ತಾಗದೆ ಇದ್ದರೆ ಮರಳಿನಷ್ಟು ಬಲಿಷ್ಠ ಬೇರೆ ಯಾವುದೂ ಇಲ್ಲ ಎಂಬ ಸತ್ಯವನ್ನು ಶರ್ಮ ಅವರು ಕಂಡುಕೊಂಡಿದ್ದಾರೆ. ಆದ್ದರಿಂದ ಹೊಳೆಗೆ ಅಡ್ಡಲಾಗಿ ಮರಳು ತುಂಬಿ ಅದಕ್ಕೆ 30 ಅಡಿ ಎತ್ತರ 50 ಮೀಟರ್‌ ಉದ್ದದ ಪ್ಲಾಸ್ಟಿಕ್‌ ಹಾಸಿದ್ದಾರೆ. ಮಳೆ ಬರುವ ಸೂಚನೆ ಸಿಕ್ಕಿದ ಕೂಡಲೇ ಪ್ಲಾಸ್ಟಿಕ್‌ ತೆಗೆಯುತ್ತಾರೆ. ಮೇ ಕೊನೆಯ ವೇಳೆಗೆ ಸುಮಾರು 4 ಅಡಿಗಳಷ್ಟು ನೀರು ಇರುತ್ತದೆ. ಆದ್ದರಿಂದ ಅಷ್ಟು ಎತ್ತರದವರೆಗಿನ ಪ್ಲಾಸ್ಟಿಕ್‌ ಬಿಟ್ಟು ಉಳಿದುದನ್ನು ತೆಗೆಯುತ್ತಾರೆ.

ಜಲ ಮರುಪೂರಣ
ಈ ಕಟ್ಟದಿಂದಾಗಿ ಗ್ರಾಮದ ಸುತ್ತಮುತ್ತ ಜಲಮಟ್ಟ ಹೆಚ್ಚಾಗಿದೆ. ಶರ್ಮ ಅವರ ಮನೆಯ ಬಾವಿಯಲ್ಲೂ ನೀರಿನ ಒರತೆಯೂ ಹೆಚ್ಚಿದೆ.
ನಮ್ಮದೇ ಜಮೀನಿನಲ್ಲಿ ಈ ಕಟ್ಟದಿಂದಾಗಿ 6 ತಿಂಗಳಲ್ಲಿ ಸುಮಾರು 5ರಿಂದ 6 ಕೋಟಿ ಲೀಟರ್‌ಗಳಷ್ಟು ಅಂತರ್ಜಲ ಉಳಿಯುತ್ತಿದೆ. ಪ್ರತಿ ದಿನ ನಮ್ಮ ಕೃಷಿಗೆ 3.5 ಲಕ್ಷ ಲೀಟರ್‌ ನೀರು ಬೇಕಾಗುತ್ತದೆ. ಇದಲ್ಲದೇ ಇದ್ದರೆ ನಮ್ಮ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಕೆಳಗೆ ಹೋಗುತ್ತಿತ್ತು. ಪ್ರತಿ 2 ಕಿ.ಲೋ.ಮೀಟರ್‌ಗೆ ಒಂದು ಸರಿಯಾದ ಅಣೆಕಟ್ಟೆ ಕಟ್ಟಿದರೆ ನೀರಿಗೆ ತೊಂದರೆ ಆಗಲಾರದು ಎನ್ನುವುದು ಶರ್ಮ ಅವರ ಅಭಿಪ್ರಾಯ.

ನಿರ್ಮಾಣ ಹೀಗೆ
ಕೇವಲ ಮರಳು ಮತ್ತು ಪ್ಲಾಸ್ಟಿಕ್‌ ಬಳಕೆ ಮಾಡಿಕೊಂಡು ಈ ಕಟ್ಟ ನಿರ್ಮಾಣ ಮಾಡಲಾಗುತ್ತದೆ. ಬೇಸಿಗೆಯಲ್ಲಿ ಹೊಳೆಯಲ್ಲಿ ನೀರು ಕಡಿಮೆ ಆದಾಗ ಮಣ್ಣು ಅಥವಾ ಕಲ್ಲು ಸಿಗುವವರೆಗೆ ಹೊಳೆ ಅಗೆದು ಅಡಿಪಾಯ ತೆಗೆಯಲಾಗುತ್ತದೆ. ಅದರಲ್ಲಿ ಪ್ಲಾಸ್ಟಿಕ್‌ ಹಾಸಿ ಅದರ ಮೇಲೆ ಮರಳು ರಾಶಿ ಹಾಕಲಾಗುತ್ತದೆ. ಹೀಗೆ ಎತ್ತರಕ್ಕೆ ಹಾಕಿದ ಮರಳು ರಾಶಿಯ ಮೇಲಿನವರೆಗೆ ಪ್ಲಾಸ್ಟಿಕ್‌ ತಂದು ಹೊದಿಸಲಾಗುತ್ತದೆ. ಕಟ್ಟದ ತುದಿಯ ದಡದಲ್ಲಿ ಮಣ್ಣು ಕೊರೆದು ಅದರೊಳಗೆ ಪ್ಲಾಸ್ಟಿಕ್‌ ತೂರಿಸಲಾಗುತ್ತದೆ. ಇದರಿಂದ ಪ್ಲಾಸ್ಟಿಕ್‌ಗೆ ಆಧಾರ ಬರುತ್ತದೆ. ನವೆಂಬರ್‌ ಕೊನೆಯ ವೇಳೆಗೆ ಈ ಕಟ್ಟ ಹಾಕುತ್ತಾರೆ. ಹೊಳೆಯಲ್ಲಿ ನೀರಿನ ಹರಿವು ಹೆಚ್ಚು ಇದ್ದರೆ ಕೊಂಚ ತಡವಾಗಿಯೂ ನಿರ್ಮಾಣ ಮಾಡುತ್ತಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ: 95352 48891.

ಸರ್ಕಾರ ಮನಸ್ಸು ಮಾಡಿದರೆ...
‘ಕೇರಳದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಇಂತಹ ಕಟ್ಟಗಳಿಗೆ ಸರ್ಕಾರ ಸಾಕಷ್ಟು ಹಣ ನೀಡುತ್ತಿದೆ. ದುರದೃಷ್ಟವೆಂದರೆ ನಮ್ಮಲ್ಲಿ ಅಂತಹ ವ್ಯವಸ್ಥೆ ಇಲ್ಲ. ಕೆಲವು ವರ್ಷಗಳ ಹಿಂದೆ ಶಾಸಕರ ಮನೆಗೆ ಅಲೆದು ಅಲೆದೂ ಸೋತಿದ್ದೇವೆ. ಸರ್ಕಾರ ನಿರ್ಮಾಣ ಮಾಡುವ ಕಿಂಡಿ ಅಣೆಕಟ್ಟೆಗಳಿಗೆ ₨1.5 ಕೋಟಿ ವೆಚ್ಚ ಮಾಡಲಾಗುತ್ತದೆ. ಆ ಹಣದ ಬಡ್ಡಿಯನ್ನು ನೀಡಿದರೂ ಇಂತಹ ಕಟ್ಟಗಳಿಗೆ ಸಾಕಾಗುತ್ತದೆ; ನಿರ್ವಹಣೆ ವೆಚ್ಚವೂ ಇಲ್ಲದೇ ನೀರು ಪೂರೈಕೆಯಾಗುತ್ತದೆ’ ಎನ್ನುತ್ತಾರೆ ರಾಮಚಂದ್ರ ಶರ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT