ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಳೆಯರ ಹಸಿರ ಒಲುಮೆ

ಬೆಳೆವ ಸಿರಿ 2
Last Updated 23 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಕೃಷಿ ಎಂದರೆ ಅಸಡ್ಡೆ ತೋರುವ ಈ ಕಾಲದಲ್ಲಿ ಓದಿನೊಂದಿಗೆ ಮಣ್ಣಿನ ಪಾಠವನ್ನೂ ಹೇಳಿಕೊಡುತ್ತಿವೆ ಕೆಲ ಶಾಲೆಗಳು. ಈ ಮೂಲಕ ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಸುವುದಲ್ಲದೆ ಪ್ರಕೃತಿಯೆಡೆಗೆ ಅವರೆದೆಯಲ್ಲೂ ಪ್ರೀತಿ ಚಿಗುರಿಸುವ ಸಣ್ಣ ಪ್ರಯತ್ನ ಮಾಡುತ್ತಿವೆ. ಅಂಥ ಶಾಲೆಗಳ ಪರಿಚಯ ಈ ಅಂಕಣದಲ್ಲಿ...

ಬೆಳಿಗ್ಗೆ 7ರ ಸಮಯ. ಶಾಲೆಯ ಗಂಟೆಯ ಸದ್ದು ಮೊಳಗುತ್ತಿದ್ದಂತೆ ಮಕ್ಕಳು ಕೃಷಿ ಕೆಲಸಕ್ಕೆ ಸಜ್ಜಾಗುತ್ತಾರೆ.      ಅವರೊಂದಿಗೆ ನಿಲಯದ ಪಾಲಕರೂ ಕೈ ಜೋಡಿಸು ತ್ತಾರೆ. ‘ಅಡಿಕೆ, ತೆಂಗಿನಕಾಯಿ ಹೆಕ್ಕುವವರು ಈ ಕಡೆ ಬನ್ನಿ, ನೀರು ಹಾಯಿಸುವರು ಅಲ್ಲಿ ನಿಲ್ಲಿ, ತರಕಾರಿ ಕೊಯ್ಯುವವರು ಆ ಕಡೆ ಸಾಲಾಗಿ ನಿಲ್ಲಿ. ತೋಟಕ್ಕೆ ಹೋಗುವಾಗ ಎಲ್ಲರೂ ಬಕೆಟ್‌ನಲ್ಲಿ ಸೆಗಣಿ ನೀರು ಕೊಂಡು ಹೋಗಿ...’ ಎಂದು ಪಾಲಕರ ಮಾತು ಪೂರ್ಣಗೊಳ್ಳುತ್ತಿದ್ದಂತೆ ಸರಸರನೆ ಹೆಜ್ಜೆ ಹಾಕಿದ ವಿದ್ಯಾರ್ಥಿಗಳೆಲ್ಲ ಕ್ಷಣಾರ್ಧದಲ್ಲಿ ವಹಿಸಿದ ಕೆಲಸದಲ್ಲಿ ತೊಡಗಿದರು...


ಇದು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಯಲ್ಲಿರುವ ‘ರತ್ನಮಾನಸ ವಸತಿ ನಿಲಯ’ದ ಎಳೆಯರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಚಿತ್ರಣ. ಸ್ವ ಉದ್ಯೋಗಕ್ಕೆ ಮಾರ್ಗದರ್ಶನ ನೀಡುವುದರೊಂದಿಗೆ ಮಕ್ಕಳ ದೈಹಿಕ, ಮಾನಸಿಕ ಹಾಗೂ ಸರ್ವಾಂಗೀಣ ಪ್ರಗತಿಯ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಪ್ರೇರಣೆ ನೀಡುವ ಈ ಸಂಸ್ಥೆ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್‌ನ ಅಂಗ ಸಂಸ್ಥೆ. ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ವಿಶೇಷ ತರಬೇತಿ ನೀಡುವ ಈ ವಿದ್ಯಾರ್ಥಿ ನಿಲಯದಲ್ಲಿ ಸ್ವಾವ­­ಲಂಬನೆಯ, ಸ್ವ ಉದ್ಯೋಗಕ್ಕೆ ಭದ್ರ ತಳಪಾಯ ಹಾಕ­ಲಾಗು­ತ್ತದೆ. ಜತೆಗೆ ತೋಟಗಾರಿಕೆ, ಹೈನುಗಾರಿಕೆ, ಸಾವ­ಯವ ಕೃಷಿ, ಮಿಶ್ರ ಬೆಳೆಗಳ ತರಬೇತಿಯನ್ನೂ ಒದಗಿಸಲಾಗುತ್ತಿದೆ.

ರತ್ನಮಾನಸದ ಆವರಣ 10 ಎಕರೆ ಪ್ರದೇಶದಲ್ಲಿದೆ. ಅದರ ತುಂಬ ಹಸಿರಿನ ತೋಟ. ಅದಕ್ಕಿಂತಲೂ ಮುಖ್ಯವಾಗಿ ಅಲ್ಲಿ ಬಗೆ ಬಗೆಯ ತಳಿಯ, ಬಗೆ ಬಗೆಯ ಕೃಷಿಯೂ ಇದೆ. ಹಾಲು ಕರೆಯುವ ಹಸುಗಳೂ ಇವೆ. ಇವೆಲ್ಲದರ ನಿರ್ವಹಣೆಯೂ ವಿದ್ಯಾರ್ಥಿಗಳದ್ದೇ.

ಗುಂಪಿನಲ್ಲಿ ಕೆಲಸ ವಿಂಗಡಣೆ
ಮಕ್ಕಳನ್ನು ವಿವಿಧ ಗುಂಪುಗಳನ್ನಾಗಿ ವಿಂಗಡಿಸಿ ಕೆಲಸ ಹಂಚಲಾಗುತ್ತದೆ. ಮಕ್ಕಳಿಂದ ಸಾಧ್ಯವಾಗದ ಕೆಲಸ ನಿರ್ವಹಿಸಲು ಸಹಾಯಕರೂ ಇದ್ದಾರೆ. ಯಾವ ಗಿಡಕ್ಕೆ ಎಷ್ಟು ಗೊಬ್ಬರ ನೀಡಬೇಕು, ಬೀಜಾಮೃತ ಸಿಂಪಡಣೆ ಹೇಗೆ, ಕಳೆ ಕೀಳುವ ಕೆಲಸ, ಮರ ಏರುವ ಕೆಲಸದಲ್ಲೂ ಈ ಮಕ್ಕಳು ಪಳಗಿದ್ದಾರೆ.  ಬೇಸಿಗೆಯಲ್ಲಿ ನೀರಿನ ತೊಂದರೆ ಉಂಟಾದಾಗ ಅದನ್ನು ಪರಿಪೂರ್ಣವಾಗಿ ನಿಭಾಯಿಸುವ ಈ ಮಕ್ಕಳಿಗೆ ನೀರಿನ ಬಳಕೆಯ ಶಿಕ್ಷಣ ಪ್ರಾಯೋಗಿಕ­ವಾಗಿಯೇ ಸಿಗುತ್ತಿದೆ.

42 ವರ್ಷಗಳಿಂದ ಮಕ್ಕಳಿಗೆ ಜೀವನ ಶಿಕ್ಷಣ ನೀಡುತ್ತಿರುವ ಈ ವಿದ್ಯಾರ್ಥಿ ನಿಲಯದಲ್ಲಿ ಪ್ರಸ್ತುತ 120 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಜನವರಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕೃಷಿ ಕೆಲಸಕ್ಕೆ ಬಿಡುವು. ಓದಿನ ಕಡೆಗೆ ಪ್ರಾಶಸ್ತ್ಯ ಹೆಚ್ಚು. ಬೆಳಿಗ್ಗೆ 7ರಿಂದ 8ರವರೆಗೆ ನಡೆಯುವ ಕೃಷಿ ಕಾರ್ಯದಲ್ಲಿ ಮಕ್ಕಳ ಒಂದೊಂದು ತಂಡಗಳನ್ನು ರಚಿಸಲಾಗುತ್ತದೆ. ಆ ತಂಡಕ್ಕೆ ಒಬ್ಬೊಬ್ಬರು ಮುಖ್ಯಸ್ಥರು. ನೀರು ಹಾಕುವ ಕೆಲಸಕ್ಕೆ ಇಂತಿಷ್ಟು ವಿದ್ಯಾರ್ಥಿಗಳು, ತರಕಾರಿ ಕೊಯ್ಯಲು ಇಷ್ಟು ಮಂದಿ ಎಂದು ಜವಾಬ್ದಾರಿಯನ್ನೂ ಹಂಚಿಕೆ ಮಾಡಲಾಗುತ್ತದೆ.

ಹೈನುಗಾರಿಕೆಯ ಪಾಠ
ವಿದ್ಯಾರ್ಥಿ ನಿಲಯದಲ್ಲಿ 24 ಮಿಶ್ರ ತಳಿಯ ಹಸುಗಳಿವೆ. ಅವುಗಳ ಪೈಕಿ 16 ದನಗಳು ಹಾಲು ನೀಡುತ್ತಿವೆ. ಸೆಗಣಿ ತೆಗೆಯುವುದು, ಹಸುಗಳನ್ನು, ಹಟ್ಟಿ­ಯನ್ನು ತೊಳೆಯುವುದು, ಹಾಲು ಕರೆಯುವುದು, ಹಾಲನ್ನು ಅಳತೆ ಮಾಡಿ ವಿತರಿಸುವುದು... ಹೀಗೆ ವಿದ್ಯಾರ್ಥಿಗಳಿಗೆ ಸರ್ವ ರೀತಿಯ ಪಾಠ.
ಹಸುಗಳು ಒಂದು ತಿಂಗಳಲ್ಲಿ ನೀಡಿದ ಹಾಲು, ಅದಕ್ಕೆ ನೀಡಿದ ಹಿಂಡಿಯ ಪ್ರಮಾಣ ಎಲ್ಲದರ ಲೆಕ್ಕಾಚಾರವೂ ವಿದ್ಯಾರ್ಥಿಗಳಲ್ಲಿ ಇದೆ. ಈ ಪ್ರಮಾಣವನ್ನು 15 ದಿನಗಳಿಗೊಮ್ಮೆ ಬದಲಾವಣೆ ಮಾಡಲಾಗುತ್ತದೆ. ಹೈನುಗಾರಿಕೆ ಜವಾಬ್ದಾರಿ ವಹಿಸಿಕೊಂಡ ಪ್ರತಿ ವಿದ್ಯಾರ್ಥಿ 10 ಲೀಟರ್‌ ಹಾಲನ್ನು ಕೈಯಲ್ಲೇ ಕರೆಯುತ್ತಾರೆ. 6 ವಿದ್ಯಾರ್ಥಿಗಳ ತಂಡ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಪ್ರತಿ ತಿಂಗಳೂ ಬದಲಾವಣೆ ಆಗುತ್ತದೆ. ಕಾಲೇಜು, ಶಾಲೆಗಳ ಅಧ್ಯಾಪಕರು ವಿದ್ಯಾರ್ಥಿ ನಿಲಯದಿಂದಲೇ ಹಾಲು ಖರೀದಿಸುತ್ತಾರೆ.

ಋತು ಆಧಾರದಲ್ಲಿ ಕೃಷಿ
ಇಲ್ಲಿರುವ ಜಮೀನಿನಲ್ಲಿ ಋತುವಿಗೆ ಅನುಸಾರವಾಗಿ ಬೆಳೆ ಬೆಳೆಯುತ್ತಾರೆ. ಬಳ್ಳಿ, ಗೆಡ್ಡೆ ತರಕಾರಿಗಳು, ಬಹುವಾರ್ಷಿಕ ತರಕಾರಿಗಳೂ ಇವೆ. ಕನಿಷ್ಠ ಜಮೀನಿನಲ್ಲಿ ಹೇಗೆ ಕೃಷಿ ಮಾಡಬಹುದು ಮತ್ತು ಕೃಷಿಗೆ ಪೂರಕವಾದ ಅಂಶಗಳನ್ನು ಯಾವ ರೀತಿ ಅಳವಡಿಸಿಕೊಳ್ಳ ಬಹುದು, ಸಮಗ್ರ ಕೃಷಿಯ ಪರಿಕಲ್ಪನೆಯನ್ನು ಪ್ರಾಯೋಗಿಕವಾಗಿ ಕಲಿಸುತ್ತೇವೆ. ಸ್ವಾವಲಂಬಿ ಯಾಗಿ ಹೇಗೆ ಬದುಕಬಹುದು ಎಂಬುದರ ಅರಿವು ಮೂಡಿಸುವುದೇ ಸಂಸ್ಥೆಯ ಉದ್ದೇಶ ಎನ್ನುವುದು ಪಾಲಕರ ಮಾತು.

ಸಂಪೂರ್ಣ ಸಾವಯವ
ಇಲ್ಲಿ ರಾಸಾಯನಿಕ ಗೊಬ್ಬರ ಬಳಸುವು ದಿಲ್ಲ. ವಿದ್ಯಾರ್ಥಿಗಳೇ ತಯಾರಿಸುವ ಎರೆ ಗೊಬ್ಬರ, ತೊಟ್ಟಿ ಕಾಂಪೋಸ್ಟ್‌, ಜೀವಾಮೃತವೇ ಕೃಷಿಗೆ ಅಮೃತ. ಕಾಯಿಲೆ ಬಾರದಂತೆ ಸಸ್ಯ ಸಂರಕ್ಷಣೆ ಹೇಗೆ ಮಾಡಬೇಕು ಎಂಬುದರ ಪಾಠವೂ ಇಲ್ಲಿ ನಡೆಯುತ್ತಿದೆ. ಈ ಎಲ್ಲ ಕೆಲಸ ಮಾಡಿಯೂ ಶೇ 100 ಫಲಿತಾಂಶ ಗಿಟ್ಟಿಸಿಕೊಳ್ಳುವುದು ಇಲ್ಲಿನ ನಿವಾಸಿಗಳ ವಿಶೇಷತೆ.

ವಿವಿಧ ವಿಭಾಗ
10 ಎಕರೆ ಜಮೀನನ್ನು 7 ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿ ವಿಭಾಗದಲ್ಲೂ ಭಿನ್ನ ಕೃಷಿ. ಒಂದು ಭಾಗದಿಂದ ಮತ್ತೊಂದು ವಿಭಾಗದ ಮಧ್ಯೆ ಚರಂಡಿ. ಮಳೆಗಾಲದಲ್ಲಿ ನಿಂತ ನೀರು ಕೃಷಿಗೆ ತೊಂದರೆ ಆಗಬಾರದು. ಅದು ಹರಿದು ಹೋಗಬೇಕು ಎಂಬ ಕಲ್ಪನೆ. ತೆಂಗು ಕರಿಮೆಣಸು, ಜಂಬು ನೇರಳೆ, ಪಪ್ಪಾಯಿ, ಅನಾನಸು, ಬಾಳೆ ಮೊದಲಾದವು ಒಂದು ವಿಭಾಗದಲ್ಲಿ ಇದ್ದರೆ ಅಡಿಕೆ ಮತ್ತೊಂದರಲ್ಲಿ ಇದೆ. ಸೊಪ್ಪು ತರಕಾರಿ, ಹರಿವೆ, ಪುದೀನ, ಬಸಳೆ, ಸಾಂಬ್ರಾಣಿ, ಕುಂಬಳ, ಸೌತೆಕಾಯಿ ಇದೆ. ದನಗಳ ಮೇವಿಗಾಗಿಯೇ ಹುಲ್ಲು ಬೆಳೆಸುವ ಮತ್ತೊಂದು ವಿಭಾಗ, ಕೆಸು, 11 ತಳಿಯ ಬಾಳೆಯ ಪ್ರತ್ಯೇಕ ವಿಭಾಗಗಳಿವೆ. ನಿಲಯದಲ್ಲಿ ಬಳಕೆ ಮಾಡಿ ಮಿಕ್ಕುಳಿದ ತರಕಾರಿಯನ್ನು ಸಂಸ್ಥೆಯ ಹಾಸ್ಟೆಲ್‌ಗಳಿಗೆ ಕಳುಹಿಸುತ್ತಾರೆ.

ಹಣ್ಣಿನ ಗಿಡಗಳ ವಿಭಾಗವೂ ಇಲ್ಲಿದೆ. ಜಾನುವಾರುಗಳ ಮೇವಿಗೆ ಅಜೋಲವೂ ಇದೆ. ಎಲ್ಲಿಯೂ ಜಾಗ ಖಾಲಿ ಬಿಟ್ಟಿಲ್ಲ. ಪ್ರತಿ ದಿನದ ಕೃಷಿ ಚಟುವಟಿಕೆ ಮತ್ತು ಇಳುವರಿಯನ್ನು ಪಾಲಕರಿಗೆ ಒಪ್ಪಿಸಿ ಅದನ್ನು ದಾಖಲಿಸಿಕೊಳ್ಳುವ ವ್ಯವಸ್ಥೆಯೂ ಇಲ್ಲಿದೆ.

ಜಲ ಜಾಗೃತಿ
ತೋಟದ ಕೆಲಸ ಮುಗಿಸಿ ಬರುವಾಗ ಎಲ್ಲ ವಿದ್ಯಾರ್ಥಿಗಳೂ ಬಕೆಟ್‌ನಲ್ಲಿ ನೀರು ತರುತ್ತಾರೆ. ಆ ಬಕೆಟ್‌ ಅನ್ನು ತೆಂಗು, ಕಂಗಿನ ಮರದ ಬುಡದಲ್ಲಿ ಇಡುತ್ತಾರೆ. ಎಲ್ಲರಿಗೂ ಒಂದೊಂದು ಮರ ಹಂಚಲಾಗಿದೆ. ಊಟ ಆದ ಬಳಿಕ ಕೈ, ಬಟ್ಟಲು ತೊಳೆಯಲು ಅದೇ ಬಕೆಟ್‌ನ ನೀರನ್ನೇ ಬಳಸುತ್ತಾರೆ. ನಲ್ಲಿಯ ನೀರಿನಲ್ಲಿ ಬಟ್ಟಲು ತೊಳೆಯುವಾಗ ಒಂದು ಬಕೆಟ್‌ನಷ್ಟು ನೀರು ಪೋಲಾಗುತ್ತದೆ. ಬೇಸಿಗೆಯಲ್ಲಿ ಅಷ್ಟು ನೀರನ್ನು ವ್ಯರ್ಥ ಮಾಡದೆ ತೆಂಗಿನ ಬುಡದಲ್ಲಿ ಇಟ್ಟಿರುವ ಬಕೆಟ್‌ನಲ್ಲಿ ಬಟ್ಟಲು ತೊಳೆದರೆ ನೀರೂ ವ್ಯರ್ಥವಾಗದು. ಜತೆಗೆ ತೆಂಗಿನ ಮರಕ್ಕೆ ಬೇಕಾಗುವಷ್ಟು ನೀರನ್ನೂ ಒದಗಿಸಿದಂತಾಗುತ್ತದೆ ಎನ್ನುವುದು ನಿಲಯದ ಮುಖ್ಯಪಾಲಕ ಕೃಷ್ಣ ಶೆಟ್ಟಿ ಅವರ ನೀರಿನ ಪಾಠದ ಸಾರ.  ಜಮೀನಿನ ಅಲ್ಲಲ್ಲಿ ಇಂಗು ಗುಂಡಿಗಳನ್ನೂ ಮಾಡಿದ್ದಾರೆ. ಇದರಿಂದಾಗಿ ಕೆರೆಯಲ್ಲಿ ಕಡಿಮೆಯಾಗುತ್ತಿದ್ದ ನೀರು ಇತ್ತೀಚಿನ ದಿನಗಳಲ್ಲಿ ಮೇ ತಿಂಗಳಲ್ಲೂ ಕನಿಷ್ಠ 2 ಗಂಟೆ ನೀರು ಸಿಗುತ್ತದೆ.

ವಿದ್ಯಾರ್ಥಿಗಳಿಗೆ ಸಮಯ ಇದ್ದರೆ ಕರಕುಶಲ ತರಬೇತಿಯನ್ನೂ ನೀಡಲಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಓದಿದ ಮತ್ತು ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳಿಗೇ ಇಲ್ಲಿ ಅವಕಾಶ. ಜತೆಗೆ ಬ್ಯಾಂಕಿಂಗ್‌ ವ್ಯವಹಾರ, ಬರವಣಿಗೆ, ಆಟ, ಪಾಠ, ವಿಧೇಯತೆ, ಶಿಸ್ತಿನ ಪಾಠವೂ ಇಲ್ಲಿದೆ.  ಸಂಪರ್ಕಕ್ಕೆ 94494 88976 (ಕೃಷ್ಣ ಶೆಟ್ಟಿ, ಮುಖ್ಯ ಪಾಲಕರು)  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT