ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗೂ ಗಡೇವು!

Last Updated 3 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬಯಲು ಸೀಮೆ ಎಂದಾಕ್ಷಣ ನೆನಪಿಗೆ ಬರುವುದು ಬರದ ಚಿತ್ರಣ. ಅಪರೂಪಕ್ಕೊಮ್ಮೆ ಥಳಕು ಹಾಕುವ ಮಳೆಯಿಂದ ಕೆರೆ ತುಂಬಿರದಷ್ಟೇ ಒಂದಿಷ್ಟು ದಿನ ಜನಜೀವನ ನೆಮ್ಮದಿ. ಅಲ್ಲಲ್ಲಿ ಕಾಣಸಿಗುವ ಕೆರೆಗಳಲ್ಲಿ ನೀರು ಕಾಣಿಸುವಷ್ಟು ದಿನ ಜನರು ನೆಮ್ಮದಿಯ ಉಸಿರಾಡಬಹುದು. ಆದರೆ ಅಂತರ್ಜಲ ಮಟ್ಟ ಕುಸಿದು, ನೀರು ತಳಭಾಗ ಸೇರಿದರೆ ಅದು ಉಣಬಡಿಸುವುದು ವಿಷವನ್ನೇ. ಏಕೆಂದರೆ ನೀರೆಲ್ಲ ಫ್ಲೋರೈಡ್‌ಯುಕ್ತವಾಗಿ ಜನ ಜಾನುವಾರುಗಳ ಬದುಕನ್ನೇ ತಲ್ಲಣಗೊಳಿಸುತ್ತದೆ.

ಇಂಥ ಸನ್ನಿವೇಶ ಉತ್ತರ ಕರ್ನಾಟಕದ ಜನತೆಯ ಪ್ರತಿ ಬಾರಿಯ ಗೋಳು.  ಪರಿಸ್ಥಿತಿ ಹೀಗಿರುವಾಗ ಇಲ್ಲಿಯ ಕೆರೆ- ಹಳ್ಳಗಳು ವರ್ಷಪೂರ್ತಿ ಹರಿಯುವಂತೆ ಮಾಡುವುದು ಕೂಡ ಕನಸಿನ ಮಾತು ಎಂದುಕೊಳ್ಳುವವರೇ ಹಲವರು. ಇದು ಒಂದೆಡೆಯಾದರೆ, ಹಳ್ಳ- ಕೊಳ್ಳಗಳಲ್ಲಿ ನೀರು ಲಭ್ಯ ಇರುವಾಗ ಅದನ್ನು ಪಡೆಯುವುದಕ್ಕಾಗಿ ತಾಮುಂದು ನಾಮುಂದು ಎಂದು ಅದರಲ್ಲಿಯೇ ಇಳಿದು ಮಲಿನಗೊಳಿಸುವುದು ಇನ್ನೊಂದೆಡೆ. ಲಭ್ಯ ಇರುವ ಕೆರೆ ನೀರನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಅಚ್ಚುಕಟ್ಟಾಗಿ ಬಳಸಿಕೊಳ್ಳುವುದು ಒಂದು ಸವಾಲಿನ ವಿಷಯವೇ ಸರಿ.

ಇಂಥ ಪರಿಸ್ಥಿತಿಯ ನಡುವೆ, ಇವೆಲ್ಲಕ್ಕೂ ಸೆಡ್ಡು ಹೊಡೆದು ವರ್ಷಪೂರ್ತಿ ಜಲಧಾರೆಯನ್ನು ಉಣಬಡಿಸಿದ್ದಾರೆ ಗದಗ ಜಿಲ್ಲೆ ರೋಣ ತಾಲ್ಲೂಕಿನ ಬೆಳವಣಿಕೆ ಗ್ರಾಮಸ್ಥರು. ತಾವಷ್ಟೇ ಅಲ್ಲದೇ ಹೊಲ ಗದ್ದೆ- ಜಾನುವಾರುಗಳಿಗೂ ಈ ನೀರನ್ನೇ ನೀಡಿ ಸಂತೃಪ್ತ ಜೀವನ ಕಂಡುಕೊಂಡಿದ್ದಾರೆ.

ಬೆಳವಣಿಕೆ ಬಹುತೇಕ ಎರೆಭೂಮಿ (ಕಪ್ಪು ಮಣ್ಣಿನ) ಪ್ರದೇಶ. ಈ ಗ್ರಾಮದ ಸುತ್ತಮುತ್ತ ಎಷ್ಟೇ ಉದ್ದದ ಬಾವಿ ಇಲ್ಲವೇ ಕೊಳವೆ ಬಾವಿ ತೋಡಿಸಿದರೂ ಸಿಹಿನೀರು ಸಿಗುವುದಿಲ್ಲ. ಸವಳು ನೀರಿಗೆ ಇಲ್ಲಿನ ಜನ ತೃಪ್ತಿಪಟ್ಟುಕೊಳ್ಳಬೇಕಾದ ಸ್ಥಿತಿ. ಈ ಬವಣೆಯಿಂದ ಪರಿಹಾರ ಕಂಡುಕೊಳ್ಳಲು ಬೆಳವಣಿಕೆಯಲ್ಲಿ ಸುಮಾರು 180 ವರ್ಷಗಳ ಹಿಂದೆ ಗ್ರಾಮದ ಮುಖಂಡತ್ವ ನಿರ್ವಹಿಸುತ್ತಿದ್ದ ಶಿರೋಳ ಮನೆತನದವರು ತಮ್ಮ ಕುಟುಂಬಕ್ಕೆ ಸೇರಿದ್ದ ಹನ್ನೆರಡು ಎಕರೆ ಭೂಮಿ ನೀಡಿ ಕೆರೆ ನಿರ್ಮಾಣ ಮಾಡಿಸಿದ್ದರು. ಕಾಲ ಕ್ರಮೇಣ ಜನಸಂಖ್ಯೆ, ಜಾನುವಾರುಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ಕೆರೆಯನ್ನು ಅವಲಂಬಿಸುವವರ ಪ್ರಮಾಣವೂ ಸಹಜವಾಗಿ ಹೆಚ್ಚಾಯಿತು.

ಜಾನುವಾರುಗಳು ಕೆರೆಗೆ ನುಗ್ಗುವುದು ಮತ್ತು ನೀರು ತುಂಬಲು ಜನ ಬರಿಗಾಲಿನಲ್ಲಿ ಕೆರೆಗೆ ಇಳಿಯುವುದರಿಂದ ಕೆರೆ ನೀರು ಮಲಿನಗೊಳ್ಳತೊಡಗಿತು.

ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳೂ ಉಂಟಾಗತೊಡಗಿದವು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು, ಬೆಳವಣಿಕೆ ಗ್ರಾಮದ ಜನ ತಮ್ಮ ಊರಿನ ಐತಿಹಾಸಿಕ ಕೆರೆ ನೀರು ರಕ್ಷಿಸಿಕೊಳ್ಳುವುದು ಹೇಗೆ ಎಂದು ಚರ್ಚಿಸಿ ಕೊನೆಗೂ ಯಶಸ್ವಿಯಾಗಿದ್ದಾರೆ.

ಹೀಗಿದೆ ಉಪಾಯ
ಸುಮಾರು ನಲವತ್ತು ವರ್ಷಗಳ ಹಿಂದೆ ಗ್ರಾಮದ ಹಿರಿಯರೆಲ್ಲರೂ ಸೇರಿ ತಮ್ಮ ಊರಿನ ಕೆರೆಯನ್ನು ರಕ್ಷಿಸಿಕೊಳ್ಳಲು ಆಲೋಚಿಸಿ, ಕಾರ್ಯಪ್ರವೃತ್ತರಾದರು.  ಇವರ ಮುಂದಿದ್ದ ಪ್ರಥಮ ಸವಾಲು ಎಂದರೆ ಅದನ್ನು ಶುಚಿಯಾಗಿಟ್ಟುಕೊಳ್ಳುವುದು. ಕೆರೆಗೆ ಪಶು-ಪ್ರಾಣಿಗಳು ನುಗ್ಗದಂತೆ, ಜನರು ನೀರಿನಲ್ಲಿ ಇಳಿದು ಮಲಿನಗೊಳಿಸದಂತೆ ಕ್ರಮ ಕೈಗೊಳ್ಳುವುದು ಬಹಳ ಮುಖ್ಯವಾಗಿತ್ತು.

ಇದಕ್ಕಾಗಿ ಅವರು ಮಾಡಿದ ಉಪಾಯವೆಂದರೆ ಕೆರೆಯ ದಂಡೆಯುದ್ದಕ್ಕೂ ತಂತಿ ಬೇಲಿ ಹಾಕಿದುದು. ನೀರು ತುಂಬಲು ಕೆರೆಗೆ ನೇರವಾಗಿ ಕಾಲಿಟ್ಟು ಇಳಿಯುವುದನ್ನು  ತಪ್ಪಿಸಲು ಬಾವಿಗಳಿಗೆ ಅಳವಡಿಸುವ ರೀತಿಯಲ್ಲಿ ಕೆರೆಗೂ ಗಡೇವು (ಹಗ್ಗಕ್ಕೆ ಕೊಡ ಕಟ್ಟಿ ನೀರು ಮೇಲೆತ್ತುವ ರಿಂಗ್)  ಹಾಕಿಸಿದರು.

ಕೆರೆಗೆ ವಿಶಾಲವಾದ ಕಟ್ಟೆ ನಿರ್ಮಿಸಿ ಸಾಕಷ್ಟು ಗಡೇವುಗಳನ್ನು ಕುಳ್ಳರಿಸಿದರು. ಜಾತಿ- ಧರ್ಮದ ಬೇಧವಿಲ್ಲದೇ ಎಲ್ಲರೂ ಈ ನೀರನ್ನು ಉಪಯೋಗಿಸುವಂತೆ ಮಾಡಲಾಯಿತು. ಇದು ಕೂಡ ಅಂದಿನ ಕಾಲಕ್ಕೆ ಒಂದು ಮಹತ್ವದ ಕ್ರಾಂತಿಕಾರಕ ಹೆಜ್ಜೆಯೇ ಸರಿ. 

‘ಇದು ಕುಡಿಯುವ ನೀರಿನ ಏಕೈಕ ಮೂಲವಾಗಿದೆ. ಇದಿಷ್ಟೇ ಅಲ್ಲದೇ, ಸದ್ಯ ಜಾನುವಾರು ಮತ್ತು ಹೊಲ-ತೋಟಗಳಿಗೆ ಇದೇ ನೀರನ್ನು ಬಳಸುತ್ತಿದ್ದೇವೆ. ಅಕ್ಕಪಕ್ಕದ ಗ್ರಾಮಸ್ಥರು ನೀರಿಗಾಗಿ ಪರದಾಡುತ್ತಿದ್ದರೂ ಸದ್ಯ ಇಲ್ಲಿ ಯಾವುದೇ ರೀತಿಯಲ್ಲಿ ನೀರಿನ ಸಮಸ್ಯೆ ಇಲ್ಲ’ ಎನ್ನುತ್ತಾರೆ ಬೆಳವಣಿಕೆ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಈರಪ್ಪ ಸಿದ್ಧಪ್ಪ ತಾಳಿ.

ಈ ಕೆರೆಯಲ್ಲಿ ವರ್ಷಪೂರ್ತಿ ನೀರು ಇರುವಂತೆ ನೋಡಿಕೊಳ್ಳಲು ಕೇವಲ ಮಳೆ ನೀರು ಸಾಕಾಗುವುದಿಲ್ಲ. ಆದ್ದರಿಂದ ಹತ್ತಿರದ ಮಲಪ್ರಭಾ ನದಿಯ ಕಾಲುವೆಯ ನೀರು ಬಿಟ್ಟು ಕೆರೆ ತುಂಬಿಸಲು ಕೂಡ ಕ್ರಮ ಕೈಗೊಳ್ಳಲಾಗಿದೆ. ಕೆರೆಯ ಶುಚಿತ್ವ ಕಾಪಾಡುವುದು ಮತ್ತು ಸಾಂಕ್ರಾಮಿಕ ರೋಗ-ರುಜಿನಗಳ ನಿಯಂತ್ರಣ ಮಾಡುವುದು ಕೇವಲ ಸರ್ಕಾರದ ಜವಾಬ್ದಾರಿ ಎಂದು ಭಾವಿಸಿ ಕೈ ಕಟ್ಟಿ ಕುಳಿತುಕೊಳ್ಳದೇ ಕೆರೆ ರಕ್ಷಣೆಗೆ ನಾಲ್ಕು ದಶಕಗಳ ಹಿಂದೆಯೇ ಸ್ವಯಂಪ್ರೇರಿತರಾಗಿ  ಕಾರ್ಯೋನ್ಮುಖರಾಗಿರುವುದು ಇಡೀ ನಾಡಿಗೆ ಮಾದರಿಯೆನ್ನಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT