ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆ ನಗರಿಯಲಿ ಸಾಹಸ ಮಾಡಿ...

Last Updated 28 ಡಿಸೆಂಬರ್ 2015, 19:51 IST
ಅಕ್ಷರ ಗಾತ್ರ

ಇತಿಹಾಸ ಪ್ರಸಿದ್ಧ ಚಿತ್ರದುರ್ಗವು ವಿವಿಧತೆಗೆ ಹಿಡಿದ ಕೈಗನ್ನಡಿಯಂತೆ. ಹಲವು ಪಾಳೇಗಾರರ ಆಡಳಿತಕ್ಕೆ ಒಳಪಟ್ಟು ಶತ್ರುಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಈ ನಾಡಲ್ಲಿನ ಸ್ಥಳಗಳು ಒಂದಕ್ಕಿಂತ ಒಂದು ವಿಭಿನ್ನ. ಏಳುಸುತ್ತಿನ ಕೋಟೆ, ಜೋಗಿಮಟ್ಟಿ ರಕ್ಷಿತ ಅರಣ್ಯ ಪ್ರದೇಶ, ಆಡುಮಲ್ಲೇಶ್ವರ ಕಿರು ಮೃಗಾಲಯ, ಚಂದ್ರವಳ್ಳಿ, ಮುರುಘಾಮಠ ಸೇರಿದಂತೆ ಈ ಜಿಲ್ಲೆ ಚಾರಣಿಗರಿಗೂ, ಸಾಹಸ ಪ್ರಿಯರಿಗೂ ನೆಚ್ಚಿನ ತಾಣ. ರಜೆಯನ್ನು ಚಾರಣದ ಸಾಹಸದ ಜೊತೆಯಲ್ಲಿ ಕಳೆಯಬೇಕೆನ್ನುವವರಿಗೆ ಕೆಲ ಸ್ಥಳಗಳ ಪರಿಚಯ ಮಾಡಿಸಿಕೊಟ್ಟಿದ್ದಾರೆ.

ನಮ್ಮ ‘ಬಡ್ಡಿಂಗ್ ಆರ್ಟ್ ಗ್ಯಾಲರಿ’ಯ ವತಿಯಿಂದ ವನ್ಯಜೀವಿಗಳ ಆವಾಸ ಮತ್ತು ನಗರ ಜೀವನದ ನಡುವೆ ಇರುವ ವ್ಯತ್ಯಾಸಗಳನ್ನು, ಆದಿವಾಸಿಗಳ ಗುಹಾಂತರ ನೆಲೆಗಳನ್ನು ಪರಿಚಯಿಸುವ ಸಲುವಾಗಿ, ಗುಹಾಂತರ ಪ್ರದೇಶಕ್ಕೆ ಚಾರಣವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಪ್ರದೇಶವು ದಟ್ಟ ನೀಲಗಿರಿ ನೆಡುತೋಪು ಮತ್ತು ಅಪಾರ ಔಷಧೀಯ ಸಸ್ಯಗಳಿಂದ ಆವೃತವಾದ ಕಿಷ್ಕಿಂದೆಯುಳ್ಳ ಸ್ಥಳ. ಇಲ್ಲಿ ಎತ್ತರವಾದ ಗುಹಾರಚಿತ ಸೀಳು ಬಂಡೆಗಳ ಮೇಲೊಂದು ದುಂಡಾಕೃತಿಯ ಬಂಡೆಯಿದ್ದು, ಇದರ ತುದಿಯಲ್ಲಿ ಗಾಳಿಯ ವೇಗ ಹೆಚ್ಚಾಗಿರುವುದರಿಂದ ಈ ಪ್ರದೇಶವನ್ನು ಗಾಳಿ ಗುಂಡು ಎಂದು ಕರೆಯುವುದು ವಾಡಿಕೆ. ಇಲ್ಲಿನ ದಟ್ಟ ಪೊದೆಗಳಲ್ಲಿ ತೂರಿಕೊಂಡು ಚಾರಣ ನಡೆಸುವುದೇ ರೋಮಾಂಚನಕಾರಿ ಅನುಭವ. ಮುಂದೆ ಸಾಗಿದಷ್ಟೂ ಕುತೂಹಲ ಕೆರಳಿಸುವ ಹಾದಿ ಇದಾಗಿದೆ. ಈ ಬೃಹದಾಕಾರವಾದ ಬಂಡೆಯ ಬುಡದಲ್ಲಿ ಶಿಲಾ ನಿರ್ಮಿತ ಆದಿವಾಸಿಗಳ ನೆಲೆ ಮತ್ತು ಇದೇ ಗುಹೆಯು ಗತಕಾಲದ ಸಿದ್ದರುಗಳ ಆವಾಸವಾಗಿತ್ತು ಎಂದು ನಂಬಿಕೆ ಇರುವ ಸ್ಥಳ.

ಇದಕ್ಕೆ ಪುಷ್ಟಿ ಎಂಬಂತೆ ಶಿಲಾ ನಿರ್ಮಿತ ವಿನ್ಯಾಸವುಳ್ಳ ಗುಹೆಯ ಎರಡು ಪ್ರಮುಖ ದ್ವಾರಗಳು ಹಾಗೂ ಸಮೀಪದ ಬಂಡೆಗಳಲ್ಲಿ ಮೂಡಿರುವ ಭಿತ್ತಿಚಿತ್ರಗಳು ಆದಿವಾಸಿಗಳ ಕುರುಹುಗಳನ್ನು ಬಿಂಬಿಸುವಂತಿವೆ. ಈ ಗುಹೆಯು ಅತ್ಯಂತ ಕಿರಿದಾಗಿದ್ದು, ಮೂರು ಸಣ್ಣ ದ್ವಾರಗಳನ್ನು ಹೊಂದಿದೆ. ಕೊನೆಯ ದ್ವಾರದಲ್ಲಿ ಸಂಪೂರ್ಣವಾಗಿ ಕುಳಿತುಕೊಂಡೇ ಸಾಗಬೇಕು. ಮುಂಭಾಗದ ಮೇಲ್ಚಾವಣಿ ಕುಸಿದಿದ್ದು, ಅಂದಿನ ಗಾರೆ ಮತ್ತು ಸುಣ್ಣದ ಗೋಡೆಗಳು ನೋಡುಗರನ್ನು ವಿಸ್ಮಯಗೊಳಿಸಿ, ಮತ್ತೊಮ್ಮೆ ಇತಿಹಾಸವನ್ನು ಕಣ್ಮುಂದೆ ತೆರೆದಿಡುತ್ತವೆ. ಸದ್ಯಕ್ಕೆ ಗಾಳಿಗುಂಡು ಪ್ರದೇಶವು ಕಾಡು ಪ್ರಾಣಿಗಳ ನೆಲೆಯಾಗಿದೆ.

ವಿಭಿನ್ನ ವರ್ಣಮಯವೂ ಆದ ಹಲವು ಪ್ರಾಣಿಗಳ ಮುಖಭಾವದ ಆಕೃತಿಯನ್ನು ಹೋಲುವ ಸಹಜ ಶಿಲೆಗಳು ಇಲ್ಲುಂಟು. ಈ ಪ್ರದೇಶದಲ್ಲಿ ಹೆಚ್ಚಾಗಿ ಕಾಡು ಹಂದಿಗಳು, ಮುಳ್ಳು ಹಂದಿಗಳು, ಕಾಡು ಮೊಲಗಳು ಹಾಗೂ ಕಾಡು ಕೋಳಿಗಳಂತಹ ಜೀವ ಪ್ರಭೇದಗಳು ಆವಾಸ ಕಂಡುಕೊಂಡಿವೆ. ಇಲ್ಲಿನ ಕಿಷ್ಕಿಂದೆ ಪೊದೆ ಸಸ್ಯಗಳು ಮತ್ತು ಕಲ್ಲು ಪೊಟರೆಗಳು ಕರಡಿ, ಚಿರತೆಗಳಂತಹ ಜೀವಿಗಳ ಸಂಚಾರಕ್ಕೂ ಯೋಗ್ಯವಾಗಿವೆ.

ಏಕಶಿಲಾ ಶಿಖರ ಹದ್ದಿನಕಲ್ಲು
ರುದ್ರ ರಮಣೀಯ ‘ಹದ್ದಿನಕಲ್ಲು’, ಚಂದ್ರವಳ್ಳಿಯ ಹುಲೆಗೊಂಧೀಶ್ವರ ದೇವಸ್ಥಾನದ ಎದುರಿನಲ್ಲಿರುವ ಬೃಹತ್ ವರ್ಣಮಯ ಏಕಶಿಲಾ ಶಿಖರ. ಇಲ್ಲೂ ನಮ್ಮ ತಂಡದ ಸಾಹಸ ಪ್ರದರ್ಶನ. ಸಾಮಾನ್ಯವಾಗಿ ಚಂದ್ರವಳ್ಳಿಗೆ ಭೇಟಿ ನೀಡುವ ಎಲ್ಲರಿಗೂ ಈ ಗುಡ್ಡ ಚಿರಪರಿಚಿತ. ಆದರೆ ಇದೇ ಏಕಶಿಲಾ ಶಿಖರ ಎಂದು ತಿಳಿದಿರುವವರು ಅಪರೂಪವೆಂದೇ ಹೇಳಬೇಕು.

ಈ ಶಿಖರವು ಬುಡದಿಂದ ಸುಮಾರು 300 ಅಡಿಗೂ ಮಿಗಿಲಾಗಿದ್ದು, ನೆಲಮಟ್ಟದಿಂದ 600 ಅಡಿಗೂ ಹೆಚ್ಚೆಂದು ಅಂದಾಜಿಸಲಾಗಿದೆ. ಇದರ ಸುತ್ತಳತೆ 800 ಅಡಿಗೂ ಮಿಗಿಲಾಗಿರಬಹುದು. ದಟ್ಟ ಪೊದೆ ಸಸ್ಯಗಳಿಂದ ಆವೃತವಾಗಿರುವ ಈ ಹದ್ದಿನಕಲ್ಲಿನ ವಿಶೇಷತೆಗಳು ಹಲವು. ಮಳೆಗಾಲದಲ್ಲಿ ಪಚ್ಚೆಮಿಶ್ರಿತ ಕಡುಕಂದು ಬಣ್ಣಗಳಿಂದ ಕಂಗೊಳಿಸಿ, ಬೇಸಿಗೆಯಲ್ಲಿ ಕಡುಹಳದಿ ಮಿಶ್ರಿತ ಕಡುಗಂದು ಮತ್ತು ಮಾಸಲು ಬಣ್ಣಗಳಿಂದ ಕಾಣಿಸುತ್ತದೆ. ಮುಸ್ಸಂಜೆಯ ಸೂರ್ಯನ ಕಿರಣಗಳಿಗೆ ಕಿತ್ತಳೆ ವರ್ಣಕ್ಕೆ ತಿರುಗಿ ನೋಡುಗರನ್ನು ಆಕರ್ಷಿಸುತ್ತದೆ.

ಸಹಜವಾಗಿ ಹದ್ದು ಮತ್ತು ಗಿಡುಗ ಪಕ್ಷಿ ಪ್ರಭೇದಗಳು ತಮ್ಮ ಸುರಕ್ಷತೆಯ ನಿಟ್ಟಿನಲ್ಲಿ, ಅತೀ ಎತ್ತರದ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಇದರಂತೆಯೇ ಈ ಏಕಶಿಲಾ ಶಿಖರವು ಹದ್ದಿನ ಜಾತಿಯ ಪಕ್ಷಿಗಳಿಗೆ ನೆಚ್ಚಿನ ತಾಣವಾಗಿದೆ. ಏಕಾಂತವಾದ ಈ ಶಿಖರದ ಮೇಲೆ ಹದ್ದು, ಗರುಡ, ಗಿಡುಗ, ಹಾವು ಹಾಗೂ ರಣಹದ್ದಿನ ಗುಂಪಿಗೆ ಸೇರುವ ‘ಈಜಿಪ್ಶಿಯನ್ ವಲ್ಚರ್’ಗಳು ಬಂದು ಕೂರುತ್ತವೆ. ಹೀಗೆ ಬಂದು ಕೂರುವ ಹದ್ದುಗಳನ್ನು ಗಮನಿಸಿದ ಸ್ಥಳೀಯರು, ಈ ಏಕಶಿಲಾ ಗುಡ್ಡವನ್ನು ಹದ್ದಿನಕಲ್ಲು ಎಂದು ಕರೆದರು. ಅದು ಕ್ರಮೇಣ ಜನಸಾಮಾನ್ಯರಲ್ಲೂ ಹಾಗೇ ಮುಂದುವರೆಯಿತು.

ಇದು ಏಕಶಿಲೆಯಾದರೂ ಅಲ್ಲಲ್ಲಿ ಸೀಳಾಗಿ ಬೇರ್ಪಟ್ಟ ಬಂಡೆ ಪೊಟರೆಗಳು ಮತ್ತು ಆಕರ್ಷಕ ಬಣ್ಣಗಳಿಂದ ಕಂಗೊಳಿಸುವ ಕಲಾತ್ಮಕ ದೃಶ್ಯಗಳು ಗೋಚರಿಸುತ್ತವೆ. ಈ ಎತ್ತರ ಗುಡ್ಡವು ಹೆಜ್ಜೇನುಗಳ ಪ್ರಮುಖ ಆವಾಸವಾಗಿದೆ. ಆಗಾಗ್ಗೆ ಉಡಗಳು ಕಾಣಿಸಿಕೊಂಡು ಮರೆಯಾಗುತ್ತವೆ. ಈ ಗುಡ್ಡದ ಬುಡದಲ್ಲಿ ದಟ್ಟ ಮರಗಿಡಗಳ ಪೊದೆ ಸಸ್ಯಗಳು ಹಲವು ಜೀವಿಗಳಿಗೆ ನೆಲೆ ಕಲ್ಪಿಸಿಕೊಟ್ಟಿವೆ. ಚಿರತೆ ಮತ್ತು ಕರಡಿಗಳಂತಹ ಸಸ್ತನಿಗಳಿಗೆ ಯೋಗ್ಯ. ಚಂದ್ರವಳ್ಳಿ ಕೆರೆಗೆ ಅಂಟಿಕೊಂಡಂತಿರುವ ಹದ್ದಿನಕಲ್ಲು ನೆಲಮಟ್ಟದಿಂದ ನೋಡುಗರಿಗೆ ಒಮ್ಮೆಲೆ ಭೀತಿಗೊಳಪಡಿಸುತ್ತದೆ. ಗುಡ್ಡದ ಪಕ್ಕದಲ್ಲೇ ಎದೆಮಟ್ಟದ ದಿಬ್ಬವೇರಿ ಸಾಗಿದರೆ, ಗುಡ್ಡದ ಹಿಂಬದಿಯನ್ನು ತಲುಪುತ್ತೇವೆ.

ಇಲ್ಲಿಂದ ಸುಲಭವಾಗಿ ಶಿಲಾರೋಹಣ ನಡೆಸಬಹುದು. ಆದರೆ ಪ್ರತೀ ಹಂತದಲ್ಲೂ ಎಚ್ಚರಿಕೆ ವಹಿಸುವುದು ನಮ್ಮ ಜವಾಬ್ದಾರಿಯಾಗಿರುತ್ತದೆ. ಇಲ್ಲಿ ನಮಗೆ ನಾವೇ ಮಾರ್ಗದಶಕರು ಕೂಡ. ಅನುಭವಿಗಳು ಹಗ್ಗದ ಸಹಾಯವಿಲ್ಲದೆ ಶಿಲಾರೋಹಣ ನಡೆಸಬಹುದು. ಇತರರು ಹಗ್ಗದ ಸಹಾಯದಿಂದಲೇ ಶಿಲಾರೋಹಣಕ್ಕೆ ಮುಂದಾಗುವುದು ಸೂಕ್ತ. ಹಿಂಬದಿಯಿಂದ ಕೇವಲ ಮೂವತ್ತು ನಿಮಿಷಗಳಲ್ಲಿ ಶಿಲಾರೋಹಣ ಮಾಡಬಹುದು. ಆದರೆ ಶಿಖರವೇರಿದಷ್ಟು ಬೀಸುವ ಗಾಳಿಯ ವೇಗ ಹೆಚ್ಚಾಗಿ, ಭಯ ನಮ್ಮನ್ನು ಆವರಿಸುತ್ತದೆ. ಶಿಖರದ ತುತ್ತತುದಿ ತಲುಪಿದ ನಮಗೆ, ಭಯ ಮತ್ತು ಆಯಾಸವೆಲ್ಲ ನಿರಾಯಾಸಗೊಂಡು ಚಂದ್ರವಳ್ಳಿಯ ವೈಮಾನಿಕ ಪಕ್ಷಿನೋಟ ಅನಾವರಣಗೊಳ್ಳುತ್ತದೆ. ಮಳೆಗಾಲದಲ್ಲಿ ಶಿಲಾರೋಹಣ ತುಂಬಾ ಅಪಾಯಕಾರಿ.

ಈರಣ್ಣನ ಗುಡ್ಡ
ಈರಣ್ಣನ ಗುಡ್ಡವು ಆಡುಮಲ್ಲೇಶ್ವರ ಕಿರು ಮೃಗಾಲಯದ ಸಮೀಪದಲ್ಲೇ ಇದ್ದು, ಧಾರ್ಮಿಕ ನಂಬಿಕೆಗಳಿಗೆ  ಹತ್ತಿರವಾಗಿದೆ. ಈ ಪ್ರದೇಶವು ನೀಲಗಿರಿ ನೆಡುತೋಪುಗಳಿಂದ ಆವೃತವಾಗಿದೆ. ಸಾಗುವ ದಾರಿಯಲ್ಲಿ ಅರಣ್ಯ ಇಲಾಖೆಯ ನರ್ಸರಿ ಮತ್ತು ಮಕ್ಕಳಿಗಾಗಿ ನಿರ್ಮಿಸಿರುವ ಆಟಿಕೆಗಳು ಎದುರಾಗುತ್ತವೆ. ಈ ಗುಡ್ಡವು ಬೃಹದಾಕಾರವಾದ ಕಲ್ಲು ಬಂಡೆಗಳನ್ನೊಂಡ ಸಹಜವಾದ ಗುಹೆ  ಪೊಟರೆಗಳಿಂದ ಆವರಿಸಲ್ಪಟ್ಟಿವೆ. ಇಲ್ಲಿಯ ಆಕರ್ಷಣೆಯೇ ಸಿದ್ದರ ಕಾಲದ ಐತಿಹಾಸಿಕ ಗುಹಾಂತರ ದೇವಾಲಯ.

ಈ ಗುಹೆಯು ಕೊಂಚ ವಿಶಾಲ ದ್ವಾರ ಹೊಂದಿದ್ದು, ಸುಮಾರು 20 ರಿಂದ 25 ಅಡಿ ವಿಸ್ತೀರ್ಣದಲ್ಲಿದೆ. ಪ್ರವೇಶ ದ್ವಾರವು ಶಿಲೆಗಳಿಂದ ನಿರ್ಮಾಣವಾಗಿ, ನಂದೀಶ್ವರ ಮತ್ತು ದ್ವಾರಪಾಲಕರಾದ ಜಯ ವಿಜಯರ ಉಬ್ಬು ಚಿತ್ರವಿದೆ. ಇದು ಹರಿಹರೇಶ್ವರರ ಸಂಕೇತವನ್ನೂ ಬಿಂಬಿಸುತ್ತದೆ. ಒಳ ಪ್ರವೇಶಿಸಿದಂತೆ ಇನ್ನೊಂದು ಸಣ್ಣ ದ್ವಾರ ಎದುರಾಗುತ್ತದೆ. ಇದೇ ಸ್ಥಳದಲ್ಲೇ ಸಿದ್ದರು ಪೂಜಿಸುತ್ತಿದ್ದ ಈಶ್ವರ ಲಿಂಗವಿದೆ.

ಈ ಗುಹೆಯು 2010ರವರೆಗೂ ಪಾಳುಬಿದ್ದ ಸ್ಥಳವಾಗಿ ಕೇವಲ ಕಾಡು ಪ್ರಾಣಿಗಳ ನೆಲೆಯಾಗಿತ್ತು. ತದ ನಂತರದ ದಿನಗಳಲ್ಲಿ ಸ್ಥಳೀಯವಾಗಿ ಧಾರ್ಮಿಕ ನಂಬಿಕೆಯುಳ್ಳ ಕೆಲ ಉತ್ಸಾಹಿ ಯುವಕರು, ಈ ಗುಹೆಯಲ್ಲಿನ ಲಿಂಗಕ್ಕೆ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಈಗಲೂ ಇಲ್ಲಿ ಸಿದ್ದರು/ ಋಷಿಮುನಿಗಳು ವಾಸವಾಗಿದ್ದರು ಎಂಬುದಕ್ಕೆ ಇಲ್ಲಿನ ಜಲಮೂಲವೇ ಸಾಕ್ಷಿ.

ಬೆಳವನ ಕಲ್ಲು
ಚಂದ್ರವಳ್ಳಿಯಿಂದ ಪಶ್ಚಿಮ ದಿಕ್ಕಿನೆಡೆಗೆ ಸುಮಾರು 2 ಕಿ.ಮೀ. ಅಂತರದಲ್ಲಿರುವ ಹುಲ್ಲುಗಾವಲ ಹಡ್ಲು ಕೊಂಚ ಎತ್ತರ ಪ್ರದೇಶವಾಗಿದ್ದು, ಅರಣ್ಯ ಇಲಾಖೆ ನಿರ್ಮಿಸಿರುವ ಕಿರಿದಾದ ವೀಕ್ಷಣಾ ಗೋಪುರವಿದೆ. ಸಣ್ಣ ಪ್ರಮಾಣದ ಸೀಳು ಬಂಡೆಗಳ ತಾಣವೂ ಇದಾಗಿದೆ. ಇದೇ ಸೀಳು ಬಂಡೆಗಳನ್ನಾಶ್ರಯಿಸಿ ಬೆಳವನ ಪಕ್ಷಿಗಳು ಇಲ್ಲಿ ಬಂದು ಕೂರುತ್ತವೆ. ಈ ಕಾರಣದಿಂದಲೇ ಸ್ಥಳೀಯರು ಈ ಪ್ರದೇಶವನ್ನು ಬೆಳವನ ಕಲ್ಲು ಎಂದು ಗುರುತಿಸಿದ್ದಾರೆ. ಇಲ್ಲಿಂದ ಚಂದ್ರವಳ್ಳಿಯ ಸೊಬಗು ಪ್ರಕೃತಿ ಪ್ರಿಯರಿಗೆ ಬಲು ಆಕರ್ಷಣೀಯ.

ಈ ಎತ್ತರ  ಪ್ರದೇಶದ ಹುಲ್ಲು ಗಾವಲು ಹಡ್ಲು, ನರಿ, ತೋಳ, ಕತ್ತೆಕಿರುಬ, ಚಿರತೆ, ಕಾಡು ಮೊಲ ಮತ್ತು ಕೊಂಡುಕುರಿಗಳಿಗೆ ಆಕರ್ಷಣೀಯ ಸ್ಥಳವಾಗಿ ಪರಿಣಮಿಸಿದೆ. ಇಲ್ಲಿನ ಹಡ್ಲುಗಳು ಎಂದಿಗಿಂತಲು ಸಾಕಷ್ಟು ಸುಧಾರಣೆ ಕಂಡಿದ್ದು, ಮಳೆಗಾಲದಲ್ಲಿ ಅಚ್ಚ ಹಸಿರು ಹುಲ್ಲಿನ ರಾಶಿ ಪ್ರಸರಣಗೊಂಡಿರುತ್ತದೆ. ಇದಕ್ಕಾಗಿಯೇ ಈ ಬೆಳವನ ಕಲ್ಲಿನ ಆವರಣವನ್ನು ಕುಬ್ಜ ಸಸಿಗಳುಳ್ಳ ಹುಲ್ಲು ಗಾವಲ ಹಡ್ಲು ಎಂದು ಕರೆಯುತ್ತಾರೆ. ತಮ್ಮ ಬಲಿ ಪ್ರಾಣಿಯಾದ ಕೊಂಡುಕುರಿಗಳನ್ನರಸಿ ಚಿರತೆ ಮತ್ತು ಕತ್ತೆಕಿರುಬಗಳ ಬಳಗವು ಇಲ್ಲಿ ಆಗಾಗ್ಗೆ ಗೋಚರಿಸುವುದೂ ಇದೆ. ಈ ಸ್ಥಳದ ಸಮೀಪದಲ್ಲೇ ಕತ್ತೆ ಕಿರುಬಗಳೂ ನೆಲೆಸುತ್ತವೆ.­

ಕೋಟೆ ಪ್ರದೇಶದಲ್ಲಿ ಚಾರಣ ನಿಷಿದ್ಧ
ಐತಿಹಾಸಿಕ ಚಿತ್ರದುರ್ಗದ ಕೋಟೆ ಪ್ರದೇಶವು ಭಾರತದ ಪ್ರಾಚ್ಯವಸ್ತು ಇಲಾಖೆಗೆ ಒಳಪಟ್ಟಿರುವ ನಿಟ್ಟಿನಲ್ಲಿ, ಈ ವ್ಯಾಪ್ತಿಯು ಕೇವಲ ಪ್ರವಾಸಿ ತಾಣವಾಗಿ ಕೇಂದ್ರಿತವಾಗಿರುತ್ತದೆ. ಈ ಸ್ಥಳಗಳಲ್ಲಿ ಚಾರಣ ನಡೆಸಲು ಅನುಮತಿ ಇರುವುದಿಲ್ಲ. ಕೋಟೆ ಪ್ರದೇಶವು ಬೃಹದಾಕಾರವಾದ ಹೆಬ್ಬಂಡೆಗಳಿಂದ ಆವೃತವಾಗಿರುವುದರಿಂದ, ಸೂಕ್ತ ಚಾರಣ ಹಾದಿಗಳು ಇಲ್ಲಿ ಅಲಭ್ಯ. ಆದ ಕಾರಣ ಕೋಟೆ ಪ್ರದೇಶದಲ್ಲಿ ಚಾರಣ ಸುರಕ್ಷತೆಗಿಂತ ಅಪಾಯವೇ ಹೆಚ್ಚು.

ನಾಮಫಲಕ ಅಳವಡಿಸಲಿ
2011ರಲ್ಲಿ ಶಂಕು ಸ್ಥಾಪಿಸಲಾದ ಚೌಡೇಶ್ವರಿ ಆವರಣ ಅಥವಾ ತಿಮ್ಮಣ್ಣನಾಯಕನ ಕೆರೆ ಆವರಣದ್ದು ಗೊಂದಲದ ಕಥೆ. ಈ ಪ್ರದೇಶವು ನಗರದ ಹೊರ ವಲಯದಲ್ಲಿದ್ದು, ವಿದ್ಯಾರ್ಥಿಗಳ ಹೊರಾಂಗಣ ಚಟುವಟಿಕೆಗಳಿಗೆ ಪೂರಕವಾದ ಸುಂದರ ಪ್ರಾಂಗಣವಾಗಿದೆ. ಇದು ಆಡುಮಲ್ಲೇಶ್ವರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಇದರ ಗತಿ ಮಾತ್ರ ಶೋಚನೀಯ.

ಇಲ್ಲಿಯೇ ತಿಮ್ಮಣ್ಣನಾಯಕರ ಹೆಸರಿನ ಕೆರೆ, ಇತಿಹಾಸ ಪ್ರಸಿದ್ಧ ಚೌಡೇಶ್ವರಿ ದೇಗುಲ, ಪಕ್ಕದಲ್ಲೇ ಸರ್ಪಗುಡ್ಡ, ಮಾವಿನತೋಪು, ಜೋಡಿಬತೇರಿ, ಐತಿಹಾಸಿಕ ಅಗಳುಗಳು, ಬಾಳೇಕಾಯಿ ಸಿದ್ದಪ್ಪನ ಗುಹೆ, ಬಿಳಿ ಕಮಲದ ಹಳ್ಳ, ವಡ್ಡು (ಹೊಂಡ) ಹಾಗೂ ಸುರಮ್ಯ ಪ್ರಕೃತಿಯ ವೀಕ್ಷಣೆಗಾಗಿ ಅರಣ್ಯ ಇಲಾಖೆ ನಿರ್ಮಿಸಿರುವ ವೀಕ್ಷಣಾ ಗೋಪುರಗಳು ಇರುವಂತಹ ಯೋಗ್ಯ ಸ್ಥಳವಾಗಿದೆ. ವಿಪರ್ಯಾಸವೆಂದರೆ ಇದು ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಪರಿಚಿತ. ಅರಣ್ಯ ಇಲಾಖೆಯೇ ಈ ಪ್ರದೇಶವು ಪಕ್ಷಿಗಳ ವೀಕ್ಷಣೆಗೆ ಹೆಚ್ಚು ಸೂಕ್ತವೆಂದು ಹಲವು ಪಕ್ಷಿಗಳ ನಾಮಫಲಕಗಳನ್ನು ಅಳವಡಿಸಿದೆ. ಆದರೆ ನಾಮಫಲಕಗಳಲ್ಲಿ ಗೊಂದಲವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT