ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾದ್ರಿಯವರ ಶಾದಿಭಾಗ್ಯ

Last Updated 16 ಮೇ 2016, 19:30 IST
ಅಕ್ಷರ ಗಾತ್ರ

ಕಡುಬಡತನದಿಂದ ಮದುವೆಯಾಗುವ ಆಸೆಯನ್ನೇ ಬಿಟ್ಟ ನೂರಾರು ಯುವಕ–ಯುವತಿಯರಿಗೆ ಸ್ವಂತ ಖರ್ಚಿನಿಂದ ‘ಶಾದಿಭಾಗ್ಯ’ವನ್ನು ಒದಗಿಸಿ
ಕೊಟ್ಟಿರುವ ಅಪರೂಪದ ವ್ಯಕ್ತಿ ಮೊಹಮ್ಮದ್ ಅನ್ವರ್ ಖಾದ್ರಿ


ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆ ಬಡವರ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡುತ್ತಿದೆ ಎಂದರೆ ಅಲ್ಲೇನೋ ಲಾಭವಿದೆ ಎಂಬ ಮನೋಭಾವ ಮೂಡುವಂತಹ ಕಾಲವಿದು.  ಆದರೆ, ಶಿವಮೊಗ್ಗದಲ್ಲೊಬ್ಬ ವ್ಯಕ್ತಿ ಇದ್ದಾರೆ. ಪ್ರತಿ ವರ್ಷ ನೂರಾರು ಜನ ಬಡ ಹೆಣ್ಣುಮಕ್ಕಳಿಗೆ ತಮ್ಮ ಹಣದಿಂದ ಸಾಮೂಹಿಕ ಮದುವೆಗಳನ್ನು ನೆರವೇರಿಸಿಕೊಡುತ್ತಿದ್ದಾರೆ. ಆದರೂ ಪ್ರಚಾರದಿಂದ ದೂರವೇ ಉಳಿದಿದ್ದಾರೆ. ಆ ವ್ಯಕ್ತಿಯ ಹೆಸರು ಮೊಹಮ್ಮದ್ ಅನ್ವರ್ ಖಾದ್ರಿ.

ಖಾದ್ರಿಯವರು ‘ಖಲಂದರಿಯಾ ಅಸೋಸಿಯೇಷನ್’ ಎಂಬ ಸಾಮಾಜಿಕ ಸೇವಾ ಸಂಸ್ಥೆ ಕಟ್ಟಿಕೊಂಡು ಕಳೆದ ಏಪ್ರಿಲ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರಿಗೆ ಊಟ ಹಾಕಿ 163 ಜೋಡಿಗಳ ಮದುವೆ ಮಾಡಿಸಿದರು.

ಈ ಜೋಡಿಗಳಲ್ಲಿ ಇದ್ದವರೆಲ್ಲಾ ಮದುವೆಯಾಗುವ ಕನಸನ್ನೇ ಬಿಟ್ಟವರು. ಅಂದರೆ, ಮನೆಯ ತುಂಬಾ ಕಡುಬಡತನವಿಟ್ಟುಕೊಂಡು ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದವರು.

ಸುಮಾರು ಆರು ತಿಂಗಳ ಕಾಲ ಮೊಹಮ್ಮದ್ ಅನ್ವರ್ ಖಾದ್ರಿಯವರು ಕರ್ನಾಟಕದಲ್ಲಿನ ಅತೀ ಬಡತನದಲ್ಲಿರುವ, ಮದುವೆ ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನು ಹುಡುಕುತ್ತಾರೆ. ಅವರ ಪೋಷಕರೊಂದಿಗೆ ಚರ್ಚಿಸುತ್ತಾರೆ.

ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ ವರನ ಹುಡುಕಾಟದಲ್ಲಿ ಆಯಾ ಹೆಣ್ಣುಮಕ್ಕಳ ಪೋಷಕರೊಂದಿಗೆ ತೊಡಗಿಕೊಳ್ಳುತ್ತಾರೆ. ಸೂಕ್ತ ವರ ಹುಡುಕಿ ಸಾಮೂಹಿಕ ವಿವಾಹದ ವೇದಿಕೆಗೆ ಕರೆತರುತ್ತಾರೆ. ಹಾಗೆ, ಈ ವರ್ಷ ಅವರು ವೇದಿಕೆಗೆ ಕರೆತಂದಿದ್ದು 163 ಜೋಡಿಗಳನ್ನು.

ಮೊಹಮ್ಮದ್ ಅನ್ವರ್ ಖಾದ್ರಿ ಜಾವಗಲ್ ಬಾಬಾ ಎಂದೇ ಪ್ರಸಿದ್ಧರಾಗಿರುವ ಹಜರತ್ ಸೈಯದ್ ಖಲಂದರ್ ಷಾ ಪೀರಾವಲಿ ಅಲ್ಲಾ ಖಾದ್ರಿ ಜಾವಗಲ್ ಬಾಬಾರವರ ಪರಮ ಭಕ್ತರು. ಜಾವಗಲ್ ಬಾಬಾ ಇದ್ದಷ್ಟು ದಿನ ಬಡವರ ಸೇವೆಗಾಗಿಯೇ ಮೀಸಲಾಗಿದ್ದವರು. ಅವರ ಸೇವೆಯಿಂದ ಪ್ರಭಾವಿತರಾದ ಮೊಹಮ್ಮದ್ ಅನ್ವರ್ ಖಾದ್ರಿ ಮೊದಲಿಗೆ ಯೋಚಿಸಿದ್ದು ಅತೀ ಬಡತನದಲ್ಲಿರುವ ಹೆಣ್ಣುಮಕ್ಕಳ ಮದುವೆ ಕನಸನ್ನು ನನಸುಮಾಡುವ ಬಗ್ಗೆ.

ಮೂರು ವರ್ಷದ ಹಿಂದಿನವರೆಗೂ ಸಣ್ಣ ಪ್ರಮಾಣದಲ್ಲಿಯೇ ಮದುವೆಗಳನ್ನು ಉಚಿತವಾಗಿ ನೆರವೇರಿಸಿಕೊಡುತ್ತಿದ್ದ ಮೊಹಮ್ಮದ್ ಅನ್ವರ್ ಖಾದ್ರಿಯವರು ಮೂರು ವರ್ಷಗಳ ಹಿಂದೆ 11 ಮದುವೆಗಳನ್ನು ನೆರವೇರಿಸಿದ್ದರು. ಆನಂತರ 2015ರಲ್ಲಿ 58 ಜೋಡಿಗಳನ್ನು ಹುಡುಕಿ ಅದ್ದೂರಿಯಾಗಿಯೇ ವಿವಾಹ ಮಹೋತ್ಸವ ಹಮ್ಮಿಕೊಂಡಿದ್ದರು.

2016ರ ಏಪ್ರಿಲ್‌ನಲ್ಲಿ 250 ಜೋಡಿಗಳ ವಿವಾಹ ಮಹೋತ್ಸವ ನೆರವೇರಿಸಬೇಕೆಂಬ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದರು. ಆದರೆ, ಕೊನೆ ಕ್ಷಣದವರೆಗೂ ಅವರ ಸಂಪರ್ಕಕ್ಕೆ ಸಿಕ್ಕಿದ್ದು ಕೇವಲ 163 ಜೋಡಿಗಳು.

ನಾವು ಸಾಮಾನ್ಯವಾಗಿ ಸಾಮೂಹಿಕ ವಿವಾಹಗಳನ್ನು ನೋಡುತ್ತೇವೆ. ಆದರೆ, ಮೊಹಮ್ಮದ್ ಅನ್ವರ್ ಖಾದ್ರಿಯವರು ನೆರವೇರಿಸಿಕೊಡುವ ಸಾಮೂಹಿಕ ವಿವಾಹ ಮಹೋತ್ಸವ ಮಾತ್ರ ಸಂಪೂರ್ಣ ಭಿನ್ನ. ಸಾಮೂಹಿಕ ವಿವಾಹಗಳಲ್ಲಿ ಸಾಮಾನ್ಯವಾಗಿ ಒಂದು ಜೊತೆ ಬಟ್ಟೆ ಹಾಗೂ ತಾಳಿ ನೀಡಿ, ವಧು-ವರರ ಕಡೆಯ ಒಂದಿಷ್ಟು ಜನರಿಗೆ ಮದುವೆ ಊಟ ಹಾಕಿಸಿ ಕಳುಹಿಸಿಕೊಡಲಾಗುತ್ತದೆ. ಆದರೆ, ಖಾದ್ರಿಯವರ ಪ್ರಯತ್ನವೇ ಬೇರೆ.

ಖಾದ್ರಿಯವರು ಮದುವೆ ಮಂಟಪಕ್ಕೆ ಬಂದಿರುವ ಪ್ರತಿಯೊಬ್ಬ ವಧುವನ್ನೂ ತಮ್ಮ ಮಗಳೆಂದೇ ಭಾವಿಸುತ್ತಾರೆ. ತಾನೊಬ್ಬ ಸ್ಥಿತಿವಂತ ಆಗಿರುವುದರಿಂದ ತಮ್ಮ ಮಕ್ಕಳ ಮದುವೆ ತೀರಾ ಸಣ್ಣಮಟ್ಟದಲ್ಲಿ ನಡೆಯಬಾರದು.

ಅವರಿಗೆ ಬೇಕಾದ ಪ್ರತಿಯೊಂದು ವಸ್ತುಗಳನ್ನೂ ಕೊಡಬೇಕು. ವಧು ಮತ್ತು ವರ ಆಸೆಪಟ್ಟ ಬಟ್ಟೆಗಳನ್ನೇ ಕೊಡಿಸಬೇಕು. ಅವರು ಇಷ್ಟಪಟ್ಟ ಡಿಸೈನ್ನಿನ ನೆಕ್ಲೇಸ್, ತಾಳಿ, ಬೆಳ್ಳಿ ಸಾಮಾನುಗಳನ್ನು ನೀಡಬೇಕು.

ಅವರು ಇಷ್ಟಪಟ್ಟಿದ್ದೇ ಚಪ್ಪಲಿ, ಶೂಗಳನ್ನು ಕೊಡಿಸಬೇಕು ಎಂಬ ಉದ್ದೇಶ ಹೊಂದಿರುವ ಖಾದ್ರಿಯವರು ತಾವು ಉದ್ದೇಶಿಸಿದಂತೆಯೇ ವಧು-ವರೋಪಚಾರ ಕೈಗೊಳ್ಳುತ್ತಾ ಬಂದಿದ್ದಾರೆ. ವಧು-ವರರಿಗೆ ಮಂಚ, ಬೀರು, ಹಾಸಿಗೆ, ಮನೆಯ ಸಾಮಾನುಗಳನ್ನು ಕೂಡ ಅವರ ವಿದಾಯದ ಜೊತೆ ಕಳುಹಿಸಿಕೊಡುತ್ತಾರೆ. ಕನಿಷ್ಠ ಒಂದು ತಿಂಗಳ ಪಡಿತರ ಕೂಡ ವಧು-ವರರಿಗೆ ಇಲ್ಲಿ ನೀಡಲಾಗುತ್ತದೆ.

ಇದಿಷ್ಟೇ ಅಲ್ಲ, ಖಾದ್ರಿಯವರು ಬಡ ಜೋಡಿಗಳ ವಿವಾಹಕ್ಕೆ ಮಾಡಿಕೊಳ್ಳುವ ತಯಾರಿ ಕೂಡ ಅದ್ಭುತವಾಗಿರುತ್ತದೆ. ಅತೀ ದೊಡ್ಡ ಮಟ್ಟದಲ್ಲಿ ಮದುವೆ ಮಂಟಪ ನಿರ್ಮಿಸಲಾಗುತ್ತದೆ. ಅಲ್ಲಿ ಸಾವಿರಾರು ಜನ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ. ಬಂದ ಲಕ್ಷಕ್ಕೂ ಹೆಚ್ಚಿನ ಜನರಿಗೆ ವಿಶೇಷ ಊಟದ ವ್ಯವಸ್ಥೆ ಕೂಡ ಇರುತ್ತದೆ.

ಈ ವರ್ಷ ನೆರವೇರಿದ ವಿವಾಹಕ್ಕೆ ಬಂದ ಜನರು ಲಕ್ಷಕ್ಕೂ ಹೆಚ್ಚಿದ್ದರು! ಒಂದು ಜೋಡಿಗೆ ಕನಿಷ್ಠ ಮೂರು ಲಕ್ಷ ರೂಪಾಯಿಗಳವರೆಗೆ ಖಾದ್ರಿಯವರು ಖರ್ಚು ಮಾಡಿದ್ದಾರೆ.

ಪ್ರತಿ ವರ್ಷ ಶಿವಮೊಗ್ಗದ ಸೂಳೆಬೈಲಿನಲ್ಲಿರುವ ಗೋಪಾಲಿ ಮೈದಾನದಲ್ಲಿ ಸಾಮೂಹಿಕ ವಿವಾಹ ಮಹೋತ್ಸವವನ್ನು ಆಚರಿಸುತ್ತಾ ಬಂದಿರುವ ಮೊಹಮ್ಮದ್ ಅನ್ವರ್ ಖಾದ್ರಿಯವರು ಮುಂದಿನ ವರ್ಷ ಮತ್ತೊಂದು ವಿಶೇಷ ರೀತಿಯ ಗುರಿಯನ್ನು ಹಾಕಿಕೊಂಡಿದ್ದಾರೆ.

ಈವರೆಗೆ ಅವರು ನೆರವೇರಿಸಿದ್ದು ಮುಸ್ಲಿಂ ಜೋಡಿಗಳ ಸಾಮೂಹಿಕ ವಿವಾಹಗಳನ್ನು. ಮುಂದಿನ ವರ್ಷ 600 ಜೋಡಿಗಳ ಮದುವೆ ಮಾಡಿಸುವ ಯೋಜನೆ ಹಾಕಿಕೊಂಡಿರುವ ಅವರು, ಸರ್ವಧರ್ಮ ಸಮನ್ವಯ ಆಧಾರದ ಮೇಲೆ ವಿವಾಹ ಮಹೋತ್ಸವ ಆಚರಿಸುವ ಸಿದ್ಧತೆಯಲ್ಲಿದ್ದಾರೆ.

  ಖಾದ್ರಿ ಯಾರಿಂದಲೂ ಚಂದಾ ಸ್ವೀಕರಿಸುವುದಿಲ್ಲ. ತಮ್ಮ ತೋಟ ಮತ್ತು ಕಾರ್ಖಾನೆಯಿಂದ ದೊರೆಯುವ ಆದಾಯದಲ್ಲಿಯೇ ಈ ವಿವಾಹಗಳನ್ನು ನೆರವೇರಿಸಿಕೊಡುತ್ತಾರೆ. ಇಂತಹ ದೊಡ್ಡಮಟ್ಟದ ವಿವಾಹ ಸಂಭ್ರಮಕ್ಕೆ ಸಾಮಾಜಿಕ ಸೇವೆಯಲ್ಲಿ ನಿರತರಾಗಿರುವ ಹೆವೆನ್ ಹಬೀಬ್ ಖಾನ್, ಇಕ್ಬಾಲ್ ಹಬೀಬ್ ಶೇಟ್, ಕಲೀಂ, ಮಕ್ಮೂರ್, ಮುಜೀಬ್, ಸೈಯದ್ ಗಫೂರ್,

ಚನ್ನಗಿರಿ ಹಬೀಬ್, ಅಬ್ದುಲ್ ರೆಹಮಾನ್, ಕೆ.ಬಿ.ಪ್ರಸನ್ನಕುಮಾರ್‌ರವರು ನೀಡಿದ ಸಹಕಾರ ಕೂಡ  ಅಷ್ಟೇ ಪ್ರಮುಖವಾದುದು. ಕಳೆದ ವರ್ಷ ತಮ್ಮ ಪ್ರೀತಿಯ ಮಗಳ ಮದುವೆಯನ್ನು ಕೂಡ ಖಾದ್ರಿಯವರು ತಾವೇ ಹಮ್ಮಿಕೊಂಡ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮಾಡಿಕೊಟ್ಟಿದ್ದರು!  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT